ಪೆಟ್ರೋಲ್‌-ಡೀಸೆಲ್‌ ಬೆಲೆ ನಿಯಂತ್ರಣಕ್ಕೆ ಚುನಾವಣೆ ಪರಿಹಾರ: ಪ್ರಿಯಾಂಕಾ ಚತುರ್ವೇದಿ

ನವದೆಹಲಿ: 2021ರ ನವೆಂಬರ್​ನಿಂದ ಏರಿಕೆ ಕಾಣದಿದ್ದ ಪೆಟ್ರೋಲ್​, ಡೀಸೆಲ್​ ದರ ಈಗ ಕಳೆದ ನಾಲ್ಕು ದಿನಗಳಿಂದ ಸತತವಾಗಿ ಏರಿಕೆಯಾಗುತ್ತಿದೆ. ಇಂದು ಪೆಟ್ರೋಲ್​ ಬೆಲೆ ದೆಹಲಿಯಲ್ಲಿ 80 ಪೈಸೆ ಹೆಚ್ಚಳವಾಗಿದ್ದರೆ, ಮುಂಬೈನಲ್ಲಿ 85 ಪೈಸೆ ಏರಿಕೆಯಾಗಿದೆ. ಹಾಗೇ, ಡೀಸೆಲ್ ದರ ದೆಹಲಿಯಲ್ಲಿ 80 ಪೈಸೆ ಮತ್ತು ಮುಂಬೈನಲ್ಲಿ 85 ಪೈಸೆ ಹೆಚ್ಚಳವಾಗಿದೆ.

ಮುಂದೆ ಯಾವೆಲ್ಲ ರಾಜ್ಯಗಳಲ್ಲಿ ಚುನಾವಣೆಯಿದೆಯೋ ಅಲ್ಲೆಲ್ಲ ಆದಷ್ಟು ಬೇಗನೇ ಚುನಾವಣೆಗೆ ದಿನಾಂಕ ನಿಗದಿ ಮಾಡಿ ಎಂದು ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ. ನೀವು ಹೀಗೆ ಚುನಾವಣಾ ದಿನಾಂಕಗಳನ್ನು ಘೋಷಣೆ ಮಾಡುವುದರಿಂದ ಇಂಧನ ಬೆಲೆ ನಿಯಂತ್ರಣಕ್ಕೆ‌ ಬರಲಿದೆ ಹಾಗೂ ಏರಿಕೆಗೆ ಕಡಿವಾಣ ಬೀಳಲಿದೆ ಎಂದು ವ್ಯಂಗ್ಯವಾಡಿದ್ದಾರೆ.

ಚುನಾವಣೆಗಳ ದಿನಾಂಕ ಘೋಷಣೆಯಾದಲ್ಲಿ, ಭಾರತೀಯರು ಬೆಲೆ ಹೆಚ್ಚಳದ ಹೊಡೆತದಿಂದ ಪಾರಾಗಬಹುದು ಎಂದು ಹೇಳಿದ್ದಾರೆ. ಈ ಮೂಲಕ ಚುನಾವಣೆ ಬಂದರೆ ಮಾತ್ರ ಇಂಧನ ಬೆಲೆ ಏರಿಕೆಯಾಗದಂತೆ ಬಿಜೆಪಿ ಸರ್ಕಾರ ತಡೆಯುತ್ತದೆ ಎಂದಿದ್ದಾರೆ.

ಇದನ್ನು ಓದಿ: ಸತತ 2ನೇ ದಿನವೂ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ

2021ರ ನವೆಂಬರ್​ ತಿಂಗಳಿಗೂ ಮೊದಲು ದೇಶದಲ್ಲಿ ಇಂಧನ ಬೆಲೆ ಪ್ರತಿದಿನ ಏರಿಕೆಯಾಗುತ್ತಲೇ ಇತ್ತು. ಇದು ವಾಹನ ಸವಾರರಿಗೆ ಹೊರೆಯಾಗುತ್ತಲೇ ಸಾಗಿತ್ತು. ನಂತರ ದೀಪಾವಳಿ ಮುನ್ನಾದಿನ ಅಂದರೆ ನವೆಂಬರ್ 4ರಂದು ಕೇಂದ್ರ ಸರ್ಕಾರ ಪೆಟ್ರೋಲ್​ ಮತ್ತು ಡೀಸೆಲ್​ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ಅದಾದ ಮೇಲೆ ಹಲವು ರಾಜ್ಯ ಸರ್ಕಾರಗಳೂ ಕೂಡ ತಮ್ಮಗಳ ಸುಂಕವನ್ನು  ಕಡಿತ ಮಾಡಿದ ಪರಿಣಾಮ ಗ್ರಾಹಕರಿಗೆ ತುಸು ನಿರಾಳವಾಗಿತ್ತು.

2022ರ ಪ್ರಾರಂಭದಲ್ಲಿ ಐದು ರಾಜ್ಯಗಳ ಚುನಾವಣೆ ದೃಷ್ಟಿಯಿಂದ ಕೇಂದ್ರದ ಬಿಜೆಪಿ ಸರ್ಕಾರ ಇಂಧನ ಬೆಲೆ ಕಡಿಮೆ ಮಾಡಿದೆ ಎಂದು ಪ್ರತಿಪಕ್ಷಗಳು ಹೇಳಿದ್ದವು. ಹಾಗೇಯೇ ಫೆಬ್ರವರಿ 24ರಿಂದ ರಷ್ಯಾ-ಉಕ್ರೇನ್​ ಯುದ್ಧ ಶುರುವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಗಿದೆ. ಹೀಗಾಗಿ ಭಾರತದಲ್ಲೂ ಪೆಟ್ರೋಲ್​-ಡೀಸೆಲ್​ ಬೆಲೆ ಹೆಚ್ಚಳ ನಿಶ್ಚಿತ ಎಂದೇ ಹೇಳಲಾಗಿತ್ತು.

ಹಾಗಿದ್ದರೂ ಸಹ, ಐದೂ ರಾಜ್ಯಗಳ ಚುನಾವಣೆ ಮುಗಿದು, ಫಲಿತಾಂಶ ಹೊರಬೀಳುವವರೆಗೆ ಅಂದರೆ ಮಾರ್ಚ್​ 10ರವರೆಗೂ ಬೆಲೆಗಳು ಏರಿಕೆಯಾಗದೆ ಸ್ಥಿರವಾಗಿದ್ದವು. ವಿಧಾನಸಭೆಯ ಚುನಾವಣಾ ಫಲಿತಾಂಶ ಹೊರಬಿದ್ದ 12 ದಿನಗಳ ಬಳಿಕ ಇದೀಗ ಮತ್ತೆ ಪ್ರತಿದಿನ ಬೆಲೆ ಏರಿಕೆಯಾಗುತ್ತಲೇ ಇವೆ. ಬರೀ ಪೆಟ್ರೋಲ್​-ಡೀಸೆಲ್​ ಅಲ್ಲ ದಿನ ಬಳಕೆ ವಸ್ತುಗಳ ಬೆಲೆಯೂ ತುಟ್ಟಿಯಾಗಿದೆ. ಹೀಗಿರುವಾಗ ಪ್ರಿಯಾಂಕಾ ಚತುರ್ವೇದಿ ಈ ಹೇಳಿಕೆ ನೀಡಿದ್ದಾರೆ.

ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ

ಪ್ರಿಯಾಂಕಾ ಚತುರ್ವೇದಿ ಹೇಳಿಕೆಯನ್ನು ತಳ್ಳಿ ಹಾಕಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಚುನಾವಣೆಗೂ, ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆಗೂ ಯಾವುದೇ ಸಂಬಂಧವಿಲ್ಲ. ರಷ್ಯಾ-ಉಕ್ರೇನ್​ ಯುದ್ಧ ಶುರುವಾಗಿ ತಿಂಗಳ ಮೇಲಾಯಿತು. ಜಾಗತಿಕವಾಗಿ ಇಂಧನ ಬೆಲೆ ಏರಿಕೆಯಾಗುತ್ತಿದೆ ಎಂದು ಹೇಳಿದ್ದಾರೆ. 1951ರಲ್ಲಿ ಕೊರಿಯನ್ ಯುದ್ಧವಾದಾಗ ಜವಾಹರ್​ಲಾಲ್ ನೆಹರೂ ಕೂಡ ಹೇಳಿಕೆ ನೀಡಿ, ಕೊರಿಯನ್ ಯುದ್ಧದಿಂದಾಗಿ ಭಾರತದಲ್ಲಿ ಹಣದುಬ್ಬರ ಉಂಟಾಗಬಹುದು ಎಂದಿದ್ದರು. ಈಗ ಉಕ್ರೇನ್​-ರಷ್ಯಾ ಯುದ್ಧದಿಂದಲೂ ಅದೇ ಆಗುತ್ತಿದೆ. ಆದರೆ ಅದನ್ನು ಯಾರೂ ಒಪ್ಪಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *