ಮುಂಜಾನೆ 7 ಗಂಟೆಗೆ ಬೆಂಗಳೂರಿನಿಂದ ರೈಲು ಮಾರ್ಗವಾಗಿ ಮೈಸೂರು ಹೊರಟು, ಮೈಸೂರು ರೈಲ್ವೆ ಸ್ಟೇಷನ್ ನಿಂದ ಕಬರ್ ಬಸ್ ಸ್ಟಾಂಡ್ ಗೆ ಆಟೋದಲ್ಲಿ ಪ್ಲಾಟ್ ಫಾರ್ಮ್ ನಂಬರ್ 5, 6ಕ್ಕೆ ಹೋಗಿ ಎಚ್. ಡಿ ಕೋಟೆ ಬಸ್ ಹುಡುಕಿ ಹ್ಯಾಂಡ್ ಪೋಸ್ಟ್ ಗೆ ಟಿಕೆಟ್ ತೆಗೆದುಕೊಂಡು ಸೀಟ್ ನಲ್ಲಿ ಕೂರುವ ಹೊತ್ತಿಗೆ ಒಂದ್ ಚೂರು ಸಮಾಧಾನ. ಹ್ಯಾಂಡ್ ಪೋಸ್ಟ್ ಇಳಿದು ನಾಗರಹೊಳೆ ಉದ್ಯಾನವನದ ಒಳಗೆ ಪರ್ಯಾಯ ಮಾರ್ಗವಾಗಿ ಪರಿಚಿತರ ಸ್ಕೂಟರ್ ನಲ್ಲಿ ಸುಮಾರು 45 ಕಿ. ಮೀ ಪ್ರಶಾಂತ ವಾತಾವರಣ, ಬೆಟ್ಟ, ಗುಡ್ಡ, ನಳನಳಿಸುತ್ತಿದ್ದ ಸಾಲು ಸಾಲು ವೃಕ್ಷಗಳು, ರಸ್ತೆಯಲ್ಲಿ ಆಗಾಗ ಕಾಣುತ್ತಿದ್ದ ವಿವಿಧ ಪಕ್ಷಿ ಸಂಕುಲ, ಮಂಗಗಳು, ಜಿಂಕೆ, ಕಾಡಾನೆ, ನವಿಲು, ಪಕ್ಷಿಗಳ ಕಲರವ, ತಂಪು ತಂಗಾಳಿ, ಮಳೆಯ ಕಲರವ, ಮಣ್ಣಿನ ಘಮಲು… ಆಹಾ ದಾರಿಯುದ್ದಕ್ಕೂ ಎಲ್ಲವನ್ನು ಮನಸ್ಸು ಆಸ್ವಾದಿಸುತ್ತಲೇ ಹೋಗಿ ಮಾವುತ ವಿನು ಹಾಗೂ ಅರ್ಜುನನನ್ನು ತಲುಪುವ ಹೊತ್ತಿಗೆ ಹಸಿವು ಆಯಾಸ ಮಾಯವಾಗಿತ್ತು.
ಕೊನೆಗೂ ಕಾಡಿನ ಜಾಡು ಹಿಡಿದು ಹೊರಟ ನನಗೆ ಬಳ್ಳೆ ಎಂಬ ಗ್ರಾಮ ಸಿಗುತ್ತದೆ. ವಿನು ಮಾವುತ ಮೂಲತಃ ಬಳ್ಳೆಗ್ರಾಮ, ಡಿ. ವಿ. ಕುಪ್ಪೆ ಪೋಸ್ಟ್, ಅಂತರಸಂತೆ ಹೋಬಳಿ, ಎಚ್. ಡಿ. ಕೋಟೆ ತಾಲ್ಲೂಕ್, ಮೈಸೂರಿನವರು. ಇವರ ತಂದೆ ದೊಡ್ಡಪ್ಪಾಜಿ, ತಾಯಿ ಚಿಕ್ಕಮಣಿ. ನಮ್ಮ ಮುತ್ತಾತನ ಕಾಲದಿಂದಲೂ ಮಾವುತರಾಗಿಯೇ ಕೆಲಸ ಮಾಡುತ್ತ ಬಂದಿದ್ದೇವೆ. ಸುಮಾರು 4ನೇ ತಲೆಮಾರಿನಿಂದ ನಮ್ಮ ಮುತ್ತಾತ ದೊಡ್ಡಯ್ಯ, ತಾತ ಚೆನ್ನಕೇಶವ, ಅಪ್ಪ ದೊಡ್ಡಪ್ಪಾಜಿ ಈಗ ನಾನು ಈ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ.
ಚಿಕ್ಕವಯಸ್ಸಿನಿಂದಲೂ ನನಗೆ ಓದಿನ ಕಡೆ ಗಮನ ಕಡಿಮೆ. ಆನೆ ಎಂದರೆ ತುಂಬ ಪ್ರೀತಿ. ಹೆಚ್ಚಿನ ಆಟ ಪಾಠ ಎಲ್ಲವೂ ಆನೆಯ ಜೊತೆಗೆ ಹೆಚ್ಚು. ನಾನು ಚಿಕ್ಕವನಿದ್ದಾಗ ಅಪ್ಪ ಸಾಕಿದ್ದ ದ್ರೋಣ ಆನೆ ಇತ್ತು. ಅದರ ಜೊತೆಗೆ ಆಡ್ತಾ ಅದಕ್ಕೆ ಸ್ನಾನ ಮಾಡಿಸುತ್ತ ಇದ್ದೆ. ಅಪ್ಪ ಮೈಸೂರು ದಸರಾಗೆ ಹೋದರೆ ದ್ರೋಣನ ಜೊತೆಗೆ ನಾನು ಹೋಗುತ್ತಿದ್ದೆ. ಯಾವುದೇ ಕಾರ್ಯಕ್ರಮ ಇದ್ದರೂ ದ್ರೋಣನನ್ನು ಬಿಟ್ಟಿರುತ್ತಿರಲಿಲ್ಲ. ಅದರ ಹಿಂದೆಯೇ ನಾನು ಹೋಗಿಬಿಡುತ್ತಿದ್ದೆ. ಚಿಕ್ಕ ವಯಸ್ಸಿನಿಂದಲೂ ಆನೆ ಎಂದರೆ ಪ್ರಾಣ. ಈಗ ಅದು ನನ್ನ ಬದುಕಿನ ಒಂದು ಭಾಗವೇ ಆಗಿದೆ.
ನಾನು ಪಿ. ಯು.ಸಿ. ವರೆಗೆ ಓದಿದ್ದೇನೆ. ನಾನು ಮೊದಲು ಕವಾಡಿಗನಾಗಿ ಕೆಲಸ ಮಾಡುತ್ತಿದ್ದೆ. ಕವಾಡಿಗ ಎಂದರೆ ಕ್ಲೀನರ್. 2013 ರಲ್ಲಿ ಮೊದಲನೆಯ ಆನೆ ಲಕ್ಷ್ಮಣನನ್ನು ನೋಡಿಕೊಳ್ಳುತ್ತಿದ್ದೆ. 2006 ರಿಂದ 2008 ರ ವರೆಗೂ ಬಂಡೀಪುರದಲ್ಲಿ ಕೆಲಸ ಮಾಡಿದೆ. ನಂತರ 2009ರಲ್ಲಿ ಕೆಲಸಕ್ಕೆ ಸೇರಿದೇನು. ಜೊತೆಗೆ ಕೆಲಸ ಪರ್ಮನೆಂಟ್ ಆಯ್ತು. ಆಗ ದ್ರೋಣದ ಮರಿ ಇತ್ತು. ಅದಾದ ಮೇಲೆ ಗಂಗೆ ಅಂತ ಹೆಣ್ಣಾನೆ ಅದನ್ನು 6 ತಿಂಗಳು ಅದಾದ ನಂತರ ಅದರ ತಂಗಿ ಗಂಗೆ, ಮತ್ತು ರಮಣಿ ಎಂಬ ಆನೆಯನ್ನು 2015ರ ವರೆಗೂ ಸಾಕಿದೆ. ಅವಳು ತೀರಿಹೋದ ಮೇಲೆ 2015 ರಿಂದ ಅರ್ಜುನನನ್ನು ನೋಡಿಕೊಳ್ಳುತ್ತಿದ್ದೇನೆ. 2015 ರಲ್ಲಿ ಕವಾಡಿ ವೃತ್ತಿಯಿಂದ ಮಾವುತನ ಪೋಸ್ಟ್ ಗೆ ವರ್ಗಾವಣೆಯಾಯಿತು. ಆಗಿನಿಂದಲೂ ಅರ್ಜುನ ಆನೆಯನ್ನು ನೋಡಿಕೊಳ್ಳುತ್ತಿದ್ದೇನೆ.
ಈ ವೃತ್ತಿ ನನಗೆ ವಂಶಪಾರಂಪರ್ಯವಾಗಿ ಬಂದಿರುವುದು.ಈ ವನಸಿರಿಯ ನಾಡಲ್ಲಿ ಸರಿ ಸುಮಾರು 4000 ದಿಂದ 5000 ಆನೆಗಳಿವೆ. ಅರ್ಜುನನಿಗೆ ಮದ ಬಂದರೆ ಚೈನ್ ಬಿಚ್ಚಿಕೊಂಡು ಹೋಗಿ ಬಿಡುತ್ತಾನೆ. ಎಷ್ಟೋ ಸಲ ಜೀಪ್ ನಲ್ಲಿ ಹುಡುಕಿಕೊಂಡು ಹೋಗಿ ಹಿಡಿದು ಕರೆದುಕೊಂಡು ಬಂದಿದ್ದೇವೆ. ನಾನು ನಿದ್ರೆ ಮಾಡುವುದು ಕಡಿಮೆ ರಾತ್ರಿ ಎಲ್ಲ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಸ್ವಲ್ಪ ಹೊತ್ತು ಮಲಗುವುದು, ನಂತರ ಏಳುವುದು ಆನೆಯನ್ನು ನೋಡುವುದು ಹೀಗೆ ಮಾಡಬೇಕು.
7 ವರ್ಷದಿಂದ ಅರ್ಜುನನನ್ನು ನೋಡಿಕೊಳ್ಳುತ್ತಿದ್ದೇನೆ. ಆನೆಗೆ ಅದರದ್ದೇ ಆದ ಭಾಷೆ ಇರುವುದಿಲ್ಲ. ನಾವು ಯಾವ ಭಾಷೆಯಲ್ಲಿ ಹೇಳಿದರೆ ಅದನ್ನು ಕೇಳುತ್ತದೆ. ಕನ್ನಡದಲ್ಲಿ, ಹಿಂದಿಯಲ್ಲಿ, ಮರಾಠಿಯಲ್ಲಿ ಯಾವ ಭಾಷೆಯಲ್ಲಿ ತರಬೇತಿ ಕೊಡುತ್ತೇವೋ ಅದನ್ನು ಕಲಿಯುತ್ತದೆ. ನಾವು ಯಾವ ಭಾಷೆಯಲ್ಲಿ ಹೆಚ್ಚು ಹೇಳುತ್ತೇವೆ ಅದರಲ್ಲಿ ಪಳಗುತ್ತದೆ.
ಯಾ ಮತ್ ಅಂದರೆ ಬಂದು ನಮ್ಮ ಹತ್ತಿರ ನಿಂತುಕೊಳ್ಳುತ್ತದೆ. ಗದೆ ಸಲಾಂ ಎಂದರೆ ಸೊಂಡಿಲು ಎತ್ತುತ್ತದೆ. ಭೈಟ್ ಎಂದರೆ ಕುಳಿತುಕೊಳ್ಳುತ್ತದೆ. ಸೋಲ್ ಅಂದರೆ ಕಾಲು ಎತ್ತುತ್ತದೆ. ಅಭಿ ಅಂದರೆ ಹಿಂದಿನ ಕಾಲು ಎತ್ತುತ್ತದೆ.
ಪ್ರತೀ ದಿನ ಬ್ರಷ್ ನಲ್ಲಿ ಉಜ್ಜಿ ಸ್ನಾನ ಮಾಡಿಸುತ್ತೇವೆ. ಬೆಳಗ್ಗೆ ಹೆಸರುಕಾಳು, ಉದ್ದಿನಕಾಳು, ಕುಸುಲಕ್ಕಿ ಬೇಯಿಸಿ ಕೊಡುತ್ತೇವೆ. ಒಂದು ಟೈಮ್ ಗೆ ಸುಮಾರು 10 ರಿಂದ 15 ಕೆಜಿ ಆಹಾರವನ್ನು ಕೊಡುತ್ತೇವೆ. ನಂತರ ಸಂಜೆಗೆ ಉರುಳಿಕಾಳನ್ನು ಚೆನ್ನಾಗಿ ಬೇಯಿಸಿ ಅದಕ್ಕೆ ರಾಗಿ ಹಸೀಟು ಹಾಕಿ ಮುದ್ದೆ ಮಾಡಿ ಕೊಡುತ್ತೇವೆ.
ಸಾಮಾನ್ಯವಾಗಿ ಆನೆಗೆ ಬರುವ ಖಾಯಿಲೆಗಳು ಎಂದರೆ, ಹೊಟ್ಟೆನೋವು, ಅದನ್ನು ಹೊರತು ಪಡಿಸಿ ಬೇರೆ ಏನೂ ಖಾಯಿಲೆ ಅಂತ ಬರುವುದಿಲ್ಲ. ಹೊಟ್ಟೆನೋವು ಬಂದಾಗ ಡಾಕ್ಟರ್ ಜೆಂತುಹುಳುವಿನ ಮಾತ್ರೆ ಕೊಡುತ್ತಾರೆ ಆಗ ಸರಿ ಹೋಗುತ್ತದೆ. ಸಾಕಿದ ಆನೆಗಳು 100 ರಿಂದ 120 ವರ್ಷಗಳು ಬದುಕುತ್ತವೆ. ಸಾಕುವವರ ಮೇಲೂ ಅವಲಂಬಿತವಾಗಿರುತ್ತದೆ. ನಾವು ಚೆನ್ನಾಗಿ ಸಾಕಿದಷ್ಟು ಚೆನ್ನಾಗಿರುತ್ತವೆ. ಹೆಚ್ಚು ವರ್ಷಗಳ ಕಾಲ ಬದುಕುತ್ತವೆ.
ಈಗ ಅರ್ಜುನನಿಗೆ 60 ವರ್ಷ. ಆದರೂ ಹಾಗೆ ಕಾಣುವುದಿಲ್ಲ. 35 ರಿಂದ 40 ವರ್ಷದ ಆನೆಯ ಹಾಗೆ ಕಾಣುತ್ತಾನೆ. ಅಷ್ಟು ಫಿಟ್ ಆಗಿದ್ದಾನೆ. 6 ವರ್ಷಗಳು ನಾಡಹಬ್ಬ ಮೈಸೂರು ದಸರಾದಲ್ಲಿ ಅಂಬಾರಿಯನ್ನು ಹೊತ್ತಿದ್ದಾನೆ. ದಸರಾದಲ್ಲಿ 750 ಕೆಜಿ ತೂಕದ ಅಂಬಾರಿಯನ್ನು ಅರಮನೆಯಿಂದ ಹೊತ್ತು ಬನ್ನಿ ಮಂಟಪದವರೆಗೂ ಹೋಗುತ್ತಾನೆ. ಮೈಸೂರು ದಸರಾವನ್ನು ನೋಡಲು ದೇಶ ವಿದೇಶಗಳಿಂದಲೂ ಜನರು ಬಂದಿರುತ್ತಾರೆ. ಆನೆ ಕಾಡಿನಲ್ಲಿ ಪ್ರಶಾಂತವಾದ ವಾತಾವರಣದಲ್ಲಿ ಇರುತ್ತದೆ. ಅಲ್ಲಿ ಜನರು ಶಬ್ಧ ಮಾಡುವುದು, ಪಟಾಕಿ ಹೊಡೆಯುವುದು ಮಾಡಿದಾಗ ಬೇರೆ ಆನೆಗಳಾದರೆ ದಿಕ್ಕಾಪಾಲಾಗಿ ಓಡಿ ಬಿಡುತ್ತವೆ. ಆದರೆ ಅರ್ಜುನನ ವಿಶೇಷತೆ ಅವನ ಗಾಂಭೀರ್ಯ.
ಅರಣ್ಯ ಇಲಾಖೆಯಿಂದ ಆನೆಯನ್ನು ನೋಡಿಕೊಳ್ಳಲು ಆನೆ ಮಾವುತ, ಕವಾಡಿ, ಇವರಿಬ್ಬರಿಗೂ ಮೇಲಿರುವವರನ್ನು ಜಮೆದಾರ್ ನ್ನು ನೇಮಿಸುತ್ತಾರೆ. ಒಂದು ಆನೆಯನ್ನು ನೋಡಿಕೊಳ್ಳಲು ಇಬ್ಬರು ಇರುತ್ತಾರೆ. ಒಬ್ಬ ಮಾವುತ, ಒಬ್ಬ ಕವಾಡಿ. ನಮ್ಮಲ್ಲಿ ಒಟ್ಟು 5 ಆನೆಗಳಿವೆ. 10 ಜನರು ಕೆಲಸ ಮಾಡುತ್ತಿದ್ದೇವೆ. ಹತ್ತು ಆನೆಗಳಿದ್ದಲ್ಲಿ ಅದರ ಮೇಲುಸ್ತುವಾರಿ ನೋಡಿಕೊಳ್ಳಲು ಜಮೇದಾರ್ ರನ್ನು ನೇಮಕ ಮಾಡುತ್ತಾರೆ. ನಮ್ಮಲ್ಲಿ ಜಮೇದಾರ್ ಯಾರೂ ಇಲ್ಲ.
ಪ್ರಾಣಭಯ ಏನಿಲ್ಲವೇ? ಎಂಬ ಪ್ರಶ್ನೆಗೆ ವಿನು ಹೀಗೆ ಉತ್ತರಿಸುತ್ತಾರೆ…
ಆನೆಗಳು ನಾವಿಟ್ಟಿರುವುದಕ್ಕಿಂತ ಹೆಚ್ಚು ಅವು ನಮ್ಮ ಮೇಲೆ ನಂಬಿಕೆ ಇಟ್ಟಿರುತ್ತವೆ. ನಾವು ಎಷ್ಟು ಪ್ರೀತಿ ತೋರಿಸುತ್ತೇವೋ ಅದೆರಡರಷ್ಟು ನಮಗೆ ಪ್ರೀತಿ ತೋರಿಸುತ್ತವೆ. ಅತೀ ಬುದ್ದಿವಂತ ನಿಯ್ಯತ್ತಿನ ಪ್ರಾಣಿ ಎಂದರೆ ನಮ್ಮಲ್ಲಿ ನಾಯಿಯನ್ನು ಬಿಟ್ಟರೆ ಆನೆಯೇ.
ನಾವು ತೊಂದರೆ ಕೊಟ್ಟಾಗ ಅವೂ ಕೊಡುವ ಸಾಧ್ಯತೆ ಇರುತ್ತದೆ. ನಾವು ಸುಮ್ಮನೆ ಹಿಂಸೆ ಕೊಡೋದು, ಹೊಡೆಯುವುದು ಮಾಡಿದಾಗ ಅವೂ ಕೂಡ ತಿರುಗಿಬೀಳುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ನಾವು ಹಿಂಸೆ ಕೊಟ್ಟರೆ ಅವು ಸಹಿಸಿಕೊಳ್ಳುತ್ತವೆ. ಆದರೆ ಅವು ತಿರುಗಿಸಿ ಹಿಂಸೆ ಕೊಡಲು ಪ್ರಾರಂಭಿಸಿದರೆ ನಾವು ಬದುಕುಳಿಯುವುದೇ ಇಲ್ಲ.
2003ರಲ್ಲಿ ಕೆಲಸಕ್ಕೆ ಸೇರಿಕೊಂಡೆ. ಈ ಕೆಲಸಕ್ಕೆ ನಿಗದಿತ ಸಮಯ ಅಂತ ಇಲ್ಲ. ದಿನದ 24ಗಂಟೆಯೂ ಆನೆಯ ಜೊತೆಗೆ ಇರುತ್ತೇನೆ. ಹಗಲೆಲ್ಲ ಕೆಲಸ ಮಾಡಿದರೆ, ರಾತ್ರಿ ಅದನ್ನು ಮರಕ್ಕೆ ಕಟ್ಟಿ ಹಾಕಿ ಅದರ ಎದುರೇ ಆನೆ ಕಾಣುವಂತೆ ಶೆಡ್ ನಲ್ಲಿ ಮಲಗುತ್ತೇನೆ. ಆನೆಯೂ ಕೂಡ ದಿನದಲ್ಲಿ ಸುಮಾರು ಎರಡು ಗಂಟೆಗಳು ನಿದ್ರೆ ಮಾಡುತ್ತದೆ. ಎರಡೂ ಕಡೆಗೆ ಮಲಗಿ ನಿದ್ರಿಸುತ್ತದೆ. ಯಾವ ಆನೆಗೂ ಹೆದರುವುದಿಲ್ಲ. ಅಂಬಾರಿ ಹೊರುತ್ತಿದ್ದುದರಿಂದ ಸೆರೆ ಹಿಡಿವುದನ್ನು ನಿಲ್ಲಿಸಿದ್ರು. ನಾನು ಬಂದಾಗಿನಿಂದ ಮತ್ತೆ ಸೆರೆ ಹಿಡಿಯುವ ಕೆಲಸಕ್ಕೆ ಕರೆದುಕೊಂಡು ಹೋಗುತ್ತೇನೆ. ಒಮ್ಮೆ ಹುಲಿ ಸೆರೆ ಹಿಡಿಯಲು ಅಂತ ಹೋದಾಗ ಮಣ್ಣಿನ ಇಟ್ಟಿಗೆ ಮಾಡಲು ನಮ್ಮಲ್ಲಿ ಮಣ್ಣನ್ನು ತೆಗೆದು ತೆಗೆದು ಆಳದ ಗುಂಡಿ ಮಾಡಿಬಿಟ್ಟಿರುತ್ತಾರೆ ನನಗೆ ಗೊತ್ತಿಲ್ಲ. ಆನೆ ಹೋಗಿ ಅದರ ತುದಿಯಲ್ಲಿ ನಿಂತಿದೆ. ಇದ್ದಕ್ಕಿದ್ದಂತೆ ಮಣ್ಣು ಹಾಗೆ ಕುಸಿದು ಬಿಡ್ತು ನಾನು ಆನೆಯ ಮೇಲಿದ್ದವನು ಒಂದೇ ಸಲಕ್ಕೆ ಕೆಳಕ್ಕೆ ಬಿದ್ದು ಬಿಟ್ಟೆ ಆಗ ಸೊಂಡಿಲಿನಿಂದ ನನ್ನ ಕಾಪಾಡಿತ್ತು. ಈ ತರಹ ನನ್ನ ತುಂಬ ಸಲ ಕಾಪಾಡಿದೆ. ಹುಲಿ ಹಿಡಿಯಲು ಹೋದಾಗ ನಮಗೂ ಭಯ ಇರುತ್ತದೆ. ಎಲ್ಲಿ ಹುಲಿ ಬಂದು ಬಿಡುತ್ತದೆಯೋ ಎಂದು ಹಾಗಾಗಿ, ಒಂದು ಕಡೆ ಬೆಂಕಿ ಹಾಕಿ ನಾನು ಆನೆ ಹತ್ತಿರ ಮಲಗುತ್ತೇನೆ. ಅದರ ಹತ್ತಿರವೇ ಮಲಗಿದ್ರು ಯಾರನ್ನೂ ನನ್ನ ಹತ್ತಿರ ಬರೋದಕ್ಕೆ ಬಿಡೋದಿಲ್ಲ. ನನಗೆ ಅದರ ಮೇಲೆ ನಂಬಿಕೆ. ಅರ್ಜುನನಿಗೆ ನನ್ನ ಮೇಲೆ ನಂಬಿಕೆ.
ಧ್ವನಿ ಮತ್ತು ನೋಟದಲ್ಲಿಯೇ ನನ್ನ ಗುರುತಿಸುತ್ತಾನೆ. ನಾನು ಎಷ್ಟೇ ದೂರದಲ್ಲಿ ಮಾತನಾಡಿದ್ರು ಓಹೋ ಬಂದು ಬಿಟ್ಟ ಅಂತ ತುಂಬ ಖುಷಿ ಪಡುತ್ತಾನೆ. ನಾನು ಒಂದು ದಿನ ಕಾಣಿಸಲಿಲ್ಲ ಅಂದರೂ ಬೇಜಾರಿನಲ್ಲಿರುತ್ತಾನೆ. ನಾನು ಕಾಣಲೇ ಬೇಕು ಅವನಿಗೆ. ಆದ್ದರಿಂದ ನಾನು ಯಾವ ಊರಿಗೆ, ನೆಂಟರ ಮನೆಗೆ, ಹಬ್ಬ ಹುಣ್ಣಿಮೆ ಅಂತ ಎಲ್ಲೂ ಹೋಗುವುದಿಲ್ಲ. ನನ್ನ ತಮ್ಮನ ಮದುವೆಯಲ್ಲೂ ಮುಹೂರ್ತದ ಸಮಯಕ್ಕೆ ಹೋಗಿ ಮತ್ತೆ ಬೇಗ ಬಂದುಬಿಟ್ಟೆ. ನಾನಿಲ್ಲವೆಂದರೆ ಹಠ ಮಾಡುತ್ತಾನೆ, ಚೈನ್ ಬಿಚ್ಚಿಕೊಂಡು ಹೋಗಿ ಬಿಡುತ್ತಾನೆ. ನಾನಿದ್ದರೆ ಅವನಿಗೆ ಏನೋ ಸಮಾಧಾನ. ಬೆಳಗ್ಗೆ 4:30 ಕ್ಕೆ ಎದ್ದರೆ ಅವನಿಗೆ ಸ್ನಾನ ಎಲ್ಲ ಮಾಡಿಸಿ ಊಟ ಕೊಟ್ಟು, ಕಾಡಿಗೆ ಕರೆದುಕೊಂಡು ಹೋಗುತ್ತೇವೆ. ಕಾಡೆಲ್ಲಾ ಸುತ್ತಿ ಅಲ್ಲಿ ಅವನಿಷ್ಟದ ಆಲ, ಅರಳಿ, ಸೋಗೆ, ಮರದ ಕೊಂಬೆಗಳನ್ನು ತಿನ್ನುತ್ತಾನೆ.
ಹುಲಿ, ಆನೆಯನ್ನು ಸೆರೆ ಹಿಡಿಯಲು ಸರ್ಕಾರದಿಂದ ಅನುಮತಿ ಇರುತ್ತದೆ. 2019 ರಲ್ಲಿ ಒಮ್ಮೆ ಹುಲಿ ನಾಲ್ಕು ಜನರನ್ನು ತಿಂದಿತ್ತು. ಆ ಹುಲಿ ಕಾರ್ಯಾಚರಣೆಯಲ್ಲಿ ಎರಡು ದಿನ ಹುಡುಕಿದ್ವಿ. ಕೊನೆಗೆ ಮೂರನೇ ದಿನಕ್ಕೆ ಹುಲಿಯ ಹೆಜ್ಜೆ ಗುರುತು ಹಿಡಿದೇ ಹೋದ ಕೊನೆಗೆ ಹೊಸೂರು ಬಳಿ ಮಚ್ಚೂರಿನ ಹತ್ತಿರ ನಮ್ಮ ಸ್ಟಾಫ್ ಮತ್ತು ಅರ್ಜುನನ ಸಹಾಯದಿಂದ ಆ ಹುಲಿಯನ್ನು ಹಿಡಿದೆವು. ಆಗ ಸರ್ಕಾರದಿಂದ ಪ್ರಶಸ್ತಿ ಬಂತು. ಚಿಕ್ಕಮಂಗಳೂರುನಲ್ಲಿ ಒಂದು ಪುಂಡಾನೆ ಇತ್ತು. ಅದನ್ನು ಹಿಡಿದಿದ್ದೇವೆ. ಹುಲಿಯ ಕಾರ್ಯಾಚರಣೆ ತುಂಬ ಮಾಡಿದ್ದೇವೆ. ಹಾಗಾಗಿ ಸಾಕಷ್ಟು ಸನ್ಮಾನ ಪ್ರಶಸ್ತಿ ಪತ್ರಗಳು ಬಂದಿವೆ. ನನಗೆ ಬಂದಿರುವ ಸಾಕಷ್ಟು ಪ್ರಶಸ್ತಿ ಪತ್ರಗಳನ್ನು ಆನೆಯ ಹೆಸರು ಮತ್ತು ಮಾವುತನ ಹೆಸರು ಹಾಕಿ ‘ಮೈಸೂರಿನ ಅರಣ್ಯ’ ವಲಯದಲ್ಲಿ ಇಟ್ಟಿದ್ದಾರೆ.
ಆನೆಗೆ ಯಾಕೆ ಗಂಟೆ ಕಟ್ಟಿದ್ದೀರಿ ಎಂದಾಗ…
ಆನೆಗೆ ಗಂಟೆ ಕಟ್ಟಿರುವುದು ಈಗ ಕಾಡಿಗೆ ಹೋಗಿರುತ್ತೇವೆ. ಅಕಸ್ಮಾತ್ ಆಗಿ ಚೈನ್ ಬಿಚ್ಚಿ ಹೋದರೆ, ಆನೆ ಜಾಡು ಪಕ್ಕದಲ್ಲೇ ಇದ್ದರೂ ಗೊತ್ತಾಗುವುದಿಲ್ಲ. ಗಂಟೆ ಇದ್ದರೆ ಶಬ್ಧವಾಗುತ್ತದೆ. ಆಗ ಹುಡುಕುವುದು ಸುಲಭವಾಗುತ್ತದೆ. ಮತ್ತು ಗಂಟೆ ಇದ್ದರೆ ಎಲ್ಲರಿಗೂ ಗೊತ್ತಾಗುತ್ತದೆ ಇದು ಸಾಕಿದ ಆನೆ ಎಂದು.
ಹೆಣ್ಣಾನೆಯಾದರೆ 8 ರಿಂದ 9 ಮರಿ ಹಾಕುತ್ತದೆ. ಒಂದು ಮರಿ ಬೆಳೆದು ದೊಡ್ಡದಾಗಿ ಮರಿ ಹಾಕ ಬೇಕಾದರೆ 18 ತಿಂಗಳು ಬೇಕು. ಮೂರು ವರ್ಷ ಅದರ ತಾಯಿಯ ಹತ್ತಿರ ಹಾಲು ಕುಡಿದುಕೊಂಡು 5 ವರ್ಷ ಆಗಬೇಕು. ನಂತರ ಮರಿ ಹಾಕಲು ಗರ್ಭಕೋಶ ಸಂಪೂರ್ಣ ಸಿದ್ಧವಾಗಿರುತ್ತದೆ. ಆನೆಗಳು 5 ವರ್ಷಕ್ಕೊಂದು ಮರಿ ಹಾಕುತ್ತದೆ. ಕೆಲವೊಂದು ಆನೆಗಳು ಗಂಡಾನೆ ಮರಿ ಹಾಕುವುದಿದ್ದರೆ 20 ರಿಂದ 22 ತಿಂಗಳಿಗೆ ಮರಿ ಹಾಕುತ್ತವೆ. ಹೆಣ್ಣಾನೆ ಮರಿ ಹಾಕುವುದಿದ್ದರೆ 18 ತಿಂಗಳಿಗೆ ಹಾಕುತ್ತವೆ.
‘ಆನೆ ಕಾಡಿನಲ್ಲಿ ಪ್ರಶಾಂತವಾದ ವಾತಾವರಣದಲ್ಲಿ ಇರುತ್ತದೆ. ದಸರಾದಲ್ಲಿ 750 ಕೆಜಿ ತೂಕದ ಅಂಬಾರಿಯನ್ನು ಅರಮನೆಯಿಂದ ಹೊತ್ತು ಬನ್ನಿ ಮಂಟಪದವರೆಗೆ ಅರ್ಜುನ ನಿಧಾನವಾಗಿ ನಡೆದು ಹೋಗುತ್ತಾನೆ. ಮೈಸೂರು ದಸರಾವನ್ನು ನೋಡಲು ದೇಶ ವಿದೇಶಗಳಿಂದ ಜನರ ಬಂದಿರುತ್ತಾರೆ. ಅಲ್ಲಿ ಜನರು ಶಬ್ಧ ಮಾಡುವುದು, ಪಟಾಕಿ ಹೊಡೆಯುವುದು ಮಾಡಿದಾಗ ಬೇರೆ ಆನೆಗಳಾಗಿದ್ದರೆ ದಿಕ್ಕಾಪಾಲಾಗಿ ಹೋಗುತ್ತಿದ್ದವು. ಆದರೆ ಅರ್ಜುನನ ವಿಶೇಷತೆ ಅವನ ಗಾಂಭೀರ್ಯ. ಅಷ್ಟು ಶಬ್ದ ಗಲಾಟೆಯಿದ್ದರೂ ಒಂಚೂರೂ ಕದಲದೇ ಗಂಭೀರವಾಗಿಯೇ ನಡೆಯುತ್ತಾನೆ. ಅಂಬಾರಿ ಹೊರಲು ಒಂದೂವರೆ ತಿಂಗಳು ಮುಂಚಿತವಾಗಿಯೇ ಅರ್ಜುನನನ್ನು ತರಬೇತಿಗೊಳಿಸಲು ಲಾರಿಯಲ್ಲಿ ಕರೆದುಕೊಂಡು ಹೋಗುತ್ತೇವೆ. ಅಲ್ಲಿಯೂ ಕೂಡ ಅವನಿಗೆ 120 ಕಂತೆ ಹಸಿ ಹುಲ್ಲು, ತರಕಾರಿ, ಹೆಸರುಕಾಳು, ಉದ್ದಿನಕಾಳು, ಗೋಧಿ, ಸೊಪ್ಪು, ಬೆಣ್ಣೆ ಕೊಡುತ್ತಾರೆ. ಆ ಸಮಯದಲ್ಲಿ ಆನೆಗೆ ಅಲಂಕಾರ ಮಾಡಲು, ಬಣ್ಣ ಬಳಿಯಲು ಬೇರೆಯವರು ಬಂದಿರುತ್ತಾರೆ. ಆಗ ನಾನು ಜೊತೆಗೆ ಇದ್ದರೆ ಸಮಾಧಾನದಿಂದಿರುತ್ತಾನೆ. ನನ್ನ ಧ್ವನಿ ಮತ್ತು ನೋಟದಲ್ಲಿಯೇ ನನ್ನನ್ನು ಗುರುತಿಸುತ್ತಾನೆ. ನಾನು ಎಷ್ಟೇ ದೂರದಲ್ಲಿ ಮಾತನಾಡಿದ್ರು ಓಹೋ ಬಂದು ಬಿಟ್ಟ ಅಂತ ತುಂಬ ಖುಷಿಪಡುತ್ತಾನೆ. ನಾನು ಒಂದು ದಿನ ಕಾಣಿಸಲಿಲ್ಲ ಅಂದರೂ ಬೇಜಾರಿನಲ್ಲಿರುತ್ತಾನೆ. ನಾನು ಕಾಣಲೇಬೇಕು ಅವನಿಗೆ. ಆದ್ದರಿಂದ ನಾನು ಯಾವ ಊರಿಗೆ, ನೆಂಟರ ಮನೆಗೆ, ಹಬ್ಬ ಹುಣ್ಣಿಮೆ ಅಂತ ಎಲ್ಲೂ ಹೋಗುವುದಿಲ್ಲ. ನನ್ನ ತಮ್ಮನ ಮದುವೆಯಲ್ಲೂ ಮುಹೂರ್ತದ ಸಮಯಕ್ಕೆ ಹೋಗಿ ಮತ್ತೆ ಬೇಗ ಬಂದುಬಿಟ್ಟೆ. ನಾನಿಲ್ಲವೆಂದರೆ ಹಠ ಮಾಡುತ್ತಾನೆ, ಚೈನ್ ಬಿಚ್ಚಿಕೊಂಡು ಹೋಗಿ ಬಿಡುತ್ತಾನೆ. ನಾನಿದ್ದರೆ ಅವನಿಗೆ ಏನೋ ಸಮಾಧಾನ. ನಮ್ಮಲ್ಲಿ ಈಗ ಐದು ಆನೆಗಳಿವೆ. ಅರ್ಜುನ, ಕುಮಾರಸ್ವಾಮಿ, ದುರ್ಗಾಪರಮೇಶ್ವರಿ, ಲಕ್ಷ್ಮಿ ಮತ್ತು ರೂಪ. ಆನೆಗಳಿಗೆ ಹೆಸರಿಡುವುದು ಅಧಿಕಾರಿಗಳು. ಬಹುತೇಕ ಮಹಾಭಾರತದ ಕಾಲದ ಹೆಸರುಗಳನ್ನು ಆಯ್ಕೆಮಾಡಿಕೊಳ್ಳುತ್ತಾರೆ’.
“ಅಂಬಾರಿ ಹೊರುತ್ತಿದ್ದುದರಿಂದ ಕ್ಯಾಪ್ಚರ್ ಮಾಡುವುದನ್ನು ನಿಲ್ಲಿಸಿದ್ರು. ನಾನು ಬಂದಾಗಿನಿಂದ ಮತ್ತೆ ಕ್ಯಾಪ್ಚರ್ ಗೆ ಕರೆದುಕೊಂಡು ಹೋಗುತ್ತೇನೆ. ಕ್ಯಾಪ್ಚರ್ ಎಂದರೆ ಊರುಗಳಿಗೆ ಬಂದು ತೊಂದರೆ ಕೊಡುವ ಕಾಡಿನ ಕ್ರೂರ ಪ್ರಾಣಿಗಳನ್ನು ಹಿಡಿಯುವುದು. ಒಮ್ಮೆ ಹುಲಿ ಹಿಡಿಯಲು ಹೋದಾಗ ಮಣ್ಣಿನ ಇಟ್ಟಿಗೆ ಮಾಡಲು ನಮ್ಮಲ್ಲಿ ಮಣ್ಣನ್ನು ತೆಗೆದು ತೆಗೆದು ಆಳದ ಗುಂಡಿ ಮಾಡಿಬಿಟ್ಟಿದ್ದರು ನನಗೆ ಗೊತ್ತಿಲ್ಲ. ಆನೆ ಹೋಗಿ ಅದರ ಹತ್ತಿರದಲ್ಲಿ ನಿಂತಿದೆ. ಇದ್ದಕ್ಕಿದ್ದಂತೆ ಮಣ್ಣು ಕುಸಿದುಬಿಡ್ತು ನಾನು ಆನೆಯ ಮೇಲಿದ್ದವನು ಒಂದೇ ಸಲಕ್ಕೆ ಕೆಳಕ್ಕೆ ಬಿದ್ದು ಬಿಟ್ಟೆ ಆಗ ಸೊಂಡಿಲಿನಿಂದ ನನ್ನ ಕಾಪಾಡಿತ್ತು. ಈ ತರಹ ನನ್ನನ್ನು ತುಂಬ ಸಲ ಕಾಪಾಡಿದೆ. ಹುಲಿ ಹಿಡಿಯಲು ಹೋದಾಗ ನಮಗೂ ಭಯ ಇರುತ್ತದೆ. ಹಾಗಾಗಿ ಒಂದು ಕಡೆ ಬೆಂಕಿ ಹಾಕಿ ನಾನು ಆನೆ ಹತ್ತಿರ ಮಲಗುತ್ತೇನೆ. ಅದರ ಹತ್ತಿರ ಮಲಗಿದ್ದಾಗ ಯಾರನ್ನೂ ನನ್ನ ಹತ್ತಿರ ಬರೋದಕ್ಕೆ ಬಿಡೋದಿಲ್ಲ. ನನಗೆ ಅರ್ಜುನನ ಮೇಲೆ ನಂಬಿಕೆ. ಅರ್ಜುನನಿಗೆ ನನ್ನ ಮೇಲೆ ನಂಬಿಕೆ’.
‘ಮೊದಲೆಲ್ಲ ಪುಂಡಾನೆಗಳನ್ನು ಸಾಕಾನೆಗಳಿಂದ ತಳ್ಳಿಸಿ ಲಾರಿ ಹತ್ತಿಸಬೇಕಿತ್ತು. ಆಗ ಸಾಕಿರುವ ಆನೆಗೂ ಕಾಡಾನೆಗೂ ಪೆಟ್ಟಾಗುತ್ತಿತ್ತು. ಅದನ್ನು ತಪ್ಪಿಸಲು ಈಗ ಆನೆಗೆ ಬೆಲ್ಟ್ ಹಾಕಿ ಫ್ರೇಮ್ ನಿಂದ ಲಾರಿಯೊಳಗೆ ಕ್ರೇನ್ ನಿಂದ ಎತ್ತಿಡುವ ವ್ಯವಸ್ಥೆ ಬಂದಿದೆ. ಹುಲಿ, ಅರ್ಜುನ ಮೊದಲು 6000 ಕೆಜಿ ತೂಕ ಇದ್ದ. ಈಗ 5700 ಕೆಜಿ ತೂಕ ಇದ್ದಾನೆ. ನಮ್ಮಲ್ಲಿನ ಆನೆಗಳಲ್ಲಿ ಇವನೇ ಹೆಚ್ಚು ತೂಕ ಇರುವುದು. ವರ್ಷಕ್ಕೊಮ್ಮೆ ಮದ ಬರುತ್ತದೆ. ಐದರಿಂದ ಆರು ತಿಂಗಳು ಇರುತ್ತದೆ. ಅದು ಕ್ರಾಸ್ಸಿಂಗ್ ಟೈಮ್. ಆಗ ಬೇರೆ ಆನೆಗಳನ್ನು ಕರೆಸುತ್ತೇವೆ. ಈಗ ಹೇಗೆ ನೋಡಿಕೊಳ್ಳುತ್ತೇವೆಯೋ ಆಗಲೂ ಹಾಗೆ ನೋಡಿಕೊಳ್ಳುತ್ತೇವೆ. ಮೊದಲು ನಮ್ಮಲ್ಲಿ ಇಪ್ಪತ್ನಾಲ್ಕು ಆನೆಗಳಿದ್ದವು. ಬೇರೆ ಕಡೆಗೆ ವರ್ಗಾವಣೆ ಮಾಡಿದ್ದಾರೆ. ಅಪ್ಪ ನೋಡಿಕೊಳ್ಳುವಾಗ ಐವತ್ತು ಆನೆಗಳಿದ್ದವು.
ಈಗ ನಮ್ಮ ಹತ್ತಿರ ಐದು ಆನೆಗಳಿವೆ. ಎಚ್.ಡಿ. ಕೋಟೆಯನ್ನು ಮೊದಲು ಕಾಕನಕೋಟೆ ಕಾಡು ಎಂದು ಕರೆಯುತ್ತಿದ್ದರು. ಇಲ್ಲಿ ಆನೆಗಳನ್ನು ಪಳಗಿಸಲು ವಿಶೇಷವಾಗಿ ಕೆಡ್ಡ ಅಂತ ಮಾಡಿ ಅದರ ಮುಖಾಂತರ ಆನೆಗಳನ್ನು ಪಳಗಿಸುತ್ತಿದ್ದರು. ಒಡೆಯರ ಕಾಲದಲ್ಲಿ ರಾಜ ಮಹಾರಾಜರು ಈ ಕಾಡಿನ ಆಜುಬಾಜಿನಲ್ಲಿ ಉಳಿದುಕೊಳ್ಳುತ್ತಿದ್ದರು’. ‘ಕಾಡು ಪ್ರಾಣಿಗಳಲ್ಲಿ ಅಚ್ಚುಮೆಚ್ಚು ಎನಿಸಿಕೊಂಡಿರುವ ಪ್ರಾಣಿ ಆನೆ. ನನ್ನ ಪ್ರೀತಿ ಕೂಡ ಆನೆ. ಹಾಗಾಗಿ ನನಗೆ ಈ ಕೆಲಸದಲ್ಲಿ ಸಮಾಧಾನ, ಖುಷಿ, ತೃಪ್ತಿ ಇದೆ.
‘ವಿನುವಿಗೆ ಚಿಕ್ಕವಯಸ್ಸಿನಿಂದಲೂ ಅವನಿಗೆ ಪ್ರಾಣಿಗಳು, ಪಕ್ಷಿಗಳು ಎಂದರೆ ತುಂಬಾ ಪ್ರೀತಿ. ಆಗಿನಿಂದಲೂ ಆನೆಯೊಂದಿಗೆ ಹೆಚ್ಚಿನ ಒಡನಾಟ. ಚಿಕ್ಕವನಿದ್ದಾಗಲೇ ಮರಹತ್ತುವುದು, ಈಜು ಎಲ್ಲವನ್ನು ಚೆನ್ನಾಗಿ ಕಲಿತಿದ್ದ. ಕ್ರಿಕೆಟ್, ಪುನೀತ್ ರಾಜಕುಮಾರ್ ಎಂದರೆ ಅವನಿಗೆ ಎಲ್ಲಿಲ್ಲದ ಪ್ರೀತಿ. ಶಾಂತವಾಗಿರುವ ಕಾಡಿನಲ್ಲಿ ಆನೆಯನ್ನು ಪಳಗಿಸಿ ಮೈಸೂರು ದಸರಾದಲ್ಲಿ ಲಕ್ಷಾಂತರ ಜನರ ಸದ್ದು ಗದ್ದಲದಲ್ಲಿಯೂ ಎಲ್ಲರಿಗೂ ಸಲ್ಯೂಟ್ ಹೊಡೆಸುತ್ತಾ ಕರೆದುಕೊಂಡು ಹೋಗುತ್ತಾನೆ. ವಿನು ನನ್ನ ಬಾಲ್ಯದ ಗೆಳೆಯ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ’ ಎಂದು ಡಿ.ಬಿ. ಕುಪ್ಪೆಯಲ್ಲಿ ಶಿಕ್ಷಕರಾಗಿರುವ ವಿನುವಿನ ಬಾಲ್ಯದ ಗೆಳೆಯರಾದ ಪುಟ್ಟಸ್ವಾಮಿ ಸರ್ ಹೇಳುತ್ತಾರೆ.
ಇನ್ನು ತಮ್ಮ ಬೆಳೆಗಳನ್ನು ನಾಶ ಮಾಡಿದ ಆನೆಯಾದರೂ ಅದು ತೀರಿಕೊಂಡಾಗ ಜನ ದುಃಖಿಸುತ್ತಾರೆ. ಕೇರಳದಲ್ಲಿ ಸಿಡಿಮದ್ದಿನಿಂದ ಆನೆ ತೀರಿಕೊಂಡಾಗ ಇಡೀ ದೇಶವೇ ಮರುಗಿತ್ತು. ತನ್ನ ಮಾವುತ ತೀರಿಕೊಂಡಾಗಲೂ ಕಣ್ಣೀರಿಟ್ಟು ಆಹಾರ ನೀರು ಬಿಟ್ಟು ಕೊರಗಿದ ಅನೇಕ ಆನೆಗಳ ಉದಾಹರಣೆಗಳಿವೆ. ಈ ಬಂಧ ನಿಜಕ್ಕೂ ಪದಗಳಿಗೆ ನಿಲುಕದ್ದು. ಈ ಭಾವ ಬಂಧ ಗಜಗೆಳೆತನ ಹೀಗೆ ಮುಂದುವರೆಯಲಿ.
ಅಣೆಕಟ್ಟು, ನೀರಾವರಿ ಯೋಜನೆಗಳು, ಜನವಸತಿ, ಹೆದ್ದಾರಿ, ರೈಲ್ವೇ ಮಾರ್ಗಗಳಂತಹ ಅಭಿವೃದ್ಧಿ ಯೋಜನೆಗಳಿಂದ ಕಡಿಮೆಯಾಗುತ್ತಿರುವ ಅರಣ್ಯ ಪ್ರದೇಶ, ಕಾಡಿನ ಸುತ್ತಮುತ್ತಲಿನ ಕೃಷಿ ಪದ್ಧತಿ, ಒತ್ತುವರಿ, ಗಣಿಗಾರಿಕೆ, ಅರಣ್ಯ ಸಂಪತ್ತಿನ ಕಳ್ಳಸಾಗಣೆ, ಕಾಡ್ಗಿಚ್ಚು, ಜಾನುವಾರುಗಳ ಮೇವಿಗಾಗಿ ಕಾಡಿನ ಅವಲಂಬನೆ, ಸ್ಥಳೀಯ ಜನಪ್ರತಿನಿಧಿಗಳ ಜಾಣಕುರುಡು, ಸರ್ಕಾರಗಳ ಜಿಡ್ಡುಗಟ್ಟಿದ ಅವೈಜ್ಞಾನಿಕ ಯೋಜನೆಗಳು ಇನ್ನೂ ಹಲವಾರು ಕಾರಣಗಳಿಂದ ನಶಿಸುತ್ತಿರುವ ಕಾಡುಗಳಿಂದ ವನ್ಯಜೀವಿಗಳು ನಾಡಿಗೆ ಬರುತ್ತಿವೆ. ಮರಗಳ ನಾಶದಿಂದಾಗಿ ಆನೆಗಳಿಗೆ ಆಹಾರದ ಕೊರತೆಯಾಗಿ ಊರುಗಳಿಗೆ ಬರುತ್ತಿವೆ. ಇದರಿಂದಾಗಿ ಮಾನವ ಮತ್ತು ಆನೆಗಳ ಸಂಘರ್ಷ ಆಗುತ್ತಿದೆ. ಇದನ್ನು ತಪ್ಪಿಸಲು ಕಾಡುಗಳಲ್ಲಿ ಸಾಕಷ್ಟು ಆಹಾರ, ನೀರು ಲಭ್ಯವಾಗುವಂತಹ ಕಾರ್ಯಗಳನ್ನು ಮಾಡಬೇಕು. ಅರಣ್ಯಕ್ಕೆ ಹೊಂದಿಕೊಂಡ ಕೃಷಿ ಭೂಮಿಯ ಸುತ್ತ ಬೇಲಿ ನಿರ್ಮಾಣ, ಆನೆಗಳ ಚಲನವಲನದ ಮೇಲೆ ನಿಗಾ ಇಡುವ ವ್ಯವಸ್ಥೆ ಮಾಡಬೇಕು. ಅರಣ್ಯ ಸಿಬ್ಬಂದಿಗಳನ್ನು ಹೆಚ್ಚಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಪರಿಣಾಮಕಾರಿಯಾಗಿ ಆಗಬೇಕು.