ಅಸ್ಸಾಂನ ದರ್ರಾಂಗ್ ಜಿಲ್ಲೆಯ ಧಾಲ್ಪುರದಲ್ಲಿ ಸೆಪ್ಟೆಂಬರ್ 23ರಂದು ಸುಮಾರು 1000 ಕುಟುಂಬಗಳನ್ನು ‘ಕಾನೂನುಬಾಹಿರ ವಲಸಿಗರೆಂದು ತೆರವು ಮಾಡಿಸುವ ಪೊಲೀಸ್ ಕಾರ್ಯಾಚರಣೆಯಲ್ಲಿ ಗೋಲೀಬಾರ್ ಮತ್ತು ಇಬ್ಬರ ಸಾವಿನ ಘಟನೆ ಇಡೀ ದೇಶದ ಗಮನ ಸೆಳೆದಿದೆ. ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ನೇತೃತ್ವದಲ್ಲಿ ಸಿಪಿಐ(ಎಂ) ನಿಯೋಗವೊಂದು ಆ ಸ್ಥಳಕ್ಕೆ ಭೇಟಿ ನೀಡಿದಾಗ ತಿಳಿದು ಬಂದ ಸಂಗತಿಗಳು ದಿಗಿಲುಗೊಳಿಸುವಂತದ್ದು ಎಂದು ಅವರು ಹೇಳಿದ್ದಾರೆ. ಈ ಕುರಿತು ಅವರು ರಾಜ್ಯದ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವ ಶರ್ಮಾರವರನ್ನು ಭೇಟಿ ಮಾಡಲು ಹೋದಾಗ ಅವರು ಪ್ರವಾಸದಲ್ಲಿದ್ದರಿಂದ ಅವರಿಗೆ ಈ ಕುರಿತು ಪತ್ರ ಬರೆದು ತಕ್ಷಣವೇ ಈ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಪ್ರದೇಶದಲ್ಲಿ ಸಂವಿಧಾನ ಮತ್ತು ಕಾನೂನು ಚೌಕಟ್ಟು ಅಮಾನತಿನಲ್ಲಿ ಇರುವಂತೆ ಕಾಣುತ್ತದೆ ಎಂದು ಹೇಳಿರುವ ಬೃಂದಾ ಕಾರಟ್ ತಮ್ಮ ಪತ್ರದಲ್ಲಿ ಎತ್ತಿರುವ ಅಂಶಗಳು ಹೀಗಿವೆ:
- ಕಳೆದ 50 ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಇಲ್ಲಿ ಸಾಗುವಳಿ ಮಾಡುತ್ತಿರುವ ಸುಮಾರು 1000 ಬಡ ರೈತ ಕುಟುಂಬಗಳನ್ನು ಅಲ್ಲಿಂದ ಸಶಸ್ತ್ರ ಪೊಲೀಸ್ ಪಡೆಯ ನೆರವಿನಿಂದ ತೆರವುಗೊಳಿಸಲಾಗಿದೆ. ಆ ಜನಗಳ ಕಠಿಣ ಶ್ರಮದಿಂದಾಗಿ ಆ ಭೂಮಿ ಸಾಗುವಳಿಯೋಗ್ಯವಾಗಿತ್ತು, ಅಲ್ಲಿ ಅವರು ತರಕಾರಿ, ಭತ್ತ ಮತ್ತು ವಿವಿಧ ಬೆಳೆಗಳನ್ನು ಬೆಳೆದು ಬದುಕು ನಡೆಸುತ್ತಿದ್ದರು. ತಮ್ಮ ವೃತ್ತಿಯ ಮತ್ತು ಕೆಲವು ಸಂದರ್ಭಗಳಲ್ಲಿ ಒಡೆತನದ ದಾಖಲೆಗಳು ಅವರ ಬಳಿ ಇವೆ. ಈ ನಿಯೋಗ ನಡೆಸಿದ ಸಾರ್ವಜನಿಕ ವಿಚಾರಣೆಯಲ್ಲಿ ನಾವೇ ಅವನ್ನು ನೋಡಿದ್ದೇವೆ. ಈ ಭೂಮಿಯನ್ನು ಒತ್ತುವರಿ ಮಾಡಲಾಗಿದೆ ಎಂಬ ಸರಕಾರದ ದಾವೆ ಸರಿಯಿದೆ ಎಂದು ಭಾವಿಸಿದರೂ, ಈ ಜನಗಳ ದಾವೆಗಳನ್ನು ಪರೀಕ್ಷಿಸಲು ಅಥವ ತಿರಸ್ಕರಿಸಲು ಯಾವುದೇ ಸರ್ವೆಯನ್ನು ಅದು ನಡೆಸಿಲ್ಲ. ಅಲ್ಲದೆ, ತೆರವು ಮಾಡಿಸಲು 12 ಗಂಟೆಗಳಿಗಿಂತಲೂ ಕಡಿಮೆ ಕಾಲಾವಧಿ ಕೊಡಲಾಗಿತ್ತು. ಈ ಇಡೀ ಪ್ರಕ್ರಿಯೆ ಸಂಪೂರ್ಣವಾಗಿ ಕಾನೂನುಬಾಹಿರ ಮತ್ತು ಅಮಾನವೀಯ.
- ಯಾವುದೇ ಪುನರ್ವಸತಿ ಯೋಜನೆ ಇರಲಿಲ್ಲ, ಅಥವ ಅವರಿಗೆ ಬೇರೆ ಯಾವ ಭೂಮಿಯನ್ನೂ ಕೊಡುವ ಬಗ್ಗೆ ಹೇಳಿಲ್ಲ. ತದ್ವಿರುದ್ಧವಾಗಿ, ಸಶಸ್ತ್ರ ಪೊಲೀಸರ ಹಲವು ತಂಡಗಳು ಅಡ್ಡಾಡುತ್ತಿರುವುದನ್ನು ನೋಡಿದೆವು. ಇದು ಭೀತಿಪಡಿಸುವ ಪ್ರಯತ್ನವಲ್ಲದೆ ಬೇರೇನೂ ಅಲ್ಲ. ಸರಕಾರ ಟ್ರ್ಯಾಕ್ಟರುಗಳನ್ನು ಆ ಭೂಮಿಯಲ್ಲಿ ಓಡಾಡಿಸುತ್ತಿರುವುದನ್ನೂ ನೋಡಿದೆವು. ಇಲ್ಲಿಯೂ ದಾವೆಗಳನ್ನು ಇತ್ಯರ್ಥ ಮಾಡದೆಯೇ ಸರಕಾರ ಕಾನೂನುಬಾಹಿರವಾಗಿ ಆ ಭೂಮಿಯನ್ನು ಕಬಳಿಸಿದೆ.
- ಸೆಪ್ಟೆಂಬರ್ 23ರಂದು ಆಡಳಿತ ಮತ್ತು ಪೊಲೀಸಿನ ಪಾತ್ರ ಆಕ್ರಮಿಸಿಕೊಂಡ ಪಡೆಗಿಂತಲೂ ಕೆಟ್ಟದಾಗಿತ್ತು. ಸ್ವಲ್ಪ ಸಮಯ ಕೊಡಿ ಎಂದು ಜನ ಬೇಡಿಕೊಳ್ಳುತ್ತಿದ್ದರು, ಹೆಂಗಸರು ಮತ್ತು ಮಕ್ಕಳು ಭಯಭೀತರಾಗಿದ್ದರು, ಆದರೆ ಸಮಯ ಕೊಡಲಿಲ್ಲ, ಅವರ ಮನೆಗಳನ್ನು ನೆಲಸಮ ಮಾಡಲಾಯಿತು, ಅವರ ಬಳಿಯಿದ್ದ ಅಲ್ಪಸ್ವಲ್ಪ ಸಾಮಾನುಗಳನ್ನೂ ಧ್ವಂಸ ಮಾಡಲಾಯಿತು. ಪೊಲೀಸರು ಜನಗಳ ಮೇಲೆ ನೇರವಾಗಿಯೇ ಗೋಲೀಬಾರ್ ನಡೆಸಿ ಇಬ್ಬರ ಪ್ರಾಣ ತೆಗೆದುಕೊಂಡರು. ಹಲವರು ಗಾಯಗೊಂಡರು. ಇನ್ನೂ ನಾಚಿಕೆಗೇಡಿನ ಸಂಗತಿಯೆಂದರೆ, ಪೊಲೀಸರು ತಮ್ಮೊಂದಿಗೆ ಕರೆತಂದಿದ್ದ ಒಬ್ಬ ಫೋಟೋಗ್ರಾಫರ್ ಅತ್ಯಂತ ದ್ವೇಷಪೂರ್ಣ, ಬರ್ಬರ ಕೃತ್ಯ ನಡೆಸುತ್ತಿದ್ದಾಗ ಪ್ರೇಕ್ಷಕರಂತೆ ನೋಡುತ್ತ ನಿಂತಿದ್ದರು. ಆತ ಗೋಲೀಬಾರಿಗೆ ಬಲಿಯಾಗಿ ಬಿದ್ದಿದ್ದವನ ಮೇಲೆ ಮತ್ತೆ-ಮತ್ತೆ ನೆಗೆದಾಡುತ್ತಿದ್ದ. ಇಂತಹ ಒಂದು ಅತ್ಯಾಚಾರದಲ್ಲಿ ಶಾಮೀಲಾದುದಕ್ಕೆ ಯಾವ ಪೊಲೀಸ್ ಸಿಬ್ಬಂದಿಯನ್ನೂ ಹೊಣೆಗಾರನಾಗಿ ಮಾಡಿಲ್ಲ ಎಂಬುದು ನಿಜಕ್ಕೂ ಅಭೂತಪೂರ್ವ ಸಂಗತಿ.
- ಸ್ಥಾನಪಲ್ಲಟಗೊಂಡಿರುವ ಜನಗಳ ಸ್ಥಿತಿ ಯುದ್ಧಕೈದಿಗಳಿಗಿಂತಲೂ ಕೆಟ್ಟದಾಗಿದೆ. ಪುನರ್ವಸತಿಗೆ ಒಂದು ಪೈಸಾನೂ ಕೊಟ್ಟಿಲ್ಲ. ನೀರಿಲ್ಲ, ಶೌಚಾಲಯಗಳಿಲ್ಲ, ಸೂರಿಲ್ಲ, ಆಹಾರವಿಲ್ಲ, ವೈದ್ಯಕೀಯ ನೆರವಿಲ್ಲ ಎಂದು ಹಲವಾರು ಹೆಂಗಸರು, ಮಕ್ಕಳು ನಮ್ಮಲ್ಲಿ ಅಳುತ್ತ ತಮ್ಮ ಸಂಕಟ ತೋಡಿಕೊಂಡರು. ಮಕ್ಕಳು ಕೊಳಕು ನದಿ ನೀರನ್ನು ಕುಡಿಯಬೇಕಾಗಿ ಬಂದಿದೆ. ಪ್ರತಿಯೊಂದು ಕುಟುಂಬದಲ್ಲೂ ರೋಗಗ್ರಸ್ತ ಮಕ್ಕಳು, ಹೆಂಗಸರು ಇದ್ದಾರೆ. ಇದು ಸರಕಾರ ಉಂಟುಮಾಡಿರುವ ದುಃಸ್ವಪ್ನದ ಸ್ಥಿತಿ. ಹತ್ತಿರದಲ್ಲಿ ಶಾಲೆಗಳು ತೆರೆದಿದ್ದರೂ ಇಲ್ಲಿಯ ಮಕ್ಕಳು ಶಾಲೆಗೆ ಹೋಗಲಾರದಂತಹ ಪರಿಸ್ಥಿತಿ ಇರುವುದು ಕಂಡು ಬಂತು. ಆಡಳಿತ ಇಲ್ಲಿಯ ಎಲ್ಲ ರಸ್ತೆಗಳನ್ನು ಬಂದ್ ಮಾಡಿದೆ, ಇದರಿಂದಾಗಿ ವೈದ್ಯಕೀಯ ನೆರವನ್ನು ಪಡೆಯುವುದೂ ಕಷ್ಟಕರವಾಗಿದೆ.
- ನಾಲ್ಕು ಮಸೀದಿಗಳನ್ನು ಒಡೆದಿರುವುದು ಕಂಡು ಬಂತು. ಕನಿಷ್ಟ ಒಂದನ್ನು ಸುಟ್ಟು ಹಾಕಲಾಗಿದೆ., ಸ್ಮಶಾನಗಳನ್ನು ಧ್ವಂಸ ಮಾಡಲಾಗಿದೆ. ಹತ್ತಾರು ಮಕ್ಕಳು ಓದುತ್ತಿದ್ದ ಒಂದು ಮದರಸಾವನ್ನು ಕೂಡ ಒಡೆದು ಹಾಕಲಾಗಿದೆ.
- ಈ ಭೂಮಿಯನ್ನು “ಮೂಲನಿವಾಸಿ” ಜನಗಳನ್ನು ದುಡಿಸಿಕೊಂಡು ಒಂದು ಫಾರ್ಮ್ ಆಗಿ ಪರಿವರ್ತಿಸಲಾಗುವುದು ಎಂಬ ಸರಕಾರದ ಘೋಷಣೆ ಒಂದು ಗೂಢ ಸಂಗತಿಯಾಗಿ ಕಾಣುತ್ತಿದೆ. ಏಕೆಂದರೆ ಈ ಪ್ರದೇಶ ಈಗಾಗಲೇ ಬೇಸಾಯದ ಪ್ರದೇಶವಾಗಿದೆ, ಸ್ಥಳೀಯ ಜನಗಳ ಅಗತ್ಯಗಳನ್ನಲ್ಲದೆ, ಗುವಾಹಾಟಿಯ ತರಕಾರಿ ಮಾರುಕಟ್ಟೆಗಳಿಗೂ ಪೂರೈಕೆ ಇಲ್ಲಿಂದ ಆಗುತ್ತಿತ್ತು. ಈ ರೀತಿ ತೆರವು ಮಾಡಿಸದೆಯೇ ಸರಕಾರೀ ಫಾರ್ಮ್ಗಳನ್ನು ಅಭಿವೃದ್ಧಿ ಪಡಿಸಲು ಬೇಕಾದಷ್ಟು ಭೂಮಿ ಇಲ್ಲಿದೆ. ಈ ತಾರ್ಕಿಕ ಹೆಜ್ಜೆಯನ್ನು ಸರಕಾರ ಏಕೆ ಇಟ್ಟಿಲ್ಲ?
- ದುರದೃಷ್ಟವಶಾತ್, ಮತ್ತು ಖೇದಕರ ಸಂಗತಿಯೆಂದರೆ ಸರಕಾರದ ಈ ಕ್ರಮಕ್ಕೆ ಏಕೈಕ ಕಾರಣ ಅದರ ಸಂಕುಚಿತ ರಾಜಕೀಯವೇ ಎಂದು ಕಂಡುಬರುತ್ತದೆ. ಅವರೆಲ್ಲ ಭಾರತೀಯ ನಾಗರಿಕರು ಎಂದು ಸರಕಾರಕ್ಕೇ ಗೊತ್ತಿದ್ದರೂ ಕೂಡ ಅಲ್ಪಸಂಖ್ಯಾತ ಸಮುದಾಯಗಳಿಗೆ ಅವುಗಳ ಹಕ್ಕುಗಳನ್ನು ವಂಚಿಸುವ ಸಂಕುಚಿತ ರಾಜಕೀಯ ಅಜೆಂಡಾ ಇಲ್ಲಿ ಕಾಣಬರುತ್ತಿದೆ. ಮುಸ್ಲಿಮರೆಂಬ ಒಂದೇ ಕಾರಣಕ್ಕೆ ಈ ಪ್ರದೇಶದಲ್ಲಿ ಅವರ ಹಕ್ಕುಗಳನ್ನು ವಂಚಿಸಲಾಗುತ್ತಿದೆ.
- ಇಲ್ಲಿನ ಸನ್ನಿವೇಶ ಮಾನವ ಹಕ್ಕುಗಳ ಒಂದು ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಸಂವಿಧಾನದ ಮೇಲೆ, ತೆರವು, ಮರುನೆಲೆ, ಮರುವಸತಿಯ ಕಾನೂನುಗಳ ಮೇಲೆ ನಡೆಸಿರುವ ಒಂದು ಹಲ್ಲೆ.
ಆದ್ದರಿಂದ 1. ಸರಿಯಾದ ಸರ್ವೆ ಮತ್ತು ಪರೀಕ್ಷಣೆ ಇಲ್ಲದ ಈ ಎಲ್ಲ ತೆರವು ಕ್ರಮಗಳನ್ನು ಮತ್ತು ಭೂಕಬಳಿಕೆಯನ್ನು ತಕ್ಷಣವೇ ನಿಲ್ಲಿಸಬೇಕು; 2. ಸಾವು ಉಂಟಾದ ಮತ್ತು ಗಾಯಗೊಂಡವರ ಕುಟುಂಬಗಳಿಗೆ ಪರಿಹಾರ ಕೊಡಬೇಕು. ತಮ್ಮ ಮನೆ ಸಾಮಾನುಗಳನ್ನು ಮತ್ತು ಜೀವನೋಪಾಯಗಳನ್ನು ಕಳಕೊಂಡವರಿಗೂ ಪರಿಹಾರ ತೆರಬೇಕು; 3. ಆಹಾರ, ನೀರು, ತಾತ್ಕಾಲಿಕ ಶೌಚಾಲಯ, ಸೂರುಗಳು ಮುಂತಾದ ತಕ್ಷಣದ ಪರಿಹಾರಗಳನ್ನು ಒದಗಿಸಬೇಕು.; 4. ಹತ್ಯೆಗಳಿಗೆ ಕಾರಣರಾದ ಮತ್ತು ಫೋಟೋಗ್ರಾಫರ್ನ ಬರ್ಬರ ಕೃತ್ಯಗಳಲ್ಲಿ ಶಾಮೀಲಾದ ಪೋಲಿಸ್ ಸಿಬ್ಬಂದಿಯ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಸಿಪಿಐ(ಎಂ) ನಿಯೋಗ ಆಗ್ರಹಿಸಿದೆ.
ಈ ನಿಯೋಗದಲ್ಲಿ ಬೃಂದಾಕಾರಟ್ ಜತೆಗೆ ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ ಸುಪ್ರಕಾಶ್ ತಾಲುಕ್ದಾರ್, ಸಿಪಿಐ(ಎಂ) ಶಾಸಕ ಮನೋರಂಜನ್ ತಾಲುಕ್ದಾರ್ ಮತ್ತಿತರ ರಾಜ್ಯ ಮುಖಂಡರು ಇದ್ದರು.
ಈ ಭೇಟಿಯ ನಂತರ ಬೃಂದಾ ಕಾರಟ್ ಪ್ರತಿಕಾಗೋಷ್ಠಿಯೊಂದನ್ನು ಉದ್ದೇಶಿಸಿ ತಮ್ಮ ನಿಯೋಗಕ್ಕೆ ಕಂಡುಬಂದ ಸಂಗತಿಗಳನ್ನು ಪತ್ರಕರ್ತರಿಗೆ ತಿಳಿಸಿದರು. ಇದು ಕೇವಲ ಅಸ್ಸಾಂಗೆ ಸೀಮಿತವಾದ ಪ್ರಕರಣ ಅಲ್ಲ, ಈ ಬರ್ಬರ ಕಾರ್ಯಾಚರಣೆಯ ವಿರುದ್ಧ ರಾಜ್ಯದಲ್ಲಿ ಮತ್ತು ದೇಶದಲ್ಲೂ ಇನ್ನಷ್ಟು ಪ್ರತಿಭಟನೆಗಳು ನಡೆಯುತ್ತವೆ ಎಂದು ಅವರು ಹೇಳಿದರು.