ಚಾಮರಾಜನಗರ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹೇಗಾದರೂ ಮಾಡಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಬಿಜೆಪಿಯು ನಾನಾಕರತ್ತುಗಳನ್ನು ನಡೆಸುತ್ತಿದೆ.
ಅಧಿಕಾರದಲ್ಲಿರುವ ಬಿಜೆಪಿ ಈಗಾಗಲೇ ಸಾಕಷ್ಟು ಕಡೆ ಜನವಿಶ್ವಾಸವಿಲ್ಲದ ಹಲವಾರು ಕಾರ್ಯಕ್ರಮಗಳನ್ನೇ ಆಯೋಜಿಸಿ ಬಿಜೆಪಿಯತ್ತ ಜನ ಬೆನ್ನು ತೋರುವಂತೆ ಮಾಡಿಕೊಂಡಿದ್ದರೂ ಸಹ ತನ್ನ ಪ್ರಯತ್ನ ಬಿಡದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯಕ್ಕೆ ಕರೆಸಿ ಮತ ಕೀಳುವ ಯತ್ನಕ್ಕೆ ಕೈ ಹಾಕಿದೆ ಎಂದೇ ಹೇಳಬಹುದಾಗಿದೆ.
ಇದನ್ನೂ ಓದಿ : ಏಪ್ರಿಲ್ 8, 9 ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಈ ಹಿನ್ನೆಲೆ ಏಪ್ರಿಲ್ 9 ರಂದು ಬಂಡೀಪುರಕ್ಕೆ ಮೋದಿ ಭೇಟಿ ನೀಡುತ್ತಿರುವುದರಿಂದ ಏಪ್ರಿಲ್ 8 ಮತ್ತು 9 ರಂದು ಪ್ರವಾಸಿಗರಿಗೆ ಸಫಾರಿ ಬಂದ್ ಮಾಡಲಾಗಿದೆ. ಏಪ್ರಿಲ್ 4 ರಿಂದ 9 ರ ವರೆಗೂ ಬಂಡೀಪುರದಲ್ಲಿ ಅರಣ್ಯ ಇಲಾಖೆಗೆ ಸೇರಿದ ಅತಿಥಿಗೃಹ, ಕಾಟೇಜ್ಗಳ ಬುಕಿಂಗ್ ಸಹ ಬಂದ್ ಮಾಡಲಾಗಿದೆ ಎಂದು ಬಂಡೀಪುರ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಸಾಕಷ್ಟು ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಎಂದು ಮಾಹಿತಿ ಕೇಳಿಬರುತ್ತಿದೆ.
ದೇಶದಲ್ಲಿ ಹುಲಿ ಯೋಜನೆಗೆ 50 ವರ್ಷ ಹಿನ್ನಲೆ ಮೈಸೂರಿನಲ್ಲಿ 3 ದಿನಗಳ ಮೆಗಾ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದು ಇದರ ಜೊತೆಗೆ ಇತ್ತೀಚಿನ ಹುಲಿಗಣತಿ ವರದಿ, ಹುಲಿಸಂರಕ್ಷಣೆಗಾಗಿ ಸರ್ಕಾರ ಕೈಗೊಂಡ ಕ್ರಮಗಳ ವರದಿ ಹಾಗೂ ನಾಣ್ಯ ಸ್ಮರಣಿಕೆಯನ್ನು ಅವರು ಮೈಸೂರಿನಲ್ಲಿ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಅಂದೇ ಬಂಡೀಪುರಕ್ಕೂ ಭೇಟಿ ನೀಡಲಿರುವ ಮೋದಿ ಸಫಾರಿ ನಡೆಸಲಿದ್ದಾರೆ. ಹೀಗಾಗಿ ಸಫಾರಿ ಮಾರ್ಗಗಳನ್ನು ಅರಣ್ಯ ಇಲಾಖೆ ದುರಸ್ತಿ ಮಾಡಲು ಮುಂದಾಗಿದೆ.