- ಹಮಾಲಿಗಳ ಪ್ಮೊರತಿಭಟನೆಗೆ ಮೊದಲ ದಿನ ವ್ಯಾಪಕ ಬೆಂಬಲ
- ಸೆ.24ಕ್ಕೆ ಬೆಂಗಳೂರು ಚಲೋ
ಬೆಂಗಳೂರು: ಕೋವಿಡ್-19 ಲಾಕ್ಡೌನ್ನಿಂದಾಗಿ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೀಡಾದ ಎಪಿಎಂಸಿ, ಗ್ರಾಮೀಣ ಬಜಾರ, ಮಿಲ್ ಗೋಡೌನ್, ವೇರ್ ಹೌಸ್, ಗೂಡ್ಸ್ ಶೆಡ್, ಟ್ರಾನ್ಸ್ ಪೋರ್ಟ್ ಮುಂತಾದ ವಿಭಾಗದ ಹಮಾಲಿ ಕಾರ್ಮಿಕರಿಗೆ ಆರ್ಥಿಕ ನೆರವು ಮತ್ತು ಆಹಾರ ಧಾನ್ಯಗಳ ಕಿಟ್ ನೀಡಬೇಕೆಂದು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ನೇತೃತ್ವದಲ್ಲಿ ಎರಡು ದಿನಗಳ ಕಾಲ(ಸೆ 23-24) ಮುಷ್ಕರ ಹಮ್ಮಿಕೊಂಡಿದ್ದು, ಮೊದಲ ದಿನ ಬುಧವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಮಾಲಿ ಕಾರ್ಮಿಕರು ನಡೆಸಿದ ಪ್ರತಿಭಟನೆ ಯಶಸ್ವಿಯಾಗಿದೆ.
ಕೋವಿಡ್ ಸಂಕಷ್ಟ ಎದುರಿಸಲು ಮುಖ್ಯಮಂತ್ರಿಗಳು ಘೋಷಿಸಿದ ವಿಶೇಷ ಪರಿಹಾರ ಪ್ಯಾಕೇಜ್ ಸಂಕಷ್ಟಕ್ಕೀಡಾದ ಬಹುತೇಕ ಅಸಂಘಟಿತ ಕಾರ್ಮಿಕರನ್ನು ಒಳಗೊಂಡಿಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ಸಹಕಾರ ಸಚಿವರು ನೀಡಿದ ಭರವಸೆ ಹುಸಿಯಾಗಿದೆ. ಶ್ರಮಜೀವಿ ಹಮಾಲಿ ಕಾರ್ಮಿಕರ ಕುರಿತು ಸರಕಾರ ತಾಳಿರುವ ನಿರ್ಲಕ್ಷ್ಯ, ಕಾರ್ಮಿಕ ವಿರೋಧಿ ಧೋರಣೆಯನ್ನು ಎಂದು ಪ್ರತಿಭಟನೆಕಾರರು ಪ್ರತಿಭಟನೆ ವೇಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿರುವ ಎಪಿಎಂಸಿ, ಗ್ರಾಮೀಣ ಬಜಾರ, ಮಿಲ್ ಗೋಡೌನ್, ವೇರ್ ಹೌಸ್, ಗೂಡ್ಸ್ ಶೆಡ್, ಟ್ರಾನ್ಸ್ ಪೋರ್ಟ್ , ಬಂದರು ಮುಂತಾದ ಹಮಾಲಿ ಕಾರ್ಮಿಕರು 4 ಲಕ್ಷದಷ್ಟಿದ್ದು ಬಹುತೇಕರು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ, ಭೂರಹಿತ ಕಾರ್ಮಿಕರಾಗಿದ್ದು ದಿನದ ಕೂಲಿ ಮತ್ತು ನೆಲಗಾಳು ಇವರ ಜೀವನಾಧಾರವಾಗಿದೆ. ಸರಿಯಾದ ಸಮಾಜಿಕ ಭದ್ರತೆಯೂ ಇವರಿಗಿಲ್ಲ.
ಇತ್ತೀಚಿನ ದಿನಗಳಲ್ಲಿ ಪ್ರಮುಖ ಮಾರುಕಟ್ಟೆಗಳು ವ್ಯಾಪಾರ ವಹಿವಾಟು ನಡೆಸುತ್ತಿದ್ದರೂ ವಾರದಲ್ಲಿ 2-3 ದಿನಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದ್ದು ಆ ಸಂದರ್ಭದಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಕೂಲಿ ಸಿಗುವಷ್ಟು ಕೆಲಸವಿಲ್ಲ. ಆ ಕೆಲಸ ಒಟ್ಟು ಕಾರ್ಮಿಕರಲ್ಲಿ 15%- 20% ಜನರಿಗೆ ಮಾತ್ರ ಇದೆ. ಈ ಎಲ್ಲ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಾವಿರಾರು ಕಾರ್ಮಿಕರು ಉದ್ಯೋಗವನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಅವರಿಗೆ ಕೂಡಲೇ ಆರ್ಥಿಕ ನೆರವು ನೀಡುವುದು ಅಗತ್ಯವಾಗಿದೆ ಎಂದು ಒತ್ತಾಯಿಸಿದರು.
ಇತ್ತೀಚೆಗೆ ರಾಜ್ಯ ಸರಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಿ ಮುಕ್ತ ಮಾರುಕಟ್ಟೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಹತ್ತಾರು ವರ್ಷಗಳಿಂದ ಎಪಿಎಂಸಿ ಆವರಣದಲ್ಲಿ ಕೆಲಸ ನಿರ್ವಹಿಸುತ್ತಿರುವ ಹಮಾಲಿ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದು ಸುಮಾರು ಒಂದು ಲಕ್ಷದಷ್ಟು ಹಮಾಲಿ ಕಾರ್ಮಿಕರು ಸಂಕಷ್ಟಕ್ಕೀಡಾಗಲಿದ್ದಾರೆ. ಅಲ್ಲದೇ ಎಪಿಎಂಸಿಗಳಿಂದ ಜಾರಿಯಾಗಿರುವ ಮತ್ತು ಜಾರಿಯಾಗಬೇಕಿರುವ ಕೆಲ ಯೋಜನೆಗಳಿಂದಲೂ ವಂಚಿತರಾಗುವ ಸಾಧ್ಯತೆ ಇದೆ. ರೈತರು, ಗ್ರಾಹಕರು, ಸಣ್ಣ ವ್ಯಾಪಾರಸ್ಥರು, ಕಾರ್ಮಿಕರ ವಿರೋಧಿಯಾದ ಎಪಿಎಂಸಿ ಕಾಯ್ದೆ ಸುಗ್ರೀವಾಜ್ಞೆಯನ್ನು ವಾಪಸ್ಸಪಡೆಯಬೇಕೆಂದು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಕೆ.ಮಹಾಂತೇಶ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕರ್ನಾಟಕ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಅಸಂಘಟಿತ ಕಾರ್ಮಿಕರನ್ನು ಗುರುತಿಸುವ ನಿಟ್ಟಿನಲ್ಲಿ “ಅಂಬೇಡ್ಕರ್ ಸಹಾಯ ಹಸ್ತ” ಸ್ಮಾರ್ಟ್ ಕಾರ್ಡ್ ನೀಡಲು ತೀರ್ಮಾನಿಸಿ ಅರ್ಜಿಗಳನ್ನು ಪಡೆಯಲಾಗಿದೆ. ಆದರೇ ಈವರೆಗೂ ಬಹುತೇಕ ಕಾರ್ಡ್ ಗಳು ಕಾರ್ಮಿಕರನ್ನು ತಲುಪಿಲ್ಲ. ಈಗ ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದರಿಂದ ಹಲವು ಗೊಂದಲಗಳು ಸೃಷ್ಠಿಯಾಗಿವೆ. ಸದರಿ ಮಂಡಳಿಯಿಂದ ಕೇವಲ ಕಾರ್ಡ ನೀಡಲಾಗುತ್ತಿದೆ. ಆದರೇ ಮಂಡಳಿಯಿಂದ ಈ ಅಸಂಘಟಿತ ಕಾರ್ಮಿಕರಿಗೆ ಯಾವುದೇ ಸೌಲಭ್ಯವಿಲ್ಲ. ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ನೀಡುವ ಯೋಜನೆ ರೂಪಿಸಲು ಸರಕಾರ ಮಂಡಳಿಗೆ ಆರ್ಥಿಕ ಸಂಪನ್ಮೂಲ ನೀಡುತ್ತಿಲ್ಲ. ಮಂಡಳಿ ಕೂಡಾ ಆರ್ಥಿಕ ಸಂಪನ್ಮೂಲ ಕ್ರೂಢಿಕರಿಸುವ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ರೂಪಿಸುವ ನಿಟ್ಟಿನಲ್ಲಿ ಯಾವ ಪ್ರಯತ್ನಗಳನ್ನು ನಡೆಸುತ್ತಿಲ್ಲ. ಹಮಾಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರ ಬಹುದಿನಗಳ ಬೇಡಿಕೆಯಾದ ಭವಿಷ್ಯನಿಧಿ ಮತ್ತು ಪಿಂಚಣಿ ಯೋಜನೆಯನ್ನು ಜಾರಿಮಾಡಲು ಮಂಡಳಿ ಮತ್ತು ಸರಕಾರ ಮುಂದಾಗುತ್ತಿಲ್ಲ ಎಂದು ದೂರಿದ್ದಾರೆ.
ಸ್ಥಳೀಯವಾಗಿ ರಾಜ್ಯದ ಹಲವಾರು ಎಪಿಎಂಸಿಗಳಲ್ಲಿ ಮತ್ತು ನಗರ ಗ್ರಾಮೀಣ ಪ್ರದೇಶದಲ್ಲಿ ನೆನೆಗುದಿಗೆ ಬಿದ್ದಿರುವ ವಸತಿ ಯೋಜನೆ ಜಾರಿಗೆ ಅಗತ್ಯ ಕ್ರಮವಹಿಸಬೇಕು. ಹಮಾಲಿ ಕಾರ್ಮಿಕರಿಗೆ ಸೂಕ್ತ ವಸತಿ ಯೋಜನೆ ಜಾರಿಮಾಡಬೇಕು, ಕೋವಿಡ್-9 ಲಾಕಡೌನ್ ನಿಂದಾಗಿ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೀಡಾದ ಎಲ್ಲಾ ಹಮಾಲಿ ಕಾರ್ಮಿಕರಿಗೆ ಕೂಡಲೇ ಆರು ತಿಂಗಳು ತಿಂಗಳಿಗೆ ರೂ. 7,500 ರಂತೆ ಆರ್ಥಿಕ ನೆರವು ನೀಡಬೇಕು ಎಂದು ಇತ್ಯಾದಿ ಹಮಾಲಿ ಕಾರ್ಮಿಕರ ಬೇಕಡಿಕೆಗಳನ್ನು ಈಡೇರಿಸಲು ಸೂಕ್ತ ಕ್ರಮವಹಿಸಲು ಸರ್ಕಾರ ಮುಂದಾಗಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.