ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆಗೆ ಒತ್ತಾಯ
ನವದೆಹಲಿ: 24.8.2024 ರಂದು ಕೇಂದ್ರ ಸಚಿವ ಸಂಪುಟ ಮಂಜೂರು ಮಾಡಿರುವ ಯುಪಿಎಸ್ ( ಏಕೀಕೃತ ಪಿಂಚಣಿ ಯೋಜನೆ), ಒಪಿಎಸ್ ಎಂದು ಕರೆಯಲ್ಪಡುವ ಹಳೆಯ ಪಿಂಚಣಿ ಯೋಜನೆ ಪಡೆಯುವ ಸರ್ಕಾರಿ ನೌಕರರ ಸಂಪೂರ್ಣ ಹಕ್ಕನ್ನು ವಂಚಿಸುವ ಮತ್ತೊಂದು ನಂಬಲರ್ಹವಲ್ಲದ ಹತಾಶ ಪ್ರಯತ್ನವಾಗಿದೆ ಎಂದು ಸಿಐಟಿಯು ಖಂಡಿಸಿದೆ ಮತ್ತು ಒಪಿಎಸ್ ನ್ನು ಮತ್ತೆ ಜಾರಿಗೆ ತರಬೇಕು ಎಂದು ಮತ್ತೊಮ್ಮೆ ಆಗ್ರಹಿಸಿದೆ.
ಒಪಿಎಸ್ನಲ್ಲಿ ನೌಕರರು ದೇಣಿಗೆ ನೀಡಬೇಕಾಗಿರಲಿಲ್ಲ ಮತ್ತು ಮತ್ತು ಅದು ಕೇಂದ್ರ ನಾಗರಿಕ ಸೇವಾ ನಿಯಮಗಳು 1972 ಈಗ 2021 ರ ಪ್ರಕಾರ ಅಸ್ತಿತ್ವದಲ್ಲಿರುವ ಖಚಿತ ಮೊತ್ತದ ಪಿಂಚಣಿಯಾಗಿತ್ತು. ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರವು 2004 ರಲ್ಲಿ ಎನ್ಪಿಎಸ್(ರಾಷ್ಟ್ರೀಯ ಪಿಂಚಣಿ ಯೋಜನೆ)ಯನ್ನು ಒಂದು ಕಾರ್ಯಾಂಗದ ಆದೇಶದ ಮೂಲಕ 1.1.2014ರ ನಂತರ ನೇಮಕಾತಿ ಹೊಂದಿದವರಿಗೆ ಅನ್ವಯವಾಗುವಂತೆ ರಹಸ್ಯವಾಗಿ ತಂದಿತು. ಆ ದಿನದಿಂದಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಮತ್ತು ಕೇಂದ್ರ ಕಾರ್ಮಿಕ ಸಂಘಟನೆಗಳು ಇದನ್ನು ವಿರೋಧಿಸುತ್ತಲೇ ಬಂದವು, ಮತ್ತು ಓಪಿಎಸ್ ಮರುಸ್ಥಾಪನೆಗೆ ಒತ್ತಾಯಿಸಿ ಅವು ಹೋರಾಟಗಳ ಹಾದಿಯಲ್ಲಿವೆ. ಫೆಬ್ರವರಿ 2014 ರಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್ ಡಿಎ) ಕಾಯಿದೆ 2013 ರ ಅಡಿಯಲ್ಲಿ ಈಬಗ್ಗೆ ಅಧಿಸೂಚನೆ ಹೊರಡಿಸಿ ಎನ್ಪಿಎಸ್ ನ್ನು ಶಾಸನಬದ್ಧಗೊಳಿಸಲಾಯಿತು.
ಒಪಿಎಸ್ ಮರುಸ್ಥಾಪನೆಗಾಗಿ ಸರ್ಕಾರಿ ನೌಕರರ ಅಭೂತಪೂರ್ವ ಹೋರಾಟಗಳು ಮತ್ತು ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಒಕ್ಕೂಟಗಳ ಜಂಟಿ ವೇದಿಕೆಯು ಅಂತಹ ಹೋರಾಟಗಳಿಗೆ ನೀಡಿದ ಸಂಪೂರ್ಣ ಬೆಂಬಲವು ದುರಹಂಕಾರಿ ಬಿಜೆಪಿ ಆಳ್ವಿಕೆ ಎನ್ಪಿಎಸ್ ಗೆ ಅಂಟಿಕೊಳ್ಳುವ ತನ್ನ ದುರಹಂಕಾರದ ನಿಲುವನ್ನು ಬದಲಾಯಿಸುವಂತೆ ಮಾಡಿವೆ. ಆದರೆ ಯುಪಿಎಸ್ ಎಂಬ ಹೆಸರಿನಲ್ಲಿ ಅದು ಮುಂದಿಟ್ಟಿರುವ ಪ್ಯಾಕೇಜ್ ಪಿಂಚಣಿಯಾಗಿ ಸರ್ಕಾರಿ ನೌಕರರಿಗೆ ನ್ಯಾಯಸಮ್ಮತವಾಗಿ ಸಿಗಬೇಕಾದ್ದನ್ನು ವಂಚಿಸುವ ಅದೇ ಮೋಸದ ತಂತ್ರವನ್ನು ಪ್ರತಿಬಿಂಬಿಸುತ್ತದೆ ಎಂದು ಸಿಐಟಿಯು ಹೇಳಿದೆ. ಹಲವು ರಾಜ್ಯ ಸರ್ಕಾರಗಳು ಸಹ ಒಪಿಎಸ್ ಗೆ ಹಿಂತಿರುಗಿ, ಮತ್ತು ಪಿಎಫ್ಆರ್ ಡಿಎ ಗೆ ರಾಜ್ಯ ಸರ್ಕಾರಿ ನೌಕರರ ದೇಣಿಗೆಗಳ ತಮ್ಮ ಪಾಲನ್ನು ತಮ್ಮ ರಾಜ್ಯ ಸರ್ಕಾರಗಳಿಗೆ ಮರುಪಾವತಿಸಲು ಒತ್ತಾಯಿಸುತ್ತಿವೆ. ಆದರೆ ಮೋದಿ ಸರ್ಕಾರವು ರಾಜ್ಯ ಸರ್ಕಾರಗಳ ಎಲ್ಲಾ ವಿನಂತಿಗಳನ್ನು ತಿರಸ್ಕರಿಸಿದೆ.
ಇದನ್ನೂ ಓದಿ: ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್ ಹೆಸರಲ್ಲಿ ವಂಚನೆ!
ಇದಕ್ಕೆ ಎದುರಾಗಿ ನೌಕರರು ಮತ್ತು ಕಾರ್ಮಿಕ ಸಂಘಗಳು ನಿರಂತರ ಹೋರಾಟಗಳನ್ನು ನಡೆಸಿವೆ. ಆದ್ದರಿಂದಲೇ ಮೋದಿ ನೇತೃತ್ವದ ಎನ್ಡಿ ಕೂಟ ಸರಕಾರ ಈ ವಂಚಕ ಯುಪಿಎಸ್ನ ಪ್ರಯತ್ನವನ್ನು ಮಾಡಿದೆ. ಎನ್ಪಿ ಎಸ್ ನಲ್ಲಿ ಮಾರ್ಪಾಡುಗಳನ್ನು ಅಧ್ಯಯನ ಮಾಡಲು ನೇಮಿಸಿದ್ದ ಹಣಕಾಸು ಕಾರ್ಯದರ್ಶಿ ಟಿ.ವಿ.ಸೋಮನಾಥನ್ ಸಮಿತಿಯ ಶಿಫಾರಸುಗಳನ್ನು ಎನ್ಪಿಎಸ್ ಮತ್ತು ಮೊಟಕು ಒಪಿಎಸ್ನ ಕಸಮಿಶ್ರಣದ ಈ ಯುಪಿಎಸ್ ನ , ಹತಾಶ ಪ್ರಯತ್ನದಲ್ಲಿ ಬಳಸಲಾಗಿದೆ. ಈ ಸಮಿತಿಯನ್ನು ಹಲವಾರು ನೌಕರರ ಒಕ್ಕೂಟಗಳು ಬಹಿಷ್ಕರಿಸಿದ್ದವು ಎಂದು ಈ ಸಂದರ್ಭದಲ್ಲಿ ಸಿಐಟಿಯು ನೆನಪಿಸಿದೆ.
ಮೋದಿ ನೇತೃತ್ವದ ಎನ್ಡಿ ಸರ್ಕಾರವು ಸಟ್ಟಾಕೋರ ಬಂಟ ಬಂಡವಾಳಶಾಹಿಯ ಹಿತಾಸಕ್ತಿಗಳನ್ನು ಕಾಪಾಡುವ ತನ್ನ ನವ ಉದಾರವಾದಿ ಧೋರಣೆಗೆ ಅನುಗುಣವಾಗಿ ಪ್ರಯೋಜನಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ಈ ಯುಪಿಎಸ್ ನ್ನು ಮುಂದಿಟ್ಟಿದೆ. ಇದಕ್ಕೆ ಸರ್ಕಾರದಿಂದ ಪ್ರಸ್ತಾವಿಸಿರುವ 4.5% ಹೆಚ್ಚುವರಿ ದೇಣಿಗೆ ‘ನಿರ್ವಹಣೆಯ ಅಡಿಯಲ್ಲಿರುವ ಆಸ್ತಿಗಳು’ (ಅಸೆಟ್ಸ್ ಅಂಡರ್ ಮ್ಯಾನೇಜ್ ಮೆಂಟ್-ಎಯುಎಂ) ಎಂದು ಹೇಳಲ್ಪಡುವ ಷೇರು ಮಾರುಕಟ್ಟೆಯಲ್ಲಿನ ತನ್ನ ಹೂಡಿಕೆಯನ್ನು ಇನ್ನಷ್ಟು ಹೆಚ್ಚಿಸುವ ಪ್ರಯತ್ನವಷ್ಟೇ. ಈಗಾಗಲೇ 31.7.2024ರ ವೇಳೆಗೆ ಈ ಎಯುಎಂ ಅಡಿಯಲ್ಲಿ 99,77,165 ಉದ್ಯೋಗಿಗಳ ಒಟ್ಟು 10,53,850 ಕೋಟಿ ರೂಗಳನ್ನು ಹೂಡಲಾಗಿದೆ ಎಂಬುದನ್ನೂ ಸಿಐಟಿಯು ನೆನಪಿಸಿದೆ.
ಹಿಂದಿನ ಆಂಧ್ರಪ್ರದೇಶ ರಾಜ್ಯ ಸರ್ಕಾರವು ‘ಖಾತರಿಪಡಿಸಿದ ಪಿಂಚಣಿ ಯೋಜನೆ’ ಯೋಜನೆ (ಜಿಪಿಎಸ್) ಎಂಬ ಹೆಸರಿನಲ್ಲಿ ಎನ್ಪಿಎಸ್ ಬದಲು, ಇಂತಹುದೇ, ಆದರೆ ಈ ಯುಪಿಎಸ್ಗಿಂತ ಸ್ವಲ್ಪ ಉತ್ತಮವಾದದ್ದನ್ನು ಮುಂದಿಟ್ಟಿತು. ಕನಿಷ್ಠ 10 ವರ್ಷಗಳ ಸೇವೆಯ ವರೆಗೆ ಅವರು ಪಡೆದ ಕೊನೆಯ ವೇತನದ 50% ರಷ್ಟು ಪಿಂಚಣಿಯಾಗಿ ಮತ್ತು 40% ವರ್ಷಾಶನ(ಅನ್ಯೂಟಿ) ಖರೀದಿಯ ಯೋಜನೆ ಇದು. ಇದನ್ನು ಸಹಜವಾಗಿಯೇ ಎಲ್ಲಾ ಆಂಧ್ರಪ್ರದೇಶ ರಾಜ್ಯ ಸರ್ಕಾರಿ ನೌಕರರು ತಿರಸ್ಕರಿಸಿ ಒಪಿಎಸ್ ಮರು ಸ್ಥಾಪನೆಗೆ ಆಗ್ರಹಿಸಿದರು. ಈಗ ಕೇಂದ್ರ ಸರ್ಕಾರವು ಎನ್ಪಿಎಸ್ನಲ್ಲಿ ಕೆಲವು ಮಾರ್ಪಾಡುಗಳೊಂದಿಗೆ, ಇದಕ್ಕಿಂತ ಕಡಿಮೆ ಪ್ರಯೋಜನಕಾರಿ ಯೋಜನೆಯ ಪ್ರಸ್ತಾವವನ್ನು ಇಟ್ಟಿದೆ. ಇದನ್ನು ಕೂಡ ಬಹುಪಾಲು ನೌಕರರು ತಿರಸ್ಕರಿಸಬೇಕು, ಒಪಿಎಸ್ ಗಿಂತ ಕಡಿಮೆಯಾದ ಯಾವುದೂ ತಮಗೆ ಸ್ವೀಕಾರ್ಯವಲ್ಲ ಎಂದು ಪುನರುಚ್ಛರಿಸಬೇಕು ಎಂದು ಸಿಐಟಿಯು ಕರೆ ನೀಡಿದೆ.
ಈ ಯುಪಿಎಸ್ ನಲ್ಲಿ ನೌಕರರ 10% ದೇಣಿಗೆ ಮುಂದುವರೆಯುತ್ತದೆ ಮತ್ತು ಸರ್ಕಾರದ ದೇಣಿಗೆಯನ್ನು ಪ್ರಸ್ತುತ 14% ರಿಂದ 18.5% ಕ್ಕೆ ಹೆಚ್ಚಿಸಲಾಗಿದೆ. ಎನ್ಪಿಎಸ್ನಲ್ಲಿ ಚಂದಾದಾರರು 60% ಹಿಂದಕ್ಕೆ ತೆಗೆದುಕೊಳ್ಳಬಹುದು ಮತ್ತು ವರ್ಷಾಶನದಲ್ಲಿ 40% ಹೂಡಿಕೆ ಮಾಡಿ ಪಿಂಚಣಿ ಪಡೆಯಬಹುದಾಗಿದ್ದರೆ, ಯುಪಿಎಸ್ ಅಡಿಯಲ್ಲಿ ಸಂಪೂರ್ಣ ಪಿಂಚಣಿ ಸಂಪತ್ತನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕಾಗುತ್ತದೆ. ಇದಕ್ಕೆ ಪ್ರತಿಯಾಗಿ, ಸರ್ಕಾರವು ಪ್ರತಿ ಪೂರ್ಣಗೊಂಡ ಆರು ತಿಂಗಳ ಸೇವೆಗೆ ಒಟ್ಟು ವೇತನದದ ಅಂದರೆ ನೌಕರರ ಮೂಲ ವೇತನ ಮತ್ತು ತುಟ್ಟಿಭತ್ಯೆಯ 10% ವನ್ನು ನೀಡುತ್ತದೆ, ಅಂದರೆ, 25 ವರ್ಷಗಳ ಪೂರ್ಣಗೊಂಡ ಸೇವೆಗೆ ನೌಕರರು 5 ತಿಂಗಳ ವೇತನವನ್ನು ಮತ್ತು 10 ವರ್ಷಗಳ ಸೇವೆಗೆ 2 ತಿಂಗಳ ವೇತನವನ್ನು ನಿವೃತ್ತಿಯ ಮೇಲೆ ಗ್ರಾಚ್ಯುಟಿ ಜೊತೆಗೆ ಹೆಚ್ಚುವರಿ ಪ್ರಯೋಜನವಾಗಿ ಪಡೆಯುತ್ತಾರೆ.
ಯುಪಿಎಸ್ vs ಒಪಿಎಸ್
ಯುಪಿಎಸ್ನಲ್ಲಿ, ನೌಕರರು 25 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿ 60 ನೇ ವಯಸ್ಸಿನಲ್ಲಿ ಸಾಮಾನ್ಯ ನಿವೃತ್ತಿಯ ಮೇಲೆ 12 ತಿಂಗಳ ಸರಾಸರಿ ಮೂಲ ವೇತನದ 50% ಅನ್ನು ಪಿಂಚಣಿಯಾಗಿ ಪಡೆಯುತ್ತಾರೆ, ಇದು 1-4-2025 ರಿಂದ ಜಾರಿಗೆ ಬರುತ್ತದೆ, ಅಂದರೆ 31-3-25 ರಂದು ನಿವೃತ್ತಿಯಾಗುವವರಿಗೆ. ಆದರೆ ಅದಕ್ಕಿಂತ ಮೊದಲು ನಿವೃತ್ತರಾದವರಿಗೆ ಅನ್ವಯಿಸುವುದಿಲ್ಲ.ಒಪಿಎಸ್ ನಲ್ಲಿ 10 ವರ್ಷಗಳ ಸೇವೆಗೆ ಕೊನೆಯ ತಿಂಗಳ ವೇತನದ 50% ಪಿಂಚಣಿ ಮತ್ತು 20 ವರ್ಷಗಳ ಸೇವೆಯ ನಂತರ ಸ್ವಯಂ ನಿವೃತ್ತಿಗೆ ಪಿಂಚಣಿಯಾಗಿ 50% ವೇತನವನ್ನು ಸಿಗುತ್ತಿದೆ.
25 ವರ್ಷಕ್ಕಿಂತ ಕಡಿಮೆ ಸೇವೆ ಹೊಂದಿರುವ ನೌಕರರು ಯುಪಿಎಸ್ನಲ್ಲಿ ಸೇವೆಗೆ ಅನುಪಾತವಾಗಿ ಕಡಿಮೆ ಪಿಂಚಣಿ ಪಡೆಯುತ್ತಾರೆ. 20 ವರ್ಷಗಳ ಸೇವೆಯನ್ನು ಹೊಂದಿರುವ ನೌಕರರು 12 ತಿಂಗಳ ಸರಾಸರಿ ಮೂಲ ವೇತನದಲ್ಲಿ 40% ಮಾತ್ರ ಪಿಂಚಣಿಯಾಗಿ ಪಡೆಯುತ್ತಾರೆ. 10 ವರ್ಷಗಳ ಸೇವೆಗೆ ನೌಕರರು ಸರಾಸರಿ ಮೂಲ ವೇತನದ 20% ಮಾತ್ರ ಪಿಂಚಣಿಯಾಗಿ ಪಡೆಯುತ್ತಾರೆ. 25 ವರ್ಷಕ್ಕಿಂತ ಕಡಿಮೆ 10 ವರ್ಷಗಳವರೆಗೆ ಅನುಪಾತದ ಪಿಂಚಣಿ ಸಂದರ್ಭದಲ್ಲಿ ಸರ್ಕಾರವು ಕನಿಷ್ಠ 10,000 ರೂ ಪಿಂಚಣಿಯನ್ನು ಕೊಡುವುದಾಗಿ ಹೇಳಿದೆ.
ಒಪಿಎಸ್ ನಲ್ಲಿ ಕನಿಷ್ಠ ಪಿಂಚಣಿ 9000 ರೂ. ಜೊತೆಗೆ ತುಟ್ಟಿಭತ್ಯೆ (1-4-2025 ರಂದು ಇದು 57%, ಅಂದರೆ ರೂ. 5130ಆ ಗಿರುತ್ತದೆ) ಅಂದರೆ 1-4-2025 ರಂದು ಕನಿಷ್ಠ ಪಿಂಚಣಿ ರೂ.14,130 ಆಗುತ್ತಿತ್ತು. ಆದ್ದರಿಂದ ಪ್ರಸ್ತಾವಿತ ರೂ.10000 ಪಿಂಚಣಿ ಒಪಿಎಸ್ ನ ಅರ್ಧದಷ್ಟು. ನಿವೃತ್ತಿಯ ಸಮಯದಲ್ಲಿ 10 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿದ ನೌಕರರು ಯಾವುದೇ ಪಿಂಚಣಿಗೆ ಅರ್ಹರಾಗಿರುವುದಿಲ್ಲ.
ಯುಪಿಎಸ್ ಅಡಿಯಲ್ಲಿ ಕುಟುಂಬ ಪಿಂಚಣಿಯು ಪಿಂಚಣಿಯ 60% ಆಗಿದೆ, ಅಂದರೆ 50% ರಲ್ಲಿ 60%. ಅಂದರೆ ನಿವೃತ್ತಿಯ ಸಮಯದಲ್ಲಿ 25 ವರ್ಷಗಳ ಸೇವೆಯ ಕೊನೆಯ ವೇತನದ 30%. 10,000 ರೂಪಾಯಿಗಳ ಕನಿಷ್ಠ ಪಿಂಚಣಿ ಹೊಂದಿರುವ ನೌಕರನಿಗೆ ಅದು 60% ಆಗಿರುತ್ತದೆ, ಅಂದರೆ, ರೂ 6000. ರೂ. 10000 ರ ಕನಿಷ್ಠ ಪಿಂಚಣಿಯು ನಿವೃತ್ತಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಕುಟುಂಬ ಪಿಂಚಣಿಗೆ ಅಲ್ಲ. ಆದರೆ ನಿವೃತ್ತಿಯ ನಂತರ 7 ವರ್ಷಗಳ ಮೊದಲು ಅಥವಾ 67 ವರ್ಷ ವಯಸ್ಸಿಗಿಂತ ಮೊದಲು ಪಿಂಚಣಿದಾರನು ಮರಣಹೊಂದಿದರೆ ಒಪಿಎಸ್ ಕುಟುಂಬ ಪಿಂಚಣಿಯು ಕೊನೆಯ ವೇತನದ 50% ಆಗಿರುತ್ತಿತ್ತು. ನಂತರ ಕುಟುಂಬ ಪಿಂಚಣಿಯು ಕೊನೆಯ ವೇತನದ 30% ಆಗಿರುತ್ತದೆ. 1-4-2025 ರಂದು ಕನಿಷ್ಠ ಪಿಂಚಣಿ ರೂ.14130 ಆಗಿರುತ್ತದೆ. ಆದರೆ ಈಗ ಸರಕಾರ ಮುಂದಿಟ್ಟಿರುವ ಯುಪಿಎಸ್ನಲ್ಲಿ ಕನಿಷ್ಠ ಕುಟುಂಬ ಪಿಂಚಣಿ ಕೇವಲ 6000 ರೂ.
ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸಿಗುವಂತೆ, ಖಚಿತ ಪಿಂಚಣಿ ಅಥವಾ ಕನಿಷ್ಠ ಪಿಂಚಣಿ ಅಥವಾ ಕುಟುಂಬ ಪಿಂಚಣಿಗೆ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ ತುಟ್ಟಿಭತ್ಯ/ತುಟ್ಟಿ ಪರಿಹಾರ ನೀಡಲಾಗುತ್ತದೆ. ಆದರೆ 1-4-2025 ರಿಂದ ಹೊಸ ಆಧಾರದ ಸೂಚ್ಯಂಕವನ್ನು ಪ್ರಾರಂಭಿಸುತ್ತಾರೆಯೇ ಅಥವಾ ಸೇವೆಯಲ್ಲಿರುವ ಮತ್ತು ಒಪಿಎಸ್ ಪಿಂಚಣಿದಾರರಿಗೆ ಸಿಗುವ ಶೇಕಡಾವಾರಿನಂತೆ ತುಟ್ಟಿಭತ್ಯ/ತುಟ್ಟಿ ಪರಿಹಾರ ನೀಡುತ್ತಾರೋ ಎಂಬುದನ್ನು ಇನ್ನೂ ವಿವರಿಸಲಾಗಿಲ್ಲ.
ಒಪಿಎಸ್ ನಲ್ಲಿ ಪಿಂಚಣಿದಾರರು ಅಥವಾ ಕುಟುಂಬ ಪಿಂಚಣಿದಾರರು 80 ವರ್ಷ ಪೂರ್ಣಗೊಳಿಸಿದರೆ ಹೆಚ್ಚುವರಿ ಪಿಂಚಣಿ 20%, 85 ವರ್ಷಗಳಿಗೆ 30%, 90 ವರ್ಷಗಳಿಗೆ 40%, 95 ವರ್ಷಗಳಿಗೆ 50% ಮತ್ತು 100 ವರ್ಷ ದಾಟಿದರೆ 100% ಹೆಚ್ಚುವರಿ ಪಿಂಚಣಿಯನ್ನು ಅದೇ ತುಟ್ಟಿಭತ್ಯೆಯೊಂದಿಗೆ ನೀಡಲಾಗುತ್ತದೆ. ಯುಪಿಎಸ್ನಲ್ಲಿ ಈ ಹೆಚ್ಚುವರಿ ಪಿಂಚಣಿ ಲಭ್ಯವಿಲ್ಲ. ಒಪಿಎಸ್ ನಲ್ಲಿ ಪಿಂಚಣಿ/ಕುಟುಂಬ ಪಿಂಚಣಿ/ಕನಿಷ್ಠ ಪಿಂಚಣಿಯನ್ನು ವೇತನ ಆಯೋಗವನ್ನು ಜಾರಿಗೊಳಿಸಿದಾಗ ಪರಿಷ್ಕರಿಸಲಾಗುವುದು. ಆದರೆ ಯುಪಿಎಸ್ ಅಡಿಯಲ್ಲಿ ಅಂತಹ ಯಾವುದೇ ಭರವಸೆ ಇಲ್ಲ.
ಒಪಿಎಸ್ ನಲ್ಲಿ ಪಿಂಚಣಿಯ ಕಮ್ಯುಟೇಶನ್ ಅಂದರೆ, ಮುಂಗಡವಾಗಿ 40% ಪಿಂಚಣಿಯನ್ನು ಪಡೆಯುವ ಅವಕಾಶ ಲಭ್ಯವಿದೆ, ಆದರೆ ಯುಪಿಎಸ್ ನಲ್ಲಿ ಇದು ಲಭ್ಯವಿಲ್ಲ. ಎನಪಿಎಸ್ ನಲ್ಲಿ ನಿಧನರಾಗುವ ಅಥವ ಎಲ್ಲಾ ವರ್ಗದ ಅಮಾನ್ಯರಾಗುವ ನೌಕರರು ಅನರ್ಹರಾಗುತ್ತಾರೆ, ಒಪಿಎಸ್ ಈಗಾಗಲೇ ಅವರಿಗೆ ಅನ್ವಯಿಸುತ್ತದೆ. ನೌಕರರು ಯುಪಿಎಸ್ ಅಥವಾ ಎನ್ಪಿಎಸ್ ನಲ್ಲಿ ಒಂದನ್ನು ಆರಿಸಿಕೊಳ್ಳಬಹುದು, ಒಮ್ಮೆ ಆಯ್ಕೆ ಮಾಡಿಕೊಂಡರೆ ಅದು ಅಂತಿಮವಾಗಿರುತ್ತದೆ.
ಸರಕಾರ ಈಗ ಮುಂದಿಟ್ಟಿರುವ ಯುಪಿಎಸ್ನಲ್ಲಿ ಇನ್ನೂ ಹಲವು ನ್ಯೂನತೆಗಳಿರಬಹುದು, ಇದು ಯುಪಿಎಸ್ನ ಪೂರ್ಣ ಪಠ್ಯವನ್ನು ಅಧಿಸೂಚಿಸಿದ ನಂತರ ತಿಳಿಯಬಹುದು.
ಆದ್ದರಿಂದ ಯುಪಿಎಸ್ ಅನ್ನು ತಿರಸ್ಕರಿಸುತ್ತ ಸಿಐಟಿಯು, ದೇಣಿಗೆ ರಹಿತ ನಿರೂಪಿತ ಖಚಿತ ಮೊತ್ತದೆ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಒಪಿಎಸ್ ಮರುಸ್ಥಾಪನೆಗಾಗಿ ಸರ್ಕಾರಿ ನೌಕರರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವಂತೆ ಅದು ಕರೆ ನೀಡಿದೆ.
ಇದನ್ನೂ ನೋಡಿ: ವಚನಾನುಭವ -09| ಅರಿ(ವ)ನರಿತವ ಕೆಡಿಸಿತ್ತು ಬಡತನವೆಂಬ ರಾಹು |ಮೀನಾಕ್ಷಿ ಬಾಳಿ