ಅತ್ಯಾಚಾರಿ ಮತ್ತು ಕೊಲೆಪಾತಕಿಗಳ ಸನ್ನಡತೆಯ ಅಟ್ಟಹಾಸ

ಮಲ್ಲಿಕಾರ್ಜುನ ಕಡಕೋಳ

ಇದು ಬರೋಬ್ಬರಿ ಇಪ್ಪತ್ತು ವರ್ಷಗಳ ಹಿಂದೆ ಗುಜರಾತಿನಲ್ಲಿ ಜರುಗಿದ ಅಮಾನವೀಯ ಪ್ರಕರಣ. ಬಿಲ್ಕಿಸ್ ಬಾನೊ ಪ್ರಕರಣವೆಂದೇ ಜಗತ್ತಿನಾದ್ಯಂತ ಹೆಸರು ಪಡೆಯಿತು. ಈ ಪ್ರಕರಣ ಇದೀಗ ಜಗತ್ತಿನಾದ್ಯಂತ ಮತ್ತೆ ಸುದ್ದಿ ಮಾಡುತ್ತಲಿದೆ. ಅಮೆರಿಕದ ಸಂಘ ಸಂಸ್ಥೆಗಳು ಸಹಿತ ಗುಜರಾತ್ ಸರಕಾರದ ಸನ್ನಡತೆ ಕೈದಿಗಳ ಬಿಡುಗಡೆಯ ನಿರ್ಧಾರ ಖಂಡಿಸಿವೆ. ರಾಷ್ಟ್ರದ ಹೆಸರಾಂತ ಪತ್ರಿಕೆಗಳು ಗುಜರಾತ್ ಸರಕಾರದ ಈ ಕ್ರಮವನ್ನು ವಿರೋಧಿಸಿ ಸಂಪಾದಕೀಯಗಳನ್ನು ಪ್ರಕಟಿಸಿವೆ.

ಅಂತೆಯೇ ಈ ಘಟನೆ ಪುನಃ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಗಮನ ಸೆಳೆದಿದೆ. ಹನ್ನೊಂದು ಮಂದಿ ಅತ್ಯಾಚಾರಿ ಕೊಲೆಗಡುಕರ ಬಿಡುಗಡೆಯ ಈ ನಿರ್ಧಾರ ರದ್ದಾಗಬೇಕೆಂದು ಅನೇಕ ಸಂಘಸಂಸ್ಥೆಗಳ ಒಕ್ಕೊರಲ ಒತ್ತಾಯ. ಕಾರಗೃಹ ಕೈದಿಗಳ ಸನ್ನಡತೆಯ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಗುಜರಾತ್ ಸರಕಾರ ಗಾಳಿಗೆ ತೂರಿದೆ. ಆ ಮೂಲಕ ಗುಜರಾತ್ ಸರಕಾರ ಮುಸ್ಲಿಂ ಮಹಿಳಾ ಸಂತ್ರಸ್ಥೆಯ ವಿರುದ್ಧವಾಗಿದ್ದು‌, ಹಿಂದೂ ಅಪರಾಧಿಗಳ ಪರವಾಗಿದೆ ಎಂಬುದನ್ನು ತೋರಿಸಿ ಕೊಟ್ಟಿದೆ. ಅಂತೆಯೇ ಅನೇಕ ಕಡೆ ಪ್ರತಿಭಟನೆಯ ಗಟ್ಟಿಧ್ವನಿಗಳು ಕೇಳಿ ಬರುತ್ತಲಿವೆ.

