ಗುವಾಹಟಿ: ಅಸ್ಸಾಂ ರಾಜ್ಯಕ್ಕೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ 73 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಪೂರ್ಣ ಬಹುಮತದತ್ತ ಹೆಜ್ಜೆ ಹಾಕಿದೆ.
ಒಟ್ಟು 126 ಸ್ಥಾನಗಳ ಪೈಕಿ 46 ರಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಮತ್ತು ರಾಜ್ಯ ಹಣಕಾಸು ಮತ್ತು ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಕ್ರಮವಾಗಿ ಮಜೌಲಿ ಮತ್ತು ಜಲುಕ್ಬರಿ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಸಿಎಎ ವಿರೋಧಿ ಹೋರಾಟಗಾರ ಅಖಿಲ್ ಗೊಗೊಯ್ , ಸಿಬ್ಸಾಗರ್ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಅಸ್ಸಾಂನಲ್ಲಿ ಅಧಿಕಾರ ಹಿಡಿಯಲು 64 ಕ್ಷೇತ್ರಗಳಲ್ಲಿ ಗೆಲುವು ಅಗತ್ಯ. ಅಸ್ಸಾಂನಲ್ಲಿ ಮೂರು ಹಂತದಲ್ಲಿ ಚುನಾವಣೆ ನಡೆದಿತ್ತು. ಒಟ್ಟಾರೆ ಶೇ.82.04 ರಷ್ಟು ಮತದಾನ ದಾಖಲಾಗಿದ್ದವು.
ಅಸ್ಸಾಂನಲ್ಲಿ ಸದ್ಯ ಬಿಜೆಪಿ ಭಾರೀ ಮುನ್ನಡೆ ಕಾಯ್ದುಕೊಂಡಿದ್ದು, ಬಿಜೆಪಿ ಮತ್ತೆ ಸರ್ಕಾರ ರಚಿಸಲಿದೆ ಎಂದು ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಪಕ್ಷವು ಯುನೈಟೆಡ್ ಫೀಪಲ್ಸ್ ಪಾರ್ಟಿ ಲಿಬರಲ್ ಜೊತೆಗೂಡಿ ಸರ್ಕಾರ ರಚಿಸಲಿದೆ ಎಂದು ಸೊನೊವಾಲ್ ತಿಳಿಸಿದ್ದಾರೆ. ಮತ ಎಣಿಕೆ ಪೂರ್ಣಗೊಳ್ಳುವವರೆಗೂ ಕಾಯುತ್ತೇವೆ. ಆದರೆ, ಸದ್ಯದ ಅಂಕಿ ಅಂಕಿಗಳ ಪ್ರಕಾರ ಗೆಲುವು ನಮ್ಮ ಕಡೆ ಇದೆ ಎಂದು ಅವರು ಹೇಳಿದ್ದಾರೆ.