ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಆರ್ಥಿಕ ಬೆಳವಣಿಗೆಯ ಜತೆಗೆ ಬಡತನವೂ ನಿಚ್ಚಳವಾಗಿ ಬೆಳೆಯುತ್ತದೆ. ಈ ಅಂಶದ ಬಗ್ಗೆ ಮಾರ್ಕ್ಸ್ ಹೀಗೆ ಹೇಳಿದ್ದಾರೆ: “ಒಂದು ಧ್ರುವದಲ್ಲಿ ಸಂಪತ್ತಿನ ಶೇಖರಣೆಯಾಗುವ ಸಮಯದಲ್ಲೇ, ಇನ್ನೊಂದು ಧ್ರುವದಲ್ಲಿ, ದುರವಸ್ಥೆ, ಯಮಯಾತನೆ, ಗುಲಾಮಗಿರಿ, ಅಜ್ಞಾನ, ಕ್ರೌರ್ಯ ಮತ್ತು ನೈತಿಕ ಅಧಃಪತನಗಳು ವಿರುದ್ಧ ಧ್ರುವದಲ್ಲಿ, ಅಂದರೆ ಯಾವ ವರ್ಗವು ತನ್ನ ಪರಿಶ್ರಮದ ಮೂಲಕವೇ ಬಂಡವಾಳವನ್ನು ಸೃಷ್ಟಿಸುತ್ತದೆಯೋ ಅದೇ ವರ್ಗದ ಕಡೆಯಲ್ಲಿ ಶೇಖರಣೆಗೊಳ್ಳುತ್ತವೆ” (ಬಂಡವಾಳ ಸಂಪುಟ-೧). ಈ ವರ್ಗದ ದುರವಸ್ಥೆಯ ಬಗ್ಗೆ ಇನ್ನೊಂದೆಡೆಯಲ್ಲಿ ಮಾರ್ಕ್ಸ್ ಹೀಗೆ ಹೇಳುತ್ತಾರೆ: “ಸರಕುಗಳನ್ನು ಉತ್ಪಾದಿಸುವ ಸಾಮರ್ಥ್ಯವುಳ್ಳ ಬಂಡವಾಳವು ಬೆಳೆದಂತೆಯೇ… ಕೆಲಸ ಬೇಕೆಂದು ಕೇಳಲು ಮೇಲೆತ್ತಿದ ದುಡಿಯುವ ತೋಳುಗಳ ದೃಶ್ಯ ಒಂದು ಅಡವಿಯಂತೆ ದಟ್ಟವಾಗುತ್ತ ಹೋಗುತ್ತದೆ, ಅದೇ ವೇಳೆಗೆ ಆ ತೋಳುಗಳು ತೆಳುವಾಗುತ್ತಾ ಹೋಗುತ್ತವೆ” (ಕೂಲಿ ಕಾರ್ಮಿಕ ಮತ್ತು ಬಂಡವಾಳ).
ಈ ವಿದ್ಯಮಾನಗಳನ್ನು ಭಾರತದ ಅನುಭವವೂ ಧೃಢೀಕರಿಸುತ್ತದೆ. ನವ ಉದಾರವಾದಿ ಅವಧಿಯಲ್ಲಿ ಬಂಡವಾಳವು ವೇಗವಾಗಿ ಮತ್ತು ಅಗಾಧವಾಗಿ ಶೇಖರಣೆಯಾಗಿದೆ. ಜಿಡಿಪಿಯು ತ್ವರಿತವಾಗಿ ಬೆಳೆದ ಕಾರಣದಿಂದ, ಈ ಅವಧಿಯನ್ನು ಭಾರತದ ಆರ್ಥಿಕ ಇತಿಹಾಸದಲ್ಲಿ ಹೊಸ ಶಕೆಯನ್ನು ಆರಂಭಿಸಿದ ಒಂದು ಹೊಸ ಯುಗವೆಂದೇ ಶ್ಲಾಘಿಸಲಾಗಿದೆ. ಆದರೆ, ಬಡತನದ ನಿಚ್ಚಳ ಗಾತ್ರವೂ ಈ ಯುಗದಲ್ಲೇ ಬೆಳೆದಿರುವುದೂ ವಾಸ್ತವವೇ. ವಸಾಹತುಶಾಹಿ ಆಳ್ವಿಕೆಯ ಕೊನೆಯ ಅರ್ಧ ಶತಮಾನದಲ್ಲಿ ಸಂಭವಿಸಿದ ತಲಾ ಆಹಾರ ಲಭ್ಯತೆಯ ವಿನಾಶಕಾರಿ ಕುಸಿತದ ನಂತರ ೧೯೯೧ರ ಹೊತ್ತಿಗೆ ತಲುಪಿದ್ದ ತಲಾ ಆಹಾರ ಲಭ್ಯತೆಯ ಉನ್ನತ ಮಟ್ಟವನ್ನು (ಈ ಮಟ್ಟವನ್ನು ಸಂಪೂರ್ಣವಾಗಿ ಸಮರ್ಪಕ ಎಂದು ಹೇಳದಿದ್ದರೂ), ೧೯೯೧ರ ನಂತರದ ಯಾವುದೇ ವರ್ಷದಲ್ಲಿ ಮತ್ತೆ ತಲುಪಲೇ ಇಲ್ಲ.
ಆಹಾರ ಲಭ್ಯತೆಯ ವಿನಾಶಕಾರಿ ಕುಸಿತದ ಅಂಶವನ್ನು ಆಹಾರ ಸೇವನೆಯ ದತ್ತಾಂಶಗಳು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಹೇಳುತ್ತವೆ. ೧೯೯೩-೯೪ರಲ್ಲಿ ಎನ್‌ಎಸ್‌ಎಸ್ ಸಂಸ್ಥೆಯು ನಡೆಸಿದ ಒಂದು ವಿಶಾಲ ಮಾದರಿ ಸಮೀಕ್ಷೆಯ ಪ್ರಕಾರ, ಗ್ರಾಮೀಣ ಪ್ರದೇಶದ ಬಡತನವನ್ನು ವ್ಯಾಖ್ಯಾನಿಸುವ ದಿನಂಪ್ರತಿ ೨೨೦೦ ಕ್ಯಾಲೋರಿ ಬಳಕೆಯ ಮಾನದಂಡದ ಪ್ರಕಾರ, ನವ ಉದಾರವಾದಿ ನೀತಿಗಳು ಜಾರಿಗೆ ಬಂದ ನಂತರದ ಮೊದಲ ವರ್ಷದಲ್ಲಿ (೧೯೯೩-೯೪ರಲ್ಲಿ), ದಿನಂಪ್ರತಿ ತಲಾ ೨೨೦೦ ಕ್ಯಾಲೋರಿ ಮೌಲ್ಯದ ಆಹಾರವನ್ನು ಪಡೆಯಲಾಗದ ಗ್ರಾಮೀಣ ಜನಸಂಖ್ಯೆಯ ಪ್ರಮಾಣವು ಶೇ.೫೮ರಷ್ಟಿತ್ತು. ೨೦೧೧-೧೨ರಲ್ಲಿ ನಡೆಸಿದ ಇನ್ನೊಂದು ಸುತ್ತಿನ ಇದೇ ಸಮೀಕ್ಷೆಯ ಪ್ರಕಾರ, ದಿನಂಪ್ರತಿ ತಲಾ ೨೨೦೦ ಕ್ಯಾಲೋರಿ ಮೌಲ್ಯದ ಆಹಾರವನ್ನು ಪಡೆಯಲಾಗದ ಗ್ರಾಮೀಣ ಜನಸಂಖ್ಯೆಯ ಪ್ರಮಾಣವು ಶೇ.೬೮ಕ್ಕೆ ಏರಿತ್ತು. ಅದೇ ರೀತಿಯಲ್ಲಿ, ನಗರ ಪ್ರದೇಶಗಳ ಬಡತನವನ್ನು ವ್ಯಾಖ್ಯಾನಿಸುವ ದಿನಂಪ್ರತಿ ತಲಾ ೨೧೦೦ ಕ್ಯಾಲೋರಿ ಬಳಕೆಯ ಮಾನದಂಡದ ಪ್ರಕಾರ, ದಿನಂಪ್ರತಿ ತಲಾ ೨೧೦೦ ಕ್ಯಾಲೋರಿ ಮೌಲ್ಯದ ಆಹಾರವನ್ನು ಪಡೆಯಲಾಗದ ನಗರ ಪ್ರದೇಶಗಳ ಜನಸಂಖ್ಯೆಯ ಪ್ರಮಾಣವು ೧೯೯೩-೯೪ರಲ್ಲಿ ಶೇ.೫೭ರಷ್ಟಿತ್ತು. ಈ ಪ್ರಮಾಣವು ೨೦೧೧-೧೨ರಲ್ಲಿ ಶೇ.೬೫ಕ್ಕೆ ಏರಿತ್ತು. ವರ್ಷ ೨೦೧೧-೧೨ರ ನಂತರದ ದತ್ತಾಂಶಗಳು ಲಭ್ಯವಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ, ನವ ಉದಾರವಾದಿ ಬಂಡವಾಳಶಾಹಿಯ ಅವಧಿಯಲ್ಲಿ, ನಿಚ್ಚಳ ಬಡತನದ ಪ್ರಮಾಣವು ಏರಿಕೆಯಾಗಿದೆ. ಅತ್ಯಂತ ಸರಳವಾಗಿ ಮತ್ತು ಸಹಜವಾಗಿ ಹಸಿವಿನ ರೂಪದಲ್ಲಿ ಪ್ರಕಟಗೊಳ್ಳುವ ಬಡತನವನ್ನು ಅಧಿಕೃತವಾಗಿ ವ್ಯಾಖ್ಯಾನಿಸುತ್ತಿದ್ದ ಕ್ಯಾಲೋರಿ ಬಳಕೆಯ ಮಾನದಂಡವು ಸರ್ಕಾರಕ್ಕೆ ಮುಜುಗರ ಉಂಟುಮಾಡುವವರೆಗೂ ಒಂದು ಅಧಿಕೃತ ಆಧಾರವಾಗಿತ್ತು. ಆದರೆ, ಈಗ ಅಪ್ರಿಯವಾದುದನ್ನು ಮರೆಮಾಚಿ ಚಂದಗೊಳಿಸಿದ ಚಿತ್ರವನ್ನು ತೋರಿಸಲು ಎಲ್ಲ ಬಗೆಯ ಕಪಟ ವ್ಯಾಖ್ಯಾನಗಳಿಗೆ ಆತುಕೊಳ್ಳಲಾಗುತ್ತಿದೆ.
ಬಡತನ ಹೆಚ್ಚುತ್ತಿರುವುದರ ವಾಸ್ತವಾಂಶವನ್ನು ಅಸಮಾನತೆಯ ಬಗ್ಗೆ ಲಭ್ಯವಿರುವ ಪುರಾವೆಗಳೂ ಸಮರ್ಥಿಸುತ್ತವೆ. ಥಾಮಸ್ ಪಿಕೆಟಿ ಮತ್ತು ಚಾನ್ಸೆಲ್ ಎಂಬ ಇಬ್ಬರು ಫ್ರೆಂಚ್ ಅರ್ಥಶಾಸ್ತ್ರಜ್ಞರು, ಭಾರತದಲ್ಲಿ ೧೯೨೨ರಲ್ಲಿ ಜಾರಿಗೆ ಬಂದ ಆದಾಯ ತೆರಿಗೆಯ ದತ್ತಾಂಶಗಳ ಆಧಾರದಲ್ಲಿ, ೨೦೧೩ರ ರಾಷ್ಟ್ರೀಯ ಆದಾಯದಲ್ಲಿ, ಭಾರತದ ಜನಸಂಖ್ಯೆಯ ಶೇ.೧ರಷ್ಟು ಮಂದಿಯು ಶೇ.೨೨ಪಾಲು ಹೊಂದಿದ್ದರು ಎಂದು ಅಂದಾಜು ಮಾಡಿದ್ದಾರೆ. ಅವರು ನಡೆಸಿದ ಈ ಅಧ್ಯಯನದ ಪ್ರಕಾರ, ೧೯೮೨ರಲ್ಲಿ, ರಾಷ್ಟ್ರೀಯ ಆದಾಯದ ಕೇವಲ ಶೇ.೬ರಷ್ಟು ಪಾಲು ಹೊಂದಿದ್ದ ಶೇ.೧ರಷ್ಟು ಮಂದಿಯ ಈ ಪಾಲು ೨೦೧೩ರಲ್ಲಿ ಅತ್ಯಧಿಕ ಮಟ್ಟ (ಶೇ.೨೨) ತಲುಪಿದೆ. ಈ ಇಬ್ಬರು ಅರ್ಥಶಾಸ್ತ್ರಜ್ಞರು ಬಳಸಿದ ವಿಧಾನದ ಬಗ್ಗೆ ಟೀಕೆ ಏನೇ ಇರಲಿ, ಅದರ ಫಲಿತಾಂಶವನ್ನಂತೂ ಅಲ್ಲಗಳೆಯುವಂತಿಲ್ಲ. ನವ ಉದಾರವಾದಿ ಬಂಡವಾಳಶಾಹಿ ಭಾರತದಲ್ಲಿ ಅಸಮಾನತೆಗಳು ಅದೆಷ್ಟು ತೀಕ್ಷ್ಣವಾಗಿ ಬೆಳೆದಿವೆ ಎಂದರೆ, ವಾಸ್ತವವಾಗಿ, ಬಡತನದ ಹೆಚ್ಚಳದಲ್ಲಿ ಪರಿಣಮಿಸಿವೆ.
ಜಿಡಿಪಿ ಬೆಳವಣಿಗೆಯೊಂದಿಗೆ ಬಡತನದ ಹೆಚ್ಚಳದ ಬಗ್ಗೆ ಬರೆದ ಅನೇಕ ಅಂಕಣಗಳು ಈ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಆದರೆ, ಈ ಅಂಶಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ಎರಡು ತಪ್ಪು ತೀರ್ಮಾನಗಳಿಗೆ ಬರಲಾಗುತ್ತಿದೆ. ಮೊದಲನೆಯದು, ಆರ್ಥಿಕ ಬೆಳವಣಿಗೆಯು ಬಡತನದ ಹೆಚ್ಚಳವನ್ನು ಉಂಟುಮಾಡಿದ ಪಕ್ಷದಲ್ಲಿ, ಬೆಳವಣಿಗೆಯು ಸ್ಥಗಿತಗೊಂಡಾಗ, ಬಡತನದ ಇಳಿಕೆಯಾಗದಿದ್ದರೂ ಕೊನೆಯ ಪಕ್ಷ ಬಡತನವು ಮತ್ತಷ್ಟು ಏರದೆ ಸ್ಥಗಿತಗೊಳ್ಳಬೇಕಾಗುತ್ತದೆ.
ಎರಡನೆಯದು, ಅಭಿವೃದ್ಧಿಯು ಪುನರಾರಂಭವಾದರೆ ಬಡತನ ಇಳಿಯುತ್ತದೆಯೇ? ಹೌದು ಎಂದು ಹೇಳುವ ಮನಸ್ಸಾಗುತ್ತದೆ. ಆದರೆ ನಿಜವಾಗಿ, ಇಳಿಯುವುದಿಲ್ಲ. ಏಕೆಂದರೆ ನವ ಉದಾರವಾದಿ ಬಂಡವಾಳಶಾಹಿಯು ಇಂದು ಎದುರಿಸುತ್ತಿರುವ ಬಿಕ್ಕಟ್ಟು ಕೇವಲ ಒಂದು ಆವರ್ತಕ ಬಿಕ್ಕಟ್ಟು ಮಾತ್ರವಲ್ಲ; ಬಂಡವಾಳಶಾಹಿಯು ತಲುಪಿರುವ ಇಡೀ ವ್ಯವಸ್ಥೆಗೆ ಮುಂದೆ ದಾರಿಗಾಣದಂತಾಗಿರುವ ಸಂರಚನಾತ್ಮಕ ಬಿಕ್ಕಟ್ಟು.
ಬಡತನದ ಹೆಚ್ಚಳವು ಯಾವ ನಿರ್ದಿಷ್ಟ ವಿಧಾನದ ಮೂಲಕ ನಡೆಯುತ್ತದೆ ಎಂಬುದು, ರೈತರೂ ಸೇರಿದಂತೆ ಕಿರು ಉತ್ಪಾದಕರ ಜೀವನೋಪಾಯವನ್ನು ಧೂಳೀಪಟಗೊಳಿಸುವ ಮತ್ತು ನಿರ್ಗತಿಕರಾದ ಅವರ ಪೈಕಿ ಹೆಚ್ಚಿನವರು ದುರ್ಲಭವಾಗಿರುವ ಉದ್ಯೋಗಗಳನ್ನು ಅರಸಿ ನಗರಗಳಿಗೆ ವಲಸೆ ಹೋಗುವ ಪ್ರಕ್ರಿಯೆಯು, ಮಾರ್ಕ್ಸ್ ಅದಾಗಲೇ ಹೇಳಿದ್ದ ರೀತಿಯಲ್ಲೇ ನಡೆಯುತ್ತಿದೆ. ಇಂತಹ ವಲಸಿಗರು ಮತ್ತು ಕಾರ್ಮಿಕ ವರ್ಗದ ಸ್ವಾಭಾವಿಕ ಹೆಚ್ಚಳದ ಒಂದು ಭಾಗವೂ ಸಹ, ಉದ್ಯೋಗ ದೊರೆಯದೆ, ಕಾರ್ಮಿಕರ ಮೀಸಲು ಪಡೆಯ (ದುರ್ಲಭವಾಗಿರುವ ಉದ್ಯೋಗಗಳನ್ನು ಈಗಾಗಲೇ ಕೆಲಸ ಮಾಡುತ್ತಿರುವವರೊಂದಿಗೆ ಹಂಚಿಕೊಳ್ಳುವ ಅರ್ಥದಲ್ಲಿ) ಗಾತ್ರವನ್ನು ಹೆಚ್ಚಿಸುತ್ತವೆ. ಈ ಕಾರಣದಿಂದಾಗಿ ಸಂಘಟಿತ ಕಾರ್ಮಿಕರ ಚೌಕಾಸಿಯ ಶಕ್ತಿಯೇ ಇಳಿಯುತ್ತದೆ. ಹಾಗಾಗಿ, ಅಸಮಾನತೆ ಮತ್ತು ಬಡತನದ ಪರಿಸ್ಥಿತಿಯು ಮತ್ತಷ್ಟು ಹದಗೆಡುತ್ತದೆ.
ಬಡತನದ ಹೆಚ್ಚಳದ ಬಗ್ಗೆ ಬರೆದ ಅನೇಕ ಅಂಕಣಗಳು ಈ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಹಾಗಾಗಿ, ಈ ಅಂಶವನ್ನು ವಿವರಿಸುವ ಅಗತ್ಯವಿಲ್ಲ. ಆದರೆ, ಈ ಅಂಶಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ಎರಡು ತಪ್ಪು ತೀರ್ಮಾನಗಳಿಗೆ ಬರಲಾಗುತ್ತಿದೆ. ಮೊದಲನೆಯದು, ಆರ್ಥಿಕ ಬೆಳವಣಿಗೆಯು ಬಡತನದ ಹೆಚ್ಚಳವನ್ನು ಉಂಟುಮಾಡಿದ ಪಕ್ಷದಲ್ಲಿ, ಬೆಳವಣಿಗೆಯು ಸ್ಥಗಿತಗೊಂಡಾಗ, ಬಡತನದ ಇಳಿಕೆಯಾಗದಿದ್ದರೂ ಕೊನೆಯ ಪಕ್ಷ ಬಡತನವು ಮತ್ತಷ್ಟು ಏರದೆ ಸ್ಥಗಿತಗೊಳ್ಳಬೇಕಾಗುತ್ತದೆ. ಈ ಊಹೆಯು ತಪ್ಪಾಗುತ್ತದೆ, ಏಕೆಂದರೆ, ಬೆಳವಣಿಗೆ ಮತ್ತು ಸ್ಥಗಿತತೆಗಳು ಬಡತನದ ಮೇಲೆ ಉಂಟುಮಾಡುವ ಪರಿಣಾಮಗಳು ಒಂದೇ ರೀತಿಯಲ್ಲಿರುವುದಿಲ್ಲ. ಬೆಳವಣಿಗೆಯು ಬಡತನವನ್ನು ವೃದ್ಧಿಸುತ್ತದೆ ಎಂದಾದರೆ, ಆಗ, ಬೆಳವಣಿಗೆ ಕುಂಠಿತವಾದರೆ ಅದಕ್ಕೂ ಹೆಚ್ಚಿನ ಮಟ್ಟದಲ್ಲಿ ಬಡತನವು ಹೆಚ್ಚಾಗುತ್ತದೆ.
ಆರ್ಥಿಕ ಬೆಳವಣಿಗೆಯು ಬಡತನದ ಹೆಚ್ಚಳವನ್ನು ಉಂಟುಮಾಡುತ್ತದೆ, ಹೇಗೆಂದರೆ, ಕಿರು ಉತ್ಪಾದಕರು ಮತ್ತು ರೈತರನ್ನು ನಿರ್ಗತಿಕರನ್ನಾಗಿಸುವ ಮೂಲಕ ಎಂಬುದನ್ನು ನಾವು ಈಗಾಗಲೇ ನೋಡಿದ್ದೇವೆ. ಅವರು ಭೂಮಿ ಅಥವಾ ಇತರ ಆಸ್ತಿಗಳನ್ನು ಕಳೆದುಕೊಳ್ಳುವ ಮೂಲಕ ಬಂಡವಾಳದ ಆದಿಮ ಶೇಖರಣೆಗೆ ಒಳಗಾಗದಿದ್ದರೂ ಸಹ, ಅವರ ಆದಾಯದ ಮೇಲೆ ಒಂದಲ್ಲಾ ಒಂದು ರೀತಿಯ ಕತ್ತರಿ ಬೀಳುತ್ತದೆ. ಬೆಳವಣಿಗೆಯ ಸ್ಥಗಿತತೆ ಎಂದರೆ (ಬೆಳವಣಿಗೆ ಕುಂಠಿತ ಎಂದರೆ) ಒಬ್ಬ ರೈತ ಅಥವಾ ಸಣ್ಣ ಉತ್ಪಾದಕನ ಸರಾಸರಿ ಆದಾಯವು ಹೆಚ್ಚಾಗುತ್ತದೆ ಎಂದು ಅರ್ಥವಲ್ಲ. ಅದಕ್ಕೆ ವಿರುದ್ಧವಾಗಿ, ಅವರ ಆದಾಯವು ಮತ್ತಷ್ಟು ಕಡಿಮೆಯಾಗುತ್ತದೆ, ಬೇರೊಂದು ಕಾರಣದಿಂದಾಗಿ.
ಈಗ ಒಂದು ಸರಳ ಉದಾಹರಣೆಯನ್ನು ನೋಡೋಣ. ಒಬ್ಬ ರೈತನ ಹಣ ಆದಾಯವು ಈ ಹಿಂದೆ ೧೦೦ ರೂಪಾಯಿ ಇತ್ತು ಎಂದುಕೊಳ್ಳೋಣ – ಅವನ ಉತ್ಪನ್ನದ ೨೦೦ ರೂ. ಮೌಲ್ಯದಲ್ಲಿ ೧೦೦ ರೂ. ಲಾಗುವಾಡು ವೆಚ್ಚಗಳನ್ನು ಕಳೆಯಲಾಗಿದೆ. ಆದರೆ, ಆರೋಗ್ಯ ಸೇವೆಗಳು ಖಾಸಗೀಕರಣಗೊಂಡ ಪರಿಣಾಮವಾಗಿ ಅವನ ವೈದ್ಯಕೀಯ ವೆಚ್ಚಗಳು ಹೆಚ್ಚುತ್ತವೆ. ಈ ಕಾರಣದಿಂದಾಗಿ ಅವನ ನಿಜ ಆದಾಯವು ಹಿಂಡಿಕೆಗೆ ಒಳಗಾಗಿದೆ. ಆರ್ಥಿಕ ಬೆಳವಣಿಗೆ ಈಗ ಕುಂಠಿತವಾಗಿದೆಯಾದರೂ ವೈದ್ಯಕೀಯ ವೆಚ್ಚಗಳೇನೂ ಕಡಿಮೆಯಾಗಿಲ್ಲ. ಅಲ್ಲದೆ, ಲಾಗುವಾಡು ವೆಚ್ಚಗಳು ಇಳಿಯದಿದ್ದರೂ ಸಹ, ರೈತನು ತನ್ನ ಉತ್ಪನ್ನಗಳಿಗೆ ಹಿಂದಿನ ಬೆಲೆಯನ್ನು ಪಡೆಯಲಾರ. ಹಾಗಾಗಿ, ಅವನ ಹಣ ಆದಾಯವು ಇಳಿಯುತ್ತದೆ. ರೈತನನ್ನು ಈ ಹಿಂದೆ ಒಂದು ವಿಧಾನದ ಮೂಲಕ ಹಿಂಡುತ್ತಿದ್ದರೆ ಈಗ ಮತ್ತೊಂದು ವಿಧಾನದ ಮೂಲಕ ಹಿಂಡಲಾಗುತ್ತಿದೆ, ಇದರೊಂದಿಗೆ ಹಳೆಯ ಹಿಂಡಿಕೆ ವಿಧಾನವು ಮುಂದುವರೆಯುತ್ತದೆ.
ಅದೇ ರೀತಿಯಲ್ಲಿ, ಒಬ್ಬ ದುಡಿಯುವ ವ್ಯಕ್ತಿಯ ನಿಜ ಆದಾಯವು, ಆತನ ದಿನದ ಕೆಲಸಕ್ಕೆ ಸಿಗುವ ಕೂಲಿ ಮತ್ತು ಆತನಿಗೆ ಕೆಲಸ ದೊರೆಯುವ ದಿನಗಳ ಸಂಖ್ಯೆ, ಈ ಎರಡೂ ರೀತಿಯ ಅಂಶಗಳ ಫಲವಾಗಿದ್ದರೆ, ಬೆಳವಣಿಗೆಯೊಂದಿಗೆ ಸಂಬಂಧಿಸಿದ ನಿರ್ಗತಿಕತನವು ಮೂಲತಃ ದಿನಗೂಲಿಯನ್ನು (ದಿನದ ಆದಾಯವನ್ನು) ಕಡಿಮೆಗೊಳಿಸುವ ಮೂಲಕ ಸಂಭವಿಸುತ್ತದೆ. ಬೆಳವಣಿಗೆಯ ಸ್ಥಗಿತತೆಯು ದಿನದ ಕೆಲಸಕ್ಕೆ ದೊರೆಯುವ ನಿಜವಾದ ಪ್ರತಿಫಲವನ್ನು ಹೆಚ್ಚಿಸುವುದಿಲ್ಲ, ಬದಲಿಗೆ, ಕೆಲಸ ದೊರೆಯುವ ದಿನಗಳ ಸಂಖ್ಯೆಯನ್ನು ಕಡಿಮೆಮಾಡುತ್ತದೆ. ಹೀಗೆ, ಉನ್ನತ ಬೆಳವಣಿಗೆಯ ಜೊತೆಯಲ್ಲೇ ಹೆಚ್ಚಿದ ಬಡತನವು, ಬೆಳವಣಿಗೆಯು ಕುಂಠಿತಗೊಂಡಾಗ ಅದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತದೆ.
ಆರ್ಥಿಕ ಹಿಂಜರಿತ ಕಾರಣವಲ್ಲದ ನಿರ್ಗತಿಕತನ ಮತ್ತು ಆರ್ಥಿಕ ಹಿಂಜರಿತ ಕಾರಣದ ನಿರ್ಗತಿಕತನ ಇವುಗಳ ನಡುವಿನ ವ್ಯತ್ಯಾಸವನ್ನು ಸಾಧಾರಣವಾಗಿ ಗುರುತಿಸಬಹುದು. ಬೆಳವಣಿಗೆಯ ಕಾಲಮಾನದ ಬಡತನ ಬೆಳೆಯಲು ಮೊದಲ ಪ್ರಕ್ರಿಯೆಯೇ ಕಾರಣವಾದರೆ, ಆರ್ಥಿಕ ಹಿಂಜರಿತದ ಕಾಲಮಾನದ ಬಡತನವು ಮತ್ತಷ್ಟು ಬೆಳೆಯಲು ಎರಡನೆಯ ಪ್ರಕ್ರಿಯೆಯು ಕಾರಣವಾಗುತ್ತದೆ, ಮೊದಲನೆಯ ಕಾರಣವು ಮಾಯವಾಗದಿದ್ದರೂ ಸಹ. ಹಾಗಾಗಿ, ಆರ್ಥಿಕ ಹಿಂಜರಿತ ಮತ್ತು ಸ್ಥಗಿತತೆಗಳು, ಬೆಳವಣಿಗೆ ಹಂತದಲ್ಲಿ ಕಾರ್ಯಪ್ರವೃತ್ತವಾಗಿರುವ ಅಂಶಗಳ ಮೇಲೆ ಹೆಚ್ಚುವರಿಯಾಗಿ ಇನ್ನೂ ಕೆಲವು ಅಂಶಗಳನ್ನು ಹೇರುವುದರಿಂದಾಗಿ ಬಡತನವು ಮತ್ತಷ್ಟು ಉಲ್ಬಣವಾಗುತ್ತದೆ.
ಈ ವಿದ್ಯಮಾನವು ನಮ್ಮನ್ನು ಎರಡನೆಯ ಪ್ರಶ್ನೆಯತ್ತ ಕೊಂಡೊಯ್ಯುತ್ತದೆ. ಅಭಿವೃದ್ಧಿಯು ಪುನರಾರಂಭವಾದರೆ ಬಡತನ ಇಳಿಯುತ್ತದೆಯೇ? ಹೌದು ಎಂದು ಹೇಳುವ ಮನಸ್ಸಾಗುತ್ತದೆ. ಬೆಳವಣಿಗೆಯ ಹಂತದಲ್ಲಿ ಕಾರ್ಯಪ್ರವೃತ್ತವಾಗಿದ್ದ ಅಂಶಗಳ ಮೇಲೆ ಹೇರಿದ ಬಡತನವನ್ನು ಉಲ್ಬಣಗೊಳಿಸುವ ಅಂಶಗಳನ್ನು ತೊಡೆದುಹಾಕಿದಾಗ ಮಾತ್ರ ಅದು ಸಾಧ್ಯವಾಗುತ್ತದೆ. ಉದಾಹರಣೆಯಾಗಿ ನಿರುದ್ಯೋಗವನ್ನು ಆರ್ಥಿಕ ಹಿಂಜರಿತ-ಪೂರ್ವದ ಮಟ್ಟಕ್ಕೆ ಇಳಿಸುವ ಮೂಲಕ, ಅಭಿವೃದ್ಧಿಯ ಜೊತೆಗೆ ಬಡತನದ ಇಳಿಕೆಯೂ ಆರಂಭವಾಗುತ್ತದೆ.
ಈ ಅಭಿಪ್ರಾಯವೂ ತಪ್ಪು. ನವ ಉದಾರವಾದಿ ಬಂಡವಾಳಶಾಹಿಯು ಇಂದು ಎದುರಿಸುತ್ತಿರುವ ಬಿಕ್ಕಟ್ಟು ಕೇವಲ ಒಂದು ಆವರ್ತಕ ಬಿಕ್ಕಟ್ಟು ಮಾತ್ರವಲ್ಲ; ಬಂಡವಾಳಶಾಹಿಯು ದಾರಿ ಕಾಣದಂತಾಗಿರುವ ಪರಿಸ್ಥಿತಿ ತಲುಪಿರುವ ಸಂರಚನಾತ್ಮಕ ಬಿಕ್ಕಟ್ಟು. ಕೊರೊನಾ ಸಾಂಕ್ರಾಮಿಕವು ಹರಡುವ ಮೊದಲೇ ಕಾಡುತ್ತಿದ್ದ ಬಡತನವು ಆರ್ಥಿಕ ಹಿಂಜರಿತದಿಂದಾಗಿ ಉಲ್ಬಣಗೊಂಡಿರುವುದರಿಂದ ಅದು ತನ್ನಷ್ಟಕ್ಕೆ ತಾನೇ ಪುನಶ್ಚೇತನಗೊಳ್ಳುವುದಿಲ್ಲ. ಜನರ ಕೈಯಲ್ಲಿ ಕೊಳ್ಳುವ ಶಕ್ತಿಯನ್ನು ತಂಬಿದಾಗ ಮಾತ್ರ ಪುನಶ್ಚೇತನ ಸಾಧ್ಯವಾಗುತ್ತದೆ. ಆದರೆ, ಹಿಂದೆ ಕಂಡಿದ್ದ ರೀತಿಯ ಬೆಳವಣಿಗೆ ಹಾಗೆಯೇ ಸಾಧ್ಯವಾಗದು.
ಬಡತನದ ತೀವ್ರತೆಗೆ ಕಾರಣವಾದ ಈ ಆರ್ಥಿಕ ಹಿಂಜರಿತದ ವ್ಯಾಪ್ತಿಯನ್ನು ಎರಡು ತುಣುಕು ಮಾಹಿತಿಗಳು ಸಂಕ್ಷಿಪ್ತವಾಗಿ ವಿವರಿಸುತ್ತವೆ. ಮೊದಲನೆಯದು, ಎನ್‌ಎಸ್‌ಎಸ್ ಸಂಸ್ಥೆಯ ಸಮೀಕ್ಷೆಗೆ ಸಂಬಂಧಿಸುತ್ತದೆ. ಗ್ರಾಮೀಣ ಮತ್ತು ನಗರ ಬಡತನಗಳಿಗೆ ಸಂಬಂಧಿಸಿದ ೨೦೧೧-೧೨ರ ಅಂಕಿ ಅಂಶಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ೨೦೧೧-೧೨ರ ಸಮೀಕ್ಷೆಯ ನಂತರ, ಎನ್‌ಎಸ್‌ಎಸ್ ಸಂಸ್ಥೆಯು ಮತ್ತೊಂದು ಸುತ್ತಿನ ಸಮೀಕ್ಷೆಯನ್ನು ೨೦೧೭-೧೮ರಲ್ಲಿ ನಡೆಸಿತ್ತು. ಈ ೨೦೧೭-೧೮ರ ಸಮೀಕ್ಷೆಯ ವರದಿಯ ಪ್ರಕಾರ, ೨೦೧೧-೧೨ ಮತ್ತು ೨೦೧೭-೧೮ರ ನಡುವೆ ಗ್ರಾಮೀಣ ಪ್ರದೇಶಗಳಲ್ಲಿ ತಲಾ ಬಳಕೆ ವೆಚ್ಚವು ಶೇ.೯ರಷ್ಟು ಇಳಿಕೆಯಾಗಿರುವುದು ಕಂಡುಬಂದಿತ್ತು. ಗ್ರಾಮೀಣ ಶ್ರೀಮಂತರ ತಲಾ ಬಳಕೆಯ ವೆಚ್ಚವು ಕಡಿಮೆಯಾಗುವ ಸಂಭವವಿಲ್ಲದೆ ಹೆಚ್ಚಾಗಿರುವ ಸಾಧ್ಯತೆಯ ಕಾರಣದಿಂದ ಗ್ರಾಮೀಣ ಜನಸಂಖ್ಯೆಯ ಅತಿ ದೊಡ್ಡ ವಿಭಾಗದ ಬಳಕೆಯ ವೆಚ್ಚವು ವರದಿಯು ತಿಳಿಸಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇಳಿದಿರಲೇಬೇಕು. ಇದು ಎಷ್ಟು ಅಸಾಧಾರಣವಾದ ಒಂದು ಸಂಗತಿ ಎಂದರೆ, ಈ ಮಾಹಿತಿಯು ಸಾರ್ವಜನಿಕರ ಅರಿವಿಗೆ ಬಾರದಂತೆ ನೋಡಿಕೊಳ್ಳಲು ಮತ್ತು ಅದರ ಸಂಬಂಧವಾಗಿ ಸಾರ್ವಜನಿಕರು ಇರುಸು ಮುರುಸಿನ ಪ್ರಶ್ನೆಗಳನ್ನು ಎತ್ತದಂತೆ ಮಾಡುವ ಸಲುವಾಗಿ ಸಮೀಕ್ಷೆಯ ವರದಿಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿತು!
ಎರಡನೆಯ ಮಾಹಿತಿಯು ದೀರ್ಘಕಾಲೀನ ನಿರುದ್ಯೋಗಕ್ಕೆ ಸಂಬಂಧಿಸುತ್ತದೆ. ಸಾಂಕ್ರಾಮಿಕವು ಹರಡುವ ಮೊದಲೇ ನಿರುದ್ಯೋಗದ ಪ್ರಮಾಣವು ಶೇ.೬ರ ಮಟ್ಟ ತಲುಪಿತ್ತು. ಭಾರತದಲ್ಲಿ ನಿರುದ್ಯೋಗವು ಅಸಹಜ/ಅಕ್ರಮ ಉದ್ಯೋಗಗಳ ರೂಪವನ್ನು ಪಡೆಯುವುದರಿಂದ, ಒಂದು ನಿರ್ದಿಷ್ಟ ಸಂಖ್ಯೆಯ ಉದ್ಯೋಗಗಳನ್ನು ಬಹುಪಾಲು ಜನರು ಹಂಚಿಕೊಳ್ಳುತ್ತಾರೆ. ದೀರ್ಘಕಾಲೀನ ನಿರುದ್ಯೋಗವು ಸಾಮಾನ್ಯವಾಗಿ ಶೇ.೨ ರಿಂದ ಶೇ. ೨.೫ರಷ್ಟು ಕೆಳ ಮಟ್ಟದಲ್ಲೇ ಇರುತ್ತದೆ. ಹಾಗಾಗಿ, ನಿರುದ್ಯೋಗವು ಶೇ. ೬ರ ಮಟ್ಟಕ್ಕೆ ಜಿಗಿದಿರುವುದು ಬಹಳ ಮಹತ್ವಪೂರ್ಣವಾಗಿದೆ ಮತ್ತು ಈ ಮಟ್ಟದ ನಿರುದ್ಯೋಗವು, ಆರ್ಥಿಕ ಹಿಂಜರಿತದ ಕಾರಣದಿಂದ ಬಡತನವು ಉಲ್ಬಣಗೊಂಡಿರುವ ಅಂಶವನ್ನು ಒತ್ತಿ ಹೇಳುತ್ತದೆ.
ಅನು: ಕೆ.ಎಂನಾಗರಾಜ್