ಎಪ್ಪತ್ತೈದನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿನದಂದು ದಿಲ್ಲಿಯ ಕೆಂಪುಕೋಟೆಯ ಮೇಲೆ ನಿಂತು ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರ ರಕ್ಷಣೆ ಕುರಿತು ಭಾಷಣ ಮಾಡುತ್ತಿದ್ದರು. ನಾರಿಶಕ್ತಿಯ ಸಶಕ್ತೀಕರಣ ಮತ್ತು ಮಹಿಳಾ ಅಭಿವೃದ್ಧಿಯ ಭಾಷಣ ಅದಾಗಿತ್ತು. ಅದೇ ಕ್ಷಣಗಳಲ್ಲಿ ಅವರದೇ ಗುಜರಾತ್ ರಾಜ್ಯದಲ್ಲಿ ಅವರದೇ ಸರಕಾರದ ನಿರ್ಧಾರದ ಮೇರೆಗೆ ಹನ್ನೊಂದು ಮಂದಿ ಅತ್ಯಾಚಾರಿ ಕೊಲೆಗಡುಕ ಕೈದಿಗಳನ್ನು ಸನ್ನಡತೆಯ ಹೆಸರಲ್ಲಿ ಅಲ್ಲಿನ ಸರಕಾರ ಸೆರೆಮನೆಯಿಂದ ಅವರನ್ನು ಬಿಡುಗಡೆ ಮಾಡಿತು. ಹಾಗೆ ಬಿಡುಗಡೆಯಾದ ಅತ್ಯಾಚಾರಿ ಕೊಲೆಗಡುಕರು ದೇಶರಕ್ಷಣೆ ಮಾಡಿಬಂದ ಮಹಾನ್ ಯೋಧರು ಎಂಬಂತೆ ಅವರನ್ನು ಸಂಬ್ರಾ ಪರಿವಾರಿಗಳು ಅವರ ಹಣೆಗೆ ತಿಲಕವಿಟ್ಟು ಹಾರಹಾಕಿ, ಸಿಹಿ ತಿನ್ನಿಸಿ ಗೌರವಿಸಿವೆ. ಅಷ್ಟು ಸಾಲದ್ದೆಂದು ವಿಶ್ವ ಹಿಂದು ಪರಿಷತ್ ತನ್ನ ಕಚೇರಿಯಲ್ಲಿ ಇವರನ್ನು ಸನ್ಮಾನಿಸಿದೆ.

ಜೀವಾವಧಿ ಶಿಕ್ಷೆಗೀಡಾದ ಅತ್ಯಾಚಾರಿ ಕೊಲೆಗಡುಕರನ್ನು ಬಿಡುಗಡೆ ಮಾಡಲು ನೇಮಕಗೊಂಡಿದ್ದ ಸರಕಾರದ ಸಮಿತಿಯ ಸದಸ್ಯ ಮತ್ತು ಬಿಜೆಪಿಯ ಗೋದ್ರಾ ಶಾಸಕ ಮಹಾನುಭಾವ ಬಿಡುಗಡೆಗೆ ನೀಡಿದ ಸಬೂಬು ಹೀಗಿದೆ; ಘೋರ ಅತ್ಯಾಚಾರ ಮತ್ತು ಕೊಲೆಗಡುಕ ಕೃತ್ಯದ ಈ ಹನ್ನೊಂದು ಮಂದಿ ಜೀವಾವಧಿ ಶಿಕ್ಷೆಗೊಳಗಾದವರನ್ನು ಸನ್ನಡತೆಯ ಆಧಾರದ ಮೇಲೆ ಯಾಕೆ ಬಿಡುಗಡೆ ಮಾಡಲಾಗುತ್ತಿದೆಯೆಂದರೆ “ಅವರೆಲ್ಲರೂ ಹುಟ್ಟಿನಿಂದ ಸಂಸ್ಕಾರಿ ಬ್ರಾಹ್ಮಣರು ಮತ್ತು ಅವರು ಸನ್ನಡತೆ ಉಳ್ಳವರು.” ಶಾಸಕ ಮಹೋದಯನ ಈ ಹೇಳಿಕೆ ಜಗತ್ತಿನಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಲೇ ಇದೆ. ಸಂಸ್ಕಾರ ಮತ್ತು ಸನ್ನಡತೆಯುಳ್ಳ ಇವರು ಕೊಲೆ ಮತ್ತು ಸಾಮೂಹಿಕ ಅತ್ಯಾಚಾರದಂತಹ ಹೀನಕೃತ್ಯ ಮಾಡುವಾಗ ಬ್ರಾಹ್ಮಣರಾಗಿರಲಿಲ್ಲವೇ?

ಗುಜರಾತ್ ಸರಕಾರದ ‘ಸನ್ನಡತೆ ಬಿಡುಗಡೆ’ ಕ್ರಮದ ವಿರುದ್ಧ ಜಗತ್ತಿನಾದ್ಯಂತ ಖಂಡತುಂಡ ಪ್ರತಿಭಟನೆಗಳು ವ್ಯಕ್ತವಾಗಿವೆ. ನೂತನ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ಗುಜರಾತ್ ಸರ್ಕಾರದ ಈ ಕ್ರಮ ವಿರೋಧಿಸಿ ನೂರಾರು ಮನವಿಗಳು ಸಲ್ಲಿಕೆ ಆಗುತ್ತಲೇ ಇವೆ. ಮರೆತುಹೋದ ಈ ಕ್ರೂರ ಘಟನೆ ಮತ್ತೆ ಮರುಕಳಿಕೆಯಂತೆ ಸುದ್ಧಿಯಾಗುತ್ತಲಿದೆ.

ಇಪ್ಪತ್ತು ವರ್ಷಗಳ ಹಿಂದೆ ಗುಜರಾತಿನಲ್ಲಿ ಜರುಗಿದ ನರಮೇಧದ ಸುತ್ತಲ ಕತೆಯಿದು. ತ್ರಿಶೂಲಗಳಿಗೆ ಹಸಿನೆತ್ತರು ಮತ್ತು ಭ್ರೂಣದ ಅಲಂಕಾರ. ಗುಜರಾತಿನ ಗೋದ್ರಾ ಮತ್ತು ಗೋದ್ರೋತ್ತರ ಅತ್ಯಾಚಾರ ಮತ್ತು ಹತ್ಯಾಕಾಂಡಗಳ ಅಮಾನುಷ ನೆನಪುಗಳ ಕ್ರೂರ ಕಥನ. ಅದು ಸಾವಿರಾರು ಮನುಷ್ಯ ಜೀವಗಳ ಸಂಕಟದ ಕಥನ. ಕೋಮು ದಳ್ಳುರಿಗೆ ಮನುಷ್ಯರ ಬದುಕು ದಹಿಸಿ ಹೋಯಿತು. ಹಾಗೆ ದಹಿಸಿಹೋದ ರಾಧಿಕಪುರ ಎಂಬ ಹಳ್ಳಿಯ ಬಿಲ್ಕಿಸ್ ಬಾನೊ ಎಂಬ ಅಮಾಯಕ ಮುಸ್ಲಿಂ ಕುಟುಂಬದ ದಾರುಣ ಕತೆ ಅದಾಗಿದೆ.

೨೦೦೨ರ ಮಾರ್ಚ್ ಮೂರರಂದು ಗುಜರಾತಿನ ಬಿಲ್ಕಿಸ್‌ ಬಾನೊ, ಅ‌ವಳ ತಾಯಿ, ತಂಗಿ ಮತ್ತು ಕುಟುಂಬದ ಏಳು ಜನರ ಮೇಲೆ ಜರುಗಿದ ಬರ್ಬರ ಕ್ರೌರ್ಯವಿದು. ಹಾಗೆ ನೋಡಿದರೆ ಇದನ್ನು ಕೆಲವರು ಸರ್ಕಾರಿ ಪ್ರಾಯೋಜಿತ ಪ್ರಕರಣವೆಂದೇ ಕರೆದಿದ್ದಾರೆ. ಅದರ ಸಂಕ್ಷೇಪ ವಿವರಗಳನ್ನು ಹೇಳದೇ ಹೋದರೆ ಬಿಲ್ಕಿಸ್ ಬಾನೊ ಪ್ರಕರಣ ಏನೆಂಬುದು ಓದುಗರಿಗೆ ತಿಳಿಯದೇ ಹೋದೀತು.

ಇಪ್ಪತ್ತು ವರ್ಷಗಳ ಹಿಂದೆ ಇಪ್ಪತ್ತೊಂದು ಪ್ರಾಯದ ಬಿಲ್ಕಿಸ್ ಬಾನೊ ಐದು ತಿಂಗಳ ಬಸುರಿ. ಅವಳ ಹೊಟ್ಟೆಯಲ್ಲಿ ಐದು ತಿಂಗಳ ಭ್ರೂಣ. ರಟ್ಟೆಯಲ್ಲಿ ಮೂರು ವರ್ಷದ ಮಗು. ಜತೆಯಲ್ಲಿ ಅವಳ ಕುಟುಂಬದ ಏಳು ಮಂದಿ ಸಂಬಂಧಿಗಳು. ಪ್ರಾಯಶಃ ಅವರೆಲ್ಲರೂ ಮಾಡಿದ ಘೋರ ಅಪರಾಧವೆಂದರೆ ಅವರು ಮುಸ್ಲಿಮರಾಗಿ ಹುಟ್ಟಿದ್ದು. ಅಂತೆಯೇ ಅವರೆಲ್ಲರನ್ನು ಕೊಚ್ಚಿ ಕೊಚ್ಚಿ ಕಗ್ಗೊಲೆ ಮಾಡಲಾಯಿತು. ಅಷ್ಟೇ ಅಲ್ಲದೇ ಅವಳ ಕೈಯಲ್ಲಿದ್ದ ಮೂರು ವರ್ಷದ ಅವಳ ಹಸುಳೆಯನ್ನು ಅವಳ ಕಣ್ಣೆದುರೇ ಅಮಾನುಷ ರೀತಿಯಲ್ಲಿ ಕೊಲೆ ಮಾಡಲಾಯಿತು. ಮುಸ್ಲಿಂ ವಿರುದ್ಧದ ಈ ದಂಗೆ ಇಷ್ಟಕ್ಕೆ ಮುಗಿಯಲಿಲ್ಲ. ಗರ್ಭಿಣಿ ಬಿಲ್ಕಿಸ್ ಬಾನೊ ಮೇಲೆ ಮೃಗೀಯ ರೀತಿಯ ಸರಣಿ ಅತ್ಯಾಚಾರ. ಇಂತಹ ಹೇಯ ಕೃತ್ಯದಲ್ಲಿ ಬಿಲ್ಕಿ‌ಸ್‌ ಬಾನೊ ಬದುಕಿ ಉಳಿದದ್ದೇ ಪವಾಡ ಸದೃಶ ಸಂಗತಿ.

ಪ್ರಕರಣ ಗುಜರಾತಿನ ಪೊಲೀಸ್ ಮತ್ತು ನ್ಯಾಯಾಲಯದ ಕಕ್ಷೆಗಳನ್ನು ದಾಟಿ ಬರಬೇಕಾಯಿತು. ಮುಂಬಯಿ ಸಿ.ಬಿ.ಐ. ನ್ಯಾಯಾಲಯದ ತನಿಖೆಯ ಸುಪರ್ದಿಗೆ ಬಂತು. ಮುಂಬಯಿ ಹೈಕೋರ್ಟ್ ತೀರ್ಪು ನೀಡಿ ಆ ಎಲ್ಲ ಹನ್ನೊಂದು ಮಂದಿ ಅಪರಾಧಿಗಳಿಗೆ ೨೦೦೮ರ ಜನವರಿಯಲ್ಲಿ ಜೀವಾವಧಿಯ ಶಿಕ್ಷೆ ವಿಧಿಸಿತು. ಮುಂಬಯಿ ನ್ಯಾಯಾಲಯದ ಈ ತೀರ್ಪನ್ನು ದಿಲ್ಲಿಯ ಸುಪ್ರೀಂ ಕೋರ್ಟ್ ಕೂಡಾ ಎತ್ತಿ ಹಿಡಿಯಿತು. ಅದೇ ಗಂಭೀರವಾದ ಅಪರಾಧಿಗಳನ್ನು ಸನ್ನಡತೆ ಹೆಸರಲ್ಲಿ ಮೊನ್ನೆ ಗುಜರಾತ್ ಸರ್ಕಾರ ಬಿಡುಗಡೆ ಮಾಡಿದೆ.

ಬಿಲ್ಕಿಸ್ ಬಾನೊಗೆ ರೂಪಾಯಿ ಐವತ್ತು ಲಕ್ಷ ಪರಿಹಾರ ನೀಡಬೇಕೆಂದು ನ್ಯಾಯಾಲಯ ಗುಜರಾತ್ ಸರಕಾರಕ್ಕೆ ಆದೇಶ ನೀಡಿದೆ. ಆದರೆ ಅದನ್ನು ಗುಜರಾತ್ ಸರಕಾರ ಜಾರಿಗೊಳಿಸಿಲ್ಲ. ಬಿಲ್ಕಿಸ್ ಬಾನೊ ಪರವಾಗಿ ನ್ಯಾಯಾಲಯ ಸೇರಿದಂತೆ ಅನೇಕ ರೀತಿಯಲ್ಲಿ ಕೆಲವು ಪ್ರಗತಿಪರ ಸಂಘ ಸಂಸ್ಥೆಗಳು ಜೀವದ ಹಂಗು ತೊರೆದು ಹೋರಾಟ ಮಾಡಿದವು. ಅದಕ್ಕಾಗಿ ಕೆಲವರು ಅನೇಕ ಸಂಕಟಗಳನ್ನು ಎದುರಿಸಬೇಕಾಯಿತು. ಈಗಲೂ ಎದುರಿಸುತ್ತಿದ್ದಾರೆ. ಇಂತಹ ಅಮಾನುಷ ಘಟನೆಗಳು ವರ್ತಮಾನದ ನಾಗರಿಕ ಸಮಾಜದಲ್ಲಿ ಜರುಗುತ್ತಿರುವುದು ಅಕ್ಷಮ್ಯ.

*   *   *   *   *   *   *

ಇದೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆ ಸಂದರ್ಭದ ಆಸುಪಾಸಿನಲ್ಲಿ ದಲಿತ ಬಾಲಕನೊಬ್ಬ ಜಾತೀಯತೆ ಆಚರಣೆಗೆ ಬಲಿಯಾದ ಸುದ್ದಿಯೊಂದು ರಾಜಸ್ಥಾನದಿಂದ ವರದಿಯಾಗಿದೆ. ಕುಡಿಯುವ ನೀರಿನ ಮಣ್ಣಿನ ಮಡಿಕೆ ಮುಟ್ಟಿ ನೀರು ಕುಡಿದನೆಂದು ಮೂರನೇ ಈಯತ್ತೆಯ ಒಂಬತ್ತು ವರ್ಷದ ಪರಿಶಿಷ್ಟ ಜಾತಿಯ ಶಾಲಾ ಬಾಲಕನನ್ನು ಮೇಲ್ಜಾತಿಯ ಶಿಕ್ಷಕನೊಬ್ಬ ಮಾರಣಾಂತಿಕವಾಗಿ ಥಳಿಸಿದ್ದಾನೆ. ಪರಿಣಾಮ ಒಂದೆರಡು ದಿನಗಳ ದವಾಖಾನೆಯ ಚಿಕಿತ್ಸೆ ಫಲಕಾರಿಯಾಗದೇ ದಲಿತ ಬಾಲಕ ಸತ್ತು ಹೋಗಿದ್ದಾನೆ.

ಮಕ್ಕಳಿಗೆ ಜಾತ್ಯತೀತ ನೀತಿಯನ್ನು ಬೋಧಿಸಬೇಕಿದ್ದ ಈ ಶಿಕ್ಷಕನೇ ಜಾತೀಯತೆಯಿಂದ ಮುಕ್ತನಾಗಿಲ್ಲ. ಸಂವಿಧಾನದ ಜಾತ್ಯತೀತ ಮೌಲ್ಯಗಳನ್ನು ತಿಳಿಸಬೇಕಾದ ನಮ್ಮ ಶೈಕ್ಷಣಿಕ ವ್ಯವಸ್ಥೆಗೆ ಹಿಡಿದ ಕನ್ನಡಿ ಇದಾಗಿದೆ. ಮಡುಗಟ್ಟಿದ ಮನುವಾದಿ ಮನಸುಗಳಿಗೆ ದಲಿತ ಬಾಲಕ ಬಲಿಯಾಗಿದ್ದಾನೆ. ಸಣ್ಣದೊಂದು ಸಮಾಧಾನದ ಬೆಳವಣಿಗೆಯೆಂದರೆ ರಾಜಸ್ಥಾನದ ಸ್ಥಳೀಯ ಶಾಸಕ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿ ಮಾನವೀಯತೆ ಮೆರೆದಿದ್ದಾನೆ. ಬಾಲಕನಿಗೆ ಐವತ್ತು ಲಕ್ಷ ಹಣ ಪರಿಹಾರ ನೀಡಲು ರಾಜಸ್ಥಾನ ಸರಕಾರಕ್ಕೆ ಶಾಸಕ ಆಗ್ರಹಿಸಿದ್ದಾನೆ.

ಎರಡು ಬೇರೆ ಬೇರೆ ಪಕ್ಷಗಳ, ಬೇರೆ ಬೇರೆ ರಾಜ್ಯ ಸರಕಾರಗಳ ಈ ಎರಡೂ ಘಟನೆಗಳು ಎಪ್ಪತ್ತೈದನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಜರುಗಿರುವುದು ತಲೆ ತಗ್ಗಿಸುವ ಸಂಗತಿ. ಒಟ್ಟಿನಲ್ಲಿ ಈ ದೇಶದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಬದುಕುವ ಹಕ್ಕಿಲ್ಲ ಎಂಬುದನ್ನು ಈ ಘಟನೆಗಳು ಮೇಲಿಂದ ಮೇಲೆ ಸಾಬೀತು ಮಾಡುತ್ತಲಿವೆ. ದಲಿತರೆಂಬ ಕಾರಣಕ್ಕಾಗಿ ಶಾಲಾ ಬಾಲಕಿಯರ ಸಮವಸ್ತ್ರಗಳನ್ನು ಬಿಚ್ಚಿಟ್ಟು ಫೋಟೋ ತೆಗೆಸಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ಜರುಗಿದೆ.

ಕೆಲವು ಗ್ರಾಮ ಪಂಚಾಯತಿಗಳ ಅಧ್ಯಕ್ಷರು ದಲಿತರೆಂಬ ಕಾರಣಕ್ಕೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಧ್ವಜಾರೋಹಣಕ್ಕೆ ಅವಕಾಶ ನಿರಾಕರಿಸಿದ ಘಟನೆ ಪಕ್ಕದ ತಮಿಳುನಾಡಿನಲ್ಲೇ ವರದಿಯಾಗಿದೆ. ಅಷ್ಟೇ ಅಲ್ಲದೇ ಅವರಿಗೆ ಕುರ್ಚಿಮೇಲೆ ಕೂರುವ ಅವಕಾಶಗಳನ್ನು ನಿರಾಕರಿಸಲಾಗಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯ ಚುನಾಯಿತ ದಲಿತ ಜನಪ್ರತಿನಿಧಿಗಳಿಗೆ ಈ ಗತಿಯಾದರೆ ಸಾಮಾನ್ಯ ದಲಿತರ ಮತ್ತು ಅಲ್ಪಸಂಖ್ಯಾತರ ಸ್ಥಿತಿಗತಿಗಳು ಊಹೆಗೂ ನಿಲುಕಲಾರವು.

ಪುನರ್ಜನ್ಮ ಎಂಬುದೇನಾದರೂ ಇದ್ದರೇ ಖಂಡಿತವಾಗಿ ದಲಿತರಾಗಿ ಮತ್ತು ಹೆಣ್ಣಾಗಿ ಈ ನೆಲದಲ್ಲಿ ಹುಟ್ಟುವುದು ಬೇಡ. ಅಕಸ್ಮಾತ್ ಹೆಣ್ಣಾಗಿ ಹುಟ್ಟಿದರೂ ಮುಸ್ಲಿಂ ಹೆಣ್ಣಾಗಿಯಂತೂ ಖಂಡಿತಾ ಹುಟ್ಟುವುದೇ ಬೇಡ ಅಲ್ಲವೇ?

Donate Janashakthi Media

One thought on “ಅತ್ಯಾಚಾರಿ ಮತ್ತು ಕೊಲೆಪಾತಕಿಗಳ ಸನ್ನಡತೆಯ ಅಟ್ಟಹಾಸ

Leave a Reply

Your email address will not be published. Required fields are marked *