ಹಿಂದಿನ ವರ್ಷದ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ೨೦೨೦-೨೧ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿಯಲ್ಲಿ ಶೇ.೨೪ರಷ್ಟು ಕುಸಿತವಾಗಿದೆ. ಸಾರ್ವಜನಿಕ ಆಡಳಿತ, ರಕ್ಷಣೆ ಮತ್ತು ಇತರ ಸಾರ್ವಜನಿಕ ಸೇವೆಗಳ ವೆಚ್ಚಗಳು ಶೇ.೧೦.೩ರಷ್ಟು ಇಳಿದಿವೆ ಎಂಬ ಅಂಶವು ಈ ಕುಸಿತದಲ್ಲಿ ಎದ್ದು ಕಾಣುತ್ತದೆ. ಜಿಡಿಪಿಯ ಅಂದಾಜಿನಲ್ಲಿ ಈ ಅಂಕಿ-ಅಂಶಗಳ ಪಾತ್ರವು ಗಣನೀಯವೇ. ಆದರೂ, ಈ ವಲಯವು “ಉತ್ಪಾದನೆ” ಯನ್ನು ಸೂಚಿಸುವುದಿಲ್ಲ. ಬದಲಿಗೆ ಸರ್ಕಾರದ ಖರ್ಚು ವೆಚ್ಚಗಳ ಸ್ಥಿತಿ-ಗತಿಗಳನ್ನು ತಿಳಿಸುತ್ತದೆ. ಜಿಡಿಪಿಗೆ ಪರಿಗಣನೆಯಾಗುವ ಈ ಮೂಲ ಅಂಶದಲ್ಲಿ ಆಗಿರುವ ಕುಸಿತವು ಎರಡು ಕಾರಣಗಳಿಂದಾಗಿ ಆಶ್ಚರ್ಯಕರವಾಗಿದೆ: ಮೊದಲನೆಯದಾಗಿ, ಸರ್ಕಾರದ ವೆಚ್ಚಗಳ ಕುಸಿತವು ಜಿಡಿಪಿಯನ್ನು ಹಿಗ್ಗಿಸುವುದರ ಬದಲು ಕುಸಿತಕ್ಕೆ ಕಾರಣವಾಗಿವೆ. ಎರಡನೆಯದಾಗಿ, ಸಾಂಕ್ರಾಮಿಕ ರೋಗದ ಕಾರಣದಿಂದ ಉಂಟಾದ ಲಾಕ್ಡೌನ್ ಸಮಯದಲ್ಲಿ, ಆರೋಗ್ಯ ಸೇವೆಗಳಿಗೆ ಸರ್ಕಾರವು ಉನ್ನತ ಮಟ್ಟದ ವೆಚ್ಚಗಳನ್ನು ಕೈಗೊಳ್ಳುವ ನಿರೀಕ್ಷೆ ಇತ್ತು. ಬದಲಿಗೆ, ಸರ್ಕಾರದ ವೆಚ್ಚಗಳು ಇಳಿಕೆಯಾಗಿವೆ. ಒಟ್ಟಾರೆಯಾಗಿ ನೋಡಿದರೂ ಸರ್ಕಾರಿ ವೆಚ್ಚಗಳು ಇಳಿದಿವೆ.
ಲಾಕ್ಡೌನ್ ಇದ್ದ ಅವಧಿಯಲ್ಲಿ ಉತ್ಪಾದನಾ ಚಟುವಟಿಕೆಗಳು ಕುಗ್ಗುತ್ತವೆ. ಈ ಕಾರಣದಿಂದಾಗಿಯೇ, ಸರ್ಕಾರವು ತನ್ನ ವೆಚ್ಚಗಳನ್ನು ಹೆಚ್ಚಿಸಬೇಕಾಗುತ್ತದೆ. ಸರ್ಕಾರದ ಖರ್ಚುಗಳ ಹೆಚ್ಚಳದಿಂದಾಗಿ, ಆರ್ಥಿಕ ಚಟುವಟಿಕೆಗಳ ಕುಗ್ಗುವಿಕೆಯ ಕಡಿಮೆಯಾಗುತ್ತದೆ. ಜನರ ಕೊಳ್ಳುವ ಶಕ್ತಿಯು ಹೆಚ್ಚುತ್ತದೆ. ಹಾಗಾಗಿ, ಅನೇಕರು ಸಾಲಕ್ಕೆ ಒಳಗಾಗದೆ ತಮ್ಮ ಉಪಭೋಗದ ಖರ್ಚುಗಳನ್ನು ನಿಭಾಸಿಕೊಳ್ಳಬಹುದು. ಸರಕಾರವು ತನ್ನ ವೆಚ್ಚಗಳನ್ನು ಹೆಚ್ಚಿಸದೇ ಇದ್ದರೂ ಸಹ, ಕನಿಷ್ಠ ಪಕ್ಷ ಜಿಡಿಪಿಯ ಕುಗ್ಗುವಿಕೆಯನ್ನು ಮಿತಿಗೊಳಿಸುವ ಸಲುವಾಗಿ ತನ್ನ ಮಾಮೂಲಿ ಖರ್ಚು ವೆಚ್ಚಗಳನ್ನು ಕೈಕೊಳ್ಳಲೇಬೇಕು. ಆದರೆ, ಲಾಕ್ಡೌನ್ ಅವಧಿಯಲ್ಲಿ ಸರ್ಕಾರದ ಖರ್ಚು ವೆಚ್ಚಗಳು ಇಳಿದಿವೆ. ಜಿಡಿಪಿಯು ಕುಗ್ಗಿದೆ. ಅಂದರೆ, ಸರ್ಕಾರವು ಏನು ಮಾಡಬೇಕಿತ್ತೋ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದೆ.
ಲಾಕ್ಡೌನ್ ಅವಧಿಯಲ್ಲಿ ಸರ್ಕಾರದ ಆದಾಯ ಕುಸಿಯುತ್ತದೆ ಎಂಬುದು ನಿಜ. ಆದರೆ, ಆದಾಯವು ಕುಸಿದ ಸಂದರ್ಭದಲ್ಲಿಯೂ ಸಹ, ವಿತ್ತೀಯ ಕೊರತೆ ಹೆಚ್ಚಾಗುತ್ತದೆ ಎಂಬ ಕಾರಣದ ಮೇಲೆ ಸರ್ಕಾರವು ತನ್ನ ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳುವುದು ಅತಿರೇಕದ ಪರಮಾವಧಿಯಾಗುತ್ತದೆ. ವಾಸ್ತವವಾಗಿ ಇದು ಅರ್ಥ ವ್ಯವಸ್ಥೆಯ ಚಟುವಟಿಕೆಗಳನ್ನು ಕುಗ್ಗಿಸುತ್ತದೆ ಮತ್ತು ಜನರ ಸಂಕಷ್ಟಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದರೂ, ಮೋದಿ ಸರ್ಕಾರ ಮಾಡಿರುವುದು ಇದನ್ನೇ.
ಅಷ್ಟೇ ಅಲ್ಲ, ಮೊದಿ ಸರಕಾರ ಈ ಪ್ರಮಾದವನ್ನು ಮುಂದುವರೆಸುತ್ತಲೇ ಇದೆ. ಸಂಸತ್ತಿನ ಮುಂಗಾರು ಅಧಿವೇಶದ ಮೊದಲ ದಿನವೇ ಸರ್ಕಾರವು ೨.೩೫ ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ವೆಚ್ಚಗಳ ಬೇಡಿಕೆ ಸಲ್ಲಿಸಿರುವುದರಿಂದ ಕೆಲವರಿಗೆ ಈ ಆರೋಪವು ವಿಚಿತ್ರವಾಗಿ ಕಾಣಬಹುದು. ಆದರೆ, ಈ ಎಣಿಕೆ ತಪ್ಪು. ಏಕೆಂದರೆ, ಈ ಪೂರಕ ಬೇಡಿಕೆಗಳು ಈ ಮೊದಲೇ ಘೋಷಿಸಿದ್ದ ಖರ್ಚು ವೆಚ್ಚಗಳಿಗೆ ಸಂಬಂಧಿಸುತ್ತವೆ. ಕೋವಿಡ್ ಸಂಬಂಧವಾಗಿ ಈ ಮೊದಲು ಘೋಷಿಸಿದ ಈ ಖರ್ಚು ವೆಚ್ಚಗಳು ಜಿಡಿಪಿಯ ಶೇ.೧ಕ್ಕಿಂತಲೂ ಕಡಿಮೆ ಎಂಬುದು ನಮಗೆ ತಿಳಿದಿದೆ. ಅನುದಾನದ ಕೊರತೆಯಿಂದ ಸ್ಥಗಿತಗೊಂಡಿರುವ ಉದ್ಯೋಗ ಖಾತ್ರಿ ಯೋಜನೆಯನ್ನು ಈ ಪೂರಕ ಬೇಡಿಕೆಗಳು ಪುನಶ್ಚೇತನಗೊಳಿಸಲಿವೆ ಎಂಬುದು ನಿಜ. ಆದರೆ ಈ ಪುನರುಜ್ಜೀವನವು ಈಗಾಗಲೇ ಕೊಟ್ಟಿರುವ ಭರವಸೆಯನ್ನು ಈಡೇರಿಸುತ್ತದೆಯೇ ವಿನಃ, ಆರ್ಥಿಕ ಚಟುವಟಿಕೆಗಳನ್ನು ವಿಸ್ತರಿಸುವುದಿಲ್ಲ.
ಅರ್ಥವ್ಯವಸ್ಥೆಯು ಒಂದು ಆಳವಾದ ಮತ್ತು ದೀರ್ಘಕಾಲೀನ ಆರ್ಥಿಕ ಹಿಂಜರಿತಕ್ಕೆ ಜಾರುವುದನ್ನು ತಡೆಯುವ ಸಲುವಾಗಿ ಸರ್ಕಾರವು ತನ್ನ ಖರ್ಚು ವೆಚ್ಚಗಳನ್ನು ಹೆಚ್ಚಿಸಿಕೊಳ್ಳಲೇಬೇಕು ಎಂಬ ಬಗ್ಗೆ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಅರ್ಥಶಾಸ್ತ್ರಜ್ಞರ ನಡುವೆ ಒಂದು ವಿಶಾಲ ಸಹಮತವಿದ್ದರೂ ಕೂಡ, ಮೋದಿ ಸರ್ಕಾರವು ಈ ನಿಟ್ಟಿನಲ್ಲಿ ತೋರಿಸುತ್ತಿರುವ ಸಂಪೂರ್ಣ ನಿರ್ಲಕ್ಷ್ಯವನ್ನು ಮತ್ತು ಜನರು ಎದುರಿಸುತ್ತಿರುವ ಬೃಹತ್ ನಿರುದ್ಯೋಗದ ಬಗ್ಗೆ ಅದರ ನಿಷ್ಕಾಳಜಿಯನ್ನು ಅರ್ಥಮಾಡಿಕೊಳ್ಳಬೇಕಾದರೆ, ಮೋದಿಯವರ ಮನಸ್ಥಿತಿಯತ್ತ ತಿರುಗಬೇಕಾಗುತ್ತದೆ -ಅದು ಬಂಡವಾಳಶಾಹಿಗಳ ಬಗ್ಗೆ ಪರಮ ಭೋಳೇತನದೊಂದಿಗೆ, ಹಿಂದುತ್ವದ ಮೂಲಕ ಚುನಾವಣೆ ಗೆಲ್ಲುವ ಪರಮ ಆತ್ಮವಿಶ್ವಾಸ ಬೆರೆತುಕೊಂಡಿರುವ ಮನಸ್ಥಿತಿ.
ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಜನರಿಗೆ ಪರಿಹಾರ ಒದಗಿಸಲು ಮೋದಿ ಸರ್ಕಾರವು ನಿಗದಿಪಡಿಸಿರುವ ಜಿಡಿಪಿಯ ೧% ಮೊತ್ತವು ಜಗತ್ತಿನ ಪ್ರಮುಖ ದೇಶಗಳಿಗೆ ಹೋಲಿಸಿದರೆ, ಅತ್ಯಂತ ಕಡಿಮೆ ಪ್ರಮಾಣದ್ದು. ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಕೂಡ ಜಿಡಿಪಿಯ ಶೇ.೧೦ರಷ್ಟು ಮೊತ್ತದ ಪರಿಹಾರ ಪ್ಯಾಕೇಜ್ ಘೋಷಿಸಿದ್ದಾರೆ. ಜರ್ಮನಿಯಲ್ಲಿ ೫%, ಜಪಾನ್ನಲ್ಲಿ ಇನ್ನೂ ಹೆಚ್ಚು ಹಣವನ್ನು ನಿಗದಿಪಡಿಸಲಾಗಿದೆ. ಆಹಾರ ದಾಸ್ತಾನು ಸಾಕಷ್ಟು ಇದ್ದರೂ ದೇಶದ ವಿವಿಧ ಭಾಗಗಳಲ್ಲಿ ಹಸಿವಿನಿಂದ ಸಾವುಗಳು ವರದಿಯಾಗುತ್ತಿರುವ ಈ ಹೊತ್ತಿನಲ್ಲಿ ಮೋದಿ ಸರಕಾರದ ಜಿಪುಣತನವು ದಿಗ್ಭ್ರಮೆಗೊಳಿಸುವಂತಿದೆ.
ಮೋದಿ ಸರ್ಕಾರವು ನಿಗದಿಪಡಿಸಿರುವ ಜಿಡಿಪಿಯ ೧% ಮೊತ್ತದ ಪರಿಹಾರ ಪ್ಯಾಕೇಜ್ ಏನೇನೂ ಸಾಲದು. ಆದ್ದರಿಂದ ಪ್ಯಾಕೇಜ್ ಮೊತ್ತವನ್ನು ಹೆಚ್ಚಿಸಬೇಕು ಎಂಬ ಅಂಶದ ಬಗ್ಗೆ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ದೇಶದ ಅರ್ಥಶಾಸ್ತ್ರಜ್ಞರ ನಡುವೆ ಮೂಡಿರುವ ಸಹಮತವು ಬಹುತೇಕ ಸಾರ್ವತ್ರಿಕವಾಗಿದೆ. ವಾಸ್ತವವಾಗಿ, ಇಂತಹ ವಿಷಯದಲ್ಲಿ ಆರ್ಥಿಕ ತಜ್ಞರ ನಡುವೆ ಸಹಮತ ಇರುವುದು ಬಹಳ ಅಪರೂಪವೇ. ನೋಟು ರದ್ದತಿಯ ವಿರುದ್ಧವೂ ಅವರ ನಡುವೆ ಅಷ್ಟೇ ವಿಶಾಲವಾದ ಸಹಮತವಿತ್ತು ಎಂಬುದು ನಿಜ. ಆದರೆ, ಅದು ಒಂದು ನಿರ್ದಿಷ್ಟ ಕ್ರಮವಾಗಿತ್ತು ಮತ್ತು ಅದು ವಿಚಾರಹೀನತೆಯಿಂದ ಕೂಡಿತ್ತು ಎಂಬುದರ ಬಗ್ಗೆ ಸಂದೇಹವೇ ಇರಲಿಲ್ಲ. ಈ ಕ್ರಮವು ಸರ್ಕಾರದ ನೀತಿ ಎತ್ತ ಸಾಗುತ್ತಿದೆ ಎಂಬುದರ ಸೂಚನೆಯೂ ಆಗಿರಲಿಲ್ಲ.
ಪ್ರಸಕ್ತ ಪರಿಹಾರ ಪ್ಯಾಕೇಜ್ ಬಗ್ಗೆ ಅರ್ಥಶಾಸ್ತ್ರಜ್ಞರ ನಡುವೆ ಇರುವ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಎರಡು ಅಂಶಗಳಿಗೆ ಸಂಬಂಧಿಸಿವೆ: ಹೆಚ್ಚುವರಿ ವೆಚ್ಚಗಳನ್ನು ಯಾವ ಯಾವ ವಲಯಗಳಲ್ಲಿ ಕೈಗೊಳ್ಳಬೇಕು; ಮತ್ತು ಈ ಕಾರ್ಯಕ್ಕೆ ತಗಲುವ ಹೆಚ್ಚುವರಿ ವೆಚ್ಚವನ್ನು ಹೇಗೆ ಹೊಂದಿಸಿಕೊಳ್ಳಬೇಕು. ಈ ಎರಡರಲ್ಲಿ ಮೊದಲನೆಯ ಅಂಶದ ಬಗ್ಗೆ, ಜನರ ಆರೋಗ್ಯ ಪಾಲನೆ, ಸಾಮಾಜಿಕ ಮೂಲಸೌಕರ್ಯಗಳ ಮೇಲೆ ಬಂಡವಾಳ ಹೂಡಿಕೆಗಳ ಜೊತೆಯಲ್ಲಿ ಒಂದಿಷ್ಟು ನಿರ್ದಿಷ್ಟ ಹಣವನ್ನು ಆದಾಯ ತೆರಿಗೆಯ ವ್ಯಾಪ್ತಿಗೆ ಸೇರದ ಪ್ರತಿ ಕುಟುಂಬಕ್ಕೂ ಸಾರ್ವತ್ರಿಕವಾಗಿ ನಗದು ವರ್ಗಾವಣೆ ಮಾಡಬೇಕು ಎಂದು ಎಡಪಂಥೀಯರು ಹೇಳುತ್ತಾರೆ. ಆದರೆ, ಸಂಪ್ರದಾಯವಾದಿ ಅರ್ಥಶಾಸ್ತ್ರಜ್ಞರು ಕೇವಲ ಭೌತಿಕ ಮೂಲಸೌಕರ್ಯಗಳ ಮೇಲೆ ಬಂಡವಾಳ ಹೂಡಿಕೆಗೆ ಮಾತ್ರ ಒತ್ತು ನೀಡುತ್ತಾರೆ.
