ಬೆಂಗಳೂರು: ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಕನ್ನಡಿಗರು ಸಾಥೊ ನೀಡಿದ್ದು, ಕರ್ನಾಟಕ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಿವಾದಾತ್ಮಕ ಮಸೂದೆಗಳ ಜಾರಿಯನ್ನು ಖಂಡಿಸಿ ರೈತ, ದಲಿತ, ಕಾರ್ಮಿಕ ಸಂಘಟನೆಗಳು ನೀಡಿರುವ ಕರ್ನಾಟಕ ಬಂದ್ಗೆ ಹಲವು ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಬೆಂಗಳೂರು ನಗರದ ಮೆಜೆಸ್ಟಿಕ್, ಟೌನ್ಹಾಲ್ ಸೇರಿದಂತೆ ಹಲವು ಕಡೆಗಳಲ್ಲಿ ರೈತ, ಕಾರ್ಮಿಕ, ದಲಿತ ಹಾಗೂ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ ವಿವಾದಾತ್ಮಕ ಮಸೂದೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂದ್ ಇದ್ದರೂ ಮೆಟ್ರೋ ಸಂಚಾರ ನಡೆಸುತ್ತಿದ್ದು ಸರ್ಕಾರದ ಸೂಚನೆಯ ನಡುವೆಯೂ ಬಿಎಂಟಿಸಿ, ಕೆಎಸ್ಆರ್ಟಿಸಿ ನಿಗಮಗಳ ನೌಕರರ ಸಂಘ ಬೆಂಬಲ ಸೂಚಿಸಿವೆ. ಆಟೋ ಟ್ಯಾಕ್ಸಿ ಸೇವೆ ಕೂಡಾ ಸ್ಥಗಿತಗೊಂಡಿದೆ. ನಗರದ ಮೆಜೆಸ್ಟಿಕ್ನಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟೆ ನಡೆಸಿದರು. ರಸ್ತೆಯಲ್ಲಿ ಉರುಳು ಸೇವೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಹಲವು ಕಡೆಗಳಲ್ಲಿ ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಪ್ರತಿಭಟನಾಕಾರರು ಮುಚ್ಚಿಸಿದ ಘಟನೆಯೂ ನಡೆದಿದೆ.
ಅತ್ತ ಬಸ್ ಸಂಚಾರ ಆರಂಭ, ಇತ್ತ ಪ್ರತಿಭಟನೆ!
ಬೆಂಗಳೂರಿನಲ್ಲಿ ಬಂದ್ ಬಹುತೇಕ ಯಶಸ್ವಿಯಾಗಿದ್ದ ರಸ್ತೆಯಲ್ಲಿ ಜನ, ವಾಹನ ಸಂಚಾರ ಕಡಿಮೆ ಇದೆ. ಬಂದ್ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹಲವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ನಾಯಂಡಳ್ಳಿ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬಳಿಕ ಬಿಡುಗಡೆಗೊಳಿಸಿದರು.
ಇನ್ನು ಮೈಸೂರು, ಹಾಸನ, ಉಡುಪಿ, ಮಂಡ್ಯದಲ್ಲಿ ಬಂದ್ಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ರೈತ ಸಂಘಟನೆಗಳು ಬೀದಿಗಿಳಿದು ವಿವಾದಾತ್ಮಕ ಮಸೂದೆಗಳನ್ನು ಜಾರಿಗೊಳಿಸದಂತೆ ಒತ್ತಾಯಿಸುತ್ತಿದ್ದಾರೆ.
ಮೈಸೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಪೊಲೀಸರು ತಡೆದಿದ್ದಾರೆ. ಬಳಿಕ ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಅದೇ ರೀತಿ ಉಡುಪಿಯಲ್ಲಿ ಖಾಸಗಿ ಬಸ್ ಸಂಚಾರ ವಿರೋಧಿಸಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂದ್ಗೆ ಕಾಂಗ್ರೆಸ್ ಜೆಡಿಎಸ್ ಬೆಂಬಲ
ರೈತ ವಿರೋಧಿ ಕಾಯ್ದೆ ಜಾರಿಗೆ ವಿರೋಧಿಸಿ ವಿವಿಧ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕೂಡಾ ಬೆಂಬಲ ಸೂಚಿಸಿದೆ. 11.30 ಕ್ಕೆ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಮುಂಭಾಗದಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ಜಾರಿಗೆ ತರುತ್ತಿರುವ ಮಸೂದೆಗಳ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೂಡಾ ಭಾಗಿಯಾಗಲಿದ್ದಾರೆ. ಇನ್ನು ಜೆಡಿಎಸ್ ಪಕ್ಷ ಕೂಡಾ ಬಂದ್ಗೆ ಬೆಂಬಲ ಸೂಚಿಸಿದ್ದು ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ಭೂಸುಧಾರಣಾ ಕಾಯ್ದೆ ತಿದ್ದುಪಡಿಗೆ ವಿರೋಧ ಏಕೆ?
ತಳಸಮುದಾಯಕ್ಕೆ ಭೂಮಿಯ ಹಕ್ಕನ್ನು ನೀಡಿರುವ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರದ ನಡೆ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ತೀವ್ರ ವಿವಾದಕ್ಕೆ ಕಾರಣವಾಗಿದ್ದ ಕರ್ನಾಟಕ ಭೂಸುಧಾರಣೆಗಳ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಅಂಗಿಕಾರಗೊಂಡಿದೆ. ಕೆಲ ತಿದ್ದುಪಡಿಯೊಂದಿಗೆ ವಿಧೇಯಕಕ್ಕೆ ಅನುಮೋದನೆ ಕೊಟ್ಟ ವಿಧಾನಸಭೆ.
ವಿಧೇಯಕದ ಪ್ರಕಾರ ಇನ್ಮುಂದೆ ಯಾರು ಬೇಕಾದರೂ ಕೃಷಿ ಜಮೀನು ಖರೀದಿ ಮಾಡಬಹುದು. ನೀರಾವರಿ ಪ್ರದೇಶದಲ್ಲಿ ಖರೀದಿ ಮಾಡುವ ಜಮೀನು ಕೃಷಿಗೆ ಮಾತ್ರ ಬಳಕೆಯಾಗಬೇಕು. ಅಲ್ಲದೆ 5 ಜನರಿರುವ ಒಂದು ಕುಟುಂಬ ಗರಿಷ್ಠ 54 ಏಕರೆ ಕೃಷಿ ಜಮೀನು ಖರೀದಿಗೆ ಅವಕಾಶವಿದೆ ಹಾಗೂ 5 ಕ್ಕಿಂತ ಹೆಚ್ಚು ಇರುವ ಕುಟುಂಬ ಗರಿಷ್ಠ 108 ಎಕರೆ ಜಮೀನು ಖರೀದಿ ಮಾಡಬಹುದು ಎಂದಿದೆ. ಜೊತೆಗೆ ಕೃಷಿ ಜಮೀನು ಖರೀದಿಸಲು ಈ ಹಿಂದೆ ಇದ್ದ 25 ಲಕ್ಷ ರೂ ವಾರ್ಷಿಕ ಆದಾಯ ಮಿತಿ ರದ್ದು ಮಾಡಲಾಗಿದೆ.