ಬೆಂಗಳೂರು : ಇದೇ ತಿಂಗಳ 9ರಂದು ಕೇಂದ್ರ ಚುನಾವಣಾ ಆಯೋಗ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಜೊತೆ ಸಭೆ ಕರೆದಿದ್ದು, ರಾಜ್ಯದಲ್ಲಿ ಈ ಬಾರಿ ವಿಧಾನಸಭೆ ಚುನಾವಣೆ ನಿಗದಿತ ಅವಧಿಗೂ ಮುನ್ನವೇ ನಡೆಯುವ ಸಾಧ್ಯತೆ ಇದೆ.
15ನೇ ವಿಧಾನಸಭೆ ಚುನಾವಣೆಯು ಮೇ 19ರಂದು ಮುಕ್ತಾಯಗೊಳ್ಳಲಿದ್ದು, ಅಷ್ಟರೊಳಗೆ 16ನೇ ವಿಧಾನಸಭೆ ಚುನಾವಣೆ ಅಸ್ತಿತ್ವಕ್ಕೆ ಬಂದು ಹೊಸ ಸರ್ಕಾರ ರಚನೆಯಾಗಬೇಕು. 2018ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆಯು ಮೇ 12ರಂದು ಮತದಾನ ನಡೆದು ಮೇ 15ರಂದು ಮತ ಎಣಿಕೆ ನಡೆದು ಮೇ19ರಂದು ನೂತನ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದರು.
ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ಏ.15ರೊಳಗೆ ಮುಕ್ತಾಯವಾಗುವುದರಿಂದ ಚುನಾವಣಾ ಆಯೋಗ ಅಗತ್ಯವಾದ ಸಿದ್ದತೆಗಳನ್ನು ಕೈಗೊಳ್ಳಲು ಮುಂದಾಗಿದೆ. ಈಗಾಗಲೇ ಮತದಾರರ ಪಟ್ಟಿ ಹಾಗೂ ಇವಿಎಂ ಕೂಡ ಸಿದ್ದಗೊಂಡಿದೆ. ಉಳಿದಂತೆ ಕಾನೂನು ಸುವ್ಯವಸ್ಥೆಗೆ ಕೇಂದ್ರ ಅರೆಸೇನಾ ಪಡೆ ಹಾಗೂ ಸ್ಥಳೀಯ ಪೊಲೀಸರು ಲಭ್ಯವಿರುತ್ತಾರೆ. ಮತದಾನಕ್ಕೆ ಸರ್ಕಾರಿ ಅನುದಾನ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಲಭ್ಯವಿರುವುದರಿಂದ ಬಹುತೇಕ ಮೇ 10ರೊಳಗೆ ಮತದಾನ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ : ಮೇ 3ನೇ ವಾರದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ..?
ಅಭಿವೃದ್ದಿ ಕಾರ್ಯಗಳಿಗೆ ಹಿನ್ನಡೆಯಾಗಬಾರದು ಎಂಬ ಕಾರಣಕ್ಕಾಗಿ ಚುನಾವಣಾ ಆಯೋಗ ಸಾಮಾನ್ಯವಾಗಿ 45 ದಿನ ಚುನಾವಣಾ ನೀತಿ ಸಂಹಿತೆ ಜಾರಿ ಮಾಡುತ್ತಿದೆ. ಒಂದು ವೇಳೆ ಮಾರ್ಚ್ ತಿಂಗಳ ಕೊನೆ ವಾರದಲ್ಲಿ ದಿನಾಂಕವನ್ನು ಪ್ರಕಟಿಸಿದರು. ಮೇ 10ರೊಳಗೆ ಇಡೀ ಚುನಾವಣಾ ಪ್ರಕ್ರಿಯೆ ಬಹುತೇಕ ಪೂರ್ಣಗೊಳ್ಳಲಿದೆ. ಹೀಗಾಗಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಅಭಿಪ್ರಾಯ ಸಂಗ್ರಹಿಸಲು ಚುನಾವಣಾ ಆಯೋಗ 9ರಂದು ಸಭೆ ಕರೆದಿದೆ.
ಸಭೆಯಲ್ಲಿ ಸಿಪಿಐಎಂ, ಟಿಎಂಸಿ, ಎನ್.ಸಿ.ಪಿ, ಎಐಎಡಿಎಂಕೆ, ಎಸ್‍ಪಿ, ಜೆಡಿಎಸ್, ಕಾಂಗ್ರೆಸ್, ಬಿಜೆಪಿ, ಬಿಎಸ್‍ಪಿ ಸೇರಿದಂತೆ ಆಯೋಗದಲ್ಲಿ ನೊಂದಾಯಿತ ರಾಜಕೀಯ ಪಕ್ಷಗಳಿಗೆ ಆಹ್ವಾನ ನೀಡಲಾಗಿದೆ. ಚುನಾವಣೆ ನಡೆಸುವ ಕುರಿತು ಮುಖಂಡರಿಂದ ಆಯೋಗ ಅಭಿಪ್ರಾಯವನ್ನು ಸಂಗ್ರಹಿಸಲಿದ್ದು ನಂತರ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಮುಖ್ಯ ಕಾರ್ಯದರ್ಶಿಗಳ ಜೊತೆ ಒಂದು ಸುತ್ತಿನ ಔಪಚಾರಿಕ ಸಭೆ ನಡೆಸಿದ ಬಳಿಕ ದಿನಾಂಕವನ್ನು ಘೋಷಣೆ ಮಾಡಲಿದೆ.
ಮಹತ್ವದ ಸಭೆ: ವಿಕಾಸಸೌಧದಲ್ಲಿ ರಾಜಕೀಯ ಪಕ್ಷಗಳ ಜೊತೆ ಮಾ.9ರಂದು ಸಭೆಯನ್ನು ಕರೆಯಲಾಗಿದೆ. ಸಭೆಗೆ ಆಯಾ ಪಕ್ಷಗಳ ಪ್ರತಿನಿಗಳನ್ನು ಕಳುಹಿಸಿಕೊಡುವಂತೆ ಕೋರಿದೆ. ಮಧ್ಯಾಹ್ನ 2.30-2.40ಗೆ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಜೊತೆ ಸಭೆ ನಿಗದಿಯಾಗಿದೆ. 2.40-2.50ಗೆ ಬಿಎಸ್‍ಪಿ ಜೊತೆ ಸಭೆ ನಡೆಯಲಿದೆ. 2.50-3 ಗಟೆವರೆಗೆ ಬಿಜೆಪಿ ಪಕ್ಷದ ಜೊತೆ ಚುನಾವಣಾ ಆಯೋಗ ಸಭೆ ನಡೆಸಲಿದೆ. ಸಿಪಿಐ ಜೊತೆ 3.00-3.10 ಗೆ ಸಭೆ ನಡೆಸಲಿದ್ದಾರೆ. ಇನ್ನು 3.10-03.20ವರೆಗೆ ಸಿಪಿಐ(ಎಂ) ಜೊತೆ ಸಭೆ ನಿಗದಿಯಾಗಿದೆ. ಕಾಂಗ್ರೆಸ್ ಪಕ್ಷದ ಜೊತೆ 3.20-3.30ವರೆಗೆ ಸಭೆ ನಡೆಸಲಿದೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಜೊತೆ 3.30-3.40 ವರೆಗೆ ಚುನಾವಣಾ ಆಯೋಗ ಸಭೆ ನಡೆಸಿ ಚರ್ಚೆ ನಡೆಸಲಿದೆ. ನ್ಯಾಷನಲ್ ಪೀಪಲ್ಸ್ ಪಾರ್ಟಿ ಜೊತೆ 3.40-3.50 ವರೆಗೆ ಸಭೆ ನಡೆಸಲಿದೆ. ಜೆಡಿಎಸ್ ಜೊತೆ 3.50-4 ಗಂಟೆವರೆಗೆ ಸಭೆ ನಡೆಸಲಿದ್ದಾರೆ.
ಮಾರ್ಚ್ ಅಂತ್ಯಕ್ಕೆ ಚುನಾವಣಾ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದ್ದು, ಇದಕ್ಕೂ ಮುನ್ನ ರಾಜ್ಯದ ಎಲ್ಲಾ ಅಧಿಕೃತ ರಾಜಕೀಯ ಪಕ್ಷಗಳ ಜೊತೆ ಚುನಾವಣಾ ಆಯೋಗ ಸಭೆ ನಡೆಸಿ ಸಲಹೆ ಅಭಿಪ್ರಾಯಗಳನ್ನು ಪಡೆಯಲಿದೆ. ಏಪ್ರಿಲ್ ತಿಂಗಳ ಬಳಿಕ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ.