ಫ್ಯಾಸಿಸ್ಟ್ ಮತ್ತು ನವ-ಫ್ಯಾಸಿಸ್ಟ್ ಗುಣಲಕ್ಷಣಗಳು ಎಂಬುದರ ಚರ್ಚೆಯ ಸುತ್ತ

ಸಿಪಿಐ(ಎಂ) ತನ್ನ 24ನೇ ಮಹಾಧಿವೇಶನದ ಮುನ್ನ ರಾಜಕೀಯ ನಿರ್ಣಯದ ಕರಡನ್ನು ಬಿಡುಗಡೆ ಮಾಡಿದೆ. ಈ ನಿರ್ಣಯದಲ್ಲಿ ಉಪಯೋಗಿಸಿದ ನವ-ಫ್ಯಾಸಿಸ್ಟ್  ಸ್ವರೂಪದ, ನಿಯೋ-ಫ್ಯಾಸಿಸ್ಟಿಕ್ ಎಂಬ ಪರಿಕಲ್ಪನೆಯನ್ನು ವಿವರಿಸುವ ಒಂದು ಟಿಪ್ಪಣಿಯನ್ನು ನೀಡಿತು. ಈ ವಿಷಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮೋದಿ ಸರ್ಕಾರ ಫ್ಯಾಸಿಸ್ಟ್ ಆಗಿಬಿಟ್ಟಿದೆಯೇ, ಇನ್ನೂ ಆಗಿಲ್ಲವೇ, ನವ-ಫ್ಯಾಸಿಸಂ ಎಂದೇನೋ ಹೇಳುತ್ತಾರಲ್ಲಾ ಹಾಗೆಂದರೇನು? ಎಂದೆಲ್ಲ ಚರ್ಚೆಗಳು ಪತ್ರಿಕೆಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿವೆ. ಅದರ ಜೊತೆಗೆ ಸಿಪಿಐ(ಎಂ) ಬಗ್ಗೆ ಟೀಕೆ ಮಾತ್ರವಲ್ಲ, ಅಪಪ್ರಚಾರದ ದಾಳಿಯೂ ಆರಂಭವಾಗಿದೆ. ಈಗಾಗಲೇ ಫ್ಯಾಸಿಸಂ ಅಧಿಕಾರಕ್ಕೆ ಬಂದಿದೆ ಎಂದು ತೀರ್ಮಾನಿಸಿ, ಇನ್ನೂ ಉಳಿದಿರುವ ಪ್ರಜಾಪ್ರಭುತ್ವದ ಹಕ್ಕುಗಳು, ಸಂಸ್ಥೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಲು ಇರುವ ಅವಕಾಶಗಳನ್ನು ನಿರಾಕರಿಸಬೇಕೆ?

ಜಿ.ಎನ್.ನಾಗರಾಜ್

ಮೋದಿ ಸರ್ಕಾರ ಫ್ಯಾಸಿಸ್ಟ್ ಆಗಿಬಿಟ್ಟಿದೆಯೇ, ಇನ್ನೂ ಆಗಿಲ್ಲವೇ, ನವ ಫ್ಯಾಸಿಸಂ ಎಂದೇನೋ ಹೇಳುತ್ತಾರಲ್ಲಾ ಹಾಗೆಂದರೇನು? ಎಂದೆಲ್ಲ ಚರ್ಚೆಗಳು ಪತ್ರಿಕೆಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿವೆ. ಅದರ ಜೊತೆಗೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ಯ ಬಗ್ಗೆ ಟೀಕೆ ಮಾತ್ರವಲ್ಲ, ಅಪಪ್ರಚಾರದ ದಾಳಿಯೂ ಆರಂಭವಾಗಿದೆ. ಈ ಎಲ್ಲ ಚರ್ಚೆಯ ಮೂಲ ಸಿಪಿಐ(ಎಂ) ದೇಶಾದ್ಯಂತ ಚರ್ಚೆಗೆ ಮತ್ತು ದೇಶದ ಯಾವ ಪ್ರಜೆಯಾದರೂ ಅದರಲ್ಲಿನ ಅಂಶಗಳ ಬಗ್ಗೆ ತಿದ್ದುಪಡಿ ಕಳಿಸಬಹುದು, ಅಭಿಪ್ರಾಯ, ಸಲಹೆ ನೀಡಬಹುದು ಎಂದು ತನ್ನ ರಾಜಕೀಯ ನಿರ್ಣಯದ ಕರಡನ್ನು ಬಿಡುಗಡೆ ಮಾಡಿತು. ಈ ನಿರ್ಣಯದಲ್ಲಿ ಉಪಯೋಗಿಸಿದ ನವ-ಫ್ಯಾಸಿಸ್ಟ್  ಸ್ವರೂಪದ, ನಿಯೋ-ಫ್ಯಾಸಿಸ್ಟಿಕ್ ಎಂಬ ಪರಿಕಲ್ಪನೆಯನ್ನು ವಿವರಿಸುವ ಒಂದು ಟಿಪ್ಪಣಿಯನ್ನು ನೀಡಿತು. ಈ ಟಿಪ್ಪಣಿಯೇ ಚರ್ಚೆಯ ಮೂಲ. ಫ್ಯಾಸಿಸ್ಟ್

ಕರಡು ರಾಜಕೀಯ ನಿರ್ಣಯದಲ್ಲಿ “ಪ್ರತಿಗಾಮಿ ಹಿಂದುತ್ವ ಕಾರ್ಯಸೂಚಿಯನ್ನು ಹೇರುವ ಒತ್ತಡ ಮತ್ತು ವಿರೋಧ ಮತ್ತು ಪ್ರಜಾಪ್ರಭುತ್ವವನ್ನು ನಿಗ್ರಹಿಸಲು ಸರ್ವಾಧಿಕಾರಿ ಚಾಲನೆಯ ನವ-ಫ್ಯಾಸಿಸ್ಟ್ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತಿದೆ” ಎಂದು ಹೇಳಲಾಗಿದೆ. ರಾಜಕೀಯ ನಿರ್ಣಯದ ರಾಷ್ಟ್ರೀಯ ಪರಿಸ್ಥಿತಿಯಲ್ಲಿ ನಾವು ‘ನವ-ಫ್ಯಾಸಿಸ್ಟ್’ ಎಂಬ ಪದವನ್ನು ಬಳಕೆ ಮಾಡಿರುವುದು ಇದೇ ಮೊದಲು ಎಂದೂ ಸಿಪಿಐ(ಎಂ) ಹೇಳಿದೆ.

ಕೇರಳದಲ್ಲಿ ಆರಂಭವಾದ ಅಪಪ್ರಚಾರ

ಕೇರಳದಲ್ಲಿ ಸಿಪಿಐ(ಎಂ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ ಆಡಳಿತದಲ್ಲಿ ಎರಡನೆ ಬಾರಿಗೂ ಗೆದ್ದುಬಿಟ್ಟದ್ದು ಅಲ್ಲಿಯ ಕಾಂಗ್ರೆಸ್ ಮತ್ತದರ ನೇತೃತ್ವದ ರಂಗದ ಮುಸ್ಲಿಂ ಲೀಗ್ ಮೊದಲಾದ ಪಕ್ಷಗಳಿಗೆ, ಬಿಜೆಪಿ, ಆರೆಸ್ಸೆಸ್ ಕೂಟಕ್ಕೆ ಬಿಸಿ ತುಪ್ಪವಾಗಿದೆ. ಸಿಪಿಐ(ಎಂ) ಮೇಲೆ ಮುಗಿಬೀಳಲು ಯಾವಾಗಲೂ ಕಾದು ಕುಳಿತಿರುವ ಈ ಪಕ್ಷಗಳ ಮುಖವಾಣಿಯಾಗಿರುವ, ಮುಖವಾಣಿಯಂತಿರುವ ಹಲವು ಪತ್ರಿಕೆಗಳು, ಸುದ್ದಿ ಟಿವಿಗಳು, ಸಾಮಾಜಿಕ ಜಾಲತಾಣಗಳು ಈ ಬಗ್ಗೆ ದೊಡ್ಡ ಅಪಪ್ರಚಾರ ಆರಂಭಿಸಿದವು.

ಇದನ್ನೂ ಓದಿ: ಉತ್ತರ ಕರ್ನಾಟಕದ ಫೇಮಸ್‌ ಗೋಡಂಬಿ ಕಾಕಾ ಇನ್ನಿಲ್ಲ

ಮುಸ್ಲಿಂ ಮೂಲಭೂತವಾದದ ಜೊತೆ ನಿರಂತರ ಮೈತ್ರಿ ಹೊಂದಿರುವ, ಹಿಂದುತ್ವ ಕೋಮುವಾದಿ ನೀತಿಯನ್ನು ಹಲವು ಬಾರಿ ಅನುಸರಿಸುವ ಕಾಂಗ್ರೆಸ್ ನಾಯಕರಂತೂ, ತಾವೇ ಸಿಪಿಐ(ಎಂ)ಗಿಂತ ಬಹು ದೃಢ ಕೋಮುವಾದದ ವಿರೋಧಿಗಳು ಎಂದು ತೋರಿಸಿಕೊಳ್ಳಲು ಇದೊಂದು ಸುವರ್ಣಾವಕಾಶ ಎಂದು ಭ್ರಮಿಸಿದರು. ಫ್ಯಾಸಿಸಂ ಬಗ್ಗೆ ಸಿಪಿಐ(ಎಂ) ಮೃದು ಧೋರಣೆ ತಳೆದುಬಿಟ್ಟಿದೆ. ಆರೆಸ್ಸೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಬಿಟ್ಟಿದೆ ಎಂದೇ ಆಪಾದನೆ ಮಾಡಿದರು. ಕೇರಳದ ಈ ಚರ್ಚೆಯಿಂದೆದ್ದ ಧೂಳಿನಿಂದ ಆವರಿಸಲ್ಪಟ್ಟ ಕರ್ನಾಟಕದ ಹಲವರು ಕೂಡಾ ಅಪಪ್ರಚಾರದ ಬಾಣ ಬಿಡಲಾರಂಭಿಸಿದರು.

ವಿಶ್ವದ ಸಾವಿರಾರು ವರ್ಷಗಳ  ನಾಗರೀಕತೆಯ ಸಾಧನೆಗಳನ್ನು ದಿಕ್ಕುಗೆಡಿಸುವ, ಪ್ರಜಾಪ್ರಭುತ್ವವನ್ನು ನಾಶಮಾಡುವ ಒಂದು ಪ್ರಬಲ ವಿನಾಶಕಾರಿ ಕ್ರೂರ ವ್ಯವಸ್ಥೆ ಫ್ಯಾಸಿಸಂ. ಅದರ ಸ್ವರೂಪವನ್ನು, ವಿವಿಧ ಆಯಾಮಗಳನ್ನು ಅರ್ಥಮಾಡಿಕೊಳ್ಳಲು ಆಳವಾದ, ವಿಷದವಾದ ಚರ್ಚೆ ಅಗತ್ಯ ಎಂಬ ಬಗ್ಗೆ ಸಂಶಯವೇ ಇಲ್ಲ. ಆದರೆ ಅದು ವೈಚಾರಿಕ, ವೈಜ್ಞಾನಿಕ ಚರ್ಚೆಯ ರೂಪದಲ್ಲಿದ್ದರೆ, ಅಧ್ಯಯನ ರೂಪದಲ್ಲಿದ್ದರೆ ಮಾತ್ರ ಅದರಿಂದ ಪ್ರಯೋಜನ.

ಫ್ಯಾಸಿಸಂ ಹುಟ್ಟಿದ ಮೂಲದಿಂದಲೇ ಅಧ್ಯಯನ ಆರಂಭವಾಗಬೇಕು

ಫ್ಯಾಸಿಸಂ ಬಗ್ಗೆ ಯಾವುದೇ ಅಧ್ಯಯನದ ಆರಂಭ, ಅದು ಹುಟ್ಟಿದ ಮೂಲದಿಂದಲೇ ಆಗಬೇಕಲ್ಲವೇ? ಫ್ಯಾಸಿಸಂ ನಂತಹ ಕ್ರೂರ ಸಿದ್ಧಾಂತ ಮತ್ತು ವ್ಯವಸ್ಥೆಯ ಅಧ್ಯಯನ ಕೇವಲ ಆರಾಮ ಖುರ್ಚಿಯ ಅಕಾಡೆಮಿಕ್ ಅಧ್ಯಯನವಲ್ಲ. ಫ್ಯಾಸಿಸಂ ಅನ್ನು ನಾಶಮಾಡುವ ಕ್ರಿಯೆಯ ಮೂಲಕ ಮೂಡುವ, ವಿಷದವಾಗುತ್ತಾ ಹೋಗುವ ಅರಿವು. ಮಾರ್ಕ್ಸ್‌ವಾದದ ಅಡಿಪಾಯವಾದ, ಮೂಲಭೂತ ತಿಳುವಳಿಕೆಯೇ ಕ್ರಿಯೆಯ ಮೂಲಕ ಅರಿವಿನ ಬೆಳವಣಿಗೆ.

ಹೀಗೆ ಫ್ಯಾಸಿಸಂ ಅನ್ನು ಅದರ ಬೆಳವಣಿಗೆಯ ಎಲ್ಲ ಹಂತಗಳಲ್ಲಿ ವಿರೋಧಿಸುತ್ತಾ, ಅದರ ಬಗ್ಗೆ ಚಳುವಳಿಗಳ ಒಳಗೇ ಇದ್ದ ತಪ್ಪು ಸೈದ್ಧಾಂತಿಕ ಕಲ್ಪನೆಗಳ ವಿರುದ್ಧ ಹೋರಾಡುತ್ತಾ ರೂಪುಗೊಳ್ಳಲಾರಂಭಿಸಿದ ತಿಳುವಳಿಕೆ ಅದು. ಫ್ಯಾಸಿಸಂನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಫ್ಯಾಸಿಸ್ಟ್ ಶಕ್ತಿಗಳ ಧಾಳಿಗೆ ತುತ್ತಾಗಿ, ವಿಶ್ವ ಚಳುವಳಿಯ ನಾಯಕರು ಬಂಧನ, ಕೊಲೆಗೀಡಾಗುತ್ತಿರುವ, ಅದರ ವಿರುದ್ಧ ಲಕ್ಷಾಂತರ ಕಮ್ಯುನಿಸ್ಟರು, ಕಾರ್ಮಿಕರು, ಇತರ ಪ್ರಜಾಪ್ರಭುತ್ವ ಶಕ್ತಿಗಳ ಪ್ರಾಣ ಬಲಿದಾನ ಅರ್ಪಿಸುತ್ತಾ ಬೆಳೆದ ಅರಿವು ಅದು. ಇಂತಹ ಅರಿವನ್ನು ನಿರ್ಲಕ್ಷಿಸಿ ಫ್ಯಾಸಿಸಂ ಬಗ್ಗೆ ತಿಳುವಳಿಕೆ ಬೆಳೆಸಿಕೊಳ್ಳಲು ಸಾಧ್ಯವೇ?  ಅದನ್ನು ನಿರ್ಮೂಲನೆ ಮಾಡುವ ಕ್ರಿಯಾಶೀಲತೆಯಲ್ಲಿ ತೊಡಗುವುದು ಸಾಧ್ಯವೇ?

ಹಿಟ್ಲರನಿಂದ ಬಂಧನಕ್ಕೆ ಒಳಗಾಗಿದ್ದವರು, ಆಳವಾದ ಅಧ್ಯಯನದ ಆಧಾರದ ಮೇಲೆ ಇಡೀ ವಿಶ್ವಕ್ಕೆ ಫ್ಯಾಸಿಸಂನ ಲಕ್ಷಣಗಳ ಬಗ್ಗೆ, ಅದರ ಬೆಳವಣಿಗೆಯ ವಿವಿಧ ಹಂತಗಳ ಬಗ್ಗೆ, ಅದನ್ನು ಎದುರಿಸುವ ಸಂಘರ್ಷದ ತಂತ್ರಗಳ ಬಗ್ಗೆ ತಿಳಿಸಿದವರು ಜಾರ್ಜಿ ಡಿಮಿಟ್ರೋವ್.  ಅವರು ವಿಶ್ವದ ಹಲವಾರು ವೇದಿಕೆಗಳಲ್ಲಿ ಫ್ಯಾಸಿಸಂ ಅನ್ನು ಎದುರಿಸುವ ವಿಧಾನಗಳ ಹಲವು  ಉಪನ್ಯಾಸ ಮಾಡಿದ್ದೇ ಅಲ್ಲದೆ, ಅಂದು ಕಮ್ಯುನಿಸ್ಟ್ ಇಂಟರ್‌ ನ್ಯಾಷನಲ್‌ ನ ಪ್ರಧಾನ ಕಾರ್ಯದರ್ಶಿಯಾಗಿ ಇಡೀ ವಿಶ್ವದ ಕಾರ್ಮಿಕ ಚಳುವಳಿಗೆ ಫ್ಯಾಸಿಸಂ ಅನ್ನು ಎದುರಿಸುವುದರಲ್ಲಿ, ಸೋಲಿಸುವುದರಲ್ಲಿ ಮುನ್ನಡೆಸಿದವರು.

ನಂತರದ ಸ್ಥಾನದಲ್ಲಿ ಇಟಲಿಯ ಪಾಮಿರೋ ತೊಗ್ಲಿಯಾಟ್ಟಿ. ಅವರು ಮುಸಲೋನಿಯ ಫ್ಯಾಸಿಸಂ ಬೆಳೆದ ರೀತಿ, ಅದರ ಮೂಲವನ್ನು ವಿಶ್ಲೇಷಿಸಿ ಕಮ್ಯುನಿಸ್ಟ್ ಪಕ್ಷ ಮತ್ತು ಇತರ ಪ್ರಜಾಸತ್ತಾತ್ಮಕ ವೇದಿಕೆಗಳಲ್ಲಿ ಉಪನ್ಯಾಸ ಮಾಡಿದ್ದಾರೆ.

ಆಂತೋನಿಯೋ ಗ್ರಾಮ್ಷಿ ಬಗ್ಗೆ ಕನ್ನಡದ ಬಹಳ ಜನರಿಗೆ ವಿವಿಧ ಕಾರಣಗಳಿಗಾಗಿ ಪರಿಚಯ ಇದೆ. ಫ್ಯಾಸಿಸಂ ಅವರ ಮೇಲೆ ಎಸಗಿದ ಕ್ರೌರ್ಯಗಳನ್ನು ಎದುರಿಸಿದವರು, ದೀರ್ಘಕಾಲದ ಬಂಧನದಲ್ಲಿಯೇ ಪ್ರಾಣ ಕಳೆದುಕೊಂಡವರು. ಅವರ ಪುಸ್ತಕಗಳು ಹಲವು. ಅವುಗಳಲ್ಲಿ ‘ಪ್ರಿಸನ್ ನೋಟ್ ಬುಕ್ಸ್’ ಬಹಳ ಪ್ರಸಿದ್ಧ.

ಭಾರತ ಮೂಲದ ಬ್ರಿಟಿಷ್ ಕಮ್ಯುನಿಸ್ಟ್ ರಜನಿ ಪಾಮೆ ದತ್ ರವರ ಬರಹಗಳು, ಉಪನ್ಯಾಸಗಳು, ಅವರ ಫ್ಯಾಸಿಸಂ ಅಂಡ್ ಸೋಷಿಯಲ್ ರೆವೊಲ್ಯೂಷನ್,  ವಿಶ್ವದ ಚರಿತ್ರೆಯಲ್ಲಿ ವಿಜ್ಞಾನದ ಬಗ್ಗೆ ನಾಲ್ಕು ಸಂಪುಟಗಳಲ್ಲಿ ಅಧ್ಯಯನ ಮಾಡಿದ ಜೆ.ಡಿ. ಬರ್ನಾಲ್ ಇವರ ಬರಹಗಳು ಮುಖ್ಯ.

ಭಾರತದ ಕಮ್ಯುನಿಸ್ಟರಲ್ಲಿ  ಇಎಂಎಸ್ ನಂಬೂದಿರಿಪಾದ್, ಜ್ಯೋತಿ ಬಸು, ಸೀತಾರಾಂ ಯೆಚೂರಿ, ಪ್ರಕಾಶ್ ಕಾರತ್ ಮೊದಲಾದ ಭಾರತದ ನಾಯಕರು ಫ್ಯಾಸಿಸಂನ ವಿಶ್ಲೇಷಣೆ ಮಾಡಿದ್ದಾರೆ. ಅದರಲ್ಲಿ ಭಾರತದಲ್ಲಿ ಕೋಮುವಾದದ ಬೆಳವಣಿಗೆ ಬಗ್ಗೆ  ಅಂಬೇಡ್ಕರ್‌ ರವರು ಆರಂಭದಲ್ಲಿಯೇ ನೀಡಿದ ಎಚ್ಚರಿಕೆ, ಅದರ ಬಗ್ಗೆ ವಿಪುಲವಾಗಿ ಬರೆದ ಯೆಚೂರಿಯವರ  “ಏನಿದು ಹಿಂದೂ ರಾಷ್ಟ್ರ?”, ಪ್ರಕಾಶ್ ಕಾರತ್ ‌ರವರ ಆರೆಸ್ಸೆಸ್ ಮತ್ತು ಬಿಜೆಪಿ ಮೊದಲಾದ ಬರಹಗಳು, ಬಿ‌.ವಿ.ರಾಘವುಲು ರವರ ಇತ್ತೀಚಿನ ಕಿರುಪುಸ್ತಿಕೆ, ಪ್ರಭಾತ್ ಪಟ್ನಾಯಕ್, ಇರ್ಫಾನ್ ಹಬೀಬ್, ರೊಮಿಲಾ ಥಾಪರ್, ಎಜಿ ನೂರಾನಿ ಮೊದಲಾದವರ ಬರಹಗಳನ್ನೂ ಸಿಪಿಐ(ಎಂ) ಎರಡು ದಶಕಗಳಿಂದ ಅಂಗೀಕರಿಸಿದ ಮಹಾಧಿವೇಶನ, ಕೇಂದ್ರ ಸಮಿತಿಗಳ ನಿರ್ಣಯಗಳು ಇವುಗಳ ಮೇಲೆ ಬೆಳಕು ಚೆಲ್ಲುತ್ತವೆ.

ಮಾರ್ಕ್ಸ್‌ವಾದಿ ಸೈದ್ಧಾಂತಿಕರ ವಿಶ್ಲೇಷಣೆ

ಮೇಲೆ ಹೇಳಿದಂತೆ ಫ್ಯಾಸಿಸಂನ  ಪ್ರಾಣ ಬಲಿದಾನ, ಬಂಧನ, ದಬ್ಬಾಳಿಕೆಯ ಮೂಲಕ ಎದುರಿಸಿದ ಮಾರ್ಕ್ಸ್‌ವಾದಿ ಸೈದ್ಧಾಂತಿಕರ ವಿಶ್ಲೇಷಣೆಯ ಸಾರ ಹೀಗಿದೆ:

*  ಫ್ಯಾಸಿಸಂ ಎಂದರೆ ಎಲ್ಲ ರಾಜಕೀಯ ಪಕ್ಷಗಳನ್ನು, ಸಂಘಟನೆಗಳನ್ನು ಬಹಿರಂಗ ಭಯೋತ್ಪಾದಕ ಸರ್ವಾಧಿಕಾರದ ಮೂಲಕ ಇಲ್ಲವಾಗಿಸುವುದು, ಎಲ್ಲ ಸಂಸದೀಯ ಅಂಗಗಳನ್ನು ಕಿತ್ತೆಸೆಯುವುದು. ಮುಖ್ಯವಾಗಿ ಕಾರ್ಮಿಕ ವರ್ಗದ ಸಂಘಟನೆಗಳ ದಮನ. ಅತ್ಯಂತ ಪ್ರತಿಗಾಮಿ, ದ್ವೇಷಪೂರಿತ, ಹಣಕಾಸು ಬಂಡವಾಳದ ಅತ್ಯಂತ ಸಾಮ್ರಾಜ್ಯಶಾಹಿ ಪ್ರಕಾರಗಳ ಭಯೋತ್ಪಾದಕ ಸರ್ವಾಧಿಕಾರ.

*  ಈಗ ವಿಶ್ವದಲ್ಲಿ ಬೆಳೆದು ಬಂದ ಬಂಡವಾಳಶಾಹಿ ಸಮಾಜಕ್ಕೆ ವಿರುದ್ಧವಾಗಿ ಫ್ಯಾಸಿಸಂ ಬೆಳೆದು ಬಂದಿದೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ ಫ್ಯಾಸಿಸಂ ಎಂದರೆ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧವಾಗಿ ಉಗಮವಾದ ವಿಶಿಷ್ಟ, ಸ್ವತಂತ್ರ ಸಿದ್ಧಾಂತ ಮತ್ತು ವ್ಯವಸ್ಥೆ ಏನಲ್ಲ. ಫ್ಯಾಸಿಸಂ ಎಂದರೆ ಆಧುನಿಕ ಬಂಡವಾಳಶಾಹಿಯ ಅತ್ಯಂತ ಸಹಜ, ಅದಕ್ಕೆ ಸ್ಥಾಯಿಯಾದ ಪ್ರವೃತ್ತಿಗಳು ಮತ್ತು ಧೋರಣೆಗಳು ಅದರ ಅವನತಿಯ, ಕೊಳೆಯುವಿಕೆಯ ಪರಾಕಾಷ್ಠೆಯ ಪರಿಸ್ಥಿತಿಯಲ್ಲಿ ಸಂಪೂರ್ಣವಾಗಿ ಬಿಚ್ಚಿಕೊಳ್ಳುವುದು.

* ವಿಶಾಲವಾದ ಅರ್ಥದಲ್ಲಿ ಎಲ್ಲಾ ಆಧುನಿಕ ಬಂಡವಾಳಶಾಹಿ ಸಮಾಜಗಳಲ್ಲಿ ಫ್ಯಾಸಿಸಂನತ್ತ ಬೆಳವಣಿಗೆಯಾಗುವ ಬಗ್ಗೆ ಮಾತಾಡಬಹುದು. ಕೆಲವು ದೇಶಗಳ ಪ್ರಜಾಪ್ರಭುತ್ವದ ಚಿಪ್ಪಿನ ಒಳಗೆ  ಫ್ಯಾಸಿಸಂ ಪೂರ್ವ, ಫ್ಯಾಸಿಸಂಗೆ ಹತ್ತಿರವಾದ ಹಂತಗಳ ಬೆಳವಣಿಗೆಯ ಉದಾಹರಣೆ ನೀಡಬಹುದು.

* ಫ್ಯಾಸಿಸ್ಟ್ ಸರ್ವಾಧಿಕಾರದ ಸ್ಥಾಪನೆಗೆ ಮೊದಲು ಬಂಡವಾಳಶಾಹಿ ಸರ್ಕಾರಗಳು ಹಲವು ಪೂರ್ವಭಾವಿ ಹಂತಗಳ ಮೂಲಕ ಹಾದು ಹೋಗುತ್ತವೆ. ಈ ಸರ್ಕಾರಗಳು ಫ್ಯಾಸಿಸಂ ಅಧಿಕಾರಕ್ಕೇರುವುದಕ್ಕೆ ನೇರವಾಗಿ ಸಹಾಯ ಮಾಡುವ ಹಲವಾರು ಪ್ರತಿಗಾಮಿ ಕ್ರಮಗಳನ್ನು ಕೈಗೊಳ್ಳುತ್ತವೆ.

* ಹೀಗೆ ಫ್ಯಾಸಿಸಂ ಹಲವು ಹಂತಗಳ ಮೂಲಕ ಬೆಳೆಯುತ್ತದೆ ಎಂಬುದು ಅಮುಖ್ಯವಾದ ಸಂಗತಿಯಲ್ಲ. ಫ್ಯಾಸಿಸಂ ಹೇರುವ ಈ ಸಿದ್ಧತಾ ಹಂತಗಳಲ್ಲಿ ಬಂಡವಾಳಶಾಹಿ ಕೈಗೊಳ್ಳುವ ಪ್ರತಿಗಾಮಿ ಕ್ರಮಗಳ ವಿರುದ್ಧ ಆಯಾ ಹಂತಗಳಲ್ಲಿಯೇ ಹೋರಾಟಮಾಡಿ ತಡೆಗಟ್ಟದಿದ್ದರೆ. ಫ್ಯಾಸಿಸಂ ಪ್ರಭುತ್ವ ಅಧಿಕಾರಕ್ಕೇರುವುದನ್ನು ತಡೆಗಟ್ಟಲಾಗುವುದಿಲ್ಲ. ಅದಕ್ಕೆ ಬದಲಾಗಿ ಅದು ಪ್ರಭುತ್ವವನ್ನು ಹಿಡಿದುಕೊಳ್ಳುವುದಕ್ಕೆ ಸಹಾಯಕವಾಗಿರುತ್ತಾರೆ.

*  ಹೀಗೆ ಫ್ಯಾಸಿಸಂ ಪ್ರಭುತ್ವವನ್ನು ಹಿಡಿದುಕೊಳ್ಳುವ ವಿವಿಧ ಹಂತಗಳನ್ನು ಸರಿಯಾಗಿ ಗುರುತಿಸುವುದು ಮುಖ್ಯ. ಇದರಲ್ಲಿ ಉತ್ಪ್ರೇಕ್ಷೆ ಮತ್ತು ಕೀಳಂದಾಜು ಎರಡೂ ಸಲ್ಲ.  ಫ್ಯಾಸಿಸಂನ ಪೂರ್ವಭಾವಿ ಹಂತಗಳನ್ನು ಫ್ಯಾಸಿಸಂ ಎಂದು ಉತ್ಪ್ರೇಕ್ಷೆ ಮಾಡಿಕೊಂಡರೆ, ಅದು ಪ್ರಭುತ್ವದ ಮೇಲೆ ಹಿಡಿತ ಸ್ಥಾಪಿಸಲು ಇರುವ ಸಾಧ್ಯತೆ, ಅವಕಾಶಗಳನ್ನು ಉಪಯೋಗಿಸಲಾಗದ ಪರಿಸ್ಥಿತಿಯನ್ನು ಉಂಟುಮಾಡುತ್ತದೆ. ನಮ್ಮ ಹೋರಾಟದ ಗುರಿ, ಉದ್ದೇಶ, ಕ್ರಮಗಳನ್ನು ತಪ್ಪು ದಾರಿಗೆ ಎಳೆಯಬಹುದು. ಆದ್ದರಿಂದ ವಿವಿಧ ಹಂತಗಳಿಗೆ ಅನುಗುಣವಾಗಿ ವಿವಿಧ ಶಕ್ತಿಗಳ ಐಕ್ಯತೆಯನ್ನು ಸಾಧಿಸುವುದು, ಆಯಾ  ಹಂತಗಳಲ್ಲಿನ ಪ್ರತಿಗಾಮಿ ಕ್ರಮಗಳನ್ನು ಹಿಮ್ಮೆಟ್ಟಿಸುವ ಹೋರಾಟ ರೂಪಿಸುವುದು, ದೃಢತೆಯಿಂದ ಆ ಹೋರಾಟಗಳನ್ನು ಕೈಗೊಳ್ಳುವುದು ಬಹಳ ಮುಖ್ಯ.

ಅಂತರರಾಷ್ಟ್ರೀಯ ಅನುಭವವನ್ನು ಮಾರ್ಕ್ಸ್‌ವಾದಿ ವಿಶ್ಲೇಷಣೆಗೆ ಒಳಪಡಿಸಿದ ಪ್ರಮುಖರ ಬರಹಗಳ  ಅರಿವಿನ ಈ ಸಾರ ಬಹಳ ಸ್ಪಷ್ಟವಾಗಿ ಫ್ಯಾಸಿಸಂ ಸಂಪೂರ್ಣವಾಗಿ ಪ್ರಭುತ್ವ ಹಿಡಿಯುವ ಮೊದಲು ಅದನ್ನು ಉತ್ಪೇಕ್ಷಿಸುವುದರ ಅಪಾಯದ ಬಗ್ಗೆ ಒತ್ತಿ ಹೇಳುತ್ತದೆ.

ಆರೆಸ್ಸೆಸ್ ಫ್ಯಾಸಿಸ್ಟ್ ಸಿದ್ಧಾಂತವನ್ನು ಹೊಂದಿದೆ

ಭಾರತದಲ್ಲಿ 2014ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಫ್ಯಾಸಿಸಂ ಅಧಿಕಾರದಲ್ಲಿದೆ ಎಂದು ಭಾವಿಸುತ್ತಿರುವವರು, ಈ ರೀತಿ ವಾದಿಸುತ್ತಿರುವ ಹಲವು ಸಾಹಿತಿಗಳು, ಬುದ್ಧಿಜೀವಿಗಳು, ಎಡಪಂಥೀಯರು ಉಂಟು. ಅಂದಿನಿಂದಲೇ ಆಯಾ ಸಂದರ್ಭಗಳಲ್ಲಿ  ಈ ಬಗ್ಗೆ ನಾನು ಮೇಲಿನ ವಿಷಯಗಳನ್ನು ಮಂಡಿಸಿದ್ದೇನೆ. ಅವುಗಳನ್ನು ಒಪ್ಪಿದವರು ಬಹಳ ಜನ ಇರುವಂತೆಯೇ, ಕೆಲವರು ಈ ವಿಶ್ಲೇಷಣೆಯನ್ನು ಕಿವಿಗೆ ಹಾಕಿಕೊಳ್ಳಲು, ಇವುಗಳ ಬಗ್ಗೆ ಚರ್ಚೆ, ಅಧ್ಯಯನ ಕೈಗೊಳ್ಳಲು ನಿರಾಕರಿಸಿ ತಮ್ಮ ಪೂರ್ವ ತೀರ್ಮಾನಗಳಿಗೇ ಅಂಟಿಕೊಂಡವರೂ ಉಂಟು. ಭಾರತದ ಇಂದಿನ ರಾಜಕೀಯ, ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕ ಸ್ಥಿತಿಯನ್ನು ಮೇಲಿನ ಅಂತರರಾಷ್ಟ್ರೀಯ ಅನುಭವದ ಹಿನ್ನೆಲೆಯಲ್ಲಿ ವಿಶ್ಲೇಷಣೆಗೊಳಪಡಿಸಿದರೆ ಹೊರಡುವ ಸಂಗತಿಗಳೇನು ?

ಮೋದಿಯ ಈ ಹನ್ನೆರಡು ವರ್ಷಗಳಿಗೂ ಮೊದಲೇ ಹಲವು ಪ್ರತಿಗಾಮಿ, ಪ್ರಜಾಪ್ರಭುತ್ವ ವಿರೋಧಿ ಕ್ರಮಗಳನ್ನು ಆಳುವ ಸರ್ಕಾರಗಳು ನಿಧಾನವಾಗಿ ಅಸ್ತಿತ್ವಕ್ಕೆ ತರಲಾರಂಭಿಸಿವೆ. ಮೋದಿಯ ಆರೆಸ್ಸೆಸ್- ಬಿಜೆಪಿ ಸರ್ಕಾರದ ಅಧಿಕಾರದಲ್ಲಿ ಇವು ಬಹಳ ವೇಗಗೊಂಡಿವೆ. ಆರೆಸ್ಸೆಸ್ ಸ್ಥಾಪನೆಯ ಮೊದಲ ದಶಕದಿಂದಲೇ ಫ್ಯಾಸಿಸ್ಟ್ ಸಿದ್ಧಾಂತವನ್ನು ಹೊಂದಿದೆ. 1939ರಲ್ಲಿ ಗೋಲ್ವಾಳ್ಕರ್ ‘ವಿ ಆರ್ ಅವರ್ ನೇಷನ್‌ಹುಡ್’ ಎಂಬ ಪುಸ್ತಕ ಬರೆದು ಈ ಫ್ಯಾಸಿಸ್ಟ್ ಚಿಂತನೆಯನ್ನು ಮತ್ತಷ್ಟು ವಿಸ್ತರಪಡಿಸಿದರು.  ಆಗಿನಿಂದ ಅವರ ಗುರಿ, ಉದ್ದೇಶ, ಚಟುವಟಿಕೆ ಭಾರತದಲ್ಲಿ ಫ್ಯಾಸಿಸಂ ಸ್ಥಾಪಿಸುವುದೇ ಆಗಿದೆ. ಆದರೆ ಅದು ಹೆಚ್ಚು ಫಲಪ್ರದವಾಗತೊಡಗಿದ್ದು 80ರ ದಶಕದ ಮಧ್ಯ ಭಾಗದಿಂದ. ವಾಜಪೇಯಿ ಅಧಿಕಾರ ಮತ್ತೊಂದು ಹಂತ. ಈಗ ಮೋದಿ ಸರ್ಕಾರ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದುದು ಮತ್ತೆ ಹಲವು ಪಟ್ಟು ಹೆಚ್ಚಿನ ಹಂತ.

ಭಾರತದಲ್ಲಿ ಫ್ಯಾಸಿಸಂ ಅಧಿಕಾರದಲ್ಲಿದೆಯೇ?

ಮೋದಿ ಸರ್ಕಾರ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನಂತರದ ಈ ಪ್ರಭುತ್ವದ  ಹಲ ಹಲವು ಕ್ರಮಗಳು ಸರ್ಕಾರದ ಎಲ್ಲ ಅಂಗಗಳ ಮೇಲೆ ಹಿಡಿತ ಸ್ಥಾಪಿಸುವತ್ತ ನಡೆದಿವೆ, ಫ್ಯಾಸಿಸ್ಟ್ ದಾರಿಯಲ್ಲಿ ವೇಗವಾಗಿ ಸಾಗುತ್ತಿದೆ ಎಂಬುದೂ ನಿಜ. ಆರೆಸ್ಸೆಸ್, ಮೋದಿ, ಶಾ ಉದ್ದೇಶ ಫ್ಯಾಸಿಸಂ ಸ್ಥಾಪನೆ ಎಂಬುದು ನಿಜ ಎಂದ ಕೂಡಲೇ ಫ್ಯಾಸಿಸಂ ಅನ್ನು ಅದರ ಪೂರ್ಣ ಪ್ರಮಾಣದಲ್ಲಿ ಸ್ಥಾಪಿಸಲು ಯಶಸ್ವಿಯಾಗಿದೆಯೇ?

ಆದರೆ, ಅದೇ ಸಮಯದಲ್ಲಿ ಮೋದಿ ಸರ್ಕಾರ ಪ್ರಜಾಪ್ರಭುತ್ವವನ್ನು ಸಂಪೂರ್ಣ ನಾಶಮಾಡಲು ಸಾಧ್ಯವಾಗಿದೆಯೇ? ರಾಜಕೀಯ ಪಕ್ಷಗಳ ವಿರುದ್ಧ ವಿಷ ಕಾರುತ್ತಿದೆ. ಆದರೆ ಬ್ಯಾನ್ ಮಾಡಲಾಗಿದೆಯೇ? ತಾನು ಮಾತ್ರ ಪ್ರಭುತ್ವ ಪಕ್ಷ ಆಗಿದೆಯೇ? ಚಳುವಳಿಗಳನ್ನು ಹತ್ತಿಕ್ಜಲು ಹಲ ಹಲವು ಪ್ರಯತ್ನ, ಕುತಂತ್ರ ನಡೆಸಿರಬಹುದು, ಆದರೆ ಚಳುವಳಿಗಳೇ ನಡೆಯದಂತೆ, ಆ ಸಂಘಟನೆಗಳೇ ಇಲ್ಲವಾಗಿಸುವಂತೆ ಮಾಡಲಾಗಿದೆಯೇ? ಚಳುವಳಿಗಳು ತೀರ್ವಗೊಳ್ಳುತ್ತಿರುವ ಹಲವು ಉದಾಹರಣೆಗಳಿಲ್ಲವೇ? ಇವೆಲ್ಲವುಗಳ ಪರಿಣಾಮವಾಗಿ ಮತ್ತೆ ಬಿಜೆಪಿ ಬಹುಮತ ಕಳೆದುಕೊಳ್ಳುವಂತೆ ಆಗಿದೆಯಲ್ಲವೇ? ಕೆಲವು ರಾಜ್ಯಗಳಲ್ಲಿ ಸೋಲೊಪ್ಪುವಂತಾಗಿಲ್ಲವೇ? ಹೀಗೆ ಹಲ ಹಲವು ಅಂಶಗಳನ್ನು ಪರಿಗಣಿಸಬೇಕು.

ಅದಕ್ಕೆ ಬದಲು ಈಗಾಗಲೇ ಫ್ಯಾಸಿಸಂ ಅಧಿಕಾರಕ್ಕೆ ಬಂದಿದೆ ಎಂದು ತೀರ್ಮಾನಿಸಿದರೆ, ಇನ್ನೂ ಉಳಿದಿರುವ ಪ್ರಜಾಪ್ರಭುತ್ವದ ಹಕ್ಕುಗಳು,  ಸಂಸ್ಥೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಲು ಇರುವ ಅವಕಾಶಗಳನ್ನು ನಿರಾಕರಿಸಬೇಕೆ?

ಫ್ಯಾಸಿಸಂ ಸ್ಥಾಪನೆಯಾಗಿದೆ, ಪ್ರಜಾಪ್ರಭುತ್ವದ ಅವಕಾಶಗಳು ಯಾವುದೂ ಇಲ್ಲ ಎಂದು ಭಾವಿಸಿದರೆ ಆಗ ತಕ್ಷಣದಿಂದ ಎಲ್ಲ ಪ್ರಜಾಪ್ರಭುತ್ವ ಪಕ್ಷ, ಶಕ್ತಿಗಳು, ಚಳುವಳಿಗಳು ಭೂಗತವಾಗಿ ಕೆಲಸ ಮಾಡಬೇಕೆ? ಜನರಲ್ಲಿ ಕೋಮುವಾದ, ಫ್ಯಾಸಿಸಂ, ಆರ್ಥಿಕ ನೀತಿಗಳ ಬಗ್ಗೆ ಅರಿವು ಮೂಡಿಸಲು ಇರುವ ಒಂದಷ್ಟು ಅವಕಾಶಗಳನ್ನು ಕೈ ಬಿಡಬೇಕೇ?

ಹೀಗೆ ಹಲವು ಪ್ರಶ್ನೆಗಳನ್ನು ನಾವು ಕೇಳಿಕೊಂಡು ಪಡೆಯುವ ಉತ್ತರವೇ ಫ್ಯಾಸಿಸಂ ಸ್ಥಾಪನೆಯ ಯಾವ ಪೂರ್ವಭಾವಿ ಹಂತದಲ್ಲಿದ್ದೇವೆ ಎಂಬುದಕ್ಕೆ ಉತ್ತರ ಸಿಗುತ್ತದೆ. ಫ್ಯಾಸಿಸಂ ಸಂಪೂರ್ಣ ಸ್ಥಾಪನೆಯಾಗದಿರಲು ಅವಶ್ಯ ಕಾರ್ಯತಂತ್ರ ರೂಪಿಸಲು ಸಹಾಯಕವಾಗುತ್ತದೆ. ಪ್ರಬಲ ಪ್ರಜಾಸತ್ತಾತ್ಮಕ ಚಳುವಳಿ ರೂಪಿಸೋಣ.  ಫ್ಯಾಸಿಸಂ ಸಂಪೂರ್ಣ ಸ್ಥಾಪನೆಯಾಗುವುದನ್ನು ತಡೆಗಟ್ಟುವುದರಲ್ಲಿ ಯಶಸ್ವಿಯಾಗೋಣ.

ಇದನ್ನೂ ನೋಡಿ: ಕರ್ನಾಟಕ ಬಜೆಟ್ ಹೇಳಿದ್ದೇನು? ಹೇಳದೆ ಉಳಿಸಿದ್ದೇನು? Janashakthi Media

Donate Janashakthi Media

Leave a Reply

Your email address will not be published. Required fields are marked *