ಕೊರತೆ ಬೀಳುವ ಹಣವನ್ನು ಹೇಗೆ ಹೊಂದಿಸಿಕೊಳ್ಳಬೇಕು ಎಂಬ ಅಂಶಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ತಕ್ಷಣವೇ ಅದನ್ನು ವಿತ್ತೀಯ ಕೊರತೆಯ ಮೂಲಕವೇ ಹೊಂದಿಸಿಕೊಳ್ಳಬೇಕು. ಅದಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಸಾಲ ಪಡೆಯಬೇಕಾಗುತ್ತದೆ. ಕೇಂದ್ರ ಸರ್ಕಾರವು ಈ ವರ್ಷದ ಆರಂಭದಲ್ಲಿ ಮಂಡಿಸಿದ ಬಜೆಟ್ನಲ್ಲಿ ನಿಗದಿಪಡಿಸಿದ್ದಕ್ಕಿಂತಲೂ ಅಧಿಕವಾಗಿ ೧೦ ಲಕ್ಷ ಕೋಟಿ ರೂಗಳನ್ನು ಖರ್ಚು ಮಾಡಬೇಕು. ಅಂದರೆ, ಬಜೆಟ್ನಲ್ಲಿ ಇರಿಸಿಕೊಂಡಿದ್ದ ಶೇ.೩.೫ ವಿತ್ತೀಯ ಕೊರತೆಯ ಗುರಿಯನ್ನು ಜಿಡಿಪಿಯ ಶೇ.೯ಕ್ಕೆ ಏರಿಸಿಕೊಳ್ಳಬೇಕಾಗುತ್ತದೆ ಎಂಬುದು ಹಲವು ಆರ್ಥಿಕ ತಜ್ಞರ ಅಭಿಪ್ರಾಯ. ಅದೇನೊ ಸರಿಯೇ. ಆದರೆ, ಅರ್ಥವ್ಯವಸ್ಥೆಯು ಚೇತರಿಸಿಕೊಳ್ಳುತ್ತಿದ್ದಂತೆಯೇ, ವಿತ್ತೀಯ ಕೊರತೆಯನ್ನು ಸರಿದೂಗಿಸುವ ಸಲುವಾಗಿ ಹೆಚ್ಚುವರಿ ಸಂಪನ್ಮೂಲಗಳನ್ನು ಕ್ರೋಡೀಕರಿಸುವ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ, ಭಾರತದಲ್ಲಿ ಇನ್ನೂ ಜಾರಿಗೊಳಿಸದ ಸಂಪತ್ತಿನ ತೆರಿಗೆಯನ್ನು ಹೇರುವಂತೆ ಎಡಪಂಥೀಯರು ಒತ್ತಿ ಹೇಳುತ್ತಾರೆ. ಆದರೆ, ಸಂಪ್ರದಾಯವಾದಿ ಅರ್ಥಶಾಸ್ತ್ರಜ್ಞರು ಸಾರ್ವಜನಿಕ ಉದ್ದಿಮೆಗಳ ಒಡೆತನದ ಭೂಮಿಯೂ ಸೇರಿದಂತೆ ಸಾರ್ವಜನಿಕ ವಲಯದ ಆಸ್ತಿಗಳನ್ನು ಮಾರಾಟ ಮಾಡುವ ಬಗ್ಗೆ ಮಾತನಾಡುತ್ತಾರೆ.
ಈ ಎರಡೂ ನಿಲುವುಗಳ ನಡುವೆ ಒಂದು ಮೂಲಭೂತ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಬಹಳ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಒಂದು ವಿತ್ತೀಯ ಕೊರತೆ ಉಂಟಾದರೆ ಸರ್ಕಾರವು ಅವಶ್ಯವಾಗಿ ಸಾಲ ಮಾಡಲೇಬೇಕಾಗುತ್ತದೆ (ವಿದೇಶಗಳಿಂದ ಪಡೆಯುವ ಸಾಲಗಳು ಹೆಚ್ಚುವುದಿಲ್ಲ ಎಂದು ನಾವು ಭಾವಿಸುತ್ತೇವೆ) ಸಮಾಜದ ಯಾವ ವರ್ಗ ಉಳಿತಾಯ ಮಾಡುತ್ತದೆಯೋ ಅವರಿಂದ ಸರ್ಕಾರ ಸಾಲ ಎತ್ತುತ್ತದೆ. ಹಾಗಾಗಿ, ವಿತ್ತೀಯ ಕೊರತೆಯು ಆ ವರ್ಗದ, ಅಂದರೆ ಶ್ರೀಮಂತರ ಸಂಪತ್ತನ್ನು ಹೆಚ್ಚಿಸುತ್ತದೆ. ಅವರ ಸಂಪತ್ತಿನ ಮೇಲೆ ತೆರಿಗೆ ಹೇರುವ ಮೂಲಕ ಈ ಹೆಚ್ಚಾದ ವಿತ್ತೀಯ ಕೊರತೆಯನ್ನು ನೀಗಿಸಿಕೊಳ್ಳಬಹುದು. ಈ ರೀತಿಯ ಕ್ರಮ ಕೈಗೊಂಡ ಪರಿಸ್ಥಿತಿಯಲ್ಲಿ, ತನ್ನ ವಿತ್ತೀಯ ಕೊರತೆಯಿಂದಾಗಿ ಸರ್ಕಾರವು ಸಾಲ ಎತ್ತುವ ಮೊದಲು ಖಾಸಗಿ ಸಂಪತ್ತು ಎಷ್ಟಿತ್ತೋ ಅದೇ ಮಟ್ಟದಲ್ಲಿ ಉಳಿಯುತ್ತದೆ. ಅಂದರೆ, ಸಂಪತ್ತು ತೆರಿಗೆಗಳು ಹಾಲಿ ಸಂಪತ್ತಿನ ಅಸಮಾನತೆಗಳನ್ನು ಕಡಿಮೆ ಮಾಡುವುದಿಲ್ಲ. ಬದಲಿಗೆ, ಒಂದು ದೊಡ್ಡ ಪ್ರಮಾಣದ ವಿತ್ತೀಯ ಕೊರತೆಯಿಂದಾಗಿ ಅಂತಹ ಅಸಮಾನತೆಗಳು ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯುತ್ತದೆ. ಹಾಗಾಗಿ, ಎಡಪಂಥೀಯರ ಪ್ರಸ್ತಾಪದ ಪ್ರಕಾರ ಸರ್ಕಾರವು ತನ್ನ ಖರ್ಚು ವೆಚ್ಚಗಳನ್ನು ಹೆಚ್ಚಿಸಿಕೊಂಡರೆ ಮತ್ತು ಅದನ್ನು ಸರಿದೂಗಿಸಿಕೊಳ್ಳಲು ಶ್ರೀಮಂತರ ಸಂಪತ್ತಿನ ಮೇಲೆ ತೆರಿಗೆ ವಿಧಿಸಿದರೆ, ಸಮಾಜದಲ್ಲಿ ಸಂಪತ್ತಿನ ಅಸಮಾನತೆಗಳು ಹೆಚ್ಚುವುದಿಲ್ಲ.
ಎಡಪಂಥೀಯರ ಈ ಪ್ರಸ್ತಾಪಕ್ಕೆ ಪ್ರತಿಯಾಗಿ, ಸಂಪ್ರದಾಯವಾದಿಗಳ ಪ್ರಸ್ತಾಪವು, ಉದಾಹರಣೆಯಾಗಿ ಹೇಳುವುದಾದರೆ ಆರ್ಬಿಐನ ಮಾಜಿ ಗವರ್ನರ್ ಡಾ.ರಘುರಾಮ್ ರಾಜನ್ ಅವರು ಮಂಡಿಸಿದ ಪ್ರಸ್ತಾಪವು ಒಂದು ದೊಡ್ಡ ಪ್ರಮಾಣದ ವಿತ್ತೀಯ ಕೊರತೆಯಿಂದ ಹೆಚ್ಚುವ ಸಂಪತ್ತಿನ ಅಸಮಾನತೆಗಳನ್ನು ತೊಡೆದು ಹಾಕಲಾರದು. ಅವರು ಹೇಳುವಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಅಥವಾ ಸಾರ್ವಜನಿಕ ವಲಯದ ಉದ್ದಿಮೆಗಳ ಶೇರುಗಳನ್ನು ಮಾರಿದಾಗ ಶ್ರೀಮಂತರ ಕೈಗಳಲ್ಲಿ ಸಂಪತ್ತಿನ ಗಾತ್ರ ಹೆಚ್ಚುತ್ತದೆ. ಹಾಗಾಗಿ, ಸಂಪತ್ತಿನ ಹಾಲೀ ಅಸಮಾನತೆಗಳು ಹೆಚ್ಚುವ ಅಂಶವನ್ನು ಅಲ್ಲಗಳೆಯುವಂತಿಲ್ಲ.
ವಿತ್ತೀಯ ಕೊರತೆಯ ಬಗ್ಗೆ ಇರುವ ಇಂತಹ ಮೂಲಭೂತ ವ್ಯತ್ಯಾಸಗಳ ಹೊರತಾಗಿಯೂ, ಅರ್ಥವ್ಯವಸ್ಥೆಯು ಒಂದು ಆಳವಾದ ಮತ್ತು ದೀರ್ಘಕಾಲೀನ ಆರ್ಥಿಕ ಹಿಂಜರಿತಕ್ಕೆ ಜಾರುವುದನ್ನು ತಡೆಯುವ ಸಲುವಾಗಿ ಸರ್ಕಾರವು ತನ್ನ ಖರ್ಚು ವೆಚ್ಚಗಳನ್ನು ಹೆಚ್ಚಿಸಿಕೊಳ್ಳುವ ಅವಶ್ಯಕತೆಯ ಬಗ್ಗೆ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಅರ್ಥಶಾಸ್ತ್ರಜ್ಞರ ನಡುವೆ ಒಂದು ವಿಶಾಲ ಸಹಮತವಿದೆ. ಆದರೆ, ಈ ಬಗ್ಗೆ ಸರ್ಕಾರವು ಸ್ವಲ್ಪವೂ ಮಿಸುಕಾಡದೆ ನಿಶ್ಚಲವಾಗಿ ಉಳಿದಿರಲು ಕಾರಣಗಳೇನು ಎಂಬುದು ಮಾತ್ರ ಸ್ಪಷ್ಟವಿಲ್ಲ. ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಎಚ್ಚರಗೊಳ್ಳಬೇಕು ಎಂದು ರಘುರಾಮ್ ರಾಜನ್ ಸರ್ಕಾರದ ಉನ್ನತಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ, ಮೋದಿ ಆಡಳಿತದಲ್ಲಿ ನೀತಿಗಳನ್ನು ನಿರ್ಧರಿಸುವ ಪಾತ್ರ ವಹಿಸುವ ಪರಿಸ್ಥಿತಿ ಉನ್ನತಾಧಿಕಾರಿಗಳಿಗೂ ಇಲ್ಲ. ಪ್ರಧಾನ ಮಂತ್ರಿಗಳು ಮತ್ತು ಅವರ ಆಪ್ತ ಕೂಟವೇ ಆರ್ಥಿಕ ನೀತಿಯೂ ಸೇರಿದಂತೆ ಪ್ರತಿಯೊಂದು ವಿಷಯವನ್ನೂ ನಿರ್ಧರಿಸುತ್ತಾರೆ. ಅರ್ಥವ್ಯವಸ್ಥೆಗೆ ಎದುರಾಗಲಿರುವ ವಿಪತ್ತಿನ ಬಗ್ಗೆ ಸರಕಾರವು ತೋರಿಸುತ್ತಿರುವ ಸಂಪೂರ್ಣ ನಿರ್ಲಕ್ಷ್ಯವನ್ನು ವಿವರಿಸಬೇಕಾದರೆ, ಜನರು ಎದುರಿಸುತ್ತಿರುವ ಬೃಹತ್ ನಿರುದ್ಯೋಗದ ಬಗ್ಗೆ (ಕೆಲವು ಅಂದಾಜುಗಳ ಪ್ರಕಾರ ಐದು ಕೋಟಿ ಉದ್ಯೋಗಗಳು ನಾಶವಾಗಿವೆ)ಅದರ ನಿಷ್ಕಾಳಜಿಯನ್ನು ಅರ್ಥಮಾಡಿಕೊಳ್ಳಬೇಕಾದರೆ, ನಾವು ಮೋದಿಯವರ ಮನಸ್ಥಿತಿಯತ್ತ ತಿರುಗಬೇಕಾಗುತ್ತದೆ. ಇಲ್ಲಿ ನಾವು ಒಂದು ಪರಮ ಭೋಳೇತನದ ಮತ್ತು ಪರಮ ಆತ್ಮವಿಶ್ವಾಸ ಬೆರೆತುಕೊಂಡಿರುವುದನ್ನು ಕಾಣುತ್ತೇವೆ.
ಈ ಭೋಳೇತನ ಎಂದರೆ ಬಂಡವಾಳಶಾಹಿ ಅರ್ಥಶಾಸ್ತ್ರದಲ್ಲೂ ಈಗ ಹಳಸಲಾಗಿರುವ ಆವೃತ್ತಿಯ ಕೆಲವು ಅಸಂಬದ್ಧ ಪ್ರತಿಪಾದನೆಗಳನ್ನು ರಕ್ತಗತಮಾಡಿಕೊಂಡಿರುವುದು. ದೊಡ್ಡ ಬಂಡವಾಳಗಾರರನ್ನು “ಸಂಪತ್ತಿನ ಸೃಷ್ಟಿಕರ್ತರು” ಎಂದು ಅವರು ಪದೇ ಪದೇ ಕರೆಯುತ್ತಿರುವುದು ಇಂತಹ ಭೋಳೇತನಕ್ಕೆ ಒಂದು ಉದಾಹರಣೆ. ಅರ್ಥವ್ಯವಸ್ಥೆಗೆ ಎದುರಾಗಿರುವ ಸಂಕಷ್ಟಗಳಿಂದ ಅದನ್ನು ಹೊರತರಲು ಈ “ಸಂಪತ್ತು ಸೃಷ್ಟಿಕರ್ತರು” ಇವತ್ತಲ್ಲ ನಾಳೆ ಸಾಕಷ್ಟು ಬಂಡವಾಳವನ್ನು ತೊಡಗಿಸುತ್ತಾರೆ ಎಂದು ಹೇಳುವುದನ್ನು ಅವರು ನಂಬಿದ್ದಾರೆ. ಈ ಚಿಂತನೆಯ ಪ್ರಕಾರ, ಏನೋ ಕೆಲವು ಎಡರು ತೊಡರುಗಳನ್ನು ಹೊರತುಪಡಿಸಿದರೆ ಅರ್ಥವ್ಯವಸೆಯಲ್ಲಿ ಬಿಕ್ಕಟುಗಳೇ ಇಲ್ಲ. ಕೆಲವು ಕಾರಣಗಳಿಂದಾಗಿ ಅರ್ಥವ್ಯವಸ್ಥೆಯು ಒಂದು ವೇಳೆ ತನ್ನ ಚೈತನ್ಯವನ್ನು ಕಳೆದುಕೊಂಡರೆ ಅದನ್ನು ಪುನಶ್ಚೇತನಗೊಳಿಸಲು “ಸಂಪತ್ತು ಸೃಷ್ಟಿಕರ್ತರು” ಹೇಗೂ ಇದ್ದೇ ಇದ್ದಾರೆ. ಹಾಗಾಗಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಆದರೆ, ಎರಡು ಮಹಾಯುದ್ಧಗಳ ನಡುವಿನ ಅವಧಿಯ ವರ್ಷಗಳಲ್ಲಿ ಉಂಟಾಗಿದ್ದ ಮಹಾ ಕುಸಿತವು ಒಂದು ದಶಕಕ್ಕೂ ಹೆಚ್ಚು ಕಾಲ ಮುಂದುವರೆದು, ಎರಡನೆಯ ಮಹಾಯುದ್ಧವು ಜರುಗದಿದ್ದರೆ ಇನ್ನೂ ಹೆಚ್ಚು ಕಾಲ ಮುಂದುವರೆಯುತ್ತಿತ್ತು ಎಂಬ ಸಂಗತಿಯನ್ನು ಈ ಚಿಂತನೆಯು ಗಮನಿಸಿಲ್ಲ. ಹೂಡಿಕೆಯು ಬೇಡಿಕೆಯ ಮೆಲೆ ಅವಲಂಬಿಸಿದೆ ಎಂಬ ಸಂಗತಿಯೂ ಈ ಚಿಂತನೆಯಲ್ಲಿ ಕಾಣೆಯಾಗಿದೆ.
ಮತ್ತು ಆತ್ಮವಿಶ್ವಾಸ ಎಂದರೆ, ಜನರು ಎಷ್ಟೇ ಕಷ್ಟಗಳನ್ನು ಎದುರಿಸಿದರೂ, ಎಷ್ಟೇ ದಾರಿದ್ರ್ಯಕ್ಕೆ ಇಳಿದರೂ, “ಹಿಂದುತ್ವವನ್ನು ಪ್ರೋತ್ಸಾಹಿಸಿದರೆ, ಮತ್ತು ಕೋಮು ಧ್ರುವೀಕರಣದ ಮೂಲಕ ಚುನಾವಣೆಗಳಲ್ಲಿ ಜನರ ಬೆಂಬಲವನ್ನು ಸದಾ ಗೆದ್ದುಕೊಳ್ಳಬಹುದು ಎಂಬುದು ನಂಬಿಕೆ. ಇದು ಒಂದು ತೀರಾ ಸಿನಿಕ ದೃಷ್ಟಿಕೋನ. ಆದರೆ, ಈಗಿನ ಆಳ್ವಿಕೆಯು ಪ್ರತಿನಿಧಿಸುತ್ತಿರುವುದು ಇಂತಹ ಸಿನಿಕತನದ ಪರಾಕಾಷ್ಠೆಯನ್ನೇ ತಾನೇ?
ಅನು: ಕೆ.ಎಂ.ನಾಗರಾಜ್