ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆಯಾಗಿ 11 ವರ್ಷಗಳು

-ಸಿ.ಸಿದ್ದಯ್ಯ

“ಮಾಸ್ಟರ್ ಮೈಂಡ್” ಆರೋಪಿಗಳನ್ನು ಖುಲಾಸೆಗೊಳಿಸಿದ್ದರ ವಿರುದ್ಧ ಸಿಬಿಐ ಇನ್ನೂ ಮೇಲ್ಮನವಿ ಸಲ್ಲಿಸಿಲ್ಲ!!

ವಿಚಾರವಾದಿ ಡಾ. ನರೇಂದ್ರ ದಾಭೋಲ್ಕರ್ ಅವರ ಹತ್ಯೆಯಾಗಿ ಆಗಸ್ಟ್ 20ಕ್ಕೆ 11 ವರ್ಷಗಳು ಕಳೆದಿವೆ. ದಾಭೋಲ್ಕರ್ ಹತ್ಯೆ ನಡೆದ ಹತ್ತು ವರ್ಷ ಎಂಟು ತಿಂಗಳ ನಂತರ (ಮೇ 10, 2024 ರಂದು) ಪುಣೆಯ ವಿಶೇಷ ನ್ಯಾಯಾಲಯವು ಇಬ್ಬರು ಹಿಂದುತ್ವವಾದಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ, ನ್ಯಾಯಾಲಯವು “ಮಾಸ್ಟರ್ ಮೈಂಡ್” ಡಾ ವೀರೇಂದ್ರಸಿನ್ಹ್ ಶರದ್ಚಂದ್ರ ತಾವಡೆ, ವಕೀಲ ಸಂಜೀವ್ ಗಜಾನನ್ ಪುನಾಲೇಕರ್ ಮತ್ತು ಸನಾತನ ಸಂಸ್ಥೆಗೆ ಸಂಬಂಧಿಸಿದ ಕಾರ್ಯಕರ್ತ ವಿಕ್ರಮ್ ವಿನಯ್ ಭಾವೆ ಸೇರಿದಂತೆ ಮೂವರು ಆರೋಪಿಗಳನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತು. ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದ್ದರ ವಿರುದ್ಧ ಸಿಬಿಐ ಇದುವರೆಗೂ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿಲ್ಲ. ಡಾ. ದಾಭೋಲ್ಕರ್ ಅವರ ಕುಟುಂಬದ ಸದಸ್ಯರು ಖುಲಾಸೆಯ ವಿರುದ್ಧ ಹೈಕೋರ್ಟ್ ಗೆ ಹೋಗಲು ಮುಂದಾಗಿದ್ದಾರೆ.

ವೃತ್ತಿಯಲ್ಲಿ ವೈದ್ಯರು. ಸಮಾಜ ಸೇವಕ, ವಿಚಾರವಾದಿ. ಸುಮಾರು 12 ವರ್ಷಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ ನರೇಂದ್ರ ದಾಭೋಲ್ಕರ್ ಅವರು ಸಮಾಜ ಸೇವಕರಾಗಿ ಸೇವೆ ಸಲ್ಲಿಸಿದವರು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರು. ‘ಒಂದು ಊರು ಒಂದೇ ಬಾವಿ’ ಕಾರ್ಯಕ್ರಮದಿಂದ ಅವರ ಸಾಮಾಜಿಕ ಹೋರಾಟ ಆರಂಭವಾಯಿತು. ಈ 21ನೇ ಶತಮಾನದಲ್ಲೂ ಮಹಾರಾಷ್ಟ್ರದ ಹಲವು ಹಳ್ಳಿಗಳಲ್ಲಿ ಅಸ್ಪೃಶ್ಯರಿಗಾಗಿ ಬೇರೆ ಬೇರೆ ಬಾವಿಗಳಿವೆ. ಅದರ ವಿರುದ್ದ ‘ಒಂದು ಊರು ಒಂದೇ ಬಾವಿ’ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಿದರು.

“ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿ”

ಅಂತಹ ಆಂದೋಲನದ ಸಂದರ್ಭದಲ್ಲಿಯೇ ಮೂಢನಂಬಿಕೆಗಳ ನಿರ್ಮೂಲನೆಗಾಗಿ ದಾಭೋಲ್ಕರ್ ಸಮಯ ಮೀಸಲಿಡುತ್ತಿದ್ದರು. ಹಳ್ಳಿಗಳಲ್ಲಿನ ಮೂಢನಂಬಿಕೆಗಳ ನಿರ್ಮೂಲನೆಗಾಗಿ 1989 ರಲ್ಲಿ “ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿ” ಯನ್ನು ಸ್ಥಾಪಿಸಿದರು. ಮೂಢನಂಬಿಕೆಗಳ ವಿರುದ್ಧ ಉಪನ್ಯಾಸಗಳನ್ನು ನೀಡಿ ಜನರನ್ನು ಜಾಗೃತರನ್ನಾಗಿಸುತ್ತಿದ್ದರು. ತಮ್ಮನ್ನು ತಾವು ಬಾಬಾಗಳೆಂದು, ಮಾಂತ್ರಿಕರೆಂದು ಹೇಳಿಕೊಳ್ಳುವವರನ್ನು ದಿಟ್ಟವಾಗಿ ಎದುರಿಸಿದರು. ಮಾಟ ಮಂತ್ರಗಳನ್ನು ಮಾಡಿ ಕಾಯಿಲೆಗಳನ್ನು ವಾಸಿಮಾಡುತ್ತೇವೆ ಎನ್ನುವ ಕಳ್ಳ ಬಾಬಾಗಳಿಗೆ ಬೆವರಿಳಿಸಿದರು.

‘ಪರಿವರ್ತನ್’ ಸಂಸ್ಥೆ ಸ್ಥಾಪನೆ

ಸ್ಥಾಪಕ ಸದಸ್ಯರಾಗಿ ಅವರು ಸತಾರಾ ಜಿಲ್ಲೆಯಲ್ಲಿ ‘ಪರಿವರ್ತನ್’ (ಬದಲಾವಣೆ) ಸಂಸ್ಥೆಯನ್ನು ಪ್ರಾರಂಭಿಸಿದರು. ಈ ಸಂಸ್ಥೆ ಕೆಳವರ್ಗದವರ ಉನ್ನತಿಗಾಗಿ ಶ್ರಮಿಸಿದೆ. ಈ ಸಮುದಾಯಗಳ ಜನರೂ ನಮ್ಮಲ್ಲಿ ಒಬ್ಬರೆಂದು, ನಮ್ಮಂತೆ ಅವರೂ ಸ್ವಾಭಿಮಾನದಿಂದ, ಅಭಿವೃದ್ಧಿ ಪಥದಲ್ಲಿ ಮುನ್ನಡೆಯಬೇಕು ಎಂಬುದು ಈ ಸಂಸ್ಥೆಯ ಆಶಯಯಾಗಿದೆ. ದಾಭೋಲ್ಕರ್ ಅವರು ‘ಫೆಡರೇಶನ್ ಆಫ್ ಇಂಡಿಯನ್ ರೇಷನಲಿಸ್ಟ್ ಅಸೋಸಿಯೇಶನ್‌’ (ಭಾರತೀಯ ವಿಚಾರವಾದಿ ಸಂಸ್ಥೆ)ನ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಪ್ರಸಿದ್ಧ ಮರಾಠಿ ವಾರಪತ್ರಿಕೆ ‘ಸಾಧನಾ’ದ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

20 ವರ್ಷಗಳ ಕಾಲ ದಲಿತರ ಸಮಾನ ಹಕ್ಕುಗಳಿಗಾಗಿ ಅವರು ಹಲವು ಹೋರಾಟಗಳನ್ನು ಮಾಡಿದರು. ದೇಶದಲ್ಲಿನ ಜಾತಿ ವ್ಯವಸ್ಥೆಗೆ, ಜಾತಿ ಧರ್ಮಗಳ ಮೂಲಕ ಪ್ರೇರಿಪಿಸುವ ಹಿಂಸಾಚಾರವನ್ನು ವಿರೋಧಿಸುತ್ತಿದ್ದರು. ಅವರ ಪ್ರಯತ್ನದಿಂದಾಗಿ ಮರಾಠ್ವಾಡ ವಿಶ್ವವಿದ್ಯಾನಿಲಯವನ್ನು ‘ಅಂಬೇಡ್ಕರ್ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡಲಾಯಿತು.

ಅಸಾರಾಂ ಬಾಪು ಅವರನ್ನು ಬೆವರಿಸುವಲ್ಲಿ ಅವರ ಶ್ರಮ ಬಹಳಷ್ಟಿದೆ. ಅದು ಮಾರ್ಚ್ 2013. ಮಹಾರಾಷ್ಟ್ರದಾದ್ಯಂತ ಬರಗಾಲ ತಾಂಡವವಾಡುತ್ತಿದ್ದ ದಿನಗಳು. ಜನರ ದಾಹ ನೀಗಿಸಲು ಗುಟುಕು ನೀರಿಗೂ ಪರದಾಡುವಂತಾಗಿತ್ತು. ಅಂತಹ ಸಂದರ್ಭಗಳಲ್ಲಿ, ಆಶಾರಂಬಾಪು ಮತ್ತು ಅವರ ಶಿಷ್ಯರು ಹೋಳಿ ಹಬ್ಬದ ದಿನದಂದು, ನಾಗ್ಪುರ ಮುನ್ಸಿಪಲ್ ಕಾರ್ಪೊರೇಶನ್‌ ನಿಂದ ಟ್ಯಾಂಕರ್‌ಗಳ ಮೂಲಕ ನೀರು ತರಿಸಿಕೊಂಡು ಬಣ್ಣಗಳನ್ನು ಎರಚುತ್ತಾ, ನೃತ್ಯ ಮಾಡುತ್ತಾ, ಕುಡಿಯುವ ನೀರನ್ನು ವ್ಯರ್ಥ ಮಾಡುವುದನ್ನು ದಾಭೋಲ್ಕರ್ ಅವರು ಪ್ರಶ್ನಿಸಿದರು.

ವಾಮಾಚಾರ, ಮೂಢನಂಬಿಕೆ ವಿರೋಧಿ ವಿಧೇಯಕ:

ಮೂಢನಂಬಿಕೆ ಮತ್ತು ವಾಮಾಚಾರಗಳ ವಿರುದ್ಧ ಕಾನೂನು ಜಾರಿಗೆ ತರಬೇಕು ಎಂಬ ವಿದೇಯಕವನ್ನು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಂಡಿಸುವುದರ ಹಿಂದಿನ ಶ್ರಮ ದಾಭೋಲ್ಕರ್ ಅವರದು ಎಂದೇ ಹೇಳಬೇಕು. ಅವರ ನೇತೃತ್ವದಲ್ಲಿ ‘ಮಹಾರಾಷ್ಟ್ರ ಆಂಧ್ ನಿರ್ಮೂಲನಾ ಸಮಿತಿ’ ಈ ಮಸೂದೆಯನ್ನು ಸಿದ್ಧಪಡಿಸಿ ಅದನ್ನು ವಿಧಾನಸಭೆಯಲ್ಲಿ ಮಂಡಿಸಿತು. ಅದಕ್ಕೆ ಕಾನೂನಿನ ರೂಪ ಕೊಡಲು ಹಲವು ಪ್ರಯತ್ನಗಳನ್ನು ನಡೆಸಿದರು. ಆದ್ದರಿಂದ, ದಾಭೋಲ್ಕರ್ ಧರ್ಮ ವಿರೋಧಿ ಎಂದು, ಈ ಮಸೂದೆ ಹಿಂದೂ ಧರ್ಮಕ್ಕೆ ವಿರೋಧವಾಗಿದೆ ಎಂದು ಬಿಜೆಪಿ, ಶಿವಸೇನೆ ಸೇರಿದಂತೆ ಇತರ ಕೆಲವು ರಾಜಕೀಯ ಪಕ್ಷಗಳು ಮಸೂದೆಯನ್ನು ವಿರೋಧಿಸಿದವು.

ಇದನ್ನು ಓದಿ : ವಿಚಾರವಾದಿ ನರೇಂದ್ರ ದಾಭೋಲ್ಕರ್ ಕೊಲೆ ಪ್ರಕರಣ: ಇಬ್ಬರಿಗೆ ಜೀವಾವಧಿ ಶಿಕ್ಷೆ

ಶೋಷಣೆಯ ವಿರುದ್ಧವೇ ಹೊರತು ದೇವರು ಮತ್ತು ಧರ್ಮದ ವಿರುದ್ಧ ಅಲ್ಲ

ಬಳಿಕ ಅವರು ‘ಫ್ರಾನ್ಸ್ ಪ್ರೆಸ್ ಏಜೆನ್ಸಿ’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮಸೂದೆ ಕುರಿತು ಹೇಳುತ್ತಾ, ಇಡೀ ಮಸೂದೆಯಲ್ಲಿ ದೇವರು, ಧರ್ಮ ಎಂಬ ಪದಗಳಿಲ್ಲ ಎಂದು ಸ್ಪಷ್ಟಪಡಿಸಿದರು. ಅವರ ಹತ್ಯೆಗೆ ಕೆಲವು ದಿನಗಳ ಮೊದಲು ಆಗಸ್ಟ್ 6, 2013 ರಂದು ಮಾಧ್ಯಮಗಳೊಂದಿಗೆ ದಾಭೋಲ್ಕರ್ ಮಾತನಾಡಿದರು. ವಿಧಾನಸಭೆಯಲ್ಲಿ ಈ ವಿಧೇಯಕವನ್ನು ಏಳು ಬಾರಿ ಮಂಡಿಸಿದರೂ ಅದರ ಬಗ್ಗೆ ಚರ್ಚೆ ನಡೆದಿಲ್ಲ ಎಂದೂ, ಪ್ರಗತಿಪರ ಮನೋಭಾವ ಹೊಂದಿರುವ ಅಂದಿನ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ತಮ್ಮನ್ನು ನಿರುತ್ಸಾಹಗೊಳಿಸಿದರು ಎಂದೂ ದೂರಿದರು. ಈ ಮಸೂದೆಯು ಮೋಸದ ಶೋಷಣೆಯ ವಿರುದ್ಧವೇ ಹೊರತು ದೇವರು ಮತ್ತು ಧರ್ಮದ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ಆಗಸ್ಟ್ 20, 2013 ರಂದು ಅವರ ಹತ್ಯೆ ನಡೆದ ಮರುದಿನ, ಮಹಾರಾಷ್ಟ್ರ ಸಚಿವ ಸಂಪುಟವು ‘ವಾಮಾಚಾರಗಳು, ಮೌಡ್ಯಾಚರಣೆಗಳ’ ವಿರೋಧಿ ಸುಗ್ರೀವಾಜ್ಞೆಯನ್ನು ತಂದು ಸಂಸತ್ತಿನ ಅನುಮೋದನೆಗೆ ಕಳುಹಿಸಿತು. ಸುಗ್ರೀವಾಜ್ಞೆಯನ್ನು 29 ತಿದ್ದುಪಡಿಗಳೊಂದಿಗೆ 18 ಡಿಸೆಂಬರ್ 2013 ರಂದು ಸಂಸತ್ತು ಅನುಮೋದಿಸಿತು.

ಗುಂಡು ಹಾರಿಸಿ ಹತ್ಯೆ

ದಾಭೋಲ್ಕರ್ ಅವರಿಗೆ ಹಲವುಬಾರಿ ಬೆದರಿಕೆಗಳು ಬಂದಿದ್ದವು. ಕೊನೆಗೆ 2013ರ ಆಗಸ್ಟ್ 20ರಂದು ಬೆಳಗಿನ ವಾಕಿಂಗ್ ಹೋಗುತ್ತಿದ್ದಾಗ… ಸುಮಾರು 7.30ರ ಸುಮಾರಿಗೆ ಇಬ್ಬರು ವ್ಯಕ್ತಿಗಳು ದಾಭೋಲ್ಕರ್ ಅವರ ಮೇಲೆ ತುಂಬಾ ಹತ್ತಿರದಿಂದ ಗುಂಡಿನ ದಾಳಿ ನಡೆಸಿ ಮೋಟಾರ್ ಸೈಕಲ್ ಗಳಲ್ಲಿ ಪರಾರಿಯಾಗುತ್ತಾರೆ. ದಾಬೋಲ್ಕರ್ ಸ್ಥಳದಲ್ಲೇ ಸಾವನ್ನಪ್ಪುತ್ತಾರೆ. ಹಿಂದೂ ಪಂಥದ “ಸನಾತನ ಸಂಸ್ಥೆ” ಈ ಹತ್ಯೆಗೆ ಸಂಚು ರೂಪಿಸಿದೆ ಎಂದು ಪೋಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ದಾಭೋಲ್ಕರ್ ಅವರಂತೆಯೇ, ಕಮ್ಯುನಿಸ್ಟ್ ನಾಯಕ ಗೋವಿಂದ್ ಪನ್ಸಾರೆ ಫೆಬ್ರವರಿ 16, 2015 ರಂದು ಕೊಲ್ಲಾಪುರದಲ್ಲಿ ತಮ್ಮ ಪತ್ನಿ ಉಮಾ ಅವರೊಂದಿಗೆ ಬೆಳಗಿನ ವಾಕಿಂಗ್ ಮಾಡುವಾಗ ಗುಂಡಿಕ್ಕಿ ಕೊಲ್ಲಲ್ಪಟ್ಟರು. ನಂತರ ದಿನಗಳಲ್ಲಿ ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಅವರ ಹತ್ಯೆಗೆ ಈ ‘ಸನಾತನ ಸಂಸ್ಥೆ’ಯೇ ಕಾರಣ ಎಂದು ತಿಳಿದುಬಂದಿದೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯಿಂದ ದೊರೆತ ಸುಳಿವು

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಕರ್ನಾಟಕ ಪೊಲೀಸರ ತನಿಖೆಯಿಂದ ದಾಭೋಲ್ಕರ್ ಹತ್ಯೆ ಆರೋಪಿಗಳ ಸುಳಿವುಗಳು ಸಿಗುತ್ತದೆ. ಸುಳಿವುಗಳು ದೊರೆತ ನಂತರ, ಆಗಸ್ಟ್ 10, 2018 ರಂದು ನಲಸೋಪಾರ ಶಸ್ತ್ರಾಸ್ತ್ರ ಸಾಗಣೆ ಪ್ರಕರಣದಲ್ಲಿ ಎಟಿಎಸ್ ನಿಂದ ಬಂಧಿಸಲ್ಪಟ್ಟ ಮೂವರು ಹಿಂದುತ್ವವಾದಿಗಳ ವಿಚಾರಣೆಯ ಸಮಯದಲ್ಲಿ ಸಚಿನ್ ಪ್ರಕಾಶ್ರಾವ್ ಅಂದುರೆ ಎಂಬಾತನ ಹೆಸರು ಕೇಳಿಬಂತು. ಕಲಾಸ್ಕರ್ ಅವರ ವಿಚಾರಣೆಯ ನಂತರ ಸಿಬಿಐ ಅಂದುರೆಯನ್ನು ಬಂಧಿಸಿತು.

ಮೇ 2019 ರಲ್ಲಿ ಮುಂಬೈ ಮೂಲದ ವಕೀಲ ಪುನಾಲೇಕರ್ ಮತ್ತು ವಿಕ್ರಮ್ ಭಾವೆ ಅವರನ್ನು ಸಿಬಿಐ ಬಂಧಿಸಿತು. ದಾಭೋಲ್ಕರ್ ಮತ್ತು ಗೌರಿ ಲಂಕೇಶ್ ಹತ್ಯೆಗೆ ಬಳಸಿದ ಬಂದೂಕುಗಳನ್ನು ನಾಶಪಡಿಸುವಂತೆ ಕಲಾಸ್ಕರ್ ಅವರಿಗೆ ಪುನಾಲೇಕರ್ ಸಲಹೆ ನೀಡಿದ್ದರು ಎಂದು ಸಿಬಿಐ ಆರೋಪಿಸಿದೆ. ಪುನಾಲೇಕರ್ ಅವರ ಸೂಚನೆಗಳನ್ನು ಅನುಸರಿಸಿ, ಕಲಾಸ್ಕರ್ ಅವರು ನಾಲ್ಕು ದೇಶೀ ನಿರ್ಮಿತ ಪಿಸ್ತೂಲುಗಳನ್ನು ಒಡೆದುಹಾಕಿದರು ಮತ್ತು ಜುಲೈ 2018 ರಲ್ಲಿ ಥಾಣೆಯಲ್ಲಿ ಸೇತುವೆಯಿಂದ ಒಂದು ತೊರೆಗೆ ಎಸೆದರು ಎಂದು ಸಿಬಿಐ ಹೇಳಿಕೊಂಡಿದೆ. ಕೊಲೆಗೆ ಬಳಸಿದ ಆಯುಧವು ಇಂದಿಗೂ ಪತ್ತೆಯಾಗಲಿಲ್ಲ.

ಇಬ್ಬರಿಗೆ ಶಿಕ್ಷೆ: “ಮಾಸ್ಟರ್ ಮೈಂಡ್” ಗಳ ಖುಲಾಸೆ!!

ದಾಭೋಲ್ಕರ್ ಹತ್ಯೆ ನಡೆದ ಹತ್ತು ವರ್ಷ ಎಂಟು ತಿಂಗಳ ನಂತರ, ಪುಣೆಯ ವಿಶೇಷ ನ್ಯಾಯಾಲಯವು ಮೇ 10, 2024 ರಂದು ಇಬ್ಬರು ಹಿಂದುತ್ವವಾದಿಗಳಾದ ಸಚಿನ್ ಪ್ರಕಾಶ್ರಾವ್ ಅಂದುರೆ ಮತ್ತು ಶರದ್ ಭೌಸಾಹೇಬ್ ಕಲಾಸ್ಕರ್ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತು. ಅಲ್ಲದೆ, ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ, ನ್ಯಾಯಾಲಯವು “ಮಾಸ್ಟರ್ ಮೈಂಡ್” ಡಾ ವೀರೇಂದ್ರಸಿನ್ಹ್ ಶರದ್ಚಂದ್ರ ತಾವಡೆ, ವಕೀಲ ಸಂಜೀವ್ ಗಜಾನನ್ ಪುನಾಲೇಕರ್ ಮತ್ತು ಸನಾತನ ಸಂಸ್ಥೆಗೆ ಸಂಬಂಧಿಸಿದ ಕಾರ್ಯಕರ್ತ ವಿಕ್ರಮ್ ವಿನಯ್ ಭಾವೆ ಸೇರಿದಂತೆ ಮೂವರು ಆರೋಪಿಗಳನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿ ನ್ಯಾಯಾಧೀಶ ಪಿ.ಪಿ. ಜಾಧವ್ ಆದೇಶ ನೀಡಿದರು.

ತಾವಡೆ ಅವರನ್ನು ಖುಲಾಸೆಗೊಳಿಸುವ ಸಂದರ್ಭದಲ್ಲಿ ಪುಣೆ ನ್ಯಾಯಾಲಯವು “ಭಾವೆ ಮತ್ತು ಪುನಾಲೇಕರ್ ಅವರ ಮೇಲೆ ಖಂಡಿತವಾಗಿಯೂ ಸಂಶಯಕ್ಕೆ ಸಾಕಷ್ಟು ಅವಕಾಶವಿದೆ. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅವರನ್ನು ಖುಲಾಸೆಗೊಳಿಸಲಾಗುತ್ತಿದೆ” ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ ಪ್ರಾಸಿಕ್ಯೂಷನ್ ಅದಕ್ಕೆ ಪುರಾವೆಗಳನ್ನು ಒದಗಿಸಲು ವಿಫಲವಾಗಿದೆ.

ಇನ್ನೂ ಮೇಲ್ಮನವಿ ಸಲ್ಲಿಸದ ಸಿಬಿಐ

ಮೂಢನಂಬಿಕೆ ವಿರೋಧಿ ಹೋರಾಟಗಾರನ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ (ಎಚ್‌ಸಿ) ಮೇಲ್ಮನವಿ ಸಲ್ಲಿಸದ ಕೇಂದ್ರೀಯ ತನಿಖಾ ದಳ (ಸಿಬಿಐ)ದ ವಿರುದ್ಧ ಡಾ.ನರೇಂದ್ರ ದಾಭೋಲ್ಕರ್ ಅವರ ಕುಟುಂಬ ಸದಸ್ಯರು ತೀವ್ರ ವಾಗ್ದಾಳಿ ನಡೆಸಿದ್ದಾರೆ ಎಂದು ಆಗಸ್ಟ್ 18ರ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದ ವಿರುದ್ಧ ಸಿಬಿಐ ಮೇಲ್ಮನವಿ ಸಲ್ಲಿಸಲು ವಿಳಂಬ ಮಾಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಡಾ.ದಾಭೋಲ್ಕರ್ ಅವರ ಪುತ್ರ ಹಮೀದ್, ಪುಣೆ ನ್ಯಾಯಾಲಯವು ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿ ಸುಮಾರು 100 ದಿನಗಳು ಕಳೆದಿದ್ದರೂ ಸಿಬಿಐ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿಲ್ಲ. ತಾತ್ತ್ವಿಕವಾಗಿ, ಸಿಬಿಐ 90 ದಿನಗಳಲ್ಲಿ ಖುಲಾಸೆಗೊಳಿಸುವುದನ್ನು ಪ್ರಶ್ನಿಸಬೇಕಿತ್ತು. ಡಾ. ದಾಭೋಲ್ಕರ್ ಅವರ ಕುಟುಂಬದ ಸದಸ್ಯರಾದ ನಾವು ಖುಲಾಸೆಯ ವಿರುದ್ಧ ಹೈಕೋರ್ಟ್ ಗೆ ಹೋಗಲು ಉಪಕ್ರಮವನ್ನು ತೆಗೆದುಕೊಂಡಿದ್ದೇವೆ, ಆದರೆ ಮೇಲ್ಮನವಿ ಸಲ್ಲಿಸಲು ಸಿಬಿಐ ವಿಳಂಬ ಮಾಡಿರುವುದು ಅಕ್ಷಮ್ಯವಾಗಿದೆ ಎಂದರು.

ಏನೇ ಆಗಲಿ, ದೇಶ ಒಬ್ಬ ಸಮಾಜ ಸುಧಾರಕ ಹಾಗೂ ವಿಚಾರವಾದಿಯನ್ನು ಕಳೆದುಕೊಂಡಿದೆ. ‘ಆಲ್ ಇಂಡಿಯಾ ಪೀಪುಲ್ಸ್ ಸೈನ್ಸ್ ನೆಟ್‌ವರ್ಕ್’ ಅವರ ಹತ್ಯೆಯ ದಿನವಾದ ಆಗಸ್ಟ್ 20 ಅನ್ನು ‘ರಾಷ್ಟ್ರೀಯ ಸೈಂಟಿಫಿಕ್ ಟೆಂಪರ್ ಡೇ’ ಎಂದು ಆಯೋಜಿಸುತ್ತಿದೆ.

ವಕೀಲ ಸಂಜೀವ್ ಗಜಾನನ್ ಪುನಾಲೇಕರ್ ಮತ್ತು ಸನಾತನ ಸಂಸ್ಥೆಗೆ ಸಂಬಂಧಿಸಿದ ಕಾರ್ಯಕರ್ತ ವಿಕ್ರಮ್ ವಿನಯ್ ಭಾವೆ ಅವರ ಮೇಲೆ ಖಂಡಿತವಾಗಿಯೂ ಸಂಶಯಕ್ಕೆ ಸಾಕಷ್ಟು ಅವಕಾಶವಿದೆ. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅವರನ್ನು ಖುಲಾಸೆಗೊಳಿಸಲಾಗುತ್ತಿದೆ ಎಂದು ಪುಣೆ ನ್ಯಾಯಾಲಯವು ಹೇಳಿದೆ. ಆದರೆ ಪ್ರಾಸಿಕ್ಯೂಷನ್ ಅದಕ್ಕೆ ಪುರಾವೆಗಳನ್ನು ಒದಗಿಸಲು ವಿಫಲವಾಗಿದೆ.

ಇದನ್ನು ನೋಡಿ : ಪ್ರೇಮವಿಲ್ಲದ ವಿದ್ಯೆ ವ್ಯರ್ಥ| ಕಬೀರ್ ದಾಸ| ನಾದ ಮಣಿನಾಲ್ಕೂರು #kabir #kabeer Janashakthi Media

 

Donate Janashakthi Media

Leave a Reply

Your email address will not be published. Required fields are marked *