ಕಳೆದ 1000 ವರ್ಷದಲ್ಲಿ ಪ್ರಪಂಚದ ವೈಜ್ಞಾನಿಕ ಆವಿಷ್ಕಾರ ಜಗತ್ತಿಗೆ ಭಾರತದ ಕೊಡುಗೆಯೇನು ಎಂದು ಪ್ರಶ್ನಿಸಿಕೊಂಡರೆ ಉತ್ತರ ಶೂನ್ಯ ಎಂದರೆ ಬೇಸರ ಸಿಟ್ಟು ಎರಡೂ ಒಮ್ಮೆಯೇ ಬರುತ್ತದೆ. ಭಾರತೀಯರಾಗಿ ನಮಗೆ ನಮ್ಮ ದೇಶದ ಮೇಲೆ ಅಭಿಮಾನವಿರಲೇಬೇಕು. ಆದರೆ ಅದಕ್ಕೆ ಒಂದು ಕಾರಣವೂ ಇರಬೇಕಲ್ಲ. ಈ ಭೂಮಿಯಲ್ಲಿ ಹುಟ್ಟಿದರೆ ಸಾಕೇ? ನಮ್ಮ ದೇಶದ ಸಾಧನೆಗಳೂ ಮಾನದಂಡಗಳಾಗಬೇಕಲ್ಲವೇ? ನಮ್ಮ ದೇಶದವರು ಕಳೆದ 1000 ವರ್ಷಗಳಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಪ್ರಪಂಚದ ಜನರಿಗೆಲ್ಲಾ ಅನುಕೂಲವಾಗುವ ಕಂಡುಹಿಡಿದ ಒಂದು ಆವಿಷ್ಕಾರವಾದರೂ ಇರಬೇಕಲ್ಲ?.. ಇದಕ್ಕೆ ಉತ್ತರ ಸಿಕ್ಕರೆ ಪಾಶ್ಚಾತ್ಯ ಮೋಹ ಯಾಕೆ ಎಂಬ ಪ್ರಶ್ನೆಗೆ ಉತ್ತರ ದೊರೆಯಬಹುದು.
ಡಾ. ಎನ್. ಬಿ. ಶ್ರೀಧರ
ಸಾವಿರ ವರ್ಷಕ್ಕಿಂತ ಹಿಂದಿನ ಭಾರತದಲ್ಲಿ ಆವಿಷ್ಕಾರ ಹೇಗಿತ್ತು?
ಆದರೆ ಇದೇ 1500 ವರ್ಷಗಳ ಹಿಂದೆ ಭಾರತ ತಾಂತ್ರಿಕತೆಯ ತಾಣವಾಗಿತ್ತು ಎಂದರೆ ನಂಬಲೇಬೇಕು. ಶೂನ್ಯ (ಬ್ರಹ್ಮಗುಪ್ತ ಕ್ರಿ.ಪೂ. 1500–500), ಆಯುರ್ವೇದ ಚಿಕಿತ್ಸೆ (ಚರಕ ಕ್ರಿ.ಪೂ. 1000 ), ದಶಮಾನ ಪದ್ಧತಿ ( ಬೌಧಾಯನ, ಕ್ರಿ.ಪೂ. 600),ಅಪಸ್ತಂಬ , ಶಸ್ತ್ರ ಚಿಕಿತ್ಸೆ (ಸುಶ್ರುತ), ಅಣು ಸಿದ್ಧಾಂತ (ಕ್ರಿ.ಪೂ. 500, ಕಣಾದ), ಯೋಗ (ಕ್ರಿ.ಪೂ. 400, ಪತಂಜಲಿ), ಅರ್ಥಶಾಸ್ತ್ರ (ಕ್ರಿ.ಪೂ. 400, ಕೌಟಿಲ್ಯ), ಗಣಿತಶಾಸ್ತ್ರದಲ್ಲಿ ಶೂನ್ಯದ ಬಳಕೆ (ಕ್ರಿ.ಶ. 400, ಆರ್ಯಭಟ), ಖಗೋಳಶಾಸ್ತ್ರ (ಕ್ರಿ.ಪೂ. 300, ಆರ್ಯಭಟ), ದ್ವಿಮಾನ್ಯ ಸಂಖ್ಯೆ ಪದ್ಧತಿ (ಕ್ರಿ.ಪೂ. 200, ಪಿಂಗಲ) ಹೀಗೆ ಆವಿಷ್ಕಾರಗಳ ಕೊಡುಗೆಯ ಸಾಲೇ ನಮ್ಮ ಮುಂದಿದೆ. ಆದರೆ ನಂತರ ಅದೇನಾಯಿತೋ ಏನೋ. ಹಿಂದಿನ ಸಾವಿರ ವರ್ಷಗಳಲ್ಲಿ ಭಾರತದಲ್ಲಿ ಆವಿಷ್ಕಾರಗಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಾ ಈಗ ಶೂನ್ಯದಲ್ಲಿ ಬಂದು ನಿಂತಿದೆ.
ಇತರ ದೇಶಗಳ ಆವಿಷ್ಕಾರ
ಕಳೆದ ಸಹಸ್ರಮಾನದಲ್ಲಿ 1769ರಲ್ಲಿ, ಬ್ರಿಟನ್ನಿನ ಜೇಮ್ಸ್ ವಾಟ್ ಅವರು ‘ಆವಿಶಕ್ತಿಯ ಇಂಜಿನ್’, 1796ರಲ್ಲಿ, ಬ್ರಿಟನ್ನಿನ ಎಡ್ವರ್ಡ್ ಜೆನ್ನರ್ ಅವರು ‘ರೋಗ ನಿರೋಧಕ ಲಸಿಕೆ ‘, 1800ರಲ್ಲಿ, ಇಟಲಿನ ಅಲೆಸಾಂಡ್ರೋ ವೋಲ್ಟಾ ಅವರು ‘ವಿದ್ಯುತ್ ಬ್ಯಾಟರಿ’, 1820ರಲ್ಲಿ, 1831ರಲ್ಲಿ, ಬ್ರಿಟನ್ನಿನ ಮೈಕೆಲ್ ಫ್ಯಾರಡೇ ಅವರು ‘ವಿದ್ಯುತ್ ಉತ್ಪಾದಕ’, 1839ರಲ್ಲಿ, ಫ್ರಾನ್ಸ್ನ ಲೂಯಿಸ್ ಡಾಗುರೆ ಅವರು ‘ಛಾಯಾಗ್ರಹಣ’, 1846ರಲ್ಲಿ, ಅಮೆರಿಕನ ಎಲಿಯಾಸ್ ಹೋ ಅವರು ‘ಹೊಲೆಯುವ ಯಂತ್ರ’, 1876ರಲ್ಲಿ, ಅಮೆರಿಕದ ಅಲೆಕ್ಸಾಂಡರ್ ಗ್ರಾಹಮ್ ಬೆಲ್ ಅವರು ‘ದೂರವಾಣಿ’, 1879ರಲ್ಲಿ, ಅಮೆರಿಕದ ಥಾಮಸ್ ಆಲ್ವಾ ಎಡಿಸನ್ ಅವರು ‘ವಿದ್ಯುತ್ ಬಲ್’, 1885ರಲ್ಲಿ, ಜರ್ಮನಿನ ಕಾರ್ಲ್ ಬೆನ್ಜ್ ಅವರು ‘ಪೆಟ್ರೋಲ್ ವಾಹನ’, 1887ರಲ್ಲಿ, ಜರ್ಮನಿನ ಹೆನ್ರಿಚ್ ಹೆರ್ಟ್ಜ್ ಅವರು ‘ರೇಡಿಯೋ ತರಂಗಗಳು’, 1895ರಲ್ಲಿ, ಅಮೆರಿಕನ ಡಾರ್ಪಾ (ಅಮೆರಿಕದ ರಕ್ಷಣಾ ಇಲಾಖೆ) ‘ಇಂಟರ್‌ನೆಟ್ (ಆರ್ಪಾನೆಟ್)’ , 1973ರಲ್ಲಿ, ಅಮೆರಿಕದ ಮಾರ್ಟಿನ್ ಕೂಪರ್ ಅವರು ‘ಮೊಬೈಲ್ ಫೋನ್’ 1989ರಲ್ಲಿ, ಬ್ರಿಟನ್ನಿನ ಟಿಮ್ ಬರ್ನರ್ಸ್-ಲೀ ಅವರು ‘ವಿಶ್ವವ್ಯಾಪಿ ಜಾಲತಾಣ’ ಅನ್ನು ಆವಿಷ್ಕರಿಸಿದರು. ಆದರೆ ಈ ಅವಧಿಯಲ್ಲಿ ಭಾರತೀಯರ ಹೆಸರು ಎಲ್ಲಿಯೂ ಕೇಳಿ ಬರುವುದಿಲ್ಲ.
ಜನಸಂಖ್ಯೆ ಜಾಸ್ತಿ ಆವಿಷಾಕರಗಳು ಕಡಿಮೆ ಏಕೆ?
ಇತ್ತೀಚೆಗೆ ಭಾರತದ ಜನಸಂಖ್ಯೆ 146 ಕೋಟಿ ತಲುಪಿ ಪ್ರಪಂಚದಲ್ಲಿ ಪ್ರಥಮ ಸ್ಥಾನ ತಲುಪಿದರೂ ಸಹ ಭಾರತದ ಯಾರೂ ಸಹ ಈ ರೀತಿ ವೈಜ್ಞಾನಿಕ ಆವಿಷ್ಕಾರಗಳನ್ನು ಮಾಡಿಲ್ಲ ಎಂದರೆ ತಲೆ ತಗ್ಗಿಸುವ ಹಾಗಾಗುತ್ತದೆ. ಪ್ರಪಂಚದ ನೊಬೆಲ್ ಪ್ರಶಸ್ತಿಗಳ ಪಟ್ಟಿಯಲ್ಲಿ 146 ಕೋಟಿ ಜನ ಸಂಖ್ಯೆ ಹೊಂದಿದ ನಮ್ಮದು 1997.6ನೇ ಸ್ಥಾನವಾದರೆ ಲಕ್ಷ ಜನಸಂಖ್ಯೆಯನ್ನು ಹೊಂದಿದ ಪುಟ್ಟ ದೇಶ ಇಸ್ರೆಲ್ ಸ್ಥಾನ 13. ಇಷ್ಟೆಲ್ಲಾ ನಿರಂತರ ಯುದ್ಧಗಳ ನಂತರವೂ ಸಹ ಇಸ್ರೆಲ್ ಆರ್ಥಿಕವಾಗಿ ಸದೃಢವಾಗಿಯೇ ಇದ್ದು ಅದರ ಜಿಡಿಪಿ ಏರುತ್ತಲೇ ಇದೆ. ಅಮೇರಿಕಾ ಅಧ್ಯಕ್ಷ ಟ್ರಂಪ್ ಏನಾದರೂ ಹೇಳಿಕೆ ನೀಡಿದರೆ ನಮ್ಮ ಶೇರು ಮಾರುಕಟ್ಟೆ ಏರುಪೇರಾಗುತ್ತದೆ.
ಇದನ್ನೂ ಓದಿ: ಬೆಂಗಳೂರು |ಕೆಸೆಟ್- ಅರ್ಜಿ ಸಲ್ಲಿಸಲು ಸೆ.18 ಕೊನೆಯ ದಿನ
ಇಲ್ಲಿನ ಒಂದಿಷ್ಟು ಅಂಕಿ ಅಂಶಗಳಾನ್ನು ಗಮನಿಸಿದರೆ ವಿವಿಧ ದೇಶಗಳ ಸ್ಥಾನ ಅರ್ಥವಾಗುತ್ತದೆ. ಸ್ಥಾನಗಳು ದೇಶ ನೋಬೆಲ್ ಪ್ರಶಸ್ತಿಗಳು ವಿಜ್ಞಾನಕ್ಕೆ ದೊರೆತವು ಪೇಟೆಂಟ್‌ಗಳು ಜನಸಂಖ್ಯೆ ಜಿಡಿಪಿ (ಡಾಲರ್) ತಲಾ ಜಿಡಿಪಿ (ಡಾಲರ್) ತಲಾ ಆದಾಯ ಪ್ರತಿ ತಿಂಗಳಿಗೆ (ರೂಪಾಯಿ)
1 ಅಮೇರಿಕಾ 423 398 3,15,245 333 ಮಿಲಿಯನ್ 30.51 ಟ್ರಿಲಿಯನ್ $74,600 ₹5,15,983
2 ಬ್ರಿಟನ್ 137 100 59,600 67 ಮಿಲಿಯನ್ 3.84 ಟ್ರಿಲಿಯನ್ $54,500 ₹3,76,958
3 ಜರ್ಮನಿ 111 85 1,33,053 84 ಮಿಲಿಯನ್ 4.74 ಟ್ರಿಲಿಯನ್ $63,600 ₹4,39,900
4 ಫ್ರಾನ್ಸ್ 68 34 12,421 65 ಮಿಲಿಯನ್ 3.21 ಟ್ರಿಲಿಯನ್ $55,400 ₹3,83,183
5 ಸ್ವೀಡನ್ 34 17 22,221 10.5 ಮಿಲಿಯನ್ – $63,100 ₹4,36,442
6 ಜಪಾನ್ 31 24 209,368 125 ಮಿಲಿಯನ್ 4.18 ಟ್ರಿಲಿಯನ್ $46,200 ₹3,19,550
7 ಕೆನಡಾ 28 10 25,064 39 ಮಿಲಿಯನ್ 2.23 ಟ್ರಿಲಿಯನ್ $55,900 ₹3,86,642
10 ಇಟಲಿ 20 13 8,348 58.97 ಮಿಲಿಯನ್ 3,490.5 ಬಿಲಿಯನ್ $39,003 ₹2,70,000
13 ಇಸ್ರೇಲ್ 13 6 17,127 9.7 ಮಿಲಿಯನ್ 500 ಬಿಲಿಯನ್ $48,400 ₹3,34,767
15 ಭಾರತ 9 4 55,746 1.464 ಬಿಲಿಯನ್ 4.19 ಟ್ರಿಲಿಯನ್ $9,200 ₹63,633
19 ಚೀನಾ 6 5 9,20,797 1.425 ಬಿಲಿಯನ್ 19.23 ಟ್ರಿಲಿಯನ್ $22,100 ₹1,52,675
20 ಪಾಕಿಸ್ತಾನ 2 1 189 241.5 ಮಿಲಿಯನ್ $375 ಬಿಲಿಯನ್ $1,824 ₹12,620
ಅದೆಷ್ಟು ವಿಜ್ಞಾನದ ನೊಬೆಲ್ ಪ್ರಶಸ್ತಿಗಳು ಭಾರತಕ್ಕೆ ಬಂದಿವೆ? ನಾಲ್ಕೇ ನಾಲ್ಕು ಸಾಕೇ?
ವಿಜ್ಞಾನದ ನೊಬೆಲ್ ಪ್ರಶಸ್ತಿಗಳನ್ನು ಗಮನಿಸಿದರೆ ಅಮೇರಿಕಾ ಪ್ರಥಮ ಸ್ಥಾನದಲ್ಲಿದ್ದರೆ ಭಾರತ 19 ನೇ ಸ್ಥಾನದಲ್ಲಿದೆ. ವಿಜ್ಞಾನದಲ್ಲಿ ಭಾರತಕ್ಕೆ ಕೇವಲ ೪ ನೊಬೆಲ್ ಪ್ರಶಸ್ತಿಗಳು ದೊರಕಿದ್ದು ಇದನ್ನು ಪಡೆದ ಸರಿ ಸಿ.ವಿ.ರಾಮನ್,ಹರಗೋವಿಂದ್ ಖೊರಾನಾ, ಸುಬ್ರಹ್ಮಣ್ಯನ್ ಚಂದ್ರಶೇಖರ್, ವೆಂಕಟರಾಮನ್ ರಾಮಕೃಷ್ಣನ್ ಇವರೆಲ್ಲಾ ಇತರ ದೇಶಗಳ ಪ್ರಯೋಗಾಲಯದಲ್ಲಿ ಸಂಶೋಧನೆ ಮಾಡಿ ಆವಿಷ್ಕಾರ ಮಾಡಿದವರು. ಪುಟ್ಟ ದೇಶ ಇಸ್ರೆಲ್ ಸಹ ವಿಜ್ಞಾನಕ್ಕೆ 66 ನೊಬೆಲ್ ಪ್ರಶಸ್ತಿಗಳನ್ನು ಪಡೆದು 17,127 ಪೇಟೆಂಟ್ ಹೊಂದಿದೆ. ಸಮಾದಾನದ ವಿಷಯವೆಂದರೆ ಚೀನಾ ಮತ್ತು ಪಾಕಿಸ್ಥಾನಗಳು ಒಂದಿಷ್ಟು ಹಿಂದಿವೆ.

ಅಂದರೆ ಇಷ್ಟೆಲ್ಲಾ ಜನ ಸಂಖ್ಯೆ ಹೊಂದಿದ ನಮ್ಮ ದೇಶದಲ್ಲಿ ಪ್ರತಿಭಾವಂತರೇ ಇಲ್ಲವೇ? ಇದ್ದೇ ಇದ್ದಾರೆ. ಆದರೆ ಅವರೆಲ್ಲಾ ಸಾಧನೆ ಮಾಡುವುದು ಮುಂದುವರೆದ ದೇಶಗಳಲ್ಲಿ ಎಂಬುದು ಗಮನಾರ್ಹ. ಇದಕ್ಕೆ ಕಾರಣಗಳು ಹಲವು. ಮೊಗಲರು ಮತ್ತು ಬ್ರಿಟೀಷರು ಭಾರತಕ್ಕೆ ಬಂದು ಇಲ್ಲಿಯ ಜನರ ಮನಸ್ಥಿತಿಯನ್ನು ಗುಲಾಮಿ ಮನಸ್ಥಿತಿಗೆ ದೂಡಿದರು ಎಂದರೂ ಸಹ ಮುಂದುವರೆದ ರಾಷ್ಟ್ರಗಳಾದ ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಸಹ ಬ್ರಿಟೀಷರಿಂದ ಆಳಿಸಿಕೊಂಡರೂ ಸಹ ಇಲ್ಲಿ ಮಾನಸಿಕ ಗುಲಾಮಿತನ ಮೈಗೂಡಿಸಿಕೊಳ್ಳದೇ ತಲೆಯಿತ್ತಿ ನಿಂತಿವೆ. ಕಾರಣ ನಾವು ಆವಿಷ್ಕಾರ ಮಾಡದಿರುವುದಕ್ಕೆ ಬ್ರಿಟೀಷರ ಆಳ್ವಿಕೆ ಕಾರಣ ಅಲ್ಲ ಎನ್ನಬಹುದು.
ಭಾರತೀಯರಂತೆ ಮುಸ್ಲಿಮರು ಸಹ ಯಾವುದೇ ಆಧುನಿಕ ಆವಿಷ್ಕಾರಕ್ಕೆ ಕೊಡುಗೆ ನೀಡಲಿಲ್ಲ ಎಂದೇ ಹೇಳಬಹುದು. ಪ್ರಪಂಚದ ಪ್ರಸಿದ್ದ ಆವಿಷ್ಕಾರಗಳಲ್ಲಿ ಮುಸ್ಲಿಂ ವಿಜ್ಞಾನಿಗಳ ಹೆಸರು ಕೇಳಿ ಬರುವುದಿಲ್ಲ. ಅಂದರೆ ಇದಕ್ಕೂ ಧರ್ಮಕ್ಕೂ ಸಂಬಂಧವಿದೆ ಎಂದು ಖಚಿತವಾಗಿ ಹೇಳಬಹುದು. ಬಹಳ ಪುರಾತನ ಇತಿಹಾಸವಿರುವ ಮುಸ್ಲಿಂ ಮತ್ತು ಹಿಂದು ಧರ್ಮಗಳು ನೂತನ ಆವಿಷ್ಕಾರಗಳಿಗೆ ಯಾವುದೇ ಪುರಸ್ಕಾರ ನೀಡಲಿಲ್ಲ ಎನ್ನಬಹುದು. ಸಾಮಾಜಿಕ ಜೀವನದಲ್ಲಿ ಧರ್ಮವೇ ಪ್ರಮುಖವಾದ ಸ್ಥಾನ ವಹಿಸುವುದರಿಂದ ಈ ಎರಡೂ ಧರ್ಮಗಳು ಉತ್ತೇಜನ ನೀಡಲಿಲ್ಲ ಎನ್ನುವುದು ಖಚಿತ. ಹಾಗೆಂದ ಮಾತ್ರ ಕ್ರಿಶ್ಚಿಯನ್ ಧರ್ಮ ವಿಜ್ಞಾನದಲ್ಲಿ ಹಿಂದಿನ ಕಾಲದಲ್ಲಿ ಉದ್ದಾರವಾಗಿತ್ತು ಎಂದೇನೂ ಹೇಳಲಾಗದು. 1564ರಲ್ಲಿ ಭೂಮಿ ಸೂರ್ಯನ ಸುತ್ತ ಚಲಿಸುತ್ತದೆ ಎಂದು ಕಂಡು ಹಿಡಿದ ಗೆಲಿಲಿಯೋ, ಗುರುತ್ವಾಕರ್ಷಣೇ ಕಂಡು ಹಿಡಿದ ಐಸಾಕ್ ನ್ಯೂಟನ್, ಪ್ರಾಕೃತಿಕ ಆಯ್ಕೆಯ ಮೂಲಕ ಅಭಿವೃದ್ಧಿ ಎಂದ ಚಾರ್ಲ್ಸ್ ಡಾರ್ವಿನ್ ಇವರನ್ನೆಲ್ಲಾ ಕ್ರಿಸ್ತ ಧರ್ಮ ಒಂದಿಲ್ಲೊಂದು ಶಿಕ್ಷೆಗೆ ಗುರಿಪಡಿಸಿದೆ. ಆದರೆ ಇತ್ತೀಚಿಗೆ ಆ ಧರ್ಮದಲ್ಲಿ ಬದಲಾವಣೆಗಳಾಗಿ ಧರ್ಮ ಆವಿಷ್ಕಾರಗಳಿಗೆ ಅಡ್ಡಿ ಬರುತ್ತಿಲ್ಲ ಎಂಬುದು ಸಮಾದಾನಕರ.
1. ಭಾರತದಲ್ಲಿ ವೈಜ್ಞಾನಿಕತೆ
ಅಂದರೆ ಭಾರತವಲ್ಲದೇ ಪ್ರಪಂಚದಲ್ಲಿಯೇ ವೈಜ್ಞಾನಿಕ ಆವಿಷ್ಕಾರದ ದಾರಿ ಎಂದಿಗೂ ಸರಳವಾಗಿರಲಿಲ್ಲ ಮತ್ತು ಯಾರಿಂದಲೂ ಸಹ ಅದಕ್ಕೆ ಪ್ರೋತ್ಸಾಹ ದೊರಕಲಿಲ್ಲ. ಬೆಳಿಗ್ಗೆ ಎದ್ದ ಕೂಡಲೇ ಹಲ್ಲುಜ್ಜುವ ಬ್ರಶ್ಶಿನಿಂದ ಹಿಡಿದು ಕಾರು, ರೈಲು, ವಿಮಾನ, ವಿದ್ಯುತ್, ದೂರವಾಣಿ ಹೀಗೆ ರಾತ್ರಿ ಮಲಗುವ ವರೆಗೆ ವಿಜ್ಞಾನದ ಸಕಲ ಸೌಲತ್ತುಗಳನ್ನೂ ಅನುಭವಿಸಿದರೂ ಸಹ ವೈಜ್ಞಾನಿಕ ಮನೋಭಾವವನ್ನು ಹೊಂದದವರ ಸಂಖ್ಯೆ ಭಾರತದಲ್ಲಿ ಶೇ: 95 ಕ್ಕಿಂತ ಜಾಸ್ತಿ ಇರುವುದು ಗಾಬರಿ ಹುಟ್ಟಿಸುವ ವಿಷಯ. ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರರು, ಅರ್ಥಶಾಸ್ತ್ರಜ್ಞ ಬಿ.ಎಂ.ಕುಮಾರಸ್ವಾಮಿಗಳು, ಜೀವಾಮೃತ ತಜ್ಞ ಸುಭಾಶ್ ಪಾಳೇಕರ್, ಡಾ: ಬಿ ಎಂ. ಹೆಗಡೆ, ಡಾ:ಖದಿರವೇಲ್ ಮತ್ತು ಇಂತಹ ಅನೇಕರು ಸಾಕಷ್ಟು ಸಂಶೋಧನೆಗಳ ನಂತರ ಸಿದ್ಧವಾದ ವಿಷಯಗಳನ್ನೇ ಹೀಗಳೆಯುವ ಮತ್ತು ಇದಕ್ಕೆಂದು ಚಪ್ಪಾಳೆ ಗಿಟ್ಟಿಸುವ ಹವ್ಯಾಸ ಹೊಂದಿದ್ದಾರೆ. ಆದರೆ ಸತ್ಯ ಒಂದಲ್ಲ ಒಂದು ದಿನ ಜನಕ್ಕೆ ತಿಳಿಯುತ್ತದೆ ಮತ್ತು ಇವರ ಭಾಷಣಗಳನ್ನು ಕುರುಡಾಗಿ ನಂಬುವವರಿಗೆ ಜ್ಞಾನ ಬರಲಿ ಎಂದು ಆಶಿಸುವುದೊಂದೇ ಆಯ್ಕೆ.
2. ಎಷ್ಟು ಪಾಲು ಸಂಶೋಧನೆಗೆ ದೊರತಿದೆ?
ಭಾರತವು ತನ್ನ ಜಿಡಿಪಿಯ ಸುಮಾರು 0.7–0.8% ರಷ್ಟು ಮಾತ್ರ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಖರ್ಚು ಮಾಡುತ್ತದೆ, ಆದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಇಸ್ರೇಲ್ (6%), ದಕ್ಷಿಣ ಕೊರಿಯಾ (4.8%) ಮತ್ತು ಅಮೇರಿಕಾ (3.5%) ಹೆಚ್ಚಿನ ಹೂಡಿಕೆ ಮಾಡುತ್ತವೆ. ಭಾರತದ ಈ ಕಡಿಮೆ ಹೂಡಿಕೆಯು ವಿಶ್ವ ದರ್ಜೆಯ ಪ್ರಯೋಗಾಲಯಗಳ ಸ್ಥಾಪನೆ, ಪ್ರತಿಭೆಗಳ ಧಾರಣ ಮತ್ತು ಅತ್ಯಾಧುನಿಕ ಸಂಶೋಧನೆಯ ಅನ್ವೇಷಣೆಗೆ ಅಡ್ಡಿಯಾಗುತ್ತದೆ.ಇಸ್ರೇಲ್ ದೇಶ ಅತ್ಯಂತ ಹೆಚ್ಚಿನ ಹೂಡಿಕೆಯನ್ನು ಆವಿಷ್ಕಾರಗಳಲ್ಲಿ ತೊಡಗಿಸಿ ಹೊಸ ಆವಿಷ್ಕಾರಗಳನ್ನು ಮಾಡಿ ಅದನ್ನು ಭಾರತದಂತ ದೇಶಗಳಿಗೆ ಮಾರಿ ಪ್ರತಿಯೊಬ್ಬ ಪ್ರಜೆಗೆ ಪ್ರತಿ ತಿಂಗಳಿಗೆ ರೂ 3,34,767 ತಲಾ ಆದಾಯ ಹೊಂದಿದ್ದರೆ 347.77 ಟ್ರಿಲಿಯನ್ ಆರ್ಥಿಕತೆ ಹೊಂದಿದ ಭಾರತ ತಿಂಗಳಿಗೆ ರೂ 55,746 ತಲಾ ಆದಾಯ ಹೊಂದಿದೆ.
3. ದುರ್ಬಲ ಉದ್ಯಮ-ಶೈಕ್ಷಣಿಕ ಸಂಪರ್ಕಗಳು
ವಿಶ್ವವಿದ್ಯಾಲಯಗಳು ಮತ್ತು ಕೈಗಾರಿಕೆಗಳು ನೈಜ-ಪ್ರಪಂಚದ ಸಮಸ್ಯೆಗಳ ಮೇಲೆ ಸಹಕರಿಸಿದಾಗ ವೈಜ್ಞಾನಿಕ ನಾವೀನ್ಯತೆ ಅಭಿವೃದ್ಧಿ ಹೊಂದುತ್ತದೆ. ಭಾರತದಲ್ಲಿ, ಈ ಸಹಯೋಗವು ಕನಿಷ್ಟ ಅಥವಾ ಕಳಪೆಯಾಗಿದೆ. ವಿಶ್ವವಿದ್ಯಾಲಯ ಅಥವಾ ಇತರ ಸಂಶೋಧನಾ ಸಂಸ್ಥೆಗಳು ಅವುಗಳಿಗೆ ಮ್ಮತ್ತು ಉಧ್ಯಮಗಳಿಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತವೆ. ಕೈಗಾರಿಕೆಗಳು ಸಹ ಅಲ್ಪಾವಧಿಯ ಉತ್ಪನ್ನ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತವೆ, ಇದರಿಂದ ಅನ್ವಯಿಕ ಸಂಶೋಧನೆಯಲ್ಲಿ ಭಾರಿ ಅಂತರ ಉಂಟಾಗುತ್ತದೆ .
4. ಪ್ರೋತ್ಸಾಹ ಕೊರತೆ ಮತ್ತು ಪ್ರತಿಭಾ ಪಲಾಯನ
ಅನೇಕ ಉನ್ನತ ಭಾರತೀಯ ವಿಜ್ಞಾನಿಗಳು “ಪ್ರತಿಭಾ ಪಲಾಯನ” ಎಂದು ಕರೆಯಲ್ಪಡುವ ಉತ್ತಮ ಅವಕಾಶಗಳಿಗಾಗಿ ವಿದೇಶಗಳಿಗೆ ವಲಸೆ ಹೋಗುತ್ತಾರೆ. ಭಾರತ ದೇಶಕ್ಕೆ ವಿಜ್ಞಾನಕ್ಕೆ ಬಂದ ಕೇವಲ ೪ ನೊಬೆಲ್ ಪಾರಿತೋಶಕ ಪಡೆದವರೆಲ್ಲಾ ಅಮೇರಿಕಾ ಮತ್ತು ಬ್ರಿಟನ್ ಪ್ರಯೋಗಾಲಯದಲ್ಲಿ ಕೆಲಸ ಮಾಡಿದವರೆಂಬುದು ತಿಳಿದಿರುವುದು ಉತ್ತಮ. ಹಣಕಾಸಿನ ಕೊರತೆ, ಅಧಿಕಾರಶಾಹಿ ವಿಳಂಬಗಳು ಮತ್ತು ಭಾರತೀಯ ಸಂಶೋಧನಾ ಸಂಸ್ಥೆಗಳಲ್ಲಿ ಸೀಮಿತ ಸ್ವಾಯತ್ತತೆ , ಕಡಿಮೆ ವೇತನ ಅಮೇರಿಕಾ ಮತ್ತು ಜರ್ಮನಿಯಂತ ಉತ್ತಮ ಅವಕಾಶವುಳ್ಳ ದೇಶಕ್ಕೆ ಹೋಗುವಂತೆ ಪ್ರೆರೇಪಿಸುತ್ತದೆ. ಅಲ್ಲಿರುವ ಉತ್ತಮ ಪ್ರಯೋಗಶಾಲಾ ಸೌಲಭ್ಯ, ಪ್ರತಿಭೆಗೆ ಅವಕಾಶ, ಆವಿಷ್ಕಾರಗಳಿಗೆ ತೊಡಗಿಸುವ ಬಂಡವಾಳ ಇವೆಲ್ಲಾ ಪ್ರತಿಭಾ ಪಲಾಯನಕ್ಕೆ ಅವಕಾಶವನ್ನುಂಟು ಮಾಡುವುದೆಂತೂ ನಿಜ. ಭಾರತದ ಮಟ್ಟಿಗೆ ಸಾಮಾಜಿಕ ನ್ಯಾಯ ದೊರಕಿಸಲು ಇರುವ ಮೀಸಲಾತಿ ಸೌಲಭ್ಯದಿಂದ ನೈಜ ಪ್ರತಿಭೆಗೆ ಅವಕಾಶ ದೊರಕದೆ ಬೇರೆ ದೇಶಕ್ಕೆ ತೆರಳಲು ಮತ್ತೊಂದು ಕಾರಣವೆನ್ನಬಹುದು.
5. ಶೈಕ್ಷಣಿಕ ವ್ಯವಸ್ಥೆ
ಭಾರತದ ಶಿಕ್ಷಣ ವ್ಯವಸ್ಥೆಯು ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ ಮತ್ತು ಪ್ರಯೋಗಕ್ಕಿಂತ ಮೌಖಿಕ ಕಲಿಕೆ ಮತ್ತು ಕಂಠಪಾಠಕ್ಕೆ ಒತ್ತು ನೀಡುತ್ತದೆ. ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಲು ಅಥವಾ ಆವಿಷ್ಕಾರ ಮಾಡಲು ಅಲ್ಲ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ತರಬೇತಿ ನೀಡಲಾಗುತ್ತದೆ. ಇದು ನುರಿತ ವೃತ್ತಿಪರರನ್ನು ಉತ್ಪಾದಿಸುತ್ತದೆ ಆದರೆ ಮೂಲ ಚಿಂತಕರು ಅಥವಾ ಸಮಸ್ಯೆ ಪರಿಹಾರಕರನ್ನು ಉತ್ಪಾದಿಸುವುದಿಲ್ಲ. ನಮ್ಮಲ್ಲಿ ಕಂಠಪಾಠ ಮಾಡಿ ಪರೀಕ್ಷೆ ಪಾಸು ಮಾಡುವ ನಂತರ ಸರ್ಕಾರದ ಬಿಳಿಯಾನೆಗಳಾಗುವ ಐಎಎಸ್ಸುಗಳನ್ನು ತಯಾರಿಸಲು ಹೆಚ್ಚಿನ ಒತ್ತು ನೀಡಲಾಗುತ್ತದೆಯೇ ವಿನ: ನೂತನ ಆವಿಷ್ಕಾರ ಮಾಡುವ ವಿಜ್ಞಾನಿಗಳನ್ನಲ್ಲ.
6. ಅಧಿಕಾರಶಾಹಿ ಕೆಂಪು ಪಟ್ಟಿ ಮತ್ತು ನೀತಿ ವಿಳಂಬಗಳು ಭಾರತದಲ್ಲಿ ಸಂಶೋಧಕರು ವಾಸ್ತವಿಕ ಸಂಶೋಧನೆಗಿಂತ ಹೆಚ್ಚಾಗಿ ದಾಖಲೆಗಳು, ಲೆಕ್ಕ ಪರಿಶೋಧನೆಗಳು ಮತ್ತು ಅನುಮೋದನೆಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ನಿಧಿ ಬಿಡುಗಡೆಯಲ್ಲಿನ ವಿಳಂಬ, ಖರೀದಿ ಅಡಚಣೆಗಳು ಮತ್ತು ವಿದೇಶಿ ಸಹಯೋಗ ಹೊಂದಲು ಇರುವ ಕಠಿಣ ನಿಯಮಗಳು ವೈಜ್ಞಾನಿಕ ಉತ್ಪಾದನೆಯ ವೇಗ ಮತ್ತು ಗುಣಮಟ್ಟವನ್ನು ತಡೆಯುತ್ತವೆ.ಕಾರಣ ಮುಂದುವರೆದ ದೇಶಗಳ ಜೊತೆಗಿನ ಸಹಭಾಗಿತ್ವದ ಸಂಶೋಧನೆಗೆ ಒಂದಿಷ್ಟೂ ಉತ್ತೇಜನವೇ ಇಲ್ಲವಾಗಿರುವುದರಿಂದ ಮತ್ತು ಸ್ವಂತವಾಗಿ ಅದೇ ಸಂಶೋಧನೆಯನ್ನು ಮಾಡಲು ಇರುವ ಕಡಿಮೆ ಅವಕಾಶ ಆವಿಷ್ಕಾರಗಳ ಇಳಿಕೆಗೆ ಮತ್ತೊಂದು ಕಾರಣ.
7. ಸಮಾಜದಲ್ಲಿ ವಿಜ್ಞಾನಕ್ಕೆ ಮನ್ನಣೆಯ ಕೊರತೆ
ಭಾರತೀಯ ಸಮಾಜವು ವಿಜ್ಞಾನ ಅಥವಾ ಸಂಶೋಧನೆಗಿಂತ ರಾಜಕೀಯ, ಆಡಳಿತಾತ್ಮಕ ಮತ್ತು ಧಾರ್ಮಿಕ ವೃತ್ತಿಗಳನ್ನು ವೈಭವೀಕರಿಸುವ ಪ್ರವೃತ್ತಿಯನ್ನು ಹೊಂದಿದೆ. ಇಲ್ಲಿ ಸಿನಿಮಾ ನಟರು, ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು, ಮಠ ಮಾನ್ಯಗಳಿಗೆ ಇರುವ ಗೌರವ ವಿಜ್ಞಾನಿಗಳಿಗೆ ಬಲುದೂರ. ಸಂಶೋಧನಾ ವಲಯದಲ್ಲಿ ಬಂಡವಾಳ ಹೂಡಿಕೆ ಅತ್ಯಲ್ಪ. ವೈಜ್ಞಾನಿಕ ಮನೋಭಾವವೆಂಬುದು ಕೇವಲ 5% ಜನಕ್ಕಿಂತ ಕಡಿಮೆ ಎಂದರೆ ಆಶ್ಚರ್ಯವಾದರೂ ನಿಜ. ಬಿಹಾರ, ಉತ್ತರ ಪ್ರದೇಸದಂತ ಕೆಲವೊಂದು ರಾಜ್ಯಗಳಲ್ಲಿ ಇದು ಶೇ ೨ ಕ್ಕಿಂತ ಕಡಿಮೆ ಎನ್ನಲಾಗಿದೆ.
ವಿದ್ಯಾವಂತರನ್ನೂ ಒಳಗೊಂಡಂತೆ ಜನಸಾಮಾನ್ಯರೂ ಸಹ ಈವತ್ತಿಗೂ ಸಾಬೀತಾಗದ ಅನೇಕ ಭಾವನಾತ್ಮಕ ವಿಷಯಗಳ ಬಗೆಗೆ ಹೆಚ್ಚಿನ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಕರ್ನಾಟಕವೂ ಸಹ ಇದಕ್ಕೆ ಹೊರತಾಗಿಲ್ಲ. ಅತ್ಯಂತ ಹೆಚ್ಚಿನ ಸಾಕ್ಷರತೆ ಹೊಂದಿದ ಕೇರಳದಲ್ಲಿ ಸಹ ವೈಜ್ಞಾನಿಕ ಮನೋಭಾವ ಹೊಂದಿದವರ ಸಂಖ್ಯೆ ಶೇ ೫ ಕ್ಕಿಂತ ಕಡಿಮೆ. ಭಾರತದ ಅನೇಕ ವಿಜ್ಞಾನಿಗಳು ಈವತ್ತಿಗೂ ಸಹ ಜ್ಯೋತಿಷ್ಯ, ವಾಸ್ತು, ರಾಹು ಕಾಲ, ಗುಳಿಕ ಕಾಲ, ಗ್ರಹಣ ದೋಷ , ಹೀಗೆಲ್ಲಾ ನಂಬುತ್ತಾರೆ. ಇವರ ಸಂಖ್ಯೆ ಶೇ ೨೪ ಕ್ಕಿಂತ ಜಾಸ್ತಿ ಇರುವುದು ಗಾಬರಿ ಹುಟ್ಟಿಸುವ ವಿಷಯ. ಕ್ರಿಶ್ಚಿಯನ್ ಧರ್ಮದಲ್ಲಿ ಒಂದಿಷ್ಟು ಕಡಿಮೆ ಇದ್ದರೆ ಮುಸ್ಲಿಂ ಧರ್ಮದಲ್ಲಿ ಇದು ಜಾಸ್ತಿಯೇ ಇದೆ. ಪಶುವೈದ್ಯಕೀಯ ವೃತ್ತಿಯಲ್ಲಿ ಸುಳ್ಳು ವಿಜ್ಞಾನ ಎನಿಸಿದ ಹೋಮಿಯೋಪತಿಯನ್ನು ನಂಬುವ ಪಶುವೈದ್ಯರ ಸಂಖ್ಯೆ ಶೇ ೫೦ ಕ್ಕಿಂತ ಜಾಸ್ತಿ ಇದೆ.
8. ದುರ್ಬಲ ಆವಿಷ್ಕಾರಗಳು ಮತ್ತು ಬೆಲೆಯಿಲ್ಲದ ಪೇಟೆಂಟುಗಳು
2023 ರ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಸಲ್ಲಿಸಲಾದ ಒಟ್ಟು 55,746 ಪೇಟೆಂಟ್‌ಗಳಲ್ಲಿ ಸುಮಾರು 30–35% ಮಾತ್ರ ಭಾರತೀಯ ಮೂಲದವು. ಹೆಚ್ಚಿನ ಭಾರತೀಯ ನವೋದ್ಯಮಗಳು ಮತ್ತು ಸಂಶೋಧಕರು ಜ್ಞಾನದ ಕೊರತೆ ಅಥವಾ ಬೆಂಬಲವಿಲ್ಲದೇ ತಮ್ಮ ನಾವೀನ್ಯತೆಗಳನ್ನು ಪೇಟೆಂಟ್ ಮಾಡಲು ವಿಫಲರಾಗಿದ್ದಾರೆ.ಅಂತರಾಷ್ಟ್ರೀಯ ಗುಣಮಟ್ಟದ ಮತ್ತು ಮಾರಾಟವಾಗಬಲ್ಲ ಪೇಟೆಂಟುಗಳ ಸಂಖ್ಯೆ ಬಹಳ ಕಡಿಮೆ. ಅಂದರೆ ನಮ್ಮ ವಿಜ್ಞಾನಿಗಳು ಅವರ ವೈಯಕ್ತಿಕ ಪ್ರತಿಷ್ಟೆಯನ್ನು ಹೆಚ್ಚಿಸಿಕೊಳ್ಳಲು ಜನಸಾಮಾನ್ಯರಿಗೆ ಏನೂ ಪ್ರಯೋಜನಲ್ಲದ ಸಂಶೋಧನೆ ಮಾಡಿ ಅದನ್ನು ನೋಂದಣಿ ಮಾಡಿಕೊಳ್ಳುತ್ತಾರೆ. ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ 2006 ಮತ್ತು 2023 ರ ನಡುವೆ ಒಟ್ಟು 983 ಪೇಟೆಂಟ್‌ಗಳನ್ನು ಹೊಂದಿದ್ದರೂ ಸಹ ಇದರಲ್ಲಿ ವಾಣಿಜ್ಯವಾಗಿ ದೇಶಕ್ಕೆ ಆರ್ಥಿಕತೆಗೆ ಅನುಕೂಲವಾಗುವ ಅಥವಾ ಜನ ಸಾಮಾನ್ಯರ ಜೀವನ ಸರಳವಾಗಿಸುವ ಆವಿಷ್ಕಾರಗಳು ಅತ್ಯಂತ ಕಡಮೆ ಎನ್ನಬಹುದು. ಭಾರತ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಈ ಸಂಸ್ಥೆಗೆ ಪ್ರತಿ ವರ್ಷ ಸರಾಸರಿ ೫೦೦-೫೩೦ ಕೋಟಿ ಅನುದಾನ ದೊರೆಯುತ್ತಿದ್ದು ಹೆಚ್ಚಿನ ಭಾಗ ವೇತನಕ್ಕೆ ಸರಿಹೋಗುತ್ತದೆ.
9. ಸಂಶೋಧನಾ ಮೂಲ ಸೌಕರ್ಯದ ಕೊರತೆ
ಭಾರತವು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಸಿ), ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ), ಸಿ ಎಸ್ ಐ ಆರ್ ಳಂತಹ ದೊಡ್ಡ ವೈಜ್ಞಾನಿಕ ಸಂಸ್ಥೆಗಳನ್ನು ಹೊಂದಿದ್ದರೂ,ಅವುಗಳ ಸಾಧನೆ ಅಂತಹ ಗಣನೀಯವಾಗಿಲ್ಲ. ಹೆಚ್ಚಿನ ರಾಜ್ಯಗಳ ವಿಶ್ವವಿದ್ಯಾಲಯಗಳು ಮತ್ತು ವಿಜ್ಞಾನ ಮಹಾವಿದ್ಯಾಲಯಗಳು ಮೂಲಭೂತ ಮೂಲಸೌಕರ್ಯ, ಸಂಶೋಧನಾ ದೃಷ್ಟಿಕೋನ ಅಥವಾ ನುರಿತ ಅಧ್ಯಾಪಕರ ಕೊರತೆ, ಅತಿಯಾದ ಜಾತಿ ರಾಜಕೀಯ, ಮಾನವ ಅಸೂಯೆ, ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುವುದು ಮನ್ನಣೆಯ ದಾಹ ಇವುಗಳಿಂದ ಸೊರಗಿ ಹೋಗಿವೆ. ಇದರಿಂದ ವಿವಿಧ ವಿಭಾಗಳ ತಜ್ಞರು ಸೇರಿ ಮಾಡುವ ಸಂಘಟಿತ ಆವಿಷ್ಕಾರಗಳು ವರ್ಷದಿಂದ ವರ್ಷಗಳಿಗೆ ಕಡಿಮೆಯಾಗುತ್ತಲೇ ಇವೆ. ಖರೀದಿ ಪ್ರಕ್ರಿಯೆಯ ಅತಿ ವಿಳಂಬ, ಕಳಪೆ ಗುಣಮಟ್ಟದ ವಸ್ತುಗಳು, ಪ್ರಾಣ ಹಿಂಡುವ ಲೆಕ್ಕಪರಿಶೋಧನೆಯಂತ ಕ್ರಿಯೆಗಳು ಇರುವ ಕೆಲವೇ ವಿಜ್ಞಾನಿಗಳ ಉತ್ಸಾಹ ಉಡುಗಿಸಿವೆ.
10. ಆಳವಾದ ತಂತ್ರಜ್ಞಾನ ಮತ್ತು ಮೂಲಭೂತ ವಿಜ್ಞಾನದ ಕೊರತೆ
ಭಾರತವು ಐಟಿ ಸೇವೆಗಳು ಮತ್ತು ಬಾಹ್ಯಾಕಾಶ ಎಂಜಿನಿಯರಿಂಗ್ ಕುರಿತು ಒಂದಿಷ್ಟು ಪ್ರಗತಿ ಸಾಧಿಸಿದ್ದರೂ, ಇತರ ತಂತ್ರಜ್ಞಾನಗಳಲ್ಲಿ ಹಿಂದುಳಿದಿದೆ. ಭಾರತದ ಹೆಚ್ಚಿನ ಯಾವುದೇ ಖಾಸಗಿ ಸಂಸ್ಥೆಗಳೂ ಸಹ ಸ್ವತ: ಆವಿಷ್ಕಾರ ಮಾಡಿ ಮಾರಿ ಹಣ ಮಾಡುವ ಬದಲು ಬೇರೆ ದೇಶಗಳಲ್ಲಿನ ತಂತ್ರಜ್ಞಾನಗಳಾನ್ನು ದುಬಾರಿ ಬೆಲೆಗೆ ಖರೀದಿಸಿ ಅದರ ಹೊರೆಯನ್ನು ಜನಸಾಮಾನ್ಯರಿಗೆ ವರ್ಗಾಯಿಸುತ್ತವೆ. ಭಾರತವು ಆವಿಷ್ಕಾರಗಳನ್ನು ಕೊಳ್ಳುವ ದೇಶವೇ ಹೊರತು ಮಾರಾಟ ಮಾಡುವ ದೇಶವಾಗಿ ಹೊರಹೊಮ್ಮಲು ಪ್ರಯತ್ನಿಸಲಿಲ್ಲ. ಚೀನಾದಲ್ಲಿ ತಯಾರಾಗಿ ಭಾರತದಲ್ಲಿ ಅತ್ಯಂತ ಕಡಿಮೆ ದರದಲ್ಲಿ ದೊರಕುವ ಮೊಬೈಲ್, ಲ್ಯಾಪ್‍ಟಾಪ್, ಕಂಪ್ಯೂಟರ್ ಇತ್ಯಾದಿ ಇಲೆಕ್ಟ್ರಾನಿಕ್ ವಸ್ತುಗಳ ಆಮದು ನಿಂತು ಹೋದರೆ ದೇಶದ ಆರ್ಥಿಕತೆಗೆ ಭಾರಿ ಹೊಡೆತ ಬೀಳುವ ಸಾಧ್ಯತೆ ಇದೆ.
ಭಾರತದಲ್ಲಿ ಬೌದ್ಧಿಕ ಮಟ್ಟ ಉತ್ತಮವಾಗಿದ್ದರೂ ಸಹ ಇಲ್ಲಿನ ಬಹುಸಂಖ್ಯಾತರ ಪುರಾತನ ಮನೋಭಾವ ನಾವೀನ್ಯತೆ ಮತ್ತು ವೈಜ್ಞಾನಿಕತೆಯನ್ನು ಎಂದೂ ಪ್ರೋತ್ಸಾಹಿಸುವುದಿಲ್ಲ. ವಿಜ್ಞಾನದ ಬಗ್ಗೆ ನಿರಂತರ ಜಡತ್ವ ನೀತಿ, ಕೆಂಪು ಪಟ್ಟಿ ಇವೆಲ್ಲಾ ಆವಿಷ್ಕಾರಗಳನ್ನು ದುರ್ಬಲಗೊಳಿಸಿವೆ. ಭಾರತದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ಸಂಶೋಧನೆ ಮತ್ತು ಅಭಿವೃದ್ಧಿ ವೆಚ್ಚಕ್ಕೆ ನೀಡುವ ಹಣ ಮತ್ತು ಪ್ರಪಂಚದಲ್ಲಿಯೇ ಅತ್ಯಂತ ಕಡಿಮೆ. ಈವತ್ತಿಗೂ ಸಹ ನಮ್ಮವರು ಸುಮಾರು 1500 ವರ್ಷಗಳ ಹಿಂದಿನ ಗೋಮೂತ್ರ ಚಿಕಿತ್ಸೆ ಶ್ರೇಷ್ಟ, ಅನೇಕ ಔಷಧ ಗುಣಗಳನ್ನು ಹೊಂದಿದೆ, ಆಧುನಿಕ ವೈದ್ಯಕೀಯ ಪದ್ಧತಿಯ ಔಷಧಿಗಳೆಲ್ಲಾ ಅಡ್ಡಪರಿಣಾಮ ಹೊಂದಿವೆ, ಅಧ್ಯಯನವೇ ಆಗದ ಗಿಡಮೂಲಿಕೆ ಔಷಧಿಗಳೆಲ್ಲಾ ಸುರಕ್ಷಿತ ಎನ್ನುತ್ತಾ ಓಡಾಡುತ್ತಾರೆಯೇ ಹೊರತು ಹೊಸದರಲ್ಲಿನ ಉತ್ತಮ ಅಂಶಗಳನ್ನು ಅಧುನಿಕತೆಯನ್ನು ಮೈಗೂಡಿಸಿಕೊಂಡು ಹೋಗೋಣವೆಂಬ ಭಾವವೇ ಬರುವುದಿಲ್ಲ.
11. ಆವಿಷ್ಕಾರ ಮತ್ತು ಆರ್ಥಿಕ ಬೆಂಬಲ
ಇಸ್ರೇಲ್ ಮತ್ತು ದಕ್ಷಿಣ ಕೊರಿಯಾದಂತ ಸಣ್ಣ ರಾಷ್ಟ್ರಗಳು ಅವುಗಳ ಆರ್ಥಿಕತೆಯ ಸುಮಾರು 6% ಮತ್ತು 5% ರಷ್ಟನ್ನು ಸಂಶೋಧನೆಯಲ್ಲಿ ತೊಡಗಿಸುತ್ತವೆ. ಇಸ್ರೇಲ್ ಇಷ್ಟು ದಿನಗಳ ನಂತರವೂ ಸಹ ಅದರ ಆರ್ಥಿಕತೆ ಕ್ಶೀಣಿಸಿಲ್ಲ ಎನ್ನುವುದಕ್ಕೆ ಅದರ ನೂತನ ಆವಿಷ್ಕಾರಗಳೂ ಕಾರಣ. ಪ್ರಪಂಚದ ಮುಖ್ಯ ಆರ್ಥಿಕ ಶಕ್ತಿಗಳಾದ ಅಮೆರಿಕ, ಜಪಾನ್, ಜರ್ಮನಿ ಮತ್ತು ಯುರೋಪ್ ಒಕ್ಕೂಟ ಸುಮಾರು 3% ರಿಂದ 3.5% ತನಕ ಸಂಶೋಧನೆ ಮತ್ತು ಅಭಿವೃದ್ಧಿಗೆ ಹಣ ಹೂಡುತ್ತವೆ. ಇದರಿಂದಾಗಿ ಅವುಗಳು ಜಾಗತಿಕ ನಾಯಕತ್ವವನ್ನು ಸಾಧಿಸುತ್ತಿವೆ. ಚೀನಾ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ 2% ಗಿಂತ ಹೆಚ್ಚು ಸಂಶೋಧನಾ ವಲಯಕ್ಕೆ ಹೂಡಿಕೆ ಮಾಡಿದ ದೇಶವಾಗಿ ಹೊರಹೊಮ್ಮಿದ್ದು, ಇದು ಅದರ ವೃದ್ಧಿ ಹೊಂದುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಸಾಮರ್ಥ್ಯವನ್ನು ಹೊಂದಿದೆ.
ಆದರೆ ಭಾರತ, ಜಗತ್ತಿನ ಎರಡನೆಯ ದೊಡ್ಡ ಆರ್ಥಿಕ ಶಕ್ತಿ ಮತ್ತು ಅತಿದೊಡ್ಡ ಜನಸಂಖ್ಯೆಯ ದೇಶವಾಗಿದ್ದರೂ ಸಹ ಆರ್ಥಿಕತೆಯ ಕೇವಲ ಶೇ ೦.7 ಮಾತ್ರ ಸಂಶೋಧನೆಗೆ ವ್ಯಯಿಸುತ್ತದೆ. ಇದು ಪ್ರಪಂಚದಲ್ಲಿಯೇ ಅತ್ಯಂತ ಕಡಿಮೆ. ಈ ಕಾರಣದಿಂದ ನಮ್ಮಲ್ಲಿ ಅನೇಕ ವರ್ಷದಿಂದ ಯಾವುದೇ ಆವಿಷ್ಕಾರಗಳಿಲ್ಲ. ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಹಸಿವು, ಬಡತನ ನೀಗಿಸುವುದು ಆಧ್ಯತೆಯಾಗಿದ್ದರೂ ಆರ್ಥಿಕತೆ ಚೇತರಿಸಿದ ನಂತರವೂ ಸಹ ಹಿಂದಿನ ಮನೋಭಾವವೇ ಮುಂದುವರೆದಿರುವುದು ದುರಂತದ ವಿಷಯ..
12. ವಿಜ್ಞಾನದ ಬಗೆಗಿನ ಅಸಡ್ಡೆ ಮತ್ತು ತಿರಸ್ಕಾರ
ವಿಮಾನವೊಂದು ಅಪಘಾತವಾದರೆ ವಿಮಾನದ ಆವಿಷ್ಕಾರವೇ ಬೇಡವಾಗಿತ್ತು ಎನ್ನುವುದು, ವಿದ್ಯುತ್ ಶಾಕ್ ತಾಗಿ ಯಾರಾದರೂ ಮರಣ ಹೊಂದಿದರೆ ವಿದ್ಯುತ್ ನಮಗೆ ಅವಶ್ಯವೇ ಇಲ್ಲ ಎನ್ನುವುದು, ಕೀಟನಾಶಕಗಳ ರಸಗೊಬ್ಬರ ಬಳಕೆಯಿಂದ ಆದ ಹಸಿರು ಕ್ರಾಂತಿಯ ಆಹಾರ ಸ್ವಾಲಂಭನೆಯನ್ನು, ಮಿಶ್ರತಳಿಗಳಿಂದ ಆದ ಶ್ವೇತ ಕ್ರಾಂತಿ ಮತ್ತು ಕೇವಲ ಶ್ರೀಮಂತರ ಸ್ವತ್ತಾಗಿದ್ದ ಹಾಲು ಎಲ್ಲರಿಗೂ ದೊರಕುವ ಹಾಗಾಗಿದ್ದನ್ನು ಪರಿಗಣಿಸುವುದಿರಲಿ ವಿಷ, ಹಾಲಲ್ಲ ಹಾಲಾಹಲ ಎನ್ನುವುದು, ದೇಶಿ ಹಸುಗಳನ್ನು ರಕ್ಷಣೆಯನ್ನು ಮಾಡಬೇಕೆಂದು ಹೇಳಲು ಹೊರಟು ಅವೈಜ್ಞಾನಿಕ ವಿಷಯಗಳ ಬಗ್ಗೆ ಪತ್ರಿಕೆ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಬಾಯಿಗೆ ತೋಚಿದಂತೆ ಸುಳ್ಳುಗಳ ರಾಶಿಯನ್ನು ಸಾರ್ವಜನಿಕವಾಗಿ ಸುರಿದರೂ ಸಹ ಇದು ತಪ್ಪು ಎನ್ನಲಾಗದಷ್ಟು ಹೊಂದಾಣಿಕೆ ಮನೋಭಾವನೆಯನ್ನು ತಜ್ಞರು ಹೊಂದಿ ಹೇಡಿಗಳು ಮತ್ತು ಅಸಹಾಯಕರಾಗಿರುವುದು ಮತ್ತು ಶೇ 95 ಕ್ಕಿಂತ ಜಾಸ್ತಿ ಇರುವ ಈ ದೈತ್ಯಶಕ್ತಿಯ ವಿಜ್ಞಾನ ವಿರೋಧಗಳ ಮುಂದೆ ಶೇ ೫ ಕ್ಕಿಂತ ಕಡಿಮೆ ಇರುವ ಅಲ್ಪಸಂಖ್ಯಾತ ವೈಜ್ಞಾನಿಕ ಮನೋಭಾವ ಹೊಂದಿರುವವರ ಕೀರಲು ಧ್ವನಿ ಕ್ಷೀಣಿಸಿ ಹೋಗುವುದು ಆವಿಷ್ಕಾರಗಳ ಮರಣಕ್ಕೆ ಮುನ್ನುಡಿ ಬರೆಯುತ್ತದೆ.
ಒಂದಂತೂ ನಿಜ. ಆವಿಷ್ಕಾರಗಳು ಮತ್ತು ವೈಜ್ಞಾನಿಕ ಮನೋಭಾವಕ್ಕೆ ಬೆಲೆ ನೀಡದ ಯಾವ ದೇಶಗಳೂ ಸಹ ಉದ್ಧಾರವಾಗಿಲ್ಲ. ಇರಾನ್, ಇರಾಕ್ ಸೇರಿದಂತೆ ಕರ್ಮಠ ಧರ್ಮಪಾಲನೆಯಲ್ಲಿ ತೊಡಗಿದ ಅನೇಕ ದೇಶಗಳು ಸಹ ವಿಜ್ಞಾನಕ್ಕೆ ಮತ್ತು ವೈಜ್ಞಾನಿಕ ಆವಿಷ್ಕಾರಕ್ಕೆ ತೆರೆದುಕೊಂಡಿವೆ. ಪಕ್ಕಾ ಮುಸ್ಲಿಂ ದೇಷವಾದ ದುಬೈ ಇದಕ್ಕೊಂದು ಉತ್ತಮ ಉದಾಹರಣೆ. ಭಾರತಕ್ಕೂ ಸಹ ಅನೇಕ ಸಹಸ್ರ ವರ್ಷಗಳ ಹಿಂದಿದ್ದ ಆವಿಷ್ಕಾರಗಳ ಕೀರ್ತಿ ಮರಳಿ ಮತ್ತು ನಮ್ಮಲ್ಲಿಯೂ ಸಹ ಸಾಕಷ್ಟು ವೈಜ್ಞಾನಿಕ ಆವಿಷ್ಕಾರಗಳಾಗಲಿ, ತನ್ಮೂಲಕ ನಮ್ಮದು ಶ್ರೀಮಂತ ದೇಶಗಳಲ್ಲಿ ಮುಂಚೂಣಿಯಲ್ಲಿದ್ದು ಯಾವುದೇ ಬಾಹ್ಯ ಶಕ್ತಿಗೆ ಬಗ್ಗದೇ ನೂತನ ಆವಿಷ್ಕಾರಗಳ ಉಗಮವಾಗಲಿ ಎಂಬುದು ಆಶಯ.
ಇದನ್ನೂ ನೋಡಿ: ‘ಷಡ್ಯಂತ್ರ’ ಯಾರದ್ದು??ದೂರುದಾರನನ್ನು ಬಂಧಿಸಿದ್ದುಯಾಕೆ??? Janashakthi Media
