ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನುಮತಿಯಿಲ್ಲದೆ ಅನಧಿಕೃತವಾಗಿ ಸ್ಥಾಪಿಸಲಾಗಿರುವ ಚಿತ್ರನಟರು ಸೇರಿದಂತೆ ಮಹಾನ್ ನಾಯಕರುಗಳ ಪ್ರತಿಮೆ ಮತ್ತು ಬಾವುಟದ ಕಂಬಗಳ ತೆರವಿಗೆ ಬಿಬಿಎಂಪಿ ಮುಂದಾಗಲಿದೆ.
ಕರ್ನಾಟಕ ಹೈಕೋರ್ಟ್ ಆದೇಶದಂತೆ ನಗರದ ವಿವಿಧೆಡೆ ಪ್ರತಿಷ್ಠಾಪಿಸಿರುವ ವರನಟ ಡಾ.ರಾಜ್‍ಕುಮಾರ್, ವಿಷ್ಣುವರ್ಧನ್, ಶಂಕರ್‍ನಾಗ್ ಹಾಗೂ ಕೆಲವು ಮಹಾನ್ ನಾಯಕರುಗಳ ಪುತ್ಥಳಿಗಳನ್ನು ತೆರವು ಕಾರ್ಯಚಾರಣೆಯಲ್ಲಿ ಪೊಲೀಸರು ಮತ್ತು ಬಿಬಿಎಂಪಿ ಸಿಬ್ಬಂದಿಗಳು ಮುಂದಾಗುವರು.
ಕಾವೇರಿ ನಗರ ಪಾರ್ಕ್, ಪಟ್ಟೆಗಾರಪಾಳ್ಯ, ಶಿವನಹಳ್ಳಿ ಮುಖ್ಯರಸ್ತೆ, ಚೋಳೂರುಪಾಳ್ಯ, ಬಳೆಪೇಟೆ, ಎಂಸಿ ಬಡಾವಣೆ, ವಿಜಯನಗರ, ದತ್ತಾತ್ರೇಯ ರಸ್ತೆ, ಕೆಂಪಾಪುರ ಅಗ್ರಹಾರ, ರಾಯನ್ ಸರ್ಕಲ್, ಟಿಆರ್ ಮಿಲ್, ಅಕ್ಕಿಪೇಟೆ, ಮಂಜುನಾಥನಗರ, ಭಾಷ್ಯಂ ಸರ್ಕಲ್, ಶಿವನಹಳ್ಳಿ ಮುಖ್ಯರಸ್ತೆ, ಮಂಜುನಾಥನಗರ ಮುಖ್ಯರಸ್ತೆ, ಗಾಂಧಿನಗರ ಪಾರ್ಕ್, ಮಾಗಡಿ ರಸ್ತೆ, ಶೇಷಾದ್ರಿಪುರಂ, ವಿಜಯನಗರ ಪೈಪ್‍ಲೈನ್, ಟೋಲ್‍ಗೇಟ್ ಸರ್ಕಲ್‍ಗಳಲ್ಲಿನ ಪ್ರತಿಮೆಗಳ ಸರ್ವೆ ಕಾರ್ಯವನ್ನು ಬಿಬಿಎಂಪಿ ಈಗಾಗಲೇ ಕೈಗೆತ್ತಿಕೊಂಡಿದೆ.
ಸರ್ವೆ ಕಾರ್ಯ ಮುಗಿದ ಕೂಡಲೇ ಪೊಲೀಸರ ಸಹಕಾರದೊಂದಿಗೆ ಈ ಮೇಲಿನ ಎಲ್ಲ ಪುತ್ಥಳಿಗಳು ಹಾಗೂ ನಗರದ ಇನ್ನಿತರ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಅನಧಿಕೃತ ಪ್ರತಿಮೆಗಳ ತೆರವು ಕಾರ್ಯಾಚರಣೆ ಆರಂಭವಾಗಲಿದೆ.
ರಾಜ್ಯ ಹೈಕೋರ್ಟ್‌ನಲ್ಲಿ ಸುರೇಶ್ ಎಂಬುವವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಕೆಲವು ಪ್ರದೇಶಗಳಲ್ಲಿ ಸ್ಥಾಪಿಸಿರುವ ಪುತ್ಥಳಿ ಮತ್ತು ಬಾವುಟ ಕಂಬಗಳ ಸರ್ವೆ ಕಾರ್ಯ ನಡೆಸಿ ಅವುಗಳ ತೆರವು ಕಾರ್ಯಾಚರಣೆ ಕೈಗೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ನಗರ ಪೊಲೀಸರಿಗೆ ಸೂಚನೆ ನೀಡಿತ್ತು.
ನ್ಯಾಯಾಲಯದ ಈ ಆದೇಶದ ಮೇರೆಗೆ ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್ ಅವರು ಬಿಬಿಎಂಪಿ ಅಧಿಕಾರಿಗಳು ಹಾಗೂ ಸಂಚಾರ ವಿಭಾಗದ ಪೊಲೀಸರು ಅನಧಿಕೃತವಾಗಿ ಅಳವಡಿಸಿರುವ ಪ್ರತಿಮೆ ಮತ್ತು ಬಾವುಟ ಕಂಬಗಳನ್ನು ತೆರವುಗೊಳಿಸಿ ವರದಿ ನೀಡುವಂತೆ ಸೂಚನೆ ನೀಡಿದ್ದರು.
ಈ ವಿಚಾರವಾಗಿ ದಿವಂಗತ ಡಾ.ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಮಾಧ್ಯಮಗಳಿಂದಿಗೆ ಪ್ರತಿಕ್ರಿಯಿಸಿದ್ದು, ‘ಬಿಬಿಎಂಪಿ ಕ್ರಮಕ್ಕೆ ನಾವು ಬದ್ಧರಾಗಿದ್ದೇವೆ. ಇಷ್ಟು ವರ್ಷ ಬಿಟ್ಟು ಈಗ ಪುತ್ಥಳಿ ತೆರವು ಮಾಡುತ್ತಿರುವುದು ಕಷ್ಟಕರ ಸಂಗತಿ. ಅನಧಿಕೃತವಾಗಿ ಪುತ್ಥಳಿ ನಿರ್ಮಾಣ ಮಾಡಿದ್ದು ತಪ್ಪಿರಬಹುದು. ಆದರೆ ನಿರ್ಮಾಣ ಸಮಯದಲ್ಲೇ ಈ ಬಗ್ಗೆ ಯೋಚಿಸಬೇಕಿತ್ತು. ಆ ಜವಾಬ್ದಾರಿ ಸರ್ಕಾರದ ಮೇಲಿತ್ತು. ಈಗಲೂ ನಗರದಲ್ಲಿರುವ ಪುತ್ಥಳಿಗಳನ್ನು ತೆರವು ಮಾಡದೆ, ಸೂಕ್ತ ಸ್ಥಳದಲ್ಲಿ ಪ್ರತಿಮೆ ಸ್ಥಾಪನೆಗೆ ಅವಕಾಶ ಮಾಡಿಕೊಡಬಹುದು. ನನಗೆ ಸರ್ಕಾರದ ಮೇಲೆ ಭರವಸೆ ಇದೆ’ ಎಂದಿದ್ದಾರೆ.