ನವದೆಹಲಿ : ಅಗಸ್ಟ್ 1 ರಂದು ಸೋಮವಾರ ಜಿಲ್ಲಾ ಕೇಂದ್ರಗಳಲ್ಲಿ ಮತ ಪ್ರದರ್ಶನ, ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದಾಗಿ ಕೃಷಿಕೂಲಿಕಾರರ ಸಂಘಟನೆ ತಿಳಿಸಿದೆ. ಈ ಕುರಿತು ಕೃಷಿಕೂಲಿಕಾರರ ಜಂಟಿ ವೇದಿಕೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಕೃಷಿ ಕೂಲಿಕಾರರು, ಗೇಣಿದಾರ ರೈತರು ಮತ್ತು ಇತರ ರೈತಾಪಿ ದುಡಿಮೆಗಾರರು ದೇಶದಲ್ಲಿ ಆಹಾರ ದಾನ್ಯಗಳನ್ನು ಬೆಳೆಯುವ ಮೂಲಭೂತ ಉತ್ಪಾದಕರು. ಇಂದು, ಕೃಷಿಕರ ಸಂಖ್ಯೆ ಕಡಿಮೆಯಾಗುತ್ತಿದ್ದು, ಕೃಷಿ ಕೂಲಿಕಾರರ ಸಂಖ್ಯೆ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ಕೃಷಿ ಕೂಲಿಕಾರರಿಗೆ ಕೃಷಿಯಲ್ಲಿ ಕೆಲಸದ ಲಭ್ಯತೆ ಕಡಿಮೆಯಾಗುತ್ತಿದೆ.
ಕೃಷಿ ಕೂಲಿಕಾರರ ಜಂಟಿ ವೇದಿಕೆಯಿಂದ 28 ಪ್ರಮುಖ ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ 2022 ಜುಲೈ 31 ರವರೆಗೆ ಹಳ್ಳಿ-ಹಳ್ಳಿಗಳಲ್ಲಿ ಪ್ರಚಾರ ಕೈಗೊಂಡಿದ್ದು, ಹಳ್ಳಿ, ತಾಲೂಕು, ಜಿಲ್ಲೆಗಳಲ್ಲಿ ಜಂಟಿ ಸಭೆ-ಸಮಾವೇಶಗಳನ್ನು ನಡೆಸುತ್ತಿದೆ. ಹೋರಾಟದ ಮುಂದುವರೆದ ಭಾಗವಾಗಿ ಅಗಸ್ಟ್ 1 ರಂದು ಸೋಮವಾರ ಜಿಲ್ಲಾ ಕೇಂದ್ರಗಳಲ್ಲಿ ಮತ ಪ್ರದರ್ಶನ, ಪ್ರತಿಭಟನೆಗಳನ್ನು ಹಮ್ಮಿಕೊಂಡಿವೆ.
ಕೃಷಿ ಕೂಲಿಕಾರರು, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕೃಷಿಯನ್ನೇ ಅವಲಂಭಿತರು. 2011 ರ ಜನಗಣತಿ ಪ್ರಕಾರ ದೇಶದಲ್ಲಿ 11,86,69,264 ಕೃಷಿಕರಿದ್ದಾರೆ. ಆದರೆ ಕೃಷಿ ಕೂಲಿಕಾರರ ಸಂಖ್ಯೆ ಕೃಷಿಕರಿಗಿಂತಲೂ ಹೆಚ್ಚು. ಕೃಷಿರಂಗದಲ್ಲಿ ಕೂಲಿಗಾಗಿ ದುಡಿಯುವವರ ಸಂಖ್ಯೆಯು ಅತೀಹೆಚ್ಚು ಅಂದರೆ, 14,45,29,833 ರಷ್ಟಿದೆ. ಇವರು ಜನಸಂಖ್ಯೆಯಲ್ಲಿ ಅತ್ಯಂತ ಹೆಚ್ಚು ಅಂಚಿಗೆ ತಳ್ಳಲ್ಪಟ್ಟವರು.
ಹಕ್ಕೊತ್ತಾಯಗಳ ಬಗ್ಗೆ ತಿಳಿಸಿದ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ ಅವರು, ದೇಶದ ಇಡೀ ಜನಾಭಿವೃದ್ಧಿ ನೀತಿಯಲ್ಲಿ ಇವರು ಕಡೆಗಣಿಸಲ್ಪಟ್ಟವರು. ಗಿಡಮರಗಳ ರಕ್ಷಣೆಗೆ ಇಲ್ಲಿ ಕಾನೂನುಗಳಿವೆ. ಪಶುಪಕ್ಷಿಗಳ ರಕ್ಷಣೆಗೆ ಕಾನೂನುಗಳಿವೆ. ಆದರೆ ಈ ಬಡಪಾಯಿ ಕೃಷಿ ಕೂಲಿಕಾರರ ಅಭಿವೃದ್ಧಿಗೆ ಸಮಗ್ರವಾದ ಒಂದು ಕಾನೂನು ಸಹ ಇಲ್ಲ ಎಂದರು.
ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಹೆಚ್ಚು ರಭಸದಿಂದ ನವ-ಉದಾರೀಕರಣದ ನೀತಿಗಳನ್ನು ಜಾರಿಗೆ ತರುತ್ತಿರುವುದರಿಂದ ಕೃಷಿಯಲ್ಲಿ ಯಾಂತ್ರೀಕರಣ, ಕಂಪನೀಕರಣ ತೀವ್ರಗೊಳ್ಳುತ್ತಿದ್ದು ಗ್ರಾಮೀಣ ನಿರುದ್ಯೋಗ ಹೆಚ್ಚುತ್ತಿದೆ. ಕೃಷಿ ಕೂಲಿಕಾರರು ಹಳ್ಳಿಗಳನ್ನು ತೊರೆದು ನಗರ ಪ್ರದೇಶಗಳಿಗೆ ವಲಸೆ ಹೋಗುವುದು ಹೆಚ್ಚಾಗುತ್ತಿದೆ. ವಲಸೆ ಹೋದ ಸ್ಥಳಗಳಲ್ಲಿ ಕೂಲಿಕಾರರು ಯಾತನಾಮಯ ಜೀವನ ಸಾಗಿಸುತ್ತಿದ್ದಾರೆ.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಬೆಲೆ ಏರಿಕೆಗೆ ತಕ್ಕಂತೆ ಕೂಲಿ ದರಗಳು ಹೆಚ್ಚಾಗುವುದಿಲ್ಲ. ಕೂಲಿಕಾರರಿಗೆ ಕೆಲಸ ಕೊಡದೆ ಸತಾಯಿಸಲಾಗುತ್ತದೆ. ದಿನಕ್ಕೆರಡು ಬಾರಿ ಆನ್‌ಲೈನ್ ಮೂಲಕ ಪೋಟೊಗಳೊಂದಿಗೆ ಹಾಜರಿ ನೀಡುವ ಕ್ರಮಗಳಂತಹ ನಿಯಮಗಳನ್ನು ಕಡ್ಡಾಯವಾಗಿ ಜಾರಿ ಮಾಡಲು ಕೇಂದ್ರ ಸರ್ಕಾರ ಪಟ್ಟು ಹಿಡಿದಿದೆ. ಉದ್ಯೋಗ ಖಾತ್ರಿ ಕೆಲಸ ತುಂಡು ಕೆಲಸ ಆಗಿದ್ದು ದಿನಕ್ಕೆರಡು ಬಾರಿ ಹಾಜರಿ ಎಂಬುದು ಕೂಲಿಕಾರರಿಗೆ ಕಿರುಕುಳ ಕೊಡುವ ಉದ್ದೇಶವಾಗಿದೆ. ಕಾಯಕ ಮಿತ್ರರಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹಧನವನ್ನು ಕಡಿತ ಮಾಡಲಾಗಿದೆ. ಸಲಕರಣೆಗಳನ್ನು ಹರಿತಗೊಳಿಸಲು ನೀಡಲಾಗುತ್ತಿದ್ದ ಭತ್ತೆಯನ್ನು ನಿಲ್ಲಿಸಲಾಗಿದೆ ಎಂದರು.
ಈ ಎಲ್ಲ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಕೃಷಿ ಕೂಲಿಕಾರರ ನಡುವೆ ಕೆಲಸ ನಿರ್ವಹಿಸುತ್ತಿರುವ ಸಂಘಟನೆಗಳು ದೆಹಲಿಯಲ್ಲಿ ಸಭೆ ಸೇರಿ ಕೂಲಿಕಾರರ ಪ್ರಮುಖ 28 ಹಕ್ಕೊತ್ತಾಯಗಳ ಈಡೇರಿಸಬೇಕೆಂದು ಸಭೆ, ಸಮಾವೇಶ ಹಾಗೂ ಪ್ರತಿಭಟನಾ ಮತ ಪ್ರದರ್ಶಗಳನ್ನು ನಡೆಸಲಾಗುತ್ತಿದೆ ಎಂದು ಕರೆ ನೀಡಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ವರ್ಷದಲ್ಲಿ 200 ದಿನಗಳ ಕೆಲಸ ರೂ.600/- ದಿನಗೂಲಿ. ಮೇಟಿಗಳಿಗೆ ಮತ್ತು ತಾಂತ್ರಿಕ ಸಿಬ್ಬಂದಿಗಳಿಗೆ ಸೇವಾ ಭದ್ರತೆ. ಸಮಯಕ್ಕೆ ಸರಿಯಾಗಿ ವೇತನ ಪಾವತಿ ಮತ್ತು ಯೋಜನೆಯನ್ನು ನಗರ ಪ್ರದೇಶಗಳಿಗೆ ವಿಸ್ತರಣೆ ಮಾಡಬೇಕೆಂದು ಆಗ್ರಹಿಸಲಾಗುತ್ತಿದೆ.
55 ವರ್ಷ ದಾಟಿದ ಎಲ್ಲ ಕೃಷಿ ಕೂಲಿಕಾರರಿಗೆ ಮತ್ತು ಇತರ ಗ್ರಾಮೀಣ ಕೆಲಸಗಾರರಿಗೆ ತಿಂಗಳಿಗೆ ರೂ. 5000 ನಿವೃತ್ತಿ ವೇತನ ನೀಡಬೇಕು. ಕೂಲಿಕಾರರಿಗೆ, ಶೌಚಾಲಯ, ಅಡುಗೆ ಮನೆ ಕೈತೋಟ, ದನದ ಕೊಟ್ಟಿಗೆಯನ್ನು ಒಳಗೊಂಡ ಹಿತ್ತಲು ಸಹಿತದ ಪಕ್ಕಾ ಮನೆ ನೀಡಬೇಕು. ಮನೆ ಕಟ್ಟಲು ನೀಡುವ ಅನುಧಾನವನ್ನು ಕೇಂದ್ರದಿಂದ ರೂ. 5 ಲಕ್ಷ ಮತ್ತು ರಾಜ್ಯ ಸರ್ಕಾರದಿಂದ 5 ಲಕ್ಷ ರೂ. ನೀಡಬೇಕು.
ಕೇಂದ್ರ ಸರ್ಕಾರ ಧೃಡವಾದ ಮುತುವರ್ಜಿ ವಹಿಸಿ ಪ್ರಗತಿಪರ ಭೂ ಸುಧಾರಣೆಗಳನ್ನು ಜಾರಿಗೆ ತರಬೇಕು. ಸ್ವಾತಂತ್ರ್ಯ ದೊರೆತು 75 ವರ್ಷಗಳ ನಂತರವೂ ಉಳುವವನಿಗೆ ಭೂಮಿಯನ್ನು ಕೊಡುವ ಅಂದಿನ ಭರವಸೆ ಇನ್ನೂ ಜಾರಿಗೆ ಬಂದಿಲ್ಲ. ಸರ್ಕಾರಿ ಭೂಮಿಯನ್ನು ಭೂರಹಿತ ದಲಿತರಿಗೆ, ಕೃಷಿ ಕೂಲಿಕಾರರಿಗೆ, ಬುಡಕಟ್ಟು ಸಮುದಾಯಗಳಿಗೆ ಮತ್ತು ಬಡರೈತರಿಗೆ ಅಗತ್ಯ ಆರ್ಥಿಕ ನೆರವಿನೊಂದಿಗೆ ಮತ್ತು ಭೂ ಒಡೆತನದ ಹಕ್ಕಿನೊಂದಿಗೆ ವಿತರಿಸಬೇಕು.
ಪರಿಶಿಷ್ಟ ಜಾತಿ(ಎಸ್.ಸಿ.) ಮತ್ತು ಪರಿಶಿಷ್ಟ ಪಂಗಡ(ಎಸ್.ಟಿ.) ಸಮುದಾಯಗಳಿಗೆ ಸೂಕ್ತ ಪರಿಹಾರ ಹಾಗೂ ಪರ್ಯಾಯ ಭೂಮಿ ವಿತರಣೆಯೊಂದಿಗೆ 2013ರ ಭೂಸ್ವಾಧಿನ ಕಾಯ್ದೆಯನ್ನು ಜಾರಿಗೆ ತರಬೇಕು. ಪುನರ್ವಸತಿ ಕಲ್ಪಿಸದೆ ಯಾರನ್ನೂ ಒಕ್ಕಲೆಬ್ಬಿಸಬಾರದು. ಪುನರ್ವಸತಿ ಕೇಂದ್ರಗಳಲ್ಲಿ ವಾಸಕ್ಕೆ ಸಮರ್ಪಕ ಮನೆ, ಆರೋಗ್ಯ ಹಾಗೂ ಶಿಕ್ಷಣ ಸೌಲಭ್ಯಗಳನ್ನು ತಪ್ಪದೆ ಒದಗಿಸಬೇಕು ಆಗ್ರಹಿಸಲಾಗಿದೆ.
ಅರಣ್ಯ ಹಕ್ಕುಗಳ ಕಾಯ್ದೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು. ಉದ್ಯೋಗ ಸೃಷ್ಟಿಗಾಗಿ ಮತ್ತು ಪರಿಸರ ರಕ್ಷಣೆಗಾಗಿ ಕೇಂದ್ರ-ರಾಜ್ಯ ಸರ್ಕಾರಗಳು ಸಾಮಾಜಿಕ ಅರಣ್ಯವನ್ನು ಪ್ರೋತ್ಸಾಹಿಸಬೇಕು. ಇಲ್ಲಿಯೂ ಸಹ ಕೃಷಿ ಕೂಲಿಕಾರರಿಗೆ ಮತ್ತು ಇತರೆ ಗ್ರಾಮೀಣ ಕೆಲಸಗಾರರಿಗೆ ಉದ್ಯೋಗ ಒದಗಿಸುವುದಕ್ಕೆ ಆದ್ಯತೆ ನೀಡಬೇಕು. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ದ್ವಿದಳ ದಾನ್ಯಗಳು, ಎಣ್ಣೆಗಳು, ಸಾಂಬಾರು ಪದಾರ್ಥಗಳು ಮತ್ತು ಹಣ್ಣು ತರಕಾರಿಗಳನ್ನು ಒಳಗೊಂಡ ಪರಿಪೂರ್ಣವಾದ ಆಹಾರ ಪದಾರ್ಥಗಳನ್ನು ವಿತರಣೆ ಮಾಡಬೇಕೆಂದು ಕೃಷಿ ಕೂಲಿಕಾರರ ಹಕ್ಕೊತ್ತಾಯವಾಗಿದೆ.
ದಲಿತರ ಮೇಲಿನ ದೌರ್ಜನ್ಯಗಳನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು. ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆಕಾಯ್ದೆ-1989ನ್ನು ಬಲಪಡಿಸಿ ಸಮರ್ಪಕವಾಗಿ ಜಾರಿಮಾಡಬೇಕು. ಕೇಂದ್ರ-ರಾಜ್ಯ ಆಯವ್ಯಯದಲ್ಲಿ ಎಸ್‌ಸಿ/ಎಸ್.ಟಿ ಉಪಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಮಾಡಬೇಕು. ಇದರ ಅನುಷ್ಠಾನದಲ್ಲಿ ಉಲ್ಲಂಘನೆ ಮಾಡವವವರನ್ನು ಆರ್ಥಿಕ ಕ್ರಿಮಿನಲ್ ಅಪರಾಧಿಗಳೆಂದು ಪರಿಗಣಿಸಬೇಕು. ಖಾಸಗಿ ರಂಗದಲ್ಲಿ ಮೀಸಲಾತಿ ಜಾರಿಮಾಡಬೇಕು. ಮೀಸಲು ಕ್ಷೇತ್ರದಲ್ಲಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿಮಾಡಬೇಕು ಎಂದು ಹಕ್ಕೋತ್ತಾಯವಾಗಿದೆ.
ಕೃಷಿ ಕೂಲಿಕಾರರ ಕನಿಷ್ಟ ವೇತನವನ್ನು ಪರಿಷ್ಕರಿಸಬೇಕು. ಹಣದುಬ್ಬರ ದರಕ್ಕೆ ಜೋಡಿಸಬೇಕು. ಸಮಾನ ವೇತನ ನೀಡುವ ಮೂಲಕ ಕೃಷಿ ಕೂಲಿಕಾರರ ವೇತನವು ಇತ್ತೀಚಿನ ವೇತನ ಆಯೋಗದ ವರದಿಗೆ ಅನುಗುಣವಾಗಿರಬೇಕು. ಪ್ರತಿ ಎರಡು ವರ್ಷಕ್ಕೊಮ್ಮೆ ಅದನ್ನು ಪರಿಷ್ಕರಿಸಬೇಕು ಎಂಬ ಪ್ರಮುಖ ಹಕ್ಕೋತ್ತಾಯಗಳನ್ನು ಸರ್ಕಾರದ ಮುಂದಿಡಲಾಗಿದೆ.
ಜಂಟಿ ಪ್ರತಿಭಟನೆಯಲ್ಲಿ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ (ಎಐಎಡಬ್ಲ್ಯೂಯು), ಭಾರತೀಯ ಖೇತ್ ಮಜ್ದೂರ್ ಸಂಘ (ಬಿಕೆಎಂಯು), ಅಖಿಲ ಭಾರತ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕೆಲಸಗಾರರ ಸಂಘ (ಎಐಎಆರ್‌ಎಲ್‌ಎ), ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘ (ಎಐಕೆಕೆಎಂಎಸ್) ಅಖಿಲ ಭಾರತ ಅಗ್ರಗಾಮಿ ಕೃಷಿ ಶ್ರಮಿಕ ಯೂನಿಯನ್ (ಎಐಎಕೆಎಸ್‌ಯು) ಸಂಘಟನೆಗಳು ನೇತೃತ್ವ ವಹಿಸಿವೆ.