ಅನುಕೂಲಸಿಂಧು ರಾಜಕಾರಣದಲ್ಲಿ ಒಂದಾದವರು, ಬಿಸಿ ಉಸಿರು ಬಿಡಲಾಗದ ಬಿ.ಎಸ್.ವೈ.

ಎಸ್.ವೈ.ಗುರುಶಾಂತ್

ಕರ್ನಾಟಕದ ರಾಜಕೀಯ ರಂಗದಲ್ಲಿ ಪ್ರಧಾನವಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಧಿಕಾರದ ಕುರ್ಚಿಗೆ ದಸ್ತಿ ಹಾಕಿವೆ. ಮುಂಬರುವ ವಿಧಾನಸಭಾ ಚುನಾವಣೆಗೆ ರಣ ಕಹಳೆ ಮೊಳಗಿಸಿವೆ. ಆದರೆ ರಾಜಕೀಯ ಹೋರಾಟ ಎನ್ನುವುದು ತಾತ್ವಿಕತೆ ಪಕ್ಕ ಸರಿದು ಅದಃಪತನದ ಸ್ವರೂಪ ಪಡೆದಿದೆ. ಒಂದರ್ಥದಲ್ಲಿ ತಾತ್ವಿಕ, ನಾಗರೀಕ, ಪ್ರಜಾಪ್ರಭುತ್ವೀಯ ಮೌಲ್ಯಗಳು, ಎಲ್ಲಾ ಸಜ್ಜನಿಕೆ, ಸೌಜನ್ಯಗಳ ಸೀಮೆಯನ್ನು ದಾಟಿ ವ್ಯಕ್ತಿಗತ ನಿಂದನೆ, ದ್ವೇಷಾಸೂಯೆ, ಕೀಳು ಬೈಗುಳಗಳ ಮಹಾಪೂರವೇ ರಾಜಕಾರಣದ ಹೊದಿಕೆಯಲ್ಲಿ ಅಬ್ಬರಿಸುತ್ತದೆ.

ನಿಜವಾದ ಪ್ರಚಲಿತ ಬಹು ಮುಖ್ಯ ರಾಜಕೀಯ ಪ್ರಶ್ನೆಗಳಿಗೆ ಒಂದು ರಾಜಕೀಯ ಪಕ್ಷವಾಗಿ ಸ್ಪಷ್ಟ ನಿಲುಮೆ ಪ್ರಬುದ್ಧ ಪರಿಹಾರ, ಪರ್ಯಾಯಗಳನ್ನು ಸೂಚಿಸುವ ಬದಲು ಬೀದಿಯ ರಂಗಿನ ರಂಪಾಟ ಮಾಡಿ ಅವನ್ನು ಮರೆಸುವ ಕುತಂತ್ರವೂ ಅಡಗಿರುತ್ತದೆ. ನೀತಿಬದ್ಧ ವಿಮರ್ಶೆ ನಡೆಸಿದಲ್ಲಿ ಲೂಟಿಖೋರ, ದಿವಾಳಿ ನೀತಿಗಳನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ ಇಲ್ಲವೇ ಕೈ ಬಿಡಬೇಕಾಗುತ್ತದೆ, ಇಲ್ಲವೇ ಅದರ ಸುತ್ತ ಚರ್ಚೆ ನಡೆಸುವ ರಾಜಕಾರಣ ಮಾಡ ಬೇಕಾಗುತ್ತದೆ.

ವರ್ತಮಾನದ ರಾಜಕಾರಣದಲ್ಲಿ ಯದ್ವಾತದ್ವಾ ಗುದ್ದಾಡುವ ಪಕ್ಷಗಳು ವಿಧಾನ ಪರಿಷತ್ ಗೆ ಮತ್ತು ರಾಜ್ಯಸಭೆಗೆ ನಡೆಯಬೇಕಿದ್ದ ಚುನಾವಣೆಯಲ್ಲಿ ಸಂಧಾನ ಮಾಡಿಕೊಂಡು ಸ್ಥಾನಗಳನ್ಮು ಹಂಚಿಕೊಂಡಿರುವ ‘ಅವಿರೋಧ ಆಯ್ಕೆ’ಯ ಸಮಾನ ಮನಸ್ಕತೆ ಈ ವಾರದ ವಿಶೇಷತೆ.

ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಬೇಕಿದ್ದ 7 ಸ್ಥಾನಗಳಿಗೆ ಮೂರು ಪಕ್ಷಗಳ ಏಳು ಜನರನ್ನು ಬಿಟ್ಟರೆ ಬೇರೆ ಯಾರೊಬ್ಬರೂ ನಾಮಪತ್ರ ಸಲ್ಲಿಸದೇ ಇದ್ದುದರಿಂದ ಚುನಾವಣೆ ನಡೆಯದೇ ಅವಿರೋಧವಾಗಿ ಆಯ್ಕೆ ಆಗಿರುವುದಾಗಿ ಚುನಾವಣಾ ಅಧಿಕಾರಿ ಘೋಷಿಸಿದ್ದು ರಾಜಕೀಯ ಚಮತ್ಕಾರ! ಹೀಗಾಗಿ ಬಿಜೆಪಿಯ ನಾಲ್ಕು ಅಭ್ಯರ್ಥಿಗಳು, ಕಾಂಗ್ರೆಸ್ ನ ಮೂವರು, ಜೆಡಿಎಸ್ ನ ಒಬ್ಬರು ಎಂ.ಎಲ್.ಸಿ. ಗಳಾಗಿ ಆಯ್ಕೆಯಾಗಿದ್ದಾರೆ. ವಿಧಾನ ಸಭೆಯಲ್ಲಿರುವ ವಿವಿಧ ಪಕ್ಷಗಳ ಬಲವನ್ನು ಗಣಿಸಿದರೆ 6 ಸ್ಥಾನಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ಗಳು ಪಡೆಯಬಹುದಿತ್ತು. ಆದರೆ 7 ನೇ ಸ್ಥಾನ ಪಡೆಯಲು ಚುನಾವಣೆ ಸ್ಪರ್ದೆ ಏರ್ಪಟ್ಟರೆ ಮತದಾರರನ್ನು ‘ಮನ ಒಲಿಸಿಕೊಳ್ಳುವ’ ಕಸರತ್ತಿಗೆ ಪಕ್ಷಗಳು ಇಳಿಯಲೇಬೇಕಿತ್ತು. ಈಗಂತೂ ಮನ ಒಲಿಕೆ ಕೋಟ್ಯಾಂತರಗಳ ಅತ್ಯಂತ ದುಬಾರಿ ವ್ಯವಹಾರ. ಇಂತಹುದನ್ನು ನಿಭಾಯಿಸುವ ‘ಸಾಮರ್ಥ್ಯ’ ಇರುವವರನ್ನೇ ನೋಡಿ ಅಭ್ಯರ್ಥಿಗಳ ಆಯ್ಕೆಯೂ ನಡೆಸಲಾಗುತ್ತದೆ. ತಾವು ಪಡೆದ ಪಕ್ಷದ ಮತದಾರ ಶಾಸಕ ಸದಸ್ಯರಿಗೆ ಹಣ ನೀಡಿ ಖರೀದಿಸುವ ಪರಿಪಾಠ ಇದ್ದೇ ಇದೆ. ಹೀಗಾಗಿ ಮುತ್ಸದ್ದಿಗಳ, ಪರಿಷತ್ತು ವಿವಿಧ ಕ್ಷೇತ್ರ ಪರಿಣಿತರ ವೇದಿಕೆಯಾಗುವ ಬದಲು ಬಹುತೇಕ ಉಳ್ಳವರ, ರಾಜಕೀಯ ನಿರಾಶ್ರಿತರ ಪುನರ್ವಸತಿ ಕೇಂದ್ರವೂ ಆಗಿದೆ. ಹಾಗಾಗಿ ಸ್ಪರ್ದೆ ಏರ್ಪಡದಂತೆ ಹೊಂದಾಣಿಕೆ ಮಾಡಿಕೊಂಡರೆ ಅಧಿಕ ಖರ್ಚು ಮತ್ತು ಶ್ರಮ ಎರಡೂ ಉಳಿಯುವುದು ಎನ್ನುವ ಸೂತ್ರಕ್ಕೆ ಇವರು ಬಂದಿರುತ್ತಾರೆ. ‘ನೀ ನನಗಿದ್ದರೆ ನಾ ನಿನಗೆ ‘ಎನ್ನುವ ನಾಣ್ಣುಡಿಯನ್ನು ತಮಗೆ ಅನುಕೂಲವಾಗುವಂತೆ ಮುತ್ಸದ್ದಿಗಳು ಬಳಸಿಕೊಳ್ಳುತ್ತಾರೆ. ಹೀಗಾಗಿ ಸ್ಥಾನಕ್ಕೆ ರಾಜಿ ಸಂಧಾನಗಳು ನಡೆದಿವೆ.

ಪ್ರಸಕ್ತವಾಗಿ, ವಿಧಾನ ಪರಿಷತ್ತಿನಲ್ಲಿ ಆಡಳಿತ ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತವಿರಲಿಲ್ಲ. ಆದ್ದರಿಂದಲೇ ಹಲವು ಜನದ್ರೋಹಿ ಮಸೂದೆಗಳನ್ನು ಅಂಗೀಕರಿಸಿಕೊಳ್ಳಲು ಸಾಧ್ಯವಿರಲಿಲ್ಲ. ಮತಾಂತರ ನಿಷೇಧದಂತಹ ಸಂವಿಧಾನ ವಿರೋಧಿ ಮಸೂದೆಯನ್ನು ಅಂಗೀಕಾರಕ್ಕೆ ಮಂಡಿಸದೇ ಸುಗ್ರೀವಾಜ್ಞೆಯ ಅಡ್ಡ ದಾರಿ ಹಿಡಿದಿತ್ತು. ಈಗಿನ ಪರಿಷತ್ತಿನ ಚುನಾವಣೆಯನ್ನು ಅದನ್ನೆದುರಿಸಲು ಹೋರಾಟದ ಕಣವಾಗಿ ಪ್ರತಿರೋಧ ಒಡ್ಡುವ ಒಂದು ಸಂದರ್ಭವಾಗಿ ಕಾಂಗ್ರೆಸ್, ಜೆ.ಡಿ.ಎಸ್. ಪಕ್ಷಗಳು ಬಳಸಿಕೊಳ್ಳಬಹುದಿತ್ತು. ಹಾಗೆ ಮಾಡುವ ಪ್ರಯಾಸಕ್ಕೆ ಯಾರೂ ಹೋಗಲಿಲ್ಲ. ಹೀಗಾಗಿ ಬಿಜೆಪಿಯ ಲಕ್ಷ್ಣಣ ಸವದಿ, ಛಲವಾದಿ ನಾರಾಯಣಸ್ವಾಮಿ, ಹೇಮಲತಾ ನಾಯಕ್ ಮತ್ತು ಕೇಶವ್ ಪ್ರಸಾದ್ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ನಾಗರಾಜ್ ಯಾದವ್ ಮತ್ತು ಅಬ್ದುಲ್ ಜಬ್ಬಾರ್ ಹಾಗೂ ಜೆಡಿಎಸ್ ನಿಂದ ಟಿ.ಎ. ಶರವಣ ಅವರು ಪುನಃ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಬಹಳ ಆಸಕ್ತಿದಾಯಕ ಸಂಗತಿ ಎಂದರೆ ಈ ಕಂತಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮಗ ವಿಜಯೇಂದ್ರನನ್ನು ಅಭ್ಯರ್ಥಿ ಮಾಡದೇ ಇರುವುದು. ಅವರನ್ನು ಎಂ.ಎಲ್.ಸಿ. ಮಾಡಿ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮಂತ್ರಿಯನ್ನು ಮಾಡಲಾಗುವುದೆಂಬ ನಿರೀಕ್ಷೆಗೆ ಹೈಕಮಾಂಡ್ ತಣ್ಣೀರೆರಚಿದೆ. ಇದು ಬಿ.ಎಸ್.ಯಡಿಯೂರಪ್ಪ ನಿಕಟ ವಲಯದಲ್ಲಿ, ಬೆಂಬಲಿಗರಲ್ಲಿ ಅತೃಪ್ತಿ ತಂದಿದೆಯಾದರೂ ಬುಸುಗುಟ್ಟಿ ಉಸಿರು ಬಿಡುವ ಸಾಧ್ಯತೆಗಳಿಲ್ಲ. ಒಂದು ವೇಳೆ ಬಂಡಾಯ ಎದ್ದರೂ ಫಲ ಸಿಗುವ ಸಂದರ್ಭಗಳು ಇನ್ನೂ ಇಲ್ಲ. ಬಹುಶಃ ಇನ್ನಷ್ಟೂ ಕಾದು ನೋಡುವ ಬಣ ಅನಿವಾರ್ಯತೆಗೆ ಸಿಲುಕಿದಂತಿದೆ. ಬಿ.ಎಸ್.ವೈ. ವಿರುದ್ಧ ನಿಂತಿರುವ, ಮುಖ್ಯಮಂತ್ರಿ ಆಕಾಂಕ್ಷಿಯಾಗಿರುವ ಬಿ.ಎಲ್. ಸಂತೋಷ್ ಕುತಂತ್ರದಿಂದಾಗಿಯೇ ವಿಜಯೇಂದ್ರನಿಗೆ ರಾಜ್ಯದಿಂದ ಹೆಸರು ಹೋದರೂ ಸಿಗದಂತಾಗಿದ್ದು ಸಂತೋಷ್ ರಿಂದಲೇ, ಅವರದ್ದೇ ಮೇಲುಗೈ ಎನ್ನುವುದೂ ದಟ್ಟವಾದ ಚರ್ಚೆ. ಘಟನೆಗಳ ವಿವರಗಳು ಏನೇ ಇದ್ದರೂ ಬಿಜೆಪಿಯೊಳಗಿನ ಗುಂಪುಗಾರಿಕೆ, ಒಳಜಗಳ ತನ್ನ ಕಾವನ್ನೇನೂ ಕಳೆದುಕೊಂಡಿಲ್ಲ. ಯಡಿಯೂರಪ್ಪನ ಬಳಗಕ್ಕೆ ಆರೆಸ್ಸೆಸ್ ಗುದ್ದು ಕೊಡುವ ಜೊತೆಗೆ ಬೊಮ್ಮಾಯಿಗೂ ಬಿಸಿ ಮುಟ್ಟಿಸಿದೆ. ಇದು ಇನ್ನಷ್ಟೂ ಮುಂದುವರೆಯಬಹುದು.

ರಾಜ್ಯದ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂನ್ 10, 2022ರಂದು ಚುನಾವಣೆ ನಡೆಯಲಿದೆ. ಬಿಜೆಪಿ ಎರಡು ಸ್ಥಾನ ಗೆಲ್ಲಬಹುದಾದ ಸಂಖ್ಯೆ ಹೊಂದಿದೆ. ಕಾಂಗ್ರೆಸ್ ಒಂದು ಅನಾಯಾಸವಾಗಿ ಪಡೆಯಬಹುದು. ಆದರೆ ಹೆಚ್ಚುವರಿಯಲ್ಲಿ ಮತ್ತೊಂದು ಪಡೆಯುವುದು ಯಾರು? ಕಾಂಗ್ರೆಸ್ ಅಥವಾ ಬಿಜೆಪಿ ಯತ್ನಿಸಬಹುದು. ಆದರೆ ಇದಕ್ಕೆ ಜೆಡಿಎಸ್ ಸ್ಪರ್ದಿಸುವ ಸೂಚನೆ ನೀಡಿರುವುದು ಕುತೂಹಲಕರ. ಅದರ ಗೆಲುವಿಗೆ ಇನ್ನು 14 ಮತಗಳು ಬೇಕು. ಜೆಡಿಎಸ್ ಅಲ್ಲದೇ ಬೇರೆ ಯಾರೇ ಆಗಲಿ ಅದನ್ನು ಹೇಗೆ ಗಳಿಸುವರು ಎನ್ನುವುದೇ ಒಳ ರಾಜಕಾರಣ!

ದೇಶದ ಅನೇಕ ರಾಜ್ಯಗಳಿಂದ ಒಟ್ಟು 57 ರಾಜ್ಯಸಭಾ ಸದಸ್ಯರ ಆಯ್ಕೆ ಮುಂಬರುವ ರಾಷ್ಟ್ರಪತಿ ಚುನಾವಣೆಯ ಮೇಲೆ ಪರಿಣಾಮ ಬೀರುವ ಮಹತ್ವ ಹೊಂದಿದೆ.

ಇದಲ್ಲದೇ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ನ ಮೂರು ಸ್ಥಾನಗಳಿಗೆ ಜೂನ್ 2ರಂದು ಚುನಾವಣೆ ನಡೆಯಲಿದೆ. ಪಕ್ಷಾಂತರ ಮಾಡಿದ ಬಸವರಾಜ ಹೊರಟ್ಟಿಯವರು ಒಬ್ಬ ಅಭ್ಯರ್ಥಿ.

ಈ ಎಲ್ಲಾ ಪ್ರಕ್ರಿಯೆಗಳನ್ನು ಗಮನಿಸಿದರೆ ಈ ಚುನಾವಣೆ, ಆಯ್ಕೆಗಳು ರಾಜಕೀಯ ನೀತಿ, ತಾತ್ವಿಕ ನಿಲುವುಗಳ ಹೋರಾಟಕ್ಕಿಂತ ಅನುಕೂಲ ಸಿಂಧು ರಾಜಕಾರಣವೇ ಪ್ರಮುಖವಾಗಿದೆ. ವಸ್ತುನಿಷ್ಠ ಚರ್ಚೆಗಳು ಮರೆಯಾಗಿ ಹಲವು ದಶಕಗಳೇ ಕಳೆದು ಹೋಗಿವೆ!

Donate Janashakthi Media

Leave a Reply

Your email address will not be published. Required fields are marked *