19.20.21. ಅತ್ಯಂತ ಸೂಕ್ಷ್ಮ ವಿಚಾರಗಳನ್ನು ಅಚ್ಚುಕಟ್ಟಾಗಿ ದೊಡ್ಡ ತೆರೆಯ ಮೇಲೆ ತರಲಾಗಿದೆ

ಎಚ್.ಆರ್. ನವೀನ್ ಕುಮಾರ್, ಹಾಸನ

ಒಂದು ಗಂಭೀರವಾದ ಬದುಕಿನ ವಿಚಾರವನ್ನ, ಸಂವಿಧಾನದ ವಿಚಾರವನ್ನ ಸಿನಿ ಮಾಧ್ಯಮದ ಮೂಲಕ ಕಟ್ಟಿಕೊಡುವುದು ಅಷ್ಟು ಸುಲಭದ ಮಾತಲ್ಲ ಅದಕ್ಕೆ ವಿಶೇಷವಾದ ಬದ್ದತೆಯನ್ನು ಬೇಡುತ್ತದೆ.

 

“ಸಂವಿಧಾನ ಅನ್ನೋದು ಒಬ್ಬ ಲಾಯರ್ ನ ಡಾಕ್ಯುಮೆಂಟ್ ಅಲ್ಲಾ… ಅದು ನಮ್ಮ ಜೀವನವನ್ನ ನಡೆಸುವ ಚಾಲಕ ಶಕ್ತಿಯೂ ಹೌದು…

ಅದಕ್ಕೂ ಮುಖ್ಯವಾಗಿ ಸಂವಿಧಾನಕ್ಕೆ ಚೈತನ್ಯ ಬರೋದೇ ಅದನ್ನ ಮಾನವೀಯವಾಗಿ ಹೃದಯದಿಂದ ಬಳಸೋ ಜನರಿಂದನೆ…

ಆ ಚೈತನ್ಯನೇ ನಮ್ಮ ಸಂವಿಧಾನದ ಮೂಲಭೂತ ಹಕ್ಕುಗಳು ಅದರಲ್ಲೂ ಆರ್ಟಿಕಲ್ 19.20.21”

ಮನ್ಸೂರೆ ನಿರ್ದೇಶನದ 19.20.21 ಸಿನಿಮಾದ ಕೊನೆಯ ಭಾಗದ ಕೋರ್ಟ್ ದೃಶ್ಯದಲ್ಲಿ ಬರುವ ಮಾತುಗಳಿವು.

ಇದನ್ನು ಓದಿ: 19.20.21. ಬರೀ ಸಂಖ್ಯೆಯಲ್ಲ… ಅದು ಸಂವಿಧಾನದ ವಿಧಿ

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಆದಿವಾಸಿಗಳ ಬದುಕಿನ ಸತ್ಯ ಘಟನೆಗಳ ಆಧಾರದಲ್ಲಿ ಇವರ ಬದುಕಿನ ನೈಜತೆ, ಅಧಿಕಾರಸ್ತರ ಕರಾಳತೆ (ಪೋಲಿಸ್ ಮತ್ತು ಎಎನ್‌ಎಫ್‌) ಅದಕ್ಕಾಗಿ ಅವರು ನಡೆಸುವ ಹೋರಾಟಗಳು, ಸಂವಿಧಾನದ ಹಕ್ಕುಗಳನ್ನು ಸಿನಿಮಾ ಎಂಬ ಅತ್ಯಂತ ಶಕ್ತಿಶಾಲಿ ಮಾಧ್ಯಮದ ಮೂಲಕ ಕಟ್ಟಿಕೊಡುವಲ್ಲಿ ನಿರ್ದೇಶಕರಾಗಿ ಮನ್ಸೂರೆ ಯಶಸ್ವಿಯಾಗಿದ್ದಾರೆ.

ಇಡೀ ಸಿನೆಮಾ ಮೊದಲಿನಿಂದ ಕೊನೆಯವರೆಗೂ ನಮ್ಮನ್ನ ಆದಿವಾಸಿಗಳ ಬದುಕಿನ, ಅವರ ಸಂಕಷ್ಟಗಳ ಜೊತೆ ಹೆಜ್ಜೆಯಾಕಿಸುತ್ತದೆ. ಎಲ್ಲಿಯೂ ಆಚೀಚೆ ಯೋಚಿಸಲು ನಮಗೆ ಅವಕಾಶವನ್ನೇ ಕೊಡುವುದಿಲ್ಲ.

ಒಂದು ಗಂಭೀರವಾದ ಬದುಕಿನ ವಿಚಾರವನ್ನ, ಸಂವಿಧಾನದ ವಿಚಾರವನ್ನ ಸಿನಿ ಮಾಧ್ಯಮದ ಮೂಲಕ ಕಟ್ಟಿಕೊಡುವುದು ಅಷ್ಟು ಸುಲಭದ ಮಾತಲ್ಲ ಅದಕ್ಕೆ ವಿಶೇಷವಾದ ಬದ್ದತೆಯನ್ನು ಬೇಡುತ್ತದೆ.

ಇದನ್ನು ಓದಿ: ಮಂಸೋರೆ ನಿರ್ದೇಶನದ ಸತ್ಯ ಘಟನೆ ಆಧಾರಿತ 19.20.21 ಸಿನಿಮಾ ತೆರೆಗೆ

ಪ್ರಸಕ್ತ ಸಿನಿ ಜಗತ್ತಿನ ಯಾವುದೇ ಸ್ಟಾರ್ ನಟ-ನಟಿಯರಿಲ್ಲದೆ ತನ್ನ ಕತೆಯನ್ನೇ ಸ್ಟಾರ್ ಮಾಡುವ ಮತ್ತು ಅದನ್ನ ಅತ್ಯುತ್ತಮವಾಗಿ ನಿರೂಪಿಸಲು ಸಿನಿಮಾದ ಎಲ್ಲಾ ವ್ಯಾಕರಣಗಳನ್ನು ಬಳಸಿ ಯಶಸ್ವಿಯಾದ ಮನ್ಸುರೆಯವರೇ ನಿರ್ದೇಶಕರಾಗಿ ಸ್ಟಾರ್ ಆಗಿದ್ದಾರೆ.

ಅತ್ಯಂತ‌ ದಟ್ಟವಾದ ಅಚ್ಚಹಸಿರಿನ ಕಾಡು ಅದನ್ನೇ ನಂಬಿ ಬದುಕು ರೂಪಿಸಿಕೊಂಡಿರುವ ಜನ, ಅವರಿಗೆ ಯಾವುದೇ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡದ ದುಷ್ಟ ಸರ್ಕಾರ, ಧ್ವನಿ ಎತ್ತಿದವರನ್ನೆಲ್ಲಾ ದೇಶದ್ರೋಹಿ ಪಟ್ಟ ಕಟ್ಟಿ ಅವರುಗಳನ್ನು ಜೈಲುಗಳಲ್ಲಿ ಕೊಳೆಯುವಂತೆ ಮಾಡುವ ಪೊಲೀಸ್ ಮತ್ತು ಅಧಿಕಾರಶಾಹಿ ವರ್ಗದ ಅತ್ಯಂತ ಅಮಾನವೀಯ ನಡವಳಿಕೆ. ಇಂತಹ ಅತ್ಯಂತ ಸೂಕ್ಷ್ಮ ವಿಚಾರಗಳನ್ನು ಅಚ್ಚುಕಟ್ಟಾಗಿ ದೊಡ್ಡ ತೆರೆಯ ಮೇಲೆ ತರಲಾಗಿದೆ.

ಇಲ್ಲಿರುವ ಪ್ರತಿಯೊಬ್ಬರೂ ತಮ್ಮ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುವ ಮೂಲಕ ಆ ಪಾತ್ರಗಳಿಗೆ ಜೀವವಾಗಿದ್ದಾರೆ. ಹಾಗಾಗಿ ಇವರು ನಟನೆ ಮಾಡಿದ್ದಾರೆ ಎಂದು ಎಲ್ಲಿಯೂ ಅನಿಸುವುದಿಲ್ಲ ಇವರು ಪಾತ್ರಗಳನ್ನ ಬದುಕಿದ್ದಾರೆ.

ಈ ಸಿನೆಮಾದಲ್ಲಿ ಮೊದಲ ದಿನ ಮಂಜುವಿನ ಕೈಗಳಿಗೆ ಕೋಳಗಳನ್ನು ಹಾಕಿ ಪರೀಕ್ಷೆಗೆ ಕರೆತಂದಾಗ ಮತ್ತು ಎರಡನೇ ದಿನ ಅವನು ಪರೀಕ್ಷೆ ಬರೆಯಲು ಬಂದಾಗ ಬೇಡಿಗಳಿಂದ ಮುಕ್ತವಾಗಿ ಎರಡೂ ಕೈಗಳನ್ನು ಮೇಲೆತ್ತಿ ಸ್ವಾತಂತ್ರ್ಯದ ಸಂಕೇತವನ್ನು ಬಿಂಬಿಸುವ ದೃಶ್ಯಗಳು ಅತ್ಯಂತ ಭಾವನಾತ್ಮಕವಾಗಿ ಕಣ್ಣಂಚಲ್ಲಿ ನೀರಿಳಿಸಿತು. ಪೊಲೀಸ್ ಠಾಣೆಯಲ್ಲಿ ಆರೋಪಿ ಮಂಜುನನ್ನು ಮಲಗಲು ಬಿಡದೆ ಕೊಟ್ಟ ಕಿರುಕುಳ, “ಬೇಲ್ ಸಿಗದಿದ್ರು ಪರವಾಗಿಲ್ಲ ಸರ್ ಒಂದು ರಾತ್ರಿ‌ ನಿದ್ದೆ ಮಾಡಲು ಅವಕಾಶ ಮಾಡಿಸಿ‌ಕೊಡಿ‌” ಎಂದು ಕೇಳುವುದು ಮತ್ತು ಅಂತಿಮವಾಗಿ ನ್ಯಾಯಾಲಯದಲ್ಲಿ ವಾದ ಮಾಡುವ ವಕೀಲರು ಸಂವಿಧಾನದ ಕಲಂ 19.20.21ರ ಸ್ಪಷ್ಟ ಉಲ್ಲಂಘನೆ ಮತ್ತು ಅದನ್ನು ಎಲ್ಲ ನಾಗರೀಕರಿಗೂ ಖಾತರಿಪಡಿಸುವ ಜವಾಬ್ದಾರಿಯ ಕುರಿತು ನಡೆಸುವ ವಾದ  ನನ್ನನ್ನು ಅತ್ಯಂತ ಭಾವನಾತ್ಮಕವಾಗಿ ಹಿಡಿದಿಟ್ಟವು.. ಮಾತ್ರವಲ್ಲ ನನ್ನನ್ನು ಜಾಗೃತಗೊಳಿಸಿ ಯೋಚಿಸುವಂತೆ ಮಾಡಿದವು.

ಇದನ್ನು ಓದಿ: ‘ಆಕ್ಟ್ 1978’ ಸೇರಿದಂತೆ ಪನೋರಮಾ ವಿಭಾಗಕ್ಕೆ ನಾಲ್ಕು ಕನ್ನಡ ಸಿನಿಮಾಗಳು ಆಯ್ಕೆ

ಮುಖ್ಯವಾಗಿ ಸಮಾಜದ ಇಂದಿನ ಸಮಸ್ಯೆಗಳ ಪರಿಹಾರಕ್ಕೆ ಹಿಂಸಾತ್ಮಕ ದಾರಿ ತುಳಿದ ನಕ್ಸಲರಿಗೂ ಮತ್ತು ಸಮಾಜದಲ್ಲಿ ಜನರ ಕೊತೆ ಬೆರೆತು ಪ್ರಜಾಸತ್ತಾತ್ಮಕವಾಗಿ ಚಳುವಳಿ ನಡೆಸುವವರಿಗೂ ಇರುವ ವ್ಯತ್ಯಾಸವನ್ನ ನಿರ್ದೇಶಕರು ಅತ್ಯಂತ ಸೂಕ್ಷ್ಮವಾಗಿ ಹೆಣೆದಿದ್ದಾರೆ.

ಈ ಸಿನೆಮಾ ನೋಡು ನೋಡುತ್ತಾ… ಈ ಕಥೆಯ ನೈಜ ಘಟನೆಗಳು ಮತ್ತು ನಿಜ ಜೀವನದ ಕಥಾ ನಾಯಕರುಗಳಾದ ವಿಠ್ಠಲ ಮಲೆಕುಡಿಯ, ಮುನೀರ್ ಕಾಟಿಪಳ್ಳ, ನವೀನ್ ಸೂರಂಜೆ, ಬಿ.ಎಂ.ಭಟ್, ಎಂ.ಬಿ.ರಾಜೇಶ್, ಪ್ರಕಾಶ್ ಕಾರಟ್, ಬೃಂದಾ ಕಾರಟ್ ಎಲ್ಲರೂ ಕಣ್ಣಮುಂದೆ ಹಾದು ಹೋದರು…

ಕಥೆಗೆ ಪೂರಕವಾದ ನಿಸರ್ಗದತ್ತವಾದ ಲೊಕೇಶನ್, ಅತ್ಯುತ್ತಮ ಫಿಲ್ಮಾಟೋಗ್ರಫಿ, ಕಥೆಯ ಜೊತೆ ನಮಗೇ ಗೊತ್ತಿಲ್ಲದೆ ನಮ್ಮನ್ನು ಕೈಹಿಡಿದು ನಡೆಸುವ ಹಿನ್ನೆಲೆ ಸಂಗೀತ ಮತ್ತು ಸಂಭಾಷಣ ಎಲ್ಲವೂ ಸೂಪರ್…

ಕನ್ನಡದ ಮನಸ್ಸುಗಳು ಇಂತಹ ಸಿನೆಮಾಗಳನ್ನು ಥಿಯೇಟರ್ ಗಳಲ್ಲಿ ಬಂದು ನೋಡುವ ಮೂಲಕ ಜನಪರ ಸಿನೆಮಾಗಳನ್ನು ಗೆಲ್ಲಿಸಲು ತಮ್ಮ ಕೈಲಾದ ಸಿನೆಮಾಗಳನ್ನು ಕೊಡುಗೆಯನ್ನು ನೀಡುವ ಮೂಲಕ ಕನ್ನಡ ಸಿನೆಮಾದಲ್ಲಿ ಇಂತಹ ಮಾದರಿಗಳಿಗೆ ಅದು ಸ್ಪೂರ್ತಿಯಾಗಲಿ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *