ಬೆಂಗಳೂರು: ಕೇಂದ್ರ ಸರ್ಕಾರ ಗುರುವಾರ ಮಂಡಿಸಿದ ಮಧ್ಯಂತರ ಬಜೆಟ್ ಅನ್ನು, ದುಡಿಮೆಗಾರರನ್ನು ಹಿಂಡಿ ಕಾರ್ಪೊರೇಟ್ ತಿಜೋರಿ ತುಂಬಿಸುವ ಕೃತ್ಯ ಎಂದು ಸಂಯುಕ್ತ ಹೋರಾಟ ಕರ್ನಾಟಕ ಬಣ್ಣಿಸಿದ್ದು, ಅದರ ವಿರುದ್ಧ ಹೋರಾಟ ನಡೆಸುವಂತೆ ರಾಜ್ಯದ ರೈತ, ಕಾರ್ಮಿಕ, ದಲಿತ,ಮಹಿಳಾ, ವಿದ್ಯಾರ್ಥಿ ಯುವಜನ ಸಮೂಹಗಳಿಗೆ ಶುಕ್ರವಾರ ಕರೆ ನೀಡಿದೆ. ಕೃಷಿ ರಂಗ ಸೇರಿದಂತೆ ದೇಶದ ಎಲ್ಲಾ ಕ್ಷೇತ್ರಗಳನ್ನು ಕಾರ್ಪೊರೇಟ್ ವಲಯಕ್ಕೆ ಹಸ್ತಾಂತರಿಸುವ, ವಿವೇಚನಾ ರಹಿತವಾಗಿ ಖಾಸಗೀಕರಣಕ್ಕೆ ಒಳಪಡಿಸುವ, ನಿರುದ್ಯೋಗ, ಬಡತನ ತೀವ್ರಗೊಳಿಸುವ, ರೈತರನ್ನು ದಿವಾಳಿ ಮಾಡುವ ಬಜೆಟ್ ಇದಾಗಿದೆ ಎಂದು ಸಂಯುಕ್ತ ಹೋರಾಟ ಹೇಳಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಂಯುಕ್ತ ಹೋರಾಟ ಕರ್ನಾಟಕ, ಸತತ ಹತ್ತು ವರ್ಷಗಳ ಕಾರ್ಪೊರೇಟ್ ಪರವಾದ ನೀತಿಗಳಿಂದ ಹಾಗೂ ಕೋವಿಡ್ ಜಾಗತಿಕ ಪಿಡುಗು, ಆರ್ಥಿಕ ಬಿಕ್ಕಟ್ಟುಗಳಿಂದ ನೊಂದು ಬಸವಳಿದಿರುವ ಜನರಿಗೆ ಯಾವುದೇ ಪರಿಹಾರ ಒದಗಿಸಲು ಈ ಬಜೆಟ್ ವಿಫಲವಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: ಚುನಾವಣೆ ಗೆಲ್ಲಲು ಬಿಜೆಪಿ ಎಲ್ಲರನ್ನೂ ಜೈಲಿಗೆ ಹಾಕುತ್ತಿದೆ; ಎನ್‌ಆರ್‌ಸಿಗೆ ಅವಕಾಶ ನೀಡಲ್ಲ – ಮಮತಾ ಬ್ಯಾನರ್ಜಿ
ಈಗಾಗಲೇ ಹಿಂದೆಂದೂ ಕಾಣದ ನಿರುದ್ಯೋಗ, ಬೆಲೆ ಏರಿಕೆ -ಹಣದುಬ್ಬರ ದಿಂದ ಜೀವನದ ಕನಿಷ್ಠ ಅಗತ್ಯಗಳನ್ನು ಪೂರೈಸಲು ಹೆಣಗಾಡುತ್ತಿರುವ ಜನರಲ್ಲಿ ಆತ್ಮ ವಿಶ್ವಾಸ ತುಂಬುವ ಬದಲು ವಾಸ್ತವಿಕ ಜನರ ಬದುಕನ್ನು ಕ್ರೂರ ತಮಾಷೆಗೆ ಒಳಪಡಿಸಿದೆ. ಇಂತಹ ಜನ ವಿರೋಧಿ, ರೈತ ,ಕಾರ್ಮಿಕ ವಿರೋಧಿ ಬಜೆಟ್ ಅನ್ನು ವಿರೋಧಿಸಿ ಪೆಬ್ರವರಿ ತಿಂಗಳಲ್ಲಿ ರಾಜ್ಯದಾದ್ಯಂತ ಬೃಹತ್ ಪ್ರತಿಭಟನೆಗೆ ಸಿದ್ದತೆ ನಡೆಸಲಾಗುವುದು ಎಂದು ಸಂಯುಕ್ತ ಹೋರಾಟ ಕರ್ನಾಟಕ ತಿಳಿಸಿದೆ.
ನಕಲಿ ಕಥನ , ಸುಳ್ಳುಗಳ ಹಾಗೂ ದಾರಿ ತಪ್ಪಿಸುವ ಅಂಕಿ ಅಂಶಗಳ ಬಜೆಟ್ ಭಾಷಣದಲ್ಲಿ ಸತತವಾಗಿ ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಯ ವಾಸ್ತವವನ್ನು ಮರೆ ಮಾಚಲಾಗಿದೆ ಎಂದು ಹೇಳಿರುವ ಹೋರಾಟ ಸಮಿತಿ, “ಕಳೆದ ಐದು ವರ್ಷಗಳಲ್ಲೇ 2023-24ರ ವರ್ಷದಲ್ಲಿ ಕೃಷಿ ರಂಗಕ್ಕೆ ಅತಿ ಕಡಿಮೆ ವೆಚ್ಚ ಮಾಡಲಾಗಿದೆ. ಈ ಹಿಂದಿನ ವರ್ಷಕ್ಕೆ ಮಾಡಲಾದ ವೆಚ್ಚದಲ್ಲಿ 22.3%ದಷ್ಟು ಇಳಿಕೆ ಯಾಗಿದ್ದನ್ನು 2024-25 ಕ್ಕೂ ಮತ್ತಷ್ಟು ವೆಚ್ಚ ಇಳಿಕೆಯ ಕ್ರಮವನ್ನೇ ಮುಂದುವರೆಸಲಾಗಿದೆ” ಎಂದು ಹೇಳಿದೆ.
ಕೃಷಿ ಲಾಗುವಾಡುಗಳ ಬೆಲೆ ಏರಿಕೆಗೆ ಅವಕಾಶ ನೀಡುವಂತಹ ಪ್ರಸ್ತಾಪಗಳ ಮೂಲಕ ರೈತಾಪಿ ಕೃಷಿಯನ್ನು ಮತ್ತಷ್ಟು ದುಬಾರಿಗೊಳಿಸಿ ರೈತರನ್ನು ದಿವಾಳಿ ಮಾಡುವ ಕ್ರಮಗಳನ್ನೇ ಈ ಬಜೆಟ್ ನಲ್ಲೂ ಮುಂದುವರೆಸಲಾಗಿದೆ. ಚುನಾವಣಾ ವರ್ಷದಲ್ಲೂ ಕೂಡ ಕೃಷಿಗಾಗಲಿ, ರೈತರಿಗಾಗಲಿ ಯಾವುದೇ ನೆರವು ನೀಡಿಲ್ಲ. ಅದೇ ರೀತಿ ಬೆಲೆ ಏರಿಕೆಯಿಂದ ನೊಂದ ಜನಸಾಮಾನ್ಯರಿಗೂ ಯಾವುದೇ ಪರಿಹಾರ ಒದಗಿಸಿಲ್ಲ ಎಂದು ಸಂಯುಕ್ತ ಹೋರಾಟ ಕರ್ನಾಟಕ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಉತ್ತರ ಪ್ರದೇಶ | ಮುಸ್ಲಿಂ ವ್ಯಕ್ತಿಯನ್ನು ಸಿಲುಕಿಸಲು ಗೋಹತ್ಯೆ ಮಾಡಿ ಬಂಧನಕ್ಕೊಳಗಾದ ಬಜರಂಗದಳದ ದುಷ್ಕರ್ಮಿ
ಕಳೆದ ಹತ್ತು ವರ್ಷಗಳಲ್ಲಿ ಸುಮಾರು 4 ಲಕ್ಷ ಕೋಟಿ ರೂ.ಗೂ ಹೆಚ್ಚು ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಿ ದೇಶ ಹಾಗೂ ವಿದೇಶ ಕಾರ್ಪೊರೇಟ್ ಕಂಪನಿಗಳಿಗೆ ಭಾರತವನ್ನೇ ಇಡಿಯಾಗಿ ಮಾರಾಟ ಮಾಡುವ ಈ ಹಿಂದಿನ ವಿವೇಚನಾ ಹೀನ ಖಾಸಗೀಕರಣ ಪ್ರಕ್ರಿಯೆಯನ್ನು ಈ ಬಜೆಟ್ ನಲ್ಲೂ ಕೂಡ ಮುಂದುವರೆಸಿದ್ದು ಸುಮಾರು ಐವತ್ತು ಸಾವಿರ ಕೋಟಿ ರೂ. ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ಅದು ಹೇಳಿದೆ.
ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ವಲಯದ ಖಾಸಗೀಕರಣಕ್ಕೆ ಉತ್ತೇಜನ ನೀಡಲು, ಖಾಸಗಿ ಕಂಪನಿಗಳಿಗೆ ಸಾಲ ಒದಗಿಸುವ ಒಂದು ಲಕ್ಷ ಕೋಟಿ ಮೀಸಲು ನಿಧಿಯ ಪ್ರಸ್ತಾಪವು ಅತ್ಯಂತ ಆಯಕಟ್ಟಿನ ಮತ್ತು ನಮ್ಮ ದೇಶದ ಸ್ವಾವಲಂಬನೆ ಹಾಗೂ ರಕ್ಷಣಾ ವಿಷಯದಲ್ಲಿ ಮಾಡಿಕೊಂಡಿರುವ ಗಂಭೀರ ರಾಜಿಯಾಗಿದೆ ಎಂದು ಸಂಯುಕ್ತಿ ಹೋರಾಟವು ಆತಂಕ ವ್ಯಕ್ತಪಡಿಸಿದೆ. ಭಾರತೀಯರೆಲ್ಲರಿಗೂ ರಾಮ ಭಜನೆಯ ಹೆಸರಿನಲ್ಲಿ ಕಣ್ಣು ಮುಚ್ವಿಸಿ, ದೇಶದ ಆರ್ಥಿಕತೆ ಹಾಗೂ ರಕ್ಷಣಾ ವ್ಯವಸ್ಥೆಯನ್ನು ಸಂಪೂರ್ಣ ವಿದೇಶಿ ಕಾರ್ಪೊರೇಟ್‌ಗಳಿಗೆ ತೆರೆಯಲಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೋರಾಟ ವೇದಿಕೆ ಹೇಳಿದೆ.
ಕಾರ್ಪೊರೇಟ್ ಹಿಂದುತ್ವ ಆಳ್ವಿಕೆಯ ಈ ಜನ ವಿರೋಧಿ ಬಜೆಟ್ ಮುಂದೆ ಬರಲಿರುವ ಪೂರ್ಣ ಪ್ರಮಾಣದ ಬಜೆಟ್ ನ ಸ್ವರೂಪದ ಪರಿಚಯ ಮಾಡಿಕೊಟ್ಟಿದ್ದು, ಸ್ವತಂತ್ರ ಭಾರತದ ಅತಿ ಹೆಚ್ಚು ಕಾರ್ಪೊರೇಟ್ ಪರ ಇರುವ ಸರ್ಕಾರಕ್ಕೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಸಂಯುಕ್ತ ಹೋರಾಟ ಕರ್ನಾಟಕ ಎಚ್ಚರಿಸಿದೆ.
ವಿಡಿಯೊ ನೋಡಿ: ಏನಿದು ಮಧ್ಯಂತರ ಬಜೆಟ್ ? ಚುನಾವಣಾ ರಾಮನ ಮುಂದೆ ಸಪ್ಪೆಯಾದ ಬಜೆಟ್ Janashakthi Media