ಬೆಂಗಳೂರು: ಅತಿಥಿ ಉಪನ್ಯಾಸಕರಿಗೆ ಮಕರ ಸಂಕ್ರಾಂತಿ ಹಬ್ಬದ ಉಡುಗಡೆ ನೀಡಿರುವ ರಾಜ್ಯ ಸರ್ಕಾರ ವೇತನ ಹೆಚ್ಚಳ ಘೋಷಿಸಿದೆ. ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ ಎಂದು ಸಚಿವ ಸಿ.ಎನ್.ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ.
‘ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 5 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಸೇವೆ ಸಲ್ಲಿಸಿದ, ಯುಜಿಸಿ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರ ವೇತನವನ್ನು ₹32 ಸಾವಿರಕ್ಕೆ ಹೆಚ್ಚಿಸಲಾಗಿದೆ. 5 ವರ್ಷಕ್ಕಿಂತ ಕಡಿಮೆ ಅವಧಿಗೆ ಸೇವೆ ಸಲ್ಲಿಸಿದವರ ವೇತನ ₹30 ಸಾವಿರಕ್ಕೆ, 5 ವರ್ಷಕ್ಕಿಂತ ಹೆಚ್ಚಿನ ಅವಧಿ ಸೇವೆ ಸಲ್ಲಿಸಿದ್ದರೂ ಯುಜಿಸಿ ನಿಗದಿ ಪಡಿಸಿದ ಅರ್ಹತೆ ಇಲ್ಲದೇ ಇರುವವರ ವೇತನ ₹28 ಸಾವಿರಕ್ಕೆ ಏರಿಕೆ ಮಾಡಲಾಗಿದೆ’ ಎಂದು ಸಚಿವರು ತಿಳಿಸಿದ್ದಾರೆ.
ಅತಿಥಿ ಉಪನ್ಯಾಸಕರ ಕಾರ್ಯಭಾರ ಅವಧಿ 8 ರಿಂದ 10 ಗಂಟೆ ಇದ್ದುದನ್ನು 15 ಗಂಟೆಗಳಿಗೆ ಹೆಚ್ಚಿಸಲಾಗಿದೆ. ಉಪನ್ಯಾಸಕರ ಅವಧಿ ಸೆಮಿಸ್ಟರ್ ಬದಲು, ಒಂದು ಶೈಕ್ಷಣಿಕ ವರ್ಷಕ್ಕೆ ನಿಗದಿ ಮಾಡಲಾಗಿದೆ ಎಂದೂ ಅಶ್ವತ್ಥನಾರಾಯಣ ತಿಳಿಸಿದ್ದಾರೆ.