ಬೆಳ್ತಂಗಡಿ: ಧರ್ಮಸ್ಥಳ ಪಾಂಗಳ ಕ್ರಾಸ್ ಬಳಿ 06/08/2025 ರಂದು ಸಾಯಂಕಾಲ ಮಾಧ್ಯಮದವರ ಮೇಲೆ ಕೆಲ ದುಷ್ಕರ್ಮಿಗಳಿಂದ ನಡೆದ ಹಲ್ಲೆಯನ್ನು ಖಂಡಿಸಿ ಡಿ.ವೈ.ಎಫ್.ಐ ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮನವಿ ನೀಡಲಾಯಿತು.
ಸಂವಿಧಾನದ 4 ನೇ ಸ್ತಂಭದಂತಿರುವ ಮಾಧ್ಯಮ ವರದಿಗಾರರಾದ ಕುಡ್ಲ ರಾಂಪೇಜ್ ಅಜಯ್ ಅಂಚನ್, ಸಂಚಾರಿ ಸ್ಟುಡಿಯೋದ ಸಂತೋಷ್, ಯುನೈಟೆಡ್ ಮೀಡಿಯಾದ ಅಭಿಷೇಕ್ ಇವರುಗಳು ಮಾಡುತ್ತಿರುವ ಧರ್ಮಸ್ಥಳದ ಅಸಹಜ ಸಾವಿನ ಮತ್ತು ಅನಾಮಿಕನ ತಲೆಬುರುಡೆ ರಹಸ್ಯದ ವರದಿಯನ್ನು ಮಾಡುತ್ತಿರುವುದನ್ನು ಸಹಿಸದ ಕೆಲ ದುಷ್ಟರು ಹಲ್ಲೆ ನಡೆಸಿರುವುದು ಖಂಡನೀಯ ಎಂದು ತಾಲ್ಲೂಕ ಅಧ್ಯಕ್ಷೆ ಅದಿತಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಧರ್ಮಸ್ಥಳ | ನಾಲ್ಕು ಮಂದಿ ಸ್ವತಂತ್ರ ಪತ್ರಕರ್ತರ ಮೇಲೆ ಹಲ್ಲೆ
ಈ ಸ್ವತಂತ್ರ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದವರ ಮೇಲೆ ಅಲ್ಲಿ ಸೆರೆ ಸಿಕ್ಕ ವಿಡಿಯೋ ಸಾಕ್ಷಿಗಳನ್ನು ಸರಿಯಾಗಿ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ಅಪರಾಧಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಮತ್ತು ಪತ್ರಕರ್ತರಿಗೆ ಆದ ಎಲ್ಲಾ ರೀತಿಯ ನಷ್ಟಕ್ಕೆ ಪರಿಹಾರ ನೀಡಬೇಕು ಹಾಗೆಯೇ ಇನ್ನು ಮುಂದೆ ಯಾವುದೇ ರೀತಿಯ ಇಂತಹ ಸನ್ನಿವೇಶಗಳು ಜರಗದಂತೆ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.
ನಂತರ ಉಜಿರೆಯ ಬೆನಕ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿರುವ ವರದಿಗಾರರನ್ನು ಭೇಟಿಯಾಗಲು ಹೋದಾಗ ಅಲ್ಲಿ ಭದ್ರತೆಯ ಕಾರಣದಿಂದ ಭೇಟಿಗೆ ನಿರಾಕರಿಸಲಾಯಿತು. ಆದುದರಿಂದ ವೈದ್ಯಾಧಿಕಾರಿಯವರ ಬಳಿ ಅವರ ಆರೋಗ್ಯಕ್ಷೇಮ ವಿಚಾರಿಸಲಾಯಿತು ಎಂದು ಅದಿತಿ ಜನಶಕ್ತಿ ಮೀಡಿಯಾಗೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿ ಅಭಿಷೇಕ್, ಹಾಗೂ ಮುಖಂಡರಾದ ವಿನುಷರಮಣ, ನಜಿರ್ ಕಕ್ಕಿಂಜೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ನೋಡಿ: ಸ್ವತಂತ್ರ ಪತ್ರಕರ್ತರ ಮೇಲೆ ಹಲ್ಲೆ | ಸ್ಥಳದಲ್ಲಿ ನಡೆದ ಘಟನೆ ಬಗ್ಗೆ ಸತ್ಯ ಬಿಚ್ಚಿಟ್ಟ ರಜತ್ ಕಿಶನ್ |Janashakthi
