ಕರ್ನಾಟಕದ ಜಾತಿ ಸಮೀಕ್ಷೆಯ ವಿಶ್ವಾಸಾರ್ಹತೆಯ ಮೌಲ್ಯಮಾಪನ: ಪುರಾವೆ ಆಧಾರಿತ ದೃಷ್ಟಿಕೋನ

‘ಜಾತಿ ಜನಗಣತಿ’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ‘ಕರ್ನಾಟಕ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ, 2015, ವರದಿಯಲ್ಲಿ ತಮ್ಮ ಸಮುದಾಯದ ಪ್ರಾತಿನಿಧ್ಯವನ್ನು ಕಡಿಮೆ ತೋರಿಸಲಾಗಿದೆ ಎಂದು ಲಿಂಗಾಯತ ಮತ್ತು ಒಕ್ಕಲಿಗ ನಾಯಕರಿಂದ ಸಮೀಕ್ಷೆಗೆ ವಿರೋಧ ವ್ಯಕ್ತವಾಗುತ್ತಿದೆ. ಜಾತಿ ಸಮೀಕ್ಷೆಯ ಡೇಟಾವನ್ನು ವಿಶ್ಲೇಷಿಸಿ, ಇತರ ದತ್ತಾಂಶಗಳೊಂದಿಗೆ ಹೋಲಿಸಿ ನೋಡಿದರೆ, ಮುಸ್ಲಿಮರ ಸಂಖ್ಯೆಯಲ್ಲಿ ತೀರಾ ಕಡಿಮೆ ವ್ಯತ್ಯಾಸವಿದೆ. ಎಸ್ ಸಿ/ಎಸ್ ಟಿ ಜನಸಂಖ್ಯೆಯ ಅಂದಾಜುಗಳು ನಿಖರವಾಗಿ ಕಂಡುಬರುತ್ತವೆ. ಲಿಂಗಾಯತರಲ್ಲಿ ಅನೇಕರು ತಮ್ಮನ್ನು ತಾವು ಮೂಲ ಜಾತಿಗಳೊಂದಿಗೆ ಗುರುತಿಸಿಕೊಳ್ಳುತ್ತಾರೆ. ಒಕ್ಕಲಿಗರ ಸಂಖ್ಯೆಯಲ್ಲಿ ಅತ್ಯಲ್ಪ ವ್ಯತ್ಯಾಸವಿದೆ. ಕುರುಬ ಜನಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಿಲ್ಲ. ಆದ್ದರಿಂದ, ಸಮೀಕ್ಷೆ ವಿಶ್ವಾಸಾರ್ಹವಾಗಿದೆ. ಆದರೂ, ರಾಜಕೀಯ ಪ್ರಾತಿನಿಧ್ಯ ಹಾಗೂ ಆದಾಯ, ಸಂಪತ್ತು ಮತ್ತು ಭೂ ಹಿಡುವಳಿಯಂತಹ ಆರ್ಥಿಕ ಸೂಚಕಗಳ ಬಗೆಗಿನ ದತ್ತಾಂಶಗಳ ಕೊರತೆಯಿದೆ.
ನೇತ್ರಪಾಲ್, ಐ ಆರ್ ಎಸ್ ಅಧಿಕಾರಿ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ತನ್ನ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಜಾತಿ (SEEC) ಸಮೀಕ್ಷೆ, 2015 ರ ಸಮೀಕ್ಷೆಗಳನ್ನು ಬಿಡುಗಡೆ ಮಾಡಿತು. ದತ್ತಾಂಶ ಪ್ರಕಟಣೆ ವಿಳಂಬವಾದರೂ, 2025 ರಲ್ಲಿ ಅದರ ಅಂತಿಮ ಬಿಡುಗಡೆಯು ಕರ್ನಾಟಕದ ಸಾಮಾಜಿಕ ರಚನೆಯನ್ನು ಪ್ರಾಯೋಗಿಕವಾಗಿ ಅರ್ಥಮಾಡಿಕೊಳ್ಳುವಲ್ಲಿ ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ. ಈ ನೀತಿ ಟಿಪ್ಪಣಿಯು ಸಮೀಕ್ಷೆಯ ವಿಶ್ವಾಸಾರ್ಹತೆಯ ರಚನಾತ್ಮಕ ವಿಶ್ಲೇಷಣೆಯನ್ನು ಐತಿಹಾಸಿಕ ಜನಗಣತಿ ದಾಖಲೆಗಳು, ತಜ್ಞರ ಸಮಿತಿ ವರದಿಗಳು ಮತ್ತು ದೊಡ್ಡ ಪ್ರಮಾಣದ ಆರೋಗ್ಯ ಮತ್ತು ಶಿಕ್ಷಣ ಸಮೀಕ್ಷೆಗಳೊಂದಿಗೆ ಹೋಲಿಸುವ ಮೂಲಕ ಪ್ರಸ್ತುತಪಡಿಸುತ್ತದೆ.

ಮುಸ್ಲಿಮರ ಸಂಖ್ಯೆಯಲ್ಲಿ ತೀರಾ ಕಡಿಮೆ ವ್ಯತ್ಯಾಸವಿದೆ

ಜಾತಿ ಸಮೀಕ್ಷೆಯು ಮುಸ್ಲಿಂ ಜನಸಂಖ್ಯೆಯನ್ನು ಶೇ. 12.87 (ಒಟ್ಟು 76,99,425) ಎಂದು ಗುರುತಿಸುತ್ತದೆ, ಮುಸ್ಲಿಮರು ಶೇ. 18 ಪಾಲನ್ನು ಹೊಂದಿದ್ದಾರೆ ಎಂದು ಹಿಂದಿನ ಮಾಧ್ಯಮ ವರದಿಗಳು ಹೇಳಿಕೊಳ್ಳುವುದಕ್ಕೆ ಇದು ವ್ಯತಿರಿಕ್ತವಾಗಿದೆ.

ಇದನ್ನು ಪರಿಶೀಲಿಸಲು, ನಾವು 2011 ರವರೆಗಿನ ವಿವಿಧ ಜನಗಣತಿ ಡೇಟಾವನ್ನು ಪರಿಶೀಲಿಸಿದರೆ, ವರ್ಷ ಮತ್ತು ಮುಸ್ಲಿಂ ಜನಸಂಖ್ಯೆಯ ಶೇಕಾಡಾವಾರು ವಿವರ ಹೀಗಿದೆ: 1951ರಲ್ಲಿ 10.05, 1961ರಲ್ಲಿ 9.87, 1971ರಲ್ಲಿ 10.63, 1981ರಲ್ಲಿ 11.21, 1991ರಲ್ಲಿ 11.64, 2001ರಲ್ಲಿ 12.23 ಮತ್ತು 2011ರಲ್ಲಿ ಶೇ. 12.92. ಈ ಅಂಕಿಅಂಶಗಳ ಆಧಾರದ ಮೇಲೆ 2023 ರಲ್ಲಿ ಮುಸ್ಲಿಮರ ಜನಸಂಖ್ಯೆ ಸುಮಾರು ಶೇ.14 ಆಗಬಹುದು. ಆದ್ದರಿಂದ, ಜಾತಿ ಸಮೀಕ್ಷೆಯಲ್ಲಿ ವರದಿಯಾದ ಸಂಖ್ಯೆ (ಸುಮಾರು ಶೇ.12.87) ವಾಸ್ತವಿಕವಾಗಿದೆ ಎಂಬುದನ್ನು ತೋರುತ್ತದೆ.

ಇದನ್ನೂ ಓದಿ: ಕನ್ನಡ ಮಹಿಳಾ ಕಿರುಚಿತ್ರೋತ್ಸವ: ಸಲ್ಲಿಕೆಗೆ ಕೊನೆಯ ದಿನ ಏಪ್ರಿಲ್ 30

ಮುಸ್ಲಿಂ ಜನಸಂಖ್ಯೆಯ  ಅಂಕಿಅಂಶಗಳನ್ನು ನೀಡುವ ಇತರ ಎರಡು ದತ್ತಾಂಶ ಅಂಶಗಳಿವೆ. 1988 ರಲ್ಲಿ ಚಿನ್ನಪ್ಪ ಆಯೋಗದ ವರದಿಯಲ್ಲಿನ ಒಂದು ದತ್ತಾಂಶದಂತೆ ಮುಸ್ಲಿಂ ಜನಸಂಖ್ಯೆ ಶೇ. 11.7 ಆಗಿತ್ತು.

 

ಪ್ರಸ್ತುತ ಅಂದಾಜಿಸಲಾದ ಸಂಖ್ಯೆಯು ಚಿನ್ನಪ್ಪ ಆಯೋಗದ ವರದಿಗೆ ಅನುಗುಣವಾಗಿದೆ ಎಂದು ತೋರಿಸುತ್ತದೆ. 2015-16 ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ವರದಿಯ ಪ್ರಕಾರ, ಕರ್ನಾಟಕದಲ್ಲಿ ಮುಸ್ಲಿಮರ ಜನಸಂಖ್ಯೆಯು ಶೇ. 12.4 ಎಂದು ಅಂದಾಜಿಸಲಾಗಿದೆ. ಇತರ ಸಮೀಕ್ಷೆಗಳಲ್ಲಿ ಪಡೆದ ದತ್ತಾಂಶಗಳಿಗೆ ಇಂದಿನ ಜಾತಿ ಸಮೀಕ್ಷೆಯು ಮತ್ತೊಮ್ಮೆ ಹೊಂದಿಕೆಯಾಗುತ್ತದೆ. ಈ ಸ್ಥಿರತೆಯು ಜಾತಿ ಸಮೀಕ್ಷೆಯಲ್ಲಿ ಮುಸ್ಲಿಂ ಜನಸಂಖ್ಯೆಯನ್ನು ಅತಿಯಾಗಿ ಅಂದಾಜು ಮಾಡಲಾಗಿಲ್ಲ ಎಂದು ಸೂಚಿಸುತ್ತದೆ.

ಎಸ್ ಸಿ/ಎಸ್ ಟಿ ಜನಸಂಖ್ಯೆಯ ಅಂದಾಜುಗಳು ನಿಖರವಾಗಿ ಕಂಡುಬರುತ್ತವೆ

ಪರಿಶಿಷ್ಟ ಜಾತಿ/ ಪರಿಶಿಷ್ಟ ಜನಾಂಗ (SC/ST)ದ ಒಟ್ಟು ಜನಸಂಖ್ಯೆಯ ಕುರಿತು ನೋಡುವುದಾದರೆ,

ಈ ಜಾತಿ ಸಮೀಕ್ಷೆಯ ಪ್ರಕಾರ: ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ (ಎಸ್‌ಸಿ) ಜನಸಂಖ್ಯೆ ಸರಿಸುಮಾರು ಶೇ.18.27 (1.09 ಕೋಟಿ) ರಷ್ಟಿದೆ. ಪರಿಶಿಷ್ಟ ಪಂಗಡಗಳ (ಎಸ್‌ಟಿ) ಜನಸಂಖ್ಯೆ ಶೇ.7.1 (42.81 ಲಕ್ಷ) ಇದೆ.

ಇತರ ಮೂಲಗಳೊಂದಿಗೆ ಹೋಲಿಕೆ ಮಾಡಿ ನೋಡುವುದಾರೆ:

2015-16 ರಲ್ಲಿ NFHS ಸಮೀಕ್ಷೆಯ ಪ್ರಕಾರ, ಎಸ್ ಸಿ ಜನಸಂಖ್ಯೆ ಶೇ. 21 ಮತ್ತು ಎಸ್ ಟಿ ಜನಸಂಖ್ಯೆ ಶೇ. 9.2.

1988 ರ ಚಿನ್ನಪ್ಪ ಆಯೋಗದ ಪ್ರಕಾರ, ಎಸ್ ಸಿ ಜನಸಂಖ್ಯೆ ಶೇ. 16.7 ಮತ್ತು ಎಸ್ ಟಿ ಜನಸಂಖ್ಯೆ ಶೇ. 6.7.

2011 ಜನಗಣತಿ ಪ್ರಕಾರ, ಎಸ್ ಸಿ ಜನಸಂಖ್ಯೆ ಶೇ. 17.15 ಮತ್ತು ಎಸ್ ಟಿ ಜನಸಂಖ್ಯೆ ಶೇ. 6.95.

UDISE ಡೇಟಾ (ಟೈಮ್ಸ್ ಆಫ್ ಇಂಡಿಯಾ ವಿಶ್ಲೇಷಣೆ) ಪ್ರಕಾರ: ಎಸ್ ಸಿ ಜನಸಂಖ್ಯೆ ಶೇ.19 ಮತ್ತು ಎಸ್ ಟಿ ಜನಸಂಖ್ಯೆ ಶೇ. 8.

ಈ ನಿಟ್ಟಿನಲ್ಲಿ, ವಿವಿಧ ಸಮೀಕ್ಷೆಗಳ ಎಸ್ ಸಿ/ಎಸ್ ಟಿ ಜನಸಂಖ್ಯೆಯ ಅಂದಾಜುಗಳು ಈ ಜಾತಿ ಸಮೀಕ್ಷೆಯ ನಿಖರತೆಯನ್ನು ದೃಢಪಡಿಸುತ್ತವೆ.

ಒಕ್ಕಲಿಗರ ಜನಸಂಖ್ಯೆಯಲ್ಲಿ ಅತ್ಯಲ್ಪ ವ್ಯತ್ಯಾಸ

ಒಕ್ಕಲಿಗರ ಜನಸಂಖ್ಯೆ ಕುರಿತಂತೆ ನೋಡುವುದಾದರೆ, ಒಕ್ಕಲಿಗರ ಜಾತಿಗಳ ಅಡಿಯಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯ ಶೇ.10.31ರಷ್ಟು (61.58,652) ಇದೆ ಎಂದು ಇಂದಿನ ಸಮೀಕ್ಷೆಯು ಉಲ್ಲೇಖಿಸಿದೆ. ಚಿನ್ನಪ್ಪ ಆಯೋಗವು 1988 ರಲ್ಲಿ ಈ ಸಂಖ್ಯೆಯನ್ನು ಶೇ. 10.8 ಎಂದು ಪರಿಗಣಿಸಿತ್ತು. ಆದ್ದರಿಂದ, ಅತ್ಯಲ್ಪ ವ್ಯತ್ಯಾಸವು ಇಂದಿನ ಸಮೀಕ್ಷೆಯ ವಿಶ್ವಾಸಾರ್ಹತೆಯನ್ನು ಬೆಂಬಲಿಸುತ್ತದೆ.

ಲಿಂಗಾಯತರಲ್ಲಿ ಅನೇಕರು ತಮ್ಮ ಮೂಲ ಜಾತಿಗಳೊಂದಿಗೆ ಗುರುತಿಸಿಕೊಳ್ಳುತ್ತಾರೆ

1988 ರಲ್ಲಿ ಚಿನ್ನಪ್ಪ ಆಯೋಗದ ವರದಿಯಲ್ಲಿ, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಲಿಂಗಾಯತರ ಜನಸಂಖ್ಯೆ ಶೇ. 15.3 ಎಂದು ಹೇಳಲಾಗಿತ್ತು. ಇಂದಿನ ಸಮೀಕ್ಷೆಯು ಲಿಂಗಾಯತರ ಜನಸಂಖ್ಯೆಯನ್ನು 66,35,233 ಎಂದು ಹೇಳಿದೆ. ಇದು ರಾಜ್ಯದ ಜನಸಂಖ್ಯೆಯ ಶೇ. 11.09 ರಷ್ಟಿದೆ.

ಲಿಂಗಾಯತರು ತಮ್ಮೊಳಗೆ ವಿವಿಧ ಉಪವಿಭಾಗಗಳನ್ನು ಹೊಂದಿದ್ದಾರೆ. ಅನೇಕರು ತಮ್ಮನ್ನು ತಾವು ಗುರುತಿಸಿಕೊಂಡ ಮೂಲ ಜಾತಿಗಳೊಂದಿಗೆ ಗುರುತಿಸಿಕೊಳ್ಳುತ್ತಾರೆ. ಉದಾಹರಣೆಗೆ, ಲಿಂಗಾಯತ ಗಾಣಿಗ, ಲಿಂಗಾಯತ ಕುರುಬ ಮತ್ತು ಲಿಂಗಾಯತ ಹೊಲೆಯರಂತಹ ಬಹು ಲಿಂಗಾಯತ ಉಪ-ಪಂಗಡಗಳನ್ನು ಆಯಾ ಜಾತಿ ಹೆಸರುಗಳ ಅಡಿಯಲ್ಲಿ ವರದಿ ಮಾಡಲಾಗಿದೆ. ನಿರ್ದಿಷ್ಟ ಮೀಸಲಾತಿ ವರ್ಗಗಳ ಅಡಿಯಲ್ಲಿ ಗ್ರಹಿಸಿದ ಪ್ರಯೋಜನಗಳ ಆಧಾರದ ಮೇಲೆ ಹೊಂದಿಕೊಳ್ಳುವ ಜಾತಿ ಗುರುತಿಸುವಿಕೆ ಇದಾಗಿದೆ. ಇದು ತಳಮಟ್ಟದಲ್ಲಿ ಒಂದು ಗುರುತು ಆಗಿರುವುದರಿಂದ, ಜನರು ಆಯಾ ಕೋಟಾಗಳ ಅಡಿಯಲ್ಲಿ ಲಭ್ಯವಿರುವ ಮೀಸಲಾತಿ ಸೌಲಭ್ಯಗಳನ್ನು ಬಳಸಿಕೊಳ್ಳಲು ಅವುಗಳನ್ನು ಸುಲಭವಾಗಿ ಮೂಲ ಜಾತಿಗಳಿಗೆ ಬದಲಾಯಿಸಬಹುದು. ಆದ್ದರಿಂದ, ಗುರುತಿನ ವಿಘಟನೆಯು ಲಿಂಗಾಯತರ ಒಟ್ಟು ಸಂಖ್ಯೆಯನ್ನು ಕಡಿಮೆ ಎಂದು ವಿವರಿಸುತ್ತದೆ ಮತ್ತು ಡೇಟಾ ನಿಖರತೆಯನ್ನು ಸೂಚಿಸುವುದಿಲ್ಲ.

ಕುರುಬ ಜನಸಂಖ್ಯೆ ಏರಿಕೆ ಪ್ರಮಾಣಾನುಗುಣವಾಗಿದೆ

ಜಾತಿ ಸಮೀಕ್ಷೆಯು  ಕುರುಬ ಸಮುದಾಯದ ಜನಸಂಖ್ಯೆಯು ಶೇ.7.31 ರಷ್ಟಿದ್ದು, ಸುಮಾರು 43.7 ಲಕ್ಷ ಜನರಿದ್ದಾರೆ ಎಂದು ಹೇಳಿದೆ. ಚಿನ್ನಪ್ಪ ಆಯೋಗವು 1988 ರಲ್ಲಿ ಈ ಅನುಪಾತವನ್ನು ಶೇ.6.3 ಎಂದು ತೆಗೆದುಕೊಂಡಿದೆ. ಈ ಏರಿಕೆ ಪ್ರಮಾಣಾನುಗುಣವಾಗಿದೆ ಮತ್ತು ನಿರೀಕ್ಷಿತ ಜನಸಂಖ್ಯಾ ಬೆಳವಣಿಗೆಯ ಪ್ರವೃತ್ತಿಯಲ್ಲಿದೆ.

ಶೇ.69.59 ರಷ್ಟು ಜನರು ಒಬಿಸಿ ಗೆ ಸೇರಿದವರಾಗಿದ್ದಾರೆ

ಸಮೀಕ್ಷೆಯ ಪ್ರಕಾರ, ಒಟ್ಟು ಜನಸಂಖ್ಯೆಯಲ್ಲಿ ಸರಿಸುಮಾರು 4,16,30,153 ಜನರು ಇತರ ಹಿಂದುಳಿದ ವರ್ಗ (ಒಬಿಸಿ)ಕ್ಕೆ ಸೇರಿದವರು. ಅಂದರೆ ಒಟ್ಟು ಜನಸಂಖ್ಯೆಯ ಸುಮಾರು ಶೇ.69.59 ರಷ್ಟು ಜನರು ಇತರ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. 2015-16 ರ NFHS (ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ) ಪ್ರಕಾರ ಒಬಿಸಿ ಜನಸಂಖ್ಯೆಯನ್ನು ಶೇ.46.4 ಎಂದು ತೆಗೆದುಕೊಳ್ಳಲಾಗಿದೆ.

UDISE (ಶಿಕ್ಷಣಕ್ಕಾಗಿ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ) ಅನುಪಾತದ ಪ್ರಕಾರ, ಜನಸಂಖ್ಯೆಯ ಸರಿಸುಮಾರು ಶೇ.62 ವಿದ್ಯಾರ್ಥಿಗಳು ಒಬಿಸಿ ಸಮುದಾಯಗಳಿಗೆ ಸೇರಿದವರು ಎಂದು ಟೈಮ್ಸ್ ಆಫ್ ಇಂಡಿಯಾ ಹೇಳಿದೆ. ಹೀಗಾಗಿ, ಜಾತಿ ಸಮೀಕ್ಷೆಯು ವಿಶಾಲವಾದ ಶೈಕ್ಷಣಿಕ ಮತ್ತು ಆರೋಗ್ಯ ಸೂಚಕಗಳೊಂದಿಗೆ ಹೊಂದಿಕೆಯಾಗುತ್ತದೆ, ಇದು ಕರ್ನಾಟಕದ ಅಹಿಂದ (SC+ST+OBC+ಅಲ್ಪಸಂಖ್ಯಾತ) ಸಂಯೋಜನೆಯನ್ನು ದೃಢಪಡಿಸುತ್ತದೆ.

ಆರ್ಥಿಕ ಸೂಚಕಗಳ ಬಗೆಗಿನ ದತ್ತಾಂಶಗಳ ಕೊರತೆ

ಜಾತಿ ಸಮೀಕ್ಷೆಯು ದೃಢವಾದ ಸಮುದಾಯ-ಮಟ್ಟದ ಜನಸಂಖ್ಯಾ ಅಂದಾಜುಗಳನ್ನು ಒದಗಿಸಿದರೂ, ಅದರಲ್ಲಿ ಕೆಲವು ದತ್ತಾಂಶಗಳ ಕೊರತೆಯಿದೆ. ಗ್ರೂಪ್ A/B/C/D ನಂತಹ ಸರ್ಕಾರಿ ಉದ್ಯೋಗದಲ್ಲಿ ವಿವಿಧ ಜಾತಿ ಗುಂಪುಗಳ ಪ್ರಾತಿನಿಧ್ಯವನ್ನು ಒದಗಿಸುವಲ್ಲಿ ಸಮೀಕ್ಷೆಯು ವಿಫಲವಾಗಿದೆ. ರಾಜಕೀಯ ಪ್ರಾತಿನಿಧ್ಯ ದತ್ತಾಂಶವನ್ನು ಇದರಲ್ಲಿ ಚರ್ಚಿಸಲಾಗಿಲ್ಲ. ಆದಾಯ, ಸಂಪತ್ತು ಮತ್ತು ಭೂ ಹಿಡುವಳಿಯಂತಹ ಆರ್ಥಿಕ ಸೂಚಕಗಳ ಬಗೆಗಿನ ದತ್ತಾಂಶಗಳ ಕೊರತೆಯಿದೆ. ಬಿಹಾರದ ಜಾತಿ ಸಮೀಕ್ಷೆಯು ಈ ಸಾಮಾಜಿಕ-ಆರ್ಥಿಕ ಅಸ್ಥಿರಗಳನ್ನು ಒಳಗೊಂಡಿತ್ತು, ಇದು ಸಮಕಾಲೀನ ಸಂದರ್ಭದಲ್ಲಿ ‘ಹಿಂದುಳಿದಿರುವಿಕೆ’ಯನ್ನು ವ್ಯಾಖ್ಯಾನಿಸಲು ಅವಶ್ಯಕವಾಗಿದೆ. ಈ ಹೆಚ್ಚುವರಿ ದತ್ತಾಂಶದೊಂದಿಗೆ ತನ್ನ ವರದಿಯನ್ನು ಪೂರಕವಾಗಿ ಕರ್ನಾಟಕವು ಪರಿಗಣಿಸಬೇಕು.

ಕೊನೆಯದಾಗಿ ಹೇಳುವುದೇನೆಂದರೆ, ಕರ್ನಾಟಕ ಜಾತಿ ಸಮೀಕ್ಷೆಯು ದೃಢವಾದ ಅಂಕಿಅಂಶಗಳ ಆಧಾರದ ಮೇಲೆ ನಿಂತಿದೆ, ಐತಿಹಾಸಿಕ ಮತ್ತು ಸಮಕಾಲೀನ ದತ್ತಾಂಶಗಳೊಂದಿಗೆ ಉತ್ತಮ ಸಂಬಂಧ ಹೊಂದಿದೆ. ಪ್ರಬಲ ಜಾತಿಗಳ ಸುತ್ತಲಿನ ರಾಜಕೀಯ ಚರ್ಚೆಗಳ ಹೊರತಾಗಿಯೂ, ಸಮೀಕ್ಷೆಯು ಕಾನೂನುಬದ್ಧವಾಗಿ ಮತ್ತು ಕ್ರಮಶಾಸ್ತ್ರೀಯವಾಗಿ ಉತ್ತಮವಾಗಿದೆ ಎಂದು ತೋರುತ್ತದೆ. ವರದಿಯನ್ನು ಬಿಡುಗಡೆ ಮಾಡಿದ್ದಕ್ಕಾಗಿ ರಾಜ್ಯ ಸರ್ಕಾರವನ್ನು ಶ್ಲಾಘಿಸಬೇಕು ಮತ್ತು ಈಗ ಪ್ರಾಯೋಗಿಕ ವಾಸ್ತವಗಳ ಆಧಾರದ ಮೇಲೆ ಮೀಸಲಾತಿ, ಪ್ರಾತಿನಿಧ್ಯ ಮತ್ತು ಕಲ್ಯಾಣ ಹಂಚಿಕೆಯನ್ನು ತರ್ಕಬದ್ಧಗೊಳಿಸಲು ಡೇಟಾವನ್ನು ಬಳಸುವತ್ತ ಗಮನಹರಿಸಬೇಕು.

ಇದನ್ನೂ ನೋಡಿ: ಪಿಚ್ಚರ್‌ ಪಯಣ – 156 | ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕೆಲವು ಸಿನಿಮಾಗಳ ಅವಲೋಕನ

Donate Janashakthi Media

Leave a Reply

Your email address will not be published. Required fields are marked *