ಬೆಂಗಳೂರು: ಗಾರ್ಮೆಂಟ್ಸ್‌ಗಳಲ್ಲಿ ನಡೆಯುವ ಶೋಷಣೆ ವಿರುದ್ಧ ಮಹಿಳೆ ಧ್ವನಿ ಎತ್ತಿದರೆ ಕೆಲಸ ಕಳೆದುಕೊಳ್ಳುವ ಸ್ಥಿತಿ ಇದೆ. ಕಾರ್ಯನಿರ್ವಹಿಸುವ ಜಾಗದಲ್ಲಿ ಲೈಂಗಿಕ ಕಿರುಕುಳ, ಅಗತ್ಯ ಮೂಲಸೌಕರ್ಯಗಳ ಕೊರತೆ ಇದ್ದಲ್ಲಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಲ್ಲಿ ಸೂಕ್ತ ಕ್ರಮವಹಿಸಲಾಗುವುದು ಎಂದು ಆಗಸ್ಟ್ 31ರಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಹೇಳಿದರು.
ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಮುನ್ನಡೆ ಸಾಮಾಜಿಕ ಸಂಸ್ಥೆ, ಸಿವಿಡೆಟ್ ಇಂಡಿಯಾ ಸಂಸ್ಥೆ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಮಹಿಳಾ ಗಾರ್ಮೆಂಟ್ಸ್ ಕಾರ್ಮಿಕರ ಮಹಾಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಲಸ ನಿರ್ವಹಿಸುವ ಪ್ರತಿ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಲೈಂಗಿಕ ಕಿರುಕುಳ ತಡೆಗೆ ಆಂತರಿಕ ದೂರು ಸಮಿತಿಗಳನ್ನು ರಚಿಸಲಾಗಿದೆ. ಗಾರ್ಮೆಂಟ್ಸ್, ಕಚೇರಿಗಳಲ್ಲಿ ಶುದ್ಧಕುಡಿವ ನೀರು, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಡ್ಡಾಯವಾಗಿ ಇರಬೇಕು. ಇಲ್ಲದಿದ್ದಲ್ಲಿ ಆಯೋಗಕ್ಕೆ ಮಾಹಿತಿ ನೀಡಿದ್ದಲ್ಲಿ ದಿಢೀರ್ ಭೇಟಿ ನೀಡುವ ಮೂಲಕ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುಗುವುದು ಎಂದರು.
ಇದನ್ನೂ ಓದಿ: ಬಾನು ಮುಷ್ತಾಕ್ ಬೆಂಬಲಕ್ಕೆ ನಿಂತ ಪ್ರಗತಿಪರ ಸಂಘಟನೆಗಳ ಒಕ್ಕೂಟ
ಸರ್ಕಾರವು ವಿಧವೆಯರು, ಏಕ ಪೋಷಕರು ಸೇರಿದಂತೆ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ವಿವಿಧ ಯೋಜನೆಗಳ ಮೂಲಕ ಹಲವು ಸವಲತ್ತು ಕಲ್ಪಿಸಿದ್ದು ಇವುಗಳ ಮಾಹಿತಿ ಪಡೆದು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಮಾತನಾಡಿ, ಕಾನೂನು ದೇಶದ ಎಲ್ಲಾ ಸಮಸ್ಯೆಗಳಿಗೂ ಉತ್ತರವಲ್ಲ. ಮಹಿಳೆಯರ ಅಸಹಾಯಕತೆ ದೂರ ಮಾಡಿ ಆಂತರಿಕವಾಗಿ ನಮಗೆ ನಾವೇ ಬೆಂಬಲವಾಗಿರಬೇಕು. ಮುಖ್ಯವಾಗಿ ಮಹಿಳೆಯರ ಸಮಸ್ಯೆಗಳಿಗೆ ಪರಸ್ಪರ ಸಂಘಟಿತರಾಗಬೇಕು ಎಂದು ಹೇಳಿದರು.
ಲೇಖಕಿ ಕೆ.ಶರೀಫಾ ಮಾತನಾಡಿ, ಗಾರ್ಮೆಂಟ್ಸ್ ಉದ್ಯಮಗಳು ನಡೆಯುತ್ತಿರುವುದೇ ಮಹಿಳೆಯರಿಂದ. ಆದರೆ ಅಧಿಕಾರ ಮಾತ್ರ ಪುರುಷರ ಕೈಯಲ್ಲಿದೆ. ಅಸುರಕ್ಷತೆ, ಲೈಂಗಿಕ ಕಿರುಕುಳ, ಮೂಲಸೌಕರ್ಯಗಳಿಗೆ ಶಾಶ್ವತ ಪರಿಹಾರ ಸಿಗಬೇಕಿದೆ ಎಂದರು.
ಬರಹಗಾರ್ತಿ ಪ್ರೊ. ಸಬಿಹಾ ಭೂಮಿಗೌಡ, ಸಮೃದ್ಧಿ ಟ್ರಸ್ಟ್ ನಿರ್ದೇಶಕ ಬಿ.ಶಿವರಾಜೇಗೌಡ ಮಾತನಾಡಿದರು. ಸಿವಿಡೆಟ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕಿ ದೀಪಿಕಾ ರಾವ್, ಮುನ್ನಡೆ ಸಾಮಾಜಿಕ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪಿ.ಎಚ್.ಯಶೋಧ ಇದ್ದರು.
ಇದನ್ನೂ ನೋಡಿ: ವಚನಾನುಭವ 33 | ಉದಕ ಮಜ್ಜನವಲ್ಲ ಪತ್ರೆ ಪೂಜೆಯಲ್ಲ Janashakthi Media
