ದ್ವೇಷಭಾಷಣಗಳ ಮೇಲೆ ಇಬ್ಬರು ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್‌ ಗೆ ಅರ್ಜಿ

ಬೃಂದಾ ಕಾರಟ್‌ರ ಮನವಿಗೆ ಉತ್ತರಿಸುವಂತೆ ದಿಲ್ಲಿ ಪೋಲೀಸಿಗೆ ಸುಪ್ರಿಂ ಕೋರ್ಟ್‍ ಸೂಚನೆ

ನವದೆಹಲಿ : ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಬಿಜೆಪಿ ಸಂಸದ ಪ್ರವೇಶ್ ವರ್ಮಾ ಅವರು ಸಿಎಎ ವಿರೋಧಿ ಪ್ರತಿಭಟನೆಗಳ ಬಗ್ಗೆ ಮಾಡಿದರೆನ್ನಲಾದ ದ್ವೇಷದ ಭಾಷಣಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ವಿಚಾರಣಾ ನ್ಯಾಯಾಲಯ ನಿರಾಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಪಿಐ(ಎಂ) ಪೊಲಿಟ್‍ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಸಲ್ಲಿಸಿರುವ ಮನವಿಗೆ ಪ್ರತಿಕ್ರಿಯೆ ನೀಡುವಂತೆ ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ಎಪ್ರಿಲ್‍ 17ರಂದು  ಸೂಚಿಸಿದೆ. ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ಪೀಠವು ದಿಲ್ಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿ ಮೂರು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

ವಿಚಾರಣೆಯ ಸಂದರ್ಭದಲ್ಲಿ, ಈ ಇಬ್ಬರು ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಲು ಮಂಜೂರಾತಿಯ ಅಗತ್ಯವಿದೆ ಎಂಬ ಕೆಳ ನ್ಯಾಯಾಲಯದ ತೀರ್ಮಾನ ತಪ್ಪಾಗಿರಬಹುದು  ಎಂದು ಮೇಲ್ನೋಟಕ್ಕೆ ಪೀಠವು ಗಮನಿಸಿತು. ಅಲ್ಲದೆ “ದೇಶ್‍ ಕೇ ಗದ್ದಾರೋಂಕೊ ಗೋಲೀ ಮಾರೋ” (”(ದೇಶದ್ರೋಹಿಗಳಿಗೆ ಗೋಲಿ ಹೊಡೆಯಿರಿ) ಎಂಬ ವಾಕ್ಯವನ್ನು ಉಲ್ಲೇಖಿಸುತ್ತ “ಗದ್ದಾರ್ ಅಂದರೆ ದೇಶದ್ರೋಹಿ ಎಂದು ತಾನೇ? ಇಲ್ಲಿ ಗೋಲಿ ಮಾರೋ ಎಂದರೆ ಖಂಡಿತವಾಗಿಯೂ  ಔಷಧಿಯ ಗೋಲಿಯಾಗಿರಲಿಕ್ಕಿಲ್ಲ” ಎಂದು ಟಿಪ್ಪಣಿ ಮಾಡಿರುವುದಾಗಿಯೂ ವರದಿಯಾಗಿದೆ.

ಕಳೆದ ವರ್ಷ ಜೂನ್ 13 ರಂದು ಈ ಇಬ್ಬರು ಬಿಜೆಪಿ ಸಂಸದರ ವಿರುದ್ಧ ದ್ವೇಷಪೂರಿತ ಭಾಷಣಗಳನ್ನು ಕುರಿತಂತೆ ಸಿಪಿಐ(ಎಂ) ನಾಯಕರಾದ ಬೃಂದಾ ಕಾರಟ್ ಮತ್ತು ಕೆಎಂ ತಿವಾರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಲು ಹೈಕೋರ್ಟ್ ನಿರಾಕರಿಸಿ, ಪ್ರಸ್ತುತ ಸಂಗತಿಗಳಲ್ಲಿ ಎಫ್‌ಐಆರ್ ದಾಖಲಿಸಲು ಸಕ್ಷಮ ಪ್ರಾಧಿಕಾರದಿಂದ ಕಾನೂನು ಮಂಜೂರಾತಿ ಪಡೆಯಬೇಕಾಗುತ್ತದೆ ಎಂದು ಅದು ಹೇಳಿತು.

ಠಾಕೂರ್ ಮತ್ತು ವರ್ಮಾ ಅವರು “ಜನರನ್ನು ಪ್ರಚೋದಿಸಲು ಪ್ರಯತ್ನಿಸಿದ್ದಾರೆ, ಇದರ ಫಲಿತಾಂಶವಾಗಿ ದಿಲ್ಲಿಯ ಎರಡು ವಿಭಿನ್ನ ಪ್ರತಿಭಟನಾ ಸ್ಥಳಗಳಲ್ಲಿ ಮೂರು ಗೋಲೀಬಾರಿನ ಘಟನೆಗಳು ನಡೆದಿವೆ ” ಎಂದು ಅರ್ಜಿದಾರರು ವಿಚಾರಣಾ ನ್ಯಾಯಾಲಯದ ಮುಂದೆ ತಮ್ಮ ದೂರಿನಲ್ಲಿ ಹೇಳಿದ್ದರು.

ಇದನ್ನೂ ಓದಿಪ್ರತಿ ಕುಟುಂಬಕ್ಕೆ ತಲಾ 7,500 ನೇರ ನಗದು ವರ್ಗಾವಣೆ ಮಾಡಿ: ಬೃಂದಾ ಕಾರಟ್‌

ಜನವರಿ 27, 2020 ರಂದು ರಾಷ್ಟ್ರ ರಾಜಧಾನಿಯ ರಿಥಾಲಾದಲ್ಲಿ ನಡೆದ ರ್ಯಾಲಿಯಲ್ಲಿ, ಶಾಹೀನ್ ಬಾಗ್‌ನ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ವಾಗ್ದಾಳಿ ನಡೆಸಿದ ನಂತರ  ಠಾಕೂರ್ “ಗೋಲೀ ಮಾರೋ ಗದ್ದಾರೋಂಕೊ” ಎಂಬ ಘೋಷಣೆಯನ್ನು  ಎತ್ತುವಂತೆ ಪ್ರಚೋದಿಸಿದರು ಎಂದು ಅರ್ಜಿದಾರರು ಆರೋಪಿಸಿದ್ದರು. ವರ್ಮಾ ಕೂಡ ಜನವರಿ 28, 2020 ರಂದು ಶಾಹೀನ್ ಬಾಗ್ ಪ್ರತಿಭಟನಾಕಾರರ ವಿರುದ್ಧ ಉದ್ರೇಕಕಾರಿ ಭಾಷಣ ಮಾಡಿದ್ದಾರೆ ಎಂದು ಅವರು ಹೇಳಿದ್ದರು.

2021ರ ಆಗಸ್ಟ್ 26ರಂದು ವಿಚಾರಣಾ ನ್ಯಾಯಾಲಯವು ಸಕ್ಷಮ ಪ್ರಾಧಿಕಾರವಾಗಿರುವ ಕೇಂದ್ರ ಸರಕಾರದಿಂದ ಅಗತ್ಯ ಮಂಜೂರಾತಿಯನ್ನು ಪಡೆಯದ ಕಾರಣ ಅರ್ಜಿದಾರರ ದೂರು ನಿಲ್ಲುವುದಿಲ್ಲ ಎಂದು ವಜಾಗೊಳಿಸಿತ್ತು. ತಮ್ಮ ದೂರಿನಲ್ಲಿ, ಕಾರಟ್ ಮತ್ತು ತಿವಾರಿ ಅವರು ಈ ಇಬ್ಬರು ಬಿಜೆಪಿ ನಾಯಕರ ವಿರುದ್ಧ ಐಪಿಸಿ ಯ  153-ಎ (ಧರ್ಮ, ಜನಾಂಗ, ಜನ್ಮ ಸ್ಥಳ, ನಿವಾಸ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 153-ಬಿ (ರಾಷ್ಟ್ರೀಯ ಸಮಗ್ರತೆಗೆ ಮಾರಕವಾದ ಆರೋಪಗಳು, ಪ್ರತಿಪಾದನೆಗಳು) ಮತ್ತು 295-ಎ (ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶವನ್ನು ಹೊಂದಿರುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಸೇರಿದಂತೆ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಎಫ್‍ಐಆರ್‍ ಗಳನ್ನು ಹಾಕಬೇಕು ಎಂದು ಕೋರಿದ್ದರು.

ಅವರು ಸೆಕ್ಷನ್ 298 (ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶಪೂರ್ವಕ ಆಶಯದಿಂದ ಪದೋಚ್ಛಾರಣೆ ಮುಂತಾದವುಗಳನ್ನು ಮಾಡುವುದು), 504 (ಶಾಂತಿ ಭಂಗವನ್ನು ಪ್ರಚೋದಿಸುವ ಆಶಯದಿಂದ ಉದ್ದೇಶಪೂರ್ವಕ ಅವಮಾನ), 505(ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಮತ್ತು 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಸೇರಿದಂತೆ ಐಪಿಸಿಯ ಇತರ ಸೆಕ್ಷನ್‌ಗಳ ಅಡಿಯಲ್ಲಿ ಕ್ರಮವನ್ನು ಕೂಡ ಕೋರಿದ್ದರು. ಈ ಅಪರಾಧಗಳಿಗೆ ಗರಿಷ್ಠ ಶಿಏಳು ವರ್ಷಗಳ ಜೈಲು ಶಿಕ್ಷೆಯಾಗುತ್ತದೆ  ಎಂದು ಈ ಕುರಿತ ಪಿಟಿಐ ವರದಿಯಲ್ಲಿ ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *