ಲಿಂಗಸಗೂರು: ಅತಿಥಿ ಉಪನ್ಯಾಸಕರು ರಾಜ್ಯಾದ್ಯಂತ ಕಳೆದ 34 ದಿನಗಳಿಂದ ಶಾಂತಿಯುತವಾಗಿ ಹೋರಾಟ ಮುಂದುವರೆಸಿದ್ದಾರೆ. ಯುಜಿಸಿ ನಿಯಮಗಳ ಪ್ರಕಾರ ಖಾಯಂ ಉಪನ್ಯಾಸಕರಿಗೆ ನೀಡಲಾಗುತ್ತಿರುವ ಕೆಲಸದ ಗುರಿಗೆ ಸಮಾನವಾದ ಕೆಲಸವನ್ನು ಅತಿಥಿ ಉಪನ್ಯಾಸಕರಿಗೂ ನೀಡುವುದಾದರೆ, ಖಾಯಂ ಉಪನ್ಯಾಸಕರಿಗೆ ಸಮನಾದ ವೇತನ ಹಾಗೂ ಇತರ ಸವಲತ್ತುಗಳನ್ನು ಈ ಶಿಕ್ಷಕರಿಗೂ ನೀಡಬೇಕೆಂದು ಸರ್ಕಾರದ ಕರ್ತವ್ಯವಾಗಿದೆ.
ಅತಿಥಿ ಉಪನ್ಯಾಸರು ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಹೋರಾಟವನ್ನು ಬೆಂಬಲಿಸಿ ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್‌ಎಫ್‌ಐ), ಲಿಂಗಸಗೂರು ತಾಲೂಕು ಸಮಿತಿ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.
ಕಳೆದ ಬಾರಿ ನಡೆದ ಬೆಳಗಾವಿ ವಿಧಾನ ಮಂಡಲ ಅಧಿವೇಶನ ಅವಧಿಯಲ್ಲಿ ಅತಿಥಿ ಉಪನ್ಯಾಸರು ಪ್ರತಿಭಟನೆ ನಡೆಸಿದ್ದರು. ಅಂದು ರಾಜ್ಯ ಸರ್ಕಾರ ಕೆಲವು ಅಧಿಕಾರಿಗಳನ್ನು ಮಾತ್ರ ಒಳಗೊಂಡ ಸಮಿತಿಯನ್ನು ರಚಿಸಿದೆ. ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ್ ನೇತೃತ್ವದ ಸಮಿತಿಯಲ್ಲಿ ಅತಿಥಿ ಉಪನ್ಯಾಸಕರ ಪ್ರತಿನಿಧಿಗಳು ಯಾರೂ ಇರಲಿಲ್ಲ. ಈ ಸಮಿತಿಯ ಶಿಫಾರಸ್ಸುಗಳು ಶಿಕ್ಷಣದ ಗುಣಮಟ್ಟ, ಶಿಕ್ಷಕರ ಸಾಮರ್ಥ್ಯದ ಸದ್ಭಳಿಕೆ, ಶಿಕ್ಷರಿಗೆ ಖಾತರಿಪಡಿಸಬೇಕಾದ ಸೇವಾ ನಿಯಮಗಳು-ಕೆಲಸದ ಭದ್ರತೆ-ತರಬೇತಿ, ನಿಯಮಕಾಲದಲ್ಲಿ ವೇತನ ಪಾವತಿ, ಈ ಶಿಕ್ಷಕರಿಗೆ ನೀಡಬೇಕಾದ ಸಾಮಾಜಿಕ ರಕ್ಷಣಾ ಕಲ್ಯಾಣ ಯೋಜನೆಗಳು ಮುಂತಾದವುಗಳ ಬಗ್ಗೆ ಯಾವುದೇ ಅಧ್ಯಯನವನ್ನು ಮಾಡಿರುವುದಿಲ್ಲ. ಬದಲಾಗಿ ಅತಿಥಿ ಉಪನ್ಯಾಸಕರ ಮೇಲೆ ಅವೈಜ್ಞಾನಿಕ ಕೆಲಸದ ಹೊರೆಯನ್ನು ಹೇರುವ ಬೇಜವಾಬ್ದಾರಿ ಶಿಫಾರಸ್ಸನ್ನು ನೀಡಿರುತ್ತದೆ.
ಕುಮಾರ ನಾಯಕ್ ನೇತೃತ್ವದ ಸಮಿತಿ ಕೆಲಸದ ಹೊರೆಯನ್ನು ಹೆಚ್ಚಿಸಿ, ಈಗಾಗಲೇ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿರುವವರ ಸಂಖ್ಯೆಯನ್ನು ತೀವ್ರವಾಗಿ ಕಡಿತಗೊಳಿಸುವ ಉದ್ದೇಶವನ್ನು ಹೊಂದಿದೆ. ಕೆಲಸದ ಹೊರೆ ಹೆಚ್ಚು ಮಾಡಿ ವೇತನ ಹೆಚ್ಚಳದ ಭರವಸೆ ನೀಡುವುದು ನಿಜವಾಗಿಯೂ ಕೆಲಸದ ಅಭದ್ರತೆಗೆ ಕಾರಣವಾಗುವುದು ಮಾತ್ರವಲ್ಲದೆ, ಸರ್ಕಾರಕ್ಕೆ ಆಗುವ ವೆಚ್ಚವನ್ನು ಗಣನೀಯವಾಗಿ ಕಡಿತಗೊಳಿಸುವ ನೌಕರ ವಿರೋಧಿ ನೀತಿಯ ಆಧಾರದ ಏಕಮುಖ ಶಿಫಾರಸ್ಸು ಆಗಿರುತ್ತದೆ.
ಈಗಾಗಲೇ ಇರುವ ೧೪,೫೦೦ ಅತಿಥಿ ಉಪನ್ಯಾಸಕರಲ್ಲಿ ೭,೨೦೦ ಜನರನ್ನು ಕೆಲಸದಿಂದ ತೆಗೆಯಲಾಗುವುದು. ಜನವರಿ ೧೭ರಿಂದ ೧೫೦೦ ಉಪನ್ಯಾಸಕರ ಹುದ್ದೆಗಳನ್ನು ತುಂಬಲು ನೋಟಿಫಿಕೇಷನ್ ಮಾಡಲಾಗಿದೆ. ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುವ ಜನರಿಗೆ ಅವರ ಸೇವಾವಧಿಯ ಆಧಾರದಲ್ಲಿ ವಿಶೇಷ ಅವಕಾಶಗಳನ್ನು ನೀಡಿ ಖಾಯಂಗೊಳಿಸಬೇಕು. ಅತಿಥಿ ಉಪನ್ಯಾಸಕರ ಸೇವೆ ಖಾಯಂಗೆ ಕ್ರಮವಹಿಸದೆ, ಅವರ ಉದ್ಯೋಗವಂಚಿತರನ್ನಾಗಿ ಮಾಡುವ ಸರ್ಕಾರದ ಕ್ರಮವಾಗಿದೆ. ರಾಜ್ಯ ಸರ್ಕಾರದ ಶಿಕ್ಷಕ ವಿರೋಧಿ-ಶಿಕ್ಷಣ ವಿರೋಧಿ ನೀತಿಯನ್ನು ಎಸ್ಎಫ್ಐ ಲಿಂಗಸ್ಗೂರು ತಾಲೂಕು ಸಮಿತಿ ಉಗ್ರವಾಗಿ ಖಂಡಿಸಿದೆ.
ಪಶ್ಚಿಮ ಬಂಗಾಳ, ತ್ರಿಪುರ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿರುವ ಮಾದರಿಯಂತೆ ರಾಜ್ಯದಲ್ಲಿ ಅತಿಥಿ ಉಪನ್ಯಾಸಕರಿಗೆ ಪ್ರತ್ಯೇಕ `ಸೇವಾ ಭದ್ರತೆಯ ನಿಯಮಾವಳಿ’ಗಳನ್ನು ರಚಿಸಿ ಸೇವಾ ಭದ್ರತೆ, ರಜೆಗಳು, ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಸೇವಾ ಜೇಷ್ಠತೆಯ ಆಧಾರದಲ್ಲಿ ಖಾಯಂ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಬೇಕೆಂದು ಎಸ್‌ಎಫ್‌ಐ ಸಂಘಟನೆಯು ಆಗ್ರಹಿಸಿದೆ.
ಸರ್ಕಾರದ ಈ ನಿರ್ಧಾರವನ್ನು ಒಪ್ಪದೇ ತಮ್ಮ ಉದ್ಯೋಗದ ಹಕ್ಕಿಗಾಗಿ ಹೋರಾಟವನ್ನು ಮುಂದುವರೆಸುತ್ತಿರುವ ಅತಿಥಿ ಉಪನ್ಯಾಸಕರ ಹೋರಾಟವನ್ನು ಎಸ್‌ಎಫ್‌ಐ ಅಭಿನಂದಿಸಿ, ಬೆಂಬಲಿಸಿದೆ. ರಾಜ್ಯ ಸರ್ಕಾರ ಕೂಡಲೇ ಉದ್ಯೋಗದಿಂದ ಅತಿಥಿ ಉಪನ್ಯಾಸಕರನ್ನು ತೆಗೆಯುವುದು ಹಾಗೂ ೧೭೦೦ ಖಾಯಂ ಹುದ್ದೆಗಳಿಗೆ ಕರೆದಿರುವ ನೋಟಿಫಿಕೇಷನನ್ನು ರದ್ದುಗೊಳಿಸಿ, ಹಾಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವಾಖಾಯಮಾತಿಗೆ ಮೊದಲ ಆದ್ಯತೆ ಕೊಡಬೇಕೆಂದು ಎಸ್‌ಎಫ್‌ಐ ಒತ್ತಾಯಿಸಿದೆ.
ವರದಿ: ರಮೇಶ ವೀರಾಪೂರು