ಅಸ್ಪೃಶ್ಯತೆಯ ಸಮಸ್ಯೆ: ಭಗತ್ ಸಿಂಗನ ‘ವಿದ್ರೋಹಿ’ ಬರಹ

ಭಗತ್ ಸಿಂಗ್ ಇದನ್ನು ಬರೆದಿದ್ದು 1923. ಮೊದಲ ಸಲ ಪ್ರಕಟಗೊಂಡಿದ್ದು ಜೂನ್ 1928ರಲ್ಲಿ; ಅಮೃತಸರದಿಂದ ಪ್ರಕಟಗೊಳ್ಳುತ್ತಿದ್ದ ‘ಕೀರ್ತಿ’ ಎಂಬ ಪಂಜಾಬಿ ಪತ್ರಿಕೆಯಲ್ಲಿ ಪ್ರಕಟಿತವಾಗಿತ್ತು. ಈ ಲೇಖನ ಬರೆದಾಗ ಭಗತನ ವಯಸ್ಸು ಕೇವಲ 16 ಅನ್ನೋದನ್ನು ಗಮನಿಸಬೇಕು.

ಅನುವಾದ: ಚೇತನಾ ತೀರ್ಥಹಳ್ಳಿ

ನಮ್ಮ ದೇಶದಲ್ಲಿರುವಂಥ ಪರಿಸ್ಥಿತಿಯನ್ನು ಬಹುಶಃ ಇನ್ಯಾವ ದೇಶವೂ ಕಂಡಿರಲಿಕ್ಕಿಲ್ಲ. ಎಂತೆಂಥಾ ಚಿತ್ರವಿಚಿತ್ರ ಸಂಗತಿಗಳು ನಡೆಯುತ್ತವೆ ಇಲ್ಲಿ. ಈ ದೇಶದ ಮುಖ್ಯ ಸಮಸ್ಯೆ ಅಸ್ಪೃಶ್ಯತೆ. 30 ಕೋಟಿ ಜನಸಂಖ್ಯೆಯ ಈ ದೇಶದಲ್ಲಿ 6 ಕೋಟಿಯಷ್ಟು ಜನ ಅಸ್ಪೃಶ್ಯರೆಂದು ಕರೆಯಲ್ಪಡುತ್ತಾರೆ. ಅವರ ಸ್ಪರ್ಶ ಮಾತ್ರದಿಂದ ಧರ್ಮಭ್ರಷ್ಟವಾಗಿಬಿಡುತ್ತದೆಯಂತೆ! ಅವರು ದೇವಾಲಯ ಪ್ರವೇಶಿಸಿದರೆ ದೇವತೆಗಳಿಗೆ ಕೋಪ ಬರುವುದಂತೆ! ಅವರು ಬಾವಿಯಲ್ಲಿ ನೀರು ಸೇದಿದರೆ ಆ ಬಾವಿಯೇ ಅಪವಿತ್ರವಾಗಿಬಿಡುವುದಂತೆ! ಈ ಎಲ್ಲವೂ ಇಪ್ಪತ್ತನೆ ಶತಮಾನದಲ್ಲಿ ಚರ್ಚೆಯಾಗ್ತಿರುವ ವಿಷಯಗಳು ಅಂದರೆ, ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇದೆಯೆ!?

ನಮ್ಮ ದೇಶ ಅಧ್ಯಾತ್ಮವಾದಿ ಅನ್ನುವ ಹೆಮ್ಮೆ ಹೊತ್ತುಕೊಂಡಿದೆ. ಆದರೆ ಇಲ್ಲಿನ ಜನರು ನಾವು ಮನುಷ್ಯರನ್ನು ಮನುಷ್ಯರಂತೆ ನೋಡಲಿಕ್ಕೂ ಒದ್ದಾಡುತ್ತೇವೆ. ಅದೇ ವೇಳೆಗೆ, ಯಾವ ಯುರೋಪನ್ನು ನಾವು ಭೌತಿಕವಾದಿ ಅನ್ನುತ್ತೇವೆಯೋ ಆ ಖಂಡದಲ್ಲಿ ಇಂಥ ಅಪಸವ್ಯಗಳ ವಿರುದ್ಧ ಕ್ರಾಂತಿಯ ಕಹಳೆ ಮೊಳಗಿ ಶತಮಾನವೇ ಉರುಳಿದೆ.

ಅಮೆರಿಕಾ ಮತ್ತು ಫ್ರಾನ್ಸ್ ಕ್ರಾಂತಿಯ ಸಮಯದಲ್ಲೇ ಪಶ್ಚಿಮದಲ್ಲಿ ಸಮಾನತೆಯ ಕೂಗು ಎದ್ದಿತ್ತು. ಇವತ್ತು ರಷ್ಯಾ ಕೂಡ ಎಲ್ಲ ಬಗೆಯ ಭೇದಭಾವಗಳಿಂದ ಹೊರಬಂದು ಕ್ರಾಂತಿಗೆ ಟೊಂಕ ಕಟ್ಟಿ ನಿಂತಿದೆ.

ನಾವು ಶತಶತಮಾನಗಳಿಂದ ಆತ್ಮ – ಪರಮಾತ್ಮಗಳ ಮಾತುಗಳನ್ನಾಡುತ್ತಾ, ದೊಡ್ಡ ದೊಡ್ಡ ಚರ್ಚೆಗಳನ್ನು ನಡೆಸುತ್ತ ಬಂದಿದ್ದೇವೆ. ಈ ಚರ್ಚೆಗಳಲ್ಲಿ ಅಸ್ಪೃಶ್ಯರನ್ನು ಮುಟ್ಟಬಹುದೋ – ಬಾರದೋ, ಅವರು ವೇದಪಠಣಕ್ಕೆ ಅರ್ಹರೋ – ಅಲ್ಲವೋ ಎಂಬ ವಾಗ್ವಾದವೇ ಮುಖ್ಯವಾಗಿದೆ. ವಿದೇಶಗಳಲ್ಲಿರುವಂತೆ ನಮ್ಮ ದೇಶದಲ್ಲಿ ಒಳ್ಳೆಯ ಶಾಲೆಗಳಿಲ್ಲ. ಇಂಗ್ಲೀಷರು ನಮ್ಮನ್ನು ಸಮಾನರಾಗಿ ಪರಿಗಣಿಸುವುದಿಲ್ಲ – ಎಂದೆಲ್ಲ ನಾವು ಗೊಣಗಾಡುತ್ತೇವೆ. ಅಸ್ಪೃಶ್ಯತೆ ಆಚರಿಸುವ ನಮಗೆ ಹೀಗೆಲ್ಲ ದೂರುವ ಅಧಿಕಾರವಾದರೂ ಇದೆಯೆ?

ಸಿಂಧ್ ಪ್ರಾಂತದ ಸಜ್ಜನ ಚಿಂತಕ ನೂರ್ ಮಹಮ್ಮದ್ ಈ ಕುರಿತು ಎತ್ತಿರುವ ಪ್ರಶ್ನೆಗಳು ಚಿಂತನಾರ್ಹವಾಗಿವೆ. “ನೀವು ಒಬ್ಬ ಮನುಷ್ಯನಿಗೆ ಕುಡಿಯುವ ನೀರನ್ನು ಕೊಡಲು ಹಿಂದೇಟು ಹಾಕುತ್ತೀರಿ. ಆ ಜನರನ್ನು ಶಾಲೆಯಲ್ಲಿ ಬಿಟ್ಟುಕೊಳ್ಳಲು ಅಂಜಾಣಿಸುತ್ತೀರಿ. ಹೀಗಿರುವಾಗ ನಿಮಗೆ ಹೆಚ್ಚಿನ ಅಧಿಕಾರಕ್ಕಾಗಿ ಬೇಡಿಕೆ ಇಡುವ ಅರ್ಹತೆಯಾದರೂ ಏನಿದೆ? ಒಂದು ಸಮುದಾಯದ ಮನುಷ್ಯನಿಗೆ ಸಮಾನ ಅಧಿಕಾರ ಕೊಡಲು ನಿರಾಕರಿಸುವ ನೀವು ಹೆಚ್ಚಿನ ರಾಜಕೀಯ ಅಧಿಕಾರವನ್ನು ಅದು ಹೇಗೆ ಪಡೆಯುತ್ತೀರಿ?” ಎಂದವರು ಕೇಳುತ್ತಾರೆ.

ಈ ಮಾತುಗಳು ತೀರ ಸರಿಯಾಗಿವೆ. ಆದರೆ ಇವನ್ನು ಆಡಿರುವುದು ಒಬ್ಬ ಮುಸ್ಲಿಮನಾಗಿರುವುದರಿಂದ ಹಿಂದೂಗಳು ಇದಕ್ಕೂ ವಿರೋಧ ತೋರುತ್ತಾರೆ. ಆತ ಅಸ್ಪೃಶ್ಯರನ್ನು ಮುಸ್ಲಿಮರನ್ನಾಗಿ ಮತಾಂತರಿಸಲು ಈ ನಾಟಕ ಆಡ್ತಿದ್ದಾನೆ ಅನ್ನುತ್ತಾರೆ.

ಎಂಥ ನಾಚಿಕೆಗೇಡಿನ ವಿಷಯ ನೋಡಿ. ನಮ್ಮ ದೇಶದಲ್ಲಿ ಪ್ರಾಣಿ ಪಕ್ಷಿಗಳಿಗೆ ತೋರುವಷ್ಟು ವಿಶ್ವಾಸವನ್ನೂ ಮನುಷ್ಯರಿಗೆ ತೋರಿಸುವುದಿಲ್ಲ. ನಾಯಿಯನ್ನು ನಮ್ಮ ತೊಡೆಯ ಮೇಲೆ ಕೂರಿಸಿಕೊಳ್ತೇವೆ. ಅದು ನಮ್ಮ ಅಡುಗೆಮನೆಯಲ್ಲೂ ಓಡಾಡುತ್ತದೆ. ಆದರೆ ಒಬ್ಬ ಅಸ್ಪೃಶ್ಯನನ್ನು ನಾವು ಮನೆಯೊಳಗೆ ಬಿಟ್ಟುಕೊಳ್ಳುವುದಿಲ್ಲ. ಪಶುಗಳನ್ನು ಅಲಂಕರಿಸಿ ನಾವು ಪೂಜಿಸ್ತೇವೆ. ಆದರೆ ಮನುಷ್ಯನನ್ನು ನಮ್ಮ ಪಕ್ಕದಲ್ಲಿಯೂ ಕೂರಲು ಬಿಡುವುದಿಲ್ಲ!

ದೇಶವು ರಾಜಕೀಯ ಸ್ವಾತಂತ್ರ್ಯದ ಬಗ್ಗೆ ದೊಡ್ಡ ದನಿಯಲ್ಲಿ ಮಾತಾಡುತ್ತಿರುವ ಈ ಹೊತ್ತು ಅಸ್ಪೃಶ್ಯತೆ ಸಮಸ್ಯೆಯೂ ಅಷ್ಟೇ ಮಹತ್ವದಿಂದ ಚರ್ಚೆಯಾಗುತ್ತಿದೆ. ಆದರೆ ಆಗಬೇಕಾದ ರೀತಿಯಲ್ಲಿ ಅಲ್ಲ. ಅಸ್ಪೃಶ್ಯತೆಯ ಬಗ್ಗೆ ಮುಸ್ಲಿಮರು ಪ್ರಶ್ನೆಗಳನ್ನೆತ್ತಿದಾಗ ಹಿಂದೂ ಅಸ್ಪೃಶ್ಯರು ಅವರತ್ತ ಒಲವು ತೋರಿದರು. ಸಾಮೂಹಿಕ ಮತಾಂತರದಿಂದ ಮುಸ್ಲಿಮರ ಸಂಖ್ಯೆ ಹೆಚ್ಚತೊಡಗಿ ಹಿಂದೂಗಳು ಚಿಂತೆಗೊಳಗಾದರು. ಕೊನೆಗೆ ತಮ್ಮ ಕಾಠಿಣ್ಯವನ್ನು ಸಡಿಲಿಸಿ ತಮ್ಮ ಧರ್ಮದೊಳಗಿನ ಅಸ್ಪೃಶ್ಯರನ್ನು ಹಿಡಿದಿಟ್ಟುಕೊಳ್ಳುವ ಚಿಂತನೆ ನಡೆಸತೊಡಗಿದರು. ಸಿಕ್ಖರು ಕೂಡ ಇದೇ ಮಾದರಿ ಅನುಸರಿಸತೊಡಗಿದರು. ಹೀಗೆ ಆಯಾ ಧರ್ಮಗಳು ತಮ್ಮೊಳಗಿನ ಅಸ್ಪೃಶ್ಯರನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿವೆ. ಅವರ ಉದ್ದೇಶ ಏನೇ ಇದ್ದರೂ ಈ ಪೈಪೋಟಿಯಲ್ಲಿ ಅಸ್ಪೃಶ್ಯತೆಯ ಆಚರಣೆ ಕೊಂಚ ಮಟ್ಟಿಗಂತೂ ತಗ್ಗತೊಡಗಿದೆ.

ಆದರೆ ಇಷ್ಟು ಮಾತ್ರದಿಂದ ಮೂಲ ಸಮಸ್ಯೆ ಬಗೆಹರಿಯುತ್ತದೆಯೆ? ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೆ? ಈ ಪ್ರಶ್ನೆ ಬಹಳ ಮಹತ್ವದ್ದು. ಹಿಂದೂ – ಮುಸ್ಲಿಮ್ – ಸಿಕ್ಖರು ತಮ್ಮನ್ನು ಮುಂದಿಟ್ಟುಕೊಂಡು ಲಾಭನಷ್ಟದ ಲೆಕ್ಕಾಚಾರ ಹಾಕುವುದನ್ನು ಕಂಡು ಅಸ್ಪೃಶ್ಯ ಸಮಾಜ ಎಚ್ಚೆತ್ತುಕೊಂಡಿತು. ಈ ಜನರು ಪ್ರತ್ಯೇಕವಾಗಿ ಸಂಘಟಿತರಾಗತೊಡಗಿದರು. ಹೀಗೆ ಸಮುದಾಯದ ಒಳಗಿನಿಂದಲೇ ಉಂಟಾದ ಜಾಗೃತಿ ಅಸ್ಪೃಶ್ಯತೆ ಸಮಸ್ಯೆಗೆ ದಿಟ್ಟ ಉತ್ತರ ನೀಡಬಲ್ಲದು.

ಹೀಗೆ ಅಸ್ಪೃಶ್ಯರು ಪ್ರತ್ಯೇಕವಾಗಿ ಸಂಘಟಿತರಾಗಿ, ಮುಸ್ಲಿಮರಂತೆಯೇ ಪ್ರತ್ಯೇಕ ಹಕ್ಕುಗಳನ್ನು ಮತಕ್ಷೇತ್ರವನ್ನು ಕೇಳುವುದು ಸರಿಯಾಗಿಯೇ ಇದೆ. ಜಾತಿ ಆಧರಿತ ತಾರತಮ್ಯ ತೊಡೆದು ಹಾಕಿ ಅವರನ್ನೂ ಸಮಾನ ಮನುಷ್ಯರಂತೆ ನಡೆಸಿಕೊಳ್ಳಬೇಕು. ಅವರಿಗೆ ವಿಶೇಷ ಹಕ್ಕುಗಳನ್ನು ನೀಡಿ. ಶಾಲೆ, ಕಾಲೇಜು, ರಸ್ತೆ, ಬಾವಿಗಳ ಬಳಕೆಗೆ ಸಮಾನ ಅವಕಾಶ ಆಗುವಂತೆ ಕೌನ್ಸಿಲುಗಳೂ, ಅಸೆಂಬ್ಲಿಗಳೂ ಪ್ರಯತ್ನಿಸಬೇಕು. ಹೇಳಿಕೆಗಳಿಗೆ ಮಾತ್ರ ಸೀಮಿತವಾಗದೆ, ಸಾರ್ವಜನಿಕವಾಗಿಯೂ ಅವರೊಂದಿಗೆ ಕಾಣಿಸಿಕೊಳ್ಳಬೇಕು. ಅವರ ಮಕ್ಕಳನ್ನು ಶಾಲೆಗೆ ಸೇರಿಸಬೇಕು.

ವಿಪರ್ಯಾಸ ಎಂದರೆ, ಧರ್ಮದ ಹೆಸರಿನಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ದೊಡ್ಡ ದನಿಯಲ್ಲಿ ವಿರೋಧಿಸುವ ಅಸೆಂಬ್ಲಿ ಸದಸ್ಯರು ಅಸ್ಪೃಶ್ಯರನ್ನು ತಮ್ಮವರನ್ನಾಗಿಸಿಕೊಳ್ಳಲು ಮಾತ್ರ ಹಿಂದೇಟು ಹಾಕುತ್ತಾರೆ. ಅಸ್ಪೃಶ್ಯ ಸಮುದಾಯ ಸಂಘಟಿತವಾಗಿ ತಮ್ಮದೇ ಸಮುದಾಯದ ಪ್ರತಿನಿಧಿಯನ್ನು ಹೊಂದಿರಬೇಕಾದ ಅವಶ್ಯಕತೆ ಇರುವುದು ಈ ಕಾರಣಕ್ಕೆ. ಇದರಿಂದಷ್ಟೆ ಅವರು ತಮಗಾಗಿ ಹೆಚ್ಚುವರಿ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಅಸ್ಪೃಶ್ಯತೆಯ ಬಗ್ಗೆ ಮಾತಾಡುವಾಗೆಲ್ಲ ಅವರ ಶುಚಿತ್ವದ ಪ್ರಶ್ನೆ ಎತ್ತಲಾಗುತ್ತದೆ. ಅದಕ್ಕೆ ಉತ್ತರವೂ ಸಿದ್ಧವಿದೆ – ಅವರು ಬಡವರಾಗಿದ್ದಾರೆ. ಬಡತನಕ್ಕೆ ಚಿಕಿತ್ಸೆ ನೀಡಿ. ಉನ್ನತ ಕುಲಗಳ ಬಡವರೇನೂ ಕಡಿಮೆ ಕೊಳಕಾಗಿರುವುದಿಲ್ಲ. ಇನ್ನು ಕೊಳಕು ಕೆಲಸ ಮಾಡುತ್ತಾರೆ ಅನ್ನುವ ನೆವವೂ ಇಲ್ಲಿ ನಡೆಯೋದಿಲ್ಲ. ತಾಯಂದಿರ – ಮಕ್ಕಳ ಕೊಳೆ ತೊಳೆಯೋದು ಕೀಳುಕಸುಬು ಹೇಗಾಗುತ್ತದೆ? ಅದನ್ನು ಮಾಡುವವರು ಅಸ್ಪೃಶ್ಯರು ಹೇಗಾಗುತ್ತಾರೆ?

ಎಲ್ಲಿಯವರೆಗೆ ಅಸ್ಪೃಶ್ಯ ಸಮುದಾಯ ಸಂಘಟಿತರಾಗಿ ಪ್ರಶ್ನಿಸುವುದಿಲ್ಲವೋ ಅಲ್ಲಿಯವರೆಗೆ ಈ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ.

ಹಳ್ಳಿಗಳಲ್ಲಿ ಯಾವಾಗ ಕಾರ್ಮಿಕ ಜಾಗೃತಿ ಕುರಿತು ಪ್ರಚಾರ ಕಾರ್ಯ ಶುರುವಾಯ್ತೋ ಸರ್ಕಾರಿ ಜನರು ರೈತರನ್ನು ಅವರ ವಿರುದ್ಧ ಭಡಕಾಯಿಸತೊಡಗಿದರು. ಈ ಜನ ಭಂಗಿಗಳನ್ನು, ಚಮ್ಮಾರರನ್ನೆಲ್ಲ ತಲೆ ಮೇಲೆ ಕೂರಿಸಿಕೊಂಡು ನಿಮ್ಮ ಕೆಲಸಗಳಿಗೆ ಸಂಚಕಾರ ತರಲಿದ್ದಾರೆ ಎಂದು ಕಿವಿಯೂದತೊಡಗಿದರು. ರೈತರೂ ಇಷ್ಟಕ್ಕೇ ಉರಿದುಬಿದ್ದರು. ತಾವು ಎಲ್ಲಿಯವರೆಗೆ ಈ ಬಡಜನರನ್ನು ಕೀಳಾಗಿ ಕಂಡು ತಮ್ಮ ಚಪ್ಪಳಿಯ ಕೆಳಗೆ ಹಾಕಿಕೊಂಡು ತುಳಿಯುತ್ತ ಇರುತ್ತಾರೋ ಅಲ್ಲಿಯವರೆಗೆ ಖುದ್ದು ಅವರ ಪರಿಸ್ಥಿತಿಯೂ ಸುಧಾರಿಸೋದಿಲ್ಲ ಅನ್ನೋದನ್ನ ಅವರು ನೆನಪಿಟ್ಟುಕೊಳ್ಳಬೇಕು. ಇದನ್ನು ಅವರಿಗೆ ನೆನಪಿಸಲು ಅಸ್ಪೃಶ್ಯರೆಂದು ಕರೆಸಿಕೊಳ್ತಿರುವ ಸಮುದಾಯ ಒಂದಾಗಿ ಎದ್ದು ನಿಲ್ಲಬೇಕು.

ಇದನ್ನು ಸಾಧಿಸಲು ರಾಜಕೀಯ ಪ್ರಾತಿನಿಧ್ಯ ಅಗತ್ಯವೆಂದು ನಮಗೆ ಅನ್ನಿಸುತ್ತದೆ. ಅವರ ಸಮುದಾಯದ ಜನಪ್ರತಿನಿಧಿಗಳು ಇದ್ದರಷ್ಟೇ ಅವರ ಸಮಸ್ಯೆಗಳ ಬಗ್ಗೆ ಚರ್ಚೆ ಮತ್ತು ಪರಿಹಾರೋಪಾಯ ರೂಪಿಸಲು ಸಾಧ್ಯ. ಆದ್ದರಿಂದ ಅವರು ತಮ್ಮ ಅಧಿಕಾರಕ್ಕಾಗಿ ದನಿ ಎತ್ತಬೇಕು.

ನಾವಂತೂ ಸ್ಪಷ್ಟವಾಗಿ ಕರೆಕೊಡುತ್ತೇವೆ, “ಎದ್ದೇಳಿ! ಅಸ್ಪೃಶ್ಯರೆಂದು ಕರೆಸಿಕೊಳ್ತಿರುವ ನೈಜ ಜನಸೇವಕರೇ ಮತ್ತು ಸಹೋದರರೇ! ನಿಮ್ಮ ಇತಿಹಾಸವನ್ನೊಮ್ಮೆ ತಿರುಗಿ ನೋಡಿ!! ಅಧಿಕಾರಶಾಹಿಯ ಜಾಲದಲ್ಲಿ ಸಿಕ್ಕಿಬೀಳಬೇಡಿ. ಅವರು ನಿಮಗಾಗಿ ಸಹಾಯ ಹಸ್ತ ಚಾಚಲು ಸಿದ್ಧರಿರುವುದಿಲ್ಲ. ಬದಲಾಗಿ ತಮ್ಮ ಸಂಚಿಗೆ ನಿಮ್ಮನ್ನು ಹೇಗೆ ದಾಳವಾಗಿ ಬಳಸಬಹುದೆಂಬ ಲೆಕ್ಕಾಚಾರದಲ್ಲಿರುತ್ತಾರೆ. ನಿಮ್ಮ ಬಡತನ ಮತ್ತು ದಾಸ್ಯಕ್ಕೆ ನಿಜವಾದ ಕಾರಣ ಈ ಬಂಡವಾಳಶಾಹಿ ಅಧಿಕಾರಗಣವೇ ಆಗಿದೆ. ಎಂದೂ ಅವರೊಡನೆ ಒಂದುಗೂಡಬೇಡಿ. ಅವರ ತಂತ್ರಗಳ ಬಗೆಗೆ ಎಚ್ಚರವಿರಲಿ. ಆಗ ಎಲ್ಲವೂ ಸರಿಯಾಗುತ್ತದೆ. ಅಸ್ಪೃಶ್ಯವೆನಿಸಿಕೊಂಡ ಸಮುದಾಯದ ಬಂಧುಗಳೇ, ಒಂದಾಗಿ. ಸ್ವಾವಲಂಬಿಗಳಾಗಿ. ಆಗ ಇಡಿಯ ಸಮಾಜಕ್ಕೇ ಸವಾಲು ಹಾಕಿ ನೀವು ನಿಲ್ಲಬಲ್ಲಿರಿ. ನಂತರದಲ್ಲಿ ಯಾರೂ ನಿಮ್ಮ ಹಕ್ಕುಗಳನ್ನು ನಿಮಗೆ ನಿರಾಕರಿಸಲಾರರು. ಇತರರು ನಿಮ್ಮನ್ನು ವಂಚಿಸಲು ಬಿಡಬೇಡಿ. ಬೇರೆಯವರಿಂದ ಏನನ್ನೂ ಅಪೇಕ್ಷಿಸಬೇಡಿ. ನಿಮ್ಮ ಚರಿತ್ರೆ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು. ಗುರು ಗೋವಿಂದ ಸಿಂಗರ ಸೇನೆಯ ಅಸಲು ಶಕ್ತಿ ನೀವೇ ಆಗಿದ್ದಿರಿ. ಇಂದು ಅಮರರಾಗಿ ಸ್ಮರಿಸಲ್ಪಡುತ್ತಿರುವ ಶಿವಾಜಿ ಕೂಡ ಏನೆಲ್ಲವನ್ನೂ ಸಾಧಿಸಿದ್ದು ನೀವಿದ್ದಿರೆಂಬ ಭರವಸೆಯಿಂದಲೇ.

“ನಿಮ್ಮ ತ್ಯಾಗ ಬಲಿದಾನಗಳಷ್ಟೇ ಅಲ್ಲ, ನಿಮ್ಮ ದಿನದಿನದ ಸೇವೆಗಳೂ ಅಷ್ಟೇ ಪ್ರಮುಖವಾಗಿವೆ. ಪ್ರತಿದಿನವೂ ನಿಮ್ಮ ಸೇವೆಯಿಂದ ಸಮಾಜದ ದೊಡ್ಡ ಸಮುದಾಯವು ಸುಖದಿಂದ ಇರಲು ಸಾಧ್ಯವಾಗಿದೆ.

“ಏಳಿ ಬಂಧುಗಳೇ! ನಿಮ್ಮ ಶಕ್ತಿಯನ್ನು ಕಂಡುಕೊಳ್ಳಿ. ಒಗ್ಗೂಡಿ, ಸಂಘಟಿತರಾಗಿ!! ಖುದ್ದು ನೀವೇ ಪ್ರಯತ್ನ ಹಾಕದ ಹೊರತು ನೀವು ಏನನ್ನೂ ದಕ್ಕಿಸಿಕೊಳ್ಳಲಾರಿರಿ. ಸ್ವಾತಂತ್ರ್ಯ ಬಯಸುವವರು, ಸ್ವಾಭಿಮಾನಿಗಳು ಅದನ್ನು ಪಡೆಯಲಿಕ್ಕಾಗಿ ಕಠಿಣ ಪರಿಶ್ರಮ ಹಾಕಬೇಕು. “ಲಾತೋಂ ಕೆ ಭೂತ್ ಬಾತೋಂ ಸೆ ನಹೀ ಮಾನ್ತೇ” ಅನ್ನುವ ಗಾದೆಯಿದೆ. ಅದರಂತೆ ಸಂಘಟನಾಬದ್ಧರಾಗಿ ತಮ್ಮ ಕಾಲಿನ ಮೇಲೆ ನಿಂತು, ಇಡಿಯ ಸಮಾಜಕ್ಕೆ ಸವಾಲು ಹಾಕಿರಿ. ಆಮೇಲೆ ನೋಡಿ. ಯಾರೂ ನಿಮಗೆ ನಿಮ್ಮ ಅಧಿಕಾರ ನಿರಾಕರಿಸುವ ದಾರ್ಷ್ಟ್ಯ ತೋರಲಾರರು.

“ಏಳಿ! ಇಂದಿನ ವ್ಯವಸ್ಥೆಯ ವಿರುದ್ಧ ಬಂಡಾಯವೆದ್ದು ಹೋರಾಡಿ. ನಿಧಾನಗತಿಯಲ್ಲಿ ಸಾಗುವ ಸುಧಾರಣಾಕಾರ್ಯಗಳಿಂದ ಯಾವ ಸಾಧನೆಯೂ ಆಗುವುದಿಲ್ಲ. ಸಾಮಾಜಿಕ ಆಂದೋಲನದಿಂದ ಕ್ರಾಂತಿಯನ್ನು ಹುಟ್ಟುಹಾಕಿ; ಅದರ ಜೊತೆಜೊತೆಗೇ ರಾಜಕೀಯ ಮತ್ತು ಆರ್ಥಿಕ ಕ್ರಾಂತಿ ಉಂಟುಮಾಡಲು ಕಟಿಬದ್ಧರಾಗಿ ನಿಲ್ಲಿ.

“ಈ ದೇಶದ ಮುಖ್ಯ ಆಧಾರ ನೀವೇ ಆಗಿದ್ದೀರಿ. ದೇಶದ ನಿಜವಾದ ಶಕ್ತಿಯೂ ನೀವೇ. ನಿದ್ರೆಯಲ್ಲಿರುವ ಹುಲಿಗಳೇ! ಎದ್ದೇಳಿ, ಹೊಸ ಕ್ರಾಂತಿಗೆ ಮುನ್ನುಡಿ ಬರೆಯಿರಿ.

Donate Janashakthi Media

Leave a Reply

Your email address will not be published. Required fields are marked *