ಅತ್ಯಾಚಾರವೆಂಬ ಘೋರಕೃತ್ಯವೂ, ಕ್ಷೀಣಿಸುತ್ತಿರುವ ಪ್ರತಿರೋಧವೂ

ವಿಮಲಾ ಕೆ.ಎಸ್.

ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿರ್ಭಯಾ ಪ್ರಕರಣವನ್ನೇ ಹೋಲುವ ಅತ್ಯಾಚಾರದ ಘಟನೆಯೊಂದು ನಡೆದಿದೆ. ಘಟನೆ ನಡೆದು ಯಾರೋ ಸ್ನೇಹಿತರಿಗೆ ಕರೆ ಮಾಡಿ ಯುವಕ ಸಹಾಯಕ್ಕಾಗಿ ಯಾಚಿಸಿ ನಂತರ ಯುವತಿ ದೂರು ದಾಖಲಿಸಲು ಹೋದಾಗ ಸ್ಥಳೀಯ ಪೋಲಿಸರು ಆಕೆ ಪರಸ್ಥಳದವಳೆಂಬ ಕಾರಣಕ್ಕೆ ದೂರು ದಾಖಲಿಸಿಕೊಳ್ಳಲು ವಿಳಂಬ ಮಾಡಿದರು ಎನ್ನುತ್ತದೆ ವರದಿಯೊಂದು. ಘಟನೆ ನಡೆದಿರುವುದು ಮೈಸೂರು ನಗರದ ಪೋಲೀಸ್ ವ್ಯಾಪ್ತಿಯಲ್ಲಿಯೇ, ಎಂದ ಮೇಲೆ ದೂರು ದಾಖಲಿಸಿಕೊಳ್ಳದಿರುವುದು ಕರ್ತವ್ಯ ಲೋಪವಾಗುವುದಿಲ್ಲವೇ? ಜಸ್ಟೀಸ್ ವರ್ಮಾ ಸಮಿತಿಯ ಶಿಫಾರಸ್ಸುಗಳ ಪ್ರಕಾರ ಅತ್ಯಾಚಾರದಂಥಹ ಹೀನ ಕೃತ್ಯದ ದೂರು ದಾಖಲಿಸಿಕೊಳ್ಳಲು ವಿಫಲರಾದರೆ ಅಥವಾ ತನಿಖೆಗೆ ತೊಂದರೆಯುಂಟು ಮಾಡಿದರೆ ಆ ಅಧಿಕಾರಿ ಶಿಕ್ಷೆಗೆ ಅರ್ಹರು. ಸಾಂದರ್ಭಿಕ ಸಾಕ್ಷಗಳೇ ಆಧಾರವಾಗಬೇಕಾದ್ದರಿಂದ ಮತ್ತು ಸಿಗಬಹುದಾದ ಪ್ರಮುಖ ಸಾಕ್ಷಿಗಳನ್ನು ಘಟನೆ ನಡೆದ ಸ್ಥಳದಲ್ಲಿ ಪಡೆಯಬೇಕಾದ ಪೋಲೀಸರು ಘಟನೆ ನಡೆದ 24 ಘಂಟೆಗಳ ತರುವಾಯ ಸ್ಥಳಕ್ಕೆ ಭೇಟಿಕೊಟ್ಟರೆಂಬ ದೂರುಗಳೂ ಕೇಳಿಬರುತ್ತಿವೆ.

ಅತ್ಯಾಚಾರವೆಂಬ ಘನಘೋರ ಕೃತ್ಯ ನಡೆಯುತ್ತದೆ. ಸಮಾಜ ಬಹಳ ವಿಚಲಿತಗೊಂಡಂತೆ ಕಾಣುವುದಿಲ್ಲ. ಯಾಕೆಂದರೆ ಅದೀಗ ಸಾಮಾನ್ಯ ಸಂಗತಿಯಾಗಿದೆ. ಪ್ರತಿಕ್ರಿಯೆ, ಪ್ರತಿರೋಧ ಮಾಡಿದರೂ ಮಾಡದಿದ್ದರೂ ನಡೆಯುತ್ತದೆ ಎಂಬ ತಣ್ಣಗಿನ ಭಾವಕ್ಕೆ ಬಿದ್ದಂತೆ ಭಾಸವಾಗುತ್ತಿದೆ.

ಅಂದು 2012ರಲ್ಲಿ ನಿರ್ಭಯಾ ಪ್ರಕರಣ ನಡೆದಾಗ ದೇಶದಾದ್ಯಂತ ಆಕ್ರೋಶ ಭುಗಿಲೆದ್ದಿತ್ತು. ಕೇಂದ್ರ ಸರಕಾರ ಸಮರೋಪಾದಿಯಲ್ಲಿ ಕ್ರಮಕ್ಕೆ ಇಳಿಯುವಂತೆ ಮಾಡುವಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳ ಹೋರಾಟ ಯಶಸ್ವಿಯಾಗಿತ್ತು. ಯಾಕೆಂದರೆ ಆಕೆಯೊಬ್ಬ ಪ್ಯಾರಾಮೆಡಿಕಲ್ ಓದುತ್ತಿದ್ದ ವಿದ್ಯಾರ್ಥಿನಿಯಾಗಿದ್ದಳು. ರೋಷಾವೇಶದ ಮಾತುಗಳು, ಅತ್ಯಾಚಾರಿಗಳಿಗೆ ರಾಸಾಯನಿಕ ಬಳಸಿ ಷಂಡರನ್ನಾಗಿ ಮಾಡಬೇಕು, ಗಲ್ಲು ಶಿಕ್ಷೆ ವಿಧಿಸಬೇಕು ಎಂಬ ಇತ್ಯಾದಿ ಮಾತುಗಳೂ ಕೇಳಿ ಬಂದವು. ಜನರ ಒತ್ತಡ ಸರಕಾರವನ್ನು ತುರ್ತಾಗಿ ಕೆಲಸಕ್ಕೆ ಇಳಿಸಲು ನೆರವಾಯಿತು. ಸಂತ್ರಸ್ತೆಯನ್ನು ಸರಕಾರದ ಖರ್ಚಿನಲ್ಲಿ ವಿಶೇಷ ವಿಮಾನದ ಮೂಲಕ ಸಿಂಗಪೂರ್‌ಗೆ ಚಿಕಿತ್ಸೆಗೆ ಕೂಡ ಕಳಿಸಿಕೊಡುವಂತಾಯಿತು. ಸುಮ್ಮನೆ ನೆನಪಿಸಿಕೊಳ್ಳಲು… ಆಗ ಕೇಂದ್ರದಲ್ಲಿ ಯು.ಪಿ.ಎ ಸರಕಾರವಿತ್ತು. ಮತ್ತು ಬಿ.ಜೆ.ಪಿ. ವಿರೋಧ ಪಕ್ಷವಾಗಿತ್ತು.

ಇಂತಹ ದೌರ್ಜನ್ಯಗಳನ್ನು ನಿವಾರಿಸಲು ಮಾರ್ಗೋಪಾಯ ಕಂಡುಹಿಡಿಯಲು ಜಸ್ಟೀಸ್ ವರ್ಮಾ ರವರ ನೇತೃತ್ವದಲ್ಲಿ ಒಂದು ಆಯೋಗದ ರಚನೆಯೂ ಆಯಿತು. ಅದು ತನಗಿದ್ದ ಸೀಮಿತ ಅವಧಿಯೊಳಗೆ ‘ಜಗ ಮೆಚ್ಚಿ ಅಹುದಹುದೆನ್ನುವಂತೆ ವರದಿಯನ್ನೂ ನೀಡಿತು. ವರದಿಯ ಅನುಷ್ಠಾನದ ಕುರಿತು ಎಷ್ಟು ಬೇಕೋ ಅಷ್ಟು ಪ್ರತಿಕ್ರಿಯೆಗಳು ಬಂದಿದ್ದು ಕೂಡಾ ಅಚ್ಚರಿಯ ಸಂಗತಿಯೇನಲ್ಲ. ಆದರೆ ಅತ್ಯಾಚಾರವನ್ನು ಬಹಳ ಮನಸ್ಸಿಗೆ ಹಚ್ಚಿಕೊಂಡಂತೆ, ಮತ್ತು ಕಾನೂನಿನ ಕುಣಿಕೆ ಬಿಗಿಯಾದರೆ ಅಪರಾಧ ನಿಂತು ಹೋಗುತ್ತದೆಂಬ ಹುಂಬತನದ ವಾದವನ್ನು ಹರಿಬಿಟ್ಟು, ಮಂಕ ಮಡೆಯ ಮುಠ್ಠಾಳರಿಂದ ಹೌದ್ಹೌದೆನಿಸಿಕೊಂಡು ಕೆಲವು ರಾಜ್ಯಗಳಲ್ಲಿ ಅತ್ಯಾಚಾರಕ್ಕೆ ಗಲ್ಲು ಶಿಕ್ಷೆಯನ್ನು ಕೂಡಾ ತಂದಾಗಿದೆ. ಆದರೆ… ಅತ್ಯಾಚಾರ ನಿಂತಿತೇ… ಇಲ್ಲ. ಗಲ್ಲು ಶಿಕ್ಷೆಯವರೆಗೆ ಇರಲಿ ಬಹುತೇಕ ಆರೋಪಿಗಳು ಅಪರಾಧಿಗಳಾಗುವುದೇ ಇಲ್ಲ ಎನಿಸುವಷ್ಟು ಆಮೆಗತಿಯಲ್ಲಿ ವಿಚಾರಣೆ ನಡೆಯುತ್ತದೆ ಮತ್ತು ಕಾಲಗರ್ಭದಲ್ಲಿ ಹೂತು ಹೋಗುತ್ತದೆ. ಜನರ ಮರೆವಿಗೆ ಔಷಧಿ ಇಲ್ಲ, ಮರೆತಿದ್ದು ನೆನಪಿಸುವವರೂ ಇಲ್ಲ.

ಈಗ ಅಗಸ್ಟ್ 25, 2021ರಂದು ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿರ್ಭಯಾ ಪ್ರಕರಣವನ್ನೇ ಹೋಲುವ ಅತ್ಯಾಚಾರದ ಘಟನೆಯೊಂದು ನಡೆದಿದೆ. ಎಂ.ಬಿ.ಎ. ವಿದ್ಯಾರ್ಥಿನಿ, ಸ್ನೇಹಿತನೊಂದಿಗೆ ಚಾಮುಂಡಿ ತಪ್ಪಲಿನಲ್ಲಿ ಸಂಜೆ ಏಳು ಘಂಟೆಯ ಹೊತ್ತಿನಲ್ಲಿ ಇದ್ದಾಗ ಪಾನಮತ್ತರ ಗುಂಪೊಂದು ಬಂದು ಹಣಕ್ಕಾಗಿ ಪೀಡಿಸಿದೆ. ಹಣವಿಲ್ಲವೆಂದಾಗ ಯುವಕನನ್ನು ಕಟ್ಟಿಹಾಕಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದೆ ಎಂಬುದು ಒಂದು ಮಾಹಿತಿ ಇದರ ಜೊತೆಗೇ ಅದೂ ಇದೂ ಕಾಗಕ್ಕ ಗುಬ್ಬಕ್ಕರ ರೆಕ್ಕೆ ಪುಕ್ಕ ಕಟ್ಟಿಕೊಂಡ ಹಲವು ಉಪಕಥೆಗಳೂ ಹರಿದಾಡುತ್ತಿವೆ.

ನಿರ್ಭಯಾ ಪ್ರಕರಣದಲ್ಲಿ ಜನ ಹುಚ್ಚೆದ್ದು ಪ್ರತಿಭಟಿಸುವಾಗ ಇಂದಿನ ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ನಡೆಸುತ್ತಿರುವ ಬಿ.ಜೆ.ಪಿ. ವಿರೋಧ ಪಕ್ಷವಾಗಿತ್ತು. ಅದರ ಧ್ವನಿಯೂ ಪ್ರತಿಭಟನೆಯ ಧ್ವನಿಯೊಳಗೆ ಸಶಕ್ತವಾಗಿಯೇ ಸೇರಿಕೊಂಡಿತ್ತೆಂಬುದರಲ್ಲಿ ಯಾವ ಅನುಮಾನಗಳೂ ಇಲ್ಲ.

ಘಟನೆ ನಡೆದು ಯಾರೋ ಸ್ನೇಹಿತರಿಗೆ ಕರೆ ಮಾಡಿ ಯುವಕ ಸಹಾಯಕ್ಕಾಗಿ ಯಾಚಿಸಿ ನಂತರ ಯುವತಿ ದೂರು ದಾಖಲಿಸಲು ಹೋದಾಗ ಸ್ಥಳೀಯ ಪೋಲಿಸರು ಆಕೆ ಪರಸ್ಥಳದವಳೆಂಬ ಕಾರಣಕ್ಕೆ ದೂರು ದಾಖಲಿಸಿಕೊಳ್ಳಲು ವಿಳಂಬ ಮಾಡಿದರು ಎನ್ನುತ್ತದೆ ವರದಿಯೊಂದು. ಜಸ್ಟೀಸ್ ವರ್ಮಾ ಸಮಿತಿಯ ಶಿಫಾರಸು ಬಹಳ ಸ್ಪಷ್ಟವಾಗಿ – ಸಂತ್ರಸ್ತೆಯು ದೂರು ದಾಖಲಿಸಲು ಬಂದಾಗ ನ್ಯಾಯವ್ಯಾಪ್ತಿಯ ಸಬೂಬು ಹೇಳದೆಯೇ ದೂರು ದಾಖಲಿಸಿಕೊಳ್ಳಬೇಕು ಎಂದು ಹೇಳುತ್ತದೆ. ಇಲ್ಲಿ ಯುವತಿ ಪರ ಊರಿನವಳಾಗಿರಬಹುದು. ಆದರೆ ಘಟನೆ ನಡೆದಿರುವುದು ಮೈಸೂರು ನಗರದ ಪೋಲೀಸ್ ವ್ಯಾಪ್ತಿಯಲ್ಲಿಯೇ, ಎಂದ ಮೇಲೆ ದೂರು ದಾಖಲಿಸಿಕೊಳ್ಳದಿರುವುದು ಕರ್ತವ್ಯ ಲೋಪವಾಗುವುದಿಲ್ಲವೇ? ಜಸ್ಟೀಸ್ ವರ್ಮಾ ಸಮಿತಿಯ ಶಿಫಾರಸ್ಸುಗಳ ಪ್ರಕಾರ ಅತ್ಯಾಚಾರದಂಥಹ ಹೀನ ಕೃತ್ಯದ ದೂರು ದಾಖಲಿಸಿಕೊಳ್ಳಲು ವಿಫಲರಾದರೆ ಅಥವಾ ತನಿಖೆಗೆ ತೊಂದರೆಯುಂಟು ಮಾಡಿದರೆ ಆ ಅಧಿಕಾರಿ ಶಿಕ್ಷೆಗೆ ಅರ್ಹರು. ಅಲ್ಲದೆ ಅತ್ಯಾಚಾರದಂಥಹ ಪ್ರಕರಣಗಳಲ್ಲಿ ಸಾಕ್ಷಿ ಪುರಾವೆಗಳನ್ನು ಮುಂದಿಟ್ಟುಕೊಂಡು ತನಿಖೆ ನಡೆಯುವುದು ದುಸ್ತರವೆಂಬುದು ಅನುಭವ ಜನ್ಯ ಸತ್ಯವಾಗಿದ್ದು ಸಾಂದರ್ಭಿಕ ಸಾಕ್ಷಗಳೇ ಆಧಾರವಾಗಬೇಕಾಗುತ್ತದೆ. ಈ ಕಾರಣದಿಂದ ಮತ್ತು ಸಿಗಬಹುದಾದ ಪ್ರಮುಖ ಸಾಕ್ಷಿಗಳನ್ನು ಘಟನೆ ನಡೆದ ಸ್ಥಳದಲ್ಲಿ ಪಡೆಯಬೇಕಾದ ಪೋಲೀಸರು ಘಟನೆ ನಡೆದ 24 ಘಂಟೆಗಳ ತರುವಾಯ ಸ್ಥಳಕ್ಕೆ ಭೇಟಿಕೊಟ್ಟರೆಂಬ ದೂರುಗಳೂ ಕೇಳಿಬರುತ್ತಿವೆ. ಇಷ್ಟೆಲ್ಲ ಘಟನೆಗಳು ನಡೆಯುತ್ತಿರುವಾಗ ರಾಜ್ಯದ ಗೃಹಮಂತ್ರಿಗಳು ತಮ್ಮ ಸ್ಥಾನದ ಘನತೆಯನ್ನು ಮರೆತು ತಮ್ಮ ಸಂಘೀ ಸಿದ್ಧಾಂತದ ವಕ್ತಾರರಾಗಿ ಮಹಿಳೆಯರು ರಾತ್ರಿ ಮನೆಯಿಂದ ಹೊರಗೆ ಹೋಗಬಾರದು, ಯುವತಿ 7:30ರ ನಂತರ ಅಲ್ಲಿಗೆ ಹೋಗಬಾರದಿತ್ತು ಎಂದಿದ್ದಾರೆ. ಅಲ್ಲದೇ ಮಹಿಳಾ ಆಯೋಗದ ಮಾಜಿ ಅಧ್ಯಕ್ಷರು ಕೂಡಾ ಆಕೆಯೊಬ್ಬಳು ಎಂ.ಬಿ.ಎ. ವಿದ್ಯಾರ್ಥಿನಿ, ನನಗೆ ಅಸಹ್ಯವಾಗುತ್ತದೆ, ಅಷ್ಟೊತ್ತಿನಲ್ಲಿ ಅವಳ್ಯಾಕೆ ಅಲ್ಲಿಗೆ ಹೋಗಿದ್ದಳು ಎಂದು ಗಾಬರಿ ಹುಟ್ಟಿಸುವ ಮಾತಾಡಿದ್ದಾರೆ. ಇದು ಈ ಸಮಾಜದೊಳಗಿನ ಯೋಚನಾ ಲಹರಿ. ಇವರಿಂದ ನ್ಯಾಯ ನಿರೀಕ್ಷೆ ಮಾಡಲು ಸಾಧ್ಯವೇ ಅಥವಾ ಇವರಿಗೆ ಸಂವಿಧಾನದತ್ತ ಸಮಾನ ಮತ್ತು ಘನತೆಯ ಬದುಕಿನ ಅರ್ಥಗೊತ್ತಿರಲು ಸಾಧ್ಯವೇ? ಎಂಬ ಪ್ರಶ್ನೆ ನನಗಂತೂ ಕಾಡುತ್ತಿದೆ.

ರಾಜ್ಯದ ವಿವಿಧ ಮಹಿಳಾ ಸಂಘಟನೆಗಳ ನಿಯೋಗ ನಗರದ ಪೋಲೀಸ್ ಕಮಿಷನರ್ ರವರನ್ನು ಭೇಟಿ ಮಾಡಿದೆ. ಯಥಾಪ್ರಕಾರ ಅಧಿಕಾರಿಯವರು ಸೌಜನ್ಯಯುತವಾಗಿ ನಿಷ್ಪಕ್ಷಪಾತ ತನಿಖೆ ನಡೆಸುವ ಭರವಸೆ ನೀಡಿದ್ದಾರೆ!, ಆದರೆ…. ಅವರಿಗೆ ಮರೆತಿರಬಹದಾದ ಆದರೆ ಇನ್ನೂ ಕಡತದಿಂದ ಹೊರಬಾರದಿರುವ ಅದೆಷ್ಟೋ ಪ್ರಕರಣಗಳಿವೆ. ಅದರಲ್ಲಿ ಅವರದೇ ನಗರದ ಇತ್ತೀಚಿನ ವರ್ಷ ಎಂದರೆ, 2019ರ ಮೇ ತಿಂಗಳಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಘಟನೆಯನ್ನು ನೆನಪಿಸಿದರೆ ಅದಿನ್ನೂ ತನಿಖೆಯಲ್ಲಿದೆ ಎಂಬ ಸಿದ್ಧ ಉತ್ತರ ದೊರೆಯಿತು ನಿಯೋಗಕ್ಕೆ. ಆ ಘಟನೆಯಲ್ಲಿ ಕೂಡಾ ಕೆಲಸದಿಂದ ರಾತ್ರಿ ಹಿಂತಿರುಗುತ್ತಿದ್ದ ಮಹಿಳೆ ಮತ್ತು ಆಕೆಯ ಸ್ನೇಹಿತರ ಬೈಕ್ ಅಡ್ಡಗಟ್ಟಿ ಪಾನಮತ್ತ 8 ಜನರ ಗುಂಪುದಾಳಿ ಮಾಡಿತ್ತು ಮತ್ತು ಸಾಮೂಹಿಕ ಅತ್ಯಾಚಾರ ಮಾಡಿತ್ತು. ದೂರು ದಾಖಲಿಸಿಕೊಂಡ ಮೇಲೆ ನ್ಯಾಯವ್ಯಾಪ್ತಿಯ ತಕರಾರು ಎರಡು ಪೋಲೀಸ್ ಠಾಣೆಗಳ ಮಧ್ಯೆ!!, ಆ ನಂತರ ಒಂದೆರಡು ದಿನಗಳ ಸುದ್ದಿ, ಇಬ್ಬರೋ ಮೂವರೋ ಆರು ಜನರದೋ ಬಂಧನವಾಗಿದೆ. ಮುಂದೇನಾಯಿತು?????? ಪ್ರಶ್ನಾರ್ಥಕ ಚಿಹ್ನೆಯಲ್ಲದೇ ಉತ್ತರವಿಲ್ಲ. ಹಾಗಾಗಿಯೇ ಪೋಲಿಸ್ ವರಿಷ್ಠಾಧಿಕಾರಿಗಳು ಇನ್ನೂ ತನಿಖೇ ನಡೆಯುತ್ತಿದೆ ಎನ್ನುತ್ತಾರೆ. ಅಂದರೆ ನಿಗದಿತ ಅವಧಿಯೊಳಗೆ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಬೇಕೆನ್ನುವ ನಿಯಮ ಇಲ್ಲಿ ಜಾರಿಗೊಳ್ಳುವುದೇ ಇಲ್ಲವೆಂದಾಯಿತು.

ಅದೇ ವೇಳೆಗೆ ಜಸ್ಟೀಸ್ ವರ್ಮಾ ಸಮಿತಿಯು ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ತ್ವರಿತ ನ್ಯಾಯಾಲಯಗಳ ಸ್ಥಾಪನೆಗೆ ಮತ್ತು ಅದಕ್ಕೆ ಅಗತ್ಯವಾದ ಸಿಬ್ಬಂದಿಗಳ ನೇಮಕಕ್ಕೆ ಹಾಗೂ ಸಮಾಜದ ಎಲ್ಲ ಸ್ಥರಗಳಲ್ಲಿ ಸಂವೇದನಾಶೀಲತೆಯನ್ನು ಬೆಳೆಸಲು ಕೂಡಾ ಶಿಫಾರಸುಗಳನ್ನು ಮಾಡಿತ್ತು. ಅಧಿಕಾರದ ಖುರ್ಚಿಗಾಗಿನ ಹೊಡೆದಾಟದಲ್ಲಿ ಈ ಯಾವುದರ ಪರಿವೆಯೇ ಇಲ್ಲದೇ ಪಕ್ಷಗಳು ಕಿತ್ತಾಟ ನಡೆಸುತ್ತಿವೆ. ನ್ಯಾಯ ಸಾಯುತ್ತಿದೆ.

ಇಂಥಹ ಸ್ಥಿತಿಯನ್ನು ನೋಡಿಯೇ ಜಸ್ಟೀಸ್ ವರ್ಮಾ ತಮ್ಮ ವರದಿಯಲ್ಲಿ ಆಡಳಿತ ವ್ಯವಸ್ಥೆಯ ವೈಫಲ್ಯವೇ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಮೂಲ ಕಾರಣ ಎಂದು ಸ್ಪಷ್ಟವಾಗಿ ಬರೆದಿದ್ದಾರೆ.

ಈ ಪ್ರಕರಣದಲ್ಲಿ ಯುವತಿ ಪರ ಊರಿನವಳು. ಇಲ್ಲಿ ಓದುತ್ತಿದ್ದವಳು. ಅವಳ ಕುಟುಂಬದ ಪರಿಸ್ಥಿತಿ ಏನಿದೆ ಎಂಬ ಮಾಹಿತಿಗಳಿಲ್ಲ. ಆಕೆಯಿಂದ ಈ ಕ್ಷಣದ ವರೆಗೆ ಯಾವುದೇ ಹೇಳಿಕೆ ಸಿಕ್ಕಿಲ್ಲ. ಈ ಘೋರಕೃತ್ಯ ಎಸಗಿರುವವರ ಕುರಿತು ಅಲ್ಲಲ್ಲಿ ಕೇಳಿಬರುವ ಸುದ್ದಿಗಳು ಅವರು ವಲಸಿಗ ಕೂಲಿ ಕಾರ್ಮಿಕರು ಎಂದು. ನಿಜವಿದ್ದರೆ ಅವರೂ ಶಿಕ್ಷಾರ್ಹರೆ, ಅಲ್ಲಿ ಯಾವ ವಿನಾಯಿತಿ ರಿಯಾಯಿತಿಗಳ ಮಾತಿಲ್ಲ. ಆದರೆ, ನಿಜವಾದ ತನಿಖೆ ನಡೆದು ಸತ್ಯವೇ ಹೊರಬೀಳುವಂತೆ ಆಗದಿದ್ದರೆ. ಯಾರೂ ಆರೋಪಿಗಳಾಗಿ ಬಿಡಬಹುದು. ಹೈದ್ರಾಬಾದಿನಲ್ಲಿ ಆದಂತೆ ಇಲ್ಲೂ ಆಗಬಹುದು. ಆ ಪ್ರಕರಣದಲ್ಲಿ ಯುವತಿಯನ್ನು ಅತ್ಯಾಚಾರ ಮಾಡಿ ಸುಟ್ಟು ಹಾಕಿದ ಘಟನೆ ಮತ್ತು ಆರೋಪಿಗಳೆಂದು ಬಂಧಿಸಲ್ಪಟ್ಟವರು ಕೈಕೋಳ ಹಾಕಿಸಿಕೊಂಡು ಬಿಗಿ ಪೋಲೀಸ್ ಪಹರೆಯಲ್ಲಿ ಸ್ಥಳ ಪರಿಶೀಲನೆಗೆ ಹೋಗುವಾಗ ಪೋಲೀಸರ ಮೇಲೆ ದಾಳಿ ಮಾಡಿದರಂತೆ. ಆದ್ದರಿಂದ ಸಶಸ್ತ್ರ ಪೋಲೀಸ್ ಪಡೆ ಅವರನ್ನು ಎನ್ಕೌಂಟರ್ ಮಾಡಿ ಸಾಯಿಸಿಬಿಟ್ಟಿತು. ಇದು ಹೇಗೆ ಸಾಧ್ಯ? ಎಂಬ ಶಾಶ್ವತ ಗುಮಾನಿಯನ್ನು ಉಳಿಸಿಬಿಡಬಹುದಾದ ಸಾಧ್ಯತೆಗಳೂ ಇವೆಯಲ್ಲವೇ?

ಅತ್ಯಾಚಾರದಂಥಹ ಆರೋಪಿಗಳ ಸಂದರ್ಭದಲ್ಲಿ ಕೂಡಾ ವರ್ಗ, ಜಾತಿ ಧರ್ಮಗಳು ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತವೆ. ಆರೋಪಿ ‘ಘನತೆವೆತ್ತ’ ಸ್ಥಾನದಲ್ಲಿದ್ದರೆ, ಮಠಾಧಿಪತಿಯಾಗಿದ್ದರೆ, ಸಚಿವ ಶಾಸಕ ಸಂಸದ ಮುಂತಾದ ‘ಪ್ರತಿಷ್ಟಿತ’ ಸ್ಥಾನದಲ್ಲಿದ್ದರೆ ಆಗ ನ್ಯಾಯದ ಘಂಟೆ ಒಮ್ಮೊಮ್ಮೆ ಕ್ಷೀಣವಾಗಿ ಬಡಿದುಕೊಳ್ಳಬಹುದೇನೋ, ಇನ್ನು ದೌರ್ಜನ್ಯ ನಡೆದಿದ್ದು ಯಾರ ಮೇಲೆ ಎಂಬುದೂ ಕೂಡಾ ಅಷ್ಟೇ ಮುಖ್ಯವಾಗುತ್ತದೆ. ಹಾಗಾಗಿ ಇಲ್ಲಿಯೂ ವರ್ಗ ಹಿತಾಸಕ್ತಿಯ ಸಂದರ್ಭಗಳು ಬಹಳ ಗಾಢವಾಗಿ ನೆಲೆಯೂರಿದೆ ಎಂಬುದನ್ನೂ ಗಮನಿಸಲೇಬೇಕು.

2013 ರಲ್ಲಿ ಬಂದ ಜಸ್ಟೀಸ್ ವರ್ಮಾ ಸಮಿತಿಯ ಶಿಫಾರಸ್ಸಿನಂತೆ 2018ರಲ್ಲಿ ಕರ್ನಾಟಕ ರಾಜ್ಯದಲ್ಲಿ ‘ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ಸಮಿತಿ’ ಉಗ್ರಪ್ಪ ನೇತೃತ್ವದಲ್ಲಿ 2018ರ ಮಾರ್ಚ್ 23ರಂದು ಅಂದಿನ ಸರ್ಕಾರಕ್ಕೆ ಕರ್ನಾಟಕದಲ್ಲಿ ನಿಶ್ಚಯವಾಗಿಯೂ ದೌರ್ಜನ್ಯಗಳನ್ನು ನಿಯಂತ್ರಿಸಲು ಅಗತ್ಯವಾದ 135 ಪ್ರಮುಖ ಅಂಶಗಳನ್ನೊಳಗೊಂಡ ವರದಿಯನ್ನು ಸಲ್ಲಿಸಿದೆ. ಅಂದಿನಿಂದ ಇಂದಿನವರೆಗೆ ಆ ವರದಿ ಧೂಳು ತಿನ್ನುತ್ತ ವಿಧಾನಸೌಧದ ಯಾವ ಮೂಲೆಯಲ್ಲಿ ಬಿದ್ದಿದೆಯೋ… ಯಾರಿಗೂ ತಿಳಿದಿಲ್ಲ.

ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ನಿಯಂತ್ರಿಸುವುದು ಕೇವಲ ಬಾಹ್ಯೋಪಚಾರದ ಘೋಷಣೆಗಳಿಂದ ಸಾಧ್ಯವಿಲ್ಲ. ಅದಕ್ಕೊಂದು ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ. ಅದೇ ಒಂದು ದೊಡ್ಡ ಕೊರತೆಯಾಗಿರುವ ಈ ದೇಶದಲ್ಲಿ ಅದರ ವಿರುದ್ಧ ಪ್ರತಿರೋಧದ ದೊಡ್ಡ ಕೂಗಿನ ಬದಲು ಕ್ಷೀಣ ಪ್ರತಿಕ್ರಿಯೆ ಬರಲಾರಂಭಿಸಿರುವುದು ಒಳ್ಳೆಯ ಸೂಚನೆಯಲ್ಲ. ಸಿಡಿಯದೇ ಒಡೆಯಲಾರದು, ಒಡೆಯದಿದ್ದರೆ ಕಟ್ಟಲೂ ಆಗದು.

Donate Janashakthi Media

Leave a Reply

Your email address will not be published. Required fields are marked *