“ಆರ್ಥಿಕ ಸಮೀಕ್ಷೆ” ವಾಸ್ತವತೆಯನ್ನು ಮರೆಮಾಚುವ  ವಂಚಕ ಕಸರತ್ತು – ಸಿಪಿಐ(ಎಂ) ಕೇಂದ್ರ ಸಮಿತಿ ಟೀಕೆ

ವಿನಾಶಕಾರೀ ಧೋರಣೆಗಳ ವಿರುದ್ದ ಫೆಬ್ರವರಿ  ದ್ವಿತೀಯಾರ್ಧದಲ್ಲಿ ಪ್ರಚಾರಾಂದೋಲನಕ್ಕೆ ಕರೆ

ಆರ್ಥಿಕ ಸಮೀಕ್ಷೆಗಳು ವಾಸ್ತವದಲ್ಲಿ ಏನು ಹೇಳುತ್ತಿವೆ?!..

ಫೆಬ್ರವರಿ 2021 ರ ದ್ವಿತೀಯಾರ್ಧದಲ್ಲಿ ಪಕ್ಷದ ಎಲ್ಲಾ ಘಟಕಗಳು ದೇಶಾದ್ಯಂತ ಹದಿನೈದು ದಿನಗಳ ಪ್ರಚಾರಾಂದೋಲನವನ್ನು ನಡೆಸಬೇಕು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಕರೆ ನೀಡಿದೆ. ಇದು ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸುವ ಮೂಲಕ ಭಾರತದ ಸಾಂವಿಧಾನಿಕ ವ್ಯವಸ್ಥೆಯನ್ನು ಮತ್ತು ಆರ್ಥಿಕ ಬುನಾದಿಗಳನ್ನು ನಾಶಪಡಿಸುತ್ತಿರುವುದು, ರಾಷ್ಟ್ರೀಯ ಸ್ವತ್ತುಗಳ ಲೂಟಿ, ದೊಡ್ಡ ಪ್ರಮಾಣದ ಖಾಸಗೀಕರಣ,; ಬೆಲೆ ಏರಿಕೆ; ಕಾರ್ಮಿಕ ಕಾನೂನುಗಳ ರದ್ಧತಿ, ನಿರುದ್ಯೋಗದ ನಾಗಾಲೋಟ ಇತ್ಯಾದಿ ವಿಷಯಗಳ ಮೇಲೆ ಮತ್ತು ಈಗ ನಡೆಯುತ್ತಿರುವ ರೈತರ ಹೋರಾಟಗಳಿಗೆ ಸೌಹಾರ್ದವನ್ನು ಬಲಪಡಿಸುವ ಹಾಗೂ ಆರ್‌.ಎಸ್‌.ಎಸ್. / ಬಿಜೆಪಿಯ ಸುಳ್ಳು ಪ್ರಚಾರವನ್ನು ಬಯಲಿಗೆಳೆಯುವ ವಿಷಯಗಳ ಮೇಲೆ ಇರುತ್ತದೆ ಎಂದು ಜನವರಿ 30-31ರಂದು ನಡೆದಿರುವ ಸಿಪಿಐ(ಎಂ) ಕೇಂದ್ರ ಸಮಿತಿಯ ಸಭೆ ನಿರ್ಧರಿಸಿದೆ.

ಆರ್ಥಿಕ ಸಮೀಕ್ಷೆ

ಬಜೆಟ್‍ ಅಧಿವೇಶನದ ಮೊದಲ ದಿನ ಮಂಡಿಸಿದ ಬೃಹದಾಕಾರದ ‘ಆರ್ಥಿಕ ಸಮೀಕ್ಷೆ’’ ಅದರ ಉದ್ದೇಶವನ್ನೇ ಅಪ್ರಸ್ತುತಗೊಳಿಸಿ ಬಿಡುತ್ತಿದೆ ಎಂದು ಕೇಂದ್ರ ಸಮಿತಿ ಅಭಿಪ್ರಾಯ ಪಟ್ಟಿದೆ. ಭಾರತವನ್ನು ಸಾಂಕ್ರಾಮಿಕದಿಂದಾಗಲೀ ಅಥವಾ ಅದರ ವಿನಾಶಕಾರಿ ಆರ್ಥಿಕ ಪರಿಣಾಮಗಳಿಂದಾಗಲೀ ರಕ್ಷಿಸುವಲ್ಲಿ ಸರ್ಕಾರದ ವಿರಾಟ್‍ ವೈಫಲ್ಯದ ಕಟು ಸಾಕ್ಷ್ಯವನ್ನು ಅಂಕೆ-ಸಂಖ್ಯೆಗಳ ಮಾಯಾಜಾಲದಲ್ಲಿ ಮುಚ್ಚಿ ಹಾಕಲಾಗಿದೆ. ತಮಾಷೆಯೆಂದರೆ, ಈ ವಿನಾಶಕಾರಿ ನಿರ್ವಹಣೆಯನ್ನು ಜೀವಗಳು ಮತ್ತು ಜೀವನೋಪಾಯಗಳು ಎರಡನ್ನೂ ಉಳಿಸಿದ ಧೋರಣೆಗಳ ಮೂಲಕದ `ದೂರದೃಷ್ಟಿಯ’ ಸ್ಪಂದನೆ ಎಂದು ಶ್ಲಾಘಿಸಲಾಗಿದೆ. ಇದು ಜನರ ಜೀವನೋಪಾಯದ ಮೇಲೆ ಸರ್ಕಾರದ ಧೋರಣೆಗಳ ವಿಧ್ವಂಸಕಾರಿ ಪರಿಣಾಮವನ್ನು ಮರೆಮಾಚುವ  ಅಪಪ್ರಚಾರ ಮತ್ತು ವಂಚಕ ಕಸರತ್ತಾಗಿದೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ವಿಶ್ಲೇಷಿಸಿದೆ.

2020-20121ರ ವರ್ಷದ ಮೊದಲ ತ್ರೈಮಾಸಿಕದಲ್ಲಿ (-) 23.9ಶೇ.ದಷ್ಟು, ಅದರ ಮೇಲೆ ಎರಡನೇ ತ್ರೈಮಾಸಿಕದಲ್ಲಿ ಮತ್ತೆ (-) 7.5ಶೇ. ದಷ್ಟು ಜಗತ್ತಿನ ಅತೀ  ಕೆಟ್ಟ ಜಿ.ಡಿ.ಪಿ. ಸಂಕೋಚನವನ್ನು ಒಂದು ವಿಚಿತ್ರವಾದ ರೀತಿಯಲ್ಲಿ, V ಆಕಾರದ  ಚೇತರಿಕೆ ಎಂದು ತೋರಿಸಲಾಗಿದೆ!  ಚೇತರಿಕೆ ಏನಾದರೂ ಇದ್ದರೆ, ಅದು K-ಆಕಾರದ ಚೇತರಿಕೆಯಾಗಿದೆ, ಅಂದರೆ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುವ ಮತ್ತು ಬಡವರು ಮತ್ತಷ್ಟು ಬಡವರಾಗುವಂತದ್ದು. ಇತ್ತೀಚಿನ ಆಕ್ಸ್‌ಫಾಮ್ ವರದಿ, “ಅಸಮಾನತೆಯ ವೈರಸ್”.  ಇದನ್ನು ವ್ಯಕ್ತಗೊಳಿಸಿದೆ. ಲಕ್ಷಾಂತರ ಬಡವರು ಈ ವರ್ಷ ಉದ್ಯೋಗ ಕಳೆದುಕೊಂಡಿರುವಾಗ ಹಸಿವು, ಅಪೌಷ್ಟಿಕತೆ ಮತ್ತು ಅಭಾವಗಳಿಂದ ಬಳಲುತ್ತಿರುವಾಗ ಭಾರತದ ಶ್ರೀಮಂತ ಬಿಲಿಯಾಧಿಪತಿಗಳು ತಮ್ಮ ಸಂಪತ್ತನ್ನು ಶೇಕಡಾ 35 ರಷ್ಟು ಹೆಚ್ಚಿಸಿಕೊಂಡಿದ್ದಾರೆ . ಇದೀಗ ‘ಆರ್ಥಿಕ ಸಮೀಕ್ಷೆ’  ಮರೆಮಾಚಿರುವ  ಮತ್ತು ತಪ್ಪಾಗಿ ನಿರೂಪಿಸಿರುವ ಸುಧಾರಣೆ’ಗಳ ವಾಸ್ತವತೆ ಎಂದು ಕೇಂದ್ರ ಸಮಿತಿ ಟೀಕಿಸಿದೆ.

ಮುಂಬರುವ ಬಜೆಟ್

ಯಾವುದೇ ಚೇತರಿಕೆ ಸರ್ಕಾರದ ವೆಚ್ಚಗಳಲ್ಲಿ ಭಾರೀ ಏರಿಕೆಯ ಮೂಲಕ ಮಾತ್ರ ಸಾಧ್ಯ ಎಂಬುದನ್ನು ಸಾರ್ವತ್ರಿಕವಾಗಿ ಗುರುತಿಸಲಾಗಿದೆ. ಆರ್ಥಿಕ ಚೇತರಿಕೆ ಮತ್ತು ಜನರ ಕಲ್ಯಾಣವನ್ನು ಖಾತ್ರಿಪಡಿಸಬೇಕಾದ ಅಗತ್ಯಕ್ಕೆ ಸ್ಪಂದಿಸುವ ಯಾವುದೇ ಸರ್ಕಾರವು ನಮ್ಮ ಬಹಳಷ್ಟು ಅಗತ್ಯವಾದ ಮೂಲಸೌಕರ್ಯಗಳನ್ನು ನಿರ್ಮಿಸಲು ಸಾರ್ವಜನಿಕ ಹೂಡಿಕೆಗಳನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸಬೇಕು,  ಇದು ಅಪಾರ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಈ ಯುವಕರು ತಮ್ಮ ಸಂಬಳಗಳನ್ನು ಖರ್ಚು ಮಾಡಲು ಪ್ರಾರಂಭಿಸಿದಾಗ, ಆಂತರಿಕ ಬೇಡಿಕೆಯು ಚೇತರಿಕೆಯ ಪ್ರಕ್ರಿಯೆಯನ್ನು  ರಭಸದಿಂದ ಪ್ರಾರಂಭಿಸುತ್ತದೆ.

ಜನರು ಇದನ್ನು ಬಯಸುತ್ತಾರೆ,  ಆದರೆ ಈ ಬಿಜೆಪಿ ಸರಕಾರ  ಮಾಡುವುದು ಇದನ್ನಲ್ಲ. ಏಕೆಂದರೆ ಅದು ಭಾರತದ ರಾಷ್ಟ್ರೀಯ ಸ್ವತ್ತುಗಳನ್ನು ನಿಷ್ಕರುಣೆಯಿಂದ ಲೂಟಿ ಮಾಡುವುದರಲ್ಲಿ ಮತ್ತು ತನ್ನ ಬಂಟ ಕಾರ್ಪೊರೇಟ್‌ಗಳನ್ನು ಉತ್ತೇಜಿಸುವುದರಲ್ಲಿಯೇ ಮಗ್ನವಾಗಿದೆ.

23ನೇ ಸಿಪಿಐ(ಎಂ) ಮಹಾಧಿವೇಶನ-2022 ಮೊದಲ ತ್ರೈಮಾಸಿಕದಲ್ಲಿ

ಪಕ್ಷದ 23ನೇ ಮಹಾಧಿವೇಶನ ಏಪ್ರಿಲ್ 2021ರಲ್ಲಿ  ನಡೆಯಬೇಕಾಗಿತ್ತು. ಸಾಂಕ್ರಾಮಿಕ/ಲಾಕ್‍ ಡೌನ್‍ ಗಳು ಮತ್ತು  ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಅಸ್ಸಾಂ ವಿಧಾನಸಭಾ ಚುನಾವಣೆಗಳಿಂದಾಗಿ ಅದನ್ನು ಮುಂದೂಡಬೇಕಾಗಿ ಬಂದಿದೆ ಎಂದಿರುವ ಕೇಂದ್ರ ಸಮಿತಿ 23ನೇ ಮಹಾಧಿವೇಶನವನ್ನು 2022 ರ ಮೊದಲ ತ್ರೈಮಾಸಿಕದಲ್ಲಿ, ಸಾಧ್ಯವಾದಷ್ಟೂ ಫೆಬ್ರುವರಿ ಅಂತ್ಯದೊಳಗೆ ನಡೆಸಲು ನಿರ್ಧರಿಸಿದೆ. ಇದಕ್ಕೆ ಸಿದ್ಧತೆಗಳು ಮುಂಬರುವ ವಿಧಾನಸಭಾ ಚುನಾವಣೆಗಳ ನಂತರ 2021 ರ ಜುಲೈ ಮೊದಲ ವಾರದಿಂದ ಶಾಖಾ ಸಮ್ಮೇಳನಗಳೊಂದಿಗೆ ಪ್ರಾರಂಭವಾಗುತ್ತವೆ.

ಜನವರಿ 30-31ರಂದು ಅನ್‍ಲೈನಿನಲ್ಲಿ ಸಭೆ ಸೇರಿದ ಸಿಪಿಐ(ಎಂ) ಕೇಂದ್ರ ಸಮಿತಿ   ಸಭೆಯ ನಂತರ ನೀಡಿರುವ ಹೇಳಿಕೆಯಲ್ಲಿ ಇದನ್ನು ತಿಳಿಸಿದೆ.

ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸುವುದು, ಕೇರಳದಲ್ಲಿ ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್ ಸರ್ಕಾರ ಮರಳುವಂತೆ ನೋಡಿಕೊಳ್ಳುವುದು, ಪಶ್ಚಿಮ ಬಂಗಾಲದಲ್ಲಿ ಎಡ, ಜಾತ್ಯತೀತ ಪ್ರಜಾಪ್ರಭುತ್ವ ಪರ್ಯಾಯಕ್ಕಾಗಿ ಕೆಲಸ ಮಾಡುವುದು, ಬಿಜೆಪಿ-ಎಐಎಡಿಎಂಕೆ ಮೈತ್ರಿಯನ್ನು ಸೋಲಿಸಿ ಡಿಎಂಕೆ ರಂಗದ ವಿಜಯವನ್ನು ಖಾತ್ರಿಪಡಿಸುವುದು ಮತ್ತು ಅಸ್ಸಾಂ ವಿಧಾನಸಭೆಯಲ್ಲಿ ಪಕ್ಷದ ಪ್ರಭಾವವನ್ನು ಹೆಚ್ಚಿಸುವುದು ಇವುಗಳ ಮೇಲೆ ಮುಂಬರುವ ಅವಧಿಯಲ್ಲಿ ಮುಖ್ಯ ಗಮನವಿರುತ್ತದೆ ಎಂದು ಕೇಂದ್ರ ಸಮಿತಿ ನಿರ್ಧರಿಸಿದೆ.

Donate Janashakthi Media

Leave a Reply

Your email address will not be published. Required fields are marked *