ಬೆಂಗಳೂರು: ಹನ್ನೊಂದು ಸಚಿವರೂ ಒಳಗೊಂಡು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರಲ್ಲಿ 179 ಮಂದಿ ಜನಪ್ರತಿನಿಧಿಗಳು ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಿಲ್ಲ ಎಂದು ವರದಿಯಾಗಿದೆ. ಲೋಕಾಯುಕ್ತ ಕಾಯ್ದೆ 1984 ರ ಕಲಂ 22 ರ ಪ್ರಕಾರ ಪ್ರತಿ ವರ್ಷ ಜೂನ್ ತಿಂಗಳ 30ರೊಳಗೆ ಆಸ್ತಿ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕು.
ಸರಿಸುಮಾರು ಶೇ. 50ಕ್ಕಿಂತ ಹೆಚ್ಚಿನ ಜನಪ್ರತಿನಿಧಿಗಳು ನಿಗದಿತ ಗಡುವಿನೊಳಗೆ ಕಳೆದ ಹಣಕಾಸು ವರ್ಷದ ಆಸ್ತಿ ವಿವರ ಘೋಷಣೆ ಮಾಡದೇ ನಿರ್ಲಕ್ಷ್ಯ ತೋರಿದ್ದಾರೆ.
ಉಭಯ ಸದನಗಳ ಪ್ರತಿಪಕ್ಷ ನಾಯಕರು, ಇಬ್ಬರು ಮಾಜಿ ಮುಖ್ಯಮಂತ್ರಿಗಳು, 11 ಸಚಿವರು ಸೇರಿದಂತೆ ವಿಧಾನಸಭೆಯ 224 ಶಾಸಕರ ಪೈಕಿ 127 ಶಾಸಕರು ಹಾಗು ವಿಧಾನ ಪರಿಷತ್ತಿನ 75 ಸದಸ್ಯರ ಪೈಕಿ 52 ಸದಸ್ಯರು ಆಸ್ತಿ ವಿವರದ ಪ್ರಮಾಣಪತ್ರವನ್ನು ಜೂನ್ 30ರೊಳಗೆ ಸಲ್ಲಿಸದವರ ಗುಂಪಿನಲ್ಲಿದ್ದಾರೆ. ಸಕಾಲಕ್ಕೆ ವಿವರ ಸಲ್ಲಿಸದವರಲ್ಲಿ ಹೆಚ್ಚು ಗಣ್ಯ ರಾಜಕಾರಣಿಗಳ ಹೆಸರುಗಳೇ ಇವೆ.
ಜೂನ್ 30ರ ಗಡುವು ಮುಗಿದ ನಂತರ ಜುಲೈ ಮೊದಲ ವಾರದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಬಿ.ಜಿ.ಪಾಟೀಲ್, ಶರಣಗೌಡ ಪಾಟೀಲ್ ಸೇರಿದಂತೆ 16 ಜನಪ್ರತಿನಿಧಿಗಳು ಆಸ್ತಿ ವಿವರ ಸಲ್ಲಿಸಿದ್ದಾರೆ. ವಿಧಾನಸಭೆಯ 114 ಸದಸ್ಯರು ಮತ್ತು ವಿಧಾನ ಪರಿಷತ್ನ 49 ಸದಸ್ಯರು ಲೋಕಾಯುಕ್ತಕ್ಕೆ ಇನ್ನೂ ವಿವರ ಒದಗಿಸಿಲ್ಲ.
ಸಕಾಲಕ್ಕೆ ಮಾಹಿತಿ ನೀಡದ ಶಾಸಕರಿಗೆ ಲೋಕಾಯುಕ್ತವು ನೋಟಿಸ್ ಜಾರಿ ಮಾಡಿ ಮತ್ತೊಮ್ಮೆ ಕಾಲಾವಕಾಶ ನೀಡಲಿದೆ. ಆನಂತರವೂ ವಿವರ ಸಲ್ಲಿಸದಿದ್ದರೆ ರಾಜ್ಯಪಾಲರಿಗೆ ವರದಿ ನೀಡಿ, ಶಾಸಕರ ಬಗ್ಗೆ ದಿನಪತ್ರಿಕೆಗಳಲ್ಲಿ ಹೆಸರು ಪ್ರಕಟಿಸುತ್ತದೆ. ಅಷ್ಟೇ ಅಲ್ಲ, ಸಂಬಂಧಪಟ್ಟ ಶಾಸಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ವಿಚಾರಣೆ ನಡೆಸಲೂ ಲೋಕಾಯುಕ್ತ ಕಾಯ್ದೆಯಲ್ಲಿ ಅವಕಾಶವಿದೆ.
‘ನೈಜ ಹೋರಾಟಗಾರರ ವೇದಿಕೆ’ಯ ಎಚ್.ಎಂ. ವೆಂಕಟೇಶ್ ಸಲ್ಲಿಸಿದ ಅರ್ಜಿಗೆ ಲೋಕಾಯುಕ್ತವು ಮಾಹಿತಿ ಹಕ್ಕು ಕಾಯ್ದೆಯಡಿ ನೀಡಿರುವ ವರದಿಯಲ್ಲಿ ಈ ವಿವರಗಳನ್ನು ಬಹಿರಂಗಪಡಿಸಿದೆ.
ಗಡುವಿನೊಳಗೆ ಆಸ್ತಿ ಸಲ್ಲಿಸದವರು
ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಕೃಷಿ ಸಚಿವ ಬಿ.ಸಿ.ಪಾಟೀಲ್, ಅಬಕಾರಿ ಸಚಿವ ಕೆ.ಗೋಪಾಲಯ್ಯ, ತೋಟಗಾರಿಕೆ ಸಚಿವ ಮುನಿರತ್ನ, ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಸಾರಿಗೆ ಸಚಿವ ಶ್ರೀರಾಮುಲು, ಗಣಿ ಮತ್ತು ಭೂವಿಜ್ನಾನ ಸಚಿವ ಹಾಲಪ್ಪ ಆಚಾರ್, ಮೀನುಗಾರಿಕೆ ಸಚಿವ ಎಸ್.ಅಂಗಾರ, ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್