ಮನುಸ್ಮೃತಿಯಲ್ಲಿ ನಿಜವಾಗಿಯೂ ಹಿರಿದಾದ ತತ್ವಗಳಿವೆಯೆ?

ಟಿ.ಸುರೇಂದ್ರರಾವ್
“ಮನು ಬ್ರಾಹ್ಮಣನಲ್ಲ, ವರ್ಣಗಳು ಜಾತಿಗಳಲ್ಲ ಮತ್ತು ಮನುಸ್ಮೃತಿ ಅನೇಕ ಹಿರಿದಾದ ತತ್ವಗಳನ್ನು ಹೊಂದಿದೆ” ಎಂದು ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅಭಿಪ್ರಾಯಪಟ್ಟಿದ್ದಾರೆ. “ತರತಮಗಳಿಲ್ಲದ ವ್ಯವಸ್ಥೆಯೇ ಧರ್ಮ” ಎಂದೂ ಅವರು ಹೇಳಿರುವುದಾಗಿ (ಪ್ರಜಾವಾಣಿ 13.08.24 ಪುಟ 2) ವರದಿಯಾಗಿದೆ. ಮಾನ್ಯ ನ್ಯಾಯಮೂರ್ತಿಗಳ ಹೇಳಿಕೆಯ ಹಿನ್ನೆಲೆಯಲ್ಲಿ ಮನುಸ್ಮೃತಿಯನ್ನು ಒಮ್ಮೆ ಅವಲೋಕಿಸುವುದರ ಮೂಲಕ ‘ಮನುಸ್ಮೃತಿಯ ಹಿರಿದಾದ ತತ್ವಗಳು’ ಯಾವುವು ಮತ್ತು ‘ಧರ್ಮವು ನಿಜಕ್ಕೂ ತರತಮಗಳನ್ನು ಹೊಂದಿಲ್ಲವೇ?’ ಎಂಬುದನ್ನು ಪರಿಶೀಲಿಸೋಣ.

ಮನುಸ್ಮೃತಿಯ ಪ್ರಕಾರ ನಾಲ್ಕು ವರ್ಣಗಳ ಕರ್ತವ್ಯಗಳು ಈ ರೀತಿಯಲ್ಲಿವೆ:

ಮನುಸ್ಮೃತಿಯ (ಅಧ್ಯಾಯ 1 ಶ್ಲೋಕ 31) ಪ್ರಕಾರ ‘ಲೋಕಗಳ ಅಭಿವೃದ್ಧಿಗಾಗಿ ಬ್ರಹ್ಮನು ತನ್ನ ಮುಖದಿಂದ ಬ್ರಾಹ್ಮಣನನ್ನೂ, ಭುಜದಿಂದ ಕ್ಷತ್ರಿಯನನ್ನೂ, ತೊಡೆಯಿಂದ ವೈಶ್ಯನನ್ನೂ, ಪಾದದಿಂದ ಶೂದ್ರನನ್ನೂ ನಿರ್ಮಿಸಿದನು.

ಅಧ್ಯಾಪನ, ಅಧ್ಯಯನ, ಯಜ್ಞಮಾಡುವುದು-ಮಾಡಿಸುವುದು, ದಾನ ಕೊಡುವುದು, ದಾನವನ್ನು ತೆಗೆದುಕೊಳ್ಳುವುದು ಇವು ಆರು ಬ್ರಾಹ್ಮಣನ ಆರು ಕರ್ಮಗಳು (ಅ.1. ಶ್ಲೋ.88).

ಇದನ್ನೂ ಓದಿ: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸೌಮ್ಯಾ ರೆಡ್ಡಿ ನೇಮಕ

ಪ್ರಜೆಗಳ ರಕ್ಷಣೆ, ದಾನ ಕೊಡುವುದು, ಯಾಗ ಮಾಡುವುದು, ಅಧ್ಯಯನ ಮಾಡುವುದು, ವಿಷಯಗಳಲ್ಲಿ (ಭೋಗಗಳಲ್ಲಿ) ಆಸಕ್ತಿ ಇಲ್ಲದಿರುವುದು ಇವು ಕ್ಷತ್ರಿಯನ ಕರ್ತವ್ಯಗಳು (ಅ.1. ಶ್ಲೋ.89).

ಪಶುಪಾಲನೆ, ದಾನ ಕೊಡುವುದು, ಹೋಮ ಮಾಡುವುದು, ಅಧ್ಯಯನ ಮಾಡುವುದು, ನೆಲ-ಜಲಗಳಲ್ಲಿ ವ್ಯಾಪಾರ, ಬಡ್ಡಿ ಸಾಲ ಕೊಡುವುದು, ಕೃಷಿ ಇವು ವೈಶ್ಯನ ಕರ್ಮಗಳು. (ಅ.1. ಶ್ಲೋ.90).

ಮಹಾಪ್ರಭುವಾದ ಬ್ರಹ್ಮನು, ಈ ಮೇಲಿನ ಮೂರೂ ವರ್ಣಗಳ ಜನರ ನಿಸ್ವಾರ್ಥ ಸೇವೆ ಮಾಡಿಕೊಂಡಿರುವುದನ್ನೇ ಶೂದ್ರನಿಗೆ ಕರ್ತವ್ಯವೆಂದು ಆದೇಶಿಸಿದ್ದಾನೆ (ಅ.1. ಶ್ಲೋ.91).

ಬ್ರಾಹ್ಮಣನಿಗೆ ವಿಶೇಷ ಸೌಲಭ್ಯಗಳನ್ನು ದಯಪಾಲಿಸಿದ ಮನುಸ್ಮೃತಿ

ಮುಖದಿಂದ ಜನಿಸಿದ್ದರಿಂದ, ಮೊಟ್ಟಮೊದಲಿಗೆ ಹುಟ್ಟಿದ್ದರಿಂದ, ಜ್ಞಾನವನ್ನು ಧಾರಣ ಮಾಡಿರುವುದರಿಂದ ಬ್ರಾಹ್ಮಣನು ಈ ಸಮಸ್ತ ಸೃಷ್ಟಿಯ ಎಲ್ಲದಕ್ಕೂ ಲೋಕಧರ್ಮಕ್ಕೆ ಅನುಸಾರವಾಗಿ ಒಡೆಯನಾಗಿರುವನು. (ಅ.1,ಶ್ಲೋ.93).

ಈ ಭೂಮಿಯಲ್ಲಿರುವುದೆಲ್ಲವೂ ಬ್ರಾಹಣನದಾಗಿದೆ. ಶ್ರೇಷ್ಠವಾದ ಜನ್ಮವನ್ನು ಪಡೆದದ್ದರಿಂದ ಇದೆಲ್ಲವನ್ನೂ ಹೊಂದಲು ಅವನು ಅರ್ಹನಾಗುತ್ತಾನೆ (ಅ.1, ಶ್ಲೋ.100).

ಬ್ರಾಹ್ಮಣನ ಕರ್ಮ (ಕರ್ತವ್ಯ) ವನ್ನು ತಿಳಿಸಿಕೊಡಲು ಹಾಗು ಕ್ಷತ್ರಿಯಾದಿ ಉಳಿದ ವರ್ಣಗಳವರ ಕಾರ್ಯಗಳನ್ನು ತಿಳಿಸಿಕೊಡಲು ಧೀಮಂತನಾದ ಸ್ವಾಯಂಭುವ ಮನುವು ಈ ಧರ್ಮವನ್ನು ರಚಿಸಿದನು (ಅ.1, ಶ್ಲೋ.102).

ಬ್ರಾಹ್ಮಣನು ಈ ಧರ್ಮಶಾಸ್ತçವನ್ನು ಅಧ್ಯಯನ ಮಾಡಿ ಶಿಷ್ಯರಿಗೆ ಬೋಧಿಸಬೇಕು. ಬ್ರಾಹ್ಮಣನ ಹೊರತಾಗಿ ಇನ್ನಾವನೂ ಇದನ್ನು ಕಲಿಸಬಾರದು (ಅ.1, ಶ್ಲೋ.103).

ಮನುಸ್ಮೃತಿಯ ನಿಯಮಗಳನ್ನೇ “ಧರ್ಮ” ಎಂದು ಕರೆಯಲಾಗಿದೆ ಎನ್ನುವುದನ್ನು ನಾವು ಈ ಶ್ಲೋಕಗಳಲ್ಲಿ ಸ್ಪಷ್ಟವಾಗಿ ಗಮನಿಸಬೇಕು.

ಇನ್ನು ಮುಂದೆ, ವಿವಿಧ ವರ್ಣಗಳ ಜನರ ನಡುವೆ ಯಾವ ರೀತಿಯಲ್ಲಿ ಈ “ಧರ್ಮ”ವು ತಾರತಮ್ಯ ಎಸಗಿದೆ ಎನ್ನುವುದನ್ನು ನೋಡಬಹುದು.

ಬ್ರಾಹ್ಮಣನಿಗೆ ಮಂಗಲಸೂಚಕವಾದ, ಕ್ಷತ್ರಿಯನಿಗೆ ಬಲಸೂಚಕವಾದ, ವೈಶ್ಯನಿಗೆ ಧನಸೂಚಕವಾದ ಹಾಗೂ ಶೂದ್ರನಿಗೆ ಜುಗುಪ್ಸಾ ಸೂಚಕವಾದ ಹೆಸರುಗಳನ್ನು ಇಡಬೇಕು (ಅ.2, ಶ್ಲೋ.31). ಬ್ರಾಹ್ಮಣನಿಗೆ ‘ಶರ್ಮ’ ಎಂತಲೂ, ರಾಜನಿಗೆ ರಕ್ಷಣೆಯನ್ನು ಸೂಚಿಸುವ ‘ವರ್ಮ’ ಎಂತಲೂ, ವೈಶ್ಯನಿಗೆ ಸಮೃದ್ಧಿಯನ್ನು ಸೂಚಿಸುವ ‘ಗುಪ್ತ’ ಎಂತಲೂ ಹಾಗೂ ಶೂದ್ರನಿಗೆ ಪ್ರೇಷ್ಯ ಸೂಚಕವಾದ ‘ದಾಸ’ ಎಂಬ ಹೆಸರನ್ನು ಸೇರಿಸಬೇಕು (ಅ.2. ಶ್ಲೋ.32).

ದ್ವಿಜಾತಿಯವರಿಗೆ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ) ಮೊದಲ ವಿವಾಹದಲ್ಲಿ ತಮ್ಮ ತಮ್ಮ ಜಾತಿಯ ಕನ್ಯೆಯೇ ಆಗಬೇಕು. ದೇಹ ಸುಖಕ್ಕಾಗಿ ನಂತರ ಮಾಡಿಕೊಳ್ಳುವ ವಿವಾಹದಲ್ಲಿ ಬೇಕಾದ ಜಾತಿಯವಳನ್ನು ಮದುವೆಯಾಗಬಹುದು (ಅ.3. ಶ್ಲೋ.12).

ಶೂದ್ರನಿಗೆ ಶೂದ್ರಳೇ ಹೆಂಡತಿಯಾಗಬೇಕು. ವೈಶ್ಯನಿಗೆ ವೈಶ್ಯ ಜಾತಿಯ ಹಾಗೂ ಶೂದ್ರ ಜಾತಿಯ ಹೆಣ್ಣಾಗಬಹುದು. ಕ್ಷತ್ರಿಯನಿಗೆ ಕ್ಷತ್ರಿಯ ಜಾತಿಯವಳು, ವೈಶ್ಯ ಜಾತಿಯವಳು ಹಾಗೂ ಶೂದ್ರ ಜಾತಿಯವಳು ಹೆಂಡತಿಯಾಗಬಹುದು. ಬ್ರಾಹ್ಮಣನಿಗೆ ಬ್ರಾಹಣ ಸ್ತ್ರೀಯೂ, ಕ್ಷತ್ರಿಯಳೂ, ವೈಶ್ಯಳೂ, ಶೂದ್ರಳೂ ಹೆಂಡತಿಯಾಗಬಹುದು (ಅ.3.ಶ್ಲೋ.13).

ಎಂತಹ ಅನಿವಾರ್ಯ ಸಂದರ್ಭದಲ್ಲಿಯೂ ಬ್ರಾಹಣ ಹಾಗೂ ಕ್ಷತ್ರಿಯ ವರಗಳು ಶೂದ್ರ ಸ್ತ್ರೀಯನ್ನು ಪ್ರಥಮ ಹೆಂಡತಿಯಾಗಿ ವಿವಾಹವಾಗಬಾರದು (ಅ.3. ಶ್ಲೋ. 14).

ಶೂದ್ರನು ಸಂಬಳಕ್ಕೆ ಗೊತ್ತುಮಾಡಿಕೊಂಡವನಾಗಿರಲಿ ಅಥವಾ ಇಲ್ಲದಿರಲಿ ಅಂಥ ಶೂದ್ರನಿಂದ ಬ್ರಾಹ್ಮಣನು ತನ್ನ ಸೇವೆ ಮಾಡಿಸಿಕೊಳ್ಳಬೇಕು. ಏಕೆಂದರೆ ಬ್ರಾಹ್ಮಣನ ಸೇವೆಗಾಗಿಯೇ ಶೂದ್ರನು ಬ್ರಹ್ಮನಿಂದ ಸೃಷ್ಟಿಸಲ್ಪಟ್ಟಿದ್ದಾನೆ (ಅ.8. ಶ್ಲೋ. 413).

ಒಡೆಯನು ಶೂದ್ರನನ್ನು ಬಿಡುಗಡೆ ಮಾಡಿದರೂ ಆ ಶೂದ್ರನು ಸೇವಕ ವೃತ್ತಿಯಿಂದ ಬಿಡುಗಡೆ ಹೊಂದಲಾರನು. ಏಕೆಂದರೆ ಸೇವಕ ವೃತ್ತಿಯು ಶೂದ್ರನ ಸಹಜ ಕರ್ತವ್ಯವಾಗಿದೆ. ಯಾವನು ತಾನೆ ಅದನ್ನು ಬಿಡಿಸಲು ಸಾಧ್ಯ? (ಅ.8.ಶ್ಲೋ. 14).

ಬ್ರಾಹಣನು ತನ್ನ ಸೇವಕನಾದ ಶೂದ್ರನ ಹಣವನ್ನು ಹಿಂದುಮುಂದು ನೋಡದೇ ಪಡೆಯಬಹುದು. ಏಕೆಂದರೆ ಸೇವಕನಿಗೆ ಸ್ವಂತದ್ದೆಂಬುದು ಏನೂ ಇರುವುದೇ ಇಲ್ಲ. ತನ್ನದೆಲ್ಲವನ್ನೂ ಅವನು ಒಡೆಯನಿಗೆ ಒಪ್ಪಿಸತಕ್ಕದ್ದು (ಅ.8.ಶ್ಲೋ. 417).

ಉಪನಯನ ಸಂಸ್ಕಾರ ಹೊಂದಲು ಅರ್ಹತೆಯಿಲ್ಲದ ಶೂದ್ರನು ದ್ವಿಜಾತಿಯವರಾದ ಬ್ರಾಹ್ಮಣ, ಕ್ಞತ್ರಿಯ, ವೈಶ್ಯರನ್ನು ಹೀನವಾದ ಕೆಟ್ಟ ಮಾತುಗಳಿಂದ ಬೈದರೆ, ಕೆಳಜಾತಿಯಲ್ಲಿ ಹುಟ್ಟಿದ ಆ ಶೂದ್ರನ ನಾಲಿಗೆಯನ್ನು ಛೇದಿಸತಕ್ಕದ್ದು, ಏಕೆಂದರೆ ಅವನು ಕೆಳ ಜಾತಿಯವನು. (ಅ.8, ಶ್ಲೋ. 270)

ಬ್ರಾಹ್ಮಣನಿಗೆ ಅಹಂಕಾರದಿಂದ ಧರ್ಮವನ್ನು ಬೋಧಿಸುವ ಶೂದ್ರನಿಗೆ ರಾಜನು ಬಾಯಿಯಲ್ಲಿ ಹಾಗೂ ಕಿವಿಯಲ್ಲಿ ಕಾದ ಎಣ್ಣೆಯನ್ನು ಹಾಕಿಸಬೇಕು. (ಅ.8, ಶ್ಲೋ. 272)

ಬ್ರಾಹ್ಮಣನ ಜತೆಗೆ ಒಂದೇ ಆಸನದಲ್ಲಿ ಕುಳಿತ ಅಂತ್ಯಜನಿಗೆ ಅಥವಾ ಶೂದ್ರನಿಗೆ ಸೊಂಟದಲ್ಲಿ ಬರೆ ಎಳೆದು ಊರಿನಿಂದ ಹೊರಗೆ ಹಾಕಬೇಕು, ಇಲ್ಲವೇ ಕುಂಡೆಯನ್ನು ಕತ್ತರಿಸಬೇಕು (ಆಗ ಅವನು ಸಾಯಬಾರದು) (ಅ.8, ಶ್ಲೋ281)

ಕೆಲಸ ಮಾಡುವ ಶೂದ್ರನಿಗೆ ಉಳಿದ ಅನ್ನವನ್ನೂ, ಹಳೆಯ ಬಟ್ಟೆಗಳನ್ನೂ, ಕೇರಿಕೊಂಡು ಹಸನು ಮಾಡಿದ ನಂತರ ಉಳಿದ ಧಾನ್ಯಗಳನ್ನೂ ಕೊಡಬೇಕು. (ಅ.10, ಶ್ಲೋ.125)

ಬ್ರಾಹ್ಮಣ, ಕ್ಷತ್ರಿಯ ಹಾಗೂ ವೈಶ್ಯರು ಶೂದ್ರ ಸ್ತ್ರೀಯಲ್ಲಿ ಹುಟ್ಟಿಸಿದ ಮಕ್ಕಳಿಗೆ ತಮ್ಮ ಆಸ್ತಿಯಲ್ಲಿ ಪಾಲು ಕೊಡುವ ಅವಶ್ಯಕತೆಯಿಲ್ಲ. ಹುಟ್ಟಿಸಿದ ತಂದೆಯು ಸಂತೋಷದಿಂದ ಎಷ್ಟು ಹಣ ಕೊಡುವನೋ ಅಷ್ಟೇ ಸಾಕು. (ಅ.9, ಶ್ಲೋ.155)

ಸಮಾನತೆಯನ್ನು ದಯಪಾಲಿಸಿದ ಸಂವಿಧಾನವನ್ನು ರಕ್ಷಿಸಬೇಕಾದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿಗೆ ವಿವಿಧ ಜಾತಿಗಳ (ವರ್ಣಗಳ) ಜನರ ನಡುವೆ ತಾರತಮ್ಯ ಬೋಧಿಸುವ, ಬಹಳ ಮುಖ್ಯವಾಗಿ ಶೂದ್ರ ಜಾತಿಯವರನ್ನು ಗುಲಾಮರಂತೆ ನಡೆಸಿಕೊಳ್ಳುವ ಮನುಸ್ಮೃತಿಯ ನಿಯಮಗಳು ಹೇಗೆ ‘ಹಿರಿದಾದ ತತ್ವಗಳು’ ಆಗುತ್ತವೆ?

ಮಹಿಳೆಯರಿಗೆ ಸಂಬಂಧಪಟ್ಟ ಮನುವಿನ ನಿಯಮಗಳು

ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳಾ ಸಮುದಾಯವನ್ನು ಈ ಮನುಸ್ಮೃತಿ ಹೇಗೆ ನೋಡುತ್ತದೆ ಎಂಬುದನ್ನು “ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ” (ಅ.9.ಶ್ಲೋ.3) ಎಂಬ ಒಂದು ಶ್ಲೋಕ ಹಾಗೂ ಅದೇ ಅಧ್ಯಾಯದ ಹಲವಾರು ಶ್ಲೋಕಗಳಿಂದ ನಾವು ತಿಳಿದುಕೊಳ್ಳಬಹುದು.

ಬಾಲಕಿಯಿದ್ದಾಗಲೂ, ಯುವತಿಯಾದಾಗಲೂ, ವೃದ್ಧೆಯಾದಾಗಲೂ ಮನೆಯಲ್ಲಿದ್ದಾಗಲೂ ತಾನೇ ಸ್ವತಂತ್ರವಾಗಿ ಸ್ತ್ರೀಯು ಯಾವ ಕಾರ್ಯವನ್ನೂ ಮಾಡಬಾರದು. (ಅ-5, ಶ್ಲೋ-147)

ಸ್ತ್ರೀಯು ಬಾಲ್ಯದಲ್ಲಿ ತಂದೆಯ ವಶದಲ್ಲಿ, ಯೌವನದಲ್ಲಿ ಗಂಡನ ಅಧೀನದಲ್ಲಿ, ಗಂಡ ಸತ್ತ ನಂತರ ಪುತ್ರನ ಅಧೀನದಲ್ಲಿ ಬಾಳಬೇಕೇ ವಿನಃ ತಾನೇ ಸ್ವತಂತ್ರವಾಗಿ ವ್ಯವಹರಿಸಬಾರದು. (ಅ-5, ಶ್ಲೋ-148)

ಶಯ್ಯೆ, ಆಸನ, ಅಲಂಕಾರ ಇವುಗಳ ಮೋಹ, ಕಾಮ, ಕ್ರೋಧ, ಅಪ್ರಾಮಾಣಿಕತೆ, ಪತಿದ್ರೋಹ ಮತ್ತು ದುರ್ನಡತೆ ಇವು ಸಾಮಾನ್ಯವಾಗಿ ಸ್ತ್ರೀಯರಲ್ಲಿರುವ ಸ್ವಾಭಾವಿಕ ಗುಣಗಳೆಂದು ಮನುವು ಹೇಳುತ್ತಾನೆ. (ಅ-9, ಶ್ಲೋ-17)

ಸ್ತ್ರೀಯರಿಗೆ ಮಂತ್ರಪೂರ್ವಕವಾದ ಧರ್ಮಸಂಸ್ಕಾರಗಳಿಲ್ಲ ಎಂದು ಶಾಸ್ತ್ರವು ಹೇಳುತ್ತದೆ. ಇಂದ್ರಿಯಗಳನ್ನು ನಿಗ್ರಹಿಸುವ ಮಂತ್ರಸಾಧನಗಳು ಸ್ತ್ರೀಯರಿಗೆ ಹೇಳಲ್ಪಟ್ಟಿಲ್ಲವಾದ್ದರಿಂದ ಅವರು ಅಶುದ್ಧರಾಗಿಯೇ ಇರುತ್ತಾರೆ ಎಂಬುದು ಧರ್ಮದ ವಿಚಾರವಾಗಿದೆ. (ಅ-9, ಶ್ಲೋ-18)

ನಿಜ ಸ್ಥಿತಿ ಹೀಗಿರುವಾಗ ನ್ಯಾಯಮೂರ್ತಿಗಳು “ಮನುಸ್ಮೃತಿಯು ಹಿರಿದಾದ ತತ್ವಗಳನ್ನು ಒಳಗೊಂಡಿವೆ” ಎಂದು ಯಾವ ಆಧಾರದಲ್ಲಿ ಹೇಳುತ್ತಾರೆ. ಅವರ ಅಭಿಪ್ರಾಯಗಳು ಭಾರತದ ಸಂವಿಧಾನದ ಮೂಲ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಹಾಗೂ ಸೋದರತ್ವದ ಮೌಲ್ಯಗಳಿಗೆ ವಿರುದ್ಧವಾಗಿವೆಯಲ್ಲವೆ?

ಸಂವಿಧಾನ ರಚನಾ ಸಭೆಯಲ್ಲಿ ಮತ್ತು ಆ ನಂತರ ಸಂವಿಧಾನ ಅಂಗೀಕಾರವಾಗುವ ಸಮಯದಲ್ಲಿಯೂ ‘ಮನುಸ್ಮೃತಿ’ಯನ್ನು ನಮ್ಮ ಸಂವಿಧಾನವಾಗಿ ಅಂಗೀಕರಿಸಬೇಕು ಎಂದು ಆರ್.ಎಸ್.ಎಸ್. ಮತ್ತು ಹಿಂದೂ ಮಹಾಸಭಾದವರು ಒತ್ತಾಯಿಸಿದ್ದರು ಎನ್ನುವುದು ಈಗ ಇತಿಹಾಸದ ಭಾಗವಾಗಿದೆ. 2014 ರ ನಂತರ ದೆಹಲಿಯ ಜಂತರ್‌ಮಂತರ್‌ನಲ್ಲಿ ದೇಶದ ಸಂವಿಧಾನದ ಪ್ರತಿಯನ್ನು ಸುಟ್ಟುಹಾಕಿ ‘ಅಂಬೇಡ್ಕರ್ ಮುರ್ದಾಬಾದ್’ ಎಂದ ಗುಂಪು ‘ಮನುಸ್ಮೃತಿ ಜಿಂದಾಬಾದ್’ ಎಂಬ ಘೋಷಣೆಯನ್ನೂ ನೀಡಿತ್ತು ಎನ್ನುವುದನ್ನು ನಾವು ಮರೆಯಬಾರದು.

ಇದನ್ನೂ ನೋಡಿ: ಆರ್ಥಿಕವಾಗಿ ಸುಧಾರಿಸುತ್ತಿದ್ದ ಬಾಂಗ್ಲಾದೇಶದಲ್ಲಿ ದಂಗೆ ಉಂಟಾಗಿದ್ದು ಯಾಕೆ? ಇದರ ಹಿಂದೆ ಯಾರ ಕೈವಾಡ ಇದೆ

Donate Janashakthi Media

Leave a Reply

Your email address will not be published. Required fields are marked *