ಭಾರತದ ಆರ್ಥಿಕತೆಗೆ ಹುಲಿಗಳ ಕೊಡುಗೆ ಶೂನ್ಯವೇ!?

ಯಾವುದೇ ಪ್ರಾಣಿಗಳ ಸಾವು ಖಂಡನೀಯ. ಅದರ ಸೂಕ್ತ ತನಿಖೆ ಆಗಿ ಕಾರಣರಾದವರಿಗೆ ಶಿಕ್ಷೆ ಆಗಬೇಕು, ಹುಲಿಗಳಿಂದ ದೇಶದ ಅಥವಾ ರಾಜ್ಯದ ಬೊಕ್ಕಸಕ್ಕೆ ಅಥವಾ ದೇಶದ ಆರ್ಥಿಕತೆಗೆ ಏನು ಕೊಡುಗೆ ಇದೆ? ಅವುಗಳ ರಕ್ಷಣೆಗೆ ಖರ್ಚು ಮಾಡುವುದು ಜಾಸ್ತಿಯಲ್ಲವೇ? ಅನೇಕರು ಈ ಪ್ರಶ್ನೆಯನ್ನು ಸ್ವೀಕರಿಸಲೂ ಸಾಧ್ಯವಿಲ್ಲ. ನಾವು ಬೆಳೆದುಕೊಂಡು ಬಂದ ಪರಿಸರವೇ ಇದಕ್ಕೆ ಕಾರಣ. ಹುಲಿಗಳು ಸಾರ್ವಜನಿಕ ಹಣವನ್ನು ಹೀರುವ ಬಿಳಿಯಾನೆಗಳೋ ಅಥವಾ ಪ್ರತ್ಯಕ್ಷವಾಗಿ ಅಥವಾ ಅಪ್ರತ್ಯಕ್ಷವಾಗಿ ಪ್ರಕೃತಿಯ ಸಮತೋಲನ ಜೀವ ವೈವಿಧ್ಯ, ಆಹಾರ ಸರಪಳಿ ಇತ್ಯಾದಿಗಳಿಗೆ ನೀಡಿರುವ ಕೊಡುಗೆಯ ಕಡೆಗಣನೆ ಆಗುತ್ತಿದೆಯೇ ಎಂಬ ಬಗ್ಗೆ ವಾಸ್ತವಿಕತೆಯ ಜಿಜ್ಞಾಸೆ ಆಗಬೇಕು. ಹುಲಿ ಆಧಾರಿತ ಪ್ರವಾಸೋಧ್ಯಮದಿಂದ ಅವುಗಳ ಸ್ವಯಂ ನಿರ್ವಹಣೆ ಆಗುತ್ತಿದ್ದರೆ ಅಥವಾ ಸಾರ್ವಜನಿಕ ತೆರಿಗೆಯ ಬಿಡಿಕಾಸು ಖರ್ಚಾಗದೇ ಸ್ವಂತ ಅನುದಾನದಲ್ಲಿ ಹುಲಿಗಳ ಪಾಲನೆ ಮತ್ತು ಪೋಷಣೆ, ಸಂರಕ್ಷಣೆ ನಡೆಯುತ್ತಿದೆ ಎಂದರೆ ಸಾರ್ವಜನಿಕರು ಕೇಳಲು ಹಕ್ಕು ಹೊಂದಿಲ್ಲ. ಆದರೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಖರ್ಚು ಮಾಡಿದಾಗ ಅದಕ್ಕೆ ಉತ್ತರದಾಯಿತ್ವದ ನಿರೀಕ್ಷೆ ಸಹಜ. ಸಾರ್ವಜನಿಕರು ಮುಂದಿಡುವ ಪ್ರಶ್ನೆಗಳಿಗೆ ಉತ್ತರಿಸಿದರೇ ಹೋಗುವುದು ನಿರುಂಕಶ ಮನೋಭಾವ. ಆರ್ಥಿಕತೆ

-ಡಾ. ಎನ್. ಬಿ. ಶ್ರೀಧರ

ಕಾನೂನು ಏನು ಹೇಳುತ್ತದೆ?

ವನ್ಯಜೀವಿ (ರಕ್ಷಣೆ) ಕಾಯ್ದೆ, 1972 ರ ಪ್ರಕಾರ ಕ್ರಿಮಿಕೀಟಗಳನ್ನು ಹೊರತು ಪಡಿಸಿ ಕಾಡಿನಲ್ಲಿ ಯಾವುದೇ ಮಾಲಕನಿಲ್ಲದೇ ಬದುಕುವ ಕಾಡು ಪ್ರಾಣಿಗಳನ್ನು ಬೇಟೆಯಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅಲ್ಲದೇ ಈ ಕಾಯ್ದೆಯ ಸೆಕ್ಷನ್ ೯ ಉಪನಿಯಮ I ರ ಪ್ರಕಾರ ಹುಲಿ, ಆನೆ, ಚಿರತೆ, ಘೇಂಡಾಮೃಗಗಳಂತಹ ಬೇಟೆಯನ್ನು ಸಂಪೂರ್ಣವಾಗಿ ನಿಶೇಧಿಸಲಾಗಿದ್ದು ಇದಕ್ಕೆ ಕನಿಷ್ಠ 3-೭ ವರ್ಷಗಳ ಜೈಲು ಶಿಕ್ಷೆ , ₹10,000-₹50,000ರವರೆಗಿನ ದಂಡ ಮತ್ತು ಪುನರಾವರ್ತಿತ ಅಪರಾಧಕ್ಕೆ ಕನಿಷ್ಠ 7 ವರ್ಷ ಜೈಲು ಶಿಕ್ಷೆ ಮತ್ತು ₹25,000 ದಂಡ ಇತ್ಯಾದಿ ಕಠಿಣ ಶಿಕ್ಷೆ ಇದೆ. ಭಾರತದಲ್ಲಿ ಪರಿಸರ ಅಸಮತೋಲನ ಮತ್ತು ಅಳಿವನ್ನು ತಡೆಗಟ್ಟಲು, ಈ ಪ್ರಾಣಿಗಳ ಸಂಖ್ಯೆ ಹೆಚ್ಚಿದ್ದರೂ ಸಹ, ಕಾಡು ಪ್ರಾಣಿಗಳನ್ನು ಕೊಲ್ಲುವುದನ್ನು ನಿರ್ಬಂಧಿಸಲಾಗಿದೆ. ಆರ್ಥಿಕತೆ

ಭಾವನಾತ್ಮಕಕ್ಕಿಂತ ವಾಸ್ತವಿಕ ವಿಷಯ ಮುಖ್ಯ

ಹುಲಿಗಳು ಕಾಡಿನಲ್ಲಿ ಇರದಿದ್ದರೆ ಸಸ್ಯಹಾರಿ ಪ್ರಾಣಿಗಳ ಸಂಖ್ಯೆ ಜಾಸ್ತಿಯಾಗಿ ಅಸಮತೋಲನವುಂಟುಗತ್ತದೆ ಎನ್ನಲಾಗಿದೆ. ಅರಣ್ಯ ಪರಿಸರದಲ್ಲಿ ಜೀವ ವೈವಿಧ್ಯದ ಸಮತೋಲನ ಕಾಪಾಡಲು ಹುಲಿಗಳು ಅಗತ್ಯ ಎಂಬುದನ್ನು ಎಂದಿನಂತೆ ನಮ್ಮ ಮುಂದಿನ ಪೀಳಿಗೆ ಇವುಗಳನ್ನು ಫೋಟೋದಲ್ಲಿ ನೋಡಬೇಕಾಗುತ್ತದೆ ಎಂದು ಭಾವನಾತ್ಮಕವಾಗಿ ಹೇಳಲಾಗಿದೆಯೇ ನಿಖರ ಅಂಕಿ ಅಂಶಗಳ ಮೂಲಕ ಯಾರೂ ಹೇಳಿಲ್ಲ. ಆರ್ಥಿಕತೆ

ದೇಶದಲ್ಲಿ ಎಷ್ಟು ಹುಲಿಗಳಿವೆ, ಎಷ್ಟು ಜಿಂಕೆಗಳಿವೆ, ಎಷ್ಟು ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆ ಜಾಸ್ತಿಯಾಗಿದೆ? ಅದನ್ನು ಕಡಿಮೆಗೊಳಿಸಲು ಅದೆಷ್ಟು ಹುಲಿಗಳ ಅವಶ್ಯಕತೆ ಇದೆ ಎಂಬ ಬಗ್ಗೆ ಯಾವುದೇ ಅಂಕಿ ಅಂಶಗಳಿಲ್ಲ. ಹುಲಿ ರಾಷ್ಟ್ರೀಯ ಪ್ರಾಣಿ ಎಂಬುದು ಒಂದು ಭಾವನಾತ್ಮಕವಾದ ವಿಷಯ. ಅದರ ಸಂರಕ್ಷಣೆಗೆ ಇಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡುವಷ್ಟು ನಮ್ಮ ದೇಶ ಶ್ರೀಮಂತವೇ? ಹುಲಿಗಳ ರಕ್ಷಣೆಗೆ ವೇದಿಕೆಯ ಮೂಲಕ ಭಾಷಣ ಮಾಡುವವರು ಮತ್ತು ದೊಡ್ಡ ದೊಡ್ಡ ಪುಸ್ತಕ ಬರೆಯುವವರು ಈ ಕುರಿತು ನೈಜ ಚಿತ್ರಣ ನೀಡುವಲ್ಲಿ ವಿಫಲರಾಗಿದ್ದಾರೆ ಎನ್ನಬಹುದು. ಆರ್ಥಿಕತೆ

ಇದನ್ನೂ ಓದಿ: ದೇವನಹಳ್ಳಿ | ಚನ್ನರಾಯಪಟ್ಟಣ ಭೂ ಸ್ವಾಧೀನ ರೈತರಿಗೆ ನೋಟಿಸ್‌ ನೀಡಿದ ಕೆಐಎಡಿಬಿ ಅಧಿಕಾರಿಗಳು

ಹುಲಿಗಳು ಜೀವವೈವಿಧ್ಯ ಕಾಪಾಡಲು. ಪೃಕೃತಿಯಲ್ಲಿರಬೇಕು. ಆದರೆ ಸಾಮಾನ್ಯ ತೆರಿಗೆದಾರರ ಹಣವನ್ನು ಅವುಗಳ ರಕ್ಷಣೆಯ ಕುರಿತು ಹೋಗುತ್ತದೆ, ಸರ್ಕಾರಗಳು ಅದೆಷ್ಟು ಖರ್ಚು ಮಾಡುತ್ತಿವೆ, ಎಷ್ಟು ಹುಲಿಗಳು ಜಾಸ್ತಿ ಆಗಿವೆ ? ಎಂಬ ಬಗ್ಗೆ ಮಾಹಿತಿ ಅಗತ್ಯ. ಹೆಚ್ಚುತ್ತಿರುವ, ಕಾಡು ಕೋಣ, ಜಿಂಕೆ, ಇತರ ಸಸ್ಯಾಹಾರಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಇತರ ಅಗ್ಗದ ಮಾರ್ಗಗಳು ಯಾವವೂ ಇಲ್ಲವೇ? ಹುಲಿಗಳ ಹೆಚ್ಚಿದ ಸಂಖ್ಯೆಯಿಂದ ಮಾತ್ರ ಇದಕ್ಕೆ ಪರಿಹಾರ ಸಾಧ್ಯವೇ?

ಪರ್ಯಾಯ ಮಾರ್ಗಗಳೇನು? ಹುಲಿಗೆ ಕೊಡುತ್ತಿರುವ ಆಧ್ಯತೆ ಜಾಸ್ತಿಯಾಗುತ್ತಿದೆಯೇ? ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ತಿದ್ದುಪಡಿಗಳಾಗಬೇಕೆ? ಎಂಬೆಲ್ಲಾ ವಿಷಯಗಳ ಬಗೆಗೂ ಸಹ ಚರ್ಚೆ ಅಗತ್ಯ. ಕಾಡು ಪ್ರಾಣಿಯ ಜೀವಕ್ಕೆ ಜಾಸ್ತಿ ಬೆಲೆ, ನಾಡಪ್ರಾಣಿಗಳ ಜೀವಕ್ಕೆ ಕಡಿಮೆ ಬೆಲೆ ಎಂಬುದು ಪ್ರಾಣಿಗಳಲ್ಲೇ ಮಾಡುವ ಜಾತಿ ಬೇಧವೇ? ಹುಲಿಯಂತ ಕೆಲವೊಂದು ಪ್ರಾಣಿಗಳಿಗೆ ವಿಐಪಿ ಸ್ಥಾನಮಾನ, ಸಾಕು ಪ್ರಾಣಿಗಳಿಗೆ ನೋವಿಲ್ಲದೇ ಸಾಯುವ ಹಕ್ಕೂ ಇಲ್ಲದಿರದಿರುವುದು ಪ್ರಾಣಿಗಳಲ್ಲಿಯೇ ಮಾಡುತ್ತಿರುವ ತಾರತಮ್ಯವೇ? ಎಂಬ ಬಗ್ಗೆಯೂ ಸಹ ನೈಜ ಪ್ರಾಣಿಪ್ರಿಯರು ವಿಚಾರ ಮಾಡಬೇಕಿದೆ. ಆರ್ಥಿಕತೆ

ಹುಲಿಗಳ ಸಮರ್ಥಕರ ವಾದ

“ನಮ್ಮ ಮನೆಯಲ್ಲಿ ನಲ್ಲಿ ತಿರುಗಿಸಿದ ತಕ್ಷಣ ನೀರು ಬರುತ್ತದೆ. ನಮ್ಮ ನಲ್ಲಿಯಲ್ಲಿ ನೀರು ಬರಬೇಕು ಎಂದರೆ, ದೂರದ ಕಾಡಿನಲ್ಲಿ ಹುಲಿ ಇರಬೇಕು. ಅಂದರೆ, ನಮ್ಮ ಅಳಿವು ಮತ್ತು ಉಳಿವು ಹುಲಿಯ ಅಸ್ತಿತ್ವದ ಜೊತೆಗೆ ನೇರ ಸಂಬಂಧ ಹೊಂದಿದೆ. ಹುಲಿ ತಾನು ವಾಸಿಸುವ ಕಾಡಿನ ಉಳಿದೆಲ್ಲ ಜೀವಿಗಳ ಸಂಖ್ಯೆಯನ್ನೂ ನಿಯಂತ್ರಿಸುತ್ತದೆ. ವಿಶೇಷವಾಗಿ ಜಿಂಕೆ, ಕಡವೆ ಮತ್ತು ಕಾಡೆಮ್ಮೆ, ಕೆಲವೊಮ್ಮೆ ಆನೆ ಮರಿಗಳನ್ನೂ ಬೇಟೆಯಾಡುವ ಮೂಲಕ ಅವುಗಳ ಸಂಖ್ಯೆ ಹೆಚ್ಚಾಗದಂತೆ, ಆ ಮೂಲಕ ಕಾಡಿನ ಸಸ್ಯ ಸಂಪತ್ತು ನಾಶವಾಗದಂತೆ ತಡೆಯುತ್ತದೆ. ಆರ್ಥಿಕತೆ

ಒಂದೊಮ್ಮೆ ಸಸ್ಯಹಾರಿ ಪ್ರಾಣಿಗಳ ಸಂಖ್ಯೆ ಹೆಚ್ಚಾಗಿಬಿಟ್ಟರೆ, ಹುಲ್ಲು ಮತ್ತು ಇತರೆ ಸಣ್ಣ ಪುಟ್ಟ ಗಿಡಗಳನ್ನು ಅವು ಸಿಕ್ಕಾಪಟ್ಟೆ ತಿಂದು ಹಾಕಿ, ಮಳೆ ಬಂದಾಗ ಮಣ್ಣಿನ ಸವಕಳಿ ಹೆಚ್ಚಾಗಿಬಿಡುತ್ತದೆ. ಕಾಡು ಕ್ರಮೇಣ ನಾಶವಾಗುತ್ತಾ, ಮಳೆಯನ್ನು ಹಿಡಿದಿಡುವ ಸಾಮರ್ಥ್ಯ ಕಳೆದುಕೊಂಡು ಬಿಡುತ್ತದೆ. ಆದ್ದರಿಂದ ಸಸ್ಯಹಾರಿ ಪ್ರಾಣಿಗಳನ್ನು ಮತ್ತು ಸಸ್ಯ ಸಂಕುಲವನ್ನು ಸಮತೋಲನದಲ್ಲಿ ಇಡಲು ಹುಲಿ ಪ್ರಮುಖ ಪಾತ್ರ ವಹಿಸುತ್ತದೆ” ಎನ್ನುವ ಹುಲಿಪ್ರಿಯರ ವಾದ ಇದೆಲ್ಲಾ ಮೇಲ್ನೋಟಕ್ಕೆ ನಿಜ ಅನಿಸಿಬಿಡುತ್ತದೆ. ಆದರೆ ಈ ಕುರಿತು ಯಾರೂ ಸಹ ಯಾವ ಅಧ್ಯಯನವನ್ನೂ ಸಹ ಮಾಡಿಲ್ಲ. ಕೇವಲ ಊಹೆಯ ಭಾವನಾತ್ಮಕ ಕಥನ ಇದು.

ಹುಲಿಗಳ ವೈಭವೀಕರಣಕ್ಕೆ ಯಾರು ಕಾರಣ? ಬದಲೀ ವ್ಯವಸ್ಥೆ ಸಾಧ್ಯವೇ?

ಹುಲಿಯೂ ಸೇರಿದಂತೆ ಯಾವ ಪ್ರಾಣಿಯದೂ ಸಾವಾಗಬಾರದು. ಹುಲಿಗಳ ಸಾವು ಸಮ್ಚಲನವನ್ನೇ ಸೃಷ್ಟಿಸಿಬಿಡುತ್ತದೆ. ಅದೇ ಜಾನುವಾರುಗಳು, ಎಮ್ಮೆಗಳು, ಕುರಿಗಳು, ಅಡುಗಳು ನೂರಾರು ಸಂಖ್ಯೆಯಲ್ಲಿ ಸತ್ತರೂ ಸಹ ಅದೊಂದು ಸುದ್ಧಿಯಾಗುವುದೇ ಇಲ್ಲ. ಇವುಗಳ ಮರಣೋತ್ತರ ಪರೀಕ್ಷೆಗೆ ರೋಗಶಾಸ್ತ್ರಜ್ಞರು ಅಷ್ಟೊಂದು ಉತ್ಸಾಹ ತೋರುವುದಿಲ್ಲ. ಹುಲಿಗಳು ವಿಐಪಿ ಪ್ರಾಣಿಗಳು. ವನ್ಯಜೀವಿ ರಕ್ಷಣಾ ಕಾಯ್ದೆಯಡಿ ಅವುಗಳಿಗೆ ರಕ್ಷಣೆ ಇದೆ. ಇವುಗಳ ರಕ್ಷಣೆ ಅಥವಾ ಚಿಕಿತ್ಸೆ ಎರಡೂ ಸಹ ಮಾಧ್ಯಮದ ಗಮನ ಸೆಳೆಯುತ್ತವೆ. ಆರ್ಥಿಕತೆ

ಅರಣ್ಯ ಇಲಾಖೆಗೆ ಹುಲಿ ಸಿಂಹಗಳ ರಕ್ಷಣೆಗೆಂದೇ ತೆರಿಗೆದಾರರ ಹಣದಿಂದ ಸಾವಿರಾರು ಕೋಟಿ ನೀಡಲಾಗುತ್ತದೆ. ಜೀವ ವೈವಿದ್ಯ ಕಾಪಾಡಬೇಕು ಮತ್ತು ಮುಂದಿನ ಪೀಳಿಗೆ ಕೇವಲ ಫೋಟೋದಲ್ಲಿ ಇವುಗಳನ್ನು ನೋಡುವ ಹಾಗಾಗಬಾರದು ಎಂಬುದು ಹಿಂದಿನ ಆಶಯ. ಅದೇ ಬಡವರ ಬದುಕಿನ ಜೀವನಾಡಿಯಾಗಿರುವ ಹಸು ಎಮ್ಮೆ, ಕುರಿ, ಆಡು, ಸಾಕುವ ಪಶುಪಾಲಕರ ಹಿತಕಾಯುವ ಮತ್ತು ರಾಜ್ಯದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುವವರಿಗೆ ನೀಡುವ ಪ್ರಾಶಸ್ತ್ಯ ಅಷ್ಟಕ್ಕಷ್ಟೆ. ನಾಯಿಯೂ ಸೇರಿದಂತೆ ಎಲ್ಲಾ ಪ್ರಾಣಿಗಳಿಗೂ ಸಹ ಸಮನಾದ ಬದುಕುವ ಹಕ್ಕಿದೆ, ಅವುಗಳನ್ನು ಕರುಣೆಯಿಂದ ನೋಡಬೇಕು ಎನ್ನುತ್ತಾರೆ ಪ್ರಾಣಿಪ್ರಿಯ ಸಂಘಟನೆಗಳು. ಆರ್ಥಿಕತೆ

ಹಾಗಿದ್ದರೆ ಹುಲಿಗಳಿಗೆ ಮಾತ್ರ ಸಾಮಾನ್ಯ ತೆರಿಗೆದಾರರ ಹಣದಲ್ಲಿ ರಾಜಾತಿತ್ಯ? ಅವುಗಳಿಂದ ಪರಿಸರಕ್ಕೆ ಆಗುವ ಅನುಕೂಲವೇನು? ರಾಜ್ಯದ ಬೊಕ್ಕಸಕ್ಕೆ ಅವುಗಳ ಕೊಡುಗೆ ಎಷ್ಟು? ಅವುಗಳ ನಿರ್ವಹಣೆಯನ್ನು ತೆರಿಗೆದಾರರ ಹಣದ ಬದಲಾಗಿ ಖಾಸಗಿಯವರಿಗೆ ವಹಿಸುವುದು ಮತ್ತು ಪ್ರವಾಸೋಧ್ಯಮದ ಮೂಲಕ ಮಾಡಲಾಗದೇ? ಪಶುಚಿಕಿತ್ಸೆಗೂ ಹುಲಿಗಳಷ್ಟೇ ಖರ್ಚು ಮಾಡುವುದು ಯಾವಾಗ ಎನ್ನುವ ಉತ್ತರವಿಲ್ಲದ ಪ್ರಶ್ನೆ ಏಳುತ್ತದೆ. ಆರ್ಥಿಕತೆ

ಹುಲಿ ಸಂರಕ್ಷಣೆ ಮತ್ತು ತೆರಿಗೆದಾರರ ಹಣ !

ಪ್ರಪಂಚದ ಬೇರೆ ಬೇರೆ ದೇಶಗಳಿಗೆ ಹೋಲಿಸಿದಾಗ ಭಾರತ ಹುಲಿಗಳ ರಕ್ಷಣೆಗೆ ಖರ್ಚು ಮಾಡುವ ವೆಚ್ಚ ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು. ಇದು ತೆರಿಗೆದಾರರ ಹಣದಿಂದ ಎಂಬುದನ್ನು ಗಮನಿಸಬೇಕು. 2025–26ರ ಆಯವ್ಯಯದಲ್ಲಿ ಭಾರತ ಸರ್ಕಾರವು ₹290 ಕೋಟಿ ನಿರ್ದಿಷ್ಟವಾಗಿ ಹುಲಿ ಮತ್ತು ಆನೆ ಸಂರಕ್ಷಣೆ ಯೋಜನೆಗೆ ನಿಗದಿಪಡಿಸಿದೆ, ಇದು ಹಿಂದಿನ ವರ್ಷಕ್ಕಿಂತ 18% ಹೆಚ್ಚಾಗಿದೆ.ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವೂ ಸಹ ತನ್ನ ಅನುದಾನವನ್ನು 2023–24ರಲ್ಲಿ ₹15.8 ಕೋಟಿಯಿಂದ 2024–25ರಲ್ಲಿ ₹35 ಕೋಟಿಗೆ ದ್ವಿಗುಣಗೊಳಿಸಿದೆ. ಬಂಗಾಳ ಹುಲಿ ಸಂರಕ್ಷಣೆಯಲ್ಲಿ ಸಂಚಿತ ಹೂಡಿಕೆ 2.1 ಬಿಲಿಯನ್ ಡಾಲರ್ ಅಥವಾ ರೂ: ೨೦೦ ಕೋಟಿಗಳಿಗೂ ಮೀರಿದೆ. ಆರ್ಥಿಕತೆ

ಇಡೀ ಪ್ರಪಂಚದಲ್ಲಿ ಭಾರತದಷ್ಟು ಸಾರ್ವಜನಿಕ ತೆರಿಗೆ ಹಣವನ್ನು ವನ್ಯಜೀವಿ ರಕ್ಷಣೆಗೆ ಖರ್ಚು ಮಾಡುವ ಮತ್ತೊಂದು ದೇಶವಿಲ್ಲ. ಹುಲಿ ಸಂರಕ್ಷಣೆಗೆ ಪ್ರತಿ ವರ್ಷ ಖರ್ಚು ಮಾಡುವ ಮೊತ್ತ ಎಷ್ಟು ಗೊತ್ತೇ? ಬರೋಬ್ಬರಿ 17,500 ಕೋಟಿಗಳು !. ನಮ್ಮಲ್ಲಿರುವ ಹುಲಿಗಳ ಸಂಖ್ಯೆ 3682 ಮಾತ್ರ. 2024-25 ನೇ ಸಾಲಿನ ಅಂಕಿ ಅಂಶದ ಪ್ರಕಾರ ಒಂದು ಹುಲಿಯ ರಕ್ಷಣೆಗೆ ಆಗುವ ವೆಚ್ಚ ಪ್ರಕಾರ ರೂ: 70,62,428. ಇಲಾಖೆಯ ಆಡಳಿತ ವೆಚ್ಚ, ಅಧಿಕಾರಿಗಳ ವೇತನ, ಭತ್ತೆ, ವಾಹನ ಇಂಧನ ಇತ್ಯಾದಿ ಎಲ್ಲಾ ಸೇರಿದರೆ ಸರಾಸರಿ ಪ್ರತಿ ಹುಲಿಗೆ ಮಾಡುವ ಖರ್ಚು ರೂ: 4.75 ಕೋಟಿ !.

ಇದು ಸಣ್ಣ ಮೊತ್ತವೇ? ಶೇ: 27.1ರಷ್ಟು ಬಡತನದ ರೇಖೆಗಿಂತ ಕೆಳಗಿರುವ ಜನರನ್ನು ಹೊಂದಿದ್ದು ಮೂಲಭೂತ ಸೌಲಭ್ಯಗಳ ಕೊರತೆಯೇ ಎಲ್ಲೆಲ್ಲೂ ಎದ್ದು ಕಾಣುತ್ತಿರುವಾಗ ಹುಲಿ ಸಂರಕ್ಷಣೆಗೆ ಇಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡುವಷ್ಟು ನಾವು ಶ್ರೀಮಂತರಿದ್ದೇವೆಯೇ? ಅಥವಾ ಈ ಮೊತ್ತ ಸಂಬಂಧಿಸಿದವರಿಂದ ಅಪವ್ಯಯವಾಗುತ್ತಿದೆಯೇ? ಎಂಬೆಲ್ಲಾ ಸಂಶಯಗಳು ಸೂಕ್ಷ್ಮಗ್ರಾಹಿ ಜನರನ್ನು ಕಾಡುತ್ತಿವೆ.

ದೇಶಕ್ಕೆ ಪಶುಸಂಪತ್ತಿನ ಕೊಡುಗೆ

ಪರಿಸರ ಪ್ರಿಯರು ಸಮಸ್ಯೆಯ ಒಂದು ಮುಖವನ್ನು ಮಾತ್ರ ಎತ್ತಿ ತೋರಿಸುತ್ತಾರೆ. ದೇಶದ ಆರ್ಥಿಕತೆಗೆ ಆಕಳು ಮತ್ತು ಎಮ್ಮೆಗಳು ರೂ:12, 27, 766 ಕೋಟಿ ದುಡಿದು ಕೊಡುತ್ತವೆ. ದೇಶದ 2೦ ಮಿಲಿಯನ್ ಜನರಿಗೆ ಅದರಲ್ಲೂ ಮಹಿಳೆಯರಿಗೆ ಉದ್ಯೋಗವಾಗಿದೆ.

ನಮ್ಮ ದೇಶದಲ್ಲಿರುವ ಪ್ರತಿ ಜಾನುವಾರುಗಳ ಮೇಲೆ ಎಲ್ಲಾ ಮೂಲದ ಖರ್ಚು ಎಷ್ಟು ಗೊತ್ತೇ ವಾರ್ಷಿಕ ರೂ:3,062 ಕೋಟಿ ಮಾತ್ರ. ಅಂದರೆ ತಲಾ ಹಸು/ಎಮ್ಮೆಗೆ ಖರ್ಚು ಮಾಡುವುದು ಕೇವಲ ರೂ:೬೩ ಮಾತ್ರ. ಹುಲಿಗಳ ವಿಷಯವನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳದೇ ಅದಕ್ಕೆ ಅಂಕಿ ಅಂಶ ಗಮನಿಸಿದರೆ ವಿಚಾರ ಬದಲಾಗಬಹುದು.

ಬದಲಾಗುವುದು ಕಷ್ಟ !

ಬಾಲ್ಯದಿಂದಲೂ ನಮಗೆ ಹುಲಿ ರಾಷ್ಟ್ರೀಯ ಪ್ರಾಣಿ. ಅದರ ರಕ್ಷಣೆ ನಮ್ಮೆಲ್ಲರ ಹೊಣೆ. ಅರಣ್ಯದ ಜೀವವೈವಿಧ್ಯ ಕಾಪಾಡಲು ಹುಲಿ ಬೇಕೇ ಬೇಕು. ಹುಲಿ ಇಲ್ಲದಿದ್ದರೆ ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆ ಜಾಸ್ತಿಯಾಗಿ ಅವೆಲ್ಲಾ ಸಸ್ಯಗಳನ್ನೆಲ್ಲಾ ತಿಂದು ಹಾಕಿ ನಮಗೆ ಆಹಾರವೇ ದೊರಕಲಿಕ್ಕಿಲ್ಲ ಎಂಬ ವಿಷಯವನ್ನು ಒಂದನೇ ತರಗತಿಯಿಂದಲೇ ಹೇಳುತ್ತಿರುವುದರಿಂದ ಈ ಕುರಿತು ವಿಭಿನ್ನವಾಗಿ ಹೇಳಿದರೆ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಯಾರೂ ಇಲ್ಲ.

ಹುಲಿಗಳಿಂದ ಜಿಂಕೆಗಳ ನಿಯಂತ್ರಣ ಕಾಲ್ಪನಿಕ ?!

ಭಾರತದಲ್ಲಿ ಜಿಂಕೆಗಳ 9 ಪ್ರಮುಖ ಜಾತಿಗಳು (ಹುಲ್ಲೆ, ನೀಲಗಾಯ್ ಸೇರಿದಂತೆ) 12- 18 ಮಿಲಿಯನ್ ಜಿಂಕೆಗಳು (ಹೆಚ್ಚಿನವು ಚಿಟಲ್ ಮತ್ತು ಸಾಂಬಾರ್ ವರ್ಗದಿಂದ ಬಂದವು) ಇವೆ. ಸರಿ ಸುಮಾರು 5,000 ಜಿಂಕೆಗಳ ಸಂಖ್ಯೆಯನ್ನು ನಿಯಂತ್ರಿಸಲು (30% ವಾರ್ಷಿಕ ಬೆಳವಣಿಗೆಯೊಂದಿಗೆ) ಸುಮಾರು 20–30 ವಯಸ್ಕ ಹುಲಿಗಳು ಬೇಕಾಗುತ್ತವೆ ಮತ್ತು ಇದಕ್ಕೆ ೧೯೫-೨೦೦ ಕೋಟಿ ವ್ಯಯವಾಗುತ್ತದೆ.

ಇಷ್ಟೆಲ್ಲಾ ವೆಚ್ಚ ಭರಿಸಲು ಮಧ್ಯಮ ಉತ್ಪನ್ನ ಹೊಂದಿದ ಅಭಿವೃದ್ಧಿಶೀಲ ದೇಶವಾದ ಭಾರತದಲ್ಲಿ ಇತರ ಆಧ್ಯತೆಗಳ ಜೊತೆ ಹೋಲಿಸಿದಾಗ ಈ ಖರ್ಚು ಹೊರಲು ಸಾಧ್ಯವೇ ಎಂಬುದು ಪ್ರಶ್ನೆ. ಇಷ್ಟೆಲ್ಲಾ ಖರ್ಚು ಮಾಡಿಯೂ ಹುಲಿಗಳ ಸಂಖ್ಯೆ ವೃದ್ಧಿಸುತ್ತಿರುವುದು ಕೇವಲ ಶೇ ೮.೬೫ ರಷ್ಟು ಮಾತ್ರ. ಇತ್ತೀಚೆಗೆ ಆಹಾರದ ಕೊರತೆಯಿಂದ ಸಸ್ಯಾಹಾರಿ ವನ್ಯಜೀವಿಗಳ ಸಂಖ್ಯೆ ತಾನಾಗಿಯೇ ಕಡಿಮೆಯಾಗುತ್ತಿದೆ. ಇವುಗಳ ಸಂಖ್ಯೆ ಕಡಿಮೆಯಾಗಲು ಹುಲಿಗಳೇ ಬೇಕೆಂದೇನೂ ಇಲ್ಲ.

ಪರ್ಯಾಯ ಮಾರ್ಗಗಳು

1. ಹುಲಿಯ ಸಂರಕ್ಷಣೆಗೆ ಅಪಾರ ಖರ್ಚು ಮಾಡುವ ಬದಲು ಅದನ್ನು ಅದರ ಪಾಲಿಗೆ ನೈಸರ್ಗಿಕವಾಗಿ ಬಿಟ್ಟು ಕಡಿಮೆ ವೆಚ್ಚದಲ್ಲಿ ಸಂವರ್ಧನೆಗೊಳ್ಳಬಲ್ಲ ತೋಳ, ಕಿರುಬ, ಜಿಂಕೆಯನ್ನು ಬೇಟೆಯಾಡಬಲ್ಲ ಕೆಲವು ಜಾತಿಯ ಕರಡಿ ಇತ್ಯಾದಿ ಪ್ರಾಣಿಗಳನ್ನು ವರ್ಧಿಸುವುದು.

2. ಜಿಂಕೆ ಅಥವಾ ಇತರ ಸಸ್ಯಾಹಾರಿ ಪ್ರಾಣಿಗಳಲ್ಲಿ ಸಂತಾನಾಭಿವೃದ್ಧಿ ಕಡಿಮೆಯಾಗಲು ಔಷಧಿ ಅಥವಾ ಲಸಿಕೆ ನೀಡುವುದು.

3. ಆಫ್ರಿಕಾದ ಕೆಲವು ದೇಶಗಳಂತೆ ಶರತ್ತಿನ ಮೇಲೆ ಇಂತಿಷ್ಟೆ ಜಿಂಕೆಗಳನ್ನು ಬೇಟೆಯಾಡಬೇಕು ಮತ್ತು ಹೆಚ್ಚಿನ ಶುಲ್ಕ ನಿಗದಿ ಪಡಿಸಿ ಬೇಟೆಯಾಡಲು ವನ್ಯಜೀವಿ ಕಾಯ್ದೆಯಲ್ಲಿ ಬದಲಾವಣೆ ಮಾಡಿಕೊಂಡು ಅನುಮತಿ ನೀಡುವುದು. ಇದು ಅತ್ಯಂತ ಕಡಿಮೆ ವೆಚ್ಚದ್ದು ಮತ್ತು ಅತ್ಯಂತ ಪರಿಣಾಮಕಾರಿ ವಿಧಾನ. ಆದರೆ ಪ್ರಾಣಿ ಪ್ರಿಯರ ಕಣ್ಣು ಕೆಂಪಗಾಗಿಸುವುದು.

ನಮಿಬಿಯಾ, ದಕ್ಷಿಣ ಆಫ್ರಿಕಾ, ಟಾಂಜಾನಿಯಾ ,ಕೆನ್ಯಾ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ದೇಶಗಳಲ್ಲಿ ಕಾಡು ಮೃಗಗಳ ಸಂಖ್ಯೆ ಜಾಸ್ತಿಯಾದಾಗ ಅಥವಾ ಮೋಜು ಮಸ್ತಿಗಾಗಿಯೂ ಸಹ 11,000 – 65,00,00 ರೂ ವರೆಗೂ ಶುಲ್ಕ ವಿಧಿಸಿ ಬೇಟೆಯಾಡುವುದಕ್ಕೆ ಅವಕಾಶವಿದೆ. ಇದೊಂದು ಕ್ರೂರ‍ ವಿಧಾನವೆಂದು ಅನೇಕ ಪ್ರಾಣಿ ಸಂಘಟನೆಗಳು ತೀವ್ರವಾಗಿ ವಿರೋಧಿಸುತ್ತಿವೆ.

ಆದರೆ ಸಾಕು ಪ್ರಾಣಿಗಳಾದ ದನ, ಎಮ್ಮೆ, ಆಕಳು, ಕುರಿ, ಹಂದಿ, ಕೋಳಿ ಇವುಗಳನ್ನು ಸಹ ಮನುಷ್ಯನ ಸ್ವಾರ್ಥಕ್ಕಾಗಿಯೇ ವಧಿಸುವಾಗ ಇಲ್ಲದ ಕರುಣೆ, ಪ್ರೀತಿ ಕಾಡು ಪ್ರಾಣಿಗಳಿಗೆ ಅನ್ವಯಿಸಿದರೆ ಹೊರಟರೆ ಹೇಗೆ ಇದ್ದಕ್ಕಿದ್ದ ಹಾಗೆ ಉಕ್ಕಿ ಹರಿಯುತ್ತದೆ ಎಂಬುದು ಅರ್ಥವಾಗದ ವಿಷಯ. ಸ್ವಯಂ ಮಾಂಸಾಹಾರಿಗಳಾಗಿದ್ದರೂ ಸಹ ಅನೇಕರು ಇದ್ದಕ್ಕಿದ್ದ ಹಾಗೆ ಪ್ರಾಣಿ ಪ್ರೀತಿ ತೋರಿಸುವುದು ವಿರೋಧಾಭಾಸದ ವಿಷಯ. ಪೇಟಾದಂತ ಬಹುತೇಕ ಪ್ರಾಣಿ ಪ್ರಿಯ ಸಂಸ್ಥೆಗಳು ಸಂಪೂರ್ಣ ಸಸ್ಯಾಹಾರಿ ಸದಸ್ಯರನ್ನು ಹೊಂದಿದ್ದು ಅವರು ಮಾಂಸ, ಹಾಲು, ಮೊಟ್ಟೆ, ಜೇನುತುಪ್ಪ ಅಥವಾ ಪ್ರಾಣಿ ಮೂಲದ ವಸ್ತುಗಳನ್ನು ಸೇವಿಸುವುದಿಲ್ಲ ಮತ್ತು ಇವರನ್ನು ವೆಗಾನ್ ಎಂದು ಕರೆಸಿಕೊಳ್ಳುವುದರಿಂದ ಈ ಟೀಕೆಗೆ ಇವರು ಒಳಪಡುವುದಿಲ್ಲ.

ವನ್ಯ ಜೀವಿ ಆಧಾರಿತ ಪ್ರವಾಸೋಧ್ಯಮದ ಬೆಳವಣಿಗೆ

ರಶ್ಯಾ, ಪಾಕಿಸ್ತಾನ ಮತ್ತು ಆಫ್ರಿಕಾದ ಅನೇಕ ದೇಶಗಳು ಹುಲಿ ಆಧಾರಿತ ಪ್ರವಾಸೋಧ್ಯಮದ ಮೂಲಕ ಸ್ವಯಂ ನಿರ್ವಹಣೆಗೆ ಸಾಕಷ್ಟು ಆದಾಯ ಗಳಿಸುತ್ತವೆ. ಸಾರ್ವಜನಿಕರ ತೆರಿಗೆ ಹಣದಿಂದ ಅಲ್ಲಿ ಹುಲಿ ಸಂರಕ್ಷಣೆಗೆ ಹಣ ಹೋಗುವುದಿಲ್ಲ. ನಮ್ಮಲ್ಲಿಯೂ ಸಹ ಈ ಮಾದರಿ ಅವಶ್ಯ. ನಮ್ಮ ದೇಶದಲ್ಲಿ ಈ ಕೆಳಗಿನಂತೆ ಆದಾಯ ಸದ್ಯಕ್ಕೆ ಇದೆ.

ಹುಲಿ ಮೀಸಲು ಪ್ರದೇಶಗಳು ಪರಿಸರ ಪ್ರವಾಸೋದ್ಯಮದಿಂದ ದಿನಕ್ಕೆ ₹1.49 ಕೋಟಿ ಗಳಿಸುತ್ತವೆ,

*ಪ್ರಮುಖ 10 ಮೀಸಲು ಪ್ರದೇಶಗಳಿಂದ ವರ್ಷಕ್ಕೆ ₹545 ಕೋಟಿ ಆದಾಯವನ್ನು ನೀಡುತ್ತದೆ.

* ಪ್ರವಾಸೋದ್ಯಮ ಸಂಬಂಧಿತ ಚಟುವಟಿಕೆಗಳ ಮೂಲಕ ಕಾರ್ಬೆಟ್ ಟೈಗರ್ ರಿಸರ್ವ್, ಉತ್ತರಾಖಂಡ್ ಇದು ರಾಜ್ಯದ ಆರ್ಥಿಕತೆಗೆ ದಿನಕ್ಕೆ ₹1.5 ಲಕ್ಷಕ್ಕೂ ಹೆಚ್ಚು ಕೊಡುಗೆ ನೀಡುತ್ತದೆ.

*ಹುಲಿ ಕೇಂದ್ರಿತ ಪರಿಸರ ಪ್ರವಾಸೋದ್ಯಮವು ಅರಣ್ಯ ಮಾರ್ಗದರ್ಶಿಗಳು, ವಾಹನ ಚಾಲಕರು/ನಿರ್ವಾಹಕರು, ಅರಣ್ಯ ಕಾವಲುಗಾರರು, ಹೋಟೆಲ್ ಮಾಲೀಕರು, ಪ್ರವಾಸೋಧ್ಯಮ ಕಾರ್ಮಿಕರಂತ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುವುದರ ಮೂಲಕ ಅಪರೋಕ್ಷವಾಗಿ ಆರ್ಥಿಕತೆಗೆ ದಾರಿಯಾಗುತ್ತದೆ.
ಆದರೆ ಇದು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ. ಈ ಗಳಿಕೆ ಜಾಸ್ತಿಯಾಗಿ ಸಾರ್ವಜನಿಕ ತೆರಿಗೆ ಹಣದ ಬದಲು ಸ್ವಯಂ ನಿರ್ವಹಣಾ ಸಾಮರ್ಥ್ಯ ಬರಬೇಕು.

ಕೊನೆಯ ಮಾತು

ಅರಣ್ಯದ ಜೀವವೈವಿಧ್ಯ ಕಾಪಾಡಲು ಹುಲಿ ಬೇಕೇ ಬೇಕು. ಇದರ ಜೊತೆ ಹುಲಿ ಆಧಾರಿತ ಧಾಮಗಳು, ಪ್ರಾವಾಸಿ ಕಾಟೇಜುಗಳು, ಸಫಾರಿಗಳು ಆರ್ಥಿಕತೆಗೆ ಒತ್ತು ನೀಡಿದಲ್ಲಿ ತೆರಿಗೆದಾರರು,ಪ್ರಾಣಿ ಪ್ರೇಮಿಗಳು ಮತ್ತು ಬಹುಮುಖ್ಯವಾಗಿ ಎಲ್ಲಾ ಪ್ರಾಣಿಗಳು ಕ್ಷೇಮದಿಂದ ಬಾಳುವಂತಹ ವಾತಾವರಣ ನಿರ್ಮಾಣವಾಗುವ ದಿನ ಹತ್ತಿರ ಬರಬೇಕಿದೆ.

ಹಿತಮಿತವಾಗಿ ಚರ್ಚಿಸಿ ಸಮಾಧಾನದಿಂದ ಸಾಕು ಪ್ರಾಣಿಗಳೂ ಸೇರಿದಂತೆ ಎಲ್ಲಾ ಜೀವಿಗಳೂ ಸಹ ಭೂಮಿಗೆ ಅಗತ್ಯ ಎನ್ನುವುದನ್ನು ಅರಿತುಕೊಂಡು ಇದಕ್ಕೆ ಒದಗಿಸುವ ಸಾರ್ವಜನಿಕರ ತೆರಿಗೆ ಹಣ ಸದ್ವಿನಿಯೋಗವಾಗುವುದನ್ನು ಖಚಿತಪಡಿಸಿಕೊಳ್ಳಬೇಕಿರುವುದು ಇಂದಿನ ಅಗತ್ಯ. ಕುರುಡಾಗಿ ಏನೋ ಒಂದನ್ನು ಹಠ ಹಿಡಿದು ಸಾಧಿಸದೇ ವೈಜ್ಞಾನಿಕ ತಳಹದಿ, ನಿಖರ ಅಂಕಿ ಅಂಶ, ಸಕಾರಣ ಮತ್ತು ಕಡಿಮೆ ಸಾರ್ವಜನಿಕ ಹಣದ ವ್ಯಯ ಇವೆಲ್ಲಾ ಗಮನಿಸಿಕೊಂಡು ವಾಸ್ತವತೆಯ ತಳಹದಿಯ ಮೇಲೆ ಮುಂದಕ್ಕೆ ಸಾಗಬೇಕಿದೆ.

ಇದನ್ನೂ ನೋಡಿ: ಅಮೆರಿಕ ಮಣಿಸಿದ ಮಹಾನ್‌ ನಾಯಕ ಫಿಡೆಲ್‌ ಕ್ಯಾಸ್ಟ್ರೊ – ಕೆ.ಎಸ್.ರವಿಕುಮಾರ್Janashakthi Media

Donate Janashakthi Media

Leave a Reply

Your email address will not be published. Required fields are marked *