ಅಂತರ್ರಾಷ್ಟ್ರೀಯ ಮನ್ನಣೆ ಸಿಕ್ಕಿರುವುದಕ್ಕೆ ಹೆಮ್ಮೆಯಾಗುತ್ತಿದೆ-ಆಶಾ ಕಾರ್ಯಕರ್ತೆಯರ ಸಮನ್ವಯ ಸಮಿತಿ

  • ಭಾರತದ 10 ಲಕ್ಷ ಆಶಾ ಕಾರ್ಯಕರ್ತೆಯರಿಗೆ ಡಬ್ಲ್ಯು.ಹೆಚ್‍.ಒ. ಗ್ಲೋಬಲ್‍ ಹೆಲ್ತ್ ಲೀಡರ್ಸ್’ ಪ್ರಶಸ್ತಿ
  • “10 ಲಕ್ಷ ಮಹಿಳಾ ಆಶಾ ಕಾರ್ಯಕರ್ತೆಯರನ್ನು ಶೋಷಿಸುತ್ತಿರುವ ಮೋದಿ ಸರಕಾರಕ್ಕೆ ನಾಚಿಕೆಯಾಗಬೇಕು”

ವಿಶ್ವ ಆರೋಗ್ಯ ಸಂಘಟನೆ(ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಡಾ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಈ ವಾರ  ಡಬ್ಲ್ಯುಎಚ್‌ಒ ದ ಆರು ‘ಗ್ಲೋಬಲ್ ಹೆಲ್ತ್ ಲೀಡರ್ಸ್’ (ಜಾಗತಿಕ ಆರೋಗ್ಯ ನೇತಾರರು) ಪ್ರಶಸ್ತಿಗಳನ್ನು ಪ್ರಕಟಿಸಿದ್ದು ಅವುಗಳಲ್ಲಿ ಒಂದನ್ನು  ಭಾರತದ ಹತ್ತು ಲಕ್ಷ ಆಶಾ ಕಾರ್ಯಕರ್ತರಿಗೆ ನೀಡಿದ್ದಾರೆ, “ಜಗತ್ತು ಅಸಮಾನತೆ, ಸಂಘರ್ಷ, ಆಹಾರ ಅಭದ್ರತೆ, ಹವಾಮಾನ ಬಿಕ್ಕಟ್ಟಿನ ಅಭೂತಪೂರ್ವ ಸಮ್ಮಿಲನವನ್ನು ಎದುರಿಸುತ್ತಿರುವ ಸಮಯದಲ್ಲಿ. ಈ ಪ್ರಶಸ್ತಿಯು ಪ್ರಪಂಚದಾದ್ಯಂತ ಆರೋಗ್ಯವನ್ನು ರಕ್ಷಿಸಲು ಮತ್ತು ಉತ್ತೇಜಿಸಲು ಅತ್ಯುತ್ತಮ ಕೊಡುಗೆ ನೀಡಿದವರನ್ನು ಗುರುತಿಸುತ್ತದೆ”  ಎಂದು ಇವುಗಳನ್ನು ಪ್ರಕಟಿಸುತ್ತ ಅವರು ಹೇಳಿದ್ದಾರೆ. ಮುಂದುವರೆದು ಅವರು “ಈ ಪ್ರಶಸ್ತಿ ಪುರಸ್ಕೃತರು ಆಜೀವನ ಸಮರ್ಪಣೆ, ಪಟ್ಟುಬಿಡದ ಪ್ರತಿಪಾದನೆ, ಸಮಾನತೆಗೆ ಬದ್ಧತೆ ಮತ್ತು ಮಾನವ ಕುಲಕ್ಕೆ ನಿಸ್ವಾರ್ಥ ಸೇವೆಯ ಸಾಕಾರ ಸ್ವರೂಪರು” ಎಂದು ಹೇಳಿದರು.

ಅಖಿಲ ಭಾರತ ಆಶಾ ಕಾರ್ಯಕರ್ತೆಯರು ಮತ್ತು ಅನುಕೂಲಕರ್ತೆಯರ ಸಮನ್ವಯ ಸಮಿತಿ- ಎಐಸಿಸಿಎಡಬ್ಲ್ಯು (ಸಿಐಟಿಯು) ಭಾರತದ ಹತ್ತು ಲಕ್ಷ ಆಶಾ ಕಾರ್ಯಕರ್ತರಿಗೆ ಸಂದಿರುವ  ಈ ಪ್ರಶಸ್ತಿಯನ್ನು ಹೆಮ್ಮೆಯಿಂದ ಸ್ವಾಗತಿಸುವುದಾಗಿ ಹೇಳಿದೆ.

ಇದು ದೇಶದ 10 ಲಕ್ಷ ಆಶಾ ಕಾರ್ಯಕರ್ತೆಯರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಆರೋಗ್ಯ ಸೇವೆಗಳನ್ನು ನಮ್ಮ ದೇಶದ ಸಾಮಾನ್ಯ ಜನರ ಮನೆ ಬಾಗಿಲಿಗೆ ತಲುಪಿಸುತ್ತಿರುವ ನಿಸ್ವಾರ್ಥ ಕಾರ್ಯಕ್ಕೆ ಸಿಕ್ಕಿರುವ ಮನ್ನಣೆ. ಕೋವಿಡ್ -19 ಗೆ ಹಲವಾರು ಆಶಾ ಕಾರ್ಯಕರ್ತೆಯರು ತಮ್ಮ ಪ್ರಾಣವನ್ನೇ ಬಲಿ ಕೊಟ್ಟಿದ್ದಾರೆ. ಆದರೆ  ಭಾರತ ಸರ್ಕಾರದ ಬಳಿ ಅವರ ಅಂಕಿಅಂಶಗಳು ಸಹ ಇಲ್ಲ. ಅವರ ಕುಟುಂಬಗಳಿಗೆ ಇನ್ನೂ  ಕೂಡ ಸರಕಾರದ ಬಹುಪ್ರಚಾರಿತ 50 ಲಕ್ಷ ರೂಪಾಯಿಗಳ ಮರಣ ಪರಿಹಾರ ಿನ್ನೂ ತಲುಪಿಲ್ಲ. ಅವರು  ಯಾವುದೇ ಸಹಾಯವನ್ನು ಸರಕಾರೀ ಕಚೇರಿಗಳಿಗೆ  ಅಲೆದಾಡುತ್ತಲೇ ಇದ್ದಾರೆ ಎಂದು ಎಐಸಿಸಿಎಡಬ್ಲ್ಯು ಖೇದ ವ್ಯಕ್ತಪಡಿಸಿದೆ.

ಇದನ್ನು ಓದಿ: ಕೋವಿಡ್‌ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ 10 ಲಕ್ಷ ಆಶಾ ಕಾರ್ಯಕರ್ತೆಯರಿಗೆ ವಿಶ್ವ ಆರೋಗ್ಯ ಸಂಸ್ಥೆ ಗೌರವ!

ಪ್ರಧಾನಿ ನರೇಂದ್ರ ಮೋದಿ ಅವರು ಆಶಾ ಕಾರ್ಯಕರ್ತೆಯರನ್ನು ಪ್ರಶಸ್ತಿಗಾಗಿ ಶ್ಲಾಘಿಸಿದ್ದು, ಆರೋಗ್ಯವಂತ ಭಾರತವನ್ನು ಖಚಿತಪಡಿಸಿಕೊಳ್ಳುವಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿರುವುದು ವಿಪರ್ಯಾಸ ಎಂದಿರುವ ಎಐಸಿಸಿಎಡಬ್ಲ್ಯು, ಮಾಸಿಕ 2000 ರೂ. ಸಂಬಳ ಮತ್ತು ಯಾವುದೇ ಸಾಮಾಜಿಕ ಭದ್ರತೆ ಮತ್ತು ಹೆರಿಗೆ ರಜೆಯೂ ಇಲ್ಲದೆ 24 ಗಂಟೆಗಳ ಕಾಲ ದುಡಿಸಿಕೊಂಡು  ಮಾಡುತ್ತಿರುವ ಕ್ರೂರ ಶೋಷಣೆಗಾಗಿ ಅವರು ನಾಚಿಕೆಪಡಬೇಕು ಮತ್ತು ದೇಶದ ಆಶಾ ಕಾರ್ಯಕರ್ತೆಯರ ಕ್ಷಮೆಯಾಚಿಸಬೇಕು ಎಂದು ಲೇವಡಿ ಮಾಡಿದೆ.

ಸಾಂಕ್ರಾಮಿಕ ಸಮಯದಲ್ಲಿ ಸರ್ಕಾರವು ಅವರ ಕೆಲಸದ ಹೊರೆಯನ್ನು ಮತ್ತು ಪ್ರತಿದಿನ ಹೆಚ್ಚಿಸುತ್ತಿತ್ತು. ಕೋವಿಡ್ ಇನ್ಸೆಂಟಿವ್ ಹೆಸರಿನ ಕೋವಿಡ್ ಅಪಾಯ ಭತ್ಯೆಯನ್ನು ಕೆಲವು ತಿಂಗಳು ಮಾತ್ರ ಕೊಟ್ಟು ನಂತರ ನಿಲ್ಲಿಸಲಾಗಿದೆ. ಈ ಸಾಂಕ್ರಾಮಿಕದ ಸಮಯದಲ್ಲಿ ಸುರಕ್ಷತಾ ಉಡುಗೆ, ಮಾಸ್ಕ್ ಮತ್ತು ಸ್ಯಾನಿಟೈಜರ್‌ಗಳನ್ನು ಪಡೆಯಲು ಆಶಾ ಕಾರ್ಯಕರ್ತೆಯರು ಹೋರಾಟಕ್ಕಿಳಿಯಬೇಕಾಯಿತು ಅಲ್ಲದೆ ದೇಶದ ಬಹುತೇಕ ಭಾಗಗಳಲ್ಲಿ ಕಳೆದ ಮೂರರಿಂದ ಐದು ತಿಂಗಳಿಂದ ಅವರಿಗೆ ಸಂಬಳ ಕೊಟ್ಟಿಲ್ಲ.

ಆಶಾ ಕಾರ್ಯಕರ್ತೆಯರು ಸಿಐಟಿಯು ಬ್ಯಾನರ್ ಅಡಿಯಲ್ಲಿ ಮತ್ತು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯಡಿಯಲ್ಲಿ ಈ ಅವಧಿಯಲ್ಲಿ ಮೂರು ಅಖಿಲ ಭಾರತ ಮುಷ್ಕರಗಳು ಸೇರಿದಂತೆ ಅನೇಕ ಹೋರಾಟಗಳನ್ನು ನಡೆಸಿದ್ದಾರೆ. ಆದರೆ ಬಿಜೆಪಿ ಸರ್ಕಾರ ಆರೋಗ್ಯ ಸೇವೆಗಳನ್ನು ಸುಧಾರಿಸುವ, ಅವರನ್ನು ಖಾಯಂ ಸರ್ಕಾರಿ ನೌಕರರನ್ನಾಗಿ ಮಾಡುವ ಬದಲು  ಆರೋಗ್ಯ ಸೇವೆಗಳನ್ನು ಖಾಸಗೀಕರಿಸಿಯೇ ತೀರುತ್ತೇವೆ ಎಂದು ಪಣ ತೊಟ್ಟಂತಿದೆ.

ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರಾಗಿ ಖಾಯಂಗೊಳಿಸಬೇಕು,ಅವರಿಗೆ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನೀಡಬೇಕು ಎಂಬ 45 ನೇ ಭಾರತೀಯ ಕಾರ್ಮಿಕ ಸಮ್ಮೇಳನ(ಐಎಲ್‍ಸಿ)ದ ಶಿಫಾರಸುಗಳನ್ನು ತಕ್ಷಣವೇ ಜಾರಿಗೆ ತರಬೇಕು ಎಂದು  ಭಾರತ ಸರ್ಕಾರವನ್ನು ನಾವು ಒತ್ತಾಯಿಸುತ್ತೇವೆ  ಎಂದು ಎಐಸಿಸಿಎಡಬ್ಲ್ಯು ಪರವಾಗಿ ಎ.ಆರ್‍.ಸಿಂಧು ರವರು ನೀಡಿರುವ ಪತ್ರಿಕಾಹೇಳಿಕೆಯಲ್ಲಿ ಆಗ್ರಹಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *