- ಅರ್ಜಿ ಶುಲ್ಕದ ಜೊತೆ ಶೇ.18 ಜಿಎಸ್‌ಟಿ ವಸೂಲಿಗೆ ತೀವ್ರ ವಿರೋಧ
- ನಿರುದ್ಯೋಗಿಗಳಿಗೆ ಗಾಯದ ಮೇಲೆ ಬರೆ ಎಳೆದಂತೆ: ಡಿವೈಎಫ್‌ಐ
ಬೆಂಗಳೂರು: ಸರಕು ಮತ್ತು ಸೇವೆಗಳಿಗೆ ಜಿಎಸ್‌ಟಿ ವಿಧಿಸುವುದು ಸರಿ. ಆದರೆ ಸರಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗಲೂ ಶೇ. 18 ರಷ್ಟು ತೆರಿಗೆ ಕಟ್ಟಬೇಕು ಎಂಬ ಸಂಗತಿ ಇಲ್ಲಿಯ ತನಕ ಯಾರೂ ಕಂಡು ಕೇಳರಿಯದ ಸಂಗತಿ. ತೆರಿಗೆ ವಸೂಲಿ ಈ ಹೊಸ ವಿಧಾನ ಎಲ್ಲರನ್ನೂ ದಂಗುಬಡಿಸಿದೆ.
ಒಂದೆಡೆ ಕೇಂದ್ರ ಸರಕಾರ, ರಾಜ್ಯ ಸರಕಾರಗಳ ಪಾಲಿನ ಜಿಎಸ್‌ಟಿ ಕೊಡಲು ಮೀನಮೇಷ ಎಣಿಸುತ್ತಿದೆ. ಮತ್ತೊಂದಡೆ ಸರಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಶುಲ್ಕದ ಜತೆ ಜಿಎಸ್‌ಟಿ ಪಾವತಿ ಕಡ್ಡಾಯಗೊಳಿಸಿರುವುದು ಅಭ್ಯರ್ಥಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸರಕು ಹಾಗೂ ಸೇವೆಗಳಿಗೆ ಜಿ ಎಸ್ ಟಿ ಯನ್ನು ಕಟ್ಟುವುದು ಸರಿ. ಆದರೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ತೆರಿಗೆ ಕಟ್ಟಲೇಬೇಕು ಎಂಬ ನಿಯಮ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಅಘಾತ ಉಂಟು ಮಾಡಿದೆ.
ಜುಲೈ 31ರಂದು ಕರ್ನಾಟಕ ಲೋಕಸೇವಾ ಆಯೋಗವು ನಾಗರಿಕ ಸೇವೆಗಳ ಸಿ ಗ್ರೂಪ್‌ನ ತಾಂತ್ರಿಕೇತರ ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆ.20ರಿಂದ ಅರ್ಜಿ ಸ್ವೀಕಾರ ಆರಂಭವಾಗಿದ್ದು, ಸೆ.19, ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿದೆ. ಸೆ.21ರೊಳಗೆ ಶುಲ್ಕ ಪಾವತಿಸಬೇಕಿದೆ. ಆದರೆ, ಅರ್ಜಿ ಸಲ್ಲಿಸುವ ಪ್ರತಿಯೊಬ್ಬರೂ ಶೇ.18ರಷ್ಟು ಜಿಎಸ್‌ಟಿ ಪಾವತಿಸಲು ಸೂಚಿಸಲಾಗಿದೆ.
ರಾಜ್ಯ ಸರಕಾರಿ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ನಾನಾ ಹುದ್ದೆಗಳಿಗೆ ಪ್ರತಿ ಬಾರಿ ಅರ್ಜಿ ಆಹ್ವಾನಿಸಿದ ವೇಳೆ ಅರ್ಜಿ ಶುಲ್ಕ, ಪ್ರಕ್ರಿಯೆ ಶುಲ್ಕ ಹೊರತುಪಡಿಸಿದರೆ ಬೇರೆ ಯಾವೊಂದೂ ಶುಲ್ಕ ಪಾವತಿಸುವ ಅಗತ್ಯವಿರಲಿಲ್ಲ.
ಗಾಯದ ಮೇಲೆ ಬರೆ ಎಳೆದಂತೆ: ಡಿವೈಎಫ್ಐ
ಅರ್ಜಿ ಶುಲ್ಕದ ಜೊತೆ ಜಿಎಸ್‌ಟಿ ಶುಲ್ಕ ವಸೂಲಿ ಮಾಡುವುದನ್ನು ಗಾಯದ ಮೇಲೆ ಬರೆ ಎಳೆದಂತೆ. ಇದು ನಾಗರಿಕ ಸರ್ಕಾರ ನಡೆದುಕೊಳ್ಳುವ ಕ್ರಮವಲ್ಲ. ಅರ್ಜಿ ಜೊತೆ ಎಲ್ಲಾ ರೀತಿಯ ಶುಲ್ಕ ಪಡೆಯುವುದನ್ನೇ ಕೈಬಿಡಬೇಕು ಎಂದು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರತಿಕ್ರಿಯಿಸಿದ್ದಾರೆ.
ಜನಶಕ್ತಿ ಮೀಡಿಯಾಕ್ಕೆ ಫೋನ್‌ನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಉದ್ಯೋಗ ಬಯಸಿ ಅರ್ಜಿ ಸಲ್ಲಿಸುವಾಗ ಯಾವುದೇ ರೀತಿಯ ಶುಲ್ಕ ಸಂಗ್ರಹಿಸುವುದನ್ನು ಡಿವೈಎಫ್‌ಐ ವಿರೋಧಿಸುತ್ತದೆ. ಅದರಲ್ಲೂ ಉದ್ಯೋಗ ಬಯಸುವವರು ನಿರುದ್ಯೋಗಿಗಳೇ ಆಗಿರುತ್ತಾರೆ. ಅವರು ಉದ್ಯೋಗವಿಲ್ಲದೆ ಕಷ್ಟದಲ್ಲಿರುವವರ ಬಳಿ ಶುಲ್ಕವನ್ನೇ ಸಂಗ್ರಹಿಸಬಾರದು ಎಂಬುದು ಡಿವೈಎಫ್‌ಐನ ಒತ್ತಾಯ. ಹಾಗಿರುವಾಗ ಜಿಎಸ್‌ಟಿ ಶುಲ್ಕ ವಿಧಿಸುವುದು ಗಾಯದ ಮೇಲೆ ಬರೆ ಎಳೆದಂತೆ. ಇದು ನಾಗರಿಕ ಸರ್ಕಾರ ನಡೆದುಕೊಳ್ಳುವ ರೀತಿಯಲ್ಲ. ಸರ್ಕಾರದ ಈ ಕ್ರಮವನ್ನು ಒಪ್ಪಲಾಗದು. ಒಟ್ಟಾರೆ ಶುಲ್ಕ ಪಡೆಯುವುದನ್ನೇ ಕೈಬಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.