ಅತ್ಯಾಚಾರಕ್ಕೆ ಮದುವೆ ಪರಿಹಾರವೆಂದು ಸೂಚನೆ : ಸಂತ್ರಸ್ಥರಿಗೆ ನ್ಯಾಯದ ಬಾಗಿಲು ಮುಚ್ಚಿದಂತೆ

ಅತ್ಯಾಚಾರವೆಂಬುದು ಹೆಣ್ಣಿನ ದೇಹದ ಮೇಲೆ ಮಾತ್ರವಲ್ಲ, ಅವಳ ಬದುಕಿನ ಪ್ರತಿ ಕ್ಷಣವನ್ನೂ ಹೊಸಕಿ ಹಾಕುವ ಘನಘೋರ ಅತಿಕ್ರಮಣ. ಹೆಣ್ಣಿನ ದೇಹದ ಮೇಲೆ ಆಕೆಯ ಗಂಡ ಕೂಡಾ ಅತಿಕ್ರಮ ಮಾಡಕೂಡದು. ವೈವಾಹಿಕ ಜೀವನದ ಒಳಗೆ ನಡೆಯುವ ಬಲವಂತದ ಅಥವಾ ಸಮ್ಮತಿಯಿಲ್ಲದ ಲೈಂಗಿಕ ಕ್ರಿಯೆಯನ್ನೂ ಅತ್ಯಾಚಾರವೆಂದೇ ಪರಿಗಣಿಸಬೇಕೆಂದು ಕೇಳುತ್ತಿರುವಾಗ,ಅದರ ಚರ್ಚೆ ನಡೆಯುತ್ತಲೇ ಇರುವಾಗ ಹಳಸಲು ಪೌರುಷದ ಮೌಲ್ಯಗಳನ್ನೇ ಎತ್ತಿ ಹಿಡಿಯುವ, ಪ್ರತಿ ದಿನ ಅತ್ಯಾಚಾರ ಎಸಗಲು ಸಮಾಜದ ಸಮ್ಮತಿ ದೊರೆಯುವ ‘ಮದುವೆ’ ಎಂಬ ಅಂಗೀಕಾರದ ಮುದ್ರೆ ಒತ್ತಲು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರೆ ಮುಂದಾಗಿರುವ ಸ್ಥಿತಿಗೆ ಆಕ್ರೋಷ ವ್ಯಕ್ತವಾಗಿದೆ.

ವಿಮಲಾ.ಕೆ.ಎಸ್

ಮೋಹಿತ್ ಸುಭಾಷ್ ಚವ್ಹಾಣ್/ಮಹಾರಾಷ್ಟ್ರ ಸ್ಟೇಟ್ & ಅದರ್ಸ್ . ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಹೇಳಿದರೆನ್ನಲಾದ ಮಾತುಗಳು ವರದಿಯಾಗಿವೆ.

ಪ್ರಕರಣ: ಅಪ್ರಾಪ್ತ ಬಾಲಕಿಯೊಬ್ಬಳನ್ನು ಹಲವಾರು ಬಾರಿ ಅತ್ಯಾಚಾರ ಮಾಡಿದ್ದಲ್ಲದೇ ಅದನ್ನು ಮುಚ್ಚಿ ಹಾಕಲು ಆಕೆಯನ್ನು ಬೆದರಿಸಲಾಗಿದೆ. ಕಟ್ಟಿ ಹಾಕಿ, ಮುಖದ ಮೇಲೆ ಆಸಿಡ್ ಎರಚುವುದಾಗಿ, ಪೆಟ್ರೋಲ್ ಸುರಿದು ಜೀವಂತ ಸುಡುವುದಾಗಿ, ಅವಳ ಸಹೋದರರನ್ನು ಕೊಲ್ಲುವುದಾಗಿ, ಹೆದರಿಸಲಾಗಿದೆ. ಅತ್ಯಾಚಾರದ ಪ್ರಕರಣ ಬೆಳಕಿಗೆ ಬಂದಿದ್ದೇ ಅಪ್ರಾಪ್ತ ಶಾಲೆಗೆ ಹೋಗುತ್ತಿದ್ದ ಮಗು ಆತ್ಮಹತ್ಯೆಗೆ ಪ್ರಯತ್ನಿಸಿದಾಗ. ಇಂಥಹ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಆರೋಪಿಗೆ ಸಂತ್ರಸ್ಥೆಯನ್ನು ಮದುವೆಯಾಗಲು ಸಿದ್ಧನಿದ್ದೀಯಾ ಎಂದು ಕೇಳುವುದೆಂದರೆ. . .. ಕಾನೂನುಬದ್ಧವಾಗಿ ಪ್ರತಿ ದಿನಾ, ಬೇಕೆಂದಾಗೆಲ್ಲ ಅವಳ ದೇಹದ ಮೇಲೆ ಮತ್ತು ಮನಸ್ಸಿನ ಮೇಲೆ ಅತಿಕ್ರಮಣ ಮಾಡುವ ಲೈಸೆನ್ಸ್ ಕೊಟ್ಟ ಹಾಗಲ್ಲವೇ?

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ಈ ಪ್ರಕರಣದಲ್ಲಿ ಮುಂಬೈ ಹೈಕೋರ್ಟ ಕೆಳ ನ್ಯಾಯಾಲಯದ ಆದೇಶವನ್ನು ಅಟ್ರಾಷಿಯಸ್-ಕ್ರೌರ್ಯದ ಪರಮಾವಧಿ ಎಂದು ಬಣ್ಣಿಸಿ ತಡೆ ನೀಡಿತ್ತು. ಆಗ ಉಚ್ಛ ನ್ಯಾಯಾಲಯ ಹೇಳಿದ ಮಾತು ‘  ಇಂಥಹ ಗಂಭೀರ ಪ್ರಕರಣಗಳಲ್ಲಿ ಘನತೆವೆತ್ತ ನ್ಯಾಯಾಧೀಶರ ಧೋರಣೆಯು, ಅವರ ಸಂವೇದನಾ ರಹಿತ ಮನೋಭಾವಕ್ಕೆ ಪುರಾವೆಯಾಗಿದೆ’ ಎಂದೂ ಹೇಳಿತ್ತು. ಈ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಧೋರಣೆಯೂ ಅದಕ್ಕಿಂತ ಭಿನ್ನವಾಗಿ ತೋರದ ಕಾರಣ ಅದೇ ಮಾತು ಇಲ್ಲಿಗೂ ಅನ್ವಯವಾಗಬಹುದಲ್ಲವೇ?

ಅತ್ಯಾಚಾರಕ್ಕೆ ಮದುವೆಯೊಂದು ಪರಿಹಾರವೆಂದು ಸೂಚನೆ ನೀಡುವುದು ಎಂದರೆ ಸಂತ್ರಸ್ಥರಿಗೆ ನ್ಯಾಯದ ಬಾಗಿಲು ಮುಚ್ಚಿದೆ ಎಂದೇ ಅರ್ಥ. ಬಹಳ ನಾಜೂಕಾಗಿ ಸಂತ್ರಸ್ಥರು ತಮ್ಮ ಮೇಲಿನ ದುರಾಕ್ರಮಣಗಳನ್ನು ಬಾಯಿ ಮುಚ್ಚಿಕೊಂಡು ಸಹಿಸಿಕೊಳ್ಳಬೇಕು ಅಥವಾ ನ್ಯಾಯ ಕೇಳಿ ನ್ಯಾಯಾಲಯದ ಮಧ್ಯಸ್ಥಿಕೆಯಲ್ಲಿ ಅದೇ ದುರಾಕ್ರಮಿಯಿಂದ ಪ್ರತಿ ದಿನ ಅತ್ಯಾಚಾರಕ್ಕೆ ಒಳಗಾಗಬೇಕು ಎಂಬ ರಹದಾರಿ ಪತ್ರ ಕೊಡುವ ಹೇಳಿಕೆಗಳು ಅಸಹನೀಯ.

ಇದು ಇದೇ ಮೊದಲಲ್ಲ, ಈ ಮೊದಲೂ ದೇಶದ ಹಲವಾರು ಕಡೆ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ನ್ಯಾಯದ ಕಾವಲು ಕಾಯುವ ಬದಲು ಸಂತ್ರಸ್ಥೆಯನ್ನು ಮದುವೆಯಾಗಲು ಕೇಳಿದ ಸಂದರ್ಭಗಳು ಹಲವು ಇವೆ. ಈ ನಿರ್ದಿಷ್ಟ ಪ್ರಕರಣದಲ್ಲಿ 10ರಿಂದ 12 ಬಾರಿ ಅಪ್ರಾಪ್ತಳಾಗಿದ್ದ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ದುಷ್ಕರ್ಮಿ. ಇದನ್ನು ಯಾರಿಗೂ ಹೇಳದಂತೆ ಆಕೆಗೆ ಬೆದರಿಕೆ ಒಡ್ಡಿದ್ದ. ವರದಿಗಳ ಪ್ರಕಾರ ಅವಳನ್ನು ಕಟ್ಟಿ ಹಾಕಿ ಹೊಡೆದು ಬಡಿದು ಹೆದರಿಸಿದ್ದವನಿಗೆ ಮದುವೆಯಾಗು ಎಂಬ ಸಲಹೆ!!. ಇವೆಲ್ಲದರಿಂದ ಬೆದರಿದ, ರೋಸಿಹೋದ ಆ ಹುಡುಗಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ. ಮುಂಬೈ ಉಚ್ಛನ್ಯಾಯಾಲಯದ ಔರಂಗಾಬಾದ ಪೀಠವು ಗುರುತಿಸಿದಂತೆ ಆರೋಪಿ ಮತ್ತವನ ಕುಟುಂಬ ಪ್ರಭಾವಿಗಳಾಗಿದ್ದು ಸಂತ್ರಸ್ಥೆ ಮತ್ತು ಆಕೆಯ ಕುಟುಂಬದವರಿಂದ 500/ರೂಗಳ ಛಾಪಾ ಕಾಗದದ ಮೇಲೆ ಅವರಿಬ್ಬರಿಗೂ ಸಮ್ಮತಿಯ ಲೈಂಗಿಕ ಸಂಬಂಧವಿತ್ತು ಎಂದು ಸಹಿ ಮಾಡಿಸಿಕೊಂಡಿದ್ದನಂತೆ ಎಂಬುದನ್ನು ಗುರುತಿಸಿದೆ. ಇಂಥಹ ಕಾರಣಗಳಿಗಾಗಿಯೇ ಔರಂಗಾಬಾದ ಪೀಠವು ಅತ್ಯಾಚಾರಿಯ ಕೃತ್ಯಗಳನ್ನು ಕ್ರೌರ್ಯದ ಪರಮಾವಧಿ ಎಂದು ಬಣ್ಣಿಸಿ ಆತನ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇಂಥಹ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ಅತ್ಯಾಚಾರದ ಆರೋಪಿಗೆ ಜಾಮಿನು ಕೋರಿ ಅರ್ಜಿ ನೀಡಲು ಕಾನೂನಾತ್ಮಕವಾಗಿ ಈ ದೇಶದಲ್ಲಿ ಆರೋಪಿಗಳಿಗಿರುವ ಸಮಯದ ಅವಕಾಶವನ್ನು ನಿರಾಕರಿಸಬೇಕಾಗಿತ್ತು. ನ್ಯಾಯದ ತಕ್ಕಡಿ ಅನ್ಯಾಯವಾದಾಗ ಸ್ಥಿರವಾಗಿರಬೇಕಲ್ಲವೇ?

ಮಾಧ್ಯಮಗಳಲ್ಲಿ ಕೆಲವೆಡೆ ಹುಡುಗಿಯ ಪೋಷಕರು, ಆತ ಮದುವೆಯಾಗುವುದಾಗಿ ಹೇಳಿದನೆಂಬ ಕಾರಣಕ್ಕೆ ಎಲ್ಲಿಯೂ ದೂರು ದಾಖಲಿಸಿರಲಿಲ್ಲ ಎಂದೂ ವರದಿ ಮಾಡಿವೆ. ಅತ್ಯಾಚಾರಿಗೆ ಸಂತ್ರಸ್ಥೆಯನ್ನು ಮದುವೆಯಾಗಲು ಅವಕಾಶ ಕೊಡುವುದು ಯಾವ ಕಾರಣಕ್ಕೂ ಸರಿಯಲ್ಲ. ಮದುವೆಯ ಮೂಲಕ ಆಕೆಯ ಮೇಲೆ ನಡೆದ ಹೀನ ಕೃತ್ಯವನ್ನು ಮರೆಮಾಚಲು ಸಾಧ್ಯವಿಲ್ಲ, ಅದು ಆಕೆಗೆ ಯಾವುದೇ ರೀತಿಯ ಸಾಂತ್ವನವನ್ನೂ ನೀಡಲಾರದು. ಈ ಸಮಾಜ ಅತ್ಯಾಚಾರವೆಂಬುದು ಹೆಣ್ಣಿಗೆ ಅವಮಾನದ ಸಂಗತಿ, ಆಕೆಯ ಘನತೆಗೆ ಕುಂದು ಆದ್ದರಿಂದ ಆತನನ್ನೇ ಮದುವೆಯಾಗಿ ಗೌರವವನ್ನು ಮರಳಿ ಪಡೆಯಲಿ ಎಂದು ಯೋಚಿಸುವ ಸಂದರ್ಭಗಳಿವೆ. ಇವು ಅತ್ಯಂತ ಕೀಳು ಅಭಿಪ್ರಾಯವೆಂದಷ್ಟೇ ಹೇಳಬಹುದು.

ಇನ್ನೂ ಒಂದು ಪ್ರಕರಣಕ್ಕೆ ಸಂಬಂಧಿಸಿ ಮುಖ್ಯ ನ್ಯಾಯಾಧೀಶರು ವೈವಾಹಿಕ ಸಂಬಂಧದಲ್ಲಿಯೂ ಅತ್ಯಾಚಾರ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರೆಂದು ಸುದ್ದಿಗಳಿವೆ. ಈ ದೇಶದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯೂ ಸೇರಿದಂತೆ ಮಹಿಳಾ ಮತ್ತು ಮಹಿಳಾ ಪರ ಸಂಘಟನೆಗಳು ದಶಕಗಳಿಂದ ಐ.ಪಿ.ಸಿ ಕಲಮಿನ 376ರ ಅಡಿಯಲ್ಲಿ ವಿವಾಹದೊಳಗಿನ ಅಸಮ್ಮತಿಯ ಲೈಂಗಿಕ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲು ಕೇಳುತ್ತಲೇ ಇವೆ. ವಿವಾಹದೊಳಗಿನ ಅತ್ಯಾಚಾರಕ್ಕೆ ಈಗಿರುವ ವಿನಾಯಿತಿಯನ್ನು ತೆಗೆಯಬೇಕೆಂದು ಒತ್ತಾಯಿಸಲಾಗುತ್ತಿದೆ. ವಿವಾಹ ಸಂಬಂಧದೊಳಗಿನ ಹಿಂಸೆ ಮತ್ತು ಲೈಂಗಿಕ ಅಪರಾಧಗಳನ್ನು ಒಪ್ಪಲಾಗದು. ನಮ್ಮ ಕಾನೂನಿನಲ್ಲಿ ಕೂಡ ಇದಕ್ಕೆ ಅರ್ಧ ಸಮ್ಮತಿ ದೊರೆತಿದೆ ಎಂಬುದಕ್ಕೆ ೪೯೮ ಏ ಮತ್ತು ಕೌಟುಂಬಿಕ ದೌರ್ಜನ್ಯ ನಿಷೇಧ ಕಾನೂನುಗಳು ಜಾರಿಯಲ್ಲಿರುವುದೇ ಉದಾಹರಣೆಯಾಗಿದೆ.

ಪುರುಷ ಪ್ರಧಾನ ಪಾಳೆಯಗಾರಿ ಮೌಲ್ಯಗಳ ಬಂಧಿಯಾಗಿರುವ ನಮ್ಮ ದೇಶದಲ್ಲಿ ಬದಲಾವಣೆಯ ಗಾಳಿ ಬಲವಾಗಿ ಬೀಸಬೇಕು. ಈ ಮೌಲ್ಯಗಳು ನ್ಯಾಯಸ್ಥಾನದ ಕೆಲವು ಕಡೆ ಕೂಡ ಹಲವಾರು ಬಾರಿ ಕಾಣುತ್ತಿದ್ದು ಇದಕ್ಕೊಂದು ಮದ್ದು ಅರೆಯಲೇಬೇಕು. ಲಿಂಗ ಸೂಕ್ಷ್ಮತೆಯ, ಮಾನವ ಸಂವೇದನೆಯ ಪಾಠಗಳು ಎಲ್ಲ ಹಂತಗಳಲ್ಲಿ ಜಾರಿಯಾಗಲೇ ಬೇಕು. ಯಾವ ಸ್ಥಳ ತನ್ನ ನಡೆ ನುಡಿ ಬದ್ಧತೆಗಳ ಮೂಲಕ ಸಂವಿಧಾನ ನೀಡಿರುವ ಘನತೆಯ ಬದುಕನ್ನು ಎತ್ತಿ ಹಿಡಿದು ಮಾದರಿಯಾಗಿ ನಿಲ್ಲಬೇಕೋ ಅಲ್ಲಿಯೇಸಂವಿಧಾನದ ಮೂಲ ತತ್ವಗಳಿಗೆ ತಿಲಾಂಜಲಿ ಇಟ್ಟಾಗ ಸಮಾಜ ಎದ್ದು ಪ್ರಶ್ನಿಸಬೇಕು. ನ್ಯಾಯದ ತಕ್ಕಡಿ ತುಕ್ಕು ಹಿಡಿಯದಂತೆ, ಅನ್ಯಾಯಕ್ಕೆ ಕುರುಡಾಗಿ ನ್ಯಾಯಕ್ಕೆ ಸಮಚಿತ್ತದ ದಾರಿದೀಪವಾಗಲು ಒತ್ತಾಯಿಸಬೇಕು. ನೆಲೆಕಾಣಿಸಬೇಕು.

Donate Janashakthi Media

Leave a Reply

Your email address will not be published. Required fields are marked *