ಎಟಿಎಂ ನಲ್ಲಿ ಬ್ಯಾಂಕ್ ಮ್ಯಾನೇಜರ್ ಜ್ಯೋತಿ ಉದಯ್ ಮೇಲೆ ನಡೆದ ಪ್ರಕರಣ
ಬೆಂಗಳೂರು ಫೆ 03: 2013ರಲ್ಲಿ ಬೆಂಗಳೂರು ನಗರದ ಎನ್.ಆರ್. ಸ್ಕ್ವೇರ್ ನಲ್ಲಿರುವ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಮದುಕರ್ ರೆಡ್ಡಿಗೆ 12 ವರ್ಷ ಜೈಲು ಶಿಕ್ಷೆ ಆಗಿದೆ. ನಗರದ 65ನೇ ಸಿಸಿಎಚ್ ಕೋರ್ಟ್ ಮಧುಕರ್ ರೆಡ್ಡಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ನವೆಂಬರ್ 19, 2013ರ ಬೆಳಗ್ಗೆ ಎಟಿಎಂ ಗೆ ಹಣ ವಿತ್ ಡ್ರಾಗೆ ಬಂದಿದ್ದ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಮಹಿಳೆ ಜ್ಯೋತಿ ಉದಯ್ ಎನ್ನುವವರ ಮೇಲೆ ಆರೋಪಿ ಮಧುಕರ್ ಪ್ರಾಣಾಂತಿಕ ಹಲ್ಲೆ ನಡೆಸಿದ್ದ. ಹಲ್ಲೆಗೊಳಗಾಗಿದ್ದ ಜ್ಯೋತಿ ಆರು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಎಸ್.ಜೆ. ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕಾರ್ಪೋರೇಷನ್ ಬ್ಯಾಂಕ್ ಎಟಿಎಂ ನಲ್ಲಿ ನಡೆದಿದ್ದ ಈ ಘಟನೆ ಬೆಂಗಳೂರಿಗರನ್ನು ಬೆಚ್ಚಿ ಬೀಳುವಂತೆ ಮಾಡಿತ್ತು. ದೇಶ ಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು. ಆಗ ಎಟಿಎಂ ಗೆ ಸೆಕ್ಯೂರಿಟಿ ಗಾರ್ಡ್ ಗಳ ಸಂಖ್ಯೆಯನ್ನು ಬ್ಯಾಂಕುಗಳು ಹೆಚ್ಚಳ ಮಾಡಿದ್ದವು.
ಹಲ್ಲೆ ನಡೆಸಿ ಹಣದೊಡನೆ ಪರಾರಿಯಾಗಿದ್ದ ಆರೋಪಿ ಹಲವಾರು ವರ್ಷಗಳ ಕಾಲ ನಾಪತ್ತೆಯಾಗಿದ್ದ. ಆದರೆ ಫೆಬ್ರವರಿ 2017 ರಲ್ಲಿ ಮದನಪಲ್ಲಿ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು, ಬಾಡಿ ವಾರಂಟ್ ನೊಂದಿಗೆ ಆರೋಪಿಯನ್ನು ಬೆಂಗಳೂರಿಗೆ ಕರೆತಂದಿದ್ದ ಪೋಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನಾಲ್ಕು ವರ್ಷ ಕಾಲ ವಾದ ಆಲಿಸಿದ್ದ ನ್ಯಾಯಾಲಯ ಮಂಗಳವಾರದಂದು ಮಧುಕರ್ ರೆಡ್ಡಿ ಅಪರಾಧಿ ಎಂದು ತೀರ್ಪು ನೀಡಿ, 12 ವರ್ಷಗಳ ಕಾಲ ಶಿಕ್ಷೆಯನ್ನು ಪ್ರಕಟಿಸಿದೆ.
ಆತನಿಗೆ ಶಿಕ್ಷೆಯಾಗಿರುವುದು ಸಂತಸದ ವಿಚಾರ ಈಗಲೂ ಎಟಿಎಂ ನಲ್ಲಿ ಸರಿಯಾದ ಭದ್ರತೆಯಲ್ಲ, ಇಂತಹ ಘಟನೆಗಳು ಜರುಗದಂತೆ ಎಚ್ಚರಿಕೆಯನ್ನು ವಹಿಸುವ ಅಗತ್ಯತೆ ಇದೆ, ಹಾಗಾಗಿ ಹೆಚ್ಚಿನ ಭದ್ರತೆ ನೀಡುವತ್ತ ಬ್ಯಾಂಕುಗಳು, ಸರಕಾರಗಳು ಮತ್ತು ಪೊಲೀಸ್ ಸಿಬ್ಬಂದಿ ಗಮನ ಹರಿಸಬೇಕಿದೆ ಎಂದು ಸಾರ್ವಜನಿಕ ಅಭಿಪ್ರಾಯ ವ್ಯಕ್ತವಾಗಿದೆ.