ಆಸ್ಟ್ರೇಲಿಯ ದ ‘ಟ್ರಂಪ್’ಗೆ ಪರಾಭವ, ‘ಎರಡು ಪಕ್ಷ ವ್ಯವಸ್ಥೆ’ಯ ಕೊನೆ ?

ಲೇಬರ್ ನಾಯಕ ಅಲ್ಬನೀಸ್ ಮತ್ತು ಸೋತ ಮಾರಿಸನ್

  • ವಸಂತರಾಜ ಎನ್.ಕೆ

ಆಸ್ಟ್ರೇಲಿಯದಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ‘ಆಸ್ಟ್ರೇಲಿಯದ ಟ್ರಂಪ್’ ಎಂದೇ ಕುಖ್ಯಾತರಾಗಿದ್ದ ಮತ್ತು ಮೂರು ಬಾರಿ ಪ್ರಧಾನಿಯಾಗಿದ್ದ ಸ್ಕಾಟ್ ಮಾರಿಸನ್ ಪರಾಭವ ಹೊಂದಿದ್ದಾರೆ. ಅವರ ನಾಯಕತ್ವದ ಲಿಬರಲ್/ನ್ಯಾಶನಲ್ ಕೂಟ, 151 ಸೀಟುಗಳಲ್ಲಿ ಕೇವಲ 58 ಸೀಟು ಗಳಿಸಿದೆ. ಕಳೆದ ಬಾರಿಗಿಂತ 19 ಸೀಟು ಕಳೆದುಕೊಂಡಿದೆ. ಲೇಬರ್ 77 ಸೀಟುಗಳನ್ನು ಗಳಿಸಿ ನಿಚ್ಚಳ ಬಹುಮತ ಸಾಧಿಸಿದೆ. ಗ್ರೀನ್ ಪಕ್ಷ, ಪಕ್ಷೇತರರರು ಮತ್ತು ಇತರ ಸಣ್ಣ ಪಕ್ಷಗಳು ಹಿಂದೆಂದಿಗಿಂತಲೂ ಅತ್ಯಧಿಕ 14 ಸೀಟು ಗೆಲ್ಲುವ ಮತ್ತು 10 ಸೀಟು ಹೆಚ್ಚಳ ಸಾಧಿಸುವ ಮೂಲಕ ಆಸ್ಟ್ರೇಲಿಯದಲ್ಲಿ ‘ಎರಡು ಪಕ್ಷ/ಕೂಟ ವ್ಯವಸ್ಥೆ’ಯ ಕೊನೆಯಾಗಿದೆ, ‘ಮೂರನೆಯ ಶಕ್ತಿ’ಯ ಉದಯವಾಗಿದೆ ಎಂದು ಹೇಳಲಾಗುತ್ತಿದೆ.

ಹೀಗಾಗಿ ಇದು ಲೇಬರ್ ವಿಜಯಕ್ಕಿಂತ ಹೆಚ್ಚಾಗಿ ಲಿಬರಲ್/ನ್ಯಾಶನಲ್ ಕೂಟದ ಮತ್ತು ಮಾರಿಸನ್ ಅವರ ಸೋಲು ಎಂದೇ ಹೇಳಬೇಕಾಗಿದೆ. ಲೇಬರ್ ಪ್ರಾಶಸ್ತ್ಯದ ಮತಗಳ ಆಧಾರದಲ್ಲಿ ಬಹುಮತ ಗಳಿಸಿದರೂ, ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಶೇ.32.7 ಮತ ಮಾತ್ರ ಗಳಿಸಿದೆ, ಕಳೆದ ಬಾರಿಗಿಂತ ಶೇ.0.7 ಮತ ಕಳೆದುಕೊಂಡಿದೆ. ಆಳುವ ಕೂಟ ಶೇ.36 ಮತ ಗಳಿಸಿದರೂ, ಶೇ.5.5 ಮತ ಕಳೆದುಕೊಂಡಿದೆ. ಅಂದರೆ ಮೂರನೆಯ ಶಕ್ತಿಗಳು ಶೇ.31 ರಷ್ಟು ಮತವನ್ನು ಗಳಿಸಿವೆ. ಅದರ ಬಹುಪಾಲು ಗ್ರೀನ್ ಪಕ್ಷ (ಶೇ.12) ಮತ್ತು ಪಕ್ಷೇತರರಿಗೆ (ಶೇ.5.3) ಹೋಗಿದೆ.

ಆಸ್ಟ್ರೇಲಿಯದ ಮತ ವ್ಯವಸ್ಥೆಯಲ್ಲಿ ಮತದಾರರು ಮತಪತ್ರದಲ್ಲಿರುವ ಎಲ್ಲ ಅಭ್ಯರ್ಥಿಗಳಿಗೂ ಅವರ ಆಯ್ಕೆಯಂತೆ ಪ್ರಾಶಸ್ತ್ಯ (1, 2….1 ಮೊದಲ ಪ್ರಾಶಸ್ತ್ಯ ಇತ್ಯಾದಿ) ಕೊಟ್ಟು ಮತ ಹಾಕಬೇಕು. ಯಾವುದೇ ಅಭ್ಯರ್ಥಿ ಮೊದಲ ಪ್ರಾಶಸ್ತ್ಯದಲ್ಲಿ ಶೇ.50 ಮತ ಗಳಿಸದಿದ್ದರೆ ಉಳಿದ ಪ್ರಾಶಸ್ತ್ಯಗಳನ್ನು ಪರಿಶೀಲಿಸಲಾಗುವುದು.

ಪಾರ್ಲಿಮೆಂಟಿನ ಮೇಲ್ ಸದನ ಸೆನೆಟ್ ಗೆ ಚುನಾವಣೆ ನಡೆದ 40 ಸೀಟುಗಳಲ್ಲಿ ಲೇಬರ್ 15, ಲಿಬರಲ್ ಕೂಟ 14 ಸೀಟುಗಳನ್ನು ಗೆದ್ದಿದೆ. ಗ್ರೀನ್ 6 ಸೀಟುಗಳನ್ನು ಗೆದ್ದಿದೆ. ಲಿಬರಲ್ ಕೂಟ 3 ಸೀಟುಗಳನ್ನು ಕಳೆದುಕೊಂಡಿದ್ದು, ಗ್ರೀನ್ 3 ಸೀಟುಗಳನ್ನು ಹೆಚ್ಚುವರಿಯಾಗಿ ಗೆದ್ದಿದೆ. ಈಗಿನ ಸೆನೆಟ್ ನ ಒಟ್ಟು 76 ಸೀಟುಗಳಲ್ಲಿ ಲೇಬರ್ 26, ಲಿಬರಲ್ 31 ಮತ್ತು ಗ್ರೀನ್ 12 ಸೀಟು ಹೊಂದಿವೆ. ಇಲ್ಲೂ ‘ಮೂರನೆಯ ಶಕ್ತಿ’ 19 ಸೀಟುಗಳನ್ನು ಹೊಂದಿದೆ.

ಮಾರಿಸನ್ ನೀತಿ, ಶೈಲಿಗಳ ಸೋಲು ಮಾತ್ರವಲ್ಲ

ಪ್ರಧಾನಿ ಮಾರಿಸನ್ ಮೂರು ಬಾರಿ ಸತತ ಪ್ರಧಾನಿಯಾಗಿದ್ದು ವಿವಾದಿತರಾಗಿದ್ದು ಸಾಕಷ್ಟು ಅಪಖ್ಯಾತಿ ಗಳಿಸಿದ್ದರು. ಮಾರಿಸನ್ ಮೊದಲಿನಿಂದಲೂ ‘ಟ್ರಂಪ’ರಂತೆ ‘ಹವಾಮಾನ ಬದಲಾವಣೆ’ಯನ್ನು ಮತ್ತು ಅದರ ನಿವಾರಣೆಗೆ ಗಂಭೀರ ಕ್ರಮಗಳ ಅಗತ್ಯವಿದೆ ಎಂಬುದನ್ನು ನಿರಾಕರಿಸುವ ಧೋರಣೆಯನ್ನು ಹೊಂದಿದ್ದವರು. ದೇಶಧಲ್ಲಿ ಇತ್ತೀಚೆಗೆ ಭಾರೀ ಹಾನಿ-ಸಂಕಷ್ಟ ತಂದಿದ್ದ ಕಾಡ್ಗಿಚ್ಚು ಮತ್ತು ನೆರೆ ಗಳು ‘ಹವಾಮಾನ ಬದಲಾವಣೆ’ಯ ಪರಿಣಾಮವೆಂಬುದು ಸ್ಪಷ್ಟ. ಆದರೆ ಮಾರಿಸನ್ ಅದಕ್ಕೆ ‘ಕ್ಯಾರೇ’ ಎನ್ನಲಿಲ್ಲ. ಅಭಿವೃದ್ಧ ದೇಶಗಳಲ್ಲಿ ಒಂದಾದ ಆಸ್ಟ್ರೇಲಿಯ ಕಲ್ಲಿದ್ದಲು ಆಧಾರಿತ ಸ್ಥಾವರಗಳನ್ನು ಕಡಿಮೆ ಮಾಡುತ್ತಾ ‘ಹಸಿರು ಪರಿಸರ-ಸ್ನೇಹಿ ಇಂಧನ’ಗಳತ್ತ ಹೋಗಬೇಕೆಂಬ ಸಾಮಾನ್ಯ  ಬೇಡಿಕೆಯನ್ನು ಧಿಕ್ಕರಿಸಿದ್ದರು. ಅವರು ಕಲ್ಲಿದ್ದಲನ್ನು ಪಾರ್ಲಿಮೆಂಟಿನಲ್ಲಿ ಪ್ರದರ್ಶಿಸುವ ಮೂಲಕ ತಮ್ಮ ಧಿಕ್ಕಾರ ಪ್ರದರ್ಶಿಸಿದ್ದರು ಕೂಡಾ. ಭಾರೀ ಹಾನಿ-ಸಂಕಷ್ಟ ತಂದಿದ್ದ ಕಾಡ್ಗಿಚ್ಚು ಮತ್ತು ನೆರೆ ಪ್ರಕೋಪಗಳು ತೀವ್ರವಾಗಿದ್ದಾಗ ಹವಾಯಿ ದ್ವೀಪದಲ್ಲಿ ‘ರಜಾ ಮಜಾ’ದಲ್ಲಿದ್ದು ಮರಳಲು ನಿರಾಕರಿಸುವ ಮೂಲಕ ತೀವ್ರ ಆಕ್ರೋಶಕ್ಕೆ ಕಾರಣರಾಗಿದ್ದರು. ಕೊರೊನಾ ಅವಧಿಯಲ್ಲಿ ಅಭಿವೃದ್ಧ ದೇಶಗಳಲ್ಲಿಯೇ ಅತ್ಯಂತ ಕಟುವಾದ ಅತಾರ್ಕಿಕ ಲಾಕ್ ಡೌನ್ ಹೇರುವ ಮೂಲಕವೂ ಜನತೆಯ ತೀವ್ರ ಆಕ್ರೋಶಕ್ಕೆ ತುತ್ತಾಗಿದ್ದರು. ಇಂತಹ ವರ್ತನೆಗಳ ವಿರುದ್ಧ ಟೀಕೆಗೆ ‘ನಾನು ಬುಲ್ ಡೋಜರ್’ ಥರ ‘ಯಾವುದನ್ನು ಲೆಕ್ಕಿಸುವುದಿಲ್ಲ’ ಎಂದು ಹೇಳಿಕೆ ಕೊಟ್ಟು ‘ಆಸ್ಟ್ರೇಲಿಯದ ಟ್ರಂಪ್’ ಎಂಬ ಬಿರುದು ಗಳಿಸಿದ್ದರು. ಪ್ರಾನ್ಸ್ ನ ಸಬ್ ಮೇರಿನ್ ಕಾಂಟ್ರಾಕ್ಟ್ ರದ್ದು ಮಾಡಿ, ಫ್ರೆಂಚ್ ಸರಕಾರದ ಜತೆಗೆ ಬಹಿರಂಗ ಕಿತ್ತಾಟ, ಚೀನಾದ ಜತೆ ಘನಿಷ್ಠವಾದ ಸಂಬಂಧ ಬಿಗಡಾಯಿಸಿಕೊಂಡು ಅದರ ವಿರುದ್ಧ ತರಾತುರಿಯಲ್ಲಿ ‘ಔಕಸ್’ ಮಿಲಿಟರಿ ಕೂಟಕ್ಕೆ ಸೇರಿದ ಅವರ ವಿದೇಶ ನೀತಿ ಸಹ  ವ್ಯಾಪಕವಾಗಿ ಟೀಕೆಗೆ ಒಳಗಾಗಿತ್ತು.

‘ಹವಾಮಾನ ಬದಲಾವಣೆ’ಯನ್ನು ತಡೆಯುವತ್ತ ದೇಶ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗ್ರೀನ್ ಪಕ್ಷ ಮತ್ತು ಪರಿಸರ ಚಳುವಳಿ  ವ್ಯಾಪಕ ಪ್ರಚಾರ-ಪ್ರಕ್ಷೋಭೆ ನಡೆಸಿತ್ತು. ಇದು ಪ್ರಮುಖ ಚುನಾವಣಾ ವಿಷಯವಾಗಿ  ಮೂಡಿಬಂತು. ಅದು ಲಿಬರಲ್ ಕೂಟಕ್ಕೆ ಪೂರ್ಣವಾಗಿ ಮಾರಕವಾಗಿತ್ತು. ಲೇಬರ್ ಪಕ್ಷ ಮಾರಿಸ್ ಸರಕಾರದ ಹವಾಮಾನ ಮತ್ತಿತರ ಧೋರಣೆಗಳನ್ನು ವಿರೋಧಿಸಿದ್ದರೂ, ನವೀಕರಿಸುವ ಇಂಧನಗಳಲ್ಲಿ ಹೂಡಿಕೆ ಮಾಡಬೇಕು ಎಂದು ಪ್ರತಿಪಾದಿಸಿದ್ದರೂ, ಅದೂ ಸಾಕಷ್ಟು ಮತ ಮತ್ತು ಸೀಟುಗಳನ್ನು ಗ್ರೀನ್ ಮತ್ತು ಪಕ್ಷೆತರರಿಗೆ ಕಳೆದುಕೊಂಡಿತು. ಲಿಬರಲ್ ಕೂಟ 9 ಸೀಟುಗಳನ್ನು, ಲೇಬರ್ 2 ಸೀಟುಗಳನ್ನು ಗ್ರೀನ್ ಮತ್ತು ಪಕ್ಷೇತರರಿಗೆ ಕಳೆದುಕೊಂಡಿತು. ಲಿಬರಲ್ ಕೂಟ 12 ಸೀಟುಗಳನ್ನು ಲೇಬರ್ ಗೆ ಕಳೆದುಕೊಂಡಿತು. ಹೆಚ್ಚಿನ ಮಹಾನಗರಗಳ ಮುಖ್ಯ ಸೀಟುಗಳನ್ನು ಗ್ರೀನ್ ಮತ್ತು ಪಕ್ಷೇತರರು ಗೆದ್ದುಕೊಂಡಿದ್ದಾರೆ ಎನ್ನಲಾಗಿದೆ. ಗೆದ್ದ ಪಕ್ಷೇತರರಲ್ಲಿ ಹೆಚ್ಚಿನವರು ಪರಿಸರ ಚಳುವಳಿಯಿಂದ ಬಂದವರು ಎಂದು ಹೇಳಲಾಗಿದೆ.

‘ಷಿ ಪೆಂಗ್ ಲೇಬರ್ ಗೆ ಮತ ಚಲಾಯಿಸುತ್ತಿರುವ’ ಲಿಬರಲ್ ಕೂಟದ ಪೋಸ್ಟರ್

ಚೀನಾ ಕಾರ್ಡ್ ವಿಫಲ

ಮಾರಿಸನ್ ತಮ್ಮ ಮತ್ತು ತಮ್ಮ ಕೂಟ ಸಾಕಷ್ಟು ಜನಪ್ರಿಯತೆ ಕಳೆದುಕೊಂಡಿದ್ದನ್ನು ಕಂಡು ‘ಚೀನಾ ಕಾರ್ಡ್’ ಬಳಸಲು ಪ್ರಯತ್ನಿಸಿದರು. ಲೇಬರ್ ಪಕ್ಷ ಅದರಲ್ಲೂ ಅದರ ನಾಯಕ ಆಂಟೊನಿ ಅಲ್ಬನೀಸ್ ಗೆ ಚೀನಾ ಹಣಕಾಸು ಮತ್ತಿತರ ಬೆಂಬಲ ನೀಡುತ್ತಿದೆ. ಅಲ್ಬನೀಸ್ ಚೀನಾ-ಪರ. ಅವರು ಆಯ್ಕೆಯಾದರೆ ಚೀನಾ ಸರಕಾರದ ಮೇಲೆ ನೇರ ಹತೋಟಿ ಹೊಂದಿರುತ್ತದೆ ಎಂದು ಆಪಾದಿಸಿದರು. ಚೀನಾ ಕಮ್ಯುನಿಸ್ಟ್ ಪಕ್ಷ ಲೇಬರ್ ಮತ್ತು ಅಲ್ಬನೀಸ್ ಗೆಲ್ಲಿಸಬೇಕೆಂದು ನಿರ್ಧರಿಸಿದೆ. ಷಿ ಪೆಂಗ್ ಆಸ್ಟ್ರೇಲಿಯದ ಚುನಾವಣೆಗಳಲ್ಲಿ ಮತ ಚಲಾಯಿಸುತ್ತಿರುವ ‘ಫೋಟೋಶಾಪ್’ ಪೋಸ್ಟರುಗಳ ಮೂಲಕ ತೀವ್ರ ಅಪಪ್ರಚಾರ ನಡೆಸಿತು. ಲೇಬರ್ ಸ್ವಲ್ಪ ಮತಗಳನ್ನು ಇದರಿಂದ ಕಳೆದುಕೊಂಡಿರುವ ಸಾಧ್ಯತೆಯಿದೆ. ಆದರೆ ಅದು ಅಂತಿಮವಾಗಿ ಲಿಬರಲ್ ಕೂಟಕ್ಕೆ ಪ್ರಯೋಜನವಾಗಲಿಲ್ಲ ಎಂಬುದು ಫಲಿತಾಂಶ ನೋಡಿದರೆ ಸ್ಪಷ್ಟ. ಮಾರಿಸನ್  ಸರಕಾರದ ವಿದೇಶಾಂಗ ನೀತಿ ವೈಫಲ್ಯಗಳು ಸಹ ದೊಡ್ಡ ಚುನಾವಣಾ ವಿಷಯವಾಗುವುದನ್ನು ತಪ್ಪಿಸಿದವೇನೋ.

ಲೇಬರ್ ಪಕ್ಷ ಈಗ ನಿಚ್ಚಳ ಬಹುಮತ ಪಡೆದಿದ್ದು ಅಧಿಕಾರ ವಹಿಸಿಕೊಂಡಿದೆ. ಚುನಾವಣಾ ಫಲಿತಾಂಶ ಪ್ರಕಟವಾಗುವಾಗಲೇ ಕ್ವಾಡ್ ಶೃಂಗಸಭೆ ದಿನ ನಿಗದಿಯಾಗಿದ್ದು, ಪ್ರಧಾನಿ ಅಲ್ಬನೀಸ್ ಶೃಂಗಸಭೆಗೆ ತೆರಳಬೇಕಾಯಿತು. ಚುನಾವಣಾ ಪ್ರಣಾಳಿಕೆಯಲ್ಲಿ  ಭರವಸೆಯಿತ್ತಂತೆ ಹವಾಮಾನ ಬದಲಾವಣೆಯನ್ನು ತಡೆಗಟ್ಟಲು ಗಂಭೀರ ಕ್ರಮಕೈಗೊಳ್ಳಲು, ನವೀಕರಿಸುವ ಇಂಧನಗಳಲ್ಲಿ ಹೂಡಿಕೆ ಮಾಡಲು ಸರಕಾರ ಬದ್ಧವಾಗಿದೆ ಎಂದು ಘೋಷಿಸಿದ್ದಾರೆ. ಆದರೆ ಗ್ರೀನ್ ಒತ್ತಾಯಿಸುವಂತೆ ಈಗಿರುವ ಕಲ್ಲಿದ್ದಲು ಸ್ಥಾವರಗಳನ್ನು ಅಥವಾ ಹೊಸ ಕಲ್ಲಿದ್ದಲು ಗಣಿಗಳನ್ನು ನಿಲ್ಲಿಸುವ ನೀತಿಯನ್ನು ಒಪ್ಪಿಕೊಂಡಿಲ್ಲ. ದೇಶದ ಆದಿವಾಸಿಗಳಿಗೆ ಹಕ್ಕನ್ನು ಮನ್ನಿಸುವ ಅವರ ಪುನರ್ವಸತಿಗೆ ಕರೆ ಕೊಡುವ  ‘ಉರುಲು ಘೋಷಣೆ’ಯ ಅಂಶಗಳನ್ನು ಜಾರಿ ಮಾಡುವುದಾಗಿಯೂ ಘೋಷಿಸಿದ್ದಾರೆ. ಹಿಂದಿನ ಸರಕಾರದ ನಿರ್ಧಾರಗಳು, ಅಮೆರಿಕದ ಸರಕಾರದ ಮತ್ತು ಜಾಗತಿಕ ಮಾಧ‍್ಯಮಗಳ ಚೀನಾ-ದ್ವೇಷದ ಪ್ರಚಾರಗಳ ಒತ್ತಡದಿಂದಾಗಿ ಚೀನಾದ ಕುರಿತು ಮತ್ತು ಸಾಮಾನ್ಯ ವಿದೇಶ ನೀತಿಗಳಲ್ಲಿ ಬದಲಾವಣೆಯನ್ನು ನಿರೀಕ್ಷಿಸಲು ಸಾಧ‍್ಯವಿಲ್ಲ. ಆದರೆ ಅಮೆರಿಕಕ್ಕೆ ಬೆಂಬಲ, ಚೀನಾ-ದ್ವೇಷ ಗಳ ತೀಕ್ಷ್ಣತೆಗಳು ಕಡಿಮೆಯಾಗಬಹುದು.

ಔಕಸ್ ಕೂಟದ ರಚನೆ ಮತ್ತು ಫ್ರೆಂಚ್ ಸಬ್ ಮೇರಿನ್ ಗೆ ಖೊಕ್ – ಕಾರ್ಟೂನ್

ಈ ಚುನಾವಣಾ ಫಲಿತಾಂಶಗಳಲ್ಲಿ ಕಂಡಂತೆ ಎರಡು ಪಕ್ಷ ವ್ಯವಸ್ಥೆ ಶಿಥಿಲವಾಗುತ್ತಿರುವುದು, ಗ್ರೀನ್ ಮತ್ತಿತರ ಹಲವು ಹೊಸ ರಾಜಕೀಯ ಶಕ್ತಿಗಳು ಮೂಡಿಬರುತ್ತಿರುವುದು ಯುರೋಪಿನ ಮತ್ತಿತರ ಅಭಿವೃದ್ಧ ಬಂಡವಾಳಶಾಹಿ ದೇಶಗಳ ಒಟ್ಟು ರಾಜಕೀಯ ಬೆಳವಣಿಗೆಗಳಿಗೆ ಅನುಗುಣವಾಗಿಯೇ ಇದೆ. ಇದು ಎರಡನೆಯ ಮಹಾಯುದ್ಧದ ನಂತರ ನವ-ಉದಾರವಾದದ ಆರಂಭದ ವರೆಗಿನ ಹಲವು ದಶಕಗಳಲ್ಲಿ ಸಮಾಜವಾದಿ ಬಣದ ಒತ್ತಡದಿಂದ ‘ಕಲ್ಯಾಣ ರಾಜ್ಯ’ದ ನೀತಿಗಳು ಜಾರಿಯಲ್ಲಿದ್ದ ಅವಧಿಯಲ್ಲಿ ಹೆಚ್ಚಿನ ನೀತಿಗಳಲ್ಲಿ ವ್ಯತ್ಯಾಸಗಳೂ ಬದಲಾವಣೆಗಳೂ ಇಲ್ಲದ ಎರಡು-ಪಕ್ಷ ವ್ಯವಸ್ಥೆ ಜಾರಿಗೆ ಬಂದಿತ್ತು. ಆದರೆ ನವ-ಉದಾರವಾದದ ಆಕ್ರಮಣಕಾರಿ ನೀತಿಗಳು, ‘ಕಲ್ಯಾಣ ರಾಜ್ಯ’ ಕಳಚಿ ಬೀಳುತ್ತಿರುವುದು ಮತ್ತು ಜನತೆಯ ಮೇಲೆ ಅದರ ಕಟು ಪರಿಣಾಮಗಳು ಹೆಚ್ಚಿದಂತೆ ಈ ವ್ಯವಸ್ಥೆ ಶಿಥಿಲವಾಗಲಾರಂಭಿಸಿದೆ. ‘ಪ್ರಗತಿಪರ ಮತ್ತು ಉಗ್ರ ಬಲಪಂಥೀಯ ಶಕ್ತಿಗಳು ಸೇರಿದಂತೆ ಮೂರನೆಯ ಶಕ್ತಿ’ಗಳು ಗಟ್ಟಿಗೊಳ್ಳುತ್ತಿರುವುದು ಎಲ್ಲೆಡೆ ಕಂಡು ಬಂದಿದೆ. ಆಸ್ಟ್ರೇಲಿಯದಲ್ಲಿ ಸಹ ಇದು ಆರಂಭವಾಗಿದೆ ಎಂಬುದು ಸ್ಪಷ್ಟ.

Donate Janashakthi Media

Leave a Reply

Your email address will not be published. Required fields are marked *