ಶೋಷಿತರ ದೃಷ್ಟಿಯಾಗಿದ್ದ ಬಾಬು ಜಗಜೀವನ ರಾಮ್

ಇತಿಹಾಸದಲ್ಲಿ ಹಸಿರು ಕ್ರಾಂತಿಯ ಹರಿಕಾರ ಎಂದು ಕರೆಯಲ್ಪಟ್ಟಿರುವ ಬಾಬೂಜಿಯವರ 118ನೇ ಜನ್ಮದಿನದ ಶುಭಾಶಯಗಳು. ಭಾರತದ ಇತಿಹಾಸದಲ್ಲಿ ಗಾಂಧೀಜಿಯವರನ್ನು ಬಾಪೂಜಿ ಎಂದು ಕರೆದರೆ, ಬಾಬು ಜಗಜೀವನ ಜೀವನ ರಾಮ್ ಅವರನ್ನು ಬಾಬೂಜಿ ಎಂದೇ ಕರೆಯಲಾಗುತ್ತದೆ. ಬಾಬು ಜಗಜೀವನ ರಾಮ್
ಪವಿತ್ರ ಎಸ್, ಸಹಾಯಕ ಪ್ರಾಧ್ಯಾಪಕರು

ಏಪ್ರಿಲ್ ತಿಂಗಳೆಂದರೆ ಹಬ್ಬದ ವಾತಾವರಣ ಇಬ್ಬರು ಮಹಾನ್ ನಾಯಕರು ಜನಿಸಿದ ತಿಂಗಳು. ದಲಿತರ ಸೂರ್ಯ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಕಾರ್ಮಿಕರ ಕಾನೂನು ಶಿಲ್ಪಿ ಎಂದೇ ಹೆಸರಾಗಿರುವಂತಹ ಡಾ. ಬಾಬು ಜಗಜೀವನ ರಾಮ್ ಅವರು ಹುಟ್ಟಿದ್ದು ಇದೇ ತಿಂಗಳಿನಲ್ಲಿ.

ಬಾಬು ಜಗಜೀವನ್ ರಾಮ್ ಅವರು ಹುಟ್ಟಿದ್ದು 05 ಏಪ್ರಿಲ್ 1908 ರಂದು. ಬಿಹಾರದ ಆರಾ ಪಟ್ಟಣದ ಚಾಂದ್ವ ಎಂಬ ಹಳ್ಳಿಯಲ್ಲಿ. ಅವರ ತಂದೆ ಶೋಭಿರಾಮ್ ತಾಯಿ ವಾಸಂತಿ ದೇವಿ. ಬಾಬೂಜಿಯವರಿಗೆ ಎಂಟನೇ ವಯಸ್ಸಿನಲ್ಲಿ ಬಾಲ್ಯ ವಿವಾಹ ಆಗುತ್ತೆ. ಮೊದಲ ಹೆಂಡತಿ ತೀರಿಕೊಂಡ ಬಳಿಕ ಇಂದ್ರಾಣಿ ಎಂಬುವವರನ್ನು ಮದುವೆಯಾಗುತ್ತಾರೆ. ಬಾಬೂಜಿ ಅವರ ಚಮ್ಮಾರ ಜಾತಿಗೆ ಸೇರಿದವರು. ಇವರ ತಂದೆ ಕುಲಕಸುಬನ್ನು ಮಾಡದೆ ಭೂಮಿಯನ್ನು ಖರೀದಿಸಿ ಉಳುಮೆ ಮಾಡತೊಡಗಿದರು. ಅಸ್ಪೃಶ್ಯರಿಗೆ ಉಳುಮೆ ಮಾಡುವುದು ನಿಷಿದ್ಧವಿದ್ದ ಭಾರತದಲ್ಲಿ ಕೃಷಿ ಮಾಡುವುದು ಸಣ್ಣ ಸಂಗತಿ ಏನಲ್ಲ. ಬಹುಶಃ ಇದೆ ಬಾಬೂಜಿಯವರ ಹಸಿರು ಕ್ರಾಂತಿಗೆ ದಾರಿ ದೀಪವಾಯಿತು ಎಂದೆನಿಸುತ್ತದೆ.

ಬಾಬೂಜಿಯವರು ಚಾಂದ್ವಾದಲ್ಲಿ ಪ್ರಾಥಮಿಕ ಶಿಕ್ಷಣವನ್ನು 1914ರಲ್ಲಿ ಆರಂಭಿಸುತ್ತಾರೆ. 1920 ರಲ್ಲಿ ಆರಾದಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಆರಂಭಿಸಿದರು. ಶಿಷ್ಯವೇತನವನ್ನು ಪಡೆಯಲು ಮುಖ್ಯೋಪಾಧ್ಯಾಯರು ಹೇಳಿದಾಗ “ನನ್ನ ಬಳಿ ನೆಲ ಇದೆ ಉತ್ತು ಬಿತ್ತು ಆಹಾರ ಬೆಳೆಯುತ್ತೇವೆ ನನ್ನ ಅಣ್ಣ ಕಲ್ಕತ್ತಾದಲ್ಲಿ ಸರ್ಕಾರಿ ನೌಕರಿಯಲ್ಲಿದ್ದಾರೆ. ಅವರು ಮನೆಗೆ ನೆರವಾಗುತ್ತಿದ್ದಾರೆ ನನಗೆ ಶಿಷ್ಯವೇತನದ ಅಗತ್ಯವಿಲ್ಲ ನನ್ನ ಪಾಲಿನ ಶಿಷ್ಯವೇತನವನ್ನು ಯಾವುದಾದರೂ ಬಡ ಹುಡುಗನಿಗೆ ಮಾಡಿರಿ” ಎಂದು ಹೇಳಿದರು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕಲ್ಕತ್ತಾಗೆ ಹೋದರು. ನಂತರ ಪಂಡಿತ ಮದನ ಮೋಹನ ಮಾಳವಿಯ ಅವರ ಪ್ರಭಾವಕ್ಕೆ ಒಳಗಾಗಿ 1926ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ವಿಜ್ಞಾನ ವ್ಯಾಸಂಗ ಮಾಡಲು ಸೇರಿಕೊಂಡರು ಬನಾರಸ್ ವಿಶ್ವವಿದ್ಯಾಲಯದಲ್ಲಿ ಅಸ್ಪೃಶ್ಯತೆಯ ಗಾಢ ಮತ್ತು ಕರಾಳ ಅನುಭವವಾಗುತೊಡಗಿತು. ಪಲಾಯನ ಮಾಡಿದರೆ ಅಸ್ಪೃಶ್ಯತೆಯು ಹೋಗುವುದಿಲ್ಲ ಎಂಬ ಸತ್ಯದ ಅರಿವು ಬಾಬೂಜಿಗೆ ಆಗತೊಡಗಿತು. ಕೋಲ್ಕತ್ತಾದಲ್ಲಿ ಮಾರ್ಕ್ಸ್ ಬಗ್ಗೆ ತಿಳಿದುಕೊಂಡು ಮಾರ್ಕ್ಸ್ ನಾ ಕೃತಿಗಳನ್ನು ಓದುತ್ತಾರೆ. ಇಲ್ಲಿ ಅವರಿಗೆ ತಾರತಮ್ಯದ ನಿವಾರಣೆ ಮಾರ್ಗದ ಪರಿಚಯವಾಗುತ್ತದೆ.

ಬಿಹಾರದಲ್ಲಿ ಭೂಕಂಪವಾಗಿ ಜನರು ಸಾಯುವ ಪರಿಸ್ಥಿತಿ ತಲುಪಿದಾಗ ಅವರ ರಕ್ಷಣಾ ಕಾರ್ಯದಲ್ಲಿ ಬಾಬೂಜಿಯವರು ಪಾಲ್ಗೊಂಡ ರೀತಿ ದೇಶದ ನಾಯಕರ ಗಮನ ಸೆಳೆಯಿತು ಒಬ್ಬ ಸಣ್ಣ ಹುಡುಗ ಇಷ್ಟೆಲ್ಲ ಮಾಡಲು ಸಾಧ್ಯವೇ ಎಂದು ಹುಬ್ಬೇರಿಸುವ ಮಟ್ಟಕ್ಕೆ ಇವರ ಸಂಘಟನಾ ಶಕ್ತಿ ಮತ್ತು ಯುಕ್ತಿ ಇತ್ತು.

ಸ್ವಾತಂತ್ರ್ಯ ಹೋರಾಟದಲ್ಲಿಯೂ ಪಾಲ್ಗೊಂಡಿದ್ದರು. 1929 ರಲ್ಲಿ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ನಿಮ್ನ ವರ್ಗಗಳ ನಾಯಕರ ಪರಿಚಯವಾಯಿತು. ಬಾಬೂಜಿ ಅವರು ಅತ್ಯುತ್ತಮ ಸಂಘಟನಕಾರರಾಗಿದ್ದರು. ಸೆಣಬು ಮತ್ತು ಗಿರಣಿಗಳ ದಲಿತ ಕಾರ್ಮಿಕ ಮತ್ತು ಇತರೆ ಕೂಲಿಕಾರ್ಮಿಕರ ಬೃಹತ್ ಸಮ್ಮೇಳನವನ್ನು ಸಂಘಟಿಸಿ ಅದರಲಿ 15 ಸಾವಿರ ಜನ ಪಾಲ್ಗೊಳ್ಳುವಂತೆ ಮಾಡಿದ್ದು ಅವರ ಸಂಘಟನಾ ಶಕ್ತಿಗೆ ನಿದರ್ಶನವಾಗಿದೆ.

ಇದನ್ನೂ ಓದಿಮರುಭೂಮಿಯ ಹೂ – ಸ್ತ್ರೀವಾದಿ ನಿರ್ವಚನ ಬಾಬು ಜಗಜೀವನ ರಾಮ್

1935 ಡಿಸೆಂಬರ್ 29 ರಂದು ಪೂನಾದಲ್ಲಿ ಮದನ್ ಮೋಹನ ಮಾಳವಿಯವರ ನೇತೃತ್ವದಲ್ಲಿ ಒಂದು ಬೃಹತ್ ಸಭೆ ನಡೆಯಿತು ಅಲ್ಲಿ ಬಾಬುಜಿ ಅವರು ಹೀಗೆ ಹೇಳುತ್ತಾರೆ.

1. ಜಾತಿ ಮತ್ತು ಪಂಥಭೇದ ಇರದೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಬೇಕು ದೇವಾಲಯಗಳು, ಶಾಲೆ, ಛತ್ರ ಮತ್ತು ಹೋಟೆಲ್ ಗಳಿಗೆ ದಲಿತರ ಮುಕ್ತ ಪ್ರವೇಶ ಇರಬೇಕು.
2. ಕೆರೆ, ಬಾವಿ. ನದಿ ನೀರನ್ನು ದಲಿತರು ಮುಕ್ತವಾಗಿ ಉಪಯೋಗಿಸಬೇಕು ಅದಕ್ಕೆ ಯಾರ ಅಡ್ಡಿ ಆತಂಕಗಳು ಇರಬಾರದು.
3. ಜಾತಿ ಆಧಾರಿತ ಸಾಮಾಜಿಕ, ಆರ್ಥಿಕ, ರಾಜಕೀಯ ಶೋಷಣೆಯನ್ನು ತಕ್ಷಣವೇ ನಿಲ್ಲಿಸಬೇಕು ಆಗ ಮಾತ್ರ ಧರ್ಮಾಂತರ ತಪ್ಪಿಸಲು ಸಾಧ್ಯವಾಗುತ್ತದೆ. ಎಂದು ಹೇಳಿದರು
ದೇವಸ್ಥಾನಗಳ ಪ್ರವೇಶಕ್ಕೆ ಮುಕ್ತ ಅವಕಾಶವನ್ನು ಪುರಿ ಶಂಕರಾಚಾರ್ಯರು ವಿರೋಧಿಸಿದರು.

ಬಾಬೂಜಿಯವರ ರಾಜಕೀಯ ಜೀವನ
1937ರಲ್ಲಿ ಪ್ರಾಂತೀಯ ಶಾಸನ ಸಭೆಯ ಚುನಾವಣೆ ನಡೆದಾಗ ಕಿರಿಯವ ವಯಸ್ಸಿನ ಬಾಬುಜಿ ಗೆಲ್ಲುತ್ತಾರೆ. ಕಿರಿಯವ ವಯಸ್ಸಿನ ಹಿರಿಯ ಮುತ್ಸದಿ ಎಂಬ ವಿಶೇಷಣ ಇವರಿಗೆ ದಕ್ಕುತ್ತದೆ. ಒಂದೆಡೆ ದಕ್ಷಿಣದಿಂದ ಅಂಬೇಡ್ಕರ್ ಅವರು ಉತ್ತರದಿಂದ ಬಾಬೂಜಿಯವರು ಪ್ರತ್ಯೇಕವಾದ ಚುನಾವಣೆಗಳನ್ನು ಎದುರಿಸಿದ್ದು ಚಾರಿತ್ರಿಕ ಸಂಗತಿಯಾಗಿದೆ. ಇಲ್ಲಿಂದ ಬಾಬೂಜಿ ಅವರ ರಾಜಕೀಯ ಜೀವನ ಆರಂಭವಾಗುತ್ತದೆ. ಸತತ 40 ವರ್ಷಗಳ ರಾಜಕೀಯ ಜೀವನದಲ್ಲಿ ಬಾಬುಜಿ ಯವರು 30 ವರ್ಷಗಳ ಕಾಲ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಸಂದರ್ಭದಲ್ಲಿ ಮಾಡಿದ ಕೆಲಸ ಕಾರ್ಯಗಳು ಚಾರಿತ್ರಿಕ ದಾಖಲೆಗಳಾಗಿವೆ.

ಸ್ವಾತಂತ್ರ ಭಾರತದಲ್ಲಿ ಬಾಬೂಜಿ ರಾಜಕೀಯ ಜೀವನ

ಸಂಪರ್ಕ ಖಾತೆಯ ಸಚಿವರಾಗಿ ಬಾಬೂಜಿ
1952 ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದವು. ಆಗ ಬಾಬೂಜಿಯವರು ಸಂಪರ್ಕ ಖಾತೆಯ ಸಚಿವರಾಗಿ ಕೆಲಸ ಮಾಡಿದರು ದೇಶದ ಅಭಿವೃಬಾಪೂಜಿ, ಸಂಪರ್ಕ – ಸಾಧನಗಳು ಬಹಳ ಅವಶ್ಯಕ. ಇದರಿಂದ ಈ ಸಾಧನಗಳು ಸಾರ್ವತ್ರಿಕ ಒಡೆತನಕ್ಕೆ ಒಳಪಟ್ಟಿರಬೇಕು ಎಂಬ ನಿಲುವನ್ನು ವ್ಯಕ್ತಪಡಿಸಿ ಖಾಸಗಿಯಾಗಿದ್ದ ವೈಮಾನಿಕ ಸೇವೆಯನ್ನು ರಾಷ್ಟ್ರೀಕರಣ ಗೊಳಿಸಿದರು. ಏರ್ ಇಂಡಿಯ ಹಾಗೂ ಭಾರತೀಯ ಏರ್ ಲೈನ್ಸ್ ಸಂಸ್ಥೆಗಳನ್ನು ಅಂಚೆ – ತಂತಿ ಮತ್ತು ದೂರವಾಣಿ ಕೇಂದ್ರಗಳನ್ನು ಸ್ಥಾಪಿಸಿದರು.

ಕೇಂದ್ರ ರೈಲ್ವೆ ಹಾಗೂ ಸಾರಿಗೆ ಸಚಿವರಾಗಿ ಬಾಬೂಜಿ

1956ರಲ್ಲಿ ಕೇಂದ್ರ ರೈಲ್ವೆ ಹಾಗೂ ಸಾರಿಗೆ ಸಚಿವರಾಗಿ ರೈಲ್ವೆ ಉಪಹಾರ ಗೃಹಗಳಲ್ಲಿ ಕಡ್ಡಾಯವಾಗಿ ಅಸ್ಪೃಶ್ಯ ಅಡುಗೆ ನೌಕರರನ್ನು ನೇಮಿಸಿಕೊಳ್ಳಲು ಆಜ್ಞೆ ಹೊರಡಿಸಿದವರು ಬಾಬೂಜಿಯವರು. ಸಂವಿಧಾನ ರಾಜಕೀಯ ಮೀಸಲಾತಿ ಮಾತ್ರ ನೀಡಿತು. ಬಾಬೂಜಿ ಈ ಮೀಸಲಾತಿಯನ್ನು ಸರ್ಕಾರಿ ನೌಕರಿಯಲ್ಲೂ ಜಾರಿಗೆ ತಂದರು.

ಕೇಂದ್ರ ಕಾರ್ಮಿಕ ಸಚಿವರಾಗಿ

ಬಾಬೂಜಿಯವರು ಎರಡು ಬಾರಿ ಕಾರ್ಮಿಕ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಸಂದರ್ಭದಲ್ಲಿ ತಂದ ಕಾಯ್ದೆಗಳಿಗಾಗಿ ಇವರನ್ನು ಕಾರ್ಮಿಕ ಕಾನೂನು ಶಿಲ್ಪಿ ಎಂದೇ ಕರೆಯುತ್ತಾರೆ. ಕನಿಷ್ಠ ಕೂಲಿ ಕಾಯ್ದೆ 1948 ನ್ನು ಜಾರಿಗೆ ತರುವುದರ ಮೂಲಕ ಕಾರ್ಮಿಕರಿಗೆ ದುಡಿಮೆಗೆ ತಕ್ಕ ಪ್ರತಿಫಲ ಸಿಗಬೇಕು ಎಂಬುದನ್ನು ಸಾದರ ಪಡಿಸಿದರು. ಬಾಬೂಜಿ ಟ್ರೇಡ್ ಯೂನಿಯನ್ ಅನ್ನು ಸ್ಥಾಪಿಸಿದರು. ಕಾರ್ಮಿಕರಿಗಾಗಿ ಹಲವು ಕಾನೂನುಗಳನ್ನು ತಂದರು.

1. ಇಂಡಸ್ಟ್ರೀಸ್ ಎಂಪ್ಲಾಯ್ಮೆಂಟ್ ಆಕ್ಟ್ 1946
2. ಇಂಡಸ್ಟ್ರಿಯಲ್ ಡಿಸ್ಕ್ರಿಪ್ಟ್ ಆಕ್ಟ್ 1947
3. ಲೇಬರ್ ವೇಲ್ ಫೇರ್ ಫಂಡ್ ಆಕ್ಟ್ 1947
4. ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ ಆಕ್ಟ್ 1952
5. ಕೋಲ್ಮೆನ್ಸ್ ಆಕ್ಟ್ 1952

ಆಹಾರ ಕೃಷಿ ಮತ್ತು ಸಹಕಾರ ಸಚಿವರಾಗಿ ಬಾಬೂಜಿ

1965 66ರಲ್ಲಿ ಆಹಾರ ಕೃಷಿ ಮತ್ತು ಸಹಕಾರ ಸಚಿವರಾಗಿ ಬಾಬೂಜಿಯವರು ಅಧಿಕಾರ ವಹಿಸಿಕೊಂಡಾಗ ಭಾರತದಲ್ಲಿ ಭೀಕರ ಬರಗಾಲ ಕೃಷಿಯಲ್ಲಿ ಪ್ರತಿಕೂಲ ಪರಿಸ್ಥಿತಿ ಉಂಟಾಗಿತ್ತು. ಇನ್ನೇನು ಬಾಬೂಜಿಯವರ ರಾಜಕೀಯ ಜೀವನ ಮುಗಿಯುತ್ತೆ ಎಂದೇ ಜನ ಭಾವಿಸಿದ್ದರು ಆದರೆ ಕೃಷಿ ಸಚಿವರಾಗಿ ಬಾಬುಜಿ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದರು. “ನಮ್ಮ ದೇಶದ ರೈತರು ಸಂಪ್ರದಾಯವಾದಿಗಳು ಸಾಧಾರಣ ಪದ್ಧತಿಯಲ್ಲಿ ಕೃಷಿ ಮಾಡುತ್ತಾರೆ. ಆದ್ದರಿಂದ ಅವರು ಆಧುನಿಕ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಬೀಜೋಪಚಾರ, ಅಧಿಕ ಇಳುವರಿ ಕೊಡುವ ಬಿತ್ತನೆ ಬೀಜಗಳ ಬಳಕೆ, ಕೀಟನಾಶಕಗಳ ಬಳಕೆ, ವಿಜ್ಞಾನ ಮತ್ತು ತಂತ್ರಜ್ಞಾನ, ಹೊಸ ಪದ್ದತಿಗಳನ್ನು ಅಳವಡಿಸಿಕೊಂಡು ವೈಜ್ಞಾನಿಕವಾಗಿ ಕೃಷಿ ಮಾಡಿ ಲಾಭ ಗಳಿಸುವಂತ ಆಗಬೇಕು” ಎಂದು ಹೇಳಿ ಹಸಿರು ಕ್ರಾಂತಿಗೆ ನಾಂದಿ ಹಾಡುತ್ತಾರೆ. ಇದರ ಪರಿಣಾಮವಾಗಿ ಭಾರತ ಗೋಧಿಯ ಉತ್ಪಾದನೆಯಲ್ಲಿ ಕ್ರಾಂತಿಯನ್ನು ಮಾಡುತ್ತದೆ.

ರಕ್ಷಣಾ ಸಚಿವರಾಗಿ ಬಾಬೂಜಿ

1970ರಲ್ಲಿ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸುತ್ತಾರೆ. ಈ ಸಂದರ್ಭದಲ್ಲಿ ಬಾಂಗ್ಲ ದೇಶದ ವಿಮೋಚನೆಗಾಗಿ 1971ರಲ್ಲಿ ಭಾರತ-ಪಾಕಿಸ್ತಾನ ಯುದ್ಧ ನಡೆದಾಗ ಇಂದಿರಾಗಾಂಧಿಯವರು ಆಕಾಶವಾಣಿಯಲ್ಲಿ ಆಕ್ರಮಣಕ್ಕೆ ಜವಾಬ್ ಕೊಡಬೇಕಾಗಿದೆ ಎಂದರು. ಆಗ ಬಾಬುಜಿ ಹಗಲಿರುಳೆನದೆ ಶ್ರಮಿಸಿದರು ದೃಢಸಂಕಲ್ಪ ಮತ್ತು ರಾಜತಾಂತ್ರಿಕತ್ವದಿಂದ ರೂಪಿಸಿದ ತಂತ್ರಗಳು ಯಶಸ್ವಿಯಾಗಿ ಭಾರತ ಗೆದ್ದು ಬಾಂಗ್ಲಾ ದೇಶ ವಿಮೋಚನೆಯಾಯಿತು. ಈ ಯುದ್ಧದಲ್ಲಿ ಸಾವು ನೋವುಗಳನ್ನು ಹತ್ತಿರದಿಂದ ನೋಡಿದ ಬಾಬುಜಿ ಅವರು ಮೃತ ಸೈನಿಕರ ಕುಟುಂಬಕ್ಕೆ ಜೀವನ ಸುಧಾರಣೆಗಾಗಿ ವಿಧವಾ ವೇತನ, ಮದುವೆಯಾಗದೆ ಇದ್ದಲ್ಲಿ ಸೈನಿಕನ ತಂದೆ ತಾಯಿಗೆ ಪೆನ್ಷನ್, ಉಚಿತ ಜಮೀನು, ಮನೆ ಕಟ್ಟಲು, ಮನೆ ನವೀಕರಿಸಲು ಹಲವು ಸೌಲಭ್ಯಗಳನ್ನು ತಂದರು. ಇವೆಲ್ಲವೂ ಬಾಬೂಜಿಯವರ ದೂರ ದೃಷ್ಟಿಯ ಫಲಗಳಾಗಿವೆ.

ಜಾತಿಯ ಕಾರಣದಿಂದ ಬಾಬೂಜಿ ಎಷ್ಟೋ ಸ್ಥಾನಗಳನ್ನು ತ್ಯಾಗ ಮಾಡಬೇಕಾಗಿ ಬಂತು. ಕೇವಲ ಉಪ ಪ್ರಧಾನಿ ಪಟ್ಟಕ್ಕೆ ತೃಪ್ತಿ ಪಡಬೇಕಾಯಿತು. ಭಾರತದ ಪ್ರಧಾನ ಮಂತ್ರಿ ಆಗಲು ಭಾರತದ ರಾಷ್ಟ್ರಪತಿಯಾಗಲು ಸ್ಪರ್ಧಿಸಿದರು. ಆದರೆ ಜಾತಿ ಕಾರಣಕ್ಕೆ ಆತ ಪದವಿಗಳು ದಕ್ಕಲಿಲ್ಲ. ಇದಕ್ಕೆ ಲಂಕೇಶರು ಬೇಸರದಿಂದ ತಮ್ಮ ಲಂಕೇಶ್ ಪತ್ರಿಕೆಯಲ್ಲಿ ಹೀಗೆ ಬರೆಯುತ್ತಾರೆ…

ನಮ್ಮ ರಾಮು ಚೇರ್ಮನ್ ಆಗಲಿಲ್ಲ ನಮ್ಮ ಕಪ್ಪು ಮುಖದ ಮಗುವಿನಂತಹ ರಾಮುವಿನಲ್ಲಿ ಇನ್ನೂ ಸಾಕಷ್ಟು ಜೀವನ ದ್ರವ್ಯ ಇದೆ ಎಂದು ಆಶಿಸೋಣ ಈತನ ನೋವಿನಲ್ಲಿ ಭಾಗಿಗಳಾಗೋಣ ನಮ್ಮ ರಾಮು ತನ್ನ ಸ್ಪರ್ಧೆಯಲ್ಲಿ ಸೋತರು ಅದಕ್ಕೆ ಇರುವ ನಿಜವಾದ ಗೆಲುವಿನ ಬಗ್ಗೆ ಆಶಾವಾದಿಗಳಾಗೋಣ. ರಾಮವಿನ ಬಗ್ಗೆ ಬರೆಯುವಾಗ ನನ್ನಲ್ಲಿ ವ್ಯಂಗ್ಯ ಸತ್ತು ಕಣ್ಣಂಚಿನಲ್ಲಿ ನೀರು ಕಾಣಿಸಿಕೊಳ್ಳುತ್ತಿದೆ. ಇದು ಖಂಡಿತ ಕರುಣೆ ಅಥವಾ ಕೊಟ್ಟಿ ಅನುಕಂಪದಲ್ಲ ಈ ಗಾಂಧೀಜಿಯ ನೆಲದ ಅನ್ಯಾಯದಿಂದ ಹೊರಟದ್ದು ಎಂದು.

ಇದನ್ನೂ ನೋಡಿಕುವೆಂಪು ಜನ್ಮದಿನೋತ್ಸವ ವಿಶೇಷ ಕಾರ್ಯಕ್ರಮ – ಕುವೆಂಪು ಪರಿಚಯ

Donate Janashakthi Media

Leave a Reply

Your email address will not be published. Required fields are marked *