ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ರಾಷ್ಟ್ರಪತಿಗಳ ಅಧಿಕಾರ ಚಲಾಯಿಸುವಾಗ ಚರ್ಚೆ ಮತ್ತು ಸಹಭಾಗಿತ್ವದ ತತ್ವದ ಅಗತ್ಯವಿಲ್ಲ. ಸಂವಿಧಾನದ ವಿಧಿ 370(1)(ಡಿ) ಬಳಸಿ ಅನ್ವಯಿಸುವ ಎಲ್ಲಾ ನಿಬಂಧನೆಗಳಿಗೆ ರಾಜ್ಯದ ಒಪ್ಪಿಗೆ ಬೇಕಿಲ್ಲ ಎಂದು ಸಿಜೆಐ ಹೇಳಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಸೆಪ್ಟೆಂಬರ್ 30, 2024ರೊಳಗಾಗಿ ಚುನಾವಣೆ ನಡೆಸಬೇಕು ಹಾಗೂ ಜಮ್ಮು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಆದಷ್ಟು ಬೇಗ ಮರುಸ್ಥಾಪಿಸಬೇಕೆಂದೂ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಿದ್ದ ವಿಶೇಷ ಸ್ಥಾನಮಾನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, 2019ರ ಆಗಸ್ಟ್ 5ರಂದು ರದ್ದುಪಡಿಸಿದೆ. ಹಾಗೆಯೇ, ರಾಜ್ಯವನ್ನು ‘ಜಮ್ಮು ಮತ್ತು ಕಾಶ್ಮೀರ’ ಹಾಗೂ ‘ಲಡಾಖ್’ ಎಂದು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದೆ.
ಆರ್ಟಿಕಲ್ 370 ರದ್ದುಗೊಳಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ 23 ಅರ್ಜಿಗಳನ್ನು ದಾಖಲಾಗಿದ್ದವು. ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ದೀರ್ಘ ಸಮಯದಿಂದ ನಡೆಸುತ್ತಾ ಬಂದಿದೆ. 16 ಮ್ಯಾರಥಾನ್ ದಿನಗಳ ವಿಚಾರಣೆಗಳು ಮತ್ತು ಎರಡೂ ಕಡೆಯವರು ಮಂಡಿಸಿದ ವಾದಗಳ ನಂತರ, ನ್ಯಾಯಾಲಯವು ಸೆಪ್ಟೆಂಬರ್ 5ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಸಂವಿಧಾನ ಪೀಠ ವಿಚಾರಣೆ ನಡೆಸಿದೆ.
ಸುಪ್ರೀಂ ತೀರ್ಪಿಗೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು, ನ್ಯಾಯಾಂಗವು ತನ್ನ ಸಂವಿಧಾನಾತ್ಮಕ ಹೊಣೆಗಾರಿಕೆಯನ್ನು ನಿರ್ವಹಿಸುವಲ್ಲಿ ಎಡವಿದೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿವೆ.