ಹೊಸ ಸೋಂಕುಗಳ ಸಂಖ್ಯೆ ಮತ್ತು ಅರ್ಥವ್ಯವಸ್ಥೆಯ ಆತಂಕಕಾರಿ ಅಂಕಿ-ಅಂಶಗಳು ಎರಡರಲ್ಲೂ ಭಾರತವು ಜಾಗತಿಕ ನಾಯಕನಾಗುವಲ್ಲಿ ಯಶಸ್ವಿಯಾಗಿದೆ. ಇದು ‘ದೇವರ ಆಟ’ವಂತೂ ಅಲ್ಲವೇ ಅಲ್ಲ. ಸರಿಯಾದ ನೀತಿಗಳನ್ನು ಅನುಸರಿಸುವ ಮೂಲಕ ಇದೆಲ್ಲವನ್ನೂ ತಡೆಬಹುದಾಗಿತ್ತು. ಈ ಭಯಾನಕ ಪ್ರವೃತ್ತಿಯನ್ನು ಈಗಲೂ ಹಿಮ್ಮೆಟ್ಟಿಸಬಹುದು. ಕೇಂದ್ರ ಸರ್ಕಾರವು ತಕ್ಷಣವೇ ಒಂದು ಬೃಹತ್ ಪ್ರಮಾಣದ ಹಣಕಾಸು ಪ್ಯಾಕೇಜ್ ಒದಗಿಸಬೇಕು. ಅದರಿಂದ ಜನರಿಗೆ ನಿಜಕ್ಕೂ ಹಣ ಲಭ್ಯವಾಗುವಂತಿರಬೇಕು, ತುಟಿಗೆ ತುಸು ತುಪ್ಪ ಸವರುವ ಭರವಸೆಗಳಲ್ಲ. ದಿಟ್ಟ ಚಿಂತನೆ ಮತ್ತು ತುರ್ತು ಕ್ರಮವಹಿಸುವುದೊಂದೆ, ಬಿಕ್ಕಟ್ಟಿನಿಂದ ಹೊರಬರುವ ದಾರಿ.
ವಿಷಯ ಈಗ ಅಧಿಕೃತವಾಗಿದೆ: ದಿನೇ ದಿನೇ ಹೊಸದಾಗಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರತವು ಈಗ ಮೊದಲನೆಯ ಸ್ಥಾನಕ್ಕೇರಿದೆ ಮತ್ತು ಕೊರೊನಾ ಸಂದರ್ಭದಲ್ಲಿ ಜಗತ್ತಿನ ಪ್ರಮುಖ ಅರ್ಥವ್ಯವಸ್ಥೆಗಳ ನಿರ್ವಹಣೆಯೊಂದಿಗೆ ಹೋಲಿಸಿದರೆ, ಅದರ ಕಾರ್ಯನಿರ್ವಹಣೆಯನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ನಿರ್ವಹಿಸಿದ ಗುಂಪಿನಲ್ಲಿ ಭಾರತವು ಜಾಗತಿಕ ನಾಯಕನಾಗುವಲ್ಲಿ ಯಶಸ್ವಿಯಾಗಿದೆ. ಇಂತಹ ಎರಡು ಚಮತ್ಕಾರಗಳನ್ನು ನಮ್ಮ ಸರ್ಕಾರ ಹೇಗೆ ಸಾಧಿಸಿತು? ಇದು ‘ದೇವರ ಆಟ’ವಲ್ಲ. ಬದಲಿಗೆ, ಅಧಿಕಾರದ ಚುಕ್ಕಾಣಿ ಹಿಡಿದ ಈಗಿನ ನಾಯಕತ್ವದ ಅಸಮರ್ಥತೆ ಮತ್ತು ಅದರ ಸಂವೇದನಾಶೂನ್ಯತೆಯೇ.
೨೦೨೦ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜಿಡಿಪಿಯ ಶೇ.೨೪ ಅಂದಾಜು ಕುಸಿತವು ಜಿ-೨೦ ದೇಶಗಳಿಗೆ ಮತ್ತು ಇತರ ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಹೋಲಿಸಿದರೆ, ಅತ್ಯಂತ ಕೆಟ್ಟ ಸಾಧನೆಯಾಗಿ ಕಾಣುತ್ತದೆ. ವಾಸ್ತವಿಕ ಕುಸಿತವು ಬಹುಶಃ ಇನ್ನೂ ಕೆಟ್ಟದಾಗಿರುತ್ತದೆ. ಏಕೆಂದರೆ, ಈ ಸಂಖ್ಯೆಗಳು ಔಪಚಾರಿಕ ಅಥವಾ ಸಂಘಟಿತ ವಲಯದ ಮಾಹಿತಿಯನ್ನು ಮಾತ್ರ ಆಧರಿಸಿವೆ. ಈ ಅಂಕಿ-ಅಂಶಗಳನ್ನು ಆಧರಿಸಿ ಅನೌಪಚಾರಿಕ ಅಸಂಘಟಿತ ಚಟುವಟಿಕೆಗಳ ಬೆಳವಣಿಗೆಯನ್ನು ಲೆಕ್ಕಹಾಕಲಾಗುತ್ತದೆ. ಹಾಗಾಗಿ, ವಾಸ್ತವಿಕವಾಗಿ ಜಿಡಿಪಿಯ ಇಳಿಕೆಯು ಬಹುಶಃ ಇನ್ನೂ ಕೆಟ್ಟದ್ದಾಗಿಯೇ ಇರುತ್ತದೆ. ಕೈಗಾರಿಕಾ ಉತ್ಪಾದನಾ ಸೂಚ್ಯಂಕವು ೨೦% ಕ್ಕಿಂತ ಹೆಚ್ಚು ಕುಸಿತವನ್ನು ಕಂಡಿದೆ. ಆದರೆ ತಳ ವರದಿಗಳು ಅಸಂಘಟಿತ ವಲಯದಲ್ಲಿ ಉತ್ಪಾದನೆಯು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕುಸಿದಿದೆ ಎಂಬುದನ್ನು ಸೂಚಿಸುತ್ತವೆ. ತಯಾರಿಕಾ ವಲಯದ ಅನೇಕ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಮಟ್ಟದ ಉದ್ದಿಮೆಗಳು (ಎಂಎಸ್ಎಂಇ) ಮತ್ತು ಸೇವೆ ಒದಗಿಸುವ ಸಂಸ್ಥೆಗಳು ಈವರೆಗೂ ಮುಚ್ಚಲ್ಪಟ್ಟಿವೆ ಅಥವಾ ಬಹಳ ಸಣ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಉದ್ಯೋಗಗಳು ನಾಶವಾಗಿವೆ ಮತ್ತು ಕೂಲಿಯ ದರವೂ ಇಳಿದಿದೆ. ಹಾಗಾಗಿ ಕೂಲಿ-ವೇತನ ಆದಾಯವು ಜಿಡಿಪಿಯ ಇಳಿಕೆಗಿಂತಲೂ ತೀವ್ರವಾಗಿ ಕುಸಿಯುತ್ತಿದೆ.
ಜಿಡಿಪಿಯ ದತ್ತಾಂಶವು ಮತ್ತೊಂದು ಕೆಟ್ಟ ಸುದ್ದಿಯನ್ನೂ ಒಳಗೊಂಡಿದೆ: ಕೃಷಿಯನ್ನು ಹೊರತುಪಡಿಸಿದರೆ ಉಳಿದ ಎಲ್ಲ ವಲಯಗಳಲ್ಲೂ, ಅದರಲ್ಲೂ ವಿಶೇಷವಾಗಿ ಉದ್ಯೋಗ-ಸಾಂದ್ರ ವಲಯಗಳಲ್ಲಿ ಬೆಳವಣಿಗೆಯು ತೀವ್ರವಾಗಿ ಕುಸಿದಿದೆ. ಉತ್ತಮ ಮುಂಗಾರು ಪೈರು ಮತ್ತು ಮುಂಗಾರು ಮಳೆ ಉತ್ತಮವಾಗಿ ಆರಂಭವಾಗಿರುವುದರಿಂದ ಕೃಷಿಯಲ್ಲಿ ಸ್ವಲ್ಪ ಮಟ್ಟಿನ ನಿರಾಳತೆ ನೆಲೆಸಿದೆ. ಆದರೆ, ಜನರ ಆದಾಯಗಳು ಇಳಿಕೆಯಾದ ಕಾರಣದಿಂದಾಗಿ, ವರ್ಷ ಕಳೆಯುವುದರೊಳಗೆ ಕೃಷಿ ಬೆಲೆಗಳಲ್ಲಿ ಚೇತರಿಕೆಯಾಗಿ ರೈತರು ಸಾಕಷ್ಟು ಆದಾಯವನ್ನು ಕಾಣುವ ಸಾಧ್ಯತೆಯೇ ಇಲ್ಲ. ಕಳೆದ ವರ್ಷದ ಇದೇ ಅವಧಿಯಲ್ಲಿ ಸರ್ಕಾರದ ಖರ್ಚುಗಳ ಬಾಬ್ತಿನಲ್ಲಿ ಸುಮಾರು ೧೬% ಏರಿಕೆ ಇತ್ತು. ಆದರೆ, ಈ ವರ್ಷದಲ್ಲಿ ಹೂಡಿಕೆಯು ಒಟ್ಟಾರೆಯಾಗಿ ಗಣನೀಯ ಪ್ರಮಾಣದಲ್ಲಿ ಕುಸಿದಿದೆ (ಸುಮಾರು ಅರ್ಧದಷ್ಟು). ಹಾಗಾಗಿ ಸರ್ಕಾರವು ಮಾಡುವ ಹೂಡಿಕೆಯೂ ಕಡಿಮೆಯೇ ಇರುತ್ತದೆ. ಜಿಡಿಪಿಯ ಲೆಕ್ಕವು ಒಳಗೊಳ್ಳುವ ಸಾರ್ವಜನಿಕ ಆಡಳಿತ, ರಕ್ಷಣೆ ಮತ್ತು ಇತರ ಸೇವೆಗಳ ಒಟ್ಟು ಮೌಲ್ಯವು ೧೦% ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಈ ಒಟ್ಟು ಮೌಲ್ಯವು ಒಳಗೊಂಡಿರುವ ಅಂಶಗಳಲ್ಲಿ ವೇತನವೊಂದರ ಪಾಲೇ ಶೇ.೯೦ರಷ್ಟಿದೆ. ಕೇಂದ್ರ ಸರ್ಕಾರದ ವೇತನಗಳೇನೂ ಕಡಿಮೆಯಾಗಿಲ್ಲ. ಹಾಗಾಗಿ, ಈ ಇಳಿಕೆಯ ಹೊಡೆತವು ರಾಜ್ಯ ಸರ್ಕಾರಗಳ ಮೇಲೆ ಬಿದ್ದಿರಲೇಬೇಕು. ಏಕೆಂದರೆ, ಅನೇಕ ರಾಜ್ಯ ಸರ್ಕಾರಗಳು ವೇತನಗಳನ್ನು ಬಹುತೇಕ ಸ್ಥಗಿತಗೊಳಿಸಿವೆ ಅಥವಾ ವೇತನಗಳನ್ನು ತುಂಬಾ ತಡವಾಗಿ ವಿತರಿಸಿವೆ.
ಗಂಭೀರ ಸಂಕಟ
ಈ ನಡುವೆ, ಈ ಕೊರೊನಾ ಸಾಂಕ್ರಾಮಿಕವು ನಾಗಾಲೋಟದಲ್ಲಿ ವ್ಯಾಪಿಸುತ್ತಿದೆ: ಕೊರೊನಾ ಹರಡುವಿಕೆಯ ಏರು ರೇಖೆಯಲ್ಲಿ ಕೆಳ ತಿರುವನ್ನು ತಂದು “ಚಪ್ಪಟೆಗೊಳಿಸುವ” ಎಲ್ಲಾ ಮಾತುಗಳು ಗಾಳಿಯಲ್ಲಿ ತೇಲಿ ಹೋಗಿವೆ. ಇದೂ ಸಹ, ಅರ್ಥವ್ಯವಸ್ಥೆಯಲ್ಲಿ “ಹಸಿರು ಚಿಗುರುತ್ತಿದೆ” ಎಂದು ಸರ್ಕಾರದ ಅಧಿಕೃತ ವಕ್ತಾರರು ನೀಡಿದ ರೀತಿಯ ಇನ್ನೊಂದು ಹೇಳಿಕೆ. “ಚಪ್ಪಟೆಗೊಳಿಸುವ” ರಾಗದ ಬದಲು ಈಗ, ಸೋಂಕಿನಿಂದ ಚೇತರಿಕೆಯ ದರ ಮತ್ತಷ್ಟು ಸುಧಾರಿಸಿದೆ ಎಂಬ ಅರ್ಥಹೀನ ಸೂಚಕದ ಮಾತು ಕೇಳಬರುತ್ತಿದೆ. ಸಾಂಕ್ರಾಮಿಕ ಹರಡುವಿಕೆಯ ಪ್ರಕರಣಗಳು ಹೆಚ್ಚಿದಂತೆಯೇ ಚೇತರಿಕೆಯ ದರವೂ ಸುಧಾರಿಸುತ್ತದೆ. ಅದೊಂದು ಸಾಧನೆಯೇ ಅಲ್ಲ.
ಈ ಸಾಂಕ್ರಾಮಿಕವು ವ್ಯಾಪಿಸಿಕೊಳ್ಳುವ ಮುನ್ನವೇ ಘೋಸಿದ ದೇಶವ್ಯಾಪಿ ನಿರ್ದಯ ಲಾಕ್ಡೌನ್ ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ. ಸೋಂಕಿತರನ್ನು ಪರೀಕ್ಷಿಸುವುದು, ಪತ್ತೆ ಮಾಡುವುದು, ಪ್ರತ್ಯೇಕಿಸುವುದು ಮತ್ತು ಚಿಕಿತ್ಸೆ ನೀಡುವುದು – ಈ ಕ್ರಮಗಳು ದುಬಾರಿಯಾದರೂ ಸಹ, ಅವುಗಳನ್ನು ಬಿಟ್ಟರೆ, ಈ ಸಾಂಕ್ರಾಮಿಕ ರೋಗವನ್ನು ಎದುರಿಸಲು ಬೇರೆ ಮಾರ್ಗವೇ ಇಲ್ಲ. ಈ ಮಾರ್ಗವನ್ನು ಅನುಸರಿಸುವುದರ ಬದಲಾಗಿ ಕೇಂದ್ರ ಸರ್ಕಾರವು ಯಾವುದೇ ಮುನ್ಸೂಚನೆಯನ್ನೂ ನೀಡದೆ ದೇಶವ್ಯಾಪಿಯಾಗಿ ಎಲ್ಲ ಚಟುವಟಿಕೆಗಳನ್ನೂ ಬಂದ್ ಮಾಡಿಸಿತು. ನಂತರ, ಜೀವನೋಪಾಯ ಕಳೆದುಕೊಂಡ ಜನಸಂಖ್ಯೆಯ ಸುಮಾರು ೮೦% ರಷ್ಟು ಮಂದಿಗೆ ಸರ್ಕಾರವು ಯಾವುದೇ ಪರಿಹಾರವನ್ನೂ ಕೊಡಲಿಲ್ಲ ಮತ್ತು ಅವರಿಗೆ ಯಾವುದೇ ಸಾಮಾಜಿಕ ರಕ್ಷಣೆಯನ್ನೂ ಒದಗಿಸಲಿಲ್ಲ. ಲಾಕ್ಡೌನ್ ಸೃಷ್ಟಿಸಿದ ಭಯಾನಕ ಪರಿಸ್ಥಿತಿಯಿಂದಾಗಿ ನಗರಗಳಲ್ಲಿದ್ದ ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ಅನಿವಾರ್ಯವಾಗಿ ಹಿಂದಿರುಗಿದರು. ಹಾಗಾಗಿ, ಅವರು ತಮಗೆ ಗೊತ್ತಿಲ್ಲದೆಯೇ ಅಥವಾ ಉದ್ದೇಶಪೂರ್ವಕವಾಗಿಯಲ್ಲದೆ ಆರೋಗ್ಯ ಸೌಲಭ್ಯಗಳೇ ಇಲ್ಲದ ಗ್ರಾಮೀಣ ಪ್ರದೇಶದಲ್ಲಿ ರೋಗ ಹರಡಲು ಕಾರಣರಾದರು. ಹೊಟ್ಟೆ ತುಂಬುವಷ್ಟು ಆಹಾರವನ್ನೂ ದೊರಕಿಸಿಕೊಳ್ಳಲಾಗದಷ್ಟು ದುರ್ಬಲರಾಗಿರುವ ಮತ್ತು ಅದೇ ಕಾರಣದಿಂದ ಪೌಷ್ಟಿಕತೆಯ ಕೊರತೆಯಿಂದ ಬಳಲುತ್ತಿರುವ ಕೂಲಿ ಕಾರ್ಮಿಕರಿಗೆ, ಸಾಂಕ್ರಾಮಿಕವು ಅತ್ಯಂತ ಅಪಾಯಕಾರಿ ಮಟ್ಟದಲ್ಲಿ ಹರಡುತ್ತಿರುವ ಪರಿಸ್ಥಿತಿಯಲ್ಲಿ, ಬಹುತೇಕ ಕಡಿಮೆ ಕೂಲಿಯಲ್ಲಿ, ಕೆಲಸಕ್ಕೆ ಹಿಂದಿರುಗುವಂತೆ ಹೇಳಲಾಗುತ್ತಿದೆ.
ಇದು ಕೇವಲ ಆರಂಭವಷ್ಟೇ
ಇದಕ್ಕಿಂತಲೂ ಹೆಚ್ಚು ಭಯಾನಕವಾದ ಇನ್ನೊಂದು ವಿಷಯವೆಂದರೆ, ಇದು ಕೇವಲ ಆರಂಭವಷ್ಟೇ: ಆರೋಗ್ಯ ಮತ್ತು ಅರ್ಥವ್ಯವಸ್ಥೆ ಈ ಎರಡೂ ವಿಷಯಗಳ ವೈಫಲ್ಯದ ಬಗ್ಗೆ ಸರ್ಕಾರದ ಕಾರ್ಯತಂತ್ರದಲ್ಲಿ ಮಹತ್ತರ ಬದಲಾವಣೆಯಾಗದ ಹೊರತು ಈ ಭೀಕರ ದಿಕ್ಪಥವನ್ನು ನಿಲ್ಲಿಸಿ, ನಂತರ, ಬದಲಾಸಲಾಗುತ್ತದೆ ಎಂದು ನಂಬಲು ಕಾರಣಗಳೇ ಇಲ್ಲ. ಜಿಡಿಪಿಯ ಈ ಕುಸಿತವು ಪ್ರಸಕ್ತ ತ್ರೈಮಾಸಿಕದಲ್ಲೂ ಮುಂದುವರೆಯುತ್ತದೆ ಎಂಬುದಂತೂ ಖರೆ. ಮಾತ್ರವಲ್ಲ, ಬಹುಶಃ ವರ್ಷದ ಉಳಿದ ಭಾಗದವರೆಗೂ ಮುಂದುವರೆಯುತ್ತದೆ. ಆದ್ದರಿಂದ ಸ್ವತಂತ್ರ ಭಾರತದ ಇತಿಹಾಸದಲ್ಲೇ ಒಂದು ಅತಿ ದೊಡ್ಡ ಆರ್ಥಿಕ ಬಿಕ್ಕಟ್ಟಿನತ್ತ ನಾವು ಕಣ್ಣರಳಿಸಿ ನೋಡುತ್ತಿದ್ದೇವೆ.
ಭಾರತದ ಅರ್ಥವ್ಯವಸ್ಥೆಯ ಪ್ರಸಕ್ತ ಬಿಕ್ಕಟ್ಟಿಗೆ ಬೇಡಿಕೆಯ ಕೊರತೆಯೇ ಪ್ರಮುಖ ಕಾರಣವಾಗಿದೆ. ಗ್ರಾಹಕರ ಬಳಕೆಯ ವೆಚ್ಚಗಳು ಮತ್ತು ಹೂಡಿಕೆ, ಈ ಎರಡೂ ಅಂಶಗಳ ಬೆಳವಣಿಗೆಯು ಕೊರೊನಾ ಕಾಡುವ ಮೊದಲೇ ಇಳಿಮುಖವಾಗಿದ್ದವು. ಆ ನಂತರ, ಅರ್ಥವ್ಯವಸ್ಥೆಯು ಅಷ್ಟೊಂದು ಅಗಾಧ ಪ್ರಮಾಣದಲ್ಲಿ ಕುಸಿದು ಬಿದ್ದರೂ ಸಹ, ಸರ್ಕಾರವು ಕೈಗೊಂಡ ಪರಿಹಾರದ ಕ್ರಮಗಳು, ಶೋಚನೀಯವಾಗಿ, ಲಕ್ಷ ಲಕ್ಷ ಮಂದಿಗೆ ತಲುಪಲಿಲ್ಲ ಮತ್ತು ಜೊತೆಯಲ್ಲಿ ಒಟ್ಟಾರೆ ಬೇಡಿಕೆಯ ಮೇಲೆ ಯಾವುದೇ ಪರಿಣಾಮವನ್ನೂ ಬೀರಲಿಲ್ಲ. ಬಿಕ್ಕಟ್ಟನ್ನು ಹಿಮ್ಮೆಟ್ಟಿಸುವ ಉದ್ದೇಶದಿಂದ ಆರ್ಬಿಐ ಕೈಗೊಂಡ ಹಣದ ಲಭ್ಯತೆಯನ್ನು ಹೆಚ್ಚಿಸುವ ಕ್ರಮಗಳೂ ಸಹ ನಿಷ್ಪ್ರಯೋಜಕವಾಗಿ ಪರಿಣಮಿಸಿವೆ: ಬ್ಯಾಂಕ್ಗಳು ಒದಗಿಸಿದ ಸಾಲಗಳ ಒಟ್ಟು ಪ್ರಮಾಣವು ಕಡಿಮೆಯಾಗಿದೆ. ದೊಡ್ಡ ದೊಡ್ಡ ಕಂಪನಿಗಳನ್ನು ಹೊರತುಪಡಿಸಿದರೆ, ಎಲ್ಲಾ ವಲಯಗಳ ಸಾಲಗಾರರು ಪಡೆದಿರುವ ಬ್ಯಾಂಕ್ ಸಾಲಗಳ ಮೊತ್ತವೂ ಇಳಿಕೆಯನ್ನು ಕಂಡಿದೆ.
ರಾಜ್ಯಗಳಿಗೆ ಹೊಡೆತ
ರಾಜ್ಯ ಸರ್ಕಾರಗಳೊಂದಿಗೆ ಕೇಂದ್ರ ಸರ್ಕಾರದ ವರ್ತನೆಯು ಅತ್ಯಂತ ಅವಮಾನಕರವಾಗಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯಿದೆಯ ಎಲ್ಲ ಅಧಿಕಾರವನ್ನೂ ಕೇಂದ್ರೀಕರಿಸಿಕೊಂಡು ತನ್ನ ಕೈಯಲ್ಲೇ ಇಟ್ಟುಕೊಂಡಿರುವ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸಲಿಲ್ಲ. ಕೊರೊನಾ ಸಾಂಕ್ರಾಮಿಕ ರೋಗವನ್ನು ಸಮರ್ಥವಾಗಿ ಎದುರಿಸುವಲ್ಲಿ ಉದ್ಭವಿಸಿದ ಆರೋಗ್ಯ ಬಿಕ್ಕಟ್ಟು ಮತ್ತು ಕೊರೊನಾ ಕಾರಣದಿಂದ ಉಂಟಾದ ಆರ್ಥಿಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಭಾಸಲು ಅಗತ್ಯವಾದ ಸಂಪನ್ಮೂಲಗಳನ್ನು ಕೇಂದ್ರ ಸರ್ಕಾರವು ನಿರಾಕರಿಸಿದ ಹಿನ್ನೆಲೆಯಲ್ಲಿ, ಪರಿಸ್ಥಿತಿಯನ್ನು ನಿಭಾಸಲು ರಾಜ್ಯ ಸರ್ಕಾರಗಳು ಏದುಸಿರು ಬಿಡುತ್ತಿವೆ. ರಾಜ್ಯ ಸರ್ಕಾರಗಳಿಗೆ ಕಾನೂನುಬದ್ಧವಾಗಿ ಕೊಡಬೇಕಿರುವ ಜಿಎಸ್ಟಿ ಪರಿಹಾರ ಸೆಸ್ನ ಬಾಕಿಯನ್ನು ಕೊಡಲೂ ಸಹ ಕೇಂದ್ರ ಸರ್ಕಾರವು ನಿರಾಕರಿಸುತ್ತಿದೆ. ಒಂದು ಕಾಯ್ದೆಯ ಮೂಲಕವೇ ಕೊಟ್ಟಿರುವ ಭರವಸೆಯನ್ನು ಈಡೇರಿಸಲು ಈ ರೀತಿಯಲ್ಲಿ ನಿರಾಕರಿಸುತ್ತಿರುವ ಕ್ರಮವು, ಕಳಪೆ ರೀತಿಯಲ್ಲೇ ಪರಿಭಾವಿಸಿದ ಮತ್ತು ಅದನ್ನು ಇನ್ನೂ ಕಳಪೆಯಾಗಿ ಜಾರಿಗೊಳಿಸಿದ ಜಿಎಸ್ಟಿಯನ್ನು ಕೊನೆಗಾಣಿಸುವಂತೆ ಮಾಡಬಹುದು.
ಕೇಂದ್ರ ಸರ್ಕಾರದ ಇಂತಹ ಜಿಪುಣತನದ ಪರಿಣಾಮಗಳನ್ನು ನಾಗರಿಕರು ನೇರವಾಗಿ ಅನುಭವಿಸುತ್ತಾರೆ. ಬಿಕ್ಕಟ್ಟನ್ನು ಎದುರಿಸುವ ಸಲುವಾಗಿ ಬಹುತೇಕ ರಾಜ್ಯ ಸರ್ಕಾರಗಳು ಇಡೀ ವರ್ಷದಲ್ಲಿ ಆಗಬಹುದಾಗಿದ್ದ ಖರ್ಚು ವೆಚ್ಚಗಳನ್ನು ಈಗಾಗಲೇ ಮಾಡಿ ಮುಗಿಸಿವೆ. ಹಾಗಾಗಿ ರಾಜ್ಯ ಸರ್ಕಾರಗಳ ಬಳಿ ಈಗ ಬಿಡಿಕಾಸೂ ಇಲ್ಲ. ತೆರಿಗೆ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಳ್ಳಲು ತಾವು ಹೊಂದಿದ್ದ ಅಧಿಕಾರವನ್ನು ಜಿಎಸ್ಟಿಯ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರಕ್ಕೆ ಬಿಟ್ಟುಕೊಟ್ಟಿವೆ. ಹಾಗಾಗಿ, ಹಣ ಹೊಂದಿಸಿಕೊಳ್ಳಲು ರಾಜ್ಯ ಸರ್ಕಾರಗಳು ಪರದಾಡುತ್ತಿವೆ. ಕೇಂದ್ರ ಸರ್ಕಾರದಿಂದ ಜಿಎಸ್ಟಿಯ ಬಾಬ್ತು ಬರಬೇಕಿರುವ ಬಾಕಿಯ ಹಣವನ್ನು ಕೇಳಿದ್ದಕ್ಕೆ ಉತ್ತರವಾಗಿ ಕೇಂದ್ರ ಸರ್ಕಾರವು ಈ ಬಾಕಿಯ ಮೊತ್ತದಷ್ಟು ಹಣವನ್ನು ನೀವೇ ಸಾಲ ಮಾಡಿ ಹೊಂದಿಸಿಕೊಳ್ಳಿ ಎಂದು ಹೇಳಿದೆ. ತಮ್ಮ ಹಳೆಯ ಸಾಲಗಳನ್ನೇ ತೀರಿಸಲು ರಾಜ್ಯ ಸರ್ಕಾರಗಳು ಈಗಾಲೇ ಹೆಣಗಾಡುತ್ತಿವೆ. ಇದ್ದ ಬದ್ದ ಹಣವನ್ನೆಲ್ಲಾ ಈಗಾಗಲೇ ಖರ್ಚುಮಾಡಿ ಮುಗಿಸಿರುವುದರಿಂದ ವರ್ಷದ ಉಳಿದ ಅವಧಿಗೆ ಬೇಕಾಗುವಷ್ಟು ಹಣವಿಲ್ಲ. ಪರಿಣಾಮವಾಗಿ ಜನರಿಗೆ ಒದಗಿಸುವ ಮೂಲ ಸೌಕರ್ಯಗಳು ಕಡಿತಗೊಳ್ಳುತ್ತವೆ. ಸೇವೆಗಳ ಕೊರತೆಯ ಪರಿಣಾಮವಾಗಿ ಜನರು ತೊಂದರೆ ಅನುಭವಿಸಬೇಕಾಗುತ್ತದೆ.
ದೇವರ ಶಾಪವಲ್ಲ-ಜನಗಳಿಗೆ ನೆರವಿನ ಕೊರತೆ
ಇದ್ಯಾವುದೂ ಬೇಕಿರಲಿಲ್ಲ. ಇದೇನೂ “ದೇವರು ಕೊಟ್ಟ” ಶಾಪವಲ್ಲ. ಸರಿಯಾದ ನೀತಿಗಳನ್ನು ಅನುಸರಿಸುವ ಮೂಲಕ ಇದೆಲ್ಲವನ್ನೂ ತಡೆಯಬಹುದಾಗಿತ್ತು. ಈ ಭಯಾನಕ ಪ್ರವೃತ್ತಿಯನ್ನು ಈಗಲೂ ಹಿಮ್ಮೆಟ್ಟಿಸಬಹುದು. ಕೇಂದ್ರ ಸರ್ಕಾರವು ತಕ್ಷಣವೇ ಒಂದು ಬೃಹತ್ ಪ್ರಮಾಣದ ಹಣಕಾಸು ಪ್ಯಾಕೇಜ್ ಒದಗಿಸಬೇಕು. ಅದರಿಂದ ಜನರಿಗೆ ನಿಜಕ್ಕೂ ಹಣ ಲಭ್ಯವಾಗುವಂತಿರಬೇಕು, ತುಟಿಗೆ ತುಸು ತುಪ್ಪ ಸವರುವ ಭರವಸೆಗಳಲ್ಲ.
ಅಂಥಹ ಒಂದು ಪ್ಯಾಕೇಜ್ ಈ ಕೆಲವು ಅಂಶಗಳನ್ನು ಒಳಗೊಂಡಿರಬೇಕು:
- ರಾಜ್ಯಗಳ ಸರ್ಕಾರಗಳಿಗೆ ಕೊಡಬೇಕಿರುವ ಜಿಎಸ್ಟಿ ಪರಿಹಾರ ಸೆಸ್ನ ಬಾಕಿಯನ್ನು ಕೊಡಬೇಕು;
- ಕೊರೊನಾ ಸಾಂಕ್ರಾಮಿಕ ಮತ್ತು ಅದರ ಪರಿಣಾಮಗಳನ್ನು ನಿಭಾಸಲು ಹೆಚ್ಚಿನ ಹಣಕಾಸು ನೆರವನ್ನು ಒದಗಿಸಬೇಕು.;
- ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರಿಕಗೊಳಿಸಬೇಕು. ಈ ವ್ಯವಸ್ಥೆಯ ಮೂಲಕ ಅಗತ್ಯವಿರುವ ಪ್ರತಿ ಕುಟುಂಬಕ್ಕೂ ತಿಂಗಳಿಗೆ ೧೦ ಕೆ.ಜಿಯಷ್ಟು ಆಹಾರಧಾನ್ಯಗಳನ್ನು ಮುಂದಿನ ಆರು ತಿಂಗಳವರೆಗೆ ಉಚಿತವಾಗಿ ಒದಗಿಸಬೇಕು;
- ನಿರ್ದಯವಾದ ಲಾಕ್ ಡೌನ್ ಅವಧಿಯಲ್ಲಿ ಕಳೆದುಕೊಂಡ ಆದಾಯಗಳಿಗೆ ಪರಿಹಾರವಾಗಿ ಪ್ರತಿ ಕುಟುಂಬಕ್ಕೂ ತಿಂಗಳಿಗೆ ರೂ. ೭೦೦೦ದಂತೆ ಮೂರು ತಿಂಗಳ ಕಾಲ ನೀಡಬೇಕು;
- ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆಯ ಪ್ರಕಾರ ಉದ್ಯೋಗ ನೀಡುವ ನೀತಿಯನ್ನು ಕೊನೆಯಪಕ್ಷ ಈ ವರ್ಷಕ್ಕಾದರೂ ೨೦೦ ದಿನಗಳಿಗೆ ಏರಿಸಬೇಕು;
- ಇದೇ ರೀತಿಯ ಉದ್ಯೋಗ ಖಾತರಿ ಯೋಜನೆಯನ್ನು ನಗರ ಪ್ರದೇಶಗಳಲ್ಲೂ ಆರಂಭಿಸಬೇಕು;
- ಸಾಲ ತೀರಿಸುವ ಕಾಲಾವಧಿಯನ್ನು (ಮೊರಟೋರಿಯಂ) ವಿಸ್ತರಿಸಬೇಕು ಮತ್ತು ಆ ಅವಧಿಯನ್ನು ಸ್ಥಗಿತ ಎಂದು ಪರಿಗಣಿಸಿ ಆ ಅವಧಿಗೆ ಬಡ್ಡಿ ಹಾಕಬಾರದು.;
- ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಮಟ್ಟದ ಉದ್ದಿಮೆಗಳಿಗೆ (ಎಂಎಸ್ಎಂಇ) ಮತ್ತು ರೈತರಿಗೆ ಹೊಸ ಸಾಲಗಳು ದೊರಕುವಂತೆ ನೋಡಿಕೊಳ್ಳಬೇಕು.;
- ಆರೋಗ್ಯ ಕಾಪಾಡುವ ಉದ್ದೇಶಕ್ಕಾಗಿ ಒಂದು ಸಮರ್ಪಿತ ಸಂಪನ್ಮೂಲಗಳನ್ನು ಒದಗಿಸಬೇಕು. ಸಾಂಕ್ರಾಮಿಕ ಸೋಂಕಿತರಿಗೆ ಔಷಧೋಪಚಾರಗಳಿಗೆ ಅಗತ್ಯವಿರುವ ಹಣ ಒದಗಿಸಬೇಕು. ಕಳೆದ ಐದು ತಿಂಗಳಿನಿಂದ ನಿರ್ಲಕ್ಷಿಸಲ್ಪಟ್ಟ ಅಥವಾ ಮುಂದೂಡಲ್ಪಟ್ಟ ಜನರ ಇತರ ಆರೋಗ್ಯ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಬೇಕು.
ಈ ಎಲ್ಲ ಕಾರ್ಯಗಳಿಗೆ ಹಣ ಖರ್ಚಾಗುತ್ತದೆ, ನಿಜ. ಆದರೆ, ಈ ಕಾರ್ಯಗಳನ್ನು ನಿರ್ವಹಿಸದಿದ್ದರೆ ಅದರಿಂದ ಜನರಿಗೆ ಉಂಟಾಗುವ ತೊಂದರೆಗಳು ಮತ್ತು ಅರ್ಥವ್ಯವಸ್ಥೆಗೆ ತಲುಪುವ ಹಾನಿ ಇವೆರಡೂ ಇನ್ನೂ ಹೆಚ್ಚು ದುಬಾರಿಯಾಗಿ ಪರಿಣಮಿಸುತ್ತವೆ. ಜನರಿಗೆ ಅಗತ್ಯವಿರುವ ಕಾರ್ಯಗಳಿಗೆ ಈಗ ಹಣ ವೆಚ್ಚ ಮಾಡದೇ ಇದ್ದರೆ, ಅದೇ ಕಾರಣದಿಂದಾಗಿ ಅರ್ಥವ್ಯವಸ್ಥೆಯು ಇನ್ನೂ ಹೆಚ್ಚು ಆಳವಾದ ಗುಂಡಿಗೆ ಬೀಳುತ್ತದೆ. ಪರಿಣಾಮವಾಗಿ, ಜನರ ವರಮಾನಗಳು ತಗ್ಗುತ್ತವೆ. ಸರ್ಕಾರದ ತೆರಿಗೆ ಆದಾಯವೂ ಇಳಿಯುತ್ತದೆ. ಇದು ಸರ್ಕಾರದ ವೆಚ್ಚಗಳ ಕಡಿತದ ಜೊತೆಗೆ ದೊಡ್ಡ ಪ್ರಮಾಣದ ವಿತ್ತೀಯ ಕೊರತೆಯನ್ನೂ ಉಂಟುಮಾಡುತ್ತದೆ. ಸದ್ಯಕ್ಕೆ, ಹೆಚ್ಚುವರಿಯಾದ ಖರ್ಚು ವೆಚ್ಚಗಳಿಗೆ ಬೇಕಾಗುವ ಹಣವನ್ನು ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಸಾಲ ಪಡೆಯಬಹುದು. ಜಗತ್ತಿನಾದ್ಯಂತ ಸರ್ಕಾರಗಳು ತಮ್ಮ ವಿತ್ತೀಯ ಕೊರತೆಯನ್ನು ನೀಗಿಸಿಕೊಳ್ಳಲು ಇದೇ ಕ್ರಮವನ್ನು ಅನುಸರಿಸುತ್ತವೆ. ಈ ಕ್ರಮವನ್ನು ಅನುಸರಿಸುವುದರಿಂದ ಮತ್ತು ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಂಡರೆ, ಹಣದುಬ್ಬರ ಉಂಟಾಗುವುದಿಲ್ಲ. ಏಕೆಂದರೆ, ಸದ್ಯದ ಪರಿಸ್ಥಿತಿಯಲ್ಲಿ ಜನರ ಕೈಯಲ್ಲಿ ಸಾಕಷ್ಟು ಹಣ ಇಲ್ಲದಿರುವುದರಿಂದ ಬೇಡಿಕೆಯು ತುಂಬಾ ಕೆಳ ಮಟ್ಟದಲ್ಲಿದೆ.
ಅಂತಿಮವಾಗಿ, ಬಿಕ್ಕಟ್ಟಿನಿಂದ ಹೊರ ಬರಲು ಇರುವ ಏಕೈಕ ಮಾರ್ಗವೆಂದರೆ, ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ತೆರಿಗೆಗಳಿಂದ ತಪ್ಪಿಸಿಕೊಳ್ಳುತ್ತಿರುವ ಡಿಜಿಟಲ್ ದೈತ್ಯ ಸಂಸ್ಥೆಗಳ ಮೇಲೆ ಸಂಪತ್ತಿನ ತೆರಿಗೆ ಮತ್ತು ಇತರ ತೆರಿಗೆಗಳನ್ನು ಹೇರುವ ಬಗ್ಗೆ ಆಲೋಚಿಸಬೇಕಾಗುತ್ತದೆ. ದಿಟ್ಟ ಚಿಂತನೆ ಮತ್ತು ತುರ್ತು ಕ್ರಮವಹಿಸುವುದೊಂದೆ, ಬಿಕ್ಕಟ್ಟಿನಿಂದ ಹೊರಬರವ ದಾರಿ.
ಕೃಪೆ: ದಿ ಹಿಂದೂ, ಪ್ರೊ. ಜಯತಿ ಘೋಷ್
ಅನು: ಕೆ.ಎಂ.ನಾಗರಾಜ್