ಮುಸ್ಲಿಮರ ವಿರುದ್ಧ ದ್ವೇಷ ಭಾಷಣ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಾರ್ಯಕ್ರಮ ರದ್ದು

ನವದೆಹಲಿ: ಆಸ್ಟ್ರೇಲಿಯಾದಲ್ಲಿರುವ ಸಂಸದ ತೇಜಸ್ವಿ ಸೂರ್ಯ ಅಲ್ಲಿನ ಕಾರ್ಯಕ್ರಮವೊಂದರಲ್ಲಿ ಇಸ್ಲಾಂ ಮತ್ತು ಮುಸ್ಲಿಮರ ಕುರಿತು ದ್ವೇಷದ ಮಾತುಗಳನ್ನಾಡುವ ವೀಡಿಯೊ ಟ್ವಿಟರ್‌ ನಲ್ಲಿ ವೈರಲ್‌ ಆಗುತ್ತಿದ್ದಂತೆಯೇ  ಆಕ್ರೋಶಕ್ಕೀಡಾಗಿದೆ.

ಬೆಂಗಳೂರು ದಕ್ಷಿಣ ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಆಸ್ಟ್ರೇಲಿಯಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮುಸ್ಲಿಮರ ವಿರುದ್ಧ ದ್ವೇಷಭಾಷಣ ಮಾಡಿರುವ ವೀಡಿಯೊ ಹರಿದಾಡುತ್ತಿದ್ದು, ಆಸ್ಟ್ರೇಲಿಯಾ ಇಂಡಿಯಾ ಯೂತ್ ಡೈಲಾಗ್(ಎಐವೈಡಿ) ತೇಜಸ್ವಿ ಸೂರ್ಯನ ಹೇಳಿಕೆಯನ್ನು ಖಂಡಿಸಿದ್ದು, ಭಾಷಣದ ಕಾರ್ಯಕ್ರಮಗಳನ್ನು ರದ್ದುಗೊಳಿಸುವಂತೆ ಕರೆ ನೀಡಿವೆ.

ಪ್ರಸ್ತುತ ಆಸ್ಟ್ರೇಲಿಯಾದಲ್ಲಿರುವ ಸೂರ್ಯ, ಮೇ 31 ರಿಂದ ಜೂನ್ 4 ರವರೆಗೆ ಮೆಲ್ಬೋರ್ನ್‌ನಲ್ಲಿ ಎಐವೈಡಿ ಸಮಾವೇಶವನ್ನು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಭಾರತದಿಂದ ಆಯ್ಕೆಯಾದ 15 ಜನರಲ್ಲಿ ತೇಜಸ್ವಿ ಸೂರ್ಯ ಕೂಡ ಒಬ್ಬರು. ಅವರು ಸೋಮವಾರ(ಮೇ 30) ಸಿಡ್ನಿಯ ಸ್ವಿನ್‌ಬರ್ನ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಆ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ದ್ವೇಷಭಾಷಣ ಮಾಡಿರುವ ವೀಡಿಯೊ ಸಾಮಾಜಿಕ ತಾಣದಾದ್ಯಂತ ಆಕ್ರೋಶಕ್ಕೀಡಾಗಿದೆ. ಜೊತೆಗೆ, ಅವರ ಭಾಷಣವನ್ನು ಹಲವಾರು ಮಂದಿ ತೀವ್ರವಾಗಿ ವಿರೋಧಿಸಿದ ಬಳಿಕ ಸಂಸದ ಭಾಗವಹಿಸಬೇಕಾಗಿದ್ದ ಕಾರ್ಯಕ್ರಮವೊಂದನ್ನೂ ಆಯೋಜಕರು ರದ್ದುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ತನ್ನ ಪ್ರತಿಕ್ರಿಯೆಯಲ್ಲಿ ವಿವಿಯು, “ಈ ಕಾರ್ಯಕ್ರಮವನ್ನು ಸ್ವಿನ್‌ಬರ್ನ್ ವಿಶ್ವವಿದ್ಯಾಲಯದಿಂದ ಆಯೋಜಿಸಲಾಗಿಲ್ಲ. ಆದರೆ ವಿಶ್ವವಿದ್ಯಾಲಯದ ಕ್ಯಾಂಪಸ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತೊಂದು ಖಾಸಗಿ ಸಂಸ್ಥೆಯಾದ ಎಜುಕೇಶನ್ ಸೆಂಟರ್ ಆಫ್ ಆಸ್ಟ್ರೇಲಿಯಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಸಿಎ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ” ಎಂದು ಸ್ಪಷ್ಟಪಡಿಸಿದೆ.

ತೇಜಸ್ವಿ ಸೂರ್ಯ ಕಾರ್ಯಕ್ರಮ ವಿರುದ್ಧ ಅನೇಕ ಸಂಘಟನೆಗಳು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದು ಪ್ರತಿಭಟನೆ ನಡೆಸಿದ್ದರು. ಕೆಲವು ಸಂಘಟನೆಗಳು ವಿಶ್ವವಿದ್ಯಾನಿಲಯಕ್ಕೆ ಪ್ರತಿಭಟನೆಯ ನೋಟಿಸ್ ಸಹ ಕಳುಹಿಸಿದ್ದವು. ಈ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ, ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ವಿಶ್ವವಿದ್ಯಾಲಯವು ಪ್ರತಿಭಟನಾಕಾರರಿಗೆ ಇ-ಮೇಲ್ ಮೂಲಕ ತಿಳಿಸಿದೆ.  ಇಸಿಎ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.ಆಸ್ಟ್ರೇಲಿಯಾಗೆ ತೇಜಸ್ವಿ ಸೂರ್ಯ ಭೇಟಿ ವಿರೋಧಿಸುತ್ತಿದ್ದ ಹಲವರಲ್ಲಿ ಒಬ್ಬರಾಗಿರುವ ಭಾರತೀಯ ಮೂಲದ ಆಸ್ಟ್ರೇಲಿಯನ್ ನಾಗರಿಕ, ತಾವು ಸೂರ್ಯ ಭೇಟಿ ವಿರೋಧಿಸಿ ಹಲವು ಪ್ರಾಧಿಕಾರಗಳಿಗೆ ಬರೆದಿರುವುದಾಗಿ ತಿಳಿಸಿದ್ದಾರಲ್ಲದೆ ದ್ವೇಷ ಭಾಷಣ ನೀಡುವ ಸೂರ್ಯ ಅವರಂತಹ ರಾಜಕಾರಣಿಗಳಿಗೆ ಆಸ್ಟ್ರೇಲಿಯಾ ಪ್ರವೇಶ ನೀಡಬಾರದೆಂದು ಮನವಿ ಮಾಡಿದ್ದಾಗಿ ಹೇಳಿದ್ದಾರೆ.

ತೇಜಸ್ವಿಸೂರ್ಯ ಉಗ್ರ ಹಿಂದುತ್ವವಾದಿ ಮತ್ತು ಇಸ್ಲಾಂ ವಿರೋಧಿ ಎಂಬುದಕ್ಕೆ ಅವರ ಹಲವು ಹೇಳಿಕೆಗಳನ್ನು ಪ್ರತಿಭಟನಾಕಾರರು ಉಲ್ಲೇಖಿಸಿದ್ದಾರೆ. ಅರಬ್ ಮಹಿಳೆಯರನ್ನು ಉಲ್ಲೇಖಿಸಿ ತೇಜಸ್ವಿ ಸೂರ್ಯ ಮಾಡಿರುವ ಟ್ವೀಟ್‌ ಒಂದನ್ನು ಆಧಾರವಾಗಿ ನೀಡಿದ್ದಾರೆ. “95% ಅರಬ್ ಮಹಿಳೆಯರು ಕಳೆದ ಕೆಲವು ನೂರು ವರ್ಷಗಳಲ್ಲಿ ಎಂದಿಗೂ ಸುಖವನ್ನು ಕಾಣಲಿಲ್ಲ. ಪ್ರತಿಯೊಬ್ಬ ತಾಯಿಯು ಮಕ್ಕಳನ್ನು ಲೈಂಗಿಕ ಕ್ರಿಯೆಯಲ್ಲಿ ಹುಟ್ಟಿಸಿದ್ದಾರೆಯೇ ಹೊರತು ಪ್ರೀತಿಯಿಂದಲ್ಲ” ಎಂದು ಸೂರ್ಯ ಹೇಳಿದ್ದರು. ಈ ಟ್ವೀಟ್ ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. “ಯುಎಇ ಮತ್ತು ಭಾರತದ ನಡುವೆ ಸೌಹಾರ್ದಯುತ ಸಂಬಂಧವಿದ್ದು, ನಮ್ಮ ಮಹಿಳೆಯ ಬಗ್ಗೆ ಅತ್ಯಂತ ಕೀಳಾಗಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕ್ರಮ ಜರುಗಿಸಬೇಕು” ಎಂಬ ಆಗ್ರಹ ಬಂದಿತ್ತು. ಯುಎಇಯಲ್ಲಿನ ಭಾರತದ ರಾಯಭಾರಿಯಾಗಿದ್ದ ಪವನ್ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಬೇಕಾದ ಸ್ಥಿತಿ ಒದಗಿತು.

ಕಟ್ಟಾ ಹಿಂದುತ್ವದ ಹೇಳಿಕೆಗಳಿಗೆ ಹೆಸರಾಗಿರುವ ಬಿಜೆಪಿ ನಾಯಕ ತೇಜಸ್ವಿ ಸೂರ್ಯ ಆಸ್ಟ್ರೇಲಿಯಾಕ್ಕೆ ಆಗಮಿಸುವ ಮೊದಲೇ ಅವರ ವಿರುದ್ಧ ಪ್ರತಿಭಟನೆ ಆರಂಭವಾಗಿದೆ. ಅವರ ವೀಸಾವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಆನ್‌ಲೈನ್ ಅಭಿಯಾನ ಸಹ ಪ್ರಾರಂಭಿಸಲಾಯಿತು. ಇದುವರೆಗೆ 4,000 ಕ್ಕೂ ಹೆಚ್ಚು ಮಂದಿ ಈ ಅಭಿಯಾನದಲ್ಲಿ ಭಾಗವಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *