ಹೊಸದಿಲ್ಲಿ: ಸಿಎಂ ಅರವಿಂದ್ ಕೇಜ್ರಿವಾಲ್ ದಿಲ್ಲಿ ಲಿಕ್ಕರ್ ನೀತಿ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿದ್ದು, ಅವರಿಗೆ ಕೊನೆಗೂ ಜಾಮೀನು ದೊರಕಿದೆ. ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಪೀಠವು ಜೂನ್ 1ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಇದರಿಂದ ದಿಲ್ಲಿ ಎಎಪಿ ನಾಯಕ, ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಂತಾಗಿದೆ.
ಸುಪ್ರೀಂ ಕೋರ್ಟ್ ನೀಡಿರುವ ಮಧ್ಯಂತರ ಜಾಮೀನಿಂದ ಆಮ್ ಆದ್ಮಿ ಪಕ್ಷ ಹಾಗೂ ದಿಲ್ಲಿ ಸರ್ಕಾರಕ್ಕೆ ದೊಡ್ಡ ನಿರಾಳತೆ ಕೊಟ್ಟಿದೆ. ಆದರೆ ಅರವಿಂದ್ ಕೇಜ್ರಿವಾಲ್ ಅವರು ಆಡಳಿತಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶವಿಲ್ಲ. ಮುಂದಿನ 20 ದಿನ ಅವರು ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಬಹುದಾಗಿದೆ. ಅವರು ಶುಕ್ರವಾರವೇ ಜೈಲಿನಿಂದ ಹೊರಬರುವ ಸಾಧ್ಯತೆ ಇದೆ.
ಮಾರ್ಚ್ 21ರಂದು ಬಂಧನಕ್ಕೆ ಒಳಗಾದ ಬಳಿಕ ಜಾರಿ ನಿರ್ದೇಶನಾಲಯದ ಲಾಕಪ್ ಹಾಗೂ ತಿಹಾರ್ ಜೈಲಿನಲ್ಲಿ ಸುಮಾರು 50 ದಿನಗಳನ್ನು ಕಳೆದ ನಂತರ ಕೇಜ್ರಿವಾಲ್ ಅವರಿಗೆ ಬಿಡುಗಡೆ ಭಾಗ್ಯ ದೊರಕಿದೆ. ಜೂನ್ 1ರಂದು ಲೋಕಸಭೆ ಚುನಾವಣೆಯ ಕೊನೆಯ ಹಾಗೂ ಏಳನೇ ಹಂತದ ಚುನಾವಣೆ ನಡೆಯಲಿದೆ. ಅಲ್ಲಿಯವರೆಗೂ ಕೇಜ್ರಿವಾಲ್ ಅವರು ಚುನಾವಣೆಗೆ ಸಂಬಂಧಿಸಿದ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗಬಹುದು. ಜೂನ್ 2ರಂದು ಅವರು ಜೈಲಿನ ಅಧಿಕಾರಿಗಳ ಮುಂದೆ ಶರಣಾಗಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.
ಜೂನ್ 4ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಹೀಗಾಗಿ ಕೇಜ್ರಿವಾಲ್ ಅವರಿಗೆ ಜೂನ್ 5ರವರೆಗೂ ಜಾಮೀನು ಮಂಜೂರು ಮಾಡಬೇಕು ಎಂದು ಅವರ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಮನವಿ ಮಾಡಿದರು. ಆದರೆ ಅದನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, “ಅವರನ್ನು ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು. ಅದಕ್ಕೂ ಮುನ್ನ ಅಥವಾ ನಂತರ ಕೂಡ ಬಂಧಿಸಬಹುದಾಗಿತ್ತು. ಇಲ್ಲಿಂದ ಅವರಿಗೆ 21 ದಿನಗಳ ಅವಕಾಶವಿದೆ. ಜೂನ್ 2ರಂದು ಅರವಿಂದ್ ಕೇಜ್ರಿವಾಲ್ ಶರಣಾಗುತ್ತಾರೆ. ಇದರಿಂದ ದೊಡ್ಡ ವ್ಯತ್ಯಾಸವೇನೂ ಆಗುವುದಿಲ್ಲ” ಎಂದು ಹೇಳಿತು.
ಎಎಪಿ ಮುಖ್ಯಸ್ಥ ಕೇಜ್ರಿವಾಲ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ನ್ಯಾ ಸಂಜೀವ್ ಖನ್ನಾ ಮತ್ತು ನ್ಯಾ ದಿಪಾಂಕರ್ ದತ್ತಾ ಅವರನ್ನು ಒಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದೆ. ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ತಮ್ಮ ಬಂಧನವನ್ನು ಪ್ರಶ್ನಿಸಿರುವ ಕೇಜ್ರಿವಾಲ್, ಲೋಕಸಭೆ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ತಮಗೆ ಮಧ್ಯಂತರ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.
ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಮಧ್ಯಂತರ ಜಾಮೀನು ನೀಡುವುದಕ್ಕೆ ಜಾರಿ ನಿರ್ದೇಶನಾಲಯ ಆಕ್ಷೇಪ ವ್ಯಕ್ತಪಡಿಸಿತ್ತು. ಇಡಿ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೇಜ್ರಿವಾಲ್ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏನನ್ನೂ ಮಾತನಾಡಬಾರದು ಮತ್ತು ನಿಗದಿತ ದಿನದಂದು ಅವರು ಶರಣಾಗಬೇಕು ಎಂದು ಹೇಳಿದರು. ಆದರೆ ಅವರು ಏನನ್ನು ಹೇಳಬೇಕು ಅಥವಾ ಹೇಳಬಾರದು ಎಂಬ ಬಗ್ಗೆ ಕೋರ್ಟ್ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಸುಪ್ರೀಂ ಕೋರ್ಟ್ ವಕೀಲ ಶಾದಾನ್ ಫರಾಸತ್ ತಿಳಿಸಿದರು.
ಇದನ್ನು ನೋಡಿ : ಮೋದಿಯ ಹತ್ತು ವರ್ಷ ಆಡಳಿತದಲ್ಲಿ 40ಲಕ್ಷ ಮಹಿಳೆಯರು ಉದ್ಯೋಗ ಕಳೆದುಕೊಂಡಿದ್ದರೆJanashakthi Media