ಆಟೋರಿಕ್ಷಾ ಗ್ಯಾಸ್ ಮೇಲಿನ ತೆರಿಗೆ ಕಡಿತಗೊಳಿಸಿ- ಮೀಟರ್ ದರ ಕಿ.ಮೀ. 16 ರೂಪಾಯಿಗೆ ಹೆಚ್ಚಿಸಲು ಎಆರ್‌ಡಿಯು ಪ್ರತಿಭಟನೆ

ಬೆಂಗಳೂರು: ನಗರದಲ್ಲಿ 2 ಲಕ್ಷ ಆಟೋ ಚಾಲಕರುಗಳಿದ್ದು, ಇವರನ್ನು ನಂಬಿಕೊಂಡು ಅವರ ಕುಟುಂಬಗಳು ಮತ್ತು ಇತರೆ ಅವಲಂಬಿತರು ಸೇರಿ ಸುಮಾರು 10 ಲಕ್ಷ ಕುಟುಂಬಗಳು ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ದಿನನಿತ್ಯದ ಜೀವನ ನಿರ್ವಹಣೆಯೇ ಕಷ್ಟಕರವಾಗಿದೆ ಸರ್ಕಾರಗಳಿಂದ ಮಾತ್ರ ಯಾವುದೇ ಸೌಲಭ್ಯಗಳು ಇಲ್ಲವಾಗಿದೆ, ಸತತ ಬೆಲೆ ಏರಿಕೆಗಳಿಂದಾಗಿ ಚಾಲಕರ ಬದುಕು ಕಷ್ಟಕರವಾಗಿದೆ ಎಂದು ಖಂಡಿಸಿ ಸಿಐಟಿಯು ಬೆಂಬಲಿ ಆಟೋರಿಕ್ಷಾ ಡ್ರೈವರ‍್ಸ್‌ ಯೂನಿಯನ್‌(ಎಆರ್‌ಡಿಯು)ನ ವತಿಯಿಂದ ಪ್ರತಿಭಟನೆ ನಡೆಸಿದ್ದಾರೆ.

ಇದನ್ನು ಓದಿ: ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಳ: ಡಿಸೆಂಬರ್‌ 1ರಿಂದ ಅನ್ವಯ

ನೆನ್ನೆಯಷ್ಟೇ(ನವೆಂಬರ್ 08) ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಕಛೇರಿಯಿಂದ ಆಟೋರಿಕ್ಷಾ ಮೀಟರ್ ದರವನ್ನು 1 ಕಿ.ಮೀ.ಗೆ 13 ರಿಂದ 15 ರೂ.ಗಳಿಗೆ ಹಾಗೂ ಕನಿಷ್ಠ ದರವನ್ನು 2 ಕಿ.ಮೀ.ಗೆ 30 ರೂ. ಹೆಚ್ಚಳ ಮಾಡಿ ಸರ್ಕಾರ ಆದೇಶ ಮಾಡಿರುವುದನ್ನು‌ ಎಆರ್‌ಡಿಯು ಸಂಘ ಸ್ವಾಗತ ಮಾಡಿದೆ. ಪ್ರಾಧಿಕಾರದ ಕೈಗೊಂಡ ಕೆಲವು ನಿರ್ಧಾರಗಳು ಚಾಲಕರ ಹಿತಕ್ಕೆ ಪೂರಕವಾಗಿಲ್ಲ ಎಂದು ಸಂಘಟನೆ ಆರೋಪಿಸಿದೆ.

ಈ ಹಿನ್ನೆಲೆಯಲ್ಲಿ ಕೆಲವು ನಿರ್ದಿಷ್ಠ ಬೇಡಿಕೆಗಳನ್ನು ಇಟ್ಟುಕೊಂಡು ಎಆರ್‌ಡಿಯು ಸಂಘಟನೆಯು ನಗರದ ಕೆಂಪೇಗೌಡ ರಸ್ತೆಯಲ್ಲಿರುವ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಪ್ರತಿಭಟನೆಯನ್ನು ನಡೆಸಿ ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸಿದ್ದಾರೆ.

2020ರ ಫೆಬ್ರವರಿ ತಿಂಗಳಲ್ಲಿನಿಂದಲೂ ಸತತವಾಗಿ ಹೋರಾಟಗಳನ್ನು ನಡೆಸುವ ಮೂಲಕ ಮನವಿ ಪತ್ರವನ್ನು ನೀಡಿ ಆಟೋ ಮೀಟರ್ ದರವನ್ನು ಹೆಚ್ಚಳ ಮಾಡುವಂತೆ ಕೇಳಲಾಗಿದ್ದರೂ ಸಹ ಪದೇ ಪದೇ ಮೀಟರ್‌ ದರ ಏರಿಕೆ ಮಾಡುವುದನ್ನು ಮುಂದೂಡುತ್ತಾ ಬರಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಆಟೋ ಗ್ಯಾಸ್ ಈಗಿನ ಬೆಲೆ 66 ರೂ.ಗಳು ಆಗಿರುತ್ತದೆ. ಸುಮಾರು 20 ರೂ.ಗಳಷ್ಟು ಹೆಚ್ಚಳವಾಗಿರುತ್ತದೆ. ನಿಗದಿತ ಮೀಟರ್‌ ದರ ಏರಿಕೆ ಮಾಡಿ ಈಗಾಗಲೇ 9 ವರ್ಷಗಳು ಕಳೆದಿರುತ್ತದೆ. ಈ ಕಾರಣದಿಂದ ಎಲ್ಲಾ ಬೆಲೆಗಳು ಗಗನಕ್ಕೇರಿವೆ. ಈಗ ಏರಿಸಿರುವ ದರ ಪಟ್ಟಿಯು ಸಾಕಾಗುವುದಿಲ್ಲ. ಆದ ಕಾರಣ ಬೆಂಗಳೂರು ನಗರದಲ್ಲಿ 1 ಕಿ.ಮೀ. 16 ರೂ., ಕನಿಷ್ಠ ದರ 1.8 ಕಿ.ಮೀ.ಗೆ 30 ರೂ. ಹೆಚ್ಚಳ ಮಾಡಬೇಕೆಂದು ಎಆರ್‌ಡಿಯು ಸಂಘಟನೆ ಆಗ್ರಹಿಸಿತು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡೀಸೆಲ್ ಮತ್ತು ಪೆಟ್ರೋಲ್‌ಗಳ ಮೇಲೆ ತಮ್ಮ ಪಾಲಿನ ತೆರಿಗೆಯನ್ನು ಕಡಿತಗೊಳಿಸಿರುತ್ತಾರೆ. ಆದರೆ, ಆಟೋ ಗ್ಯಾಸ್ ಮೇಲಿನ ತಮ್ಮ ಪಾಲಿನ ತೆರಿಗೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಡಿತಗೊಳಿಸದೆ ಚಾಲಕರ ಬದುಕಿಗೆ ಅನ್ಯಾಯವೆಸಗಿದೆ ಎಂದು ಎಆರ್‌ಡಿಯು ಸಂಘದ ಕಾರ್ಯಕರ್ತರು ಆಗ್ರಹಿಸಿದರು.

ಕೇಂದ್ರ ಸರ್ಕಾರ ಬೆಲೆ ಏರು ಇಳಿತಗಳಿಗೆ ಅನುಸಾರವಾಗಿ ಆಟೋ ಗ್ಯಾಸ್‌ ದರವನ್ನು ಸಹ ಪ್ರತಿ ತಿಂಗಳು ಏರಿಕೆ ಮಾಡುತ್ತಿದೆ. ಇದರ ಭಾಗವಾಗಿ ಬೆಂಗಳೂರು ನಗರದಲ್ಲಿ ಆಟೋ ಎಲ್‌ಪಿಜಿ ಇಂಧನದ ಈಗಿನ ಬೆಲೆ (ನವೆಂಬರ್ 2021) ರೂ.66 ಕ್ಕೆ ಹೆಚ್ಚಳವಾಗಿದೆ. ಈಗಾಗಲೇ, ಸಂಚಾರಿ ನಿಯಮ ಉಲ್ಲಂಘನೆಗಳಿಗೆ ದುಬಾರಿ ದಂಡ, ಆಹಾರ ಪದಾರ್ಥಗಳ ಬೆಲೆ ಏರಿಕೆ, ಹೊಸ ಆಟೋರಿಕ್ಷಾಗಳ ಖರೀದಿ ಸೇರಿದಂತೆ ಬಿಡಿ ಭಾಗಗಳು, ಇತ್ಯಾದಿ ಎಲ್ಲಾ ವಸ್ತುಗಳು ದುಬಾರಿಯಾಗಿವೆ. ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸದ ಖರ್ಚು, ದುಬಾರಿ ಬಡ್ಡಿಯಿಂದಾಗಿ ಚಾಲಕರು ಬದುಕು ಸಾಗಿಸುವುದೇ ಕಷ್ಟವಾಗಿದೆ ಎಂದು ಎಆರ್‌ಡಿಯು ಸಂಘಟನೆ ಆರೋಪಿಸಿದೆ.

ಆಟೋರಿಕ್ಷಾಗಳಿಗೆ ರಹದಾರಿ ಪತ್ರದಲ್ಲಿ ಸಂಚಾರ ನಿಯಮದ ಪ್ರಕಾರ ಬಿಬಿಎಂಪಿ ವ್ಯಾಪ್ತಿ ಎಂದು ನಿಗದಿಗೊಳಿಸಲಾಗಿದೆ. ಬೆಂಗಳೂರು ನಗರ ವಿಸ್ತರಣೆಯಾಗಿ 198 ವಾರ್ಡ್‌ಗಳಿಂದ 243 ವಾರ್ಡುಗಳಿಗೆ ಹೆಚ್ಚಿಸಿ ಸರ್ಕಾರ ಆದೇಶ ಮಾಡಿದೆ. ಈ ಆಧಾರದಲ್ಲಿ ನಗರದ ಕೇಂದ್ರ ಭಾಗದಿಂದ 30 ಕಿ.ಮೀ.ವರೆಗೂ ಹಾಗೂ ಬಿಎಂಆರ್‌ಡಿಎ ವ್ಯಾಪ್ತಿಯವರೆಗೂ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೆ, ಚಾಲಕರು ಅಥವಾ ಅವರ ಕುಟುಂಬಗಳು ಪ್ರಯಾಣಿಕರು ತಮ್ಮ ಊರುಗಳಿಗೆ ಹೋಗಿ-ಬರಲು ಆಟೋರಿಕ್ಷಾಗಳಿಗೆ ತಾತ್ಕಾಲಿಕ ರಹದಾರಿ ಪತ್ರ ನೀಡಬೇಕೆಂದು ಪ್ರತಿಭಟನೆಯ ಸಂದರ್ಭದಲ್ಲಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *