ಅಮೆರಿಕದ ಪಡೆಗಳು ಅಫ್ಘಾನಿಸ್ತಾನದಿಂದ ತೆರಳಲು ಆರಂಭಿಸುತ್ತಿದ್ದಂತೆ ತಾಲಿಬಾನಿ ಪಡೆಗಳು ಅಫ್ಘಾನಿಸ್ತಾನದ ಸರಕಾರಿ ಪಡೆಗಳ ಮೇಲೆ ಭಾರೀ ಕ್ಷಿಪ್ರದಾಳಿಗಳನ್ನು ಆರಂಭಿಸಿವೆ. ಅಫ್ಘಾನಿಸ್ತಾನದ ಸರಕಾರಿ ಪಡೆಗಳ ಭೌತಿಕ ಮತ್ತು ನೈತಿಕ ಮನೋಬಲ ಕಡಿಮೆ ಇದ್ದು, ಒಂದೊಂದಾಗಿ ಜಿಲ್ಲೆ-ಪ್ರಾಂತಗಳ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಿವೆ. ಅಗಸ್ಟ್ 13 ರ ಹೊತ್ತಿಗೆ ದೇಶದ 34 ಪ್ರಾಂತಗಳಲ್ಲಿ 18 ಪ್ರಾಂತಗಳ ರಾಜಧಾನಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಅರ್ಧ ದೇಶದ ಮೇಲೆ ತಾಲಿಬಾನ್ ನಿಯಂತ್ರಣ ಸಾಧಿಸಿದಂತಾಗಿದೆ. ಪಶ್ಚಿಮದಲ್ಲಿ ಇರಾನ್ ಜತೆ ಗಡಿ ಇರುವ ಆಯಕಟ್ಟಿನ ಪ್ರಾಂತೀಯ ರಾಜಧಾನಿಗಳಾದ ಹೇರಟ್, ಫರಾ, ಝರಾನಿ; ವಾಯುವ್ಯ ಮತ್ತು ಉತ್ತರಕ್ಕೆ ತುರ್ಕೆಮಾನಿಸ್ತಾನ, ಉಜ್ಬೇಕಿಸ್ತಾನ, ತಾಜಕಿಸ್ತಾನದ ಜತೆ ಗಡಿ ಇರುವ ಆಯಕಟ್ಟಿನ ಪ್ರಾಂತೀಯ ರಾಜಧಾನಿಗಳಾದ ಶೆಬೆರ್‌ಘಾನ್, ಮಜರ್-ಎ-ಶರೀಫ್, ಪುಲ್-ಎ.-ಖುಮ್ರಿ, ಫೈಜಾಬಾದ್, ಕುಂಡುಝ್; ದಕ್ಷಿಣದ ಪಾಕಿಸ್ತಾನದ ಜತೆ ಗಡಿ ಇರುವ ಲಷ್ಕರ್ ಗಾ, ಕಂದಾಹಾರ್, ಘಜನಿ ಗಳನ್ನು ವಶಪಡಿಸಿಕೊಂಡು ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ.
ಅಗಸ್ಟ್ 12ರ ಹೊತ್ತಿಗೆ 407 ಜಿಲ್ಲೆಗಳಲ್ಲಿ 232 ಜಿಲ್ಲೆಗಳು ತಾಲಿಬಾನ್ ಆಡಳಿತದಡಿಗೆ ಬಂದಿವೆ. 110 ಜಿಲ್ಲೆಗಳಲ್ಲಿ ತಾಲಿಬಾನ್ ಮತ್ತು ಸರ್ಕಾರಿ ಪಡೆಗಳ ನಡುವೆ ಭೀಕರ ಕದನ ಸಾಗಿದ್ದು ಅವು ಇಬ್ಬರ ನಿಯಂತ್ರಣದಲ್ಲೂ ಇಲ್ಲ. ಕೇವಲ 65 ಜಿಲ್ಲೆಗಳಲ್ಲಿ ಸರ್ಕಾರಿ ಪಡೆಗಳ ನಿಯಂತ್ರಣವಿದೆ. ಈಗಾಗಲೇ ತಾಲಿಬಾನ್ ದೇಶದ 65% ಭೂಭಾಗದ ಮತ್ತು ಅರ್ಧಕ್ಕಿಂತಲೂ ಹೆಚ್ಚು ಜನಸಂಖ್ಯೆ ಮೇಲೆ ನಿಯಂತ್ರಣ ಸಾಧಿಸಿದೆ. ಸರ್ಕಾರಿ ಪಡೆಗಳ ನಿಯಂತ್ರಣ ರಾಜಧಾನಿ ಕಾಬೂಲ್ ಮತ್ತು ಸುತ್ತಮುತ್ತದ ಪ್ರಾಂತಗಳಲ್ಲಿ ಮಾತ್ರ ಉಳಿದುಕೊಂಡಿದೆ, ಅದೂ ಅದರ ವಾಯುಸೈನ್ಯದ ಬಲದಿಂದಾಗಿ, ಭೂಪಡೆಗಳ ಕದನದಲ್ಲಿ ಸರ್ಕಾರಿ ಪಡೆಗಳು ತಾಲಿಬಾನ್ ಎದುರಿಸಿ ಹಿಮ್ಮೆಟ್ಟಿಸಿದ್ದು ಅಪರೂಪವೇ.
ಅಮೆರಿಕದ ಪಡೆಗಳು ಸೆಪ್ಟೆಂಬರ್ 2020ರಲ್ಲಿ ತಾಲಿಬಾನ್ ಜತೆ ಮಾಡಿದ ಒಪ್ಪಂದದ ಪ್ರಕಾರ, ಮೇ 1ರಂದು ಅಫ್ಘಾನಿಸ್ತಾನದಿಂದ ತೆರಳುತ್ತಿದ್ದಂತೆ, ಇಷ್ಟು ಕ್ಷಿಪ್ರವಾದ ತಾಲಿಬಾನ್ ಮುನ್ನಡೆ ಪೂರ್ಣ ಅನಿರೀಕ್ಷಿತವಲ್ಲದಿದ್ದರೂ, ಅದರ ವೇಗ ಎಲ್ಲರನ್ನು ಚಕಿತಗೊಳಿಸಿದೆ. ಮೇ ನಲ್ಲಿ 15, ಜೂನ್ ನಲ್ಲಿ 69, ಜುಲೈನಲ್ಲಿ 64 ಜಿಲ್ಲೆಗಳನ್ನು ಗೆದ್ದುಕೊಳ್ಳುವ ಮೂಲಕ ಅಗಸ್ಟ್ ನಲ್ಲಿ ಇನ್ನಷ್ಟು ವೇಗವಾದ ಮುನ್ನಡೆಯನ್ನು ಸಾಧಿಸಿದೆ. ಅಫ್ಘಾನಿಸ್ತಾನದ ಸರಕಾರಿ ಪಡೆಗಳು ತಾಲಿಬಾನ್ ಪಡೆಗಳ ದಾಳಿಗೆ 6 ತಿಂಗಳುಗಳಿಂದ 1 ವರ್ಷದ ಪ್ರತಿರೋಧ ತೋರಬಲ್ಲವು ಎಂದು ಜೂನ್ ನಲ್ಲಿ ಅಮೆರಿಕದ ಮಿಲಿಟರಿ ಅಂದಾಜುದಿತ್ತು. ಈಗ ಆ ಅಂದಾಜಿನ ಮರುಪರೀಕ್ಷೆ ಮಾಡಿದ್ದು 1 ತಿಂಗಳಿಂದ 3 ತಿಂಗಳುಗಳ ಕಾಲ ಮಾತ್ರ ಸರ್ಕಾರಿ ಪಡೆಗಳು ಪ್ರತಿರೋಧ ತೋರಬಲ್ಲವು ಎಂದಿದೆ. ಇತರ ದೇಶೀಯ ಮತ್ತು ಅಂತರ‍್ರಾಷ್ಟ್ರೀಯ ಮಿಲಿಟರಿ ವೀಕ್ಷಕರು ಸಹ ಇದೇ ಸಂಶಯ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಆಫ್ಘಾನಿಸ್ತಾನ: ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತ
ಅಫ್ಘಾನ್ ಸರ್ಕಾರಿ ಪಡೆಗಳು ಹೆಚ್ಚಿನ ಮತ್ತು ದೀರ್ಘ ಪ್ರತಿರೋಧ ತೋರಿದ್ದರೆ, ಅಂತರ‍್ರಾಷ್ಟ್ರೀಯ ಮದ್ಯಸ್ತಿಕೆಯಲ್ಲಿ (ಚೀನಾ, ರಶ್ಯಾ, ಅಮೆರಿಕ, ಭಾರತ, ಇರಾನ್, ತುರ್ಕೆಮಾನಿಸ್ತಾನ, ಉಜ್ಬೇಕಿಸ್ತಾನ, ತಾಜಕಿಸ್ತಾನ, ಪಾಕಿಸ್ತಾನ) ಶಾಂತಿ ಮಾತುಕತೆಗಳನ್ನು ನಡೆಸಿ ರಾಜಕೀಯ ಒಪ್ಪಂದದ ಸಾಧ್ಯತೆ ಇರುತ್ತಿತ್ತು. ಇಂತಹ ಮಾತುಕತೆ ದೋಹಾದಲ್ಲಿ ಆಗಲೇ ಆರಂಭವಾಗಿತ್ತು ಕೂಡಾ. ಮಾತುಕತೆ ನಡೆಯುತ್ತಿದ್ದಂತೆ ತಳಮಟ್ಟದಲ್ಲಿ ತಾಲಿಬಾನ್ ತನ್ನ ಮಿಲಿಟರಿ ಬಲವನ್ನು ಮಿಂಚಿನ ವೇಗದಲ್ಲಿ ಹೆಚ್ಚಿಸಿಕೊಂಡಿದೆ. ಮಾತುಕತೆಗಳಲ್ಲಿ ಅಫ್ಘಾನಿಸ್ತಾನದ ಸರಕಾರಕ್ಕೆ ಮಾನ್ಯತೆಯನ್ನು ಕೂಡಾ ಕೊಡಲು ತಯಾರಿಲ್ಲ. ಅದು ವಿದೇಶೀಯರಿಂದ ಬಲಾತ್ಕಾರವಾಗಿ ಸ್ಥಾಪಿತ ಸರಕಾರ, ವಿದೇಶೀಯರ ಬೆಂಬಲವಿಲ್ಲದೆ ಕುಸಿದು ಬೀಳುತ್ತದೆ ಎಂದಿದೆ. ಈಗಿನ ಪರಿಸ್ಥಿತಿಯಲ್ಲಿ ಅಫ್ಘಾನಿಸ್ತಾನದ ಸರಕಾರ ತಾಲಿಬಾನ್ ಜತೆ ಅಧಿಕಾರ ಹಂಚಿಕೊಳ್ಳಲು ತಯಾರಿದೆ. ಆದರೆ ತಾಲಿಬಾನ್ ತಯಾರಿಲ್ಲ. ಇದು ಗಡಿ ಪ್ರದೇಶದ ಮತ್ತು ಪ್ರಾದೇಶಿಕ ಶಕ್ತಿರಾಷ್ಟ್ರಗಳೆರಡನ್ನೂ ಪೇಚಿಗೆ ಸಿಲುಕಿಸಿದೆ.
ತಮಗೆ ದೇಶೀಯವಾಗಿಯೂ ಅಂತರ‍್ರಾಷ್ಟ್ರೀಯವಾಗಿಯೂ (ಪಾಕಿಸ್ತಾನ ಬಿಟ್ಟು) ಇತರ ಎಲ್ಲ ಗಡಿದೇಶಗಳು ಹಾಗೂ ರಶ್ಯಾ, ಚೀನಾ ಮತ್ತು ಭಾರತ ಸಹ, ತಾಲಿಬಾನ್ ಮತ್ತು ಇಸ್ಲಾಮಿಕ್ ಮೂಲಭೂತವಾದವು ತೀವ್ರವಾಗಿ ಅಪಾಯಕಾರಿ ಎಂದು ಭಾವಿಸಿವೆ. ಆದರೆ ತಾಲಿಬಾನ್ ಇಲ್ಲದೆ ಯಾವುದೇ ರಾಜಕೀಯ ಮಿಲಿಟರಿ ಪರಿಹಾರ ಸಾಧ್ಯವಿಲ್ಲ ಎಂದೂ ಅವುಗಳಿಗೆ ಗೊತ್ತಿದೆ. ತಾಲಿಬಾನ್ ನ ಕ್ರೂರ ಹಿಂಸಾಚಾರಿ ಆಡಳಿತ ಹಾಗೂ ಬುಡಕಟ್ಟು-ದ್ವೇಷಗಳ ಸ್ವಭಾವ ಗೊತ್ತಿರುವ ಗಡಿ ದೇಶಗಳು, ಅದರ ಆಳ್ವಿಕೆ ಆರಂಭವಾಗುತ್ತಿದ್ದಂತೆ ನಿರಾಶ್ರಿತರ ದಂಡು ಬರುವ ಆತಂಕವನ್ನೂ ಹೊಂದಿವೆ. ತಾಲಿಬಾನ್ ಮತ್ತು ದಶಕಗಳ ಇಡೀ ಅಫ್ಘಾನಿಸ್ತಾನದ ರಾಜಕೀಯ-ಮಿಲಿಟರಿ ಸಮಸ್ಯೆ ಅಮೆರಿಕನ್ ಸಾಮ್ರಾಜ್ಯಶಾಹಿಯ ಸೃಷ್ಟಿಯಿದ್ದಂತೆ, ಈಗಿನ ಅದರ ಅವತಾರ ಸಹ ಅದರದ್ದೇ ಸೃಷ್ಟಿ. ಸೆಪ್ಟೆಂಬರ್ 2020ರಲ್ಲಿ ತಾಲಿಬಾನ್ ಜತೆ ಮಾಡಿದ ಒಪ್ಪಂದದಲ್ಲಿ ಅದು ಅಫ್ಘಾನಿಸ್ತಾನದ ಸರಕಾರವನ್ನು ಒಳಗೊಳ್ಳಲಿಲ್ಲ. ಅಫ್ಘಾನಿಸ್ತಾನದ ಸರಕಾರದ ಪಡೆಗಳ ಜತೆ ಕದನವಿರಾಮವನ್ನು ಒಳಗೊಳ್ಳಲಿಲ್ಲ. ತನ್ನ ಪಡೆಗಳ ಮೇಲೆ ದಾಳಿ ಮಾಡಬಾರದು, ಅಲ್-ಖೈದಾ, ಐ.ಎಸ್.ಐ.ಎಲ್. ದಂತಹ ಅಮೆರಿಕನ್-ವಿರೋದಿ ಭಯೋತ್ಪಾದಕ ಪಡೆಗಳಿಗೆ ಅವಕಾಶ ಕೊಡಬಾರದು ಎಂಬುದಷ್ಟೇ ಒಪ್ಪಂದದ ಭಾಗವಾಗಿತ್ತು. ಒಂದು ಕಡೆ ಪಾಕಿಸ್ತಾನದ ಜತೆ ತಾಲಿಬಾನ್, ಇನ್ನೊಂದು ಕಡೆ ಬಾಲಬಡುಕ ನಾಮಮಾತ್ರದ ಅಫ್ಘಾನಿಸ್ತಾನದ ಸರಕಾರವನ್ನು ಸೃಷ್ಟಿಸಿದ ಅಮೆರಿಕ ಅತ್ಯಂತ ಅಕಾಲಿಕವಾಗಿ ಬೇಜವಾಬ್ದಾರಿಯಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿತು. ಅಮೆರಿಕ ತನ್ನ ಭೂ-ವ್ಯೂಹಾತ್ಮಕ ಹಿತಾಸಕ್ತಿಗಾಗಿ ತನ್ನದೇ (ಪಾಕಿಸ್ತಾನ, ಉಜ್ಬೇಕಿಸ್ತಾನ, ಭಾರತ ಜತೆ) ಕ್ವಾಡ್ ರಚಿಸುವುದು ಬಿಟ್ಟರೆ ಬೇರೆ ಯಾವುದರ ಬಗೆಗೂ ತಲೆಕೆಡಿಸಿಕೊಂಡಿಲ್ಲ. ಅಫ್ಘಾನಿಸ್ತಾನದ ಸರಕಾರ ತನ್ನ ನಿಯಂತ್ರಣಕ್ಕೆ ಹೋರಾಡಬೇಕು. ಅದಕ್ಕಾಗಿ ಅಮೆರಿಕನ್ನರು ಹೋರಾಡುವುದು ಸಾಧ್ಯವಿಲ್ಲ ಎಂದು ಹೇಳಿ ಅಮೆರಿಕದ ಅಧ್ಯಕ್ಷ ಬಿಡೆನ್ ಕೈತೊಳೆದುಕೊಂಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಶತಕೋಟಿ ಡಾಲರುಗಟ್ಟಲೆ ಹೂಡಿಕೆ ಮಾಡಿದ ಭಾರತ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ. ಪಾಕಿಸ್ತಾನ ಈ ಪರಿಸ್ಥಿತಿಯ ಅತ್ಯಂತ ಹೆಚ್ಚು ಲಾಭ ಪಡೆಯುವ ಸ್ಥಿತಿಯಲ್ಲಿದೆ. ತಾಲಿಬಾನ್ ಅಧಿಕಾರಕ್ಕೆ ಬರುವುದು (ಪಾಕಿಸ್ತಾನ ಬಿಟ್ಟರೆ) ಯಾರಿಗೂ ಇಷ್ಟವಿಲ್ಲದಿದ್ದರೂ, ಅದನ್ನು ತಡೆಯುವ ಪರಿಸ್ಥಿತಿಯಲ್ಲಿ ಯಾರೂ ಇಲ್ಲ. ಭಾರತ ಸೇರಿದಂತೆ, ಎಲ್ಲರೂ ತಾಲಿಬಾನ್ ಜತೆ ಮಾತುಕತೆಗಳನ್ನು ಆರಂಭಿಸಿವೆ. ಅದೇ ಸಮಯದಲ್ಲಿ ಹೆಚ್ಚಿನ ದೇಶಗಳು ಆಂತರಿಕ ಯುದ್ಧದ ಪರಿಸ್ಥಿತಿಯಿಂದಾಗಿ ತಮ್ಮ ನಾಗರಿಕರು ಅಫ್ಘಾನಿಸ್ತಾನ ಬಿಟ್ಟು ಸ್ವದೇಶಗಳಿಗೆ ಮರಳಲು ಸೂಚಿಸಿವೆ.
1994ರಲ್ಲಿ ಪಾಕಿಸ್ತಾನದ ಕುಮ್ಮಕ್ಕಿನಿಂದ ಅಫ್ಘಾನ್ ಆಂತರಿಕ ಯುದ್ಧದಲ್ಲಿ ಆ ದೇಶದ ಪೂರ್ವ ಮತ್ತು ದಕ್ಷಿಣ ಭಾಗದ ಪಶ್ತುನ್ ಬುಡಕಟ್ಟಿನ ಇಸ್ಲಾಮಿಕ್ ಮೂಲಭೂತ ಗುಂಪಾಗಿ ತಾಲಿಬಾನ್ ಸ್ಥಾಪಿತವಾಯಿತು. 1996ರಲ್ಲಿ ಅದು ಮಿಂಚಿನ ವೇಗದಿಂದ ದೇಶದ ಮುಕ್ಕಾಲು ಭಾಗದ ಮೇಲೆ ನಿಯಂತ್ರಣ ಸಾಧಿಸಿ 2001 ವರೆಗೆ ದೇಶವನ್ನು ಅತ್ಯಂತ ಕಟು ಶರೀಯತ್ ಕಾನೂನುಗಳನ್ನು ಜಾರಿ ಮಾಡಿ ಆಳಿತು. 2001 ಸೆಪ್ಟೆಂಬರ್ ವಿಶ್ವವಾಣಿಜ್ಯ ಕೇಂದ್ರದ ಮೇಲೆ ಅಲ್-ಖೈದಾ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದ ಮೇಲೆ ಅಮೆರಿಕನ್ ದಾಳಿಯ ಭಾಗವಾಗಿ ಅಧಿಕಾರ ಕಳೆದುಕೊಂಡಿತು. ಆದರೆ ಅಮೆರಿಕದ ಪಡೆಗಳು ತಾಲಿಬಾನ್ ಪಡೆಗಳನ್ನು ನಾಶ ಮಾಡಲು ಸಾಧ್ಯವಾಗದೆ ಹಲವು ಭಾಗಗಳಲ್ಲಿ ಅವು ತಮ್ಮ ನಿಯಂತ್ರಣ ಮುಂದುವರೆಸಿದ್ದವು. ಆದರೆ 1996-2001 ಅವಧಿಯಲ್ಲಿ ಉಜ್ಬೇಕಿ ಮತ್ತಿತರ ಬುಡಕಟ್ಟು ಗುಂಪುಗಳು ಅವುಗಳ ಮೂಲಭೂತವಾದಿ ಗುಂಪುಗಳು (ಈ ಗುಂಪುಗಳೇ ಈಗಿನ ಅಫ್ಘಾನ್ ಸರಕಾರದಲ್ಲೂ) ಉತ್ತರದ ಪ್ರದೇಶಗಳಲ್ಲಿ ಪ್ರಬಲವಾಗಿದ್ದು ಆ ಪ್ರದೇಶಗಳಲ್ಲಿ ತಾಲಿಬಾನ್ ಬೇರೂರುವುದು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಆಶ್ಚರ್ಯಕಾರಿ ರೀತಿಯಲ್ಲಿ ಉತ್ತರದ ಈ ಪ್ರದೇಶಗಳಲ್ಲೂ ತಾಲಿಬಾನ್ ಮೇಲುಗೈ ಸಾಧಿಸಿದೆ.