ಅಪ್ಪಿ, ಒಪ್ಪಬಹುದಾದ ಸ್ವಾಭಾವಿಕತೆಯ ಪಪ್ಪಿ

 

ಬಸವರಾಜ ಕರುಗಲ್

ಗ್ರಾಮೀಣ ಭಾಗದ, ಅದರಲ್ಲೂ ಉತ್ತರ ಕರ್ನಾಟಕದ, ಇನ್ನೂ ನಿಖರವಾಗಿ ಹೇಳುವುದಾದರೆ ಕಲ್ಯಾಣ ಕರ್ನಾಟಕ ಭಾಗದ ಹಳ್ಳಿ ಜನರ ಬದುಕು-ಬವಣೆಯನ್ನು ಭಾವನಾತ್ಮಕ ಕಥೆಯಾಗಿ ಹೆಣೆದು, ಸಮಾಜದ ಅನೇಕ ಸಮಸ್ಯೆ, ಸವಾಲುಗಳ ಮೇಲೂ ಬೆಳಕು ಚಲ್ಲುವ ಒಂದು ವಿಭಿನ್ನ ಕಥಾ ಪ್ರಯತ್ನ ಪಪ್ಪಿ.  ಪಪ್ಪಿ

ಪಪ್ಪಿ – ಈ ಹೆಸರು ಕೇಳಿದಾಕ್ಷಣ ಶ್ವಾನ ಒಡನಾಟದ ಮತ್ತೊಂದು ಚಾರ್ಲಿ 777 ಎಂತಲೋ, ಅಥವಾ ತಮಿಳಿನ ಪಪ್ಪಿ ಸಿನಿಮಾದ ನೆರಳಿರುವ ಕಥೆ ಎಂತಲೋ, ಭಾವ ಖಂಡಿತ ಬರುತ್ತದೆ. ಸಿನಿಮಾ ನೋಡಿದಾಗ ಇದೊಂದು ಉತ್ತರ ಕರ್ನಾಟಕದ ಅತ್ಯಂತ ಸ್ವಾಭಾವಿಕ ಸಿನಿಮಾ ಎಂದು ಮನದಟ್ಟಾಗುತ್ತದೆ.

ಉತ್ತರ ಕರ್ನಾಟಕದ ಬಹುತೇಕ ಭಾಗದಲ್ಲಿ ಬಹಳಷ್ಟು ಸಲ ಬರಗಾಲದ ಪರಿಸ್ಥಿತಿಯೇ. ಹಾಗಾಗಿ ಗುಳೇ ಹೋಗುವುದು ಈ ಭಾಗದ ಹಳ್ಳಿಯ ಜನರಿಗೆ ಇಂದಿಗೂ ಸಹಜವೇ. ನೆರೆ ಇದ್ದಾಗಲೂ ದುಡಿಯಲು ಈಗಲೂ ಹೈಟೆಕ್ ಸಿಟಿಗಳಿಗೆ ಈ ಭಾಗದ ಗ್ರಾಮೀಣ ಜನ ಹೋಗುತ್ತಲೇ‌ ಇರುತ್ತಾರೆ. ಅದಕ್ಕೆ ಅವರ ಕುಟುಂಬದ ಸ್ಥಿತಿ, ಮಾಡಿರುವ ಸಾಲ ತೀರಿಸುವ ಮನಸ್ಥಿತಿ, ಮತ್ತಿತರ ಕಾರಣಗಳು ಒಪ್ಪಿದಿರಲಾಗದು. ಈ ಪರಿಸ್ಥಿತಿಯನ್ನೇ ಕಥಾವಸ್ತುವನ್ನಾಗಿಸುವ ಧೈರ್ಯ ಇಲ್ಲಿ ಬೆಳೆದವರಿಗೆ ಮಾತ್ರ ಬರುತ್ತದೆ. ನಿರ್ದೇಶಕ ಆಯುಷ್ ಮಲ್ಲಿ ಪಪ್ಪಿ ಸಿನಿಮಾದ ಮೂಲಕ ಮೊಂಡು-ಭಂಡ ಧೈರ್ಯ ಮಾಡಿದ್ದಾರೆ. ಹಾಗೂ ಗೆದ್ದಿದ್ದಾರೆ ಕೂಡ. ಯಾಕೆಂದರೆ ಅವರು ಬೆಳೆದಿದ್ದು ಈ ಭಾಗದಲ್ಲೇ.

ನಾಯಿ, ಪಾರಿವಾಳದ ಸಾಂಕೇತಿಕ ಪಾತ್ರಗಳೊಂದಿಗೆ ಸ್ವಾತಂತ್ರ್ಯದ ಪಾಠ, ರಾಷ್ಟ್ರೀಯ ಪ್ರಾಣಿಯ ಸಾಂದರ್ಭಿಕ ಅಂಶದೊಂದಿಗೆ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ಪರಿಷ್ಕರಣೆಯ ಹೊರೆ, ಪಟ್ಟಣಕ್ಕೆ ಬಂದರೆ ಶುರುವಾಗುವ ಲಾಭ-ನಷ್ಟದ ಹಪಾಹಪಿ, ದುಶ್ಚಟವನ್ನು ಪ್ರೋತ್ಸಾಹಿಸುವ ಸೆಲೆಬ್ರಿಟಿಗಳ ಟೀಕೆ, ದುಶ್ಚಟದ ಪರಿಣಾಮ, ಗ್ರಾಮೀಣ ಜನರ ಮುಗ್ಧತೆ… ಹೀಗೇ ಹಲವು ವಿಷಯವಸ್ತುಗಳನ್ನು ಅತ್ಯಂತ ಸ್ವಾಭಾವಿಕವಾಗಿ ತೆರೆಗೆ ತಂದಿದ್ದಾರೆ ಆಯುಷ್ ಮಲ್ಲಿ.

ಇದನ್ನು ಓದಿ :-ನಾಳೆ SSLC ಫಲಿತಾಂಶ ಪ್ರಕಟ: ಬೆಳಿಗ್ಗೆ 11:30ಕ್ಕೆ ಅಧಿಕೃತ ಘೋಷಣೆ ಪಪ್ಪಿ

ರಿಯಾಲಿಟಿ ಶೋಗಳಲ್ಲಿ ಗುರುತಿಸಬಹುದಾದ ಬಾಲ ಪ್ರತಿಭೆಗಳನ್ನು ಬಿಟ್ಟು, ಅವರು ಮಾತ್ರವಲ್ಲದೇ ನೈಜ ಪ್ರತಿಭೆಗಳೂ ಗ್ರಾಮೀಣ ಭಾಗದಲ್ಲಿ ಈಗಲೂ ಇವೆ ಎಂಬುದನ್ನು ಜಗದೀಶ್ (ಪರಶ್ಯಾ ಪಾತ್ರ), ಆದಿತ್ಯ ಪಪ್ಪಿ ಸಿನಿಮಾ ಮೂಲಕ ತೋರಿಸಿದ್ದಾರೆ. ಇನ್‌ಸ್ಟ್ರಾಗ್ರಾಂ‌ನಲ್ಲಿ ರೀಲ್ಸ್ ಮೂಲಕ ಗಮನ ಸೆಳೆದಿದ್ದ ಕೊಪ್ಪಳದ ಹಾಲವರ್ತಿ ಗ್ರಾಮದ ಬಾಲಕ ಜಗದೀಶ್, ಇಡೀ ಸಿನಿಮಾದ ಕಥೆಯನ್ನು ಹೊತ್ತು ಯಶಸ್ಸಿನ ದಡ ತಲುಪಿಸಿದ್ದಾರೆ. ಸಿಂಧನೂರು ಭಾಗದ ಆದಿತ್ಯ ಎನ್ನುವ ಬಾಲಕ ಯಶಸ್ಸಿಗೆ ಹೆಗಲು ಕೊಟ್ಟಿದ್ದಾರೆ. ಬಾಲನಾಯಕನ ಹೆಸರನ್ನು ಬಿಟ್ಟು ಉಳಿದೆಲ್ಲ ಪಾತ್ರಧಾರಿಗಳು ತಮ್ಮ ಮೂಲ ಹೆಸರಿನೊಂದಿಗೆ ಇಲ್ಲಿ ಕಾಣಿಸಿಕೊಂಡಿದ್ದು, ದುರ್ಗಪ್ಪ, ರೇಣುಕಮ್ಮ ಹಾಗೂ ಕನಕಪ್ಪ (ಇನ್ನು ಮುಂದೆ ಓಟಿ ಕನಕಪ್ಪ ಅಂತಲೂ ಪ್ರಸಿದ್ಧಿಯಾಗಬಹುದು. ಸಿನಿಮಾದಲ್ಲಿದೆ ಇದಕ್ಕೆ ಸಾಕ್ಷ್ಯ.) ಚಿತ್ರದ ಪಿಲ್ಲರ್‌‌ಗಳಾಗಿ ಥ್ರಿಲ್ ನೀಡಿದ್ದಾರೆ.

ಪಪ್ಪಿಯಲ್ಲಿ ಮನ ಮುಟ್ಟುವ ಕಥೆ ಇದೆ. ಮನಸು ಹಗುರಾಗುವ ಹಾಸ್ಯವಿದೆ. ಮನಸು ಭಾರವೆನಿಸುವ ಭಾವುಕತೆಯೂ ಇದೆ. ಒಳ್ಳೆಯವರು ಎಲ್ಲೆಡೆ ಇರುತ್ತಾರೆ, ಸಂದರ್ಭ ಬಂದಾಗ ಸಿಗುತ್ತಾರೆ ಎನ್ನುವ ಸಂದೇಶವೂ ಸಿನಿಮಾದಲ್ಲಿದೆ. ರವಿ ಬೆಳ್ಳೂರು ಸಂಗೀತ ಚಿತ್ರಕ್ಕೆ ಮತ್ತೊಂದು ಬೆನ್ನೆಲುಬು. ಶ್ರೀಧರ್ ಕಶ್ಯಪ್ ಅವರ ಬಿಜಿಎಂ ಬಹುತೇಕ ಕಡೆ ಇಷ್ಟವಾಗುತ್ತದೆ. ಒಂದಷ್ಟು ಕಡೆ ಕಷ್ಟ. ಸಂಕಲನ ಚಿತ್ರದ ಪ್ಲಸ್ ಪಾಯಿಂಟ್. ಹದಿನೈದು ದಿನದಲ್ಲೇ ಶೂಟಿಂಗ್ ಮುಗಿಸಿದರೂ 2020ರ ಕೊರೊನಾ ಕಾಲಘಟ್ಟವನ್ನು ಗಟ್ಟಿಕಥೆಯೊಂದಿಗೆ ತೆರೆಗೆ ಬರಲು ಬಿ.ಸುರೇಶ ಬಾಬು ಕ್ಯಾಮೆರಾ ವರ್ಕ್ ಮರೆಯುವಂತಿಲ್ಲ. ನಿಂಗಪ್ಪ ದೋಣಿಯವರ ಡೊಳ್ಳಿನ್ ಪದ ಈ ಸಿನಿಮಾ ಮೂಲಕ ಹಿಟ್ ಆಗಿದ್ದು ಯಶಸ್ಸಿನ ಮತ್ತೊಂದು ಮಗ್ಗುಲು.

ಸುಮಾರು 17 ವರ್ಷಗಳಿಂದ ಸಿನಿಮಾ ರಂಗದ ವಿವಿಧ ಭಾಗಗಳಲ್ಲಿ ಕೆಲಸ ಮಾಡಿ, ಫಸ್ಟ್ ಲವ್ ಎನ್ನುವ ಸಿನಿಮಾ‌ ನಿರ್ದೇಶಿಸಿ ಸೋತಿದ್ದ ಆಯುಷ್ ಮಲ್ಲಿ, ಮರಳಿ ಪ್ರಯತ್ನಿಸಿದ ಅವರ ಎರಡನೇ ಸಿನಿಮಾ ಪಪ್ಪಿ. ಈ ಸಿನಿಮಾ ಮೂಲಕ ಅವರು ಗೆದ್ದಿದ್ದಾರೆ ಎನ್ನುವುದಕ್ಕೆ ಸಿನಿಮಾದ ಹಾಡು, ಟ್ರೈಲರ್ ಮಾತ್ರವಲ್ಲ, ಸಿನಿಮಾ ಸಹ ಸಾಕ್ಷಿ ಎಂಬುದನ್ನು ಸಾಬೀತು ಮಾಡಿದ್ದಾರೆ.

ಇದನ್ನು ಓದಿ :-ಇಂದಿನಿಂದ ದೇಶ್ಯಾದ್ಯಂತ ಅಮುಲ್‌ ಹಾಲಿನ ದರ 2ರೂ ಏರಿಕೆ ಪಪ್ಪಿ

ಕೊನೇಯದಾಗಿ ಹೇಳುವುದಾದರೆ ಒಂದೊಳ್ಳೆ ಸಿನಿಮಾ ಮಾಡಿ, ತೆರೆಗೆ ತಂದು, ಯಶಸ್ಸು ಗಳಿಸಲು ಬಜೆಟ್ ಮುಖ್ಯವಲ್ಲ, ಕಂಟೆಂಟ್ ಮುಖ್ಯ ಎಂದು ಸಿನಿಮಾದ ನಿರ್ಮಾಪಕ ಸಂಕನೂರು, ಪಪ್ಪಿ ಸಿನಿಮಾ ಮೂಲಕ ಸಾರಿದ್ದಾರೆ. 2025ನೇ ಸಾಲಿನ ಚಲನಚಿತ್ರ ರಾಜ್ಯ ಪ್ರಶಸ್ತಿ ಪಟ್ಟಿಯಲ್ಲಿ ಪಪ್ಪಿಗೆ ಅಗ್ರಸ್ಥಾನ ಇದೆ ಎಂಬುದು ನಿಚ್ಚಳವಾಗಿದೆ. ಉತ್ತರ ಕರ್ನಾಟಕದ ಭಾಷೆಯ ಕೆಲ ಪದಗಳನ್ನು ಅಶ್ಲೀಲ ಅಲ್ಲ, ಅವು ಸ್ವಾಭಾವಿಕ ಎನ್ನುವುದನ್ನು ಒಪ್ಪಿಕೊಂಡು, ಕುಟುಂಬಸಮೇತ ಸಿನಿಮಾ ನೋಡಬಹುದು. ಮಕ್ಕಳಿಗಂತು ಪಪ್ಪಿ ಇಷ್ಟವಾಗುತ್ತದೆ. ಆದರೆ ಪಪ್ಪಿಗೆ “ಮಕ್ಕಳ ಸಿನಿಮಾ” ಎನ್ನುವ ಲೇಬಲ್‌ ಇಲ್ಲ ಎಂಬುದು ಸಹ ಸತ್ಯ.

ಚಿತ್ರ ಪ್ರದರ್ಶನ: ಲಕ್ಷ್ಮೀ ಚಿತ್ರಮಂದಿರ, ಕೊಪ್ಪಳ. ರೇಟಿಂಗ್: 4/5

Donate Janashakthi Media

Leave a Reply

Your email address will not be published. Required fields are marked *