ಈ ಟಿಪ್ಪಣಿಗಳನ್ನು ಮತ್ತು ಆದೇಶಗಳನ್ನು ಹಿಂತೆಗೆದುಕೊಳ್ಳಬೇಕು
– ಸಿ.ಜೆ.ಐ. ಗೆ ಬೃಂದಾ ಕಾರಟ್ ಬಹಿರಂಗ ಪತ್ರ
ಕ್ಷೋಭೆ ಉಂಟುಮಾಡುವಂತದ್ದು-ಎಐಡಿಡಬ್ಲ್ಯುಎ
ಸಿ.ಜೆ. ಐ. ಕ್ಷಮೆ ಕೇಳಬೇಕು, ಕೆಳಗಿಳಿಯಬೇಕು-ಪ್ರತಿಷ್ಠಿತ ನಾಗರಿಕರ ಆಗ್ರಹ
ಭಾರತದ ಮುಖ್ಯ ನ್ಯಾಯಾಧೀಶ(ಸಿಜಿಐ)ರು ಮಾರ್ಚ್ 1ರಂದು ಎರಡು ಮೊಕದ್ದಮೆಗಳಲ್ಲಿ ಹೇಳಿರುವ ಮಾತುಗಳು ದೇಶಾದ್ಯಂತ ಕಟುಟೀಕೆಗಳಿಗೆ ಒಳಗಾಗಿವೆ. ಇವನ್ನು ಮತ್ತು ಈ ಮೂಲಕ ಪ್ರಕಟಿಸಿರುವ ನಿರ್ಧಾರಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಮಹಿಳಾ ಆಂದೋಲನದ ಒಬ್ಬ ಹಿರಿಯ ಮುಖಂಡರೂ, ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯರೂ ಅಗಿರುವ ಬೃಂದಾ ಕಾರಟ್ ಭಾರತದ ಮುಖ್ಯ ನ್ಯಾಯಾಧೀಶರಿಗೆ ಈ ಕುರಿತು ಪತ್ರ ಬರೆದು ಆಗ್ರಹಿಸಿದ್ದಾರೆ. ದೇಶದ ಸರ್ವೋಚ್ಚ ನ್ಯಾಯಾಲಯದ ಅಧಿಕಾರ ಮತ್ತು ಶಕ್ತಿಯನ್ನು ಲೈಂಗಿಕ ದಾಳಿಗೆ ಒಳಗಾಗಿರುವವರಿಗೆ ನೆರವಾಗಲು ಬಳಸಲಾಗವುದೇ ಹೊರತು, ದಾಳಿಮಾಡಿದವರಿಗಲ್ಲ ಎಂದು ಮಹಿಳೆಯರು ಆಶಿಸುತ್ತಾರೆ ಎಂದು ಅವರು ದೇಶದ ಮುಖ್ಯ ನ್ಯಾಯಾಧೀಶರಿಗೆ ಹೇಳಿದ್ದಾರೆ.
ಅಖಿಲ ಭಾರತ ಜನವಾದಿ ಮಹಿಳಾ ಸಂಘ(ಎಐಡಿಡಬ್ಲ್ಯುಎ) ಸಿಜೆಐ ರವರ ಈ ಹೇಳಿಕೆಗಳು ಆಳವಾದ ಕ್ಷೋಭೆಯನ್ನು ಉಂಟುಮಾಡಿವೆ ಎನ್ನುತ್ತ ಭಾರತೀಯ ಅಪರಾಧಿಕ ನ್ಯಾಯ ವ್ಯವಸ್ಥೆಯ ಕೆಲವು ವಿಭಾಗಗಳಲ್ಲಿ ಇರುವ ಸಂಪ್ರದಾಯಶರಣ ಮತ್ತು ಪಿತೃಪ್ರಧಾನ ವ್ಯವಸ್ಥೆಯ ಭಾವನೆಗಳನ್ನು ಬುಡಸಹಿತ ಕಿತ್ತುಹಾಕಬೇಕಾಗಿದೆ ಮತ್ತು ಈ ವ್ಯವಸ್ಥೆಯನ್ನು ಲಿಂಗ ಸಂವೇದಿ ಯಾಗಿಸಬೇಕಾಗಿದೆ ಎಂದು ಅಭಿಪ್ರಾಯ ಪಟ್ಟಿದೆ.
ಅನಿ ರಾಜಾ, ಕವಿತಾ ಕೃಷ್ಣನ್, ಕಮಲಾ ಭಾಸಿನ್, ಮೀರಾ ಸಂಘಮಿತ್ರಾ, ಮೈಮುನ ಮೊಲ್ಲ, ಝಾಕಿಯಾ ಸೋಮನ್ ಮುಂತಾದವರು ಸಹಿ ಹಾಕಿರುವ ಒಂದು ಬಹಿರಂಗ ಪತ್ರದಲ್ಲಿ ಮುಖ್ಯ ನ್ಯಾಯಾಧೀಶರು ತನ್ನ ಈ ಟಿಪ್ಪಣಿಗಳಿಗೆ ಕ್ಷಮೆ ಕೋರಬೇಕು ಮತ್ತು ತನ್ನ ಸ್ಥಾನದಿಂದ ಕೆಳಗಿಳಿಯಬೇಕು ಎಂದು 3500 ಪ್ರತಿಷ್ಠಿತ ನಾಗರಿಕರು ಮತ್ತು ಸಂಘಟನೆಗಳು ಅವರಿಗೆ ಒಂದು ಬಹಿರಂಗ ಪತ್ರದಲ್ಲಿ ಆಗ್ರಹಿಸಿವೆ.
“ಮುಖ್ಯ ನ್ಯಾಯಾಧೀಶ ಸರ್, ಸಂತ್ರಸ್ತೆಯ ಸಂಕಟ, ಮಾನಸಿಕ ಆಘಾತ ಲೆಕ್ಕಕ್ಕೇ ಇಲ್ಲವೇ?”
ಸುಪ್ರಿಂ ಕೋರ್ಟಿನ ಮುಖ್ಯ ನ್ಯಾಯಾಧೀಶರ ಟಿಪ್ಪಣಿಗಳಲ್ಲಿ ಮೊದಲನೆಯದ್ದು ಮುಂಬೈ ಹೈಕೋರ್ಟಿನ ಔರಂಗಾಬಾದ್ ಪೀಠ ಮೋಹಿತ್ ಸುಭಾಷ್ ಚವಾಣ್ vs ಮಹಾರಾರಾಷ್ಟ್ರ ರಾಜ್ಯ ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ್ದರ ವಿರುದ್ಧ ಸುಪ್ರಿಂ ಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಪಟ್ಟದ್ದು. ಈ ಅರ್ಜಿದಾರ ಎರಡು ವರ್ಷಗಳ ಹಿಂದೆ ಅಗಿನ್ನೂ ಅಪ್ರಾಪ್ತ ವಯಸ್ಕಳಾಗಿದ್ದ ಹುಡುಗಿಯ ಮೇಲೆ ಅತ್ಯಾಚಾರ ನಡೆಸಿದ್ದ ಎಂಬ ಆರೋಪಕ್ಕೆ ಒಳಗಾಗಿರುವವನು; ವಿಚಾರಣೆಯ ವೇಳೆಯಲ್ಲಿ ಸಿಜೆಐರವರು ಅರ್ಜಿದಾರನಿಗೆ ಆತನ ವಕೀಲರ ಮೂಲಕ ಕೇಳಿದ ಪ್ರಶ್ನೆ “ನೀನು ಆಕೆಯನ್ನು ಮದುವೆಯಾಗುತ್ತೀಯಾ?” ಇದಕ್ಕೆ ಆತನ ವಕೀಲರು ಆತನನ್ನು ಕೇಳಿ ತಿಳಿಸುವುದಾಗಿ ಹೇಳಿದಾಗ ಸಿಜೆಐ ಬೊಬ್ಡೆಯವರು “ಆ ಯುವತಿಯನ್ನು ತಪ್ಪುದಾರಿಗೆ ಎಳೆಯುವ ಮತ್ತು ಅತ್ಯಾಚಾರ ನಡೆಸುವ ಮೊದಲು ಯೋಚಿಸಬೇಕಾಗಿತ್ತು. ನೀನೊಬ್ಬ ಸರಕಾರಿ ಸೇವಕ ಎಂದು ನಿನಗೆ ತಿಳಿದಿತ್ತು.” ಎಂದು ಹೇಳಿದರು; ಮುಂದುವರೆದು ಅವರು “ನಾವೇನು ನೀನು ಮದುವೆಯಾಗಬೇಕೆಂದು ಬಲವಂತ ಮಾಡುತ್ತಿಲ್ಲ. ಆಗುತ್ತೀಯಾ ಎಂದು ಕೇಳುತ್ತೇವೆ. ಇಲ್ಲವಾದರೆ ನಾವು ನಿನ್ನನ್ನು ಬಲವಂತ ಮಾಡುತ್ತಿದ್ದೇವೆ ಎಂದು ಹೇಳುತ್ತೀಯಾ” ಎಂದಿರುವುದಾಗಿ ವರದಿಯಾಗಿದೆ. ಸ್ವಲ್ಪ ಹೊತ್ತಿನ ನಂತರ ಈ ಬಗ್ಗೆ ಮತ್ತೆ ವಿಚಾರಣೆ ನಡೆದಾಗ ಅರ್ಜಿದಾರ “ನಾನು ಆಕೆಯನ್ನು ಮದುವೆಯಾಗ ಬಯಸಿದ್ದೆ. ಆದರೆ ಅವಳು ನಿರಾಕರಿಸಿದಳು. ಈಗ ನನಗೆ ಸಾಧ್ಯವಿಲ್ಲ, ಏಕೆಂದರೆ ಈಗಾಗಲೇ ವಿವಾಹಿತನಾಗಿದ್ದೇನೆ” ಎಂದು ವಕೀಲರ ಮೂಲಕ ತಿಳಿಸಿದ. ನ್ಯಾಯಾಲಯ ಆತನಿಗೆ ನಾಲ್ಕು ವಾರಗಳ ಮಧ್ಯಂತರ ರಕ್ಷಣೆ ನೀಡಿ ಸಾಮಾನ್ಯ ಜಾಮೀನು ಪಡೆಯುವಂತೆ ಹೇಳಿತು.
ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತ ಬೃಂದಾ ಕಾರಟ್ “ಈ ಪ್ರಶ್ನೆಗಳು, ಪದಗಳು ಮತ್ತು ಕ್ರಿಯೆಗಳು ಅಪ್ರಾಪ್ತ ವಯಸ್ಕರ ಮೇಲೆ ಅತ್ಯಾಚಾರಗಳ ಪ್ರಕರಣಗಳಲ್ಲಿ ಜಾಮೀನು ನೀಡುವಲ್ಲಿ ಗಂಭೀರ ದುಷ್ಪರಿಣಾಮಗಳನ್ನು ಉಂಟು ಮಾಡುತ್ತವೆ “ ಎಂದು ಸಿಜೆಐ ರವರಿಗೆ ಬರೆದಿರುವ ಪತ್ರದಲ್ಲಿ ಖೇದ ವ್ಯಕ್ತಪಡಿಸಿದ್ದಾರೆ,
“ದಯವಿಟ್ಟು ಮರುಪರಿಶೀಲಿಸಿ, ಈ ಟಿಪ್ಪಣಿಗಳನ್ನು ಮತ್ತು ಪ್ರಶ್ನೆಗಳನ್ನು ಹಾಗೂ ನೀವು ಅತ್ಯಾಚಾರಿಗೆ ನೀಡಿರುವ ಜಾಮೀನನ್ನು ಹಿಂತೆಗೆದುಕೊಳ್ಳಿ. ಕೆಳಗಣ ಕೋರ್ಟ್ ಆತನಿಗೆ ನೀಡಿದ ಜಾಮೀನು ‘ಅಸಹ್ಯಕರ’ ಎಂದಿರುವ ಔರಂಗಾಬಾದ್ ಹೈಕೋರ್ಟಿನ ತೀರ್ಪನ್ನು ದಯವಿಟ್ಟು ಎತ್ತಿ ಹಿಡಿಯಿರಿ” ಎಂದು ಬೃಂದಾ ಅವರು ಸಿಜೆಐ ರವರನ್ನು ವಿನಂತಿಸಿಕೊಂಡಿದ್ದಾರೆ.
9ನೇ ತರಗತಿಯಲ್ಲಿ ಓದುತ್ತಿದ್ದ ಈ ಹುಡುಗಿ “ಕೇವಲ 16 ವರ್ಷದವಳಾಗಿದ್ದಾಗ, ಈ ಕ್ರಿಮಿನಲ್ ಆಕೆಯ ಕೈಕಾಲು ಕಟ್ಟಿ ಅತ್ಯಾಚಾರ ಎಸಗಿದ್ದಾನೆ, 10-12 ಬಾರಿ ಇದನ್ನು ಮಾಡಿದ್ದಾನೆ. ಹುಡುಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದಳು. ಇದು ಒಪ್ಪಿಗೆಯನ್ನು ತೋರಿಸುತ್ತದೆಯೇ? ಏನೇ ಆಗಲಿ, ಈ ಹುಡುಗಿಯಂತೆ ಒಬ್ಬ ಅಪ್ರಾಪ್ರವಯಸ್ಕೆಯ ವಿಷಯದಲ್ಲಿ ಒಪ್ಪಿಗೆಯ ಪ್ರಶ್ನೆಯೇ ಇಲ್ಲ ಎಂಬುದು ಕಾನೂನಿನಲ್ಲಿ ಸ್ಪಷ್ಟವಾಗಿದೆ” ಎಂಬ ಸಂಗತಿಯತ್ತ ಗಮನ ಸೆಳೆಯುತ್ತ “ಮುಖ್ಯ ನ್ಯಾಯಾಧೀಶ ಸರ್, ಈಗ 18 ವರ್ಷದವಳಾಗಿರುವ ಸಂತ್ರಸ್ತೆಯ ಬಗೆಯೇನು, ಅಕೆಯ ಮೇಲೆ ಇಂತಹ ಪ್ರಶ್ನೆಯ ಪರಿಣಾಮವೇನು? ಆಕೆಯ ಸಂಕಟ, ಮಾನಸಿಕ ಆಘಾತ ಲೆಕ್ಕಕ್ಕೇ ಇಲ್ಲವೇ? ಅದಕ್ಕೆ ಬೆಲೆಯೇ ಇಲ್ಲವೇ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಅತ್ಯಾಚಾರ ಸಂತ್ರಸ್ತರು ಕೀಲುಗೊಂಬೆಗಳಲ್ಲ, ಯಂತ್ರಗಳಲ್ಲ, ಅವರ ವಿಚಾರಗಳು ಮತ್ತು ಭಾವನೆಗಳು ಬೇರೆಯವರ ರಿಮೋಟ್ ಕಂಟ್ರೋಲಿನಲ್ಲಿ ಇಲ್ಲ. ಆಕೆಯ ತಂದೆ-ತಾಯಿ ಏನೇ ಬಯಸಿದ್ದರೂ, ಆಕೆ ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದ್ದಳು ಎಂಬ ವರದಿಯತ್ತ ಬೃಂದಾ ಕಾರಟ್ ಸಿಜೆಐರವರ ಗಮನ ಸೆಳೆದಿದ್ದಾರೆ.
ಇಂತಹ ಪ್ರಶ್ನೆಗಳನ್ನು ಅತ್ಯಾಚಾರಿಯನ್ನು ಕೇಳುವ ಮೂಲಕ ಈ ಅಪರಾಧ ಎಸಗಿದ ನಂತರ, ಅದಕ್ಕೆ ಬಲಿಯಾದವಳು ಒಪ್ಪಲಿ, ಬಿಡಲಿ, ಆಕೆಯನ್ನು ಮದುವೆಯಾಗಲು ಆತ “ಒಪ್ಪಿದರೆ” ಆತ ಜೈಲುಶಿಕ್ಷೆಯಿಂದ ಪಾರಾಗಬಹುದು ಎಂಬ ಸಂದೇಶವನ್ನು ಕೊಟ್ಟಂತಾಗುತ್ತದೆ. ಅತ್ಯಾಚಾರಕ್ಕೆ ಬಲಿಯಾದವಳು ಒಬ್ಬ “ಕೆಟ್ಟ” ಹೆಂಗಸು, ಆಕೆಯನ್ನು ಅದೇ ಅತ್ಯಾಚಾರಿ ಮದುವೆಯಾದರೆ ಆಕೆಗೆ ಸಮಾಜದ ಕಣ್ಣುಗಳಲ್ಲಿ ಗೌರವ ಪ್ರಾಪ್ತಿಯಾಗುತ್ತದೆ ಎಂಬ ಒಂದು ಪ್ರತಿಗಾಮಿ ಸಾಮಾಜಿಕ ನಿಲುವು ಇದೆ. ಇಂತಹ ನಿಲುವುಗಳನ್ನು ಬೆಂಬಲಿಸುವಂತಹ ಭಾವನೆಯನ್ನು ಸರ್ವೋಚ್ಚ ನ್ಯಾಯಾಲಯದ ಟಿಪ್ಪಣಿಗಳು ಉಂಟುಮಾಡಬಾರದು ಎಂದು ಬೃಂದಾ ಕಾರಟ್ ಸಿಜೆಐಯವರಿಗೆ ಬರೆದಿರುವ ಈ ಪತ್ರದಲ್ಲಿ ಹೇಳಿದ್ದಾರೆ.
ಅತ್ಯಾಚಾರದ ಅಪರಾಧದಲ್ಲಿ ನ್ಯಾಯ ನೀಡಿಕೆಯ ಪ್ರಕ್ರಿಯೆಗಳು ಸಂತ್ರಸ್ತೆಯ ಹಿತಗಳನ್ನು ಕೇಂದ್ರದಲ್ಲಿ ಇಟ್ಟುಕೊಳ್ಳಬೇಕು. ದುರದೃಷ್ಟವಶಾತ್ ಈ ಪ್ರಕರಣದಲ್ಲಿ ತದ್ವಿರುದ್ಧವೇ ಆಗಿದೆ ಎಂದು ಅವರು ಖೇದ ವ್ಯಕ್ತಪಡಿಸಿದ್ದಾರೆ.
“ಹೌದು ಸರ್, ಅತ್ಯಾಚಾರ ಎಂದೇ ಹೇಳಬಹುದು”
ಎರಡನೇಯದ್ದು, ಒಬ್ಬ ಮಹಿಳೆಗೆ ಮದುವೆಯಾಗುತ್ತೇನೆ ಎಂದು ಭರವಸೆ ಕೊಟ್ಟು ಆಕೆಯೊಡನೆ ಸಂಭೋಗ ನಡೆಸಿದ ಒಬ್ಬನ ಜಾಮೀನು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸಿಜೆಐ ಮಾಡಿರುವರೆಂಬ ಟಿಪ್ಪಣಿಯ ಕುರಿತಾದ್ದು. ಕಾನೂನಿನ ಪ್ರಕಾರ ಇದು ಅತ್ಯಾಚಾರವಾಗುತ್ತದೆ. ಆದರೆ, “ಸುಪ್ರಿಂಕೋರ್ಟ್, ‘ಗಂಡ ಎಷ್ಟೇ ಪಾಶವೀಯನಾಗಿದ್ದರೂ… ಗಂಡ ಮತ್ತು ಹೆಂಡತಿಯಾಗಿ ಬದುಕುತ್ತಿರುವ ಇಬ್ಬರ ನಡುವೆ ಲೈಂಗಿಕ ಸಂಭೋಗವನ್ನು ಅತ್ಯಾಚಾರ ಎನ್ನಬಹುದೇ?’ ಎಂದು ಕೇಳುತ್ತ, ಅತ್ಯಾಚಾರ ನಡೆಸಿದ್ದಾನೆಂದು ತನ್ನ ಮಾಜೀ ಭಾಗೀದಾರಳಿಂದ ಆರೋಪಕ್ಕೆ ಒಳಗಾಗಿರುವ ವ್ಯಕ್ತಿಯ ಬಂಧನಕ್ಕೆ ತಡೆಯಾಜ್ಞೆ ಕೊಟ್ಟಿದೆ” ಎಂದು ವರದಿಯಾಗಿದೆ.
“ಹೌದು ಸರ್, ಅದನ್ನು ಅತ್ಯಾಚಾರ ಎನ್ನಬಹುದು. ಅತ್ಯಾಚಾರವನ್ನು ಒಂದು ವಿವಾಹದ ಪ್ರಮಾಣ ಪತ್ರದಿಂದ ನಿರ್ಧರಿಸಲು ಸಾಧ್ಯವಿಲ್ಲ, ಬದಲಿಗೆ, ಮಹಿಳೆ ಸಂಭೋಗಕ್ಕೆ ಒಪ್ಪಿದ್ದಾಳೋ ಇಲ್ಲವೋ ಎಂಬುದರಿಂದ ನಿರ್ಧಾರವಾಗಬೇಕು. ಈ ವಿಷಯದಲ್ಲಿ ಮಾಡಿದರೆಂದು ವರದಿಯಾಗಿರುವ ಟಿಪ್ಪಣಿಗಳು ಪಾಶವೀಯತೆಯನ್ನು ಸಮರ್ಥಿಸುತ್ತವೆ ಮತ್ತು ಮಹಿಳೆಗೆ ತೊಂದರೆಯುಂಟು ಮಾಡುತ್ತದೆ” ಎಂದು ಬೃಂದಾ ಕಾರಟ್ ಸಿಜೆಐ ರವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
“ನ್ಯಾಯಾಲಯದ ಈ ಟಿಪ್ಪಣಿಗಳು ನ್ಯಾಯಕ್ಕಾಗಿ ಮಹಿಳೆಯರ ಹೋರಾಟಕ್ಕೆ ಹಿನ್ನಡೆ ಉಂಟು ಮಾಡುವಂತವುಗಳು ಎಂದು, ಅತ್ಯಾಚಾರಗಳಿಗೆ ಬಲಿಯಾದವರು ಮತ್ತು ಮತ್ತು ಅವರ ಹಕ್ಕುಗಳನ್ನು ಕುರಿತಂತೆ ಕಾನೂನುಗಳು ಮತ್ತು ಕಣ್ಣೋಟಗಳಲ್ಲಿ ಬದಲಾವಣೆಗಾಗಿ ಸಂಸತ್ತಿನ ಒಳಗೂ ಮತ್ತು ಹೊರಗೂ ನಡೆಯುತ್ತಿರುವ ಮಹಿಳಾ ಆಂದೋಲನಗಳ ಭಾಗವಾಗಿರುವ ನಾನು ನಂಬಿದ್ದೇನೆ” ಎನ್ನುತ್ತ ಬೃಂದಾ ಕಾರಟ್ ಅವರು ತನ್ನ ಪತ್ರವನ್ನು ಈ “ಟಿಪ್ಪಣಿಗಳನ್ನು ಮತ್ತು ನಿರ್ಧಾರಗಳನ್ನು ಹಿಂತೆಗೆದುಕೊಳ್ಳಬೇಕೆಂಬ ಒಂದು ಕೋರಿಕೆ ಎಂಬುದಾಗಿ ಪರಿಗಣಿಸಬೇಕು” ಎಂದು ಮನವಿ ಮಾಡಿಕೊಳ್ಳುತ್ತ ದೇಶದ ಸರ್ವೋಚ್ಚ ನ್ಯಾಯಾಲಯದ ಅಧಿಕಾರ ಮತ್ತು ಶಕ್ತಿಯನ್ನು ಲೈಂಗಿಕ ದಾಳಿಗೆ ಒಳಗಾಗಿರುವವರಿಗೆ, ಅದರಲ್ಲೂ ವಿಶೇಷವಾಗಿ ಸಂತ್ರಸ್ತೆಯರು ಅಪ್ರಾಪ್ರವಯಸ್ಕರಾಗಿದ್ದಾಗ, ನೆರವಾಗಲು ಬಳಸಲಾಗವುದೇ ಹೊರತು, ದಾಳಿಮಾಡಿದವರಿಗಲ್ಲ ಎಂದು ಮಹಿಳೆಯರು ಆಶಿಸುತ್ತಾರೆ ಎಂದು ದೇಶದ ಮುಖ್ಯ ನ್ಯಾಯಾಧೀಶರಿಗೆ ಹೇಳಿದ್ದಾರೆ.
ಹುಡುಗಿಗೆ ನಮ್ಮ ಪ್ರಾಚೀನ ಕಾನೂನುಗಳನ್ನು ಓದಿ ಅರ್ಥ ಮಾಡಿಕೊಳ್ಳುವಷ್ಟು ವಯಸ್ಸಾಗಿದೆ ಎಂದು ಆಶಿಸೋಣ-
ವ್ಯಂಗ್ಯಚಿತ್ರ: ಆರ್. ಪ್ರಸಾದ್, ಇಕನಾಮಿಕ್ ಟೈಮ್ಸ್
ಸಿಜೆಐ ಟಿಪ್ಪಣಿಗಳು ಕ್ಷೋಭೆ ಉಂಟುಮಾಡುವಂತವು-ಎಐಡಿಡಬ್ಲ್ಯುಎ
“ನ್ಯಾಯಾಂಗ ವ್ಯವಸ್ಥೆಯನ್ನು ಲಿಂಗ ಸಂವೇದಿಯಾಗಿಸಬೇಕಾಗಿದೆ”
ಭಾರತದ ಮುಖ್ಯ ನ್ಯಾಯಾಧೀಶರ ಈ ಟಿಪ್ಪಣಿಗಳ ಬಗ್ಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘ(ಎಐಡಿಡಬ್ಲ್ಯುಎ) ಆಳವಾದ ಕ್ಷೋಭೆಯನ್ನು ವ್ಯಕ್ತಪಡಿಸಿದೆ.
ದೇಶದಲ್ಲಿ ಹಲವು ಅತ್ಯಾಚಾರ ಪ್ರಕರಣಗಳಲ್ಲಿ ನ್ಯಾಯಾಧೀಶರುಗಳು ಕಾನೂನಿನ ಪ್ರಕಾರ ಮುಂದುವರೆಯುವ ಬದಲು ಅತ್ಯಾಚಾರಿಗೆ ಸಂತ್ರಸ್ತೆಯನ್ನು ಮದುವೆಯಾಗುವಂತೆ ಕೇಳುವುದು ಕಂಡು ಬರುತ್ತಿದೆ. ಈ ನಿರ್ದಿಷ್ಟ ಪ್ರಕರಣದಲ್ಲಿ ಮುಂಬೈ ಹೈಕೋರ್ಟ್(ಔರಂಗಾಬಾದ್ ಪೀಠ) ಅರ್ಜಿದಾರ ಮತ್ತು ಆತನ ಕುಟುಂಬದವರು ಎಷ್ಟು ಪ್ರಭಾವಿಗಳೆಂದರೆ, ಆ ಹುಡುಗಿ ಮತ್ತು ಆಕೆಯ ತಾಯಿಯಿಂದ ಅರ್ಜಿದಾರ ಮತ್ತು ಸಂತ್ರಸ್ತೆ ಪರಸ್ಪರ ಸಂಬಂಧವಿಟ್ಟಿಕೊಂಡಿದ್ದರು ಮತ್ತು ಅಕೆಯ ಒಪ್ಪಿಗೆಯಿಂದಲೇ ಸಂಭೋಗ ನಡೆದಿತ್ತು ಎಂದು 500 ರೂ. ಸ್ವಾಂಪ್ ಪೇಪರಿನ ಮೇಲೆ ಬರೆಸಿಕೊಂಡಿದ್ದರು ಎಂದು ಗಮನಿಸಿರುವುದಾಗಿಯೂ ವರದಿಯಾಗಿದೆ. ಅದು ಅತ್ಯಾಚಾರಿಯ ಕೃತ್ಯಗಳನ್ನು ‘ಅಸಹ್ಯಕರ’ ಎನ್ನುತ್ತ ಆತನ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು. ಸುಪ್ರಿಂ ಕೋರ್ಟ್ ಆತನಿಗೆ ಸಾಮಾನ್ಯ ಜಾಮೀನು ಅರ್ಜಿ ಸಲ್ಲಿಸಲು ಸಮಯ ಕೊಡಬಾರದಾಗಿತ್ತು ಎಂದು ಎಐಡಿಡಬ್ಲ್ಯುಎ ಖೇದ ವ್ಯಕ್ತಪಡಿಸಿದೆ.
ಅತ್ಯಾಚಾರದ ಪ್ರಕರಣಗಳಲ್ಲಿ ಮದುವೆಯನ್ನು ಒಂದು ಪರಿಹಾರವಾಗಿ ಸೂಚಿಸುವುದು ಸಂಪೂರ್ಣ ತಪ್ಪು. ಇದು ಸಂತ್ರಸ್ತೆ ಎದುರಿಸಿದ ಹಿಂಸಾಚಾರ ಮತ್ತು ಮಾನಸಿಕ ಆಘಾತವನ್ನು ಕಡಿಮೆಗೊಳಿಸಬಹುದಷ್ಟೇ, ಅತ್ಯಾಚಾರವನ್ನು ಎಂದೂ ಕ್ಷಮಿಸಲಾಗದು ಅಥವ ಕಾನೂನುಬದ್ಧಗೊಳಿಸಬಾರದು. ಅತ್ಯಾಚಾರಿಗೇ ಮದುವೆ ಮಾಡಿದರೆ ಆಕೆಯ ಮಾನವನ್ನು ಉಳಿಸಿದಂತಾಗುತ್ತದೆ ಎಂಬುದು ಆಕೆಯ ಮೇಲೆ ಮತ್ತಷ್ಟು ಹಿಂಸಾಚಾರ ಎಸಗುವ ಅತ್ಯಂತ ಪ್ರತಿಗಾಮಿ ವಿಚಾರ ಎಂದು ಎಐಡಿಡಬ್ಲ್ಯುಎ ಹೇಳಿದೆ.
ವೈವಾಹಿಕ ಸಂಬಂಧದ ಒಳಗೂ ಅತ್ಯಾಚಾರ ಎಂದಾದರೂ ಸಂಭವಿಸುತ್ತದೆಯೇ ಎಂಬ ಸಿಜೆಐ ರವರ ಪ್ರಶ್ನೆಯೂ ಅತ್ಯಂತ ಕ್ಷೋಭೆ ಉಂಟುಮಾಡುವಂತದ್ದು ಎಂದು ಅದು ಖೇದ ವ್ಯಕ್ತಪಡಿಸಿದೆ. ಇಂತಹ ಅತ್ಯಾಚಾರವನ್ನು ಭಾರತೀಯ ದಂಡ ಸಂಹಿತೆ(ಐಪಿಸಿ)ಯ 376ನೇ ವಿಭಾಗದ ಅಡಿಯಲ್ಲಿ ಅಪರಾಧ ಎಂದು ಪರಿಗಣಿಸಬೇಕು ಮತ್ತು ಅದನ್ನು ಐಪಿಸಿಯಲ್ಲಿ ಹೊರತುಪಡಿಸಿರುವದನ್ನು ತೆಗೆಯಬೇಕು ಎಂದು ಎಲ್ಲ ಮಹಿಳಾ ಸಂಘಟನೆಗಳು ಬಹಳ ವರ್ಷಗಳಿಂದ ಕೇಳುತ್ತ ಬಂದಿವೆ. ಇದನ್ನು 1983ರಷ್ಟು ಹಿಂದೆಯೇ ಐಪಿಸಿಯಲ್ಲಿ ಸೆಕ್ಷನ್ 498ಎ ಯನ್ನು ಸೇರಿಸುವ ಮೂಲಕ ಮತ್ತು ಮನೆಯೊಳಗಿನ ಹಿಂಸಾಚಾರದ ಕಾಯ್ದೆಯಲ್ಲಿ ಭಾಗಶಃ ಗುರುತಿಸಲಾಗಿದೆ.
ಭಾರತೀಯ ಅಪರಾಧಿಕ ನ್ಯಾಯ ವ್ಯವಸ್ಥೆಯ ಕೆಲವು ವಿಭಾಗಗಳಲ್ಲಿ ಇರುವ ಸಂಪ್ರದಾಯಶರಣ ಮತ್ತು ಪಿತೃ ಪ್ರಧಾನ ವ್ಯವಸ್ಥೆಯ ಭಾವನೆಗಳನ್ನು ಬುಡಸಹಿತ ಕಿತ್ತುಹಾಕಬೇಕಾಗಿದೆ ಮತ್ತು ಈ ವ್ಯವಸ್ಥೆಯನ್ನು ಲಿಂಗ ಸಂವೇದಿ ಯಾಗಿಸಬೇಕಾಗಿದೆ ಎಂದು ಎಐಡಿಡಬ್ಲ್ಯುಎ ಅಭಿಪ್ರಾಯ ಪಟ್ಟಿದೆ.
“ಮದುವೆ ಅತ್ಯಾಚಾರಕ್ಕೆ ಪರವಾನಿಗೆ ಎಂಬ ಸಂದೇಶ ನೀಡುತ್ತಿದ್ದಾರೆಯೇ?”
ಭಾರತದ ಮುಖ್ಯ ನ್ಯಾಯಾಧೀಶರು ತನ್ನ ಈ ಟಿಪ್ಪಣಿಗಳಿಗೆ ಕ್ಷಮೆ ಕೋರಬೇಕು ಮತ್ತು ತನ್ನ ಸ್ಥಾನದಿಂದ ಕೆಳಗಿಳಿಯಬೇಕು ಎಂದು 3500 ಪ್ರತಿಷ್ಠಿತ ನಾಗರಿಕರು ಮತ್ತು ಸಂಘಟನೆಗಳು ಅವರಿಗೆ ಒಂದು ಬಹಿರಂಗ ಪತ್ರದಲ್ಲಿ ಆಗ್ರಹಿಸಿವೆ.
“ಇದು ಭಾರತದಲ್ಲಿ ನ್ಯಾಯ ಎಂಬುದು ಮಹಿಳೆಯರಿಗೆ ಒಂದು ಸಂವಿಧಾನಿಕ ಹಕ್ಕು ಅಲ್ಲ ಎಂಬ ಸಂದೇಶವನ್ನು ಸುಪ್ರಿಂ ಕೋರ್ಟಿನ ಮುಖ್ಯ ನ್ಯಾಯಾಧೀಶರ ಅತ್ಯುನ್ನತ ಹುದ್ದೆಯಿಂದ ಇತರ ನ್ಯಾಯಾಲಯಗಳಿಗೆ, ನ್ಯಾಯಾಧೀಶರುಗಳಿಗೆ, ಪೋಲೀಸ್ ಮತ್ತು ಇತರ ಕಾನೂನು ಜಾರಿ ಸಂಸ್ಥೆಗಳಿಗೆ ಕಳಿಸುತ್ತದೆ. ಹುಡುಗಿಯರು ಮತ್ತು ಮಹಿಳೆಯರನ್ನು ಮತ್ತಷ್ಟು ಬಾಯಿಮುಚ್ಚಿಸಲು ಇದು ದಾರಿ ಮಾಡಿಕೊಡುತ್ತದೆ. ಅತ್ಯಾಚಾರಿಗಳಿಗೆ ಇದು ಮದುವೆ ಎಂಬುದು ಅತ್ಯಾಚಾರಕ್ಕೆ ಒಂದು ಪರವಾನಿಗೆ, ಇಂತಹ ಪರವಾನಿಗೆ ಪಡೆದು ಅವರು ತಮ್ಮ ದುಷ್ಕೃತ್ಯಗಳನ್ನು ನಿರಪರಾಧೀಕರಿಸಬಹುದು ಮತ್ತು ಕಾನೂನುಬದ್ಧಗೊಳಿಸಬಹುದು ಎಂಬ ಸಂದೇಶವನ್ನು ಕಳಿಸುತ್ತದೆ” ಎಂದು ಈ ಬಹಿರಂಗಪ ತ್ರದಲ್ಲಿ ಹೇಳಲಾಗಿದೆ.
ಅನಿ ರಾಜಾ, ಕವಿತಾ ಕೃಷ್ಣನ್, ಕಮಲಾ ಭಾಸಿನ್, ಮೀರಾ ಸಂಘಮಿತ್ರಾ, ಮೈಮುನ ಮೊಲ್ಲ, ಝಾಕಿಯಾ ಸೋಮನ್ ಮುಂತಾದವರು ಈ ಬಹಿರಂಗ ಪತ್ರಕ್ಕೆ ಸಹಿ ಮಾಡಿದ್ದಾರೆ.