ಆರ್ಥಿಕ ಪ್ಯಾಕೇಜ್‌ ಘೋಷಿಸುವಂತೆ ಸಿಎಂಗೆ 20 ಅಂಶದ ಪತ್ರ ಬರೆದ ಸಿದ್ದರಾಮಯ್ಯ

ಬೆಂಗಳೂರು: ಕೋವಿಡ್‌ ನಿಯಂತ್ರಣದ ಹಿನ್ನೆಲೆಯಲ್ಲಿ ಯಾವ ಪೂರ್ವ ತಯಾರಿಗಳನ್ನು ಕೈಗೊಳ್ಳದೆ 15 ದಿನಗಳ ಲಾಕ್‌ಡೌನ್‌ ಜಾರಿಯಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ದುಡಿಯುವ ವರ್ಗಕ್ಕೆ ನ್ಯಾಯಯುತವಾದ ಆರ್ಥಿಕ ಪ್ಯಾಕೇಜ್‌ ಘೋಷಿಸಬೇಕೆಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ 20 ಅಂಶಗಳ ಪತ್ರವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬರೆದಿದ್ದಾರೆ.

ಪತ್ರದಲ್ಲಿ ಸಿದ್ದರಾಮಯ್ಯ ಅವರು ʻʻಕೇಂದ್ರ ಮತ್ತು ರಾಜ್ಯ ಸರಕಾರಗಳ ನಿರ್ಲಕ್ಷ್ಯತೆ, ಅದಕ್ಷತೆ ಮತ್ತು ಅವೈಜ್ಞಾನಿಕ ಮನೋಭಾವಗಳಿಂದಾಗಿ ಕೋವಿಡ್‌ ಎರಡನೇ ಅಲೆ ಉಲ್ಬಣವಾಗಲು ಕಾರಣವಾಗಿದೆ. ತಜ್ಞರ, ಬುದ್ಧಿವಂತರ ಸಲಹೆಗಳನ್ನು ಶಿಫಾರಸ್ಸುಗಳನ್ನು ಕಸದ ಬುಟ್ಟಿಗೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ: ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ : ಕಾಂಗ್ರೆಸ್‌ಗೆ ಗೆಲುವು, ಬಿಜೆಪಿಗೆ ಮುಖಭಂಗ

ಜನವರಿ, ಫೆಬ್ರವರಿ ತಿಂಗಳಿನಲ್ಲಿ ಕೊರೊನಾ ತುಸು ಕಡಿಮೆಯಾದಂತೆ ಭಾಸವಾಯಿತು. ಕೊರೊನಾ ಗೆದ್ದಿದ್ದೇವೆ ಎಂದು ಈ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು, ಕೇಂದ್ರ ಆರೋಗ್ಯ ಸಚಿವರು ಮಂತ್ರಿಗಳು ಮುಂತಾದವರೆಲ್ಲ ಹೇಲಿಕೆಗಳನ್ನು ನೀಡಲಾರಂಭಿಸಿದರು. ಕೋವಿಡ್‌ ನಡುವೆಯೇ ಪ್ರಧಾನಿಗಳು 49 ಚುನಾವಣಾ ರ‍್ಯಾಲಿಗಳನ್ನು ಮಾಡಿದ್ದಾರೆ. ಈ ಸಂದರ್ಭದಲ್ಲಿ ಕೋವಿಡ್‌ ಮಾರ್ಗದೂಚಿಗಳನ್ನು ಅವರು ಪಾಲಿಸಲಿಲ್ಲ.

ಹಿಂದಿನ ವರ್ಷ ಹಮ್ಮಿಕೊಂಡ ನಮಸ್ತೆ ಟ್ರಂಪ್‌ ಕಾರ್ಯಕ್ರಮದಿಂದ ಇಡೀ ದೇಶಕ್ಕೆ ಕೋವಿಡ್‌ ಹಬ್ಬಿದೆ. ಈ ವರ್ಷ ಚುನಾವಣಾ ರ‍್ಯಾಲಿಗಳು , ಕುಂಭಮೇಳ ಮಾಡಲಾಯಿತು. ಇದರಿಂದ ಇಲ್ಲೆಲ್ಲೆ ಕೊರೊನಾ ಬೆಂಕಿಯಂತೆ ಹಬ್ಬುತ್ತಿದೆ ಎಂದು ಆರೋಪಿಸಿರುವ ಸಿದ್ದರಾಮಯ್ಯ ಅವರು ಪ್ರಧಾನಿಯ ನಡೆಯನ್ನು ಖಂಡಿಸಿದ್ದಾರೆ.

ಇದನ್ನು ಓದಿ: ಜಿಂದಾಲ್ ಗೆ ಮಾರಾಟ ಮಾಡಿದ ಭೂ ಬೆಲೆಯಿಂದ ಸರಕಾರಕ್ಕೆ ಸಾವಿರಾರು ಕೋಟಿ ರೂ. ನಷ್ಟ ಸಿಪಿಐಎಂ ಖಂಡನೆ

ಬಿಜೆಪಿಯವರ ಮಾತು ಕೇಳಿ ಕೊರೊನಾ ಹೊರಟು ಹೋಯಿತು ಎಂದು ಭಾವಿಸಿದ ದೇಶದ ಬಹುಪಾಲು ಜನ ಮೈಮರೆತರು. ಮೊದಲ ಅಲೆಗಿಂತ ಎರಡನೇ ಅಲೆ ಅತ್ಯಂತ ಭೀಕರವಾಗಲಿದೆ ಎಂದು ತಜ್ಞರು ಎಚ್ಚರಿಸಿದರೂ ಸಹ ಅವರ ಮಾತುಗಳನ್ನು ಜನ ಕೇಳಲಿಲ್ಲ. ತಜ್ಞರ ಅಭಿಪ್ರಾಯ ಕೇಳಿಸಿಕೊಂಡ ಸರಕಾರ ಸಹ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳದ ಪರಿಣಾಮವಾಗಿ ದೇಶದಲ್ಲಿ ಕೊರೊನಾ ಅಟ್ಟಹಾಸ ಮೆರೆದಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷದಂತೆ ಈಗ ಮತ್ತೆ  ಏಪ್ರಿಲ್‌ 26ರಿಂದ ರಾಜ್ಯದಲ್ಲಿ 14 ದಿನ ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ಅದು ಮುಂದುವರೆಯುವ ಸಾಧ್ಯತೆಯೂ ಇದೆ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಇದರ ಪರಿಣಾಮವಾಗಿ ರಾಜ್ಯದ ದುಡಿಯುವ ಜನತೆ ಕಣ್ಣಿರಲ್ಲಿ ಕೈತೊಳೆಯುವ ಪರಿಸ್ಥಿತಿ ಎದುರಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನು ಓದಿ: ಕರ್ಫ್ಯೂ ಅವಧಿಯಲ್ಲಿ ಕಾರ್ಮಿಕರ ಸಂಬಳ ಕಡಿತ ಮಾಡದಂತೆ ಕೋರಿ ಪಿಐಎಲ್‌

ವಿವಿಧ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಸಹ ಕಾರ್ಮಿಕರು ನೆಮ್ಮದಿಯಿಂದ ಜೀವನ ನಡೆಸಲು ಪ್ರತಿ ಕುಟುಂಬಕ್ಕೆ  ತಿಂಗಳು ರೂ.10,000/- ನೀಡಿ ಎಂದು ಹಕ್ಕೊತ್ತಾಯಗಳನ್ನು ಮಂಡಿಸಿದ್ದವು. ಅವರ ಬೇಡಿಕೆಗಳನ್ನು ರಾಜ್ಯ ಸರಕಾರ ಪರಿಗಣಿಸಲಿಲ್ಲ. ಹಿಂದಿನ ಬಾರಿ ಘೋಷಿಸಿದ ವಿಶೇಷ ಪ್ಯಾಕೇಜ್‌ ಘೋಷಣೆಯಿಂದ ಸಂಬಂಧಿತ ದುಡಿಯುವ ವರ್ಗದ ಕಾಲು ಭಾಗದಷ್ಟು ಕಾರ್ಮಿಕರಿಗೂ ಪರಿಹಾರ ಸಿಗಲಿಲ್ಲ ಎಂದು ಆರೋಪಿಸಿದ್ದಾರೆ.

ಕಳೆದ ಒಂದು ವರ್ಷದಿಂದ ರಾಜ್ಯದ ದುಡಿಯುವ ವರ್ಗದ ಜನ ದುಡಿಮೆಗಳಿಲ್ಲದೆ, ವ್ಯಾಪಾರಗಳಿಲ್ಲದೆ ಬಸವಳಿದು ಹೋಗಿದ್ದಾರೆ. ಆದ್ದರಿಂದ ಕೂಡಲೇ ಅವರಿಗೆ ನ್ಯಾಯಯುತವಾದ ಆರ್ಥಿಕ ಪ್ಯಾಕೇಜ್‌ ಘೋಷಿಸುವಂತೆ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ದುಡಿಯುವ ವರ್ಗ ಸೇರಿದಂತೆ ರೈತಾಪಿ ವರ್ಗ, ಶೈಕ್ಷಣಿಕ ಅಭ್ಯಾಸದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಸೇರಿದಂತೆ ವಿವಿಧ ಜನ ಸಮುದಾಯಗಳ ನಿರ್ದಿಷ್ಠ ಪ್ರಶ್ನೆಗಳನ್ನು ವಿಂಗಡಿಸಿ 20 ಅಂಶಗಳುಳ್ಳ ಸಮಗ್ರವಾದ ಪತ್ರವನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *