ಆರ್ಥಿಕತೆ ಹೆಚ್ಚಿಸುವ ಕಾರ್ಮಿಕರ ಹಕ್ಕುಗಳನ್ನು ನಾಶಗೊಳಿಸಲಾಗುತ್ತಿದೆ: ಎಸ್.‌ ವರಲಕ್ಷ್ಮಿ

ಬೆಂಗಳೂರು: ಕಾರ್ಮಿಕ ವರ್ಗ ದೇಶದ ಆರ್ಥಿಕತೆಯನ್ನು ಹೆಚ್ಚಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಆದರೆ, ಆಳುವ ಸರ್ಕಾರ ಕಾರ್ಮಿಕ ಹಕ್ಕುಗಳ ರಕ್ಷಣೆಗಾಗಿ ಇರುವ ಕಾನೂನುಗಳನ್ನು ನಿರ್ನಾಮಮಾಡಲು ಮುಂದಾಗಿದೆ. ಕಾರ್ಮಿಕರ ಮೇಲಿನ ದಾಳಿಗಳು ಹಿಮ್ಮೆಟ್ಟಿಸಬೇಕೆಂದು ಸಿಐಟಿಯು ರಾಷ್ಟ್ರೀಯ ಉಪಾಧ್ಯಕ್ಷೆ ಹಾಗೂ ರಾಜ್ಯ ಅಧ್ಯಕ್ಷೆ ಎಸ್.‌ ವರಲಕ್ಷ್ಮಿ ಹೇಳಿದರು.

ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು) 17ನೇ ಅಖಿಲ ಭಾರತ ಸಮ್ಮೇಳನದ ಕೊನೆಯ ದಿನವಾದ ಇಂದು ಭಾರೀ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್.‌ ವರಲಕ್ಷ್ಮಿ ಅವರು, ಪಂಚಾಯತಿ, ಅಂಗನವಾಡಿ, ಬಿಸಿಯೂಟ ನೌಕರರನ್ನು ಖಾಯಂ ಮಾಡದ ಸರ್ಕಾರ ಅನೌಪಚಾರಿಕವಾಗಿ, ಅತ್ಯಂತ ಕಡಿಮೆ ವೇತನದಲ್ಲಿ ದುಡಿಸಿಕೊಳ್ಳುತ್ತಿದೆ. ಕಾರ್ಮಿಕರನ್ನು ಖಾಯಂ ಮಾಡಲು ಸರ್ಕಾರ ರೆಡಿ ಇಲ್ಲ. ಯಾವುದೇ ಸವಲತ್ತುಗಳನ್ನು ಕೇಳಬಾರದು ಎಂದು ಕಾರ್ಮಿಕರನ್ನು ಹತ್ತಿಕ್ಕುತ್ತಿದೆ. ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಸರ್ಕಾರ ಕಾರ್ಮಿಕರು ರೈತರನ್ನು ಬೀದಿಗೆ ತಂದಿದೆ ಎಂದರು.

ಮುಂದುವರೆದು ಮಾತನಾಡಿದ ಅವರು, ಕೊರೊನಾ ಸಾಂಕ್ರಾಮಿಕತೆ ಸಮಯದಲ್ಲಿ ಬಡ ಜನರು ಸಂಕಷ್ಟಕ್ಕೆ ಒಳಗಾಗಿ ಬೀದಿಗೆ ಬಿದ್ದರು. ಆದರೆ, ಲಕ್ಷಾಂತರ ಕೋಟಿ ಸಿರಿವಂತರಾದ ಅದಾನಿ, ಅಂಬಾನಿ ಅವರುಗಳ ಆದಾಯ ಮಾತ್ರ ದೊಡ್ಡ ಪ್ರಮಾಣದಲ್ಲಿ ಹೆಚ್ಚಳ ಕಂಡಿತು. ಬಿಜೆಪಿ ಸರ್ಕಾರ ಬಂಡವಾಳದಾರರ ಪರ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಜನವರಿ 30ರಂದು ರೈತರು-ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಟಕ್ಕೆ ಮುಂದಾಗಿದ್ದಾರೆ. ವೇತನ ಹೆಚ್ಚಿಸಬೇಕೆಂದು ಆಗ್ರಹಿಸಲಾಗುತ್ತಿದೆ. ಅಂದು ಸಹ ಹೋರಾಟಗಾರರು ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ ಎಂದು ತಿಳಿಸಿದರು.

ಧರ್ಮದ ಆಧಾರಗಳಲ್ಲಿ ಜನರನ್ನ ವಿಂಗಡಣೆ ಮಾಡಲಾಗುತ್ತಿದೆ. ಎಲ್ಲಿ ನೊಡಿದರೂ ದೇವಾಲಯಗಳನ್ನು ಕೇಸರಿಮಯಗೊಳಿಸಲಾಗುತ್ತಿದೆ. ಈ ದೇಶವನ್ನು ರಾಮರಾಜ್ಯ ಅಲ್ಲ, ರಾವಣ ರಾಜ್ಯ ಮಾಡಲು ಸರ್ಕಾರ ಹೊರಟಿದೆ. ಆರೋಗ್ಯ, ಶಿಕ್ಷಣ, ಉದ್ಯೋಗ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಜಾಗತಿಕ ಹಸಿವಿನ ಸೂಚಂಕ್ಯದಲ್ಲಿ ಭಾರತ 3ನೇ ಸ್ಥಾನದಲ್ಲಿ ಇದೆ ಎಂದು ಹೇಳಿದರು.

ಕೋಮುವಾದ, ಜಾತಿವಾದದ ಮೂಲಕ ಜನರ ಐಕ್ಯತೆಯನ್ನು ಒಡೆಯುವ ಕೆಲಸವಾಗುತ್ತಿದೆ ಇದನ್ನು ನಾವು ತಡೆಯಬೇಕು. ಅಕ್ಕಮಹಾದೇವಿ ವಚನ ಹೇಳುವ ಮೂಲಕ ತಮ್ಮ ಭಾಷಣವನ್ನು ಅಂತ್ಯಗೊಳಿಸಿದರು.

ಅಭಿನಂದನೆ

ಸಿಐಟಿಯು 17ನೇ ಅಖಿಲ ಭಾರತ ಸಮ್ಮೇಳನ ಯಶಸ್ಸಿಗೆ ಧನ್ಯವಾದ ತಿಳಿಸಿದ ಎಸ್.‌ ವರಲಕ್ಷ್ಮಿ ಅವರು, ಸಮ್ಮೇಳನದ ಯಶಸ್ಸಿಗೆ ಗ್ರಾಮ ಪಂಚಾಯತಿ ನೌಕರರು, ಅಂಗನವಾಡಿ ನೌಕರರು, ಕೂಲಿ ಕಾರ್ಮಿಕರು ಸೇರಿದಂತೆ ಎಲ್ಲಾ ಸಂಘಟನೆಯ ನೌಕರರು ದೇಣಿಗೆ ನೀಡುವ ಮೂಲಕ ಈ ಅದ್ದೂರಿ ಕಾರ್ಯಕ್ರಮ ಯಶಸ್ಸಿಗೆ ಕಾರಣರಾಗಿದ್ದಾರೆ. ಕಾರ್ಮಿಕ ವರ್ಗಕ್ಕೆ ಸಿಐಟಿಯು ಅಭಿನಂದನೆ ಸಲ್ಲಿಸುತ್ತದೆ ಎಂದರು.

ಬಹಿರಂಗ ಸಭೆಯ ವೇದಿಕೆ ಮೇಲೆ ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಡಾ. ಕೆ ಹೇಮಲತಾ, ಪ್ರಧಾನ ಕಾರ್ಯದರ್ಶಿ ತಪನ್‌ ಸೇನ್‌ ಸೇರಿದಂತೆ ರಾಷ್ಟ್ರೀಯ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ವೇದಿಕೆ ಮುಂಭಾಗ ಸಾವಿರಾರು ಕಾರ್ಮಿಕರು ಬಹಿರಂಗ ಸಭೆಯ ಭಾಷಣ ಅಲಿಸುತ್ತಾ ಕುಳಿತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *