ಮಂಗಳೂರು: ಫಾಸಿಲ್ ಕೊಲೆ ಪ್ರಕರಣ ಹಾಗು ವಿವಿಧ ಕ್ರಿಮಿನಲ್ ಪ್ರಕರಣಗಳ ಆರೋಪಿ, ಸಂಘಪರಿವಾರದ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಬರ್ಬರ ಕೊಲೆ, ಆ ನೆಪದಲ್ಲಿ ಸಂಘಪರಿವಾರ ಬಂದ್ ಗೆ ಕರೆ ನೀಡಿ ಇರಿತ, ಕಲ್ಲು ತೂರಾಟದ ಮೂಲಕ ಹಿಂಸಾಚಾರಕ್ಕೆ ಪ್ರಚೋದನೆ ನೀಡಿರುವುದು, ಎರಡನ್ನೂ ಸಿಪಿಐ(ಎಂ) ದ.ಕ. ಜಿಲ್ಲಾ ಸಮಿತಿ ಬಲವಾಗಿ ಖಂಡಿಸಿದೆ. ಜಿಲ್ಲೆಯ ಜನತೆ ಧರ್ಮದ ಮುಖವಾಡದ ರಾಜಕೀಯ ಪ್ರೇರಿತ ಪ್ರಚೋದನೆಗಳಿಗೆ ಬಲಿಯಾಗದೆ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದೆ.
ಈ ಕುರಿತು ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಪತ್ರಿಕಾ ಪ್ರಕಟಣೆ ನೀಡಿದ್ದೂ, ಕಳೆದ ಒಂದೆರಡು ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ಸೌಹಾರ್ದತೆ ಕದಡುವ ಹಲವು ಘಟನೆಗಳು ವ್ಯವಸ್ಥಿತವಾಗಿ ನಡೆದಿವೆ. ಜಿಲ್ಲಾಡಳಿತದ ವೈಫಲ್ಯ, ಸೋಮಾರಿತನವೂ ಸೇರಿಕೊಂಡು ಅದೀಗ ಸ್ಪೋಟಕ ಸ್ಥಿತಿಗೆ ತಲುಪಿದೆ. ದಕ್ಷಿಣ ಕನ್ನಡ ಜಿಲ್ಲೆ ಪ್ರತೀಕಾರದ ಹೆಸರಿನ ಮತೀಯ ಕೊಲೆಗಳಿಗೆ ದಶಕದಿಂದ ಕುಖ್ಯಾತಗೊಂಡಿದೆ ಎಂದರು.
ಸುಹಾಸ್ ಶೆಟ್ಟಿ ಹತ್ಯೆ ಆ ಸರಣಿಗೆ ಹೊಸ ಸೇರ್ಪಡೆ. ಹತ್ತಾರು ಸಂಖ್ಯೆಯಲ್ಲಿ ನಡೆದಿರುವ ಇಂತಹ ಸರಣಿ ಕೊಲೆಗಳು ದ.ಕ. ಜಿಲ್ಲೆಯ ರಾಜಕೀಯ, ಸಾಂಸ್ಕೃತಿಕ, ಆರ್ಥಿಕ ಕ್ಷೇತ್ರಗಳನ್ನು ಜರ್ಜರಿತಗೊಳಿಸಿದೆ ಎಂದು ಹೇಳಿದರು.
ಪರಂಗಿಪೇಟೆ ದಿಗಂತ್ ನಾಪತ್ತೆ ಪ್ರಕರಣ, ಕುತ್ತಾರ್ ಕೊರಗಜ್ಜನ ಕ್ಷೇತ್ರದಲ್ಲಿ ದ್ವೇಷ ಭಾಷಣದ ಸಂದರ್ಭದಲ್ಲಿ ಜಿಲ್ಲಾಡಳಿತ ಸರಿಯಾದ ಕಾನೂನು ಕ್ರಮಗಳನ್ನು ಕೈಗೊಂಡಿದ್ದರೆ ಪರಿಸ್ಥಿತಿ ಹತೋಟಿ ಮೀರುತ್ತಿರಲಿಲ್ಲ. ಆ ಸಂದರ್ಭ ಉಸ್ತುವಾರಿ ಸಚಿವರು ಸೇರಿದಂತೆ ಸರಕಾರದ ಆಯಕಟ್ಟಿನ ಜಾಗದಲ್ಲಿ ಇದ್ದವರೆ ಕಾನೂನಾತ್ಮಕ ಕ್ರಮಗಳಿಗೆ ಹಿಂದೇಟು ಹಾಕಿದ್ದು ಮುಂದಕ್ಕೆ ಹಲವು ಅಹಿತಕರ ಬೆಳವಣಿಗೆಗಳಿಗೆ ದಾರಿಯಾಯ್ತು. ಅದೀಗ ಕುಡುಪು ಗುಂಪು ಹತ್ಯೆ, ಸುಹಾಸ್ ಶೆಟ್ಟಿಯ ಹತ್ಯೆಯ ಘಟನೆಗಳವರೆಗು ದಾರಿ ಮಾಡಿಕೊಟ್ಟಿತು ಎಂದು ಸಿಪಿಐ(ಎಂ) ಆಪಾದಿಸಿದೆ.
ಇದನ್ನೂ ಓದಿ: ನನಗೂ ಜೀವ ಬೆದರಿಕೆ ಕರೆ ಬಂದಿದೆ: ಸಿಎಂ ಸಿದ್ದರಾಮಯ್ಯ
ಸುಹಾಸ್ ಕೊಲೆ ಪ್ರಕರಣವನ್ನು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಿ ಅದರ ಹಿಂದಿನ ಹುನ್ನಾರಗಳನ್ನು ಬಯಲಿಗೆಳೆಯಬೇಕಿದೆ. ಕೊಲೆ ನಡೆದ ರೀತಿ ನಾಗರಿಕರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಕ್ರಿಮಿನಲ್ ಗಳಿಗೆ ಕಾನೂನಿನ ಭಯವೇ ಇಲ್ಲ ಎಂಬುದನ್ನು ಎತ್ತಿ ತೋರಿಸಿದೆ. ಅದೇ ಸಂದರ್ಭ, ಈ ಕೊಲೆ ಪ್ರಕರಣವನ್ನು ಮುಂದಿಟ್ಟು ಸಂಘಪರಿವಾರ, ಬಿಜೆಪಿ ಶಾಸಕರುಗಳು ಕೋಮು ಸಂಘರ್ಷಕ್ಕೆ ಪ್ರಚೋದಿಸುತ್ತಿರುವುದು, ಬಲವಂತದ ಬಂದ್ ಆಚರಿಸಿರುವುದು, ಬಂದ್ ಸಂದರ್ಭ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಹಲವರ ಮೇಲೆ ಕೊಲೆ ಯತ್ನ ನಡೆದಿರುವುದು ಜನತೆಯಲ್ಲಿ ಭೀತಿ ಉಂಟು ಮಾಡಿದೆ ಎಂದರು.
ದಿಢೀರ್ ಬಂದ್, ಹಿಂಸೆಗಳು ಸಂಘಪರಿವಾರ ಜಿಲ್ಲೆಯಲ್ಲಿ ಕೋಮು ಸಂಘರ್ಷ ಉಂಟು ಮಾಡಲು ವ್ಯವಸ್ಥಿತ ಯತ್ನ ನಡೆಸುತ್ತಿರುವ ಅನುಮಾನ ಮೂಡಿಸುತ್ತಿದೆ. ಸುಹಾಸ್ ಕೊಲೆಯ ತರುವಾಯದ ಇರಿತ, ಕೊಲೆಯತ್ನ, ಕಲ್ಲು ತೂರಾಟದ ಘಟನೆಗಳನ್ನೂ ಸರಿಯಾದ ತನಿಖೆಗೆ ಒಳಪಡಿಸಬೇಕು, ಬಂದ್ ಗೆ ಕರೆ ನೀಡಿರುವವರನ್ನು ಈ ಘಟನೆಗಳಿಗೆ ಹೊಣೆಯಾಗಿಸಿ ಮೊಕದ್ದಮೆ ಹೂಡಬೇಕು ಎಂದು ಸಿಪಿಐಎಂ ಆಗ್ರಹಿಸಿದೆ.
ಜಿಲ್ಲಾಡಾಳಿತದ ಅಮೂಲಾಗ್ರ ಬದಲಾವಣೆಗೆ ಒತ್ತಾಯ
ಮಂಗಳೂರಿನಲ್ಲಿ ಕೋಮು ಸಂಘರ್ಷಕ್ಕೂ, ಕ್ರಿಮಿನಲ್ ಜಗತ್ತಿಗೂ ಅಂತರ್ಗತಃ ಸಂಬಂಧವಿದೆ. ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ವೈಫಲ್ಯ, ದಂಧೆಕೋರರೊಂದಿಗಿನ ಸಖ್ಯತೆಯಿಂದಾಗಿ ಪರಿಸ್ಥಿತಿ ಉಲ್ಬಣಗೊಂಡಿದೆ.
ಪೊಲೀಸ್ ಇಲಾಖೆ ಹಾಗು ಜಿಲ್ಲಾಡಳಿತದ ಆಯಕಟ್ಟಿನ ಜಾಗದಲ್ಲಿರುವ ಆಧಿಕಾರಿಗಳನ್ನು ಬದಲಾಯಿಸಿ, ಪ್ರಾಮಾಣಿಕ, ಜನ ಸ್ನೇಹಿ ಅಧಿಕಾರಿಗಳನ್ನು ನೇಮಿಸುವ ಮೂಲಕ ಅಮೂಲಾಗ್ರ ಬದಲಾವಣೆಗಳನ್ನು ತರಬೇಕು ಎಂದು ಸಿಪಿಐ(ಎಂ) ದ. ಕ. ಜಿಲ್ಲಾ ಸಮಿತಿ ಆಗ್ರಹಿಸಿದೆ.
ಇದನ್ನೂ ನೋಡಿ: ಮೇ ದಿನದ ವಿಶೇಷ | ಕನಿಷ್ಠ ವೇತನಕ್ಕೆ ಯಾಕಿಷ್ಟು ವಿಳಂಬ – ಮೀನಾಕ್ಷಿ ಸುಂದರಂ Janashakthi Media