ಹಾವೇರಿ: ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಮುಷ್ಕರದಲ್ಲಿ ಭಾಗಿಯಾಗಿದ್ದು, ತರಗತಿಗಳು ನಡೆಯದೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಮಸ್ಯೆ ಎದುರಾಗಿದೆ. ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಸರ್ಕಾರವು ಕೂಡಲೇ ಈಡೇರಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡಬೇಕೆಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ದಿಢೀರ್ ಪ್ರತಿಭಟನೆ ನಡೆಸಿತು.
ನಗರದ ಜೆ.ಎಚ್.ಪಟೇಲ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಎಸ್‌ಎಫ್‌ಐ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರು ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಇಲ್ಲದಿದ್ದರೆ ರಾಜ್ಯದ ಎಲ್ಲಡೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಸ್‌ಎಫ್‌ಐ ಸಂಘಟನೆಯ ವಿದ್ಯಾರ್ಥಿಗಳು ಎಚ್ಚರಿಸಿದರು.
ಪ್ರತಿಭಟನೆ ಉದ್ದೇಶಿಸಿ ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ ʻʻರಾಜ್ಯ ಸರ್ಕಾರ ಕೂಡಲೇ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲೆಬೇಕು. ಅತಿಥಿ ಉಪನ್ಯಾಸಕರು ಇಲ್ಲದೆ ಇಂದಿನಿಂದ ಬಹುತೇಕ ತರಗತಿಗಳು ನಡೆದಿಲ್ಲ. ಇದರಿಂದಾಗಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಪಾಠವಿಲ್ಲದಂತಾಗಿದೆ. ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 14,447 ಹೆಚ್ಚು ಅತಿಥಿ ಉಪನ್ಯಾಸಕರು ಕಳೆದ 15-20 ವರ್ಷಗಳಿಂದ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ ಹಲವರು ಪಿ.ಎಚ್.ಡಿ., ಸೆಟ್ ಹಾಗೂ ನೆಟ್ ಪರೀಕ್ಷೆಗಳನ್ನು ಪಾಸಾಗಿದ್ದು, ಯುಜಿಸಿ ನಿಯಮಾವಳಿ ಪ್ರಕಾರ ವಿದ್ಯಾರ್ಹತೆ ಹೊಂದಿದದ್ದಾರೆ. ಇವರುಗಳನ್ನು ಕಾಯಂಗೊಳಿಸಲು ಸೂಕ್ತ ನಿಯಮಾವಳಿ ರೂಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕೆಂದುʼʼ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಸ್ಎಫ್ಐ ಮುಖಂಡರುಗಳಾದ ಹೊನ್ನಪ್ಪ ತಳವಾರ, ಗಗನ್ ದೀಪ್ ವಡ್ಡರ, ಯುವರಾಜ ಹಂಚಿನಮನಿ, ಅಭಿಶೇಕ್ ದಿವಾಕರ್, ಕಾಂತೇಶ್, ಆಕಾಶ್ ಬಾಸುರ್, ಪ್ರದೀಪ್ ಕುರಿಯವರು, ಚೇತನ ಮ್ಯಾಗೇರಿ, ವರುಣ, ಕಾವ್ಯ ಹನಗೊಡಿಮಠ, ಜಯಲಕ್ಷ್ಮಿ ಇಪ್ಪಿಕೊಪ್ಪ, ಸಂಗೀತಾ ಭಜಂತ್ರಿ, ಶಶಿಕಲಾ ಕೊರವರು, ಐಶ್ವರ್ಯ ಖಣದಮನಿ, ